ಕೃಷಿ ಸಚಿವಾಲಯ
azadi ka amrit mahotsav

ಇಂದೋರ್‌ನಲ್ಲಿ ಬ್ರಿಕ್ಸ್ ಕೃಷಿ ಸಹಕಾರಕ್ಕಾಗಿ ಹೊಸ ಸಂಕಲ್ಪ: ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾಗತಿಕ ಪಾಲುದಾರಿಕೆ ಮತ್ತು 'ವಸುಧೈವ ಕುಟುಂಬಕಂ' ಎಂಬ ಮನೋಭಾವ ಒತ್ತಿಹೇಳುತ್ತರುವ ಭಾರತ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಸಣ್ಣ ರೈತರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತಿರುವ ಭಾರತ : ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ವಾರ್ಷಿಕವಾಗಿ ಶೇ 4.5 ರಷ್ಟು ಬೆಳವಣಿಗೆ ದಾಖಲಿಸುತ್ತಿರುವ ಕೃಷಿ ವಲಯ, 376 ಮಿಲಿಯನ್ ಟನ್‌ಗಳನ್ನು ತಲುಪಿದ ಆಹಾರ ಉತ್ಪಾದನೆ: ಶ್ರೀ ಚೌಹಾಣ್

ಮಹಿಳೆಯರು ಮತ್ತು ಯುವಜನರು ಕೃಷಿ ಪರಿವರ್ತನೆಯ ಪ್ರಮುಖ ಚಾಲಕರು: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಭವಿಷ್ಯದ ಸನ್ನದ್ಧತೆಯನ್ನು ರೂಪಿಸುತ್ತಿರುವ ನೈಸರ್ಗಿಕ ಕೃಷಿ ಮತ್ತು ತಂತ್ರಜ್ಞಾನ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

प्रविष्टि तिथि: 12 JUN 2026 2:38PM by PIB Bengaluru

ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಕೃಷಿ ಸಚಿವರ ಎರಡು ದಿನಗಳ ಸಮ್ಮೇಳನವು ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಮತ್ತು ಸ್ವಚ್ಛತೆಗೆ ಹೆಸರುವಾಸಿಯಾದ ಇಂದೋರ್‌ನಲ್ಲಿ ಇಂದಿನಿಂದ ಆರಂಭವಾಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾರತದ ಕೃಷಿ ಸಾಧನೆಗಳು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಜಾಗತಿಕ ಸಹಕಾರಕ್ಕೆ ಬದ್ಧತೆಯನ್ನು ಪ್ರಸ್ತುತಪಡಿಸಿದರು. ಉದ್ಘಾಟನಾ ಗೋಷ್ಠಿಯಲ್ಲಿ ಶ್ರೀ ಚೌಹಾಣ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕೃಷಿ ಪಾಲುದಾರಿಕೆಗಳನ್ನು ಬಲಪಡಿಸುವತ್ತ ಭಾರತ ಒತ್ತು ನೀಡುತ್ತಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ನೋಡುವ 'ವಸುಧೈವ ಕುಟುಂಬಕಂ' ಮನೋಭಾವವನ್ನು ಒತ್ತಿ ಹೇಳಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

WhatsApp Image 2026-06-12 at 12

ಬ್ರಿಕ್ಸ್ ರಾಷ್ಟ್ರಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್‌, ಭಾರತದ ದೀರ್ಘಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವ “ಅತಿಥಿ ದೇವೋ ಭವ’’  ಅಥವಾ 'ಅತಿಥಿಯೇ ದೇವರು' ಎಂಬ ಸಂಪ್ರದಾಯವನ್ನು ಉಲ್ಲೇಖಿಸಿ, ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲಾ ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ ಕೋರಿದರು. ಜಾಗತಿಕ ಏಕತೆ, ಶಾಂತಿ ಮತ್ತು ಸಹಕಾರದ ತತ್ವಗಳನ್ನು ಭಾರತ ನಿರಂತರವಾಗಿ ಬೆಂಬಲಿಸಿದೆ ಎಂದು ಅವರು ಹೇಳಿದರು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶದ ”ಶಾಂತಿ, ಯುದ್ಧವಲ್ಲ; ಸಮನ್ವಯ, ಸಂಘರ್ಷವಲ್ಲ’’ ವಿಧಾನವನ್ನು ಅನುಸರಿಸುತ್ತಿದೆ ಎಂದು ಪುನರುಚ್ಚರಿಸಿದರು. ಅವರ ಪ್ರಕಾರ ಈ ತತ್ವಗಳು ಭವಿಷ್ಯದಲ್ಲಿ ಬಲವಾದ ಮತ್ತು ಹೆಚ್ಚು ಪರಿಣಾಮಕಾರಿ ಜಾಗತಿಕ ಕೃಷಿ ಸಹಕಾರಕ್ಕೆ ಅಡಿಪಾಯವಾಗಬಹುದಾಗಿದೆ.

ವಿಶ್ವಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರು ಎದುರಿಸುತ್ತಿರುವ ಸವಾಲುಗಳನ್ನು ಮತ್ತು ವಿಶೇಷವಾಗಿ ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ, ಹೆಚ್ಚುತ್ತಿರುವ ಕೃಷಿ ವೆಚ್ಚಗಳು ಮತ್ತು ಕೃಷಿ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಗಳಿಂದ ಉಂಟಾಗುವ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಲು ಸಮ್ಮೇಳನವು ಒಂದು ಪ್ರಮುಖ ವೇದಿಕೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಸಣ್ಣ ರೈತರ ಕಲ್ಯಾಣ ಮತ್ತು ಸಬಲೀಕರಣವನ್ನು ಖಾತ್ರಿಪಡಿಸಿಕೊಳ್ಳುವುದು ಜಾಗತಿಕ ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಬೆಳವಣಿಗೆಯನ್ನು ಬಲವರ್ಧನೆಗೊಳಿಸುವುದು ಅತಿ ಮುಖ್ಯವಾಗಿದೆ ಎಂದು ಅವರು ಹೇಳಿದರು. ಸಣ್ಣ ಮತ್ತು ಅತಿ ಸಣ್ಣ ರೈತರು ಆರ್ಥಿಕವಾಗಿ ಶಕ್ತಿಯುತವಾದರೆ ಮತ್ತು ತಾಂತ್ರಿಕವಾಗಿ ಸಮರ್ಥರಾದರೆ ವಿಶ್ವದ ಆಹಾರ ಭದ್ರತಾ ರಚನೆಯು ಸಹ ಬಲವರ್ಧನೆಗೊಳ್ಳಲಿದೆ ಮತ್ತು ಹೆಚ್ಚು ಸ್ಥಿತಿಸ್ಥಾಪಕವಾಗುತ್ತದೆ ಎಂದು ಅವರು ಹೇಳಿದರು.

WhatsApp Image 2026-06-12 at 12

ಭಾರತದ ಕೃಷಿ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಚೌಹಾಣ್‌, ಕಳೆದೊಂದು ದಶಕದಲ್ಲಿ ದೇಶದ ಕೃಷಿ ವಲಯವು ಸರಾಸರಿ ವಾರ್ಷಿಕ ಶೇ. 4.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಹೇಳಿದರು. ಭಾರತದ ಒಟ್ಟು ಆಹಾರ ಧಾನ್ಯ ಉತ್ಪಾದನೆಯು ಈಗ ಸುಮಾರು 376 ಮಿಲಿಯನ್ ಟನ್ (ಎಂಟಿ) ತಲುಪಿದೆ. ಇದು ಈ ವಲಯದಲ್ಲಿ ನಿರಂತರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ದೇಶದಲ್ಲಿ ಗೋಧಿ ಉತ್ಪಾದನೆಯು ಸುಮಾರು 118 ಮಿಲಿಯನ್ ಟನ್‌ಗಳನ್ನು ತಲುಪಿದೆ, ಆದರೆ ತೋಟಗಾರಿಕೆ ಉತ್ಪಾದನೆಯು 378 ಮಿಲಿಯನ್ ಟನ್‌ಗಳನ್ನು ದಾಟಿದೆ. ಮೀನು ಉತ್ಪಾದನೆಯೂ ಗಮನಾರ್ಹವಾಗಿ ಹೆಚ್ಚಿ, ಇದೀಗ 19 ಮಿಲಿಯನ್ ಟನ್‌ಗಳನ್ನು ಮೀರಿದೆ. ಇದು ಕೃಷಿಯ ಹಲವು ಮತ್ತು ಸಂಬಂಧಿತ ವಲಯಗಳಲ್ಲಿ ವಿಶಾಲ ಆಧಾರಿತ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.

ಭಾರತವು ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ, ಅದರ ಮೂಲಕ ಜನಸಂಖ್ಯೆಯ ಒಂದು ದೊಡ್ಡ ಭಾಗಕ್ಕೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ ಎಂದು ಅವರು ಹೇಳಿದರು. ಕೃಷಿ ಆರ್ಥಿಕತೆಯನ್ನು ಬಲಪಡಿಸುವಲ್ಲಿ ರೈತರು ವಹಿಸಿದ ಪಾತ್ರವನ್ನು ಶ್ಲಾಘಿಸಿದ ಶ್ರೀ ಚೌಹಾಣ್, ಸೂಕ್ಷ್ಮ ಮತ್ತು ರೈತ ಕೇಂದ್ರಿತ ಸರ್ಕಾರಿ ನೀತಿಗಳ ಬೆಂಬಲದೊಂದಿಗೆ ರೈತರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸ್ಥಿತಿಸ್ಥಾಪಕತ್ವದಿಂದಾಗಿ ಈ ಸಾಧನೆಗಳು ಸಾಧ್ಯವಾಗಿದೆ ಎಂದು ಹೇಳಿದರು. ಭಾರತದ ಕೃಷಿ ಬೆಳವಣಿಗೆಯ ಯಶೋಗಾಥೆಯು ಆಹಾರ ಸ್ವಾವಲಂಬನೆ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ದೇಶದ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಭಾರತದ ಸುಮಾರು ಶೇ. 43 ರಷ್ಟು ದುಡಿಯುವಪಡೆ ಕೃಷಿ ಮತ್ತು ಸಂಬಂಧಿತ ವಲಯಗಳೊಂದಿಗೆ ಸಂಬಂಧ ಹೊಂದಿದ್ದು, ಇದು ದೇಶದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಕೃಷಿಯು ಆಹಾರ ಭದ್ರತೆಗೆ ಮಾತ್ರ ಸಂಬಂಧಿಸಿಲ್ಲ, ಬದಲಾಗಿ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯದ ಪ್ರಾಥಮಿಕ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆರಂಭಿಸಲಾದ ವಿವಿಧ ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ಸುಧಾರಿತ ಬೀಜ ತಳಿಗಳು, ನೀರಾವರಿ ವಿಸ್ತರಣೆ, ಕೃಷಿ ತಂತ್ರಜ್ಞಾನ, ಡಿಜಿಟಲ್ ಸೇವೆಗಳು ಮತ್ತು ರೈತ ಬೆಂಬಲ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶಾದ್ಯಂತದ ಕೃಷಿಕರಿಗೆ ಗಣನೀಯ ಪ್ರಯೋಜನಗಳನ್ನು ಒದಗಿಸಿವೆ ಎಂದು ಹೇಳಿದರು.

WhatsApp Image 2026-06-12 at 12

ಭಾರತದ ಕೃಷಿ ವ್ಯವಸ್ಥೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಪಾತ್ರವನ್ನು ಒತ್ತಿ ಹೇಳಿದ ಶ್ರೀ ಚೌಹಾಣ್‌, ದೇಶದ ಸುಮಾರು ಶೇ. 87 ರಷ್ಟು ರೈತರು ಈ ವರ್ಗಕ್ಕೆ ಸೇರಿದವರು ಎಂದು ಹೇಳಿದರು. ಆದ್ದರಿಂದ ಗ್ರಾಮೀಣ ಭಾರತದಲ್ಲಿ ಸಮಗ್ರ ಮತ್ತು ಸಮತೋಲಿತ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಅವರನ್ನು ಸಬಲೀಕರಣಗೊಳಿಸುವುದು ಪ್ರಮುಖವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೋಟ್ಯಂತರ ರೈತರಿಗೆ ನೇರ ಆರ್ಥಿಕ ನೆರವು ನೀಡುತ್ತಿದೆ, ಕೃಷಿ ಮತ್ತು ಮನೆಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು. ಅದೇ ರೀತಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮತ್ತು ಬೆಳೆ ವಿಮಾ ಕಾರ್ಯಕ್ರಮಗಳಂತಹ ಉಪಕ್ರಮಗಳು ಅನಿಶ್ಚಿತತೆ ಮತ್ತು ಬೆಳೆ ನಷ್ಟದ ಸಮಯದಲ್ಲಿ ಬೆಳೆಗಾರರಿಗೆ ಆರ್ಥಿಕ ಭದ್ರತೆ ಮತ್ತು ಸಾಂಸ್ಥಿಕ ಬೆಂಬಲವನ್ನು ಒದಗಿಸುತ್ತಿವೆ ಎಂದರು.

ಸುಸ್ಥಿರ ಕೃಷಿಯ ಕುರಿತು ಮಾತನಾಡಿದ ಶ್ರೀ ಚೌಹಾಣ್, ನೈಸರ್ಗಿಕ ಕೃಷಿಯ ಮಹತ್ವವನ್ನು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಾಗ ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಒತ್ತಿ ಹೇಳಿದರು. ದೀರ್ಘಕಾಲೀನ ಕೃಷಿ ಸುಸ್ಥಿರತೆಗೆ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳವುದು ಮತ್ತು ರಾಸಾಯನಿಕ ಬಳಕೆ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು. ಮಧ್ಯಪ್ರದೇಶದಿಂದ ಆರಂಭಿಸಲಾದ ರಾಷ್ಟ್ರವ್ಯಾಪಿ 'ಖೇತ್ ಬಚಾವೋ ಅಭಿಯಾನ'ವನ್ನು ಉಲ್ಲೇಖಿಸಿ, ಈ ಅಭಿಯಾನವು ತಳಮಟ್ಟದ ರೈತರಿಗೆ ವೈಜ್ಞಾನಿಕ ಮಾಹಿತಿ, ತಾಂತ್ರಿಕ ಮಾರ್ಗದರ್ಶನ ಮತ್ತು ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಅಭಿಯಾನದ ಮೂಲಕ, ರೈತರು ಹೆಚ್ಚಾಗಿ ನೈಸರ್ಗಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಕೃಷಿ ಪದ್ಧತಿಗಳಲ್ಲಿ ಸಾವಯವ ಒಳಹರಿವುಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವರು, ಮಹಿಳಾ ಸಬಲೀಕರಣವು ಕೃಷಿ ಪರಿವರ್ತನೆಯ ಬಲವಾದ ಅಡಿಪಾಯಗಳಲ್ಲಿ ಒಂದಾಗಿದೆ ಎಂದು  ವಿವರಿಸಿದರು ಮತ್ತು ದೇಶಾದ್ಯಂತ ಕೋಟ್ಯಂತರ ಮಹಿಳೆಯರು ಈಗ ಸ್ವ-ಸಹಾಯ ಗುಂಪುಗಳ ಮೂಲಕ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸುತ್ತಿದ್ದಾರೆ ಎಂದು ಹೇಳಿದರು. 'ಡ್ರೋಣ್‌ ದೀದಿ' ಯಂತಹ ಉಪಕ್ರಮಗಳು ಗ್ರಾಮೀಣ ಭಾರತದಲ್ಲಿ ತಾಂತ್ರಿಕ ಮತ್ತು ಸಾಮಾಜಿಕ ಪರಿವರ್ತನೆಯ ಸಂಕೇತಗಳಾಗುತ್ತಿವೆ. ಇದರಿಂದಾಗಿ ಮಹಿಳೆಯರು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಹೊಂದಲು ಮತ್ತು ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಕ್ರಿಯವಾಗಿ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ ಎಂದರು.

ಆಧುನಿಕ ಕೃಷಿಯಲ್ಲಿ ಯುವಕರ ಹೆಚ್ಚುತ್ತಿರುವ ಪಾತ್ರವನ್ನು ಶ್ರೀ ಚೌಹಾಣ್ ಒತ್ತಿ ಹೇಳಿದರು ಮತ್ತು ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಕೃಷಿ-ಉದ್ಯಮಶೀಲತೆಯ ಮೂಲಕ ಯುವಜನರ ಭಾಗವಹಿಸುವಿಕೆಯು ಈ ವಲಯವನ್ನು ಹೆಚ್ಚು ಆಧುನಿಕ, ಪರಿಣಾಮಕಾರಿ ಮತ್ತು ಆಕರ್ಷಕವಾಗಿಸುತ್ತಿದೆ ಎಂದು ಹೇಳಿದರು. ಕೃಷಿಯೊಂದಿಗೆ ತಂತ್ರಜ್ಞಾನದ ಸಂಯೋಜನೆಯು ಹೊಸ ಅವಕಾಶಗಳನ್ನು ತೆರೆಯುತ್ತಿದೆ ಮತ್ತು ಉದಯೋನ್ಮುಖ ಜಾಗತಿಕ ಸವಾಲುಗಳನ್ನು ಎದುರಿಸಲು ಸಮರ್ಥವಾದ ಭವಿಷ್ಯಕ್ಕೆ ಸಿದ್ಧ ಕೃಷಿ ಪರಿಸರ ವ್ಯವಸ್ಥೆ ಸೃಷ್ಟಿಸಲು ಸಹಾಯ ಮಾಡುತ್ತಿದೆ ಎಂದು ಹೇಳಿದರು.

ಬ್ರಿಕ್ಸ್ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಯೋಗಕ್ಕಾಗಿ ಮನವಿ ಮಾಡಿದ ಶ್ರೀ ಚೌಹಾಣ್, ಸಣ್ಣ ರೈತರನ್ನು ಸಬಲೀಕರಣಗೊಳಿಸಲು, ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಪ್ರಪಂಚದಾದ್ಯಂತ ಸುಸ್ಥಿರ ಕೃಷಿ ಅಭಿವೃದ್ಧಿಯನ್ನು ಉತ್ತೇಜಿಸಲು ಎಲ್ಲಾ ಸದಸ್ಯ ರಾಷ್ಟ್ರಗಳು ಒಗ್ಗೂಡಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.ಅನುಭವಗಳ ವಿನಿಮಯ, ತಾಂತ್ರಿಕ ಸಹಕಾರ ಮತ್ತು ನೀತಿ ಸಂವಾದದ ಮೂಲಕ ಬಲವಾದ ಪಾಲುದಾರಿಕೆಗಳನ್ನು ಸೃಷ್ಟಿಸಲು ಸಮ್ಮೇಳನವು ಸಹಾಯ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರ ಪ್ರಕಾರ, ಬ್ರಿಕ್ಸ್ ರಾಷ್ಟ್ರಗಳ ಸಾಮೂಹಿಕ ಪ್ರಯತ್ನಗಳು ಜಾಗತಿಕ ಕೃಷಿಗೆ ಹೊಸ ಆಯಾಮವನ್ನು ಒದಗಿಸಬಲ್ಲದು ಮತ್ತು ಹೆಚ್ಚು ಸುರಕ್ಷಿತ, ಸುಸ್ಥಿರ ಮತ್ತು ಸಮಗ್ರ ಕೃಷಿ ಭವಿಷ್ಯವನ್ನು ನಿರ್ಮಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

 

*****


(रिलीज़ आईडी: 2272111) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Gujarati , Tamil , Malayalam