ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಅಕ್ರಮ ವ್ಯಕ್ತಿಗಳಿಂದ ಡೀಸೆಲ್ ಕಾಳಸಂತೆ ಮತ್ತು ದಾಸ್ತಾನು ಮಾಡುವುದನ್ನು ತಡೆಯಲು, ನಿಯಂತ್ರಣ ಆದೇಶ ಹೊರಡಿಸಿದ ಸರ್ಕಾರ

प्रविष्टि तिथि: 12 JUN 2026 2:57PM by PIB Bengaluru

ಅಕ್ರಮ ವ್ಯಕ್ತಿಗಳಿಂದ ಡೀಸೆಲ್ ಕಾಳಸಂತೆ ಮಾರಾಟ ಮತ್ತು ಅಕ್ರಮ ದಾಸ್ತಾನು ಮಾಡುವುದನ್ನು ತಡೆಯಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು "ಮೋಟರ್ ಸ್ಪಿರಿಟ್ ಮತ್ತು ಹೈ-ಸ್ಪೀಡ್ ಡೀಸೆಲ್ (ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಪೂರೈಕೆಯ ತಾತ್ಕಾಲಿಕ ನಿಯಂತ್ರಣ) ಆದೇಶ, 2026" ಅನ್ನು ಅಧಿಸೂಚಿಸಿದೆ.

ಈ ನಿಯಮಾವಳಿಗಳು ತಾತ್ಕಾಲಿಕ ಕ್ರಮಗಳಾಗಿದ್ದು, ಆರಂಭದಲ್ಲಿ 90 ದಿನಗಳವರೆಗೆ ಜಾರಿಯಲ್ಲಿರುತ್ತವೆ ಮತ್ತು ಎಲ್ಲಾ ಚಿಲ್ಲರೆ ಗ್ರಾಹಕರಿಗೆ ಡೀಸೆಲ್ ಲಭ್ಯತೆಯನ್ನು ಖಚಿತಪಡಿಸುತ್ತವೆ.

ಪ್ರಸ್ತುತ ಪರಿಸ್ಥಿತಿಯಲ್ಲಿ, ಬೃಹತ್ (ಬಲ್ಕ್) ಡೀಸೆಲ್ ಪ್ರಮಾಣವು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಚಿಲ್ಲರೆ ಮಾರಾಟ ಮಳಿಗೆಗಳಿಗೆ ವರ್ಗಾವಣೆಗೊಳ್ಳುತ್ತಿರುವುದರಿಂದ ಕೆಲವು ಚಿಲ್ಲರೆ ಮಳಿಗೆಗಳಲ್ಲಿ ಅಸಾಧಾರಣ ಬೇಡಿಕೆ ಕಂಡುಬರುತ್ತಿದೆ. ಬೃಹತ್ ಮತ್ತು ಚಿಲ್ಲರೆ ಡೀಸೆಲ್ ಬೆಲೆಗಳ ನಡುವಿನ ವ್ಯತ್ಯಾಸದಿಂದಾಗಿ ಕೈಗಾರಿಕಾ, ನೇರ ಅಥವಾ ಸಾಂಸ್ಥಿಕ ಮತ್ತು ವಾಣಿಜ್ಯ ಗ್ರಾಹಕರು ತಮ್ಮದೇ ಆದ ಗ್ರಾಹಕ ಪಂಪ್‌ಗಳ ಬದಲಾಗಿ ಚಿಲ್ಲರೆ ಮಾರಾಟ ಮಳಿಗೆಗಳಿಂದ ಡೀಸೆಲ್ ಖರೀದಿಸಲು ಮುಂದಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಮತ್ತೊಂದು ಕಾರಣವೆಂದರೆ, ಖಾಸಗಿ ತೈಲ ಮಾರುಕಟ್ಟೆ ಕಂಪನಿಗಳು ಹೆಚ್ಚಿನ ಬೆಲೆಯನ್ನು ನಿಗದಿಪಡಿಸಿದ್ದರಿಂದ, ಮೇ 2026 ರ ಅವಧಿಯಲ್ಲಿ ಅವುಗಳ ಹೈ-ಸ್ಪೀಡ್ ಡೀಸೆಲ್ (HSD) ಮಾರಾಟದಲ್ಲಿ ಸುಮಾರು 58% ರಷ್ಟು ಕುಸಿತ ದಾಖಲಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೇ 2026 ರ ತಿಂಗಳ ದತ್ತಾಂಶವು, ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ (PSU OMCs) ಚಿಲ್ಲರೆ ಮಳಿಗೆಗಳ ಮೂಲಕ ಡೀಸೆಲ್ ಮಾರಾಟದಲ್ಲಿ ಗಣನೀಯ ಏರಿಕೆಯನ್ನು ತೋರಿಸುತ್ತದೆ. ಇದರಲ್ಲಿ 327 ಜಿಲ್ಲೆಗಳು 10% ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದ್ದರೆ, 80 ಜಿಲ್ಲೆಗಳು 30% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಕಂಡಿವೆ.

ಚಿಲ್ಲರೆ ಮಾರಾಟ ಮಳಿಗೆಗಳಲ್ಲಿನ ಸಾಂದರ್ಭಿಕ ಪೂರೈಕೆ ಸಮಸ್ಯೆಗಳಿಂದ ಚಿಲ್ಲರೆ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸಲು ಈ ಹೊಸ ನಿಯಂತ್ರಣ ಕ್ರಮಗಳನ್ನು ವಿಶೇಷವಾಗಿ ರೂಪಿಸಲಾಗಿದೆ. ಕಾರ್ ಓಡಿಸುವ ಅಥವಾ ದ್ವಿಚಕ್ರ ವಾಹನ ಚಲಾಯಿಸುವ ಸಾಮಾನ್ಯ ವ್ಯಕ್ತಿಗೆ 200 ಲೀಟರ್ ಮಿತಿ ಇರುವುದರಿಂದ, ಈ ಕ್ರಮಗಳು ನಾಗರಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟುಮಾಡುವುದಿಲ್ಲ. ಏಕೆಂದರೆ ಇದು ಯಾವುದೇ ಖಾಸಗಿ ವಾಹನಕ್ಕೆ ಅಗತ್ಯವಿರುವುದಕ್ಕಿಂತ ತೀರಾ ಹೆಚ್ಚಾಗಿದೆ.

ಬೆಲೆ ವ್ಯತ್ಯಾಸದ ಅನುಚಿತ ಲಾಭವನ್ನು ಪಡೆಯಲು ಚಿಲ್ಲರೆ ಮಾರಾಟ ಮಳಿಗೆಗಳಿಂದ ಡೀಸೆಲ್ ಖರೀದಿಸಬಾರದಾದ ದೊಡ್ಡ/ಬೃಹತ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೆರ್ರಿ ಕಾನ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಡೀಸೆಲ್ ಖರೀದಿಸಿ, ಅದನ್ನು ಮರುಮಾರಾಟ ಮಾಡುತ್ತಿರುವ ಘೋರ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ. ಈ ಆದೇಶವು ಇಂತಹ ಖರೀದಿದಾರರು/ಆಪರೇಟರ್‌ಗಳು, ಡೀಲರ್‌ಗಳು ಮತ್ತು ಈ ಡೀಸೆಲ್ ಕಾಳಸಂತೆ ಹಾಗೂ ಅಕ್ರಮ ದಾಸ್ತಾನಿನಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.

ಚಿಲ್ಲರೆ ಮಳಿಗೆಗಳಿಂದ ಇಂಧನವನ್ನು ಬೃಹತ್ ಪ್ರಮಾಣದಲ್ಲಿ ಕೊಳ್ಳುವ ಗ್ರಾಹಕರಿಗೆ ಮಾರಾಟ ಮಾಡುವುದನ್ನು ನಿಷೇಧಿಸುವುದರಿಂದ, ಚಿಲ್ಲರೆ ಗ್ರಾಹಕರಿಗಾಗಿ ವ್ಯವಸ್ಥೆಯಲ್ಲಿ ಹೆಚ್ಚಿನ ಪೂರೈಕೆ ಉಳಿಯುತ್ತದೆ.

ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ ಚಿಲ್ಲರೆ ಗ್ರಾಹಕರನ್ನು ರಕ್ಷಿಸಲು, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ ಎಲ್‌ಪಿಜಿ ಮಾರಾಟದ ಮೇಲೆ ಪ್ರಸ್ತುತ ಪ್ರತಿದಿನ ಸುಮಾರು ₹500 ಕೋಟಿ ನಷ್ಟವನ್ನು ಭರಿಸುತ್ತಿವೆ. ಈ ಹಂತಹಂತದ ಬೆಲೆ ಬೆಂಬಲವು ಚಿಲ್ಲರೆ ಗ್ರಾಹಕರನ್ನು ರಕ್ಷಿಸಲು ಮತ್ತು ಕುಟುಂಬಗಳು, ರೈತರು ಹಾಗೂ ಇತರ ಬಳಕೆದಾರರಿಗೆ ಇಂಧನ ಕೈಗೆಟುಕುವಂತೆ ಮಾಡಲು ಉದ್ದೇಶಿಸಲಾಗಿದೆ. ಈ ಬೆಂಬಲವು ಕೈಗಾರಿಕಾ ಮತ್ತು ಬೃಹತ್ ಪೂರೈಕೆಗಳಿಗೆ ಅನ್ವಯಿಸುವುದಿಲ್ಲ, ಅಲ್ಲಿ ಬೆಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಗಳಿಗೆ ಅನುಗುಣವಾಗಿ ಮುಂದುವರಿಯುತ್ತವೆ. ಇದರ ಪರಿಣಾಮವಾಗಿ ಚಿಲ್ಲರೆ ಡೀಸೆಲ್ ಬೆಲೆಯು ಬೃಹತ್ ಡೀಸೆಲ್‌ಗಿಂತ ಲೀಟರ್‌ಗೆ ಸುಮಾರು ₹40 ರಷ್ಟು ಅಗ್ಗವಾಗಿದೆ.

ಬೃಹತ್ ಗ್ರಾಹಕರು ಹೈ-ಸ್ಪೀಡ್ ಡೀಸೆಲ್ (HSD) ಅನ್ನು ನಿಯಮಬಾಹಿರವಾಗಿ ಖರೀದಿಸುತ್ತಿರುವುದರಿಂದ, ಸ್ಥಳೀಯವಾಗಿ ಪೂರೈಕೆ ಸಮಸ್ಯೆಗಳು ಉಂಟಾಗಿದ್ದು, ನೈಜ ಚಿಲ್ಲರೆ ಗ್ರಾಹಕರಿಗೆ ಮತ್ತು ಅಗತ್ಯ ಸೇವೆಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಎದುರಾಗಿದೆ.

ಈ ಆದೇಶದ ಅನ್ವಯ, ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ಗೆ ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಿದೆ:

  • ಚಿಲ್ಲರೆ ಮಾರಾಟ ಮಳಿಗೆಗಳು ಕೇವಲ ವಾಹನಗಳ ಟ್ಯಾಂಕ್‌ಗಳಿಗೆ ಅಥವಾ ಪಿಇಎಸ್‌ಒ (PESO) ಅನುಮೋದಿತ ಕಂಟೇನರ್‌ಗಳಿಗೆ ಮಾತ್ರ ಡೀಸೆಲ್ ಅನ್ನು ವಿತರಿಸಬೇಕು. ಇದರ ಗರಿಷ್ಠ ಮಿತಿಯು ಪ್ರತಿ ಗ್ರಾಹಕರಿಗೆ/ವಾಹನಕ್ಕೆ ದಿನಕ್ಕೆ 200 ಲೀಟರ್ ಆಗಿರುತ್ತದೆ. ಚಿಲ್ಲರೆ ಮಳಿಗೆಗಳಲ್ಲಿ ಖರೀದಿಸಿದ ಡೀಸೆಲ್ ಅನ್ನು ಮರುಮಾರಾಟ ಮಾಡುವಂತಿಲ್ಲ.
  • ಕೈಗಾರಿಕಾ, ನೇರ ಅಥವಾ ಸಾಂಸ್ಥಿಕ ಮತ್ತು ವಾಣಿಜ್ಯ ಗ್ರಾಹಕರು ಚಿಲ್ಲರೆ ಮಾರಾಟ ಮಳಿಗೆಗಳಿಂದ ಇಂಧನವನ್ನು ಪಡೆಯುವುದನ್ನು ನಿಷೇಧಿಸಲಾಗಿದೆ ಮತ್ತು ಅವರು ತಮ್ಮ ಅಗತ್ಯಗಳನ್ನು ಗ್ರಾಹಕ ಪಂಪ್‌ಗಳ (Consumer Pumps) ಮೂಲಕವೇ ಪಡೆದುಕೊಳ್ಳಬೇಕು.
  • ನಿಗದಿಪಡಿಸಿದ ನಿರ್ಬಂಧಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆದೇಶದ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನಗಳನ್ನು ತಡೆಯಲು ತೈಲ ಮಾರುಕಟ್ಟೆ ಕಂಪನಿಗಳು (OMCs) ಮತ್ತು ಚಿಲ್ಲರೆ ಮಾರಾಟ ಮಳಿಗೆಯ ಡೀಲರ್‌ಗಳು ಜವಾಬ್ದಾರರಾಗಿರುತ್ತಾರೆ.
  • ಸಾಮಾನ್ಯ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಕಾಳಸಂತೆ ಮಾರಾಟ ಅಥವಾ ಅನಧಿಕೃತವಾಗಿ ಇಂಧನವನ್ನು ತಿರುಗಿಸುವಂತಹ ಯಾವುದೇ ಅಕ್ರಮಗಳ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ನಿರ್ದೇಶನ ನೀಡಲಾಗಿದೆ.

ಈ ಆದೇಶದ ಉಲ್ಲಂಘನೆಗಳು, ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಅನ್ವಯವಾಗುವ ಇತರ ಕಾನೂನುಗಳ ಅಡಿಯಲ್ಲಿ ದಂಡನೆ ಮತ್ತು ಇತರ ಕಾನೂನು ಕ್ರಮಗಳಿಗೆ ಒಳಪಡುತ್ತವೆ.

"ಮೋಟರ್ ಸ್ಪಿರಿಟ್ ಮತ್ತು ಹೈ-ಸ್ಪೀಡ್ ಡೀಸೆಲ್ (ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಪೂರೈಕೆಯ ತಾತ್ಕಾಲಿಕ ನಿಯಂತ್ರಣ) ಆದೇಶ, 2026" ಅನ್ನು ನಿರ್ದಿಷ್ಟ, ಪ್ರಸ್ತುತ ಮಾರುಕಟ್ಟೆ ಸವಾಲುಗಳನ್ನು ಎದುರಿಸಲು ರೂಪಿಸಲಾದ ತಾತ್ಕಾಲಿಕ ಕ್ರಮ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.

ಇದು ಪಡಿತರ ಕ್ರಮವಲ್ಲ, ಮತ್ತು ದೇಶದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯೂ ಇಲ್ಲ. ಗಮನಾರ್ಹವಾಗಿ, ಭಾರತವು ವಿಶ್ವದ 4 ನೇ ಅತಿ ದೊಡ್ಡ ಸಂಸ್ಕರಣಾಗಾರ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ 5 ನೇ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿ ಮುಂದುವರಿದಿದೆ. ಸಕಾಲಿಕ ಮತ್ತು ಸಕ್ರಿಯ ಕ್ರಮಗಳ ಮೂಲಕ ನಿರಂತರ ಇಂಧನ ಪೂರೈಕೆಯನ್ನು ಖಚಿತಪಡಿಸಲು, ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ.


 

*****


(रिलीज़ आईडी: 2272134) आगंतुक पटल : 32
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Gujarati , Tamil , Malayalam