ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಎಂಎನ್‌ಐಟಿ (MNIT) ಜೈಪುರದಲ್ಲಿ ಸುಧಾರಿತ ಕ್ವಾಂಟಮ್ ಮತ್ತು ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳ ಸ್ಥಾಪನೆಯನ್ನು ಪ್ರಕಟಿಸಿದ ಶ್ರೀ ಅಶ್ವಿನಿ ವೈಷ್ಣವ್ ಅವರು
ವಿದ್ಯಾರ್ಥಿಗಳಿಗೆ ಲ್ಯಾಮ್ ರಿಸರ್ಚ್‌ನ ‘ಸೆಮಿವರ್ಸ್’ (Semiverse) ಸೆಮಿಕಂಡಕ್ಟರ್ ತರಬೇತಿ ವೇದಿಕೆಯ ಪ್ರವೇಶ ಲಭ್ಯ
प्रविष्टि तिथि:
11 JUN 2026 5:22PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಜೈಪುರದ ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎಂಎನ್‌ಐಟಿ) ಸುಧಾರಿತ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ಕಮ್ಯುನಿಕೇಷನ್ಸ್ ಪ್ರಯೋಗಾಲಯದ ಸ್ಥಾಪನೆಯನ್ನು ಪ್ರಕಟಿಸಿದರು.

ಈ ಪ್ರಯೋಗಾಲಯವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಐಸಿಟಿ (ICT) ಅಕಾಡೆಮಿಕ್ ಪ್ರಾಜೆಕ್ಟ್ ಅಡಿಯಲ್ಲಿ ಸ್ಥಾಪಿಸಲಾಗುವುದು.
ಇದು ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD), ಕ್ವಾಂಟಮ್ ಕಂಪ್ಯೂಟಿಂಗ್ ಸಿಮ್ಯುಲೇಶನ್ ಮತ್ತು ಕ್ವಾಂಟಮ್ ಸೆನ್ಸಿಂಗ್ ಹಾರ್ಡ್‌ವೇರ್ ಘಟಕಗಳಲ್ಲಿ ಸ್ವದೇಶಿ ಸಾಮರ್ಥ್ಯಗಳನ್ನು ನಿರ್ಮಿಸುವತ್ತ ಗಮನ ಹರಿಸಲಿದೆ.
ವಿದ್ಯಾರ್ಥಿಗಳು ಮತ್ತು ಬೋಧಕವೃಂದವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಪ್ರಸ್ತುತ ತಾಂತ್ರಿಕ ಅಲೆಯನ್ನು ಕೃತಕ ಬುದ್ಧಿಮತ್ತೆ (AI) ಮುನ್ನಡೆಸುತ್ತಿದ್ದರೆ, ಮುಂದಿನ ಪ್ರಮುಖ ತಾಂತ್ರಿಕ ಅಲೆಯನ್ನು ಕ್ವಾಂಟಮ್ ತಂತ್ರಜ್ಞಾನವು ಮುನ್ನಡೆಸಲಿದೆ ಎಂದು ಹೇಳಿದರು.

ಈ ಯೋಜನೆಯಡಿ ಕೈಗೊಳ್ಳಲಿರುವ ಕೆಲಸಗಳು ದೇಶಕ್ಕೆ ಅತ್ಯಂತ ಮಹತ್ವದ್ದಾಗಿವೆ ಎಂದು ಸಚಿವರು ಹೇಳಿದರು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪ್ರಮುಖವಾಗಿರುವ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD) ಕ್ಷೇತ್ರದಲ್ಲೂ ಈ ಪ್ರಯೋಗಾಲಯವು ಸಂಶೋಧನೆ ನಡೆಸಲಿದೆ ಎಂದು ಅವರು ಹೇಳಿದರು. ಪೋಸ್ಟ್-ಕ್ವಾಂಟಮ್ ಕ್ರಿಪ್ಟೋಗ್ರಫಿ ಕ್ಷೇತ್ರದಲ್ಲಿ ಮುಂಚೂಣಿ ಪಾತ್ರ ವಹಿಸುವಂತೆ ಎಂಎನ್‌ಐಟಿ ಜೈಪುರಕ್ಕೆ ಸಚಿವರು ಕರೆ ನೀಡಿದರು.
ಲ್ಯಾಮ್ ರಿಸರ್ಚ್‌ನ “ಸೆಮಿವರ್ಸ್” (Semiverse) ವೇದಿಕೆ
ಎಂಎನ್‌ಐಟಿ ಜೈಪುರದ ವಿದ್ಯಾರ್ಥಿಗಳಿಗೆ ಲ್ಯಾಮ್ ರಿಸರ್ಚ್ ಸಂಸ್ಥೆಯ “ಸೆಮಿವರ್ಸ್” ವೇದಿಕೆಯ ಪ್ರವೇಶ ಸಿಗಲಿದೆ ಎಂದು ಸಚಿವರು ಪ್ರಕಟಿಸಿದರು. ಇದು ಡಿಜಿಟಲ್ ಟ್ವಿನ್ ಆಧಾರಿತ ಸೆಮಿಕಂಡಕ್ಟರ್ ತಯಾರಿಕೆ ಮತ್ತು ತರಬೇತಿ ಪರಿಸರ ವ್ಯವಸ್ಥೆಯಾಗಿದೆ. ಸೆಮಿವರ್ಸ್ ಮೂಲಕ, ವಿದ್ಯಾರ್ಥಿಗಳು ಈಗ ಸೆಮಿಕಂಡಕ್ಟರ್ ಚಿಪ್ ರಚನೆಗಳನ್ನು 3ಡಿಯಲ್ಲಿ ಅಧ್ಯಯನ ಮಾಡಬಹುದು, ಚಿಪ್ ತಯಾರಿಕಾ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ವರ್ಚುವಲ್ ಪರಿಸರದಲ್ಲಿ ತಯಾರಿಕೆಯ ಹಂತಗಳನ್ನು ಸಿಮ್ಯುಲೇಟ್ ಮಾಡಬಹುದು ಎಂದು ಅವರು ಹೇಳಿದರು.
ಉದ್ಯಮದ ಅಂದಾಜಿನ ಪ್ರಕಾರ, ಹತ್ತು ಲಕ್ಷಕ್ಕೂ ಹೆಚ್ಚು ಸೆಮಿಕಂಡಕ್ಟರ್ ವಿನ್ಯಾಸ ಕಾರ್ಯಪಡೆಯ ಬೇಡಿಕೆಯಿದೆ ಎಂದು ಕೇಂದ್ರ ಸಚಿವರು ಉಲ್ಲೇಖಿಸಿದರು. ಭಾರತವು ಈ ಕೊರತೆಯನ್ನು ಸುಲಭವಾಗಿ ನೀಗಿಸಬಲ್ಲದು. ಈಗಾಗಲೇ ಎನ್ವಿಡಿಯಾ (Nvidia), ಕ್ವಾಲ್ಕಾಮ್ (Qualcomm), ಆರ್ಮ್ (ARM) ಮತ್ತು ಎಎಂಡಿ (AMD) ಯಂತಹ ಕಂಪನಿಗಳು ಭಾರತದಲ್ಲೇ 2 ಮತ್ತು 3 ನ್ಯಾನೋಮೀಟರ್‌ಗಳ ಸುಧಾರಿತ ಸೆಮಿಕಂಡಕ್ಟರ್ ಚಿಪ್‌ಗಳನ್ನು ವಿನ್ಯಾಸಗೊಳಿಸುತ್ತಿವೆ. ವಿನ್ಯಾಸ ಕಾರ್ಯಪಡೆಯ ಲಭ್ಯತೆಯಿಂದಾಗಿ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.
‘ಚಿಪ್ಸ್ ಟು ಸ್ಟಾರ್ಟ್‌ಅಪ್’ (C2S) ಕಾರ್ಯಕ್ರಮದ ಭಾಗವಾಗಿ ಭಾರತ ಸರ್ಕಾರವು ದೇಶಾದ್ಯಂತ 323ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಗೆ ಎಲೆಕ್ಟ್ರಾನಿಕ್ ಡಿಸೈನ್ ಆಟೊಮೇಷನ್ (EDA) ಪರಿಕರಗಳನ್ನು ಒದಗಿಸುತ್ತಿದೆ ಎಂದು ಶ್ರೀ ವೈಷ್ಣವ್ ಅವರು ಹೇಳಿದರು. ಇವು ಸಿನೊಪ್ಸಿಸ್, ಕ್ಯಾಡೆನ್ಸ್ ಮತ್ತು ರೆನೆಸಾಸ್‌ನಂತಹ ಪ್ರಮುಖ ಕಂಪನಿಗಳ ಅತ್ಯಾಧುನಿಕ ಸೆಮಿಕಂಡಕ್ಟರ್ ವಿನ್ಯಾಸ ಪರಿಕರಗಳಾಗಿವೆ. ಈ ಪರಿಕರಗಳನ್ನು ಬಳಸಿಕೊಂಡು, ಭಾರತದಾದ್ಯಂತದ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ 100ಕ್ಕೂ ಹೆಚ್ಚು ಚಿಪ್‌ಗಳನ್ನು ಮೊಹಾಲಿಯ ಸೆಮಿಕಂಡಕ್ಟರ್ ಲ್ಯಾಬೊರೇಟರಿಯಲ್ಲಿ (SCL) ತಯಾರಿಸಲಾಗಿದೆ ಎಂದ ಅವರು, ಈ ಸುಧಾರಿತ ಇಡಿಎ (EDA) ಪರಿಕರಗಳ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಸಚಿವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯ
ಎಂಎನ್‌ಐಟಿ ಜೈಪುರದಲ್ಲಿ ಎಐ (AI) ಪ್ರಯೋಗಾಲಯವನ್ನು ಸಹ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವರು ಪ್ರಕಟಿಸಿದರು. ಈ ಪ್ರಯೋಗಾಲಯವು ಸಂಶೋಧನೆ ಮತ್ತು ನಾವೀನ್ಯತೆಗಾಗಿ ಸುಧಾರಿತ ಕಂಪ್ಯೂಟ್ ಮತ್ತು ಅಗತ್ಯ ಪರಿಕರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಿದೆ ಎಂದು ಅವರು ತಿಳಿಸಿದರು.
ಇದನ್ನು ಇಂಡಿಯಾಎಐ (IndiaAI) ಮಿಷನ್‌ನ ನೆಟ್‌ವರ್ಕ್‌ನೊಂದಿಗೆ ಜೋಡಿಸುವುದರ ಕಡೆಗೆ ಗಮನ ಹರಿಸಲಾಗುವುದು. ಈ ನಿಟ್ಟಿನಲ್ಲಿ, ಡೀಪ್‌ಫೇಕ್ ಪತ್ತೆ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜೋಧಪುರ ಕೈಗೊಂಡಿರುವ ಕಾರ್ಯವನ್ನು ಅವರು ಶ್ಲಾಘಿಸಿದರು.
ಮೇಕರ್ಸ್ ಲ್ಯಾಬ್ ಉದ್ಘಾಟನೆ
ನಂತರ ಕೇಂದ್ರ ಸಚಿವರು, ರಾಜಸ್ಥಾನ ಸರ್ಕಾರದ ಇಂಧನ ಇಲಾಖೆಯ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಹೀರಾಲಾಲ್ ನಗರ್ ಅವರು ಮತ್ತು ರಾಜಸ್ಥಾನದ ಸಿವಿಲ್ ಲೈನ್ಸ್ ಜೈಪುರ ಶಾಸಕರಾದ ಶ್ರೀ ಗೋಪಾಲ್ ಶರ್ಮಾ ಅವರೊಂದಿಗೆ ಎಂಎನ್‌ಐಟಿ ಜೈಪುರದಲ್ಲಿ ‘ಮೇಕರ್ಸ್ ಲ್ಯಾಬ್’ ಅನ್ನು ಉದ್ಘಾಟಿಸಿದರು.
ಮೇಕರ್ಸ್ ಲ್ಯಾಬ್ ವಿದ್ಯಾರ್ಥಿಗಳಿಗೆ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ತಂತ್ರಜ್ಞಾನಗಳೆರಡರಲ್ಲೂ ಪ್ರಾಯೋಗಿಕ ತರಬೇತಿ ಅವಕಾಶಗಳನ್ನು ಒದಗಿಸುತ್ತದೆ. ಇದು ಸೆನ್ಸರ್‌ಗಳು, ಎಂಬೆಡೆಡ್ ಸಿಸ್ಟಮ್‌ಗಳು, ಕಂಪ್ಯೂಟ್ ಸಾಧನಗಳು ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್‌ಗಳನ್ನು ಒಳಗೊಂಡಿರುತ್ತದೆ.
ಇದಕ್ಕೂ ಮುನ್ನ ಭೇಟಿಯ ಸಂದರ್ಭದಲ್ಲಿ ಶ್ರೀ ವೈಷ್ಣವ್ ಅವರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಎಐ, ರೊಬೊಟಿಕ್ಸ್, ಡ್ರೋನ್, ಸ್ಟ್ರಕ್ಚರಲ್ ಎಂಜಿನಿಯರಿಂಗ್ ಮತ್ತು ಪೋಸ್ಟ್-ಕ್ವಾಂಟಮ್ ಕ್ರಿಪ್ಟೋಗ್ರಫಿ ಕ್ಷೇತ್ರಗಳಲ್ಲಿನ ಹಲವಾರು ಯೋಜನೆಗಳು ಮತ್ತು ಅಪ್ಲಿಕೇಶನ್‌ಗಳನ್ನು ಪ್ರದರ್ಶಿಸಿದರು.


****
(रिलीज़ आईडी: 2271818)
आगंतुक पटल : 11