ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)
ಯು ಪಿ ಎಸ್ ಸಿ ಯಿಂದ ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ 2026ರ ತಾತ್ಕಾಲಿಕ ಉತ್ತರ ಪತ್ರಿಕೆ ಪ್ರಕಟ
ಪ್ರಕಟಣಾ ದಿನಾಂಕ:
27 MAY 2026 4:34PM by PIB Bengaluru
ಕೇಂದ್ರ ಲೋಕಸೇವಾ ಆಯೋಗವು (ಯುಪಿ ಎಸ್ ಸಿ), ಇದೇ ಮೊದಲ ಬಾರಿಗೆ, ನಾಗರಿಕ ಸೇವೆಗಳ (ಪೂರ್ವಭಾವಿ), ಸಿಎಸ್ ಪಿ, ಪರೀಕ್ಷೆ 2026 ರ ತಾತ್ಕಾಲಿಕ ಉತ್ತರ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.
ಈ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ತಮ್ಮ ನಿವೇದನೆಗಳು ಏನಾದರು ಇದ್ದಲ್ಲಿ, ಮೇ 31, 2026 ರ ಸಂಜೆ 6 ರವರೆಗೆ upsconline.nic.in ನಲ್ಲಿ ಲಭ್ಯವಿರುವ ಪ್ರತ್ಯೇಕ ಆನ್ ಲೈನ್ ಪೋರ್ಟಲ್, "ಆನ್ಲೈನ್ ಪ್ರಶ್ನೆ ಪತ್ರಿಕೆ ನಿವೇದನೆಗಳ ಪೋರ್ಟಲ್ (Question Paper Representation Portal - QPRep)" ಮೂಲಕ ಸಲ್ಲಿಸಬಹುದು. ಅಭ್ಯರ್ಥಿಯ ತಿಳುವಳಿಕೆಯ ಪ್ರಕಾರ ಸರಿಯಾದ ಉತ್ತರ ಯಾವುದು ಎಂಬುದನ್ನು ಸೂಚಿಸುವುದರ ಜೊತೆಗೆ, ಸಂಕ್ಷಿಪ್ತ ವಿವರಣೆ ಮತ್ತು ಮೂರು ಅಧಿಕೃತ ಮೂಲಗಳಿಂದ ಪಡೆದ ಪೂರಕ ದಾಖಲೆಗಳನ್ನು ಲಗತ್ತಿಸಿ ಆಕ್ಷೇಪಣೆಗಳನ್ನು ಅಥವಾ ನಿವೇದನೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಎಲ್ಲಾ ಆಕ್ಷೇಪಣೆಗಳನ್ನು ಅಥವಾ ನಿವೇದನೆಗಳನ್ನು ಸಮಗ್ರ ಮತ್ತು ಸೂಕ್ಷ್ಮ ಪರಿಶೀಲನೆಗಾಗಿ ವಿಷಯ ತಜ್ಞರ ತಂಡಗಳ ಮುಂದೆ ಇಡಲಾಗುತ್ತದೆ. ಆಯಾ ವಿಷಯದ ಆಳವಾದ ಜ್ಞಾನ ಮತ್ತು ಪರಿಣತಿ ಹೊಂದಿರುವ ಈ ತಜ್ಞರು, ಪ್ರತಿಯೊಂದನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ, ಪೂರಕ ದಾಖಲೆಗಳನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ಸಂಬಂಧಪಟ್ಟ ಪ್ರಶ್ನೆಗಳ ಉತ್ತರ ಪತ್ರಿಕೆಯ ನಿಖರತೆಯ ಬಗ್ಗೆ ತಮ್ಮ ಪರಿಗಣಿತ ಅಭಿಪ್ರಾಯಗಳನ್ನು ದಾಖಲಿಸುತ್ತಾರೆ. ಆಯೋಗದ ಪ್ರಸ್ತುತ ಚಾಲ್ತಿಯಲ್ಲಿರುವ ಪದ್ಧತಿಯ ಪ್ರಕಾರ, ಅಂತಿಮ ಫಲಿತಾಂಶ ಪ್ರಕಟವಾದ ನಂತರವೇ ಅಂತಿಮ ಉತ್ತರ ಪತ್ರಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ.
ಕೇಂದ್ರ ಲೋಕಸೇವಾ ಆಯೋಗವು (ಯು ಪಿ ಎಸ್ ಸಿ) ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ದೇಶಾದ್ಯಂತದ ವಿಷಯ ತಜ್ಞರು ಸಿದ್ಧಪಡಿಸುತ್ತಾರೆ. ಈ ತಜ್ಞರು ಪರೀಕ್ಷಾ ಪ್ರಕ್ರಿಯೆಯ ಉದ್ದೇಶಗಳು ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಪ್ರಶ್ನೆ ಪತ್ರಿಕೆಗಳನ್ನು ವಿನ್ಯಾಸಗೊಳಿಸುತ್ತಾರೆ, ಇದರಿಂದ ವಿವಿಧ ಶೈಕ್ಷಣಿಕ, ಸಾಮಾಜಿಕ ಮತ್ತು ಪ್ರಾದೇಶಿಕ ಹಿನ್ನೆಲೆಯ ಅಭ್ಯರ್ಥಿಗಳಿಗೆ ಸಮಾನ ಮತ್ತು ನ್ಯಾಯಯುತವಾದ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಇತ್ತೀಚೆಗೆ ನಡೆದ ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆಯ ಪ್ರಶ್ನೆಗಳು ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳನ್ನು ಆಧರಿಸಿವೆ; ಅವುಗಳ ಉಲ್ಲೇಖಗಳು ಮತ್ತು ಉತ್ತರಗಳನ್ನು ಪ್ರಮಾಣಿತ ಪಠ್ಯಪುಸ್ತಕಗಳು, ಜರ್ನಲ್ಗಳು, ಸರ್ಕಾರಿ ಜಾಲತಾಣಗಳು, ಸರ್ಕಾರದ ಪತ್ರಿಕಾ ಪ್ರಕಟಣೆಗಳು ಮತ್ತು ಪ್ರತಿಷ್ಠಿತ ದಿನಪತ್ರಿಕೆಗಳು ಇತ್ಯಾದಿಗಳಲ್ಲಿ ಗುರುತಿಸಬಹುದಾಗಿದೆ. ಈ ವರ್ಷ, ನಾಗರಿಕ ಸೇವೆಗಳ 933 ಹುದ್ದೆಗಳು ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್ ಒಎಸ್) ಯ 80 ಹುದ್ದೆಗಳ ಖಾಲಿ ಜಾಗಗಳಿಗಾಗಿ ನಡೆದ ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆಗೆ ಸುಮಾರು 5.49 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.
ಈ ಪರೀಕ್ಷೆಯು ಮೇ 24, 2026 ರಂದು ಎರಡು ಕಡ್ಡಾಯ ಅವಧಿಗಳಲ್ಲಿ ನಡೆಯಿತು. ಪೂರ್ವಾಹ್ನದ ಅವಧಿಯಲ್ಲಿ ಬೆಳಿಗ್ಗೆ 09:30 ರಿಂದ 11:30 ರವರೆಗೆ ಸಾಮಾನ್ಯ ಅಧ್ಯಯನ (ಪತ್ರಿಕೆ-I) ದೊಂದಿಗೆ ಪರೀಕ್ಷೆ ಪ್ರಾರಂಭವಾಯಿತು, ನಂತರ ಮಧ್ಯಾಹ್ನದ ಅವಧಿಯಲ್ಲಿ ಮಧ್ಯಾಹ್ನ 2:30 ರಿಂದ 4:30 ರವರೆಗೆ ನಾಗರಿಕ ಸೇವೆಗಳ ಅರ್ಹತಾ ಪರೀಕ್ಷೆ (ಸಿಎಸ್ ಎಟಿ) [ಪತ್ರಿಕೆ-II] ನಡೆಯಿತು. ನಿಗದಿಪಡಿಸಿದ ಸಾಂಸ್ಥಿಕ ಮಾರ್ಗಸೂಚಿಗಳು ಮತ್ತು ಪರೀಕ್ಷಾ ನಿಯಮಾವಳಿಗಳ ಕಟ್ಟುನಿಟ್ಟಾದ ಪಾಲನೆಯೊಂದಿಗೆ ಪರೀಕ್ಷೆಯನ್ನು ನಡೆಸಲಾಯಿತು.
ತಾತ್ಕಾಲಿಕ ಉತ್ತರ ಪತ್ರಿಕೆಯ ಬಿಡುಗಡೆಯು, ಪರೀಕ್ಷಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವ ಯುಪಿಎಸ್ ಸಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ ಅಭ್ಯರ್ಥಿಗಳಿಗೆ ಪೂರಕ ದಾಖಲೆಗಳೊಂದಿಗೆ ರಚನಾತ್ಮಕವಾಗಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ.
*****
(ಪ್ರಕಟಣೆ ಐ.ಡಿ.: 2265945)
ವಿಸಿಟರ್ ಕೌಂಟರ್ : 27