ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಕೇಂದ್ರದಿಂದ ಗ್ರಾಮೀಣಾಭಿವೃದ್ಧಿಗೆ ₹1.25 ಲಕ್ಷ ಕೋಟಿ ಭಾರಿ ಉತ್ತೇಜನ; ಜುಲೈ 1 ರಿಂದ ಜಾರಿಗೆ ಬರಲಿದೆ ಹೊಸ ವ್ಯವಸ್ಥೆ


'ವಿಬಿ ಜಿ ರಾಮ್ ಜಿ' ಅನುಷ್ಠಾನದ ಕುರಿತು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆ

ಗ್ರಾಮೀಣಾಭಿವೃದ್ಧಿಯ ಈ ಐತಿಹಾಸಿಕ ಬದಲಾವಣೆಗೆ ರಾಜ್ಯಗಳ ಸಿದ್ಧತೆಯನ್ನು ಪರಿಶೀಲಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಗ್ರಾಮೀಣ ಉದ್ಯೋಗ ಮತ್ತು ಗ್ರಾಮಗಳ ಅಭಿವೃದ್ಧಿಯನ್ನು ವೇಗಗೊಳಿಸಲು ₹95,692 ಕೋಟಿ ಭಾರಿ ಮಧ್ಯಂತರ ಅನುದಾನ

'ಒಬ್ಬ ಕಾರ್ಮಿಕನೂ ಕೆಲಸವಿಲ್ಲದೆ ಇರಬಾರದು': ಜುಲೈ 1ರ ಗ್ರಾಮೀಣ ಬದಲಾವಣೆಯ ಸಿದ್ಧತೆ ಪರಿಶೀಲಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಹೊಸ ವ್ಯವಸ್ಥೆಯಡಿ ಗ್ರಾಮೀಣಾಭಿವೃದ್ಧಿಯ ಮುಂದಿನ ಹಂತವನ್ನು ಮುನ್ನಡೆಸಲಿರುವ ಗ್ರಾಮ ಪಂಚಾಯತ್‌ ಗಳು

ಮನರೇಗಾ ಅಡಿಯಲ್ಲಿ ಈಗಾಗಲೇ ₹30,000 ಕೋಟಿ ಹಂಚಿಕೆ; ಈ ಬದಲಾವಣೆಯ ಸಮಯದಲ್ಲಿ ಯಾವುದೇ ಕಾರ್ಮಿಕ ಉದ್ಯೋಗವಿಲ್ಲದೆ ಇರಬಾರದು ಎಂದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಡಿಬಿಟಿ, ಇ-ಕೆವೈಸಿ ಮತ್ತು ಮುಖಚಹರೆ ದೃಢೀಕರಣದಲ್ಲಿ ರಾಜ್ಯಗಳಿಂದ ಕ್ಷಿಪ್ರ ಪ್ರಗತಿ; ಅನುಷ್ಠಾನದ ಮಾರ್ಗಸೂಚಿಗಳನ್ನು ಹೊರಡಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಬಜೆಟ್‌ ನಲ್ಲಿ ಹಣ ಕಾಯ್ದಿರಿಸಿದ ಇಪ್ಪತ್ತಾರು ರಾಜ್ಯಗಳು; ಪ್ರಕ್ರಿಯೆಯನ್ನು ವೇಗಗೊಳಿಸಲು ಬಾಕಿ ಇರುವ ನಾಲ್ಕು ರಾಜ್ಯಗಳಿಗೆ ಕೇಂದ್ರ ಸಚಿವರ ಕರೆ

प्रविष्टि तिथि: 09 JUN 2026 6:57PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು 'ವಿಕಸಿತ್ ಭಾರತ್ ಜಿ ರಾಮ್ ಜಿ' ಯೋಜನೆ ಅನುಷ್ಠಾನದ ಕುರಿತು ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಭಾರತ ಸರ್ಕಾರವು ಗ್ರಾಮೀಣ ಉದ್ಯೋಗ, ಕಾರ್ಮಿಕರ ಭದ್ರತೆ ಮತ್ತು ಗ್ರಾಮಗಳ ಒಟ್ಟಾರೆ ಅಭಿವೃದ್ಧಿಗೆ ಹೊಸ ವೇಗವನ್ನು ನೀಡಲು ಸಮಗ್ರ ಆರ್ಥಿಕ ಮತ್ತು ನೀತಿ ನಿಯಮಗಳ ಉಪಕ್ರಮವನ್ನು ಘೋಷಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರೊಂದಿಗೆ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್ ಅವರು, ಜುಲೈ 1, 2026 ರಿಂದ ಜಾರಿಗೆ ಬರಲಿರುವ ಈ ಐತಿಹಾಸಿಕ ಹೊಸ ವ್ಯವಸ್ಥೆಯು ಯಾವುದೇ ಅಡಚಣೆಯಿಲ್ಲದೆ, ಸಂಪೂರ್ಣವಾಗಿ ಕಾರ್ಮಿಕ ಕೇಂದ್ರಿತವಾಗಿ ಮತ್ತು ಸುಗಮವಾಗಿ ಬದಲಾವಣೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. ಕೇಂದ್ರ ರಾಜ್ಯ ಸಚಿವರಾದ ಶ್ರೀ ಚಂದ್ರಶೇಖರ್ ಪೆಮ್ಮಸಾನಿ ಅವರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಇದು ಕೇವಲ ಒಂದು ಯೋಜನೆಯ ಬದಲಾವಣೆಯಲ್ಲ, ಬದಲಿಗೆ ಕೋಟ್ಯಂತರ ಕಾರ್ಮಿಕರ ಜೀವನ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದರು. "ಒಬ್ಬನೇ ಒಬ್ಬ ಕಾರ್ಮಿಕನೂ ಒಂದು ದಿನವೂ ಕೆಲಸವಿಲ್ಲದೆ ಇರಬಾರದು" ಎಂದು ಅವರು ಸ್ಪಷ್ಟವಾಗಿ ತಿಳಿಸಿದರು ಮತ್ತು ಉದ್ಯೋಗ ಸೃಷ್ಟಿ, ಕೂಲಿ ಪಾವತಿ ಅಥವಾ ಶಾಸನಬದ್ಧ ಹಕ್ಕುಗಳ ವಿಷಯದಲ್ಲಿ ಯಾವುದೇ ರೀತಿಯ ಅಡಚಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

ಕೇಂದ್ರ ಸರ್ಕಾರವು ಈಗಾಗಲೇ ಮನರೇಗಾ ಯೋಜನೆಯಡಿ ₹30,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು. ಇದರ ಜೊತೆಗೆ, ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹95,692 ಕೋಟಿ ರೂಪಾಯಿಗಳ ಮಧ್ಯಂತರ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಒಟ್ಟು ಹಂಚಿಕೆಯು ₹1.25 ಲಕ್ಷ ಕೋಟಿ ರೂಪಾಯಿಗಳನ್ನು ಮೀರಲಿದೆ ಎಂದು ಅವರು ಹೇಳಿದರು.

ಈ ಮೊತ್ತವು ದೇಶಾದ್ಯಂತ ಇರುವ ಸುಮಾರು 2.80 ಲಕ್ಷ ಗ್ರಾಮ ಪಂಚಾಯತ್‌ ಗಳನ್ನು ತಲುಪಲಿದ್ದು, ಪ್ರತಿಯೊಂದು ಪಂಚಾಯತ್‌ ಗೂ ಲಕ್ಷಾಂತರ ರೂಪಾಯಿಗಳ ನಿಧಿ ಸಿಗುವಂತಾಗುತ್ತದೆ ಎಂದು ಶ್ರೀ ಚೌಹಾಣ್ ಹೇಳಿದರು. ಈ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಗುರುತಿಸಲಾದ ಅಭಿವೃದ್ಧಿ ಕೆಲಸಗಳಿಗಾಗಿಯೇ ಈ ಹಣವನ್ನು ಬಳಸಬೇಕು, ಆ ಮೂಲಕ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಆಸ್ತಿಗಳ ನಿರ್ಮಾಣ ಎರಡನ್ನೂ ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

ಕೇಂದ್ರ ಸರ್ಕಾರವು ಕೇವಲ ಹಣವನ್ನು ನೀಡುತ್ತಿಲ್ಲ, ಬದಲಿಗೆ ಸಕಾಲದಲ್ಲಿ ಕೂಲಿ ಪಾವತಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ನಿರಂತರ ಅಭಿವೃದ್ಧಿ ಕೆಲಸಗಳು ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದರು. ಜುಲೈ 1 ರಿಂದಲೇ ಅತ್ಯಂತ ವೇಗವಾಗಿ ಕೆಲಸಗಳು ಪ್ರಾರಂಭವಾಗಲು ಅನುಕೂಲವಾಗುವಂತೆ, ಸಾಕಷ್ಟು ಸಂಖ್ಯೆಯ ಕಾಮಗಾರಿಗಳಿಗೆ ಮುಂಚಿತವಾಗಿಯೇ ಅನುಮೋದನೆ ನೀಡಬೇಕು ಎಂದು ಅವರು ರಾಜ್ಯಗಳಿಗೆ ಮನವಿ ಮಾಡಿದರು.

ಡಿಜಿಟಲ್ ಮತ್ತು ಆಡಳಿತಾತ್ಮಕ ಸಿದ್ಧತೆಗಳ ಬಗ್ಗೆ ಮಾತನಾಡಿದ ಶ್ರೀ ಚೌಹಾಣ್, ನೇರ ನಗದು ವರ್ಗಾವಣೆ, ಎಸ್‌ ಎಂ ಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಇ-ಕೆವೈಸಿ ಮತ್ತು ಮುಖಚಹರೆ ದೃಢೀಕರಣದಂತಹ ಪ್ರಕ್ರಿಯೆಗಳಲ್ಲಿ ಅನೇಕ ರಾಜ್ಯಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ, ಇದು ಹೊಸ ವ್ಯವಸ್ಥೆಯ ಯಶಸ್ವಿ ಅನುಷ್ಠಾನವನ್ನು ತೋರಿಸುತ್ತದೆ ಎಂದು ಹೇಳಿದರು.

'ವಿಕಸಿತ ಭಾರತ - ಗ್ರಾಮೀಣ ಭಾರತ' ಗುರಿಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ 26 ರಾಜ್ಯಗಳು ತಮ್ಮ ಬಜೆಟ್‌ ನಲ್ಲಿ ಹಣವನ್ನು ಕಾಯ್ದಿರಿಸಿವೆ ಎಂದು ಅವರು ಮಾಹಿತಿ ನೀಡಿದರು. ಆದರೆ ಜಾರ್ಖಂಡ್, ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳು ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು. ಈ ರಾಜ್ಯಗಳ  ಮುಖ್ಯಮಂತ್ರಿಗಳಿಗೆ ತಾವೇ ವೈಯಕ್ತಿಕವಾಗಿ ಪತ್ರ ಬರೆಯುವುದಾಗಿಯೂ ಅವರು ಹೇಳಿದರು.

ಆದಷ್ಟು ಬೇಗ ರಾಜ್ಯ ಮಟ್ಟದ ಅಧಿಸೂಚನೆಗಳನ್ನು  ಹೊರಡಿಸುವಂತೆ ಅವರು ರಾಜ್ಯಗಳಿಗೆ ತಿಳಿಸಿದರು. ಈಗಾಗಲೇ ಅಧಿಸೂಚನೆಗಳನ್ನು ಹೊರಡಿಸಿರುವ ಮಿಜೋರಾಂ, ಪುದುಚೇರಿ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಶ್ಲಾಘಿಸಿದ ಅವರು, ಇತರ ರಾಜ್ಯಗಳೂ ಈ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ತಿಳಿಸಿದರು. ಕೃಷಿಯ ಕೆಲಸಗಳು ಹೆಚ್ಚಿರುವ ಅವಧಿಗಳನ್ನು  ಮೊದಲೇ ಘೋಷಿಸಲು, ಶೇಕಡಾ 100 ರಷ್ಟು ಇ-ಕೆವೈಸಿ ಖಚಿತಪಡಿಸಿಕೊಳ್ಳಲು ಹಾಗೂ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಅವರು ರಾಜ್ಯಗಳಿಗೆ ನಿರ್ದೇಶನ ನೀಡಿದರು.

ಗ್ರಾಮ ಪಂಚಾಯತ್‌ ಗಳು ಮತ್ತು ಗ್ರಾಮ ಸಭೆಗಳ ಮೂಲಕವೇ ಕೆಲಸಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಈ ಪ್ರಸ್ತಾಪಗಳ ಆಧಾರದ ಮೇಲೆಯೇ ಅವುಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಜುಲೈ 1 ರವರೆಗೆ ಮನರೇಗಾ ಅಡಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೂಲಿ ಪಾವತಿಯಲ್ಲಿ ಯಾವುದೇ ಕಡಿತ ಅಥವಾ ಅಡಚಣೆ ಉಂಟಾಗಬಾರದು ಎಂದು ಅವರು ಸೂಚಿಸಿದರು.

ಸಭೆಯಲ್ಲಿ, ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ವಿವಿಧ ರಾಜ್ಯಗಳಿಗೆ ಮಧ್ಯಂತರ ಅನುದಾನವನ್ನು ಘೋಷಿಸಿದರು. ಆ ವಿವರಗಳು ಹೀಗಿವೆ:

ಆಂಧ್ರಪ್ರದೇಶ - ₹7,707.21 ಕೋಟಿ, ಅರುಣಾಚಲ ಪ್ರದೇಶ - ₹560.70 ಕೋಟಿ, ಅಸ್ಸಾಂ - ₹1,929.7 ಕೋಟಿ, ಬಿಹಾರ - ₹6,715.83 ಕೋಟಿ, ಛತ್ತೀಸಗಢ - ₹3,354.85 ಕೋಟಿ, ಗೋವಾ - ₹3.70 ಕೋಟಿ, ಗುಜರಾತ್ - ₹1,540.54 ಕೋಟಿ, ಹರಿಯಾಣ - ₹590.19 ಕೋಟಿ, ಹಿಮಾಚಲ ಪ್ರದೇಶ - ₹1,203.28 ಕೋಟಿ, ಜಾರ್ಖಂಡ್ - ₹2,705.64 ಕೋಟಿ, ಕರ್ನಾಟಕ - ₹5,709.9 ಕೋಟಿ, ಕೇರಳ - ₹3,136.44 ಕೋಟಿ, ಮಧ್ಯಪ್ರದೇಶ - ₹6,252.03 ಕೋಟಿ, ಮಹಾರಾಷ್ಟ್ರ - ₹4,420.32 ಕೋಟಿ, ಮಣಿಪುರ - ₹581.99 ಕೋಟಿ, ಮೇಘಾಲಯ - ₹1,155.09 ಕೋಟಿ, ಮಿಜೋರಾಂ - ₹611.65 ಕೋಟಿ, ನಾಗಾಲ್ಯಾಂಡ್ - ₹287.85 ಕೋಟಿ, ಒಡಿಶಾ - ₹3,763.80 ಕೋಟಿ, ಪಂಜಾಬ್ - ₹1,331.61 ಕೋಟಿ, ರಾಜಸ್ಥಾನ - ₹7,581.87 ಕೋಟಿ, ಸಿಕ್ಕಿಂ - ₹97.57 ಕೋಟಿ, ತಮಿಳುನಾಡು - ₹7,585.49 ಕೋಟಿ, ತೆಲಂಗಾಣ - ₹3,825.31 ಕೋಟಿ, ತ್ರಿಪುರ - ₹1,041.7 ಕೋಟಿ, ಉತ್ತರ ಪ್ರದೇಶ - ₹9,721.48 ಕೋಟಿ, ಉತ್ತರಾಖಂಡ - ₹626.43 ಕೋಟಿ, ಪಶ್ಚಿಮ ಬಂಗಾಳ - ₹8,508.00 ಕೋಟಿ.

ಇದರೊಂದಿಗೆ ರಾಜ್ಯಗಳಿಗೆ ನೀಡಲಾದ ಒಟ್ಟು ಅನುದಾನ ₹92,550.17 ಕೋಟಿ ರೂಪಾಯಿಗಳಾಗಿದೆ.

ಅದೇ ರೀತಿ ಕೇಂದ್ರಾಡಳಿತ ಪ್ರದೇಶಗಳಿಗೂ ಅನುದಾನವನ್ನು ನೀಡಲಾಗಿದ್ದು, ಅದರ ವಿವರ ಹೀಗಿದೆ: ಪುದುಚೇರಿ - ₹40.56 ಕೋಟಿ, ಜಮ್ಮು ಮತ್ತು ಕಾಶ್ಮೀರ - ₹1,151.2 ಕೋಟಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು - ₹4.44 ಕೋಟಿ, ಲಡಾಖ್ - ₹85.98 ಕೋಟಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು - ₹9.02 ಕೋಟಿ, ಲಕ್ಷದ್ವೀಪ - ₹0.32 ಕೋಟಿ

ಇದರೊಂದಿಗೆ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ಒಟ್ಟು ಅನುದಾನ ₹1,291.52 ಕೋಟಿ ರೂಪಾಯಿಗಳಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಈ ಹಂಚಿಕೆಗಳ ಜೊತೆಗೆ, ಕೇಂದ್ರ ಆಡಳಿತ ಮತ್ತು ಸಾಮಾಜಿಕ ತಪಾಸಣೆಗಾಗಿ ₹1,850.62 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಈ ಮೂಲಕ ಒಟ್ಟು ಮಧ್ಯಂತರ ಹಂಚಿಕೆಯು ₹95,692.31 ಕೋಟಿ ರೂಪಾಯಿಗಳಾಗಿದ್ದು, ಇದು ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸಲಿದೆ.

"ವಿಕಸಿತ ಭಾರತ"ದ ಗುರಿಯನ್ನು ತಲುಪಲು "ವಿಕಸಿತ್ ಗಾಂವ್" (ಅಭಿವೃದ್ಧಿ ಹೊಂದಿದ ಗ್ರಾಮ) ನಿರ್ಮಿಸುವಲ್ಲಿ ಈ ಉಪಕ್ರಮವು ಒಂದು ಪ್ರಮುಖ ಸಾಧನವಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಇದರ ಯಶಸ್ಸು ರಾಜ್ಯಗಳ ಬದ್ಧತೆ, ಸಿದ್ಧತೆ ಮತ್ತು ಸಕ್ರಿಯ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಅವರು ತಿಳಿಸಿದರು.

ಜೂನ್ 28 ಮತ್ತು 29 ರಂದು ನವದೆಹಲಿಯ ಪೂಸಾ (PUSA) ಸಂಸ್ಥೆಯಲ್ಲಿ ನಡೆಯಲಿರುವ 'ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಮ್ಮೇಳನ'ದಲ್ಲಿ ಭಾಗವಹಿಸಲು ಅವರು ಎಲ್ಲಾ ರಾಜ್ಯಗಳಿಗೆ ಆಹ್ವಾನ ನೀಡಿದರು. ಅಲ್ಲಿ ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವಿವರವಾದ ಚರ್ಚೆಗಳು ನಡೆಯಲಿವೆ.

ಎಲ್ಲಾ ರಾಜ್ಯಗಳ ಸಹಕಾರದೊಂದಿಗೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಈ ಉಪಕ್ರಮವು ಗ್ರಾಮೀಣ ಭಾರತವನ್ನು ಪರಿವರ್ತಿಸುವಲ್ಲಿ ಮತ್ತು ಕೋಟ್ಯಂತರ ಕಾರ್ಮಿಕರಿಗೆ ಸುಸ್ಥಿರ ಉದ್ಯೋಗ ಹಾಗೂ ಉತ್ತಮ ಜೀವನೋಪಾಯವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದರು.

 

*****

 


(रिलीज़ आईडी: 2270943) आगंतुक पटल : 23
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Gujarati , Odia , Tamil , Telugu , Malayalam