ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ 2025ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಮೀಣ ಪರಿವರ್ತನೆಗೆ ಚಾಲನೆ ನೀಡಿದ 42 ಪಂಚಾಯತ್‌ ಗಳಿಗೆ ಗೌರವ


“ಗ್ರಾಮೋದಯದಿಂದ ಭಾರತ ಉದಯವೇ ವಿಕಸಿತ ಭಾರತಕ್ಕೆ ಹಾದಿ” : ಶ್ರೀ ರಾಜೀವ್ ರಂಜನ್ ಸಿಂಗ್

42 ರಾಷ್ಟ್ರೀಯ ಪ್ರಶಸ್ತಿ ವಿಜೇತರಲ್ಲಿ 22 ಮಹಿಳಾ ನೇತೃತ್ವದ ಪಂಚಾಯತ್‌ ಗಳು; ಅತ್ಯುತ್ತಮ ಅಭ್ಯಾಸಗಳ ಸಂಕಲನ ಬಿಡುಗಡೆ

प्रविष्टि तिथि: 03 JUN 2026 9:09PM by PIB Bengaluru

2025ನೇ ಸಾಲಿನ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ದೇಶದಾದ್ಯಂತದ 42 ಅತ್ಯುತ್ತಮ ಪಂಚಾಯತ್‌ ಗಳಿಗೆ ಕೇಂದ್ರ ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರು ಇಂದು ನವದೆಹಲಿಯಲ್ಲಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಘೇಲ್, ಅಸ್ಸಾಂ ಸರ್ಕಾರದ ಪರಿವರ್ತನೆ ಮತ್ತು  ಅಭಿವೃದ್ಧಿ, ಕಾರ್ಮಿಕ ಕಲ್ಯಾಣ, ಚಹಾ ಬುಡಕಟ್ಟು ಮತ್ತು ಆದಿವಾಸಿ ಕಲ್ಯಾಣ ಸಚಿವರಾದ ಶ್ರೀ ರಾಮೇಶ್ವರ್ ತೇಲಿ, ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್, ಕೇಂದ್ರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಪ್ರಶಸ್ತಿಗಳು 'ವಿಕಸಿತ ಭಾರತ 2047' ರ ದೂರದೃಷ್ಟಿಗೆ ಅನುಗುಣವಾಗಿ, ಸರ್ವರನ್ನೂ ಒಳಗೊಂಡ, ಸಹಭಾಗಿತ್ವದ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪಂಚಾಯತ್‌ ಗಳು ನೀಡಿದ ಅನುಕರಣೀಯ ಕೊಡುಗೆಗಳನ್ನು ಗುರುತಿಸುತ್ತವೆ. ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ 2025 ಪಡೆದ ಪ್ರಶಸ್ತಿ ವಿಜೇತ ಪಂಚಾಯತ್‌ ಗಳ ಕಾರ್ಯಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಕುರಿತಾದ ಇ-ಬುಕ್ (ಇ-ಪುಸ್ತಕ) ಮತ್ತು ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅತ್ಯುತ್ತಮ ಅಭ್ಯಾಸಗಳ ಸಂಕಲನವನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಪ್ರಕಟಣೆಗಳು ಸಹವರ್ತಿ ಕಲಿಕೆಯನ್ನು ಸುಗಮಗೊಳಿಸಲು ಮತ್ತು ತಳಮಟ್ಟದಲ್ಲಿ ಯಶಸ್ವಿ ಆಡಳಿತ ಮಾದರಿಗಳನ್ನು ಮರುರೂಪಿಸಲು ಉದ್ದೇಶಿಸಲಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅವರು ಪ್ರಶಸ್ತಿ ವಿಜೇತ ಪಂಚಾಯತ್‌ ಗಳ ಸಮರ್ಪಣಾ ಭಾವ, ನಾವೀನ್ಯತೆ ಮತ್ತು ಜನಕೇಂದ್ರಿತ ಆಡಳಿತದ ಬದ್ಧತೆಯನ್ನು ಅಭಿನಂದಿಸಿದರು. ಪ್ರಶಸ್ತಿ ವಿಜೇತ ಪಂಚಾಯತ್‌ ಗಳ ಪ್ರತಿನಿಧಿಗಳು ಮತ್ತು ದೇಶದಾದ್ಯಂತ ವರ್ಚುವಲ್ ಆಗಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಿಂಗ್, ಈ ಪ್ರಶಸ್ತಿಗಳು ತಳಮಟ್ಟದ ಪ್ರಜಾಪ್ರಭುತ್ವದ ಬೆಳೆಯುತ್ತಿರುವ ಶಕ್ತಿಯನ್ನು ಮತ್ತು ವಿಕಸಿತ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಪಂಚಾಯತ್‌ ಗಳು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿತ್ವವನ್ನು ಪ್ರತಿಧ್ವನಿಸಿದ ಅವರು, ಅಭಿವೃದ್ಧಿ ಹೊಂದಿದ ಭಾರತದ ಕಡೆಗಿನ ಪ್ರಯಾಣವು “ಗ್ರಾಮೋದಯದಿಂದ ಭಾರತ ಉದಯ” ಎಂಬ ತತ್ವದ ಆಧಾರದ ಮೇಲೆ, ಸಶಕ್ತ ಹಳ್ಳಿಗಳಿಂದ ಮುನ್ನಡೆಯಬೇಕು ಎಂದು ಹೇಳಿದರು. ಪ್ರಶಸ್ತಿ ವಿಜೇತ 42 ಪಂಚಾಯತ್‌ ಗಳಲ್ಲಿ 22 ಪಂಚಾಯತ್‌ ಗಳನ್ನು ಮಹಿಳೆಯರು ಮುನ್ನಡೆಸುತ್ತಿರುವುದಕ್ಕೆ ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದರು ಮತ್ತು ಇದನ್ನು ಗ್ರಾಮೀಣ ಭಾರತದಲ್ಲಿ ಮಹಿಳಾ ನಾಯಕತ್ವ ಮತ್ತು ಸರ್ವರನ್ನೂ ಒಳಗೊಂಡ ಆಡಳಿತದ ಪರಿವರ್ತನಾ ಶಕ್ತಿಗೆ ಸಾಕ್ಷಿ ಎಂದು ಬಣ್ಣಿಸಿದರು. ಪಂಚಾಯತ್ ಸುಧಾರಿತ ಸೂಚ್ಯಂಕ (ಪಿಎಐ) 2.0, ಇ-ಗ್ರಾಮ ಸ್ವರಾಜ್, ಎಐ-ಸಕ್ರಿಯಗೊಳಿಸಿದ (ಕೃತಕ ಬುದ್ಧಿಮತ್ತೆ ಆಧಾರಿತ) ಸಭಾಸಾರ್ ಪ್ಲಾಟ್‌ಫಾರ್ಮ್‌ ನಂತಹ ಸಚಿವಾಲಯದ ಉಪಕ್ರಮಗಳನ್ನು ಒತ್ತಿ ಹೇಳಿದ ಶ್ರೀ ಸಿಂಗ್, ಪಾರದರ್ಶಕ, ಜವಾಬ್ದಾರಿಯುತ ಮತ್ತು ನಾಗರಿಕ-ಕೇಂದ್ರಿತ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಪಂಚಾಯತ್‌ ಗಳನ್ನು ತಂತ್ರಜ್ಞಾನ, ಸಂಪನ್ಮೂಲಗಳು ಮತ್ತು ಸಾಮರ್ಥ್ಯ ವೃದ್ಧಿಯ ಬೆಂಬಲದೊಂದಿಗೆ ಸಶಕ್ತಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಶಸ್ತಿ ವಿಜೇತ ಪಂಚಾಯತ್‌ ಗಳು ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ, ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ, ಮಹಿಳಾ ನಾಯಕತ್ವವನ್ನು ಬಲಪಡಿಸುವ ಮೂಲಕ ಮತ್ತು ಸೇವೆಗಳ ಪರಿಣಾಮಕಾರಿ ಕೊನೆಯ ಮೈಲಿ ತಲುಪುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಾದರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು. ಪಂಚಾಯತ್‌ ಗಳನ್ನು ಸಶಕ್ತಗೊಳಿಸಲು ಸರ್ಕಾರದ ಬದ್ಧತೆಯನ್ನು ಶ್ರೀ ಸಿಂಗ್ ಪುನರುಚ್ಚರಿಸಿದರು ಮತ್ತು 16ನೇ ಹಣಕಾಸು ಆಯೋಗದ ಅಡಿಯಲ್ಲಿ ಶಿಫಾರಸು ಮಾಡಲಾದ ₹4.35 ಲಕ್ಷ ಕೋಟಿ (15ನೇ ಹಣಕಾಸು ಆಯೋಗದ ಹಂಚಿಕೆಗೆ ಹೋಲಿಸಿದರೆ ಶೇಕಡಾ 84 ರಷ್ಟು ಹೆಚ್ಚಳ) ತಳಮಟ್ಟದ ಆಡಳಿತವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ವಿಕಸಿತ ಭಾರತದ ದೂರದೃಷ್ಟಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಕೇಂದ್ರ ರಾಜ್ಯ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಘೇಲ್ ಮಾತನಾಡಿ, ದೇಶದಾದ್ಯಂತ ಇರುವ 2.5 ಲಕ್ಷಕ್ಕೂ ಹೆಚ್ಚು ಪಂಚಾಯತ್‌ ಗಳಿಂದ 42 ಪ್ರಶಸ್ತಿ ವಿಜೇತ ಪಂಚಾಯತ್‌ ಗಳನ್ನು ಆಯ್ಕೆ ಮಾಡಿರುವುದು ಪಾರದರ್ಶಕ ಮತ್ತು ಕಟ್ಟುನಿಟ್ಟಾದ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಪ್ರಶಸ್ತಿಗಳು ಸ್ಥಳೀಯ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಪಂಚಾಯತ್ ಸುಧಾರಿತ ಸೂಚ್ಯಂಕವನ್ನು ಆಧರಿಸಿವೆ, ಇದು ವಸ್ತುನಿಷ್ಠ ಮತ್ತು ಕಾರ್ಯಕ್ಷಮತೆ ಆಧಾರಿತ ಮೌಲ್ಯಮಾಪನವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಆರೋಗ್ಯ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯಂತಹ ಕ್ಷೇತ್ರಗಳಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳ ಪರಿಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪಂಚಾಯತ್ ಪ್ರತಿನಿಧಿಗಳನ್ನು ಕೇಂದ್ರ ರಾಜ್ಯ ಸಚಿವರು ಕರೆ ನೀಡಿದರು.

ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಮಾತನಾಡಿ, ಪಂಚಾಯತ್ ರಾಜ್ ಸಂಸ್ಥೆಗಳು ದತ್ತಾಂಶ ಚಾಲಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ತಳಮಟ್ಟದ ಆಡಳಿತದ ಇಂಜಿನ್‌ ಗಳಾಗಿ ಗಮನಾರ್ಹ ರೂಪಾಂತರವನ್ನು ಪಡೆದಿರುವುದನ್ನು ಒತ್ತಿಹೇಳಿದರು ಮತ್ತು ಈ ಪ್ರಯಾಣವನ್ನು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಸ್ಪೂರ್ತಿದಾಯಕ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು. ಭಾರತದಲ್ಲಿ ಸಹಭಾಗಿತ್ವ ಮತ್ತು ನಾಗರಿಕ-ಕೇಂದ್ರಿತ ಸ್ವಯಂ ಆಡಳಿತವನ್ನು ಆಳಗೊಳಿಸಲು ದೇಶದ ಪ್ರತಿಯೊಂದು ಪಂಚಾಯತ್ ಈ ಶ್ರೇಷ್ಠತೆಯ ಮಾದರಿಗಳಿಂದ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆಯಬೇಕೆಂದು ಅವರು ಹೇಳಿದರು.

ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳ ಕುರಿತು

ಎಲ್ಲರನ್ನೂ ಒಳಗೊಂಡ, ಸಹಭಾಗಿತ್ವದ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿಗೆ ನೀಡಿದ ಅನುಕರಣೀಯ ಕೊಡುಗೆಗಳಿಗಾಗಿ ಅತ್ಯುತ್ತಮ ಪ್ರದರ್ಶನ ನೀಡುವ ಪಂಚಾಯತ್‌ ಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಪಂಚಾಯತ್ ರಾಜ್ ಸಚಿವಾಲಯವು ವಾರ್ಷಿಕವಾಗಿ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಗಳ ಚೌಕಟ್ಟನ್ನು 2023 ರಲ್ಲಿ ಸಮಗ್ರವಾಗಿ ಪರಿಷ್ಕರಿಸಲಾಯಿತು ಮತ್ತು ಸ್ಥಳೀಯ ಸುಸ್ಥಿರ ಅಭಿವೃದ್ಧಿ ಗುರಿಗಳ ಒಂಬತ್ತು ವಿಷಯಗಳೊಂದಿಗೆ ಜೋಡಿಸಲಾಯಿತು, ಇದು ಮೌಲ್ಯಮಾಪನವನ್ನು ಹೆಚ್ಚು ಸಮಗ್ರ, ಪಾರದರ್ಶಕ ಮತ್ತು ಭವಿಷ್ಯ-ಆಧಾರಿತವಾಗಿಸಿತು. ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ (ಎನ್‌ ಪಿ ಎ) 2025 ಅನ್ನು ಎರಡು ಪ್ರಮುಖ ವಿಭಾಗಗಳಲ್ಲಿ ನೀಡಲಾಗಿದೆ: ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ (DDUPSVP): ಬಡತನ ಮುಕ್ತ ಜೀವನೋಪಾಯ, ಆರೋಗ್ಯ, ಮಕ್ಕಳಸ್ನೇಹಿ ಆಡಳಿತ, ನೀರಿನ ಸ್ವಯಂಸಂಪೂರ್ಣತೆ, ಸ್ವಚ್ಛ ಮತ್ತು ಹಸಿರು ಪರಿಸರ, ಮೂಲಸೌಕರ್ಯ, ಸಾಮಾಜಿಕ ನ್ಯಾಯ ಮತ್ತು ಭದ್ರತೆ, ಉತ್ತಮ ಆಡಳಿತ ಮತ್ತು ಮಹಿಳಾಸ್ನೇಹಿ ಪಂಚಾಯತ್‌ ಗಳನ್ನೊಳಗೊಂಡ ಸ್ಥಳೀಯ ಸುಸ್ಥಿರ ಅಭಿವೃದ್ಧಿ ಗುರಿಗಳ ಒಂಬತ್ತು ವಿಷಯಗಳಲ್ಲಿ ವಿಶಿಷ್ಟ ಪ್ರದರ್ಶನಕ್ಕಾಗಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 34 ಗ್ರಾಮ ಪಂಚಾಯತ್‌ ಗಳಿಗೆ ಇದನ್ನು ನೀಡಲಾಯಿತು. ಇದರ ಆಯ್ಕೆಯು ಪಂಚಾಯತ್ ಸುಧಾರಿತ ಸೂಚ್ಯಂಕ (ಪಿಎಐ) 2.0 ಸ್ಕೋರ್‌ ಗಳನ್ನು ಆಧರಿಸಿದೆ. ನಾನಾಜಿ ದೇಶ್ಮುಖ್ ಸರ್ವೋತ್ತಮ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ (NDSPSVP): ಒಟ್ಟಾರೆ ಆಧಾರದ ಮೇಲೆ ಅತ್ಯುತ್ತಮ ಪ್ರದರ್ಶನ ನೀಡುವ ಸಂಸ್ಥೆಗಳಾಗಿ ಗುರುತಿಸಲ್ಪಟ್ಟ 3 ಅತ್ಯುತ್ತಮ ಜಿಲ್ಲಾ ಪಂಚಾಯತ್‌ ಗಳು, 2 ಅತ್ಯುತ್ತಮ ತಾಲ್ಲೂಕು ಪಂಚಾಯತ್‌ ಗಳು ಮತ್ತು 3 ಅತ್ಯುತ್ತಮ ಗ್ರಾಮ ಪಂಚಾಯತ್‌ ಗಳು ಸೇರಿದಂತೆ ಒಟ್ಟು 8 ಪಂಚಾಯತ್‌ ಗಳಿಗೆ ಇದನ್ನು ನೀಡಲಾಯಿತು. ಪ್ರಶಸ್ತಿ ವಿಜೇತ ಪಂಚಾಯತ್‌ ಗಳು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ (ಆರ್‌ ಜಿ ಎಸ್‌ ಎ) ಅಂಗವಾದ ಪಂಚಾಯತ್‌ ಗಳ ಪ್ರೋತ್ಸಾಹಕ (ಐಒಪಿ) ಯೋಜನೆಯಡಿ ₹₹50 ಲಕ್ಷದಿಂದ ₹₹5 ಕೋಟಿವರೆಗಿನ ಆರ್ಥಿಕ ಪ್ರೋತ್ಸಾಹಕಗಳನ್ನು ಪಡೆದಿವೆ, ಇದನ್ನು ಮುಂದಿನ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ please click.

 

*****


(रिलीज़ आईडी: 2268822) आगंतुक पटल : 11
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Telugu , Malayalam