ಉಪರಾಷ್ಟ್ರಪತಿಗಳ ಕಾರ್ಯಾಲಯ
ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ 45 ವರ್ಷಗಳ ಜಾಗತಿಕ ಆಚರಣೆಯಲ್ಲಿ ಉಪರಾಷ್ಟ್ರಪತಿ ಅವರು ಭಾಗಿಯಾದರು
180 ದೇಶಗಳಲ್ಲಿ ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಪಸರಿಸುತ್ತಿರುವುದಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಉಪರಾಷ್ಟ್ರಪತಿಯವರು ಶ್ಲಾಘಿಸಿದರು
ಆಧುನಿಕತೆ ಮತ್ತು ಪ್ರಾಚೀನ ಪರಂಪರೆ ಪರಸ್ಪರ ಪೂರಕವಾಗಿವೆ: ಉಪರಾಷ್ಟ್ರಪತಿ
ನಿಜವಾದ ಭಕ್ತಿ ಎಂದರೆ ಮಾನವೀಯತೆಗೆ ಸಮರ್ಪಿಸಿಕೊಳ್ಳುವುದು: ಉಪರಾಷ್ಟ್ರಪತಿ
ಯುವ ಮನಸ್ಸುಗಳು ಆತ್ಮನಿಯಂತ್ರಣದಿಂದ ಮುನ್ನಡೆಯಬೇಕೇ ಹೊರತು ವ್ಯಸನಗಳಿಂದಲ್ಲ: ಉಪರಾಷ್ಟ್ರಪತಿ
ಪ್ರಕಟಣಾ ದಿನಾಂಕ:
29 MAY 2026 2:30PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ 45 ವರ್ಷಗಳ ಜಾಗತಿಕ ಆಚರಣೆಯಲ್ಲಿ ಪಾಲ್ಗೊಂಡು, ವಿಶ್ವದಾದ್ಯಂತ ಶಾಂತಿ, ಸಾಮರಸ್ಯ, ಸೇವೆ ಮತ್ತು ಆಧ್ಯಾತ್ಮಿಕ ಜಾಗೃತಿಯ ಮೌಲ್ಯಗಳನ್ನು ಹರಡುತ್ತಿರುವುದಕ್ಕಾಗಿ ಸಂಸ್ಥೆಯನ್ನು ಶ್ಲಾಘಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಆರ್ಟ್ ಆಫ್ ಲಿವಿಂಗ್ ಆಂದೋಲನವು ಖಂಡಗಳು, ಸಂಸ್ಕೃತಿಗಳು ಮತ್ತು ತಲೆಮಾರುಗಳಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿದೆ ಎಂದು ಹೇಳಿದರು. ಸಂಸ್ಥೆಯ ಜಾಗತಿಕ ಪ್ರಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಆರ್ಟ್ ಆಫ್ ಲಿವಿಂಗ್ ಸುಮಾರು 180 ದೇಶಗಳಲ್ಲಿ ಕೇಂದ್ರಗಳನ್ನು ಹೊಂದಿದೆ ಎಂದು ಹೇಳಿದರು.
ನಾಲ್ಕೂವರೆ ದಶಕಗಳ ಹಿಂದೆ “ಆಂತರಿಕ ಶಾಂತಿಯೇ ಬಾಹ್ಯ ಸಾಮರಸ್ಯದ ಅಡಿಪಾಯ” ಎಂಬ ತತ್ವದ ಮೇಲೆ ಸ್ಥಾಪಿತವಾದ ಈ ಆಂದೋಲನವು, ಕರುಣೆ, ಸಹನೆ ಮತ್ತು ಆನಂದವನ್ನು ಉತ್ತೇಜಿಸುವ ಪ್ರಮುಖ ಮಾನವೀಯ ಮತ್ತು ಆಧ್ಯಾತ್ಮಿಕ ಶಕ್ತಿಯಾಗಿ ವಿಕಸನಗೊಂಡಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು.
ಭಕ್ತಿಯ ಆಳವಾದ ಅರ್ಥವನ್ನು ವಿವರಿಸಿದ ಉಪರಾಷ್ಟ್ರಪತಿಯವರು, ಭಕ್ತಿ ಎಂದರೆ ಕೇವಲ ಆರಾಧನೆಯಲ್ಲ, ಬದಲಿಗೆ ಸ್ವತಃ ತನ್ನ ಬಗ್ಗೆ, ಕುಟುಂಬ, ಸಮಾಜ, ರಾಷ್ಟ್ರ ಮತ್ತು ಮಾನವೀಯತೆಯೆಡೆಗಿನ ಸಮರ್ಪಣೆಯಾಗಿದೆ ಎಂದು ಹೇಳಿದರು. ಆಧ್ಯಾತ್ಮಿಕತೆಯು ಜನರು ಇತರರೊಂದಿಗೆ ಶಾಂತಿಯಿಂದ ಬದುಕುವುದನ್ನು ಕಲಿಸುತ್ತದೆ ಮತ್ತು ಜೀವನವನ್ನು ಅರ್ಥಪೂರ್ಣ ಹಾಗೂ ಪರಿಪೂರ್ಣವಾಗಿಸುತ್ತದೆ ಎಂದು ಅವರು ಹೇಳಿದರು.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, ಸಂಘರ್ಷ ಮತ್ತು ಅನಿಶ್ಚಿತತೆಯಿಂದ ಕೂಡಿದ ಜಗತ್ತಿನಲ್ಲಿ ಗುರುದೇವ್ ಅವರು ಜ್ಞಾನ, ಜಾಗೃತಿ, ಶಾಂತಿ ಮತ್ತು ಸಾಮರಸ್ಯದ ಮೌಲ್ಯಗಳೊಂದಿಗೆ ಮಾನವಕುಲಕ್ಕೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಹೇಳಿದರು. ಗುರುದೇವ್ ಅವರ ಸರಳತೆ, ನಮ್ರತೆ ಮತ್ತು ಸಹಾನುಭೂತಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಮುಟ್ಟಿದೆ ಎಂದು ಅವರು ಹೇಳಿದರು.
ಧ್ಯಾನ, ಸೇವೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಪರಿಸರ ಉಪಕ್ರಮಗಳು ಮತ್ತು ಸರ್ವಧರ್ಮ ಸಂವಾದಗಳ ಮೂಲಕ ಸಾಮಾಜಿಕ ಪರಿವರ್ತನೆಯಲ್ಲಿ ಆಧ್ಯಾತ್ಮಿಕತೆಯು ವಹಿಸಬಹುದಾದ ಪ್ರಮುಖ ಪಾತ್ರವನ್ನು ಆರ್ಟ್ ಆಫ್ ಲಿವಿಂಗ್ ಪ್ರದರ್ಶಿಸಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. ಧ್ಯಾನ ಮತ್ತು ಏಕಾಗ್ರತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಏಕಾಗ್ರತೆಯುಳ್ಳ ಮನಸ್ಸು ಅಸಾಮಾನ್ಯ ಸಾಧನೆಗಳನ್ನು ಮಾಡಬಲ್ಲದು ಎಂದರು.
ಯುವಜನರು ಪ್ರಾಚೀನ ಮತ್ತು ಆಧುನಿಕತೆಯನ್ನು ಒಟ್ಟಿಗೆ ಕೊಂಡೊಯ್ಯಬಹುದಾದ ಸ್ಪೂರ್ತಿದಾಯಕ ಮಾದರಿಯನ್ನು ಗುರುದೇವ್ ಅವರು ಸಮಾಜದ ಮುಂದೆ ಇಟ್ಟಿದ್ದಾರೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. ಆಧುನಿಕತೆ ಮತ್ತು ಪ್ರಾಚೀನ ಪರಂಪರೆಗಳು ಪರಸ್ಪರ ಪೂರಕವಾಗಿವೆ ಎಂದು ಹೇಳಿದ ಅವರು, ಸಂಸ್ಥೆಯ ಸೇವಾ ಆಧಾರಿತ ಉಪಕ್ರಮಗಳಲ್ಲಿ ಯುವಜನರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.
'ರಾಕ್ ಸತ್ಸಂಗ್' ಮತ್ತು 'ಭಜನ್ ಕ್ಲಬ್ಬಿಂಗ್' ನಂತಹ ಉಪಕ್ರಮಗಳನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು, ಈ ಪ್ರಯತ್ನಗಳು ಭಾರತದ ಪ್ರಾಚೀನ ಜ್ಞಾನದ ಸಂಪ್ರದಾಯಗಳನ್ನು ವಿಶ್ವದಾದ್ಯಂತದ ಯುವ ಪೀಳಿಗೆಯನ್ನು ಸೆಳೆಯುವ ಸಮಕಾಲೀನ ರೂಪದಲ್ಲಿ ಪುನಶ್ಚೇತನಗೊಳಿಸುತ್ತಿವೆ ಎಂದು ಹೇಳಿದರು.
ಮಾದಕವಸ್ತು ಮುಕ್ತ ಭಾರತಕ್ಕಾಗಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ ಅಭಿಯಾನವನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, ಯುವ ಮನಸ್ಸುಗಳು ಹಾನಿಕಾರಕ ವ್ಯಸನಗಳಿಗಿಂತ ಹೆಚ್ಚಾಗಿ ಆತ್ಮನಿಯಂತ್ರಣ ಮತ್ತು ಸಕಾರಾತ್ಮಕ ಮೌಲ್ಯಗಳಿಂದ ಮಾರ್ಗದರ್ಶನ ಪಡೆಯಬೇಕು ಎಂದು ಒತ್ತಿಹೇಳಿದರು.
ಭಾರತದ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, ದೇಶವು ಇಂದು ಇತಿಹಾಸದಲ್ಲಿ ಒಂದು ವಿಶಿಷ್ಟ ಕ್ಷಣದಲ್ಲಿದೆ, ಆತ್ಮವಿಶ್ವಾಸ, ಮಹತ್ವಾಕಾಂಕ್ಷೆ ಮತ್ತು ಜಾಗತಿಕವಾಗಿ ನಾಯಕತ್ವದ ಪಾತ್ರವನ್ನು ಹೆಚ್ಚಾಗಿ ವಹಿಸುತ್ತಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳುತ್ತಿರುವ ನಾಗರಿಕತೆಯ ಜ್ಞಾನ, ಯೋಗ, ಕ್ಷೇಮ, ಸುಸ್ಥಿರತೆ ಮತ್ತು 'ವಸುಧೈವ ಕುಟುಂಬಕಂ' ಮೌಲ್ಯಗಳು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಉತ್ತೇಜಿಸುತ್ತಿರುವ ಆದರ್ಶಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತವೆ ಎಂದು ಅವರು ಹೇಳಿರು.
ಆಂದೋಲನದ ಸ್ವಯಂಸೇವಕರನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, ಅವರನ್ನು ವಿಶ್ವದ ಮೂಲೆ ಮೂಲೆಗೂ ಮಿಷನ್ ಅನ್ನು ಕೊಂಡೊಯ್ದ "ಸೇವೆಯ ಮೌನ ಶಿಲ್ಪಿಗಳು" ಎಂದು ಬಣ್ಣಿಸಿದರು. ಒಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾದರೆ, ಅದು ಒಂದು ಕುಟುಂಬವನ್ನು ಸಬಲಗೊಳಿಸಿ, ಅಂತಿಮವಾಗಿ ಸಮುದಾಯವನ್ನೇ ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಉಪರಾಷ್ಟ್ರಪತಿಯವರು ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್, ಗುರುದೇವ್ ಶ್ರೀ ಶ್ರೀ ರವಿಶಂಕರ್, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ ಸದಸ್ಯರು, ಭಾರತ ಮತ್ತು ವಿದೇಶಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಮತ್ತು ಸ್ವಯಂಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2266576)
ವಿಸಿಟರ್ ಕೌಂಟರ್ : 36