ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ: ಸಿಟಿ ಇಂಡಿಯಾ ಕಾನ್ಫರೆನ್ಸ್ 2026 ರಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್


ಕೆನಡಾ ಮತ್ತು ಅಮೆರಿಕ ಪ್ರವಾಸಗಳ ವೇಳೆ ಭಾರತದ ಮೇಲೆ ಹೂಡಿಕೆದಾರರಿಂದ ಬಲವಾದ ವಿಶ್ವಾಸ ವ್ಯಕ್ತ; ಪ್ರಸ್ತಾವಿತ ಭಾರತ-ಕೆನಡಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಕಾರಾತ್ಮಕ ಪ್ರತಿಕ್ರಿಯೆ: ಶ್ರೀ ಪಿಯೂಷ್ ಗೋಯಲ್

ಮಾರುಕಟ್ಟೆ ಅವಕಾಶಗಳನ್ನು ಹೆಚ್ಚಿಸುತ್ತಿರುವ, ಹೂಡಿಕೆ, ಉದ್ಯೋಗ ಮತ್ತು ಪ್ರತಿಭಾ ವಿನಿಮಯವನ್ನು ಸುಗಮಗೊಳಿಸುತ್ತಿರುವ ಭಾರತದ ವ್ಯಾಪಾರ ಒಪ್ಪಂದಗಳು: ಶ್ರೀ ಪಿಯೂಷ್ ಗೋಯಲ್

ಒಮಾನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ; ಇತ್ತೀಚೆಗೆ ಮುಕ್ತಾಯಗೊಂಡ ಒಂಬತ್ತು ವ್ಯಾಪಾರ ಒಪ್ಪಂದಗಳನ್ನು ಮುಂದಿನ ಹತ್ತು ತಿಂಗಳೊಳಗೆ ಕಾರ್ಯಗತಗೊಳಿಸಲು ಭಾರತದ ಮುನ್ನಡೆ: ಶ್ರೀ ಪಿಯೂಷ್ ಗೋಯಲ್

ಜನ ವಿಶ್ವಾಸ ಕಾಯ್ದೆ 2.0 ಮೂಲಕ ಸುಮಾರು 1,000 ಅಪರಾಧಗಳ ಅಪರಾಧ ಮುಕ್ತೀಕರಣ; ವಿಶ್ವದರ್ಜೆಯ ಮೂಲಸೌಕರ್ಯಗಳೊಂದಿಗೆ 100 ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ‘ಭವ್ಯ’ ಯೋಜನೆ: ಶ್ರೀ ಪಿಯೂಷ್ ಗೋಯಲ್

प्रविष्टि तिथि: 04 JUN 2026 1:21PM by PIB Bengaluru

ಮುಂಬೈನಲ್ಲಿ ನಡೆದ ಸಿಟಿ ಇಂಡಿಯಾ ಸಮ್ಮೇಳನ 2026 ರಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ವರ್ಚುವಲ್ ಆಗಿ ಪ್ರಧಾನ ಭಾಷಣ ಮಾಡಿದರು. ಭಾರತವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಅವರು ಇದೇ ವೇಳೆ ಉಲ್ಲೇಖಿಸಿದರು ಹಾಗೂ ಉತ್ಪಾದನೆ, ವ್ಯವಹಾರ ಸುಲಭಗೊಳಿಸುವಿಕೆ, ಮೂಲಸೌಕರ್ಯ, ತಂತ್ರಜ್ಞಾನ ಅಳವಡಿಕೆ ಮತ್ತು ಜಾಗತಿಕ ವ್ಯಾಪಾರವನ್ನು ಬಲಪಡಿಸಲು ಸರ್ಕಾರ ಕೈಗೊಳ್ಳುತ್ತಿರುವ ನಿರಂತರ ಪ್ರಯತ್ನಗಳನ್ನು ವಿವರಿಸಿದರು.

ಜಾಗತಿಕ ಹೂಡಿಕೆದಾರರು ಮತ್ತು ಉದ್ಯಮ ರಂಗದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗೋಯಲ್ ಅವರು, ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಗುರುತಿಸಲ್ಪಟ್ಟಿದೆ ಮತ್ತು ಮುಂಬರುವ ಎರಡು ದಶಕಗಳಿಗೂ ಹೆಚ್ಚು ಕಾಲ ದೇಶವು ಇದೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರಕ್ರಿಯೆಗಳು ಮತ್ತು ವ್ಯವಹಾರ ತಂತ್ರಗಳನ್ನು ಮರುರೂಪಿಸುವ ಮೂಲಕ ಭಾರತವು ಸವಾಲುಗಳನ್ನು ನಿರಂತರವಾಗಿ ಅವಕಾಶಗಳನ್ನಾಗಿ ಪರಿವರ್ತಿಸಿದೆ ಹಾಗೂ ವ್ಯಾಪಾರ, ವ್ಯವಹಾರ, ಉತ್ಪಾದನೆ ಮತ್ತು ಹೂಡಿಕೆಗಳಿಗೆ ಆಕರ್ಷಕ ತಾಣವಾಗಿ ಮುಂದುವರೆದಿದೆ ಎಂದು ಅವರು ತಿಳಿಸಿದರು.

ಕೆನಡಾ ಮತ್ತು ಅಮೆರಿಕದಲ್ಲಿ ಇತ್ತೀಚೆಗೆ ಹೂಡಿಕೆದಾರರು ಮತ್ತು ಉದ್ಯಮ ಮುಖಂಡರೊಂದಿಗೆ ನಡೆಸಿದ ಸಂವಾದಗಳು, ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಇರುವ ಬಲವಾದ ವಿಶ್ವಾಸವನ್ನು ಪ್ರದರ್ಶಿಸಿವೆ ಎಂದು ಸಚಿವರು ಹೇಳಿದರು. ಭಾರತದಿಂದ ಇದುವರೆಗೆ ತೆರಳಿದ ಅತಿ ದೊಡ್ಡ ಉದ್ಯಮ ನಿಯೋಗದೊಂದಿಗೆ ತಾವು ಕೆನಡಾಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದ ಅವರು, ಪ್ರಸ್ತಾವಿತ ಭಾರತ-ಕೆನಡಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ ದೊರೆತ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಪಿಂಚಣಿ ನಿಧಿಗಳು, ವಿಮಾ ಕಂಪನಿಗಳು ಹಾಗೂ ಇತರ ಸಾಂಸ್ಥಿಕ ಹೂಡಿಕೆದಾರರಿಂದ ವ್ಯಕ್ತವಾದ ತೀವ್ರ ಆಸಕ್ತಿಯ ಬಗ್ಗೆ ಒತ್ತಿ ಹೇಳಿದರು. ನ್ಯೂಯಾರ್ಕ್‌ನಲ್ಲಿ ಪ್ರಮುಖ ಹೂಡಿಕೆ ಸಂಸ್ಥೆಗಳು ಮತ್ತು ಸುಮಾರು 50 ಕಂಪನಿಗಳೊಂದಿಗೆ ನಡೆದ ಚರ್ಚೆಗಳು ಭಾರತದ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿವೆ. ಪ್ರಜಾಪ್ರಭುತ್ವ, ಕಾನೂನಿನ ಆಡಳಿತ, ನಿರ್ಣಾಯಕ ನಾಯಕತ್ವ, ತಾಂತ್ರಿಕ ಸಾಮರ್ಥ್ಯಗಳು ಮತ್ತು 140 ಕೋಟಿ ಜನರ ಬೃಹತ್ ಗ್ರಾಹಕ ಮಾರುಕಟ್ಟೆಯ ಬೆಂಬಲದೊಂದಿಗೆ ಭಾರತವು ಏಕೈಕ ವಿಶ್ವಾಸಾರ್ಹ ಪರ್ಯಾಯ ಉತ್ಪಾದನಾ ಕೇಂದ್ರ, ನಂಬಿಕಸ್ಥ ಪಾಲುದಾರ ಮತ್ತು ಸುರಕ್ಷಿತ ಹೂಡಿಕೆ ತಾಣವಾಗಿ ಗುರುತಿಸಲ್ಪಟ್ಟಿದೆ ಎಂದು ಅವರು ತಿಳಿಸಿದರು.

ಜಾಗತಿಕ ದೀರ್ಘಕಾಲೀನ ಬಂಡವಾಳವು ಹೆಚ್ಚಾಗಿ ಭಾರತದತ್ತ ಮುಖ ಮಾಡುತ್ತಿದೆ ಎಂದು ಶ್ರೀ ಗೋಯಲ್ ಅಭಿಪ್ರಾಯಪಟ್ಟರು. ನ್ಯೂಯಾರ್ಕ್ ಮತ್ತು ಟೊರೊಂಟೊದ ಪ್ರಮುಖ ಹೂಡಿಕೆದಾರರೊಂದಿಗಿನ ಸಂವಾದಗಳನ್ನು ಉಲ್ಲೇಖಿಸಿದ ಅವರು, ಪ್ರತಿಯೊಂದು ಚರ್ಚೆಯೂ ಭಾರತದ ಭವಿಷ್ಯದ ಬೆಳವಣಿಗೆಯ ಹಾದಿಯ ಮೇಲಿನ ವಿಶ್ವಾಸವನ್ನು ಪುನರುಚ್ಚರಿಸಿದೆ ಎಂದು ಹೇಳಿದರು. ಹೂಡಿಕೆದಾರರ ಮುಂದಿರುವ ಪ್ರಶ್ನೆ ಭಾರತದಲ್ಲಿ ಹೂಡಿಕೆ ಮಾಡಬೇಕೇ ಅಥವಾ ಬೇಡವೇ ಎಂಬುದಲ್ಲ, ಬದಲಿಗೆ ಅವರು ಎಷ್ಟು ಬೇಗ ಭಾರತದ ಅಭಿವೃದ್ಧಿಯ ವೇಗವನ್ನು ಗುರುತಿಸಿ ಅದರಲ್ಲಿ ಭಾಗಿಯಾಗುತ್ತಾರೆ ಎಂಬುದಾಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ಭಾರತದಲ್ಲಿ ಯಶಸ್ವಿಯಾದ ದೀರ್ಘಕಾಲೀನ ಹೂಡಿಕೆಗಳ ಉದಾಹರಣೆಗಳನ್ನು ನೀಡಿದ ಸಚಿವರು, 1999 ರಲ್ಲಿ ಸುಮಾರು 200 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯೊಂದಿಗೆ ಹ್ಯುಂಡೈ ಸಂಸ್ಥೆ ಭಾರತಕ್ಕೆ ಪ್ರವೇಶಿಸಿದ್ದನ್ನು ನೆನಪಿಸಿಕೊಂಡರು. ಆ ಸಮಯದಲ್ಲಿ ಮೂಲಸೌಕರ್ಯಗಳ ಮಿತಿಗಳಿದ್ದಾಗ್ಯೂ, ಕಂಪನಿಯು ಭಾರತದಲ್ಲಿನ ಉತ್ಪಾದನಾ ಚಟುವಟಿಕೆಗಳ ಮೂಲಕ ವರ್ಷಗಳಲ್ಲಿ ಗಣನೀಯ ಮೌಲ್ಯವನ್ನು ವೃದ್ಧಿಸಿಕೊಂಡಿತು ಮತ್ತು ಲಾಭಾಂಶ, ರಾಯಲ್ಟಿ ಹಾಗೂ ಬಂಡವಾಳದ ಮೌಲ್ಯವರ್ಧನೆಯ ಮೂಲಕ ಗಮನಾರ್ಹ ಆದಾಯವನ್ನು ಗಳಿಸಿತು ಎಂದು ಅವರು ಉಲ್ಲೇಖಿಸಿದರು. ಜೆಸಿಬಿ ಸಂಸ್ಥೆಯ ಅನುಭವವನ್ನೂ ಪ್ರಸ್ತಾಪಿಸಿದ ಅವರು, ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇನ್ನೂ ಆರಂಭಿಕ ಹಂತದಲ್ಲಿದ್ದಾಗ ಕಂಪನಿಯು ಭಾರತ ಪ್ರವೇಶಿಸಿತು ಮತ್ತು ಇಂದು ಬೆಳೆಯುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಸುಮಾರು 130 ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ತಿಳಿಸಿದರು. ಈ ಉದಾಹರಣೆಗಳು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳೆರಡಕ್ಕೂ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯನ್ನು ಬೆಂಬಲಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ ಎಂದು ಅವರು ಹೇಳಿದರು.

ವಿಶ್ವದೊಂದಿಗೆ ಭಾರತವು ವಿಸ್ತರಿಸುತ್ತಿರುವ ವ್ಯಾಪಾರ ಸಂಬಂಧವನ್ನು ಉಲ್ಲೇಖಿಸಿದ ಸಚಿವರು, ಸುಮಾರು ಕಳೆದ ಮೂರು-ಮೂರೂವರೆ ವರ್ಷಗಳಲ್ಲಿ ಭಾರತವು ಒಂಬತ್ತು ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು 38 ಅಭಿವೃದ್ಧಿ ಹೊಂದಿದ ಆರ್ಥಿಕತೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಈ ಒಪ್ಪಂದಗಳು ಮಾರುಕಟ್ಟೆಯ ಅವಕಾಶಗಳನ್ನು ಹೆಚ್ಚಿಸುವ ಮೂಲಕ, ವ್ಯಾಪಾರವನ್ನು ಸುಗಮಗೊಳಿಸುವ ಮೂಲಕ, ಉದ್ಯೋಗ ಮತ್ತು ಪ್ರತಿಭಾ ವಿನಿಮಯಕ್ಕೆ ಅನುವು ಮಾಡಿಕೊಡುವ ಮೂಲಕ ಮತ್ತು ಭಾರತದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (Global Capability Centres) ಸ್ಥಾಪನೆ ಸೇರಿದಂತೆ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಭಾರತದ ಬೆಳವಣಿಗೆಗೆ ಪೂರಕವಾಗಿವೆ ಎಂದು ತಿಳಿಸಿದರು.

ಭಾರತದ ಬೆಳವಣಿಗೆಯ ಪಯಣದಲ್ಲಿ ಪಾಲ್ಗೊಳ್ಳುವಂತೆ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದ ಶ್ರೀ ಗೋಯಲ್ ಅವರು, ಭಾರತವು ಕೇವಲ ಒಂದು ದೊಡ್ಡ ಮತ್ತು ಬೆಳೆಯುತ್ತಿರುವ ಮಾರುಕಟ್ಟೆಯಷ್ಟೇ ಅಲ್ಲ, ಬದಲಿಗೆ ಇದು ಆವಿಷ್ಕಾರ, ವಿನ್ಯಾಸ ಮತ್ತು ಸುಧಾರಿತ ಉತ್ಪಾದನೆಯ ಪ್ರಮುಖ ಕೇಂದ್ರವಾಗಿದೆ ಎಂದು ಒತ್ತು ನೀಡಿದರು. ನೂತನ ತಂತ್ರಜ್ಞಾನಗಳು ಮತ್ತು ಭವಿಷ್ಯದ ಕೈಗಾರಿಕೆಗಳತ್ತ ಭಾರತದ ಪರಿವರ್ತನೆಗೆ ಬೆಂಬಲ ನೀಡಲು ಹೂಡಿಕೆದಾರರು ದೀರ್ಘಕಾಲೀನ ಬಂಡವಾಳವನ್ನು ತರಬೇಕು ಎಂದು ಅವರು ಮನವಿ ಮಾಡಿದರು.

ಒಮಾನ್ ಮುಕ್ತ ವ್ಯಾಪಾರ ಒಪ್ಪಂದವು ಜೂನ್ 1 ರಿಂದ ಜಾರಿಗೆ ಬಂದಿದೆ ಎಂದು ಸಚಿವರು ಭಾಗವಹಿಸಿದವರಿಗೆ ತಿಳಿಸಿದರು ಮತ್ತು ಮುಂದಿನ ಆರು ತಿಂಗಳೊಳಗೆ ಕನಿಷ್ಠ ಎರಡು ಮೂರು ಹೆಚ್ಚುವರಿ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಗಳು ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಸೂಚಿಸಿದರು. ಇದಲ್ಲದೆ, ಮುಂಬರುವ ವರ್ಷದಲ್ಲಿ ಭಾರತವು ಮತ್ತೊಂದು ಮೂರರಿಂದ ನಾಲ್ಕು ಗಮನಾರ್ಹ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಎಲ್ಲಾ ಒಂಬತ್ತು ಒಪ್ಪಂದಗಳನ್ನು ಮುಂದಿನ ಒಂಬತ್ತರಿಂದ ಹತ್ತು ತಿಂಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ವ್ಯವಹಾರ ಸುಲಭಗೊಳಿಸುವಿಕೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಇತ್ತೀಚಿನ ಸುಧಾರಣೆಗಳನ್ನು ಎತ್ತಿ ತೋರಿಸಿದ ಶ್ರೀ ಗೋಯಲ್ ಅವರು, ಏಪ್ರಿಲ್‌ನಲ್ಲಿ ಜಾರಿಗೆ ಬಂದ ‘ಜನ ವಿಶ್ವಾಸ ಕಾಯ್ದೆ’ಯ ಎರಡನೇ ಆವೃತ್ತಿಯನ್ನು ಉಲ್ಲೇಖಿಸಿದರು. ವಂಚಿಸುವ ಉದ್ದೇಶವಿಲ್ಲದ ಹಾಗೂ ಸಾರ್ವಜನಿಕ ಸುರಕ್ಷತೆ ಅಥವಾ ಸಾರ್ವಜನಿಕ ಆರೋಗ್ಯಕ್ಕೆ ಯಾವುದೇ ಧಕ್ಕೆ ಇಲ್ಲದಿರುವ ಹಲವು ಕೇಂದ್ರ ಕಾಯ್ದೆಗಳ ವ್ಯಾಪ್ತಿಯಲ್ಲಿ ಬರುವ ಸುಮಾರು ಒಂದು ಸಾವಿರ ಅಪರಾಧಗಳನ್ನು ಈ ಶಾಸನವು ಅಪರಾಧ ಮುಕ್ತಗೊಳಿಸಿದೆ ಎಂದು ಅವರು ತಿಳಿಸಿದರು. ಈ ಸುಧಾರಣೆಯು ವ್ಯವಹಾರಗಳ ಕಡೆಗೆ ಸರ್ಕಾರದ ವಿಶ್ವಾಸ ಆಧಾರಿತ ವಿಧಾನವನ್ನು ಪ್ರತಿಬಿಂಬಿಸುತ್ತದೆ ಹಾಗೂ ಅನುಸರಣೆಯ ಹೊರೆಗಳನ್ನು (Compliance burdens) ಕಡಿಮೆ ಮಾಡುವುದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡವನ್ನು ಸರಳಗೊಳಿಸುತ್ತದೆ ಎಂದು ಅವರು ಹೇಳಿದರು.

ದೇಶಾದ್ಯಂತ ಸುಮಾರು 3.5 ಶತ ಕೋಟಿ ಅಮೇರಿಕ ಡಾಲರ್ ವೆಚ್ಚದಲ್ಲಿ 100 ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಇತ್ತೀಚೆಗೆ ಘೋಷಿಸಲಾದ ‘ಭವ್ಯ’ ಯೋಜನೆಯನ್ನು ಸಹ ಸಚಿವರು ಹೈಲೈಟ್ ಮಾಡಿದರು. ಈ ಯೋಜನೆಯು ಕಾರ್ಖಾನೆ-ಸಿದ್ಧ ಸೌಲಭ್ಯಗಳು, ಕಾರ್ಮಿಕರ ವಸತಿ, ಮನರಂಜನಾ ಸೌಕರ್ಯಗಳು, ಪರಿಸರ ಪರವಾನಗಿಗಳು, ಸಾಮಾನ್ಯ ಹೊರಹರಿವು ಸಂಸ್ಕರಣಾ ಸೌಲಭ್ಯಗಳು, ಉಪಯುಕ್ತತೆಗಳು, ನೀರು ಸರಬರಾಜು, ವಿದ್ಯುತ್ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಒಳಗೊಂಡಂತೆ ‘ಪ್ಲಗ್-ಅಂಡ್-ಪ್ಲೇ’ ಕೈಗಾರಿಕಾ ಮೂಲಸೌಕರ್ಯಗಳನ್ನು ರಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಉಪಕ್ರಮವು ಸರ್ಕಾರವನ್ನು ನಿಯಂತ್ರಕನನ್ನಾಗಿ ಮಾಡುವ ಬದಲಿಗೆ ಸುಗಮಕಾರನನ್ನಾಗಿ (Facilitator) ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಎಂಎಸ್‌ಎಂಇ ಗಳು, ತಯಾರಕರು ಮತ್ತು ವ್ಯವಹಾರಗಳಿಗೆ ಬೆಂಬಲ ನೀಡುತ್ತದೆ ಎಂದು ಅವರು ಗಮನಿಸಿದರು.

ಕಾರ್ಮಿಕ ಸುಧಾರಣೆಗಳ ಕುರಿತು ಮಾತನಾಡಿದ ಶ್ರೀ ಗೋಯಲ್ ಅವರು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಈಗ ಸಕ್ರಿಯಗೊಳಿಸಲಾಗಿದೆ ಮತ್ತು ಹಲವಾರು ರಾಜ್ಯಗಳು ಅವುಗಳ ನಿಯಮಗಳನ್ನು ಅಳವಡಿಸಿಕೊಳ್ಳಲು ಹಾಗೂ ತಿದ್ದುಪಡಿ ಮಾಡಲು ಪ್ರಾರಂಭಿಸಿವೆ ಎಂದು ಹೇಳಿದರು. 29 ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಕ್ರೋಢೀಕರಿಸಿರುವುದು ಅನುಸರಣೆ ಮತ್ತು ಅನುಷ್ಠಾನವನ್ನು ಗಮನಾರ್ಹವಾಗಿ ಸರಳಗೊಳಿಸಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಜಾಗತಿಕ ಸವಾಲುಗಳಿಗೆ ಭಾರತದ ಪ್ರತಿಕ್ರಿಯೆಯ ಬಗ್ಗೆ ಚರ್ಚಿಸಿದ ಸಚಿವರು, ಪಶ್ಚಿಮ ಏಷ್ಯಾದ ಬೆಳವಣಿಗೆಗಳು ಮತ್ತು ಗಲ್ಫ್ ಪ್ರದೇಶದಿಂದ ಇಂಧನ ಪೂರೈಕೆಗೆ ಉಂಟಾದ ಅಡಚಣೆಗಳಿಂದ ಉಂಟಾದ ಕಳವಳಗಳ ಹೊರತಾಗಿಯೂ, ದೇಶವು ಅಂತಾರಾಷ್ಟ್ರೀಯ ಇಂಧನ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದು ಹೇಳಿದರು. ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಭಾರತವು ಈ ಹಿಂದೆ ನಡೆಸಿದ ಪ್ರಯತ್ನಗಳು ಪೆಟ್ರೋಲ್, ಡೀಸೆಲ್, ವಾಯುಯಾನ ಇಂಧನ, ಎಲ್‌ಎನ್‌ಜಿ (LNG) ಮತ್ತು ಎಲ್‌ಪಿಜಿ (LPG) ಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸುವುದರ ಜೊತೆಗೆ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟಿವೆ ಎಂದು ಅವರು ಗಮನಿಸಿದರು. ಜಾಗತಿಕವಾಗಿ ಬೆಲೆಗಳು ಏರಿಕೆಯಾಗಿದ್ದರೂ ರೈತರಿಗೆ ರಸಗೊಬ್ಬರಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಆ ಹೊರೆಯನ್ನು ಕೇಂದ್ರ ಸರ್ಕಾರವೇ ಭರಿಸಿದೆ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಹನ್ನೆರಡು ವರ್ಷಗಳಲ್ಲಿ ಕೈಗೊಂಡ ದೃಢವಾದ ಹಣಕಾಸು ನಿರ್ವಹಣೆಯು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ರೈತರು, ಎಂಎಸ್‌ಎಂಇಗಳು, ವ್ಯವಹಾರಗಳು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಬೆಂಬಲ ನೀಡಲು ಭಾರತಕ್ಕೆ ಸಾಧ್ಯವಾಗಿಸಿದೆ ಎಂದು ಶ್ರೀ ಗೋಯಲ್ ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿಯನ್ನು ಉಲ್ಲೇಖಿಸಿದ ಸಚಿವರು, ಭಾರತವು ಬಂದರುಗಳು, ಹೆದ್ದಾರಿಗಳು, ರಸ್ತೆಗಳು, ಗ್ರಾಮೀಣ ಸಂಪರ್ಕ ಮತ್ತು ವಿಮಾನ ನಿಲ್ದಾಣಗಳಲ್ಲಿ ಸುಮಾರು 130 ಶತ ಕೋಟಿ ಅಮೇರಿಕ ಡಾಲರ್ ನಷ್ಟು ಹೂಡಿಕೆ ಮಾಡುತ್ತಿದೆ ಎಂದು ಹೇಳಿದರು. ಕಳೆದ ಒಂದು ದಶಕದಲ್ಲಿ ದೇಶದ ಬಂದರು ಮತ್ತು ವಿಮಾನ ನಿಲ್ದಾಣಗಳ ಸಾಮರ್ಥ್ಯ ದುಪ್ಪಟ್ಟಾಗಿದೆ ಎಂದು ಅವರು ಗಮನಿಸಿದರು. ಜಲ ಜೀವನ್ ಮಿಷನ್, 500 ಗಿಗಾವ್ಯಾಟ್ ಸ್ಥಾಪಿತ ಸಾಮರ್ಥ್ಯ ಮತ್ತು ಶೇಕಡಾ 50 ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಕೊಡುಗೆಯನ್ನು ಹೊಂದಿರುವ ರಾಷ್ಟ್ರೀಯ ವಿದ್ಯುತ್ ಗ್ರಿಡ್ ಸ್ಥಾಪನೆ ಸೇರಿದಂತೆ ಪ್ರಮುಖ ಉಪಯುಕ್ತತೆಯ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು.

ಮುಂದಿನ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 250 ಗಿಗಾವ್ಯಾಟ್‌ನಿಂದ 500 ಗಿಗಾವ್ಯಾಟ್‌ಗೆ ದ್ವಿಗುಣಗೊಳಿಸಲು ಭಾರತ ಯೋಜಿಸಿದೆ ಎಂದು ಸಚಿವರು ತಿಳಿಸಿದರು. ಕೃತಕ ಬುದ್ಧಿಮತ್ತೆ (AI) ಮತ್ತು ಇತರ ಸುಧಾರಿತ ತಂತ್ರಜ್ಞಾನಗಳಿಗಾಗಿ ಕಾರ್ಯಪಡೆಯನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ ದೊಡ್ಡ ಪ್ರಮಾಣದ ಮರು-ಕೌಶಲ್ಯ ಮತ್ತು ಕೌಶಲ್ಯ ವೃದ್ಧಿ ಉಪಕ್ರಮಗಳ ಮೂಲಕ ಸೆಮಿಕಂಡಕ್ಟರ್‌ಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲಿನ ದೇಶದ ಗಮನವನ್ನು ಅವರು ಎತ್ತಿ ತೋರಿಸಿದರು.

ಟಾಟಾ ಮತ್ತು ಎಎಸ್‌ಎಂಎಲ್ (ASML) ಸಂಸ್ಥೆಗಳು ಸೆಮಿಕಂಡಕ್ಟರ್ ಉದ್ಯಮಕ್ಕಾಗಿ ಭಾರತದ ಮೊದಲ ಬಂಡವಾಳ ಉಪಕರಣ ತಯಾರಿಕಾ ಸೌಲಭ್ಯವನ್ನು ಸ್ಥಾಪಿಸುತ್ತಿರುವುದಕ್ಕೆ ಶ್ರೀ ಗೋಯಲ್ ಅವರು ಸಂತಸ ವ್ಯಕ್ತಪಡಿಸಿದರು. ತಂತ್ರಜ್ಞಾನ, ಉತ್ಪಾದನೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಭಾರತವು ಸುಸ್ಥಿರ ಕಾರ್ಯತಂತ್ರವನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದರು.

ವಿಶ್ವವು ಆರಂಭದಲ್ಲಿ ಭಾರತೀಯ ಪ್ರತಿಭೆಗಳ ಮೇಲೆ ಹೂಡಿಕೆ ಮಾಡಿದ್ದವು, ಆದರೆ ಅವು ಈಗ ಭಾರತದಲ್ಲಿ ಬಂಡವಾಳ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆಯ ಅನ್ವಯಗಳು ಮತ್ತು ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳನ್ನು ಉತ್ತೇಜಿಸುವ ಮೂಲಕ ಭಾರತವು ಕೇವಲ ಜೋಡಣೆ ಆಧಾರಿತ (Assembly-based) ಉತ್ಪಾದನೆಯಿಂದ ಆಚೆಗೆ ಸಾಗಿ, ಆವಿಷ್ಕಾರ ಆಧಾರಿತ ಬೆಳವಣಿಗೆಯತ್ತ ಮುನ್ನಡೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಸ್ಥಳೀಯ 5G ತಂತ್ರಜ್ಞಾನ, ದೇಶಾದ್ಯಂತ ಕ್ಷಿಪ್ರ 5G ನೆಟ್‌ವರ್ಕ್ ವಿಸ್ತರಣೆ, ಕಡಿಮೆ ವೆಚ್ಚದ ದತ್ತಾಂಶ ಲಭ್ಯತೆ, ಸ್ಥಿತಿಸ್ಥಾಪಕ ವಿದ್ಯುತ್ ಮೂಲಸೌಕರ್ಯ ಮತ್ತು ದತ್ತಾಂಶ ಕೇಂದ್ರಗಳಿಗೆ ಸುರಕ್ಷಿತ ವಾತಾವರಣವು ಈ ಪರಿವರ್ತನೆಗೆ ಉದಾಹರಣೆಗಳಾಗಿವೆ ಎಂದು ಅವರು ಉಲ್ಲೇಖಿಸಿದರು.

ಬೌದ್ಧಿಕ ಆಸ್ತಿಯನ್ನು ರಕ್ಷಿಸುವ, ತಂತ್ರಜ್ಞಾನ ಸುರಕ್ಷಿತವಾಗಿರುವ ಮತ್ತು ದತ್ತಾಂಶ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ಭಾರತ ಒದಗಿಸುತ್ತದೆ ಎಂದು ಶ್ರೀ ಗೋಯಲ್ ತಿಳಿಸಿದರು. ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸುವ ದತ್ತಾಂಶ ಕೇಂದ್ರಗಳು 2047 ರವರೆಗೆ ಆದಾಯ ತೆರಿಗೆ ವಿನಾಯಿತಿಗಳನ್ನು ಪಡೆಯಲಿವೆ. 'ವಿಕಸಿತ ಭಾರತ 2047' ರ ದೃಷ್ಟಿಕೋನದಡಿಯಲ್ಲಿ 2047 ರ ವೇಳೆಗೆ ಭಾರತವು 30 ಟ್ರಿಲಿಯನ್ ಅಮೆರಿಕ ಡಾಲರ್ ಆರ್ಥಿಕತೆಯೊಂದಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ದೇಶದಲ್ಲಿ ಸ್ಪರ್ಧಾತ್ಮಕವಾಗಿ ವಿನ್ಯಾಸಗೊಳಿಸಲಾದ ಮತ್ತು ಉತ್ಪಾದಿಸಲಾದ ಉತ್ತಮ ಗುಣಮಟ್ಟದ ಉತ್ಪನ್ನಗಳು, ಸರಕುಗಳು ಮತ್ತು ಸೇವೆಗಳ ಮೂಲಕ ಭಾರತವು ಅಪಾರ ಸಾಮರ್ಥ್ಯ, ಸಾಧ್ಯತೆ ಮತ್ತು ಲಾಭದಾಯಕತೆಯನ್ನು ನೀಡುತ್ತದೆ ಎಂದು ಶ್ರೀ ಗೋಯಲ್ ಹೇಳಿದರು. ಭಾರತವು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಮುಂದುವರೆದಿದೆ ಎಂದು ಅವರು ಪುನರುಚ್ಚರಿಸಿದರು ಹಾಗೂ 140 ಕೋಟಿ ಭಾರತೀಯರು ಮತ್ತು ಅಂತಾರಾಷ್ಟ್ರೀಯ ಪಾಲುದಾರರ ಪ್ರಯತ್ನಗಳ ಬೆಂಬಲದೊಂದಿಗೆ ಭಾರತೀಯ ಆರ್ಥಿಕತೆಯು 21 ನೇ ಶತಮಾನದ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಬೆಳವಣಿಗೆಯ ಕಥೆಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


*****


(रिलीज़ आईडी: 2268971) आगंतुक पटल : 9
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Gujarati , Tamil , Malayalam