ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕಾನೂನು ಮಾಪನಶಾಸ್ತ್ರ ಸುಧಾರಣೆಗಳ ಕುರಿತು ಪ್ರಾದೇಶಿಕ ಪರಿಶೀಲನಾ ಸಭೆ ನಡೆಸಿದ ಗ್ರಾಹಕ ವ್ಯವಹಾರಗಳ ಇಲಾಖೆ


ಕಾನೂನು ಮಾಪನಶಾಸ್ತ್ರದಲ್ಲಿ 'ಜನ್ ವಿಶ್ವಾಸ್' ಸುಧಾರಣೆಗಳ ವೇಗದ ಅನುಷ್ಠಾನಕ್ಕೆ ಕೇಂದ್ರದ ಒತ್ತು

ನೋಂದಣಿ ಆಧಾರಿತ ವ್ಯವಸ್ಥೆ, ಜಿಎಟಿಸಿ ವಿಸ್ತರಣೆ ಮತ್ತು ಇ-ಮಾಪ್  ಸಂಯೋಜನೆಯ ಕುರಿತು ಪರಿಶೀಲನೆ

ಸರಳೀಕೃತ ಅನುಸರಣೆ ಮತ್ತು ಬಲವಾದ ಗ್ರಾಹಕ ಸುರಕ್ಷತೆಗಳ ಮೇಲೆ ಗಮನ

ಪ್ರಕಟಣಾ ದಿನಾಂಕ: 28 MAY 2026 3:41PM by PIB Bengaluru

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು, ಸಚಿವ ಸಂಪುಟ ಸಚಿವಾಲಯದ ನಿಯಂತ್ರಕ ಸುಧಾರಣೆಗಳ ಉನ್ನತ ಮಟ್ಟದ ಸಮಿತಿ  (ಎಚ್ ಎಲ್ ಸಿ) ಮತ್ತು ವಿನಿಯಂತ್ರಣ ಕೋಶದ ಶಿಫಾರಸುಗಳೊಂದಿಗೆ, ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ, 2026ರ ಮೂಲಕ ಕಾನೂನು ಮಾಪನಶಾಸ್ತ್ರ ಕಾಯ್ದೆ, 2009ರ ಅಡಿಯಲ್ಲಿ ಪರಿಚಯಿಸಲಾದ ಸುಧಾರಣೆಗಳ ಅನುಷ್ಠಾನವನ್ನು ಪರಿಶೀಲಿಸಲು 27 ಮೇ 2026 ರಂದು ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಪ್ರಾದೇಶಿಕ ಪರಿಶೀಲನಾ ಸಭೆಯನ್ನು ನಡೆಸಿತು.

ಸಭೆಯು ಈ ಕೆಳಗಿನ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿತು –

  • ಹೊಸ ನೋಂದಣಿ ಆಧಾರಿತ ವ್ಯವಸ್ಥೆಯ ಅನುಷ್ಠಾನ,
  • ಸಣ್ಣ ಪುಟ್ಟ ಕಾರ್ಯವಿಧಾನದ ಅಪರಾಧಗಳ ಅಪರಾಧಮುಕ್ತಗೊಳಿಸುವಿಕೆ ಮತ್ತು 'ಸುಧಾರಣಾ ಸೂಚನೆಗಳ' ಪರಿಚಯ,
  • ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ (ಜಿಎಟಿಸಿ ಗಳು) ವಿಸ್ತರಣೆ ಮತ್ತು ಕಾನೂನು ಮಾಪನಶಾಸ್ತ್ರ ಸೇವೆಗಳ ಡಿಜಿಟಲೀಕರಣ,
  • ಸಾಮರ್ಥ್ಯ ವೃದ್ಧಿ

 

ಪರವಾನಗಿಯಿಂದ ನೋಂದಣಿಗೆ ಬದಲಾವಣೆ

ಚರ್ಚೆಯ ಸಂದರ್ಭದಲ್ಲಿ, "ಪರವಾನಗಿ" ಯಿಂದ "ನೋಂದಣಿ" ಗೆ ಬದಲಾಗುತ್ತಿರುವ ಪ್ರಕ್ರಿಯೆಯು ನಿಜವಾದ ನಂಬಿಕೆ ಆಧಾರಿತ ಮತ್ತು ಸುಗಮಗೊಳಿಸುವ ನಿಯಂತ್ರಕ ವ್ಯವಸ್ಥೆಯನ್ನು ಬಿಂಬಿಸುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳನ್ನು ವಿನಂತಿಸಲಾಯಿತು. ನಿಗದಿತ ದಾಖಲೆಗಳನ್ನು ಸಲ್ಲಿಸಿದ ಕೂಡಲೇ, ಅನಗತ್ಯ ವಿಳಂಬ ಅಥವಾ ಪೂರ್ವ ತಪಾಸಣೆಗಳಿಲ್ಲದೆ ಸ್ವಯಂಚಾಲಿತವಾಗಿ ನೋಂದಣಿಗಳನ್ನು ಮಂಜೂರು ಮಾಡಬೇಕು ಎಂದು ಒತ್ತು ನೀಡಲಾಯಿತು.

 

ಅಪರಾಧಮುಕ್ತಗೊಳಿಸುವಿಕೆ ಮತ್ತು "ಸುಧಾರಣಾ ಸೂಚನೆ" ಕಾರ್ಯ ವಿಧಾನ

 

ʻಜನ್ ವಿಶ್ವಾಸ್ʼ ಸುಧಾರಣೆಗಳ ಅಡಿಯಲ್ಲಿ ಹೊಸದಾಗಿ ಪರಿಚಯಿಸಲಾದ ʻʻಸುಧಾರಣಾ ಸೂಚನೆ" (ಸುಧಾರಣಾ ನೋಟಿಸ್) ಕಾರ್ಯವಿಧಾನದ ಅನುಷ್ಠಾನವನ್ನು ಇಲಾಖೆಯು ಪರಿಶೀಲಿಸಿತು. ಈ ನಿಬಂಧನೆಯಡಿ, ಕಾನೂನು ಮಾಪನಶಾಸ್ತ್ರ ಕಾಯ್ದೆಯ ನಿರ್ದಿಷ್ಟ ಸೆಕ್ಷನ್ ಗಳ ಅಡಿಯಲ್ಲಿ ಮೊದಲ ಬಾರಿಗೆ ಮಾಡುವ ಕಾರ್ಯವಿಧಾನದ ಉಲ್ಲಂಘನೆಗಳಿಗೆ ಯಾವುದೇ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವ ಮೊದಲು ʻʻಸುಧಾರಣಾ ಸೂಚನೆ” ನೀಡಲಾಗುತ್ತದೆ. ಈ ಸುಧಾರಣೆಯು ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವ, ಮೊಕದ್ದಮೆಗಳನ್ನು ಕಡಿಮೆ ಮಾಡುವ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಜೊತೆಗೆ ವ್ಯವಹಾರವನ್ನು ಸುಲಭಗೊಳಿಸುವುದನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

 

ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ (ಜಿಎಟಿಸಿ) ವಿಸ್ತರಣೆ

ತಿದ್ದುಪಡಿ ಮಾಡಲಾದ ಕಾನೂನು ಮಾಪನಶಾಸ್ತ್ರದ ಚೌಕಟ್ಟಿಗೆ ಅನುಗುಣವಾಗಿ ರಾಜ್ಯಗಳು ತಮ್ಮ ಜಾರಿ ನಿಯಮಗಳು  ಮತ್ತು ಜಿಎಟಿಸಿ ನಿಯಮಗಳಿಗೆ ತಿದ್ದುಪಡಿಗಳನ್ನು ತ್ವರಿತಗೊಳಿಸುವಂತೆ ಕೋರಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಗಳು, ಪರಿಷ್ಕೃತ ನಿಯಮಗಳು ಕರಡು ರಚನೆ ಮತ್ತು ಅನುಮೋದನೆಯ ಮುಂದುವರಿದ ಹಂತಗಳಲ್ಲಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದವು.

 

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಜಿಎಟಿಸಿ ನಿಯಮಗಳನ್ನು ಆದಷ್ಟು ಬೇಗ ಅಧಿಸೂಚಿಸಲು ಮತ್ತು ಜಿಎಟಿಸಿ ಕಾರ್ಯವಿಧಾನದ ವ್ಯಾಪ್ತಿಗೆ ಒಳಪಡುವ ಸಾಧನಗಳ ವ್ಯಾಪ್ತಿಯನ್ನು ವಿಸ್ತರಿಸಲು ಇಲಾಖೆಯು ಮತ್ತಷ್ಟು ಒತ್ತಾಯಿಸಿತು. ಇದು ಪರಿಶೀಲನಾ ಮೂಲಸೌಕರ್ಯವನ್ನು ಬಲಪಡಿಸಲು, ಪರಿಶೀಲಕರ ಲಭ್ಯತೆಯನ್ನು ಸುಧಾರಿಸಲು ಮತ್ತು ಕೈಗಾರಿಕೆಗಳು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಶೀಘ್ರವಾದ ಸೇವೆ ಒದಗಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ಸಭೆಯಲ್ಲಿ, ರದ್ದಾದ ತೂಕ ಮತ್ತು ಅಳತೆಗಳ ಗುಣಮಟ್ಟ ಕಾಯ್ದೆ, 1976 ಕ್ಕೆ ಭಿನ್ನವಾಗಿ, ಕಾನೂನು ಮಾಪನಶಾಸ್ತ್ರ ಕಾಯ್ದೆ, 2009 ರ ಪ್ರಕಾರ ತೂಕ ಮತ್ತು ಅಳತೆಗಳ ಅಂತರ-ರಾಜ್ಯ ಪರಿಶೀಲನೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಅದರಂತೆ, ಭಾರತ ಸರ್ಕಾರದ ಕಾನೂನು ಮಾಪನಶಾಸ್ತ್ರದ ನಿರ್ದೇಶಕರಿಂದ ಅನುಮೋದಿಸಲ್ಪಟ್ಟ ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳು (ಜಿಎಟಿಸಿ), ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಅನುಮೋದನೆ ನೀಡಲಾಗಿದೆಯೋ ಆ ವ್ಯಾಪ್ತಿಯೊಳಗೆ ಮಾತ್ರ ಪರಿಶೀಲನೆ ಮತ್ತು ಮರು-ಪರಿಶೀಲನೆಯ ಕಾರ್ಯವನ್ನು ಕೈಗೊಳ್ಳಬಹುದು. ವ್ಯವಸ್ಥೆಯ ಏಕರೂಪದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಜಿಎಟಿಸಿ ಗಳ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಕಾರ್ಯಾಚರಣೆಯ ಅಸ್ಪಷ್ಟತೆಯನ್ನು ತಪ್ಪಿಸಲು ಈ ಸ್ಪಷ್ಟೀಕರಣವನ್ನು ನೀಡಲಾಗಿದೆ.

 

ಸಾಮರ್ಥ್ಯ ವೃದ್ಧಿ

 

ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಸುಧಾರಣೆಗಳ ಪರಿಣಾಮಕಾರಿ ಅನುಷ್ಠಾನವನ್ನು ಬೆಂಬಲಿಸಲು ರಾಂಚಿಯ ಭಾರತೀಯ ಕಾನೂನು ಮಾಪನಶಾಸ್ತ್ರ ಸಂಸ್ಥೆ (ಐ ಐ ಎಲ್ ಎಂ) ಮೂಲಕ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಇಲಾಖೆಯು ತಿಳಿಸಿದೆ.

 

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಕ್ಷೇತ್ರಗಳೆಂದರೆ :- ಇ-ಮಾಪ್ (e-Maap) ಪೋರ್ಟಲ್ ಮೂಲಕ ಶೀಘ್ರವಾದ  ಮತ್ತು ತಡೆರಹಿತ ಸೇವೆಗಳ ವಿತರಣೆ, ಮೂರನೇ ವ್ಯಕ್ತಿಯ (ಸಂಸ್ಥೆಯ) ಪರಿಶೀಲನಾ ಕಾರ್ಯವಿಧಾನಗಳನ್ನು ಬಲಪಡಿಸುವುದು, ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ (ಜಿಎಟಿಸಿ) ಮೂಲಕ ಪರಿಶೀಲನಾ ಮೂಲಸೌಕರ್ಯಗಳ ವಿಸ್ತರಣೆ, ಜಿಎಟಿಸಿ ಚೌಕಟ್ಟಿನಡಿಯಲ್ಲಿ ಹೊಸದಾಗಿ ಸೇರಿಸಲಾದ ತೂಕ ಮತ್ತು ಅಳತೆ ಉಪಕರಣಗಳ ವರ್ಗಗಳ ಸೇರ್ಪಡೆ, ಕಾನೂನು ಮಾಪನಶಾಸ್ತ್ರ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ ಮತ್ತು ತಾಂತ್ರಿಕ ತರಬೇತಿ.

 

ಪ್ರಾಮಾಣಿಕ ಉದ್ಯಮಗಳು ಮತ್ತು ವ್ಯಾಪಾರಿಗಳನ್ನು ಬೆಂಬಲಿಸಲು ಕಾರ್ಯವಿಧಾನದ ಅನುಸರಣೆಗಳನ್ನು ಸರಳಗೊಳಿಸಲಾಗುತ್ತಿದ್ದರೂ, ಗ್ರಾಹಕರ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ವಂಚನೆ, ತಿದ್ದುವಿಕೆ  ಮತ್ತು ಉಲ್ಲಂಘನೆಗಳ ವಿರುದ್ಧ ಕಾನೂನು ಮಾಪನಶಾಸ್ತ್ರದ ಚೌಕಟ್ಟಿನಡಿಯಲ್ಲಿ ಕಠಿಣ ಕ್ರಮ ಮುಂದುವರಿಯುತ್ತದೆ ಎಂದು ಇಲಾಖೆಯು ಪುನರುಚ್ಚರಿಸಿತು. ಈ ಸುಧಾರಣೆಗಳು ವ್ಯಾಪಾರದ ಸುಲಭತೆ ಮತ್ತು ಗ್ರಾಹಕ ರಕ್ಷಣೆ ಎರಡನ್ನೂ ಉತ್ತೇಜಿಸುವ ಪಾರದರ್ಶಕ, ಆಧುನಿಕ ಮತ್ತು ಸಮತೋಲಿತ ನಿಯಂತ್ರಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.

 

*****


(ಪ್ರಕಟಣೆ ಐ.ಡಿ.: 2266267) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Telugu , Malayalam