ರೈಲ್ವೇ ಸಚಿವಾಲಯ
azadi ka amrit mahotsav

ಪ್ರಯಾಣ ಮಾಡುವಾಗ ಪ್ರಯಾಣಿಕರು ಜಾಗರೂಕತೆ ಮತ್ತು ಮುನ್ನೆಚ್ಚರಿಕೆಯಿಂದಿರಲು ರೈಲ್ವೆ ಮನವಿ


ರೈಲ್ವೆಗಳನ್ನು ಗುರಿಯಾಗಿಸಿಕೊಂಡು ನಡೆಯುವ ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವ್ಯಕ್ತಿಯನ್ನು ಪರಿಶೀಲಿಸಲು ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ

ರೈಲ್ವೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಕ್ಷೇತ್ರ ಅಧಿಕಾರಿಗಳೊಂದಿಗೆ ಭದ್ರತಾ ಸಭೆ ನಡೆಸಿ ಪರಿಶೀಲಿಸಿದ ರೈಲ್ವೆ ಸಚಿವರು

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಳಮಟ್ಟದಿಂದ ಗುಪ್ತಚರ ಮಾಹಿತಿ ಸಂಗ್ರಹಣೆ ಹೆಚ್ಚಳ: ಅಶ್ವಿನಿ ವೈಷ್ಣವ್

ಪ್ರಕಟಣಾ ದಿನಾಂಕ: 21 MAY 2026 2:13PM by PIB Bengaluru

ರೈಲುಗಳು, ಪ್ರಯಾಣಿಕರು, ನಿಲ್ದಾಣದ ಆವರಣಗಳು ಮತ್ತು ವಿಶಾಲವಾದ ರೈಲ್ವೆ ಜಾಲದ ಸುರಕ್ಷತೆಯನ್ನು ಹೆಚ್ಚಿಸಲು ರೈಲ್ವೆ ಕೃತಕ ಬುದ್ಧಿಮತ್ತೆ (AI), ಡ್ರೋನ್‌ಗಳು, ಸಿಸಿಟಿವಿ ಇತ್ಯಾದಿ ಇತ್ತೀಚಿನ ತಂತ್ರಜ್ಞಾನ ಸಾಧನಗಳನ್ನು ವ್ಯಾಪಕವಾಗಿ ಬಳಕೆ ಮಾಡುತ್ತಿದೆ. ರೈಲ್ವೆ ರಕ್ಷಣಾ ಪಡೆ (ಆರ್ ಪಿ ಎಫ್) ಬೀಟ್ ಮಟ್ಟದಲ್ಲಿ ಗುಪ್ತಚರ ಸಂಗ್ರಹಣಾ ಕಾರ್ಯವಿಧಾನವನ್ನು ಬಲಪಡಿಸುವ ಮೂಲಕ ಅದನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ನವದೆಹಲಿಯಲ್ಲಿಂದು ನಡೆದ ನಿರ್ಣಾಯಕ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯಲ್ಲಿ, ರೈಲ್ವೆ ಸಚಿವಾಲಯವು ರಾಷ್ಟ್ರ ರಾಜಧಾನಿಯಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ದೇಶಾದ್ಯಂತದ ತಳಮಟ್ಟದ ಅಧಿಕಾರಿಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿತು. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಅಧ್ಯಕ್ಷತೆಯಲ್ಲಿ ರೈಲು ಭವನದಲ್ಲಿ ಸಭೆ ನಡೆಯಿತು. ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಮತ್ತು ರವನೀತ್ ಸಿಂಗ್ ಬಿಟ್ಟು, ರೈಲ್ವೆ ಮಂಡಳಿಯ ಅಧ್ಯಕ್ಷರು ಸಹ ಉಪಸ್ಥಿತರಿದ್ದರು.

ಇತ್ತೀಚಿನ ಕೆಲವು ಬೆಂಕಿ ಘಟನೆಗಳು ಸೇರಿದಂತೆ ಹಲವಾರು ಘಟನೆಗಳ ಆರಂಭಿಕ ತನಿಖೆಯ ವೇಳೆ ಸಮಾಜ ಘಾತುಕ ಶಕ್ತಿಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಸಭೆಯಲ್ಲಿ ಗಮನಿಸಲಾಯಿತು. ಭಾರತೀಯ ರೈಲ್ವೆ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಆರ್‌ಪಿಎಫ್ ಅವುಗಳನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿದೆ. ಹಲವು ಸಂದರ್ಭಗಳಲ್ಲಿ, ರೈಲ್ವೆಯ ತ್ವರಿತ ಮತ್ತು ಪೂರ್ವಭಾವಿ ಕ್ರಮವು ಪ್ರಮುಖ ಘಟನೆಗಳನ್ನು ತಪ್ಪಿಸಲು ಸಹಾಯ ಮಾಡಿದೆ. ಗುಪ್ತಚರ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ಮಾಹಿತಿಗಳನ್ನು ವೇಗವಾಗಿ ಒದಗಿಸಲು ತಂತ್ರಜ್ಞಾನವನ್ನು ಬಳಸುವುದರ ಜೊತೆಗೆ, ರೈಲ್ವೆಯು ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಮತ್ತು ನಿಲ್ದಾಣದ ಆವರಣದಲ್ಲಿ ಕಾಯುವಾಗ ಸಾಮಾಜಿಕ ಘಾತುಕ ಚಟುವಟಿಕೆಗಳನ್ನು ತಡೆಗಟ್ಟುವ ಪ್ರಯತ್ನಗಳನ್ನು ಸಕ್ರಿಯವಾಗಿ ಬೆಂಬಲಿಸಲು ಪ್ರೋತ್ಸಾಹಿಸುತ್ತದೆ ಎಂದು ಭಾವಿಸಲಾಗಿದೆ. ಆದ್ದರಿಂದ ರೈಲುಗಳಲ್ಲಿ ಪ್ರಯಾಣ ಮಾಡುವಾಗ ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಇರಬೇಕೆಂದು ಪ್ರಯಾಣಿಕರಿಗೆ ಕರೆ ನೀಡುತ್ತದೆ. ರೈಲ್ವೆ ಆವರಣದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಅನುಮಾನಾಸ್ಪದ ವ್ಯಕ್ತಿ ಕಂಡುಬಂದರೆ ತಕ್ಷಣ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬೇಕು.

ಭದ್ರತಾ ಪರಿಶೀಲನಾ ಸಭೆಯಲ್ಲಿ ನಡೆದ ಚರ್ಚೆಗಳು ಸುಧಾರಿತ ವರದಿ ವ್ಯವಸ್ಥೆಯ ಮೂಲಕ ತಳಮಟ್ಟದಿಂದ ಗುಪ್ತಚರ ಸಂಗ್ರಹಣಾ ಕಾರ್ಯವಿಧಾನಗಳನ್ನು ಬಲಪಡಿಸುವತ್ತ ಗಮನಹರಿಸಲಾಯಿತು. ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಳ ಮಾಡುವುದು, ರೈಲ್ವೆ ಜಾಲದಾದ್ಯಂತ ಸಿಸಿಟಿವಿ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ರೈಲ್ವೆ ಮಂಡಳಿಯ ಪ್ರಧಾನ ಕಚೇರಿ ಮತ್ತು ಕ್ಷೇತ್ರ ವಲಯಗಳ ನಡುವೆ ಕಾರ್ಯಾಚರಣೆಯ ಭದ್ರತಾ ಸಮನ್ವಯವನ್ನು ಸುಧಾರಿಸುವುದರ ಬಗ್ಗೆಯೂ ಒತ್ತು ನೀಡಲಾಯಿತು. ಸೈಬರ್ ಭದ್ರತೆಯನ್ನು ಬಲಪಡಿಸುವುದು, ಕ್ಯಾಮೆರಾಗಳನ್ನು ಉನ್ನತೀಕರಿಸುವುದು ಮತ್ತು ಎಐ-ಆಧಾರಿತ ಕಣ್ಗಾವಲು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ನಿಯೋಜಿಸುವ ಅಗತ್ಯತೆಯ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಯಿತು. ರೈಲ್ವೆ ಜಾಲದಾದ್ಯಂತ ಹೆಚ್ಚು ಪರಿಣಾಮಕಾರಿ ಭದ್ರತಾ ನಿರ್ವಹಣೆಗಾಗಿ ಆರ್‌ಪಿಎಫ್ ಮತ್ತು ಸರ್ಕಾರಿ ರೈಲ್ವೆ ಪೊಲೀಸರ ನಡುವೆ ಮಾಹಿತಿ-ಹಂಚಿಕೆ ಕಾರ್ಯವಿಧಾನಗಳನ್ನು ಸುಧಾರಿಸುವ ಮೂಲಕ ಸಮನ್ವಯವನ್ನು ಬಲಪಡಿಸುವತ್ತ ಸಭೆಯು ಮತ್ತಷ್ಟು ಗಮನಹರಿಸಿತು.

 

*****


(ಪ್ರಕಟಣೆ ಐ.ಡಿ.: 2263708) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Bengali-TR , Gujarati , Malayalam