ಸಂಸ್ಕೃತಿ ಸಚಿವಾಲಯ
azadi ka amrit mahotsav

ಮಂಗೋಲಿಯಾದಲ್ಲಿ ಭಗವಾನ್ ಬುದ್ಧನ ಪ್ರಧಾನ ಶಿಷ್ಯರ ಪವಿತ್ರ ಧಾತುಗಳ 10 ದಿನಗಳ ಐತಿಹಾಸಿಕ ಪ್ರದರ್ಶನ ಮುಕ್ತಾಯ


ಮಂಗೋಲಿಯಾದಲ್ಲಿ ಅರಹಂತ ಸಾರಿಪುತ್ತ ಮತ್ತು ಅರಹಂತ ಮಹಾಮೊಗ್ಗಲ್ಲಾನರ ಪವಿತ್ರ ಧಾತುಗಳಿಗೆ ಸುಮಾರು ಒಂದು ಲಕ್ಷ ಭಕ್ತರಿಂದ ಗೌರವ ಸಲ್ಲಿಕೆ

प्रविष्टि तिथि: 10 JUN 2026 6:11PM by PIB Bengaluru

ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿರುವ ಗಂಡನ್ ಟೆಗ್ಚೆನ್ಲಿಂಗ್ ಮಠದಲ್ಲಿ 10 ದಿನಗಳ ಅತ್ಯಂತ ಯಶಸ್ವಿ ಪ್ರದರ್ಶನದ ನಂತರ ಭಗವಾನ್ ಬುದ್ಧನ ಇಬ್ಬರು ಪ್ರಧಾನ ಶಿಷ್ಯರಾದ ಅರಹಂತ ಸಾರಿಪುತ್ತ ಮತ್ತು ಅರಹಂತ ಮಹಾಮೊಗ್ಗಲ್ಲಾನರ ಪವಿತ್ರ ಧಾತುಗಳು ಇಂದು ಭಾರತಕ್ಕೆ ಮರಳಿದವು. ಗಂಡನ್ ಟೆಗ್ಚೆನ್ಲಿಂಗ್ ಮಠದ ಕೋರಿಕೆಯ ಮೇರೆಗೆ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯವು ಮಧ್ಯಪ್ರದೇಶ ಸರ್ಕಾರ, ಶ್ರೀಲಂಕಾದ ಮಹಾಬೋಧಿ ಸೊಸೈಟಿ ಮತ್ತು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ (ಐಬಿಸಿ) ಸಹಯೋಗದೊಂದಿಗೆ ಪವಿತ್ರ ಧಾತುಗಳ ಪ್ರದರ್ಶನವನ್ನು 2026ರ ಮೇ 31 ರಿಂದ ಜೂನ್ 09 ರವರೆಗೆ ಆಯೋಜಿಸಿತು. ಈ ಪ್ರದರ್ಶನವನ್ನು 2026ರ ಮೇ 31ರಂದು ಮಂಗೋಲಿಯನ್ ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು.

ಪವಿತ್ರ ಧಾತುಗಳನ್ನು 2026 ರ ಮೇ 30 ರಂದು ಅಸ್ಸಾಂನ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಮಂಗೋಲಿಯಾದ ಶಿಕ್ಷಣ ಸಚಿವರಾದ ಶ್ರೀ ಎನ್ಖ್-ಅಮ್ಗಲನ್ ಮತ್ತು ಗಂಡನ್ ಟೆಗ್ಚೆನ್ಲಿಂಗ್ ಮಠದ ಪರಮಪೂಜ್ಯ ಖಂಬಾ ನೊಮುನ್ ಖಾನ್ ಗೆಶೆ ಲರಂಪಾ ಡಿ. ಜಾವ್ಜಂಡೋರ್ಜ್ ಅವರಿಗೆ ವಿಧ್ಯುಕ್ತವಾಗಿ ಹಸ್ತಾಂತರಿಸಿದರು.

ಮಂಗೋಲಿಯಾದ ಅಧ್ಯಕ್ಷರಾದ ಶ್ರೀ ಖುರೆಲ್ಸುಖ್ ಉಖ್ನಾ ಅವರು 2025ರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಪ್ರದರ್ಶನವನ್ನು ಘೋಷಿಸಿದ್ದರು. ಭಾರತ ಮತ್ತು ಮಂಗೋಲಿಯಾ ಬೌದ್ಧಧರ್ಮದಲ್ಲಿ ಬೇರೂರಿರುವ ಆಳವಾದ ನಾಗರಿಕತೆ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಹೊಂದಿವೆ ಮತ್ತು ಈ ಘೋಷಣೆಯು ಮಂಗೋಲಿಯಾದ ಜನರಿಗೆ ಪವಿತ್ರ ಧಾತುಗಳಿಗೆ ಗೌರವ ಸಲ್ಲಿಸಲು ಒಂದು ಅನನ್ಯ ಅವಕಾಶವನ್ನು ಕಲ್ಪಿಸಿಕೊಟ್ಟಿತು. 10 ದಿನಗಳ ಪ್ರದರ್ಶನದ ಸಮಯದಲ್ಲಿ ಮಂಗೋಲಿಯಾದಾದ್ಯಂತ ಸುಮಾರು ಒಂದು ಲಕ್ಷ ಭಕ್ತರು ತಮ್ಮ ಗೌರವವನ್ನು ಸಲ್ಲಿಸಲು ಮಠಕ್ಕೆ ಭೇಟಿ ನೀಡಿದರು. ಮಂಗೋಲಿಯಾದ ಒಟ್ಟು ಜನಸಂಖ್ಯೆ ಸುಮಾರು 34 ಲಕ್ಷ (3.4 ಮಿಲಿಯನ್) ಆಗಿದೆ.

ಈವರೆಗೆ ಈ ಪವಿತ್ರ ಧಾತುಗಳನ್ನು ಥೈಲ್ಯಾಂಡ್ ಮತ್ತು ಮಂಗೋಲಿಯಾಕ್ಕೆ ಮಾತ್ರ ಕಳುಹಿಸಲಾಗಿದೆ. 2022ರ ಜೂನ್‌ನಲ್ಲಿ ಮಂಗೋಲಿಯಾದಲ್ಲಿ ನಡೆದ ಭಗವಾನ್ ಬುದ್ಧನ ಪವಿತ್ರ ಧಾತುಗಳ ಪ್ರದರ್ಶನವು ಅತ್ಯಂತ ಯಶಸ್ವಿ ಮತ್ತು ಸ್ಮರಣೀಯ ಕಾರ್ಯಕ್ರಮವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರದರ್ಶನದ ನೇಪಥ್ಯದಲ್ಲಿ ಭಾರತದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವು ಬೌದ್ಧಧರ್ಮದ ಕುರಿತು ಈ ಕೆಳಗಿನ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿದವು; ಅವುಗಳ ಬಗ್ಗೆ ಸಾರ್ವಜನಿಕರು, ಸನ್ಯಾಸಿಗಳು ಮತ್ತು ವಿದ್ವಾಂಸರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು:

i) ಸಾರಿಪುತ್ತ ಮತ್ತು ಮೊಗ್ಗಲ್ಲಾನ - ಬುದ್ಧಿವಂತಿಕೆ, ಭಕ್ತಿ ಮತ್ತು ಪವಿತ್ರ ಧಾತುಗಳ ಪಯಣ - ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದಿಂದ

ii) ಭಾರತದಿಂದ ಮಂಗೋಲಿಯಾಕ್ಕೆ: ಆಂತರಿಕ ಏಷ್ಯಾದಾದ್ಯಂತ ಬುದ್ಧ ಧಮ್ಮದ ಪ್ರಸರಣ - ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದಿಂದ

iii) ಬೆಳಕಿನ ಪಾತ್ರೆಗಳು: ಪ್ರತಿಮಾಶಾಸ್ತ್ರ, ಪವಿತ್ರ ಧಾತುಗಳು ಮತ್ತು ಧಮ್ಮದ ಮಾರ್ಗ (ಭಾರತದ ವಸ್ತುಸಂಗ್ರಹಾಲಯ ಸಂಗ್ರಹಗಳ ಮೂಲಕ ಶಾಕ್ಯಮುನಿ ಬುದ್ಧನ ಪ್ರಯಾಣ) - ಭಾರತದ ರಾಷ್ಟ್ರೀಯ ವಸ್ತುಸಂಗ್ರಹಾಲಯದಿಂದ

ಪವಿತ್ರ ಧಾತುಗಳು ಶಿಷ್ಟಾಚಾರ ಮತ್ತು ಭದ್ರತೆಯ ವಿಷಯದಲ್ಲಿ ರಾಜ್ಯ ಅತಿಥಿಯ (State Guest) ಸ್ಥಾನಮಾನವನ್ನು ಹೊಂದಿವೆ. ಅವುಗಳನ್ನು 2026ರ ಮೇ 30 ರಂದು ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ಅಸ್ಸಾಂನ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರ ನೇತೃತ್ವದ ನಿಯೋಗದೊಂದಿಗೆ ಮಂಗೋಲಿಯಾಕ್ಕೆ ತರಲಾಯಿತು. ಲಡಾಖ್‌ನ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಆದ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರ ನೇತೃತ್ವದ ನಿಯೋಗವು ಇಂದು ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಪವಿತ್ರ ಧಾತುಗಳನ್ನು ಭಾರತಕ್ಕೆ ವಾಪಸ್‌ ತಂದಿತು. ಗಂಡನ್ ಟೆಗ್ಚೆನ್ಲಿಂಗ್ ಮಠದಲ್ಲಿ ವಿಧ್ಯುಕ್ತ ಸ್ವಾಗತ ಮತ್ತು ವಿದಾಯ ಸಮಾರಂಭಗಳನ್ನು ಆಯೋಜಿಸಲಾಗಿತ್ತು.

ಮಂಗೋಲಿಯಾ ಸರ್ಕಾರವು ಪ್ರದರ್ಶನಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿತು, ಆದರೆ ಗಂಡನ್ ಟೆಗ್ಚೆನ್ಲಿಂಗ್ ಮಠವು ಪವಿತ್ರ ಧಾತುಗಳ ಪೂಜ್ಯ ಸ್ಥಾನಮಾನಕ್ಕೆ ಅನುಗುಣವಾಗಿ ಕಾರ್ಯಕ್ರಮದ ಧಾರ್ಮಿಕ ಅಂಶಗಳನ್ನು ಮೇಲ್ವಿಚಾರಣೆ ಮಾಡಿತು. ಮಠದಲ್ಲಿಂದು ನಡೆದ ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಖಂಬಾ ನೊಮುನ್ ಖಾನ್ ಗೆಶೆ ಲರಂಪಾ ಡಿ. ಜಾವ್ಜಂಡೋರ್ಜ್, ಗೌರವಾನ್ವಿತ ಶ್ರೀ ಎನ್ಖ್-ಅಮ್ಗಲನ್, ಲಡಾಖ್‌ನ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಆದ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರು, ಶ್ರೀಲಂಕಾದ ಮಹಾಬೋಧಿ ಸೊಸೈಟಿಯ ಅಧ್ಯಕ್ಷರಾದ ಪೂಜ್ಯ ಬನಗಲ ಉಪತಿಸ್ಸ ಥೇರೋ ಅವರು ಮತ್ತು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾರ್ಟ್ಸೆ ಖೇನ್ಸುರ್ ರಿನ್‌ಪೋಚೆ ಜಂಗ್‌ಚುಪ್ ಚೋಡೆನ್ ಅವರು ಮಂಗೋಲಿಯಾದಲ್ಲಿ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಭಾರತಕ್ಕೆ ಹಿಂದಿರುಗುವ ಮೊದಲು ಪವಿತ್ರ ಧಾತುಗಳನ್ನು ಗೌರವಾನ್ವಿತ ಶ್ರೀ ಎನ್ಖ್-ಅಮ್ಗಲನ್ ಮತ್ತು ಪರಮಪೂಜ್ಯ ಖಂಬಾ ನೊಮುನ್ ಖಾನ್ ಗೆಶೆ ಲರಂಪಾ ಡಿ. ಜಾವ್ಜಂಡೋರ್ಜ್ ಅವರು ಲಡಾಖ್‌ನ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಆದ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ವಿಧ್ಯುಕ್ತವಾಗಿ ಹಸ್ತಾಂತರಿಸಿದರು. ನಿರ್ಗಮನದ ಮೊದಲು ವಿಮಾನ ನಿಲ್ದಾಣದಲ್ಲಿ, ಮಂಗೋಲಿಯಾಕ್ಕೆ ಭಾರತದ ರಾಯಭಾರಿಯಾದ ಶ್ರೀ ಅತುಲ್ ಮಲ್ಹಾರಿ ಗೋಟ್ಸುರ್ವೆ ಅವರು ಲಡಾಖ್‌ನ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮಂಗೋಲಿಯನ್ ಸಸಿಯನ್ನು ಸಮರ್ಪಿಸಿದರು. ಭಾರತ ಮತ್ತು ಮಂಗೋಲಿಯಾ ನಡುವಿನ ಶಾಶ್ವತ ಸ್ನೇಹ ಮತ್ತು ಆಧ್ಯಾತ್ಮಿಕ ಬಾಂಧವ್ಯದ ಸಂಕೇತವಾಗಿ ಲಡಾಖ್‌ನಲ್ಲಿ ಈ ಸಸಿಯನ್ನು ನೆಡಲಾಗುವುದು.

ನಿಯೋಗ ಮತ್ತು ಗಂಡನ್ ಟೆಗ್ಚೆನ್ಲಿಂಗ್ ಮಠವು ಪ್ರದರ್ಶನದ ಯಶಸ್ವಿ ಸಂಘಟನೆಯಲ್ಲಿ ಸಕ್ರಿಯ ಬೆಂಬಲ ನೀಡಿದ್ದಕ್ಕಾಗಿ ಮಂಗೋಲಿಯಾದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಧನ್ಯವಾದಗಳನ್ನು ಅರ್ಪಿಸಿತು. ಈ ಕಾರ್ಯಕ್ರಮವು ಭಾರತ ಮತ್ತು ಮಂಗೋಲಿಯಾ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ.

 

****


(रिलीज़ आईडी: 2271325) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Gujarati , Tamil