ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ಅತ್ಯಂತ ಸುದೀರ್ಘ ಅವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಉಪರಾಷ್ಟ್ರಪತಿ ಅಭಿನಂದನೆ


ಪ್ರಧಾನಮಂತ್ರಿ ಮೋದಿಯವರ ದೂರದರ್ಶಿತ್ವದ ನಾಯಕತ್ವ ಮತ್ತು ‘ದೇಶ ಮೊದಲು’ ಸಂಕಲ್ಪವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ

ಪ್ರಧಾನಮಂತ್ರಿ ಮೋದಿಯವರ ದಣಿವರಿಯದ ಸೇವೆಯನ್ನು ಶ್ಲಾಘಿಸಿ, ಅವರನ್ನು ಸಮಕಾಲೀನ ಭಾರತದ “ಯುಗ ಪುರುಷ” ಎಂದು ಕರೆದ ಉಪರಾಷ್ಟ್ರಪತಿ

प्रविष्टि तिथि: 10 JUN 2026 12:30PM by PIB Bengaluru

ಭಾರತದ ಅತ್ಯಂತ ಸುದೀರ್ಘ ಅವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣ ಮಾಧ್ಯಮ ಸಂದೇಶವೊಂದರಲ್ಲಿ, ಈ ಕುರಿತು ಹಂಚಿಕೊಂಡಿರುವ ಉಪರಾಷ್ಟ್ರಪತಿಗಳು, ಈ ಸಾಧನೆಯು ಪ್ರಧಾನ ಮಂತ್ರಿಯವರ ದೂರದರ್ಶಿತ್ವದ ನಾಯಕತ್ವದಲ್ಲಿ ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ ಕಂಡುಬಂದ ಪರಿವರ್ತನಾ ಯುಗವನ್ನು ಬಿಂಬಿಸುವ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ವಿಸ್ತರಣೆ, ಸಾಮಾಜಿಕ ಸಬಲೀಕರಣ ಹಾಗು ತಾಂತ್ರಿಕ ಪ್ರಗತಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಗಮನಾರ್ಹ ಪ್ರಗತಿಯನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ. ಭಾರತದ ಹೆಚ್ಚಿದ ಜಾಗತಿಕ ಪ್ರತಿಷ್ಠೆ ಮತ್ತು ನವೀಕೃತ ಸಾಂಸ್ಕೃತಿಕ-ನಾಗರಿಕತೆಯ ಆತ್ಮವಿಶ್ವಾಸವು ಈ ಅವಧಿಯ ವಿಶಿಷ್ಟ ಲಕ್ಷಣಗಳಾಗಿ ಹೊರಹೊಮ್ಮಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 
ಪ್ರಧಾನಮಂತ್ರಿಯವರ ಎಲ್ಲರನ್ನೊಗೊಳ್ಳುವಿಕೆಯ  ಅಭಿವೃದ್ಧಿಯ ಬದ್ಧತೆಯನ್ನು ಉಲ್ಲೇಖಿಸಿದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, 25 ಕೋಟಿಗೂ ಹೆಚ್ಚು ಜನರನ್ನು ಸಂಪೂರ್ಣ ಬಡತನದಿಂದ ಮುಕ್ತಗೊಳಿಸಲಾಗಿದ್ದು, ಇದು ಲಕ್ಷಾಂತರ ಕುಟುಂಬಗಳಿಗೆ ಭರವಸೆ, ಅವಕಾಶ ಮತ್ತು ಗೌರವವನ್ನು ತಂದಿದೆ ಎಂದು ಹೇಳಿದ್ದಾರೆ.

ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ನಾಗರಿಕತೆಯ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಧಾನಮಂತ್ರಿಯವರು ಕೈಗೊಂಡಿರುವ ಕಾರ್ಯಗಳನ್ನು ಉಪರಾಷ್ಟ್ರಪತಿಗಳು ಶ್ಲಾಘಿಸಿದರು. ಮರೆತುಹೋದ ವೀರರನ್ನು ಗೌರವಿಸುವ ಮೂಲಕ, ಭಾರತದ ವೈವಿಧ್ಯಮಯ ಸಂಪ್ರದಾಯಗಳು ಮತ್ತು ಭಾಷೆಗಳನ್ನು ಆಚರಿಸುವ ಮೂಲಕ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮೂಲಕ ಮತ್ತು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ಮೂಲಕ ಪ್ರಧಾನಮಂತ್ರಿಯವರು  ದೇಶದ ಹೆಮ್ಮೆ ಮತ್ತು ನಾಗರಿಕತೆಯ ಪ್ರಜ್ಞೆಯನ್ನು ಬಲಪಡಿಸಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಮೋದಿಯವರು ವಿಶ್ವಸಂಸ್ಥೆಯಲ್ಲಿ "ಯಾದುಮ್ ಊರೇ, ಯಾವರುಮ್ ಕೇಳಿರ್" ("ಎಲ್ಲಾ ಸ್ಥಳಗಳೂ ನಮ್ಮ ಮನೆ; ಎಲ್ಲರೂ ನಮ್ಮ ಬಂಧುಗಳು") ಎಂಬ ತಮಿಳು ನುಡಿಗಟ್ಟನ್ನು ಬಳಸಿದ್ದನ್ನು ಉಲ್ಲೇಖಿಸಿದ  ಉಪರಾಷ್ಟ್ರಪತಿಗಳು, ಇದು ಭಾರತದ ಸಾರ್ವಕಾಲಿಕ ನೀತಿಯಾದ "ವಸುಧೈವ ಕುಟುಂಬಕಂ" ಮತ್ತು ವಿಶ್ವ ಸಹೋದರತ್ವ ಹಾಗೂ ಮಾನವ ಏಕತೆಯ ಅದರ ಶಾಶ್ವತ ಸಂದೇಶವನ್ನು ಅತ್ಯಂತ ನಿರರ್ಗಳವಾಗಿ ಪುನರುಚ್ಚರಿಸುತ್ತದೆ ಎಂದು ಹೇಳಿದರು.

ಭಾರತದ ನಾಗರಿಕತೆಯ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸಲು ಪ್ರಧಾನ ಮಂತ್ರಿಗಳು ಕೈಗೊಂಡಿರುವ ಕಾಶಿ ತಮಿಳು ಸಂಗಮಂ, ಸೌರಾಷ್ಟ್ರ ತಮಿಳು ಸಂಗಮಂ, ಹೊಸ ಸಂಸತ್ ಭವನದಲ್ಲಿ ಪವಿತ್ರ ‘ಸೆಂಗೋಲ್’ ಸ್ಥಾಪನೆ, ಚೋಳರ ಪರಂಪರೆಯನ್ನು ಗೌರವಿಸಲು ಗಂಗೈಕೊಂಡ ಚೋಳಪುರಂಗೆ ಭೇಟಿ ನೀಡಿದ್ದು ಹಾಗೂ ವಿದೇಶಗಳಿಂದ ಅಮೂಲ್ಯವಾದ ಕಲಾಕೃತಿಗಳು ಮತ್ತು ಪ್ರಾಚೀನ ವಸ್ತುಗಳನ್ನು ಮರಳಿ ತಂದಿರುವುದು ಸೇರಿದಂತೆ ಹಲವಾರು ಉಪಕ್ರಮಗಳನ್ನು ಉಪರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಎತ್ತಿ ತೋರಿಸಿದರು.

ದೂರದರ್ಶಿತ್ವದ ನಾಯಕತ್ವ, ದಣಿವರಿಯದ ಸೇವೆ ಮತ್ತು “ದೇಶ ಮೊದಲು” ಎಂಬ ಆದರ್ಶಕ್ಕೆ ಅಚಲವಾದ ಬದ್ಧತೆಯ ಮೂಲಕ ದೇಶದ ಸಾಮರ್ಥ್ಯಗಳು ಮತ್ತು ಆಕಾಂಕ್ಷೆಗಳಲ್ಲಿ ಮರಳಿ ವಿಶ್ವಾಸವನ್ನು ತುಂಬಿದ ನಾಯಕರಾಗಿ ಪ್ರಧಾನಮಂತ್ರಿ ಮೋದಿಯವರನ್ನು ಬಣ್ಣಿಸಿದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಮೋದಿ ಅವರು ಸಮಕಾಲೀನ ಭಾರತದ ನಿಜವಾದ “ಯುಗ ಪುರುಷ”ರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ರಾಷ್ಟ್ರವು “ವಿಕಸಿತ ಭಾರತ@ 2047”ರ ಗುರಿಯತ್ತ ಮುನ್ನಡೆಯುತ್ತಿರುವಾಗ, ಪ್ರಧಾನಮಂತ್ರಿಯವರ ನಾಯಕತ್ವವು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲವಾಗಿ ಮತ್ತು ದೇಶದ ಮುಂದಿನ ಪಯಣದಲ್ಲಿ ಮಾರ್ಗದರ್ಶಿ ಶಕ್ತಿಯಾಗಿ ಮುಂದುವರಿಯುತ್ತದೆ ಎಂದು ಉಪರಾಷ್ಟ್ರಪತಿಗಳು ತಿಳಿಸಿದರು.

ಉಪರಾಷ್ಟ್ರಪತಿ ಅವರು ಪ್ರಧಾನಮಂತ್ರಿಯವರ ನಿರಂತರ ಸೇವೆಗಾಗಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು.

 

*****

 


(रिलीज़ आईडी: 2271050) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Assamese , Gujarati , Tamil , Telugu , Malayalam