ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಅವರಿಂದ ಸೈಪ್ರಸ್ ಅಧ್ಯಕ್ಷರಿಗೆ ಆತಿಥ್ಯ


ತಂತ್ರಜ್ಞಾನ ಮತ್ತು ನಾವೀನ್ಯತೆಯು ಭಾರತ ಮತ್ತುಸೈಪ್ರಸ್ ಬಾಂಧವ್ಯದ ಅತ್ಯಂತ ಪ್ರಗತಿಪರ ಕ್ಷೇತ್ರಗಳಾಗಿ ಹೊರಹೊಮ್ಮಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಕಟಣಾ ದಿನಾಂಕ: 22 MAY 2026 9:23PM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರನ್ನು ಇಂದು (ಮೇ 22, 2026) ರಾಷ್ಟ್ರಪತಿ ಭವನದಲ್ಲಿ ಬರಮಾಡಿಕೊಂಡರು. ಅತಿಥಿಗಳ ಗೌರವಾರ್ಥವಾಗಿ ಔತಣಕೂಟವನ್ನು ಸಹ ಆಯೋಜಿಸಿದ್ದರು.

ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸಿದ ರಾಷ್ಟ್ರಪತಿಯವರು, ಭಾರತ ಮತ್ತು ಸೈಪ್ರಸ್ ದೇಶಗಳು ನಂಬಿಕೆ ಮತ್ತು ಸದ್ಭಾವನೆಯ ಆಧಾರದ ಮೇಲೆ ನಿಕಟ ಸಂಬಂಧವನ್ನು ಹಂಚಿಕೊಂಡಿವೆ ಎಂದು ಹೇಳಿದರು. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು 'ಕಾರ್ಯತಂತ್ರದ ಪಾಲುದಾರಿಕೆ'ಯ   ಮಟ್ಟಕ್ಕೆ ಏರಿಸಲಾಗಿದ್ದು, ಇದು ಭಾರತ-ಸೈಪ್ರಸ್ ಸಂಬಂಧದಲ್ಲಿ ಬೆಳೆಯುತ್ತಿರುವ ಪರಿಪಕ್ವತೆ, ಆಳ ಮತ್ತು ಪರಸ್ಪರ ನಂಬಿಕೆಯನ್ನು ತೋರಿಸುತ್ತದೆ ಪ್ರತಿಬಿಂಬಿಸುತ್ತದೆ ಎಂದರು.

ರಕ್ಷಣೆ ಮತ್ತು ಭದ್ರತೆ, ತಂತ್ರಜ್ಞಾನ, ಹಣಕಾಸು ಸೇವೆಗಳು, ಸಂಪರ್ಕ ಮತ್ತು ಕಡಲ ಸಹಕಾರದಂತಹ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವುದರೊಂದಿಗೆ, ಭಾರತ-ಸೈಪ್ರಸ್ ಸಂಬಂಧಗಳು ಹೊಸ ಹಂತವನ್ನು ಪ್ರವೇಶಿಸುತ್ತಿರುವುದಕ್ಕೆ ರಾಷ್ಟ್ರಪತಿಯವರು ಸಂತಸ ವ್ಯಕ್ತಪಡಿಸಿದರು.

ಭಾರತದಲ್ಲಿನ ವಿದೇಶಿ ನೇರ ಹೂಡಿಕೆಯ  ಪ್ರಮುಖ ಮೂಲಗಳಲ್ಲಿ ಒಂದಾಗಿ ಸೈಪ್ರಸ್ ಇಂದಿಗೂ ಮುಂಚೂಣಿಯಲ್ಲಿದೆ ಎಂದು ರಾಷ್ಟ್ರಪತಿಯವರು ತಿಳಿಸಿದರು. ಸೈಪ್ರಸ್ ನ ಕಂಪನಿಗಳು ಭಾರತದೊಂದಿಗೆ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ. ಭಾರತದ ವಿಶಾಲವಾದ ಮಾರುಕಟ್ಟೆ, ಡಿಜಿಟಲ್ ರೂಪಾಂತರ, ಮೂಲಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯಗಳು ಸೈಪ್ರಸ್ ನ ಕಂಪನಿಗಳು ಹಾಗೂ ಹೂಡಿಕೆದಾರರಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತವೆ ಎಂದರು.

ತಂತ್ರಜ್ಞಾನ ಮತ್ತು ನಾವೀನ್ಯತೆಯು ಭಾರತ ಮತ್ತು ಸೈಪ್ರಸ್ ಬಾಂಧವ್ಯದ ಅತ್ಯಂತ ಪ್ರಗತಿಪರ ಕ್ಷೇತ್ರಗಳಾಗಿ ಹೊರಹೊಮ್ಮಿವೆ ಎಂದು ರಾಷ್ಟ್ರಪತಿಯವರು ಹೇಳಿದರು. ಭಾರತದ ಯುವ ಪ್ರತಿಭೆಗಳು, ತಾಂತ್ರಿಕ ಸಾಮರ್ಥ್ಯಗಳು ಮತ್ತು ನವೋದ್ಯಮ  ಪರಿಸರ ವ್ಯವಸ್ಥೆಯು ಸೈಪ್ರಸ್ ನ ನಾವೀನ್ಯತೆ ಪರಿಸರ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಬಲ್ಲದು. ಸೆಮಿಕಂಡಕ್ಟರ್ ಗಳು, ನವೀಕರಿಸಬಹುದಾದ ಇಂಧನ, ಹಸಿರು ಇಂಧನ, ಬಾಹ್ಯಾಕಾಶ, ಸುಸ್ಥಿರ ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಅಗಾಧವಾದ ಸಾಮರ್ಥ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಯುರೋಪಿಯನ್ ಯೂನಿಯನ್ ಕೌನ್ಸಿಲ್ ನ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತ ಮತ್ತು ಯುರೋಪ್ ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವಲ್ಲಿ ಸೈಪ್ರಸ್ ಪ್ರಮುಖ ಪಾತ್ರ ವಹಿಸಬಹುದು, ವಿಶೇಷವಾಗಿ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವು) ಪೂರ್ಣಗೊಂಡ ನಂತರ ಇದು ಹೆಚ್ಚು ಸಹಕಾರಿಯಾಗಲಿದೆ ಎಂದು ರಾಷ್ಟ್ರಪತಿಯವರು ಅಭಿಪ್ರಾಯಪಟ್ಟರು.

ಗಡಿಯ ಆಚೆಗಿನ ಭಯೋತ್ಪಾದನೆ ಮತ್ತು ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆಯಂತಹ ಪ್ರಮುಖ ವಿಷಯಗಳಲ್ಲಿ ಸೈಪ್ರಸ್ ನೀಡುತ್ತಿರುವ ಬೆಂಬಲವನ್ನು ರಾಷ್ಟ್ರಪತಿಯವರು ಶ್ಲಾಘಿಸಿದರು. ಸೈಪ್ರಸ್‌ನ ಸಾರ್ವಭೌಮತ್ವ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತದ ಅಚಲವಾದ ಬೆಂಬಲವನ್ನು ಅವರು ಪುನರುಚ್ಚರಿಸಿದರು.

ಭಾರತ ಮತ್ತು ಸೈಪ್ರಸ್ ನಡುವಿನ ನಿಕಟ ಸಹಕಾರವು ನಮ್ಮ ಜನರಿಗೆ ಅಪಾರ ಪ್ರಯೋಜನಗಳನ್ನು ತರಬಲ್ಲದು ಎಂದು ಉಭಯ ನಾಯಕರು ಒಪ್ಪಿದರು.

Please click here to see the President's Speech-

 

*****


(ಪ್ರಕಟಣೆ ಐ.ಡಿ.: 2264439) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Bengali , Gujarati , Tamil