ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

“ಭಾರತದ ಯುವಜನತೆಯೇ ದೇಶದ ಅತ್ಯಂತ ದೊಡ್ಡ ಶಕ್ತಿ ಮತ್ತು ವಿಕಸಿತ್ ಭಾರತದ ದೃಷ್ಟಿಕೋನವನ್ನು ನನಸಾಗಿಸುವಲ್ಲಿ ಅವರೇ ಕೇಂದ್ರಬಿಂದು”: ‘ಮೈ ಭಾರತ್’ ಯುವ ಸಮಾವೇಶದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ


“ಯುವ ಭಾರತೀಯರ ವಿಚಾರಗಳು, ಆವಿಷ್ಕಾರಗಳು ಮತ್ತು ಆಕಾಂಕ್ಷೆಗಳಿಂದ ರೂಪುಗೊಳ್ಳುವ ಒಂದು ವಿಕಸಿತ ಭಾರತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಲ್ಪಿಸಿಕೊಂಡಿದ್ದಾರೆ”: ಡಾ. ಮಾಂಡವೀಯ

ಭಾರತದ ಯುವಕರು ತಮ್ಮ ಪ್ರತಿಭೆ, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವತ್ತ ಮುನ್ನಡೆಯುತ್ತಿದ್ದಾರೆ: ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ

6,000 ಕ್ಕೂ ಹೆಚ್ಚು ಯುವಕರ ಭಾಗವಹಿಸುವಿಕೆಗೆ ಸಾಕ್ಷಿಯಾದ ‘ಮೈ ಭಾರತ್’ ಯುವ ಸಮಾವೇಶವು ದೇಶಾದ್ಯಂತ ಹಮ್ಮಿಕೊಳ್ಳಲಾದ ಪ್ರಮುಖ ಯುವ ಸಹಭಾಗಿತ್ವ ಉಪಕ್ರಮಗಳನ್ನು ಪ್ರದರ್ಶಿಸಿತು

प्रविष्टि तिथि: 06 JUN 2026 4:15PM by PIB Bengaluru

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರೊಂದಿಗೆ ಇಂದು ರಾಷ್ಟ್ರೀಯ ರಾಜಧಾನಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ‘ಯೂತ್ ಫಾರ್ ವಿಕಸಿತ್ ಭಾರತ್: ಮೈ ಭಾರತ್ ಯುವ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಮಾವೇಶವು ದೇಶಾದ್ಯಂತದ 6,000 ಕ್ಕೂ ಹೆಚ್ಚು ಯುವಕರನ್ನು ಒಂದೆಡೆ ಸೇರಿಸಿತು. ಇವರಲ್ಲಿ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಯುವತಿಯರು, ಉದ್ಯಮಿಗಳು, ಕಂಟೆಂಟ್ ಕ್ರಿಯೇಟರ್‌ಗಳು (ವಿಷಯ ರಚನೆಕಾರರು), ಆವಿಷ್ಕಾರಕರು, ಉದಯೋನ್ಮುಖ ನಾಯಕರು ಮತ್ತು ಸಾಧಕರು ಸೇರಿದಂತೆ ವಿವಿಧ ಹಿನ್ನೆಲೆಯುಳ್ಳವರು ಭಾಗವಹಿಸಿದ್ದರು.

ಇದು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪರಿವರ್ತನಾತ್ಮಕ ಪಾತ್ರ ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪಯಣವನ್ನು ಉಲ್ಲೇಖಿಸಿತು.

ಶಾಸಕಿ ಹಾಗೂ ಗಾಯಕರಾದ ಶ್ರೀಮತಿ ಮೈಥಿಲಿ ಠಾಕೂರ್, ನಟ ಶ್ರೀ ವಿಕ್ರಾಂತ್ ಮಾಸ್ಸೆ, ಉದ್ಯಮಿ ಶ್ರೀ ಅಮನ್ ಗುಪ್ತಾ ಮತ್ತು ಭಾರತೀಯ ಕ್ರಿಕೆಟರ್ ಶ್ರೀ ಜಿತೇಶ್ ಶರ್ಮಾ ಸೇರಿದಂತೆ ಪ್ರಮುಖ ಗಣ್ಯರು ‘ಮೈ ಭಾರತ್’ ಎನ್‌ಎಸ್‌ಎಸ್ (NSS) ಸ್ವಯಂಸೇವಕರೊಂದಿಗೆ ಸಂವಾದ ನಡೆಸಿದರು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ ಯುವಕರು ಉನ್ನತ ಸಾಧನೆ ಮಾಡಲು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಲು ಪ್ರೋತ್ಸಾಹಿಸಿದರು.

6,000 ಕ್ಕೂ ಹೆಚ್ಚು ಯುವಕರ ಭಾಗವಹಿಸುವಿಕೆಗೆ ಸಾಕ್ಷಿಯಾದ ಈ ಯುವ ಸಮಾವೇಶವು, ದೇಶಾದ್ಯಂತ ಹಮ್ಮಿಕೊಳ್ಳಲಾದ ಪ್ರಮುಖ ಯುವ ಸಹಭಾಗಿತ್ವ ಉಪಕ್ರಮಗಳನ್ನು ಪ್ರದರ್ಶಿಸಿತು.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮಾಂಡವೀಯ ಅವರು ತಮ್ಮ ಭಾಷಣದಲ್ಲಿ, ಭಾರತದ ಯುವಜನತೆಯೇ ದೇಶದ ಅತ್ಯಂತ ದೊಡ್ಡ ಶಕ್ತಿಯಾಗಿದ್ದಾರೆ ಮತ್ತು ವಿಕಸಿತ್ ಭಾರತದ ಕನಸನ್ನು ನನಸಾಗಿಸುವಲ್ಲಿ ಅವರೇ ಕೇಂದ್ರಬಿಂದು ಎಂದು ಒತ್ತಿ ಹೇಳಿದರು. ಭಾರತದ ಜನಸಂಖ್ಯೆಯ ಸುಮಾರು 65 ಪ್ರತಿಶತದಷ್ಟು ಜನರು 35 ವರ್ಷದೊಳಗಿನವರಾಗಿದ್ದು, ದೇಶವು ಹೊಂದಿರುವ ಈ ಜನಸಂಖ್ಯಾ ಅನುಕೂಲವನ್ನು ಅವರು ಉಲ್ಲೇಖಿಸಿದರು.

"ಯುವಕರೇ ನಮ್ಮ ಶಕ್ತಿ, ನಮ್ಮ ಹೆಮ್ಮೆ, ನಮ್ಮ ಸಂಕಲ್ಪ ಮತ್ತು ನಮ್ಮ ಭವಿಷ್ಯ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಯುವ ಭಾರತೀಯರಿಗೆ ಆವಿಷ್ಕಾರಗಳನ್ನು ಮಾಡಲು, ಅತ್ಯುತ್ತಮ ಸಾಧನೆ ತೋರಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಸ್ಟಾರ್ಟ್‌ಅಪ್‌ಗಳು, ಕ್ರೀಡೆ, ಸಾರ್ವಜನಿಕ ಸೇವೆ, ಉದ್ಯಮಶೀಲತೆ ಅಥವಾ ಸೃಜನಶೀಲ ಕ್ಷೇತ್ರಗಳಲ್ಲಿ ಇರಲಿ, ಯುವ ಭಾರತೀಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ," ಎಂದು ಅವರು ಹೇಳಿದರು.

ಡಾ. ಮಾಂಡವೀಯ ಅವರು ರಾಷ್ಟ್ರ ನಿರ್ಮಾಣದ ಕಡೆಗೆ ಯುವಕರ ಸಾಮರ್ಥ್ಯವನ್ನು ಪೋಷಿಸುವ ಮತ್ತು ಮುನ್ನಡೆಸುವಲ್ಲಿ ‘ಮೈ ಭಾರತ್’ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಪುನರುಚ್ಚರಿಸಿದರು.

ಇತ್ತೀಚೆಗೆ ‘ಮೈ ಭಾರತ್’ ಗಳಿಸಿದ ಗಿನ್ನೆಸ್ ವಿಶ್ವ ದಾಖಲೆಯ ಸಾಧನೆಯನ್ನು ಸಚಿವರು ಶ್ಲಾಘಿಸಿದರು ಮತ್ತು ಈ ವೇದಿಕೆಯ ಕಾರ್ಯಕ್ರಮಗಳು, ಸ್ವಯಂಸೇವಕ ಅವಕಾಶಗಳು ಹಾಗೂ ರಾಷ್ಟ್ರ ನಿರ್ಮಾಣದ ಉಪಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಯುವಕರಿಗೆ ಕರೆ ನೀಡಿದರು.

ಯುವಕರು ತಮ್ಮ ಸಾಮರ್ಥ್ಯವನ್ನು ಗುರುತಿಸಿ ಅತ್ಯುತ್ತಮ ಸಾಧನೆಗಾಗಿ ಶ್ರಮಿಸುವಂತೆ ಕರೆ ನೀಡಿದ ಡಾ. ಮಾಂಡವೀಯ, "ಈ ಸಮಯ ಯುವಕರಿಗೆ ಸೇರಿದ್ದಾಗಿದೆ. ಯುವ ಭಾರತೀಯರ ಆಲೋಚನೆಗಳು, ಆವಿಷ್ಕಾರಗಳು ಮತ್ತು ಆಕಾಂಕ್ಷೆಗಳಿಂದ ರೂಪುಗೊಳ್ಳುವ ವಿಕಸಿತ್ ಭಾರತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಲ್ಪಿಸಿಕೊಂಡಿದ್ದಾರೆ. ನಾವೆಲ್ಲರೂ ಒಟ್ಟಾಗಿ, 140 ಕೋಟಿ ನಾಗರಿಕರ ಕನಸುಗಳನ್ನು ನನಸಾಗಿಸುವ ಸ್ಪರ್ಧಾತ್ಮಕ, ಆತ್ಮವಿಶ್ವಾಸದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಬೇಕು,” ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರು, ಭಾರತದ ಯುವಜನರು ತಮ್ಮ ಪ್ರತಿಭೆ, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಗುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪ್ರಮುಖ ಪಾತ್ರವನ್ನು ಒತ್ತಿಹೇಳಿದ ಅವರು, ಭಾರತದ ಯುವಕರು ಕಠಿಣ ಪರಿಶ್ರಮಿಗಳು, ಮುನ್ನೋಟವುಳ್ಳವರು, ಸೃಜನಶೀಲರು ಮತ್ತು ಧೈರ್ಯವಂತರು. ಯುವ ಭಾರತೀಯರ ಪ್ರತಿಯೊಂದು ಸಾಧನೆಯೂ ವಿಕಸಿತ್ ಭಾರತದ ಕಡೆಗಿನ ದೇಶದ ಮುನ್ನಡೆಯನ್ನು ಬಲಪಡಿಸುತ್ತದೆ ಎಂದು ಅವರು ನುಡಿದರು.

ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಪರಿಶ್ರಮ, ಶಿಸ್ತು ಮತ್ತು ಸಮರ್ಪಣಾ ಮನೋಭಾವ ಮುಖ್ಯ ಎಂದು ಅಭಿಪ್ರಾಯಪಟ್ಟ ಅವರು, ಕ್ರೀಡೆ, ಉದ್ಯಮಶೀಲತೆ, ಕಂಟೆಂಟ್ ಕ್ರಿಯೇಷನ್ (ವಿಷಯ ರಚನೆ), ಕಲೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಯುವ ಭಾರತೀಯರ ಸಾಧನೆಗಳನ್ನು ಶ್ಲಾಘಿಸಿದರು.

ಯುವ ಸಮಾವೇಶದ ಅವಧಿಯಲ್ಲಿ, ನಟ ವಿಕ್ರಾಂತ್ ಮಾಸ್ಸೆ ಅವರು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಕ್ರಿಯೇಟರ್ ಎಕಾನಮಿಯ ಗಮನಾರ್ಹ ಬೆಳವಣಿಗೆಯನ್ನು ಉಲ್ಲೇಖಿಸಿದರು, ಜೊತೆಗೆ ಡಿಜಿಟಲ್ ಸಬಲೀಕರಣ ಮತ್ತು ಆವಿಷ್ಕಾರಗಳ ಮೂಲಕ ಸೃಷ್ಟಿಯಾಗಿರುವ ಅವಕಾಶಗಳನ್ನು ಒತ್ತಿಹೇಳಿದರು.

ಉದ್ಯಮಿ ಅಮನ್ ಗುಪ್ತಾ ಅವರು ಉದ್ಯಮಶೀಲತೆ, ಆವಿಷ್ಕಾರ ಮತ್ತು ಪೂರಕ ವ್ಯವಹಾರ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಭಾರತವನ್ನು ವಿಶ್ವದ ಸ್ಟಾರ್ಟ್‌ಅಪ್ ರಾಜಧಾನಿಯನ್ನಾಗಿ ಮಾಡಲು ಸರ್ಕಾರ ಕೈಗೊಳ್ಳುತ್ತಿರುವ ಪ್ರಯತ್ನಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಭಾರತೀಯ ಕ್ರೀಡಾ ರಂಗಕ್ಕೆ ನೀಡಿದ ಅತ್ಯುತ್ತಮ ಸಾಧನೆ ಮತ್ತು ಕೊಡುಗೆಗಳಿಗಾಗಿ ಪ್ರಖ್ಯಾತ ಕ್ರೀಡಾಪಟುಗಳನ್ನು ಸನ್ಮಾನಿಸುವ ಮೂಲಕ ಕ್ರೀಡಾ ಸಾಧನೆಯನ್ನು ಈ ಸಮಾವೇಶದಲ್ಲಿ ಆಚರಿಸಲಾಯಿತು.

ಇದಲ್ಲದೆ, ಕ್ರಿಕೆಟರ್ ಜಿತೇಶ್ ಶರ್ಮಾ ಅವರು “ಪ್ಲೇ ಇನ್ ಇಂಡಿಯಾ, ಪ್ಲೇ ಫಾರ್ ಇಂಡಿಯಾ” (ಭಾರತದಲ್ಲಿ ಆಡಿ, ಭಾರತಕ್ಕಾಗಿ ಆಡಿ) ಎಂಬ ವಿಷಯದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು, ಇದು ಯುವ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಲು ಮತ್ತು ದೇಶದ ಕ್ರೀಡಾ ಆಕಾಂಕ್ಷೆಗಳಿಗೆ ಕೊಡುಗೆ ನೀಡಲು ಪ್ರೇರೇಪಿಸಿತು.

ಈ ಸಮಾವೇಶದಲ್ಲಿ ಯುವ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಪಲ್ಲವಿ ಜೈನ್ ಗೋವಿಲ್ ಅವರು ಉಪಸ್ಥಿತರಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ನಿರಂತರ ಒಳಗೊಳ್ಳುವಿಕೆಯ ಮಹತ್ವ ಮತ್ತು ಯುವ ನಾಯಕರನ್ನು ಸಬಲೀಕರಿಸುವಲ್ಲಿ ಸರ್ಕಾರದ ನಿರಂತರ ಬದ್ಧತೆಯನ್ನು ಒತ್ತಿ ಹೇಳಿದರು.

ಸ್ವಾತಂತ್ರ್ಯದ ಶತಮಾನೋತ್ಸವ ವರ್ಷವಾದ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಮತ್ತು ಒಳಗೊಳ್ಳುವ ಭಾರತವನ್ನು ನಿರ್ಮಿಸಲು ಸಕ್ರಿಯವಾಗಿ ಕೊಡುಗೆ ನೀಡುವ ಯುವ ನಾಗರಿಕರ ಬದ್ಧತೆಯನ್ನು ಪುನರುಚ್ಚರಿಸುವ ‘ವಿಕಸಿತ ಭಾರತ ಸಂಕಲ್ಪ’ದೊಂದಿಗೆ ಮೈ ಭಾರತ್ ಯುವ ಸಮಾವೇಶವು ಮುಕ್ತಾಯಗೊಂಡಿತು.


*****


(रिलीज़ आईडी: 2269834) आगंतुक पटल : 10
इस विज्ञप्ति को इन भाषाओं में पढ़ें: Tamil , English , Khasi , हिन्दी , Marathi , Gujarati , Urdu , Odia , Telugu