ರೈಲ್ವೇ ಸಚಿವಾಲಯ
ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಹೈ-ಸ್ಪೀಡ್ ರೈಲು ವಿಭಾಗದಲ್ಲಿ ಕ್ಷಿಪ್ರ ಪ್ರಗತಿಯನ್ನು ಗುರುತಿಸುವ ಮೂಲಕ, ಮಹಾರಾಷ್ಟ್ರದಲ್ಲಿ ಮೂರನೇ ಪರ್ವತ ಸುರಂಗ ಮಾರ್ಗ ಪೂರ್ಣಗೊಂಡಿದೆ
ಪರ್ವತ ಸುರಂಗ (ಎಮ್ ಟಿ-07) 417 ಮೀಟರ್ ಉದ್ದ ಮತ್ತು 14.4 ಮೀಟರ್ ಅಗಲವನ್ನು ಹೊಂದಿದೆ, ಹೈ-ಸ್ಪೀಡ್ ಬುಲೆಟ್ ರೈಲು ಕಾರ್ಯಾಚರಣೆಗಳನ್ನು ಬೆಂಬಲಿಸಲು ಸುಧಾರಿತ ಮೇಲ್ವಿಚಾರಣೆ ಮತ್ತು ಸುರಕ್ಷತಾ ವ್ಯವಸ್ಥೆಗಳೊಂದಿಗೆ ಇದನ್ನು ನಿರ್ಮಿಸಲಾಗಿದೆ
ಪಾಲ್ಘರ್ ಜಿಲ್ಲೆಯಲ್ಲಿ ಕೇವಲ ಐದು ತಿಂಗಳಲ್ಲಿ ಮೂರು ಪರ್ವತ ಸುರಂಗ ಮಾರ್ಗಗಳ ಯಶಸ್ವಿ ಪೂರ್ಣಗೊಳ್ಳುವಿಕೆಯು ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ವೇಗವನ್ನು ಬಲಪಡಿಸಿದೆ
ಪ್ರಕಟಣಾ ದಿನಾಂಕ:
02 JUN 2026 3:58PM by PIB Bengaluru
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ತಾಲೂಕಿನ ಅಂಬೇಸರಿ ಗ್ರಾಮದಲ್ಲಿ ಮೂರನೇ ಪರ್ವತ ಸುರಂಗದ (ಎಮ್ ಟಿ-07) ಕಾಮಗಾರಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿ ಒಂದು ದೊಡ್ಡ ಎಂಜಿನಿಯರಿಂಗ್ ಸಾಧನೆ ಮಾಡಲಾಗಿದೆ.

ಈ ಸಾಧನೆಯೊಂದಿಗೆ, ಮಹಾರಾಷ್ಟ್ರದ ಅತ್ಯಂತ ಕಠಿಣ ಹಾಗೂ ತಾಂತ್ರಿಕ ಸವಾಲುಗಳಿಂದ ಕೂಡಿದ ಈ ಹೈ-ಸ್ಪೀಡ್ ರೈಲು ಕಾರಿಡಾರ್ ಭಾಗದಲ್ಲಿ ಕಳೆದ ಐದು ತಿಂಗಳೊಳಗೆ ಮೂರು ಸುರಂಗಗಳು ಪೂರ್ಣಗೊಂಡಿವೆ, ಇದು ಇಲ್ಲಿನ ಕ್ಷಿಪ್ರ ಪ್ರಗತಿಯನ್ನು ತೋರಿಸುತ್ತದೆ.

ಹೊಸದಾಗಿ ಪೂರ್ಣಗೊಂಡಿರುವ ಎಮ್ ಟಿ-07 ಪರ್ವತ ಸುರಂಗವು 417 ಮೀಟರ್ ಉದ್ದ ಮತ್ತು 14.4 ಮೀಟರ್ ಅಗಲವಿದ್ದು, ಬುಲೆಟ್ ರೈಲಿನ ಅಪ್ ಮತ್ತು ಡೌನ್ ಎರಡೂ ಹಳಿಗಳನ್ನು ಒಂದೇ ಕಡೆ ಅಳವಡಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಎಂಜಿನಿಯರಿಂಗ್ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳ ಬೆಂಬಲದೊಂದಿಗೆ, ಸುರಂಗದ ಎರಡೂ ಬದಿಗಳಿಂದ ನಿಯಂತ್ರಿತ 'ಡ್ರಿಲ್ಲಿಂಗ್ ಮತ್ತು ಬ್ಲಾಸ್ಟಿಂಗ್' (ಕೊರೆಯುವ ಮತ್ತು ಸ್ಫೋಟಿಸುವ) ವಿಧಾನದ ಮೂಲಕ ಇದನ್ನು ಅಗೆಯಲಾಗಿದೆ.

ಸುರಂಗವನ್ನು ಅಗೆಯುವ ಪ್ರಕ್ರಿಯೆಯುದ್ದಕ್ಕೂ, ಸುರಂಗದ ಗೋಡೆಗಳ ಸ್ಥಿರತೆ, ಕಾರ್ಮಿಕರ ಸುರಕ್ಷತೆ ಮತ್ತು ನಿಖರವಾದ ಕೆಲಸವನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ಜಿಯೋಟೆಕ್ನಿಕಲ್ (ಭೂಗರ್ಭ ತಾಂತ್ರಿಕ) ಉಪಕರಣಗಳನ್ನು ಬಳಸಲಾಗಿತ್ತು. ಮೇಲ್ಮೈ ಕುಸಿತದ ಬಿಂದುಗಳು (ಎಸ್ ಎಸ್ ಪಿ), 3ಡಿ ಟಾರ್ಗೆಟ್ ಗಳು, ಸ್ಟ್ರೈನ್ ಗೇಜ್ ಗಳು ಮತ್ತು ಸೀಸ್ಮೋಗ್ರಾಫ್ ಗಳು ಸೇರಿದಂತೆ ನೈಜ-ಸಮಯದ ಮೇಲ್ವಿಚಾರಣಾ ವ್ಯವಸ್ಥೆಗಳು ಕಂಪನಗಳು, ಸುರಂಗದ ನಡವಳಿಕೆ ಮತ್ತು ಸುತ್ತಮುತ್ತಲಿನ ಕಟ್ಟಡಗಳನ್ನು ನಿರಂತರವಾಗಿ ಗಮನಿಸುತ್ತಿದ್ದವು. ಸುರಂಗ ಕಾರ್ಯಾಚರಣೆಯ ಸಮಯದಲ್ಲಿ ಶುದ್ಧ ಗಾಳಿಗಾಗಿ ವಾತಾಯನ ವ್ಯವಸ್ಥೆಗಳು, ಅಗ್ನಿ-ಸುರಕ್ಷತಾ ವ್ಯವಸ್ಥೆಗಳು, ನಿಯಂತ್ರಿತ ಪ್ರವೇಶ ಮತ್ತು ನಿರಂತರ ತಾಂತ್ರಿಕ ಉಸ್ತುವಾರಿ ಸೇರಿದಂತೆ ಸಮಗ್ರ ಕಾರ್ಮಿಕ-ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲಾಗಿತ್ತು.
ಮಹಾರಾಷ್ಟ್ರದಲ್ಲಿ ಈ ಹಿಂದೆ ಪೂರ್ಣಗೊಂಡ ಸುರಂಗ ಮಾರ್ಗಗಳು
ಈ ಇತ್ತೀಚಿನ ಯಶಸ್ಸು ಯೋಜನೆಯ ಮಹಾರಾಷ್ಟ್ರ ವಿಭಾಗದಲ್ಲಿ ಈ ಹಿಂದೆ ಸಾಧಿಸಲಾದ ಮೈಲಿಗಲ್ಲುಗಳ ಮುಂದುವರಿದ ಭಾಗವಾಗಿದೆ. ಪಾಲ್ಘರ್ ಜಿಲ್ಲೆಯ ಸಫಾಲೆ ಬಳಿ 1.5 ಕಿಲೋಮೀಟರ್ ಉದ್ದದ ಮೊದಲ ಪರ್ವತ ಸುರಂಗ ಮಾರ್ಗವು (ಎಮ್ ಟಿ-05) 2 ಜನವರಿ 2026 ರಂದು ಪೂರ್ಣಗೊಂಡಿತು, ಇದು ಮಹಾರಾಷ್ಟ್ರದಲ್ಲಿ ಬುಲೆಟ್ ರೈಲು ಯೋಜನೆಗಾಗಿ ಯಶಸ್ವಿಯಾದ ಮೊದಲ ಪರ್ವತ ಸುರಂಗ ಮಾರ್ಗವಾಗಿದೆ. ಇದರ ಬೆನ್ನಲ್ಲೇ 3 ಫೆಬ್ರವರಿ 2026 ರಂದು ಎರಡನೇ ಸುರಂಗ ಮಾರ್ಗವು (ಎಮ್ ಟಿ-06) ಪೂರ್ಣಗೊಂಡಿತು; 'ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್' (ಎನ್ ಎ ಟಿ ಎಮ್) ತಂತ್ರಜ್ಞಾನ ಬಳಸಿ ಅಗೆಯಲಾದ 454 ಮೀಟರ್ ಉದ್ದದ ಈ ಸುರಂಗದೊಂದಿಗೆ, ಪಾಲ್ಘರ್ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳ ಅವಧಿಯಲ್ಲೇ ಎರಡು ಸುರಂಗ ಮಾರ್ಗಗಳನ್ನು ಪೂರ್ಣಗೊಳಿಸಿದಂತಾಗಿತ್ತು.

ಮಹಾರಾಷ್ಟ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಒಟ್ಟು ಏಳು ಪರ್ವತ ಸುರಂಗಗಳ ಪೈಕಿ ಎಮ್ ಟಿ-05, ಎಮ್ ಟಿ-06 ಮತ್ತು ಎಮ್ ಟಿ-07 ಈಗ ಪೂರ್ಣಗೊಂಡಿವೆ. ಎಮ್ ಟಿ-08 (350 ಮೀಟರ್) ಈಗಾಗಲೇ 5 ಅಕ್ಟೋಬರ್ 2023 ರಂದೇ ಪೂರ್ಣಗೊಂಡಿದೆ. ಎಮ್ ಟಿ-03 ಸುರಂಗ ಮಾರ್ಗವು ಶೇಕಡಾ 80 ಕ್ಕಿಂತ ಹೆಚ್ಚು ಅಗೆಯುವ ಪ್ರಗತಿಯನ್ನು ದಾಟಿದೆ, ಎಮ್ ಟಿ-04 ಶೇಕಡಾ 60 ರಷ್ಟು ಪ್ರಗತಿಯನ್ನು ತಲುಪಿದೆ, ಹಾಗೆಯೇ ಎಮ್ ಟಿ-01 ಮತ್ತು ಎಮ್ ಟಿ-02 ಸ್ಥಿರವಾಗಿ ಮುನ್ನಡೆಯುತ್ತಿವೆ. ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿನ ಒಟ್ಟು ಎಂಟು ಪರ್ವತ ಸುರಂಗಗಳಲ್ಲಿ, ಏಳು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮತ್ತು ಒಂದು ಗುಜರಾತ್ ನ ವಲ್ಸಡ್ ಜಿಲ್ಲೆಯಲ್ಲಿದೆ, ಅಲ್ಲಿ ಸುರಂಗದ ಕೆಲಸ ಈಗಾಗಲೇ ಪೂರ್ಣಗೊಂಡಿದೆ.
ವಾಪಿ ಮತ್ತು ಬೋಯಿಸರ್ ಬುಲೆಟ್ ರೈಲು ನಿಲ್ದಾಣಗಳ ನಡುವಿನ ಎಲ್ಲಾ ಮೂರು ಪರ್ವತ ಸುರಂಗಗಳನ್ನು ಯಶಸ್ವಿಯಾಗಿ ಕೊರೆಯಲಾಗಿದೆ. ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಮಹಾರಾಷ್ಟ್ರದ ಬೋಯಿಸರ್ ಮತ್ತು ಗುಜರಾತ್ ನ ವಾಪಿ ನಡುವಿನ ಪ್ರಮುಖ ಕೈಗಾರಿಕಾ ಪ್ರದೇಶದ ಮೂಲಕ ಹಾದುಹೋಗುತ್ತದೆ, ಇಲ್ಲಿ ನಿರ್ಮಾಣ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದೆ. ಈ ಎರಡು ನಗರಗಳ ನಡುವಿನ ಮಾರ್ಗವು ಮೂರು ಪರ್ವತ ಸುರಂಗಗಳನ್ನು (ಎಮ್ ಟಿ-08, ಎಮ್ ಟಿ-07 ಮತ್ತು ಎಮ್ ಟಿ-06) ಒಳಗೊಂಡಿದೆ.

ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ಸುಧಾರಿತ ಸುರಂಗ ನಿರ್ಮಾಣ, ಮೇಲ್ವಿಚಾರಣೆ ಮತ್ತು ನಿರ್ಮಾಣ ತಂತ್ರಜ್ಞಾನಗಳ ಅಳವಡಿಕೆಯನ್ನು ಮುಂದುವರೆಸಿದೆ, ಇದು ಹೈ-ಸ್ಪೀಡ್ ರೈಲು ಮೂಲಸೌಕರ್ಯದಲ್ಲಿ ಭಾರತದ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಸುರಕ್ಷಿತ, ಆಧುನಿಕ ಹಾಗೂ ಭವಿಷ್ಯಕ್ಕೆ ಸಿದ್ಧವಾಗಿರುವ ರೈಲು ಪ್ರಯಾಣಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತಿದೆ.
*****
(ಪ್ರಕಟಣೆ ಐ.ಡಿ.: 2268015)
ವಿಸಿಟರ್ ಕೌಂಟರ್ : 15