ಹಣಕಾಸು ಸಚಿವಾಲಯ
ಒಂದು ಪ್ರಮುಖ ಸುಧಾರಣೆ: ಜಿ-ಸೆಕ್ ಮಾರುಕಟ್ಟೆಯನ್ನು ಬಲಪಡಿಸಲು ಮತ್ತು ಈಕ್ವಿಟಿ ವಲಯದಲ್ಲಿ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆಯನ್ನು (ಎಫ್ ಪಿ ಐ) ಸುಗಮಗೊಳಿಸಲು ಸರ್ಕಾರದಿಂದ ಕ್ರಮಗಳ ಘೋಷಣೆ
प्रविष्टि तिथि:
05 JUN 2026 10:41AM by PIB Bengaluru
ಭಾರತದ ಸ್ಥಾನವನ್ನು ಪ್ರಮುಖ ಜಾಗತಿಕ ಹೂಡಿಕೆ ತಾಣವನ್ನಾಗಿ ಬಲಪಡಿಸುವ ಮತ್ತು ಬಂಡವಾಳ ಮಾರುಕಟ್ಟೆಯನ್ನು ವಿಸ್ತರಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ, ಭಾರತದ ಹೊರಗೆ ವಾಸಿಸುವ ವ್ಯಕ್ತಿಗಳು (ಪಿ ಆರ್ ಓ ಐ) ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್ ಪಿ ಐ) ಹೂಡಿಕೆಯ ಸುಲಭತೆಯನ್ನು ಹೆಚ್ಚಿಸಲು ಹಾಗೂ ಸ್ಥಿರವಾದ ದೀರ್ಘಕಾಲೀನ ವಿದೇಶಿ ಬಂಡವಾಳದ ಹರಿವನ್ನು ಆಕರ್ಷಿಸಲು ಹಣಕಾಸು ಸಚಿವಾಲಯವು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಬಂಡವಾಳ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಇತ್ತೀಚೆಗೆ ಕೈಗೊಂಡ ಉಪಕ್ರಮಗಳ ಮುಂದುವರಿದ ಭಾಗವಾಗಿ, ಈಕ್ವಿಟಿಗಳು ಮತ್ತು ಜಿ-ಸೆಕ್ ಗಳಲ್ಲಿ ವಿದೇಶಿ ಹೂಡಿಕೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ, ದಕ್ಷ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಸರ್ಕಾರವು ಮತ್ತಷ್ಟು ಸುಧಾರಣೆಗಳನ್ನು ತಂದಿದೆ.
ವಿದೇಶಿ ವಿನಿಮಯ ನಿರ್ವಹಣಾ (ಸಾಲೇತರ ದಾಖಲೆ) ನಿಯಮಗಳು, 2019ರ ಅಡಿಯಲ್ಲಿ ಭಾರತದ ಹೊರಗೆ ವಾಸಿಸುವ ವ್ಯಕ್ತಿಗಳಿಂದ (ಪಿ ಆರ್ ಓ ಐ) ಹೂಡಿಕೆಯ ಉದಾರೀಕರಣ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು 2026-27ರ ಕೇಂದ್ರ ಬಜೆಟ್ ನಲ್ಲಿ, ಇದುವರೆಗೆ ಕೇವಲ ಅನಿವಾಸಿ ಭಾರತೀಯರು (ಎನ್ ಆರ್ ಐ)/ಒಸಿಐಗಳಿಗೆ ಮಾತ್ರ ಲಭ್ಯವಿದ್ದ ಪೋರ್ಟ್ ಫೋಲಿಯೋ ಹೂಡಿಕೆ ಯೋಜನೆಯ (ಪೋರ್ಟ್ ಫೋಲಿಯೋ ಇನವೆಸ್ಟ್ ಮೆಂಟ್ ಯೋಜನೆ ಸ್ಕೀಮ್) ಮೂಲಕ, ಭಾರತದ ಹೊರಗೆ ವಾಸಿಸುವ ವೈಯಕ್ತಿಕ ವ್ಯಕ್ತಿಗಳಿಗೂ (ಪಿಆರ್ ಒ ಐ) ಪಟ್ಟಿ ಮಾಡಲಾದ ಭಾರತೀಯ ಕಂಪನಿಗಳ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಲು ಅನುಮತಿಸಲಾಗುವುದು ಎಂದು ಘೋಷಿಸಿದ್ದರು; ಮತ್ತು ಈ ಯೋಜನೆಯಡಿ ಯಾವುದೇ ಒಂದು ಕಂಪನಿಯಲ್ಲಿ ವೈಯಕ್ತಿಕ ಪಿಆರ್ ಒ ಐ ಹೂಡಿಕೆಯ ಮಿತಿಯನ್ನು ಶೇಕಡಾ 5 ರಿಂದ ಶೇಕಡಾ 10 ಕ್ಕೆ ಹೆಚ್ಚಿಸಲಾಗುವುದು, ಹಾಗೂ ಎಲ್ಲಾ ವೈಯಕ್ತಿಕ ಪಿಆರ್ ಒ ಐಗಳ ಒಟ್ಟಾರೆ ಹೂಡಿಕೆ ಮಿತಿಯನ್ನು ಪ್ರಸ್ತುತ ಇರುವ ಶೇಕಡಾ 10 ರಿಂದ ಶೇಕಡಾ 24 ಕ್ಕೆ ಹೆಚ್ಚಿಸಲಾಗುವುದು.
ಇದನ್ನು ಜಾರಿಗೆ ತರಲು, ಆರ್ಥಿಕ ವ್ಯವಹಾರಗಳ ಇಲಾಖೆಯು (ಡಿಇಎ) ವಿದೇಶಿ ವಿನಿಮಯ ನಿರ್ವಹಣಾ (ಸಾಲೇತರ ದಾಖಲೆಗಳು) (ಮೂರನೇ ತಿದ್ದುಪಡಿ) ನಿಯಮಗಳು, 2026 ಅನ್ನು ಅಧಿಸೂಚಿಸುತ್ತಿದೆ.
ಈ ಅಧಿಸೂಚನೆಯು ಎನ್ ಆರ್ ಐ ಮತ್ತು ಒ ಸಿ ಐ ಹೂಡಿಕೆದಾರರಿಗಾಗಿ ಈಗಾಗಲೇ ಜಾರಿಯಲ್ಲಿರುವ ನೋಂದಣಿ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಮೂಲಕ ವಿದೇಶಿ ಪೋರ್ಟ್ ಫೋಲಿಯೋ ಬಂಡವಾಳದ ಹೆಚ್ಚು ಸಕ್ರಿಯ ಕ್ರೋಡೀಕರಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಸರಳೀಕೃತ ನೋಂದಣಿ ಮತ್ತು ಕಡಿಮೆ ಅನುಸರಣಾ ಅಗತ್ಯತೆಗಳು ವ್ಯವಹಾರವನ್ನು ಮತ್ತಷ್ಟು ಸುಲಭಗೊಳಿಸುತ್ತವೆ, ಜೊತೆಗೆ ತುಲನಾತ್ಮಕವಾಗಿ ಸ್ಥಿರವಾಗಿರುವ ವೈಯಕ್ತಿಕ ವಿದೇಶಿ ಹೂಡಿಕೆದಾರರ ವಿಶಾಲ ನೆಲೆಯನ್ನು ಆಕರ್ಷಿಸುತ್ತವೆ. ಇದು ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಹೆಚ್ಚಿನ ಮತ್ತು ಹೆಚ್ಚು ಸ್ಥಿರವಾದ ವಿದೇಶಿ ಹರಿವನ್ನು ಬೆಂಬಲಿಸುತ್ತದೆ.
ಸರ್ಕಾರಿ ಭದ್ರತೆಗಳಲ್ಲಿ (ಜಿ-ಸೆಕ್) ಎಫ್ ಪಿ ಐ ಹೂಡಿಕೆಯ ನಿಯಂತ್ರಕ ಚೌಕಟ್ಟಿನ ಪರಿಶೀಲನೆ
ಜಿ-ಸೆಕ್ ನಲ್ಲಿ ಎಫ್ ಪಿ ಐಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ಸಂಪೂರ್ಣವಾಗಿ ಪ್ರವೇಶಿಸಬಹುದಾದ ಮಾರ್ಗದ (ಎಫ್ ಎ ಆರ್) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಭದ್ರತೆಗಳ ಪಟ್ಟಿಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ 15, 30 ಮತ್ತು 40 ವರ್ಷಗಳ ಅವಧಿಯ ಹೊಸ ಸರ್ಕಾರಿ ಭದ್ರತೆಗಳು ಹಾಗೂ ಎಫ್ ಎ ಆರ್ ಅರ್ಹತೆಯ ಅವಧಿಗಳಲ್ಲಿನ ಸಾವರಿನ್ ಗ್ರೀನ್ ಬಾಂಡ್ ಗಳನ್ನು (ಎಸ್ ಜಿ ಆರ್ ಬಿ ಎಸ್.) ಸಹ ಇದಕ್ಕೆ ಸೇರಿಸಲಾಗುವುದು. ಇನ್ನುಳಿದಂತೆ, ಸಾಮಾನ್ಯ ಮಾರ್ಗದ (ಜನರಲ್ ರೂಟ್) ಅಡಿಯಲ್ಲಿಎಫ್ ಪಿ ಐ ಹೂಡಿಕೆಗಳಿಗೆ ಸಂಬಂಧಿಸಿದಂತೆ, ಮೂರು ಪ್ರಮುಖ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ; ಅವುಗಳೆಂದರೆ ಅಲ್ಪಾವಧಿಯ ಹೂಡಿಕೆ ಮಿತಿ, ಸಾಂದ್ರತೆಯ ಮಿತಿ ಮತ್ತು ಸರ್ಕಾರಿ ಭದ್ರತೆಗಳಲ್ಲಿ ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರ (ಎಫ್ ಪಿ ಐ) ಸೆಕ್ಯೂರಿಟಿವಾರು ಮಿತಿ. ಆದರೆ ಕೇಂದ್ರ ಸರ್ಕಾರದ ಬಾಕಿ ಇರುವ ಒಟ್ಟು ಸೆಕ್ಯೂರಿಟಿಗಳ ಶೇಕಡಾ 6 ರಷ್ಟು ಮತ್ತು ರಾಜ್ಯ ಸರ್ಕಾರಗಳ ಸೆಕ್ಯೂರಿಟಿಗಳ (ಎಸ್ ಜಿ ಎಸ್) ಶೇಕಡಾ 2 ರಷ್ಟು ಒಟ್ಟಾರೆ ಪರಿಮಾಣಾತ್ಮಕ ಹೂಡಿಕೆ ಮಿತಿಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಹೂಡಿಕೆ ಮಿತಿಗಳ ಉಪ-ವರ್ಗಗಳಾದ 'ಸಾಮಾನ್ಯ' ಮತ್ತು 'ದೀರ್ಘಕಾಲೀನ' ಮಿತಿಗಳನ್ನು ಕ್ರಮವಾಗಿ ಸರ್ಕಾರಿ ಭದ್ರತೆಗಳು ಮತ್ತು ಎಸ್ ಜಿ ಎಸ್ ಗಳ ಹೂಡಿಕೆಗಾಗಿ ಒಂದೇ ಮಿತಿಯಾಗಿ ವಿಲೀನಗೊಳಿಸಲಾಗುವುದು.
ಈ ಕ್ರಮಗಳು ಸುಗಮವಾದ ಇಳುವರಿ ರೇಖೆಯ (yield curve) ಅಭಿವೃದ್ಧಿಗೆ ಸಹಾಯ ಮಾಡಲಿವೆ ಮತ್ತು ಪಿಂಚಣಿ ನಿಧಿಗಳು, ವಿಮಾ ಕಂಪನಿಗಳು ಮತ್ತು ಸಾವರಿನ್ ವೆಲ್ತ್ ಫಂಡ್ಗಳಂತಹ ದೀರ್ಘಕಾಲೀನ, ತಾಳ್ಮೆಯ ವಿದೇಶಿ ಹೂಡಿಕೆದಾರರನ್ನು ಒಳಗೊಂಡಂತೆ ಸ್ಥಿರವಾದ ವ್ಯವಸ್ಥಿತ ವಿದೇಶಿ ಬಂಡವಾಳವನ್ನು ಆಕರ್ಷಿಸಲಿವೆ. ಇದು ದೇಶದ ವಿದೇಶಿ ವಿನಿಮಯದ ಒಳಹರಿವನ್ನು ಹೆಚ್ಚಿಸುವ ನಿರೀಕ್ಷೆಯೂ ಇದೆ.
ಜಿ-ಸೆಕ್ ಗಳ ಮೇಲಿನ ಬಡ್ಡಿ ಮತ್ತು ಬಂಡವಾಳದ ಲಾಭಕ್ಕೆ ತೆರಿಗೆ ವಿನಾಯಿತಿ
ಜಾಗತಿಕ ಬಂಡವಾಳವನ್ನು ಆಕರ್ಷಿಸುವಲ್ಲಿ ಸ್ಪರ್ಧಾತ್ಮಕ ತೆರಿಗೆ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಗುರುತಿಸಿ, ಜಿ-ಸೆಕ್ ಗಳಲ್ಲಿ ಎಫ್ ಪಿಐಗಳು ಮಾಡುವ ಹೂಡಿಕೆಗಳಿಗೆ ಅನ್ವಯಿಸುವ ತೆರಿಗೆಯನ್ನು ತರ್ಕಬದ್ಧಗೊಳಿಸಲು ಸರ್ಕಾರ ನಿರ್ಧರಿಸಿದೆ. ಇಂತಹ ಹೂಡಿಕೆಗಳಿಂದ ಬರುವ ಯಾವುದೇ ಬಡ್ಡಿ ಅಥವಾ ಬಂಡವಾಳದ ಲಾಭಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು. ಈ ಕ್ರಮವು ಅನೇಕ ಇತರ ಅನೇಕ ತೆರಿಗೆ ವ್ಯವಸ್ಥೆ ವ್ಯಾಪ್ತಿಗಳೊಂದಿಗೆ ಜಿ-ಸೆಕ್ ಗಳ ಮೇಲಿನ ತೆರಿಗೆಯನ್ನು ಸರಿಸಮನಾಗಿಸುತ್ತದೆ.
ಈ ವಿನಾಯಿತಿಯು 1.4.2026 ರಿಂದ ಜಾರಿಗೆ ಬರಲಿದೆ, ಅಂದರೆ 1.4.2026 ರಂದು ಅಥವಾ ನಂತರ ಜಿ-ಸೆಕ್ ಗಳ ಹೂಡಿಕೆಗೆ ಸಂಬಂಧಿಸಿದಂತೆ ಎಫ್ ಪಿ ಐಗಳಿಗೆ ಬರುವ ಯಾವುದೇ ಬಡ್ಡಿ ಅಥವಾ ಬಂಡವಾಳದ ಲಾಭಗಳಿಗೆ ಈ ವಿನಾಯಿತಿಯು ಅನ್ವಯಿಸುತ್ತದೆ.
ಇದೇ ರೀತಿಯ ಆದಾಯ ತೆರಿಗೆ ವಿನಾಯಿತಿಯನ್ನು ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಸೆಟಲ್ಮೆಂಟ್ಸ್ (ಬಿಐಎಸ್) ಗೂ ಸಹ ಜಿ-ಸೆಕ್ ಗಳಲ್ಲಿನ ಅದರ ಹೂಡಿಕೆಯಿಂದ ಬರುವ ಯಾವುದೇ ಬಡ್ಡಿ ಅಥವಾ ಬಂಡವಾಳದ ಲಾಭಗಳಿಗೆ ಒದಗಿಸಲಾಗಿದೆ.
ಇದು ದೀರ್ಘಕಾಲೀನ ಹೂಡಿಕೆದಾರರಾದ ಪಿಂಚಣಿ ನಿಧಿಗಳು, ವಿಮಾ ಕಂಪನಿಗಳು ಮತ್ತು ಸಾವರಿನ್ ವೆಲ್ತ್ ಫಂಡ್ ಗಳ (ಎಸ್ ಡಬ್ಲ್ಯೂ ಎಫ್) ಸ್ಥಿರ ಮತ್ತು ವ್ಯವಸ್ಥಿತ ಬಂಡವಾಳ ಹರಿವನ್ನು ಖಚಿತಪಡಿಸುತ್ತದೆ.
ಒಟ್ಟಾರೆಯಾಗಿ, ಈ ಸುಧಾರಣೆಗಳು ಕಾರ್ಯಾಚರಣೆಯ ಸಂಕೀರ್ಣತೆಗಳನ್ನು ಕಡಿಮೆ ಮಾಡಲು, ಮಾರುಕಟ್ಟೆಯ ಎಟುಕುವಿಕೆಯನ್ನು ಸರಳಗೊಳಿಸಲು ಮತ್ತು ಪ್ರಮುಖ ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಗಳಿಗೆ ಹೋಲಿಸಬಹುದಾದ ತಡೆರಹಿತ ಹೂಡಿಕೆಯ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಈ ಕ್ರಮಗಳು ಭಾರತೀಯ ಷೇರುಗಳು ಮತ್ತು ಸರ್ಕಾರಿ ಭದ್ರತೆಗಳ ಹೂಡಿಕೆದಾರರ ನೆಲೆಯನ್ನು ವಿಸ್ತರಿಸುವ ಹಾಗು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾದ ಭಾರತದಲ್ಲಿ ಹೂಡಿಕೆ ಮಾಡಲು ಜಾಗತಿಕ ಹೂಡಿಕೆದಾರರಿಂದ ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ.
CLICK HERE TO ACCESS NOTIFICATION OF ORDINANCE
CLICK HERE TO ACCESS FAQS ON BIS EXEMPTION
CLICK HERE TO ACCESS FAQS ON FII EXEMPTION
*****
(रिलीज़ आईडी: 2269258)
आगंतुक पटल : 10