ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರು ಜಂಟಿಯಾಗಿ ಭುವನೇಶ್ವರದಲ್ಲಿ ನಡೆದ ಪೂರ್ವ ಪ್ರಾದೇಶಿಕ ಕೃಷಿ ಸಮ್ಮೇಳನವನ್ನು ಉದ್ಘಾಟಿಸಿದರು


ಒಡಿಶಾದಲ್ಲಿ ನಡೆದ ಪ್ರಾದೇಶಿಕ ಕೃಷಿ ಸಮ್ಮೇಳನವು ಪೂರ್ವ ಭಾರತದ ಕೃಷಿ ಭವಿಷ್ಯವು ಕೇಂದ್ರೀಕೃತವಾಗಿ ಹಂಚಿಕೆಯ ಬೆಳವಣಿಗೆಯ ಮಾರ್ಗಸೂಚಿಯ ಕುರಿತು ಚರ್ಚಿಸಿತು

ಪೂರ್ವ ಭಾರತವು ಭಾರತದ ಕೃಷಿ ಅಭಿವೃದ್ಧಿಯ ಬೆಳವಣಿಗೆಯ ಸಕ್ರಿಯ ಯಂತ್ರವಾಗಬಹುದು: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಸಮಗ್ರ ಕೃಷಿ, ದ್ವಿದಳ ಧಾನ್ಯಗಳು-ಎಣ್ಣೆಬೀಜ ಉತ್ಪಾದನೆ ಮತ್ತು ಸುಸ್ಥಿರ ಕೃಷಿಗೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಸಿಂಗ್ ಅವರು ಒತ್ತು ನೀಡಿದರು

“ತೋಟಗಳನ್ನು ಉಳಿಸಿ, ಮಣ್ಣನ್ನು ಉಳಿಸಿ, ರೈತರನ್ನು ಉಳಿಸಿ”: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಮಣ್ಣಿನ ಆರೋಗ್ಯ ರಕ್ಷಣೆಗೆ ಕರೆ ನೀಡಿದರು

ರೈತ ಗುರುತು ಚೀಟಿ, ವೈಜ್ಞಾನಿಕ ಸಂಶೋಧನೆ ಮತ್ತು ಬಲವಾದ ಖರೀದಿ ವ್ಯವಸ್ಥೆ ಕೃಷಿ ಪರಿವರ್ತನೆಗೆ ಪ್ರಮುಖ ಆಧಾರವಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ನಕಲಿ ರಸಗೊಬ್ಬರಗಳು, ನಕಲಿ ಕೀಟನಾಶಕಗಳು ಮತ್ತು ಕಳಪೆ ಗುಣಮಟ್ಟದ ಬೀಜಗಳು ರೈತರ ವಿರುದ್ಧದ ಗಂಭೀರ ಸಮಸ್ಯೆಗಳಾಗಿವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಬೆಳೆ ವೈವಿಧ್ಯೀಕರಣ, ರಾಗಿ, ಸಾವಯವ ಕೃಷಿ ಮತ್ತು ರೈತ ಕೇಂದ್ರಿತ ಉಪಕ್ರಮಗಳನ್ನು ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರು ಉಲ್ಲೇಖಿಸಿ ವಿವರಿಸಿದರು

ಪೂರ್ವ ಪ್ರಾದೇಶಿಕ ಕೃಷಿ ಸಮ್ಮೇಳನವು ರೈತರ ಆದಾಯ, ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮತ್ತು ಕೃಷಿ ಸ್ವಾವಲಂಬನೆ ಮೇಲೆ ಕೇಂದ್ರೀಕರಿಸಿದೆ

ಪೂರ್ವ ಭಾರತದಲ್ಲಿ ರೈತರ ಸಮೃದ್ಧಿಯನ್ನು ಹೆಚ್ಚಿಸಲು ವೈವಿಧ್ಯಮಯ ಮತ್ತು ಮಾರುಕಟ್ಟೆ ಆಧಾರಿತ ಕೃಷಿಗೆ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕರೆ ನೀಡಿದರು

ಪ್ರಕಟಣಾ ದಿನಾಂಕ: 19 MAY 2026 3:57PM by PIB Bengaluru

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಭುವನೇಶ್ವರದಲ್ಲಿ ನಡೆದ ಮೇಫೇರ್ ಸಮಾವೇಶದಲ್ಲಿ ಪೂರ್ವ ಪ್ರಾದೇಶಿಕ ಕೃಷಿ ಸಮ್ಮೇಳನವನ್ನು ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಿದರು. ಪೂರ್ವ ಭಾರತದ ಕೃಷಿ ಪರಿವರ್ತನೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಈ ವಿಶೇಷ ಸಮ್ಮೇಳನವು ಒಡಿಶಾ, ಬಿಹಾರ, ಜಾರ್ಖಂಡ್, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳದ ಕೃಷಿ ಕ್ಷೇತ್ರದ ಪ್ರತಿನಿಧಿಗಳನ್ನು ಒಂದುವೇದಿಕೆಯಲ್ಲಿ ಒಟ್ಟುಗೂಡಿಸಿತು.

ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ರೈತರ ನೋಂದಣಿ, ತೋಟಗಾರಿಕೆ, ಕೃಷಿ ಸಾಲ, ಮಾರುಕಟ್ಟೆ ಸುಧಾರಣೆಗಳು, ನಕಲಿ ಕೃಷಿ ಒಳಹರಿವಿನ ಮೇಲಿನ ನಿಯಂತ್ರಣ ಮತ್ತು ರೈತರ ಆದಾಯದ ವರ್ಧನೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ಸಮ್ಮೇಳನವು ವಿಶೇಷವಾಗಿ ಗಮನಹರಿಸಿತು.

ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಸಮ್ಮೇಳನವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಆದರೆ ಪೂರ್ವ ಭಾರತದಲ್ಲಿ ಕೃಷಿ, ರೈತರ ಜೀವನೋಪಾಯ ಮತ್ತು ಪ್ರಾದೇಶಿಕ ಕೃಷಿ ಕಾರ್ಯತಂತ್ರಕ್ಕೆ ಹೊಸ ದಿಕ್ಕನ್ನು ರೂಪಿಸುವ ಗಂಭೀರ ವೇದಿಕೆಯಾಗಿದೆ ಎಂದು ಹೇಳಿದರು. ಮಹಾಪ್ರಭು ಜಗನ್ನಾಥರ ಪವಿತ್ರ ಭೂಮಿಯಲ್ಲಿ ಒಟ್ಟುಗೂಡಿದ ವಿಶೇಷ 'ಕೃಷಿ ತಂಡ'ವು ಪೂರ್ವ ಪ್ರದೇಶದಾದ್ಯಂತ ಕೃಷಿ ಪರಿಸ್ಥಿತಿಗಳನ್ನು ಸುಧಾರಿಸುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಸಂಕಲ್ಪದೊಂದಿಗೆ ಒಗ್ಗೂಡಿದೆ ಎಂದು ಅವರು ಹೇಳಿದರು.

ಪೂರ್ವ ಭಾರತದ ಫಲವತ್ತಾದ ಭೂಮಿ, ಹೇರಳವಾದ ಜಲ ಸಂಪನ್ಮೂಲಗಳು, ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳು ಮತ್ತು ಕಷ್ಟಪಟ್ಟು ದುಡಿಯುವ ರೈತರನ್ನು ಎತ್ತಿ ತೋರಿಸಿದ ಕೇಂದ್ರ ಸಚಿವರು, ಈ ಶಕ್ತಿಗಳು ಸರಿಯಾದ ಮಧ್ಯಸ್ಥಿಕೆಗಳು ಮತ್ತು ನೀತಿಗಳೊಂದಿಗೆ ಈ ಪ್ರದೇಶವನ್ನು ಭಾರತದ ಕೃಷಿ ಅಭಿವೃದ್ಧಿಯ ಬೆಳವಣಿಗೆಯ ಸಕ್ರಿಯ ಯಂತ್ರವನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು.

ರೈತರನ್ನು 'ಅನ್ನದಾತರು' ಮಾತ್ರವಲ್ಲ 'ಜೀವದಾತರು' ಕೂಡಾ ಆಗಿದ್ದಾರೆ ಸಂಭೋದಿಸಿ ಎಂದು ಕರೆದ ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು, ರೈತರಿಗೆ ಸೇವೆ ಸಲ್ಲಿಸುವುದು ದೇವರ ಸೇವೆಗೆ ಸಮಾನ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಅಭಿವೃದ್ಧಿ ಹೊಂದಿದ, ಸ್ವಾವಲಂಬಿ, ಸಮೃದ್ಧ ಮತ್ತು ಶಕ್ತಿಶಾಲಿ ರಾಷ್ಟ್ರವಾಗುವತ್ತ ಸಾಗುತ್ತಿದೆ ಮತ್ತು ಕೃಷಿ ಈ ಪ್ರಯಾಣದ ಬೆನ್ನೆಲುಬಾಗಿ ಉಳಿದಿದೆ ಎಂದು ಅವರು ಹೇಳಿದರು. ಕೃಷಿ ವಲಯಕ್ಕೆ -1) 1.4 ಶತಕೋಟಿ ನಾಗರಿಕರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು, 2) ಪೌಷ್ಟಿಕ ಆಹಾರವನ್ನು ಒದಗಿಸುವುದು ಮತ್ತು 3) ರೈತರಿಗೆ ಉತ್ತಮ ಜೀವನೋಪಾಯ ಮತ್ತು ಹೆಚ್ಚಿನ ಆದಾಯವನ್ನು ಪಡೆಯುವುದು ಎಂಬ ಮೂರು ಪ್ರಮುಖ ಆದ್ಯತೆಗಳನ್ನು ಹೊಂದಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಉತ್ಪಾದನೆಯನ್ನು ಹೆಚ್ಚಿಸುವುದು, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು, ಲಾಭದಾಯಕ ಬೆಲೆಗಳನ್ನು ಖಚಿತಪಡಿಸುವುದು, ನಷ್ಟವನ್ನು ಸರಿದೂಗಿಸುವುದು ಮತ್ತು ಕೃಷಿಯನ್ನು ವೈವಿಧ್ಯಗೊಳಿಸುವುದು ಇಂದಿನ ಪ್ರಮುಖ ಆದ್ಯತೆಗಳಾಗಿವೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ವಿಶೇಷವಾಗಿ ಪೂರ್ವ ಭಾರತದ ಈ ವಲಯಗಳಲ್ಲಿನ ಅಗಾಧ ಸಾಮರ್ಥ್ಯವನ್ನು ಪರಿಗಣಿಸಿ, ಕೃಷಿಯು ಭತ್ತ ಮತ್ತು ಗೋಧಿಗೆ ಮಾತ್ರ ಸೀಮಿತವಾಗಿರಬಾರದು ಮತ್ತು ಈಗ ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು, ಹಣ್ಣುಗಳು, ತರಕಾರಿಗಳು ಮತ್ತು ಇತರ ಹೆಚ್ಚಿನ ಮೌಲ್ಯದ ಬೆಳೆಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದರು, 

ಪೂರ್ವ ರಾಜ್ಯಗಳಲ್ಲಿನ ಸಣ್ಣ ಭೂ ಹಿಡುವಳಿಗಳ ವಾಸ್ತವತೆಯನ್ನು ಉಲ್ಲೇಖಿಸಿದ ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು, ಸಮಗ್ರ ಕೃಷಿಯು ಘೋಷಣೆಗಳನ್ನು ಮೀರಿ ಪ್ರಾಯೋಗಿಕ, ಕ್ಷೇತ್ರ ಮಟ್ಟದ ಮಾದರಿಯಾಗಬೇಕು ಎಂದು ಹೇಳಿದರು. ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಜೇನುಸಾಕಣೆ ಮತ್ತು ಕೃಷಿ-ಅರಣ್ಯಗಳೊಂದಿಗೆ ಬೆಳೆ ಕೃಷಿಯನ್ನು ಸಂಯೋಜಿಸುವುದರಿಂದ ಸಣ್ಣ ರೈತರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಅವರು ಹೇಳಿದರು. ಸಮಗ್ರ ಕೃಷಿ ಮಾದರಿಗಳನ್ನು ರೈತರಿಗೆ ಸ್ಪೂರ್ತಿದಾಯಕ ಮತ್ತು ಪ್ರಾಯೋಗಿಕ ರೀತಿಯಲ್ಲಿ ಪ್ರದರ್ಶಿಸಲಾಗಿದೆಯೆ ಎಂದು ಅವರು ಐ.ಸಿ.ಎ.ಆರ್., ರಾಜ್ಯ ಕೃಷಿ ಸಚಿವರು ಮತ್ತು ಅಧಿಕಾರಿಗಳನ್ನು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು. 

ಸುಸ್ಥಿರ ಕೃಷಿಯನ್ನು ಒತ್ತಿಹೇಳುತ್ತಾ, ಸಮತೋಲಿತ ರಸಗೊಬ್ಬರ ಬಳಕೆಯ ಮೂಲಕ ಮಣ್ಣಿನ ಆರೋಗ್ಯವನ್ನು ರಕ್ಷಿಸುವ ಮಹತ್ವವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು. ಮಣ್ಣು ಪರೀಕ್ಷೆಯಿಲ್ಲದೆ ರಸಗೊಬ್ಬರಗಳ ವಿವೇಚನಾರಹಿತ ಬಳಕೆಯು ಒಳಹರಿವಿನ ಹಾಗೂ ಕಚ್ಚಾ ವಸ್ತುಗಳ (ಇನ್ಪುಟ್) ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಗೆ ಹಾನಿ ಮಾಡುತ್ತದೆ ಎಂದು ಅವರು ತಿಳಿಸಿದರು. ರೈತರು ವೈಜ್ಞಾನಿಕ ರೀತಿಯಲ್ಲಿ ಅವಶ್ಯಕತೆಗಳ ಪ್ರಕಾರ ಮಾತ್ರ ರಸಗೊಬ್ಬರಗಳನ್ನು ಬಳಸಲು ಪ್ರೋತ್ಸಾಹಿಸುವಂತೆ ಅವರು ರಾಜ್ಯಗಳನ್ನು ಒತ್ತಾಯಿಸಿದರು. ಪ್ರಧಾನಮಂತ್ರಿಯವರ ಪ್ರಮುಖ ಗಮನ ಕ್ಷೇತ್ರವಾದ ನೈಸರ್ಗಿಕ / ಸಾವಯವ ಕೃಷಿಯನ್ನು ಉಲ್ಲೇಖಿಸಿದ ಅವರು, ರೈತರು ತಮ್ಮ ಭೂಮಿಯ ಕನಿಷ್ಠ ಒಂದು ಭಾಗದಲ್ಲಿ ನೈಸರ್ಗಿಕ / ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣಿನ ಆರೋಗ್ಯ, ಆಧುನಿಕ ತಂತ್ರಜ್ಞಾನ ಅಳವಡಿಕೆ,  ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮತ್ತು ರೈತರ ಶಿಕ್ಷಣದ ಮೇಲೆ ಕೇಂದ್ರೀಕರಿಸುವ 'ಕೃಷಿಯನ್ನು ಉಳಿಸಿ (ಖೇತ್ ಬಚಾವೋ) ಅಭಿಯಾನ'ವನ್ನು ದೇಶಾದ್ಯಂತ ಜೂನ್ 1 ರಿಂದ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ಘೋಷಿಸಿದರು. ಸಬ್ಸಿಡಿ ರಸಗೊಬ್ಬರಗಳ ಪರ್ಯಾಯ ರೀತಿಯಲ್ಲಿ ಅನ್ಯ ಕಾರಣಗಳಿಗೆ ಬಳೆಕೆಯನ್ನು ತಡೆಗಟ್ಟುವ ಮತ್ತು ಸಬ್ಸಿಡಿ ಒಳಹರಿವುಗಳನ್ನು ಕೃಷಿ ಉದ್ದೇಶಗಳಿಗಾಗಿ ಕಟ್ಟುನಿಟ್ಟಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ನಕಲಿ ರಸಗೊಬ್ಬರಗಳು, ಕಳಪೆ ಗುಣಮಟ್ಟದ ಬೀಜಗಳು ಮತ್ತು ನಕಲಿ ಕೀಟನಾಶಕಗಳು ರೈತರ ವಿರುದ್ಧದ ಗಂಭೀರ ಅಪರಾಧಗಳಾಗಿವೆ ಎಂದು ವಿವರಿಸಿದ ಕೇಂದ್ರ ಸಚಿವರು, ಅಂತಹ ಪದ್ಧತಿಗಳ ವಿರುದ್ಧ ದೊಡ್ಡ ಪ್ರಮಾಣದ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಕೃಷಿ ವೆಚ್ಚದಲ್ಲಿ ಅನಗತ್ಯ ಹೆಚ್ಚಳವಿಲ್ಲದೆ ರೈತರು ಗುಣಮಟ್ಟದ ಕೃಷಿ ಒಳಹರಿವುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಕಾನೂನುಗಳು ಮತ್ತು ರಾಜ್ಯಗಳಿಂದ ಬಲವಾದ ಕ್ರಮಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವನ್ನು ಉಲ್ಲೇಖಿಸಿದ ಶ್ರೀ ಚೌಹಾಣ್ ಅವರು, ಪೂರ್ವ ಭಾರತವು ಈ ಕೃಷಿ ವಲಯಗಳಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಖರೀದಿ ಬೆಂಬಲವನ್ನು ಖಚಿತಪಡಿಸಿಕೊಂಡಾಗ ಮಾತ್ರ ರೈತರು ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಕೃಷಿಯನ್ನು ಹೆಚ್ಚಿಸುತ್ತಾರೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಪಿಎಂ-ಆಶಾ, ಖರೀದಿ ವ್ಯವಸ್ಥೆಗಳು, ನಾಫೇಡ್, ಎನ್.ಸಿ.ಸಿ.ಎಫ್. ಮತ್ತು ರಾಜ್ಯ ಸಂಸ್ಥೆಗಳನ್ನು ಇನ್ನೂ ಉತ್ತಮ ರೀತಿಯಲ್ಲಿ ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಐ.ಸಿ.ಎ.ಆರ್., ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಇತರ ವೈಜ್ಞಾನಿಕ ಸಂಸ್ಥೆಗಳ ಮೂಲಕ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ನೇರವಾಗಿ ರೈತರ ಬಳಿಗೆ ಕೊಂಡೊಯ್ಯುವ ಬಗ್ಗೆ ಕೇಂದ್ರ ಕೃಷಿ ಸಚಿವರು ಒತ್ತಿ ಹೇಳಿದರು. ರೈತರಿಗೆ ಸಂಶೋಧನಾ ಸಂಶೋಧನೆಗಳು, ಆಧುನಿಕ ತಂತ್ರಜ್ಞಾನಗಳು ಮತ್ತು ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಸಕಾಲಿಕವಾಗಿ ಪ್ರಸಾರ ಮಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಪ್ರದೇಶ-ನಿರ್ದಿಷ್ಟ ಅಭಿಯಾನಗಳನ್ನು ಪ್ರಾರಂಭಿಸಬೇಕೆಂದು ಅವರು ಒತ್ತಾಯಿಸಿದರು.

ಸರಳ, ಪಾರದರ್ಶಕ ಮತ್ತು ವೇಗದ ರೀತಿಯಲ್ಲಿ ರೈತರಿಗೆ ಪ್ರಯೋಜನಗಳನ್ನು ತಲುಪಿಸಲು ರೈತ ಗುರುತು ಚೀಟಿ ಪರಿಣಾಮಕಾರಿ ಕಾರ್ಯವಿಧಾನವಾಗಿದೆ ಎಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಚೌಹಾಣ್ ಅವರು ಬಣ್ಣಿಸಿದರು. ರೈತ ಗುರುತು ಚೀಟಿ ರೈತರ ಭೂಮಿ, ಕುಟುಂಬ ಮತ್ತು ಇತರ ವಿವರಗಳನ್ನು ಒಂದೇ ವೇದಿಕೆಯಲ್ಲಿ ಕ್ರೋಢೀಕರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಸಾಲಗಳು, ರಸಗೊಬ್ಬರಗಳು ಮತ್ತು ಸರ್ಕಾರಿ ಯೋಜನೆಯ ಪ್ರಯೋಜನಗಳನ್ನು ಪಡೆಯುವಲ್ಲಿ ವಿಳಂಬ, ಸಮಸ್ಯೆ ಮತ್ತು ತೊಂದರೆಗಳನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ತೋಟಗಾರಿಕೆ, ಮಾವಿನಹಣ್ಣು, ರಫ್ತು ಸಾಮರ್ಥ್ಯ, ಶುದ್ಧ ನೆಡುವ ವಸ್ತು/ಪರಿಕರ/ಸಸಿಗಳು, ನರ್ಸರಿ ವ್ಯವಸ್ಥೆಗಳು ಮತ್ತು ಮಾರುಕಟ್ಟೆ ಆಧಾರಿತ ಕೃಷಿಯಂತಹ ಹೆಚ್ಚಿನ ಮೌಲ್ಯದ ಬೆಳೆಗಳ ಮಹತ್ವವನ್ನು ಅವರು ಮತ್ತಷ್ಟು ಒತ್ತಿ ಹೇಳಿದರು. ಅವರ ಪ್ರಕಾರ, ಪೂರ್ವ ಭಾರತದಲ್ಲಿ ಬೆಳೆಯುವ ಹಣ್ಣುಗಳು, ತರಕಾರಿಗಳು ಮತ್ತು ವಿಶೇಷ ಬೆಳೆಗಳು ದೇಶೀಯ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ರಫ್ತುಗಳಲ್ಲಿಯೂ ಉತ್ತಮ ಬೆಲೆಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿವೆ.

ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರು ಮಾತನಾಡುತ್ತಾ, ಪೂರ್ವ ಪ್ರಾದೇಶಿಕ ಕೃಷಿ ಸಮ್ಮೇಳನವು ಪೂರ್ವ ರಾಜ್ಯಗಳು ಕೃಷಿಯ ಭವಿಷ್ಯಕ್ಕಾಗಿ ಹಂಚಿಕೆಯ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಒಂದು ಪ್ರಮುಖ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು. ಈ ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರು ಧನ್ಯವಾದ ಅರ್ಪಿಸಿದರು ಮತ್ತು ಇದು ಪೂರ್ವ ಭಾರತದಲ್ಲಿ ಕೃಷಿ ಉತ್ಪಾದಕತೆ, ಹವಾಮಾನ-ನಿರೋಧಕ ಕೃಷಿ ಮತ್ತು ಸಮಗ್ರ ಕೃಷಿ ಅಭಿವೃದ್ಧಿಗೆ ಹೊಸ ವೇಗಗತಿಯಲ್ಲಿ ತೀವ್ರತೆಯನ್ನು ನೀಡುವುದರ ಜೊತೆಗೆ 'ಪೂರ್ವೋದಯ'ದ ದೃಷ್ಟಿಕೋನವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಒಡಿಶಾ ಮೂಲಭೂತವಾಗಿ ಕೃಷಿ ಪ್ರಧಾನ ರಾಜ್ಯವಾಗಿದ್ದು, ಕೃಷಿಯು ಜೀವನೋಪಾಯ, ಆಹಾರ ಭದ್ರತೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಮಾಝಿ ಅವರು ಹೇಳಿದರು. ಪ್ರಮುಖ ಉಪಕ್ರಮಗಳ ಸರಣಿಯ ಮೂಲಕ ಕೃಷಿಯನ್ನು ಹೆಚ್ಚು ಸಮಗ್ರ, ಹವಾಮಾನ-ನಿರೋಧಕ ಮತ್ತು ರೈತ ಕೇಂದ್ರಿತವಾಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಒಡಿಶಾ ದ್ವಿದಳ ಧಾನ್ಯಗಳ ಉತ್ಪಾದನೆ, ಖಾದ್ಯ ತೈಲ ಸ್ವಾವಲಂಬನೆ, ಬೆಳೆ ವೈವಿಧ್ಯೀಕರಣ ಮತ್ತು ಕೃಷಿ ವಿಸ್ತರಣೆಯ ಮೇಲೆ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಶ್ರೀ ಮಾಝಿ ಅವರು ಮಾಹಿತಿ ನೀಡಿದರು. ಭತ್ತದ ಉತ್ಪಾದನೆ ಮತ್ತು ಸಂಗ್ರಹಣೆಯಲ್ಲಿನ ಏರಿಕೆಯೊಂದಿಗೆ, ಸಂಗ್ರಹಣೆ, ಸ್ಥಳಾಂತರಿಸುವಿಕೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಸವಾಲುಗಳು ಸಹ ಹೊರಹೊಮ್ಮಿವೆ, ಇದು ಏಕಕಾಲದಲ್ಲಿ ಮೌಲ್ಯವರ್ಧನೆ, ನಿರ್ವಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ ಎಂದು ವಿಷಯಗಳನ್ನು ಉಲ್ಲೇಖಿಸಿ ಅವರು ಸಭಿಕರ ಗಮನಸೆಳೆದರು.

ಒಡಿಶಾದ ರೈತ ಕೇಂದ್ರಿತ ಉಪಕ್ರಮಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ಶ್ರೀ ಮಾಝಿ ಅವರು, ಭತ್ತ ಸಂಗ್ರಹಣೆ, ಒಳಹರಿವು (ಇನ್ಪುಟ್) ನೆರವು, ಪಿಎಂ-ಕಿಸಾನ್ ಜೊತೆಗೆ ಸಿಎಂ-ಕಿಸಾನ್ ನೆರವು, ಬೆಳೆ ವಿಮೆ, ಕೃಷಿ ಯಾಂತ್ರೀಕರಣ, ಎಫ್.ಪಿ.ಒ. ಬಲವರ್ಧನೆ, ಶೀತಲ ಸಂಗ್ರಹಣಾ ವಿಸ್ತರಣೆ ಮತ್ತು ಕೃಷಿ ಕೈಗಾರಿಕೆಗಳ ಉತ್ತೇಜನವನ್ನು ಕೂಡಾ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ರೈತರನ್ನು ಸುಸ್ಥಿರ ಮತ್ತು ಲಾಭದಾಯಕ ಕೃಷಿಯೊಂದಿಗೆ ಸಂಪರ್ಕಿಸಲು ನೀತಿ ಬೆಂಬಲ, ಮೂಲಸೌಕರ್ಯ, ಸಂಘಟಿತ ಮಾರುಕಟ್ಟೆ ವ್ಯವಸ್ಥೆಗಳು ಮತ್ತು ಉದ್ಯಮಶೀಲತೆ-ಚಾಲಿತ ವಿಧಾನಗಳು ಅಗತ್ಯ ಎಂದು ಅವರು ಹೇಳಿದರು.

ಸಿರಿಧಾನ್ಯಗಳನ್ನು 'ಸೂಪರ್ ಫುಡ್' ಎಂದು ಕರೆದ ಮುಖ್ಯಮಂತ್ರಿ ಶ್ರೀ ಮಾಝಿ ಅವರು, ಈ ಬೆಳೆಗಳಿಗೆ ಕಡಿಮೆ ನೀರು ಮತ್ತು ಕಡಿಮೆ ರಸಗೊಬ್ಬರಗಳು ಬೇಕಾಗುತ್ತವೆ, ಇದು ಬುಡಕಟ್ಟು ಪ್ರದೇಶಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು. ಸಾವಯವ ಕೃಷಿ, ಸಾಂಪ್ರದಾಯಿಕ ಬೆಳೆ ಪ್ರಭೇದಗಳ ಸಂರಕ್ಷಣೆ, ಜೀವವೈವಿಧ್ಯತೆಯ ಪುನರುಜ್ಜೀವನ ಮತ್ತು ಈ ಪ್ರದೇಶಗಳ ಮೇಲೆ ಕೃಷಿ ವಿಜ್ಞಾನಿಗಳು ಹೆಚ್ಚಿನ ಗಮನ ಹರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಒಡಿಶಾದ ಆದ್ಯತೆಗಳಲ್ಲಿ ಎಫ್.ಪಿ.ಒ.ಗಳನ್ನು ಬಲಪಡಿಸುವುದು, ಶೀತಲ ಸಂಗ್ರಹಣಾ ಮೂಲಸೌಕರ್ಯ, ಕೃಷಿ-ಉದ್ಯಮಶೀಲತೆ, ಕಾಫಿ ಕೃಷಿ ಮತ್ತು ಸ್ಥಳೀಯ ಕೃಷಿ ಉತ್ಪನ್ನಗಳ ಉತ್ತಮ ಮಾರುಕಟ್ಟೆ ಸೇರಿವೆ ಎಂದು ಅವರು ಹೇಳಿದರು. ಅವರ ಪ್ರಕಾರ, ಪೂರ್ವ ರಾಜ್ಯಗಳ ನಡುವೆ ಉತ್ತಮ ಅಭ್ಯಾಸಗಳು, ನಾವೀನ್ಯತೆಗಳು ಮತ್ತು ಅನುಭವಗಳ ವಿನಿಮಯವು ಸಮ್ಮೇಳನದ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿರುತ್ತದೆ ಮತ್ತು ಕೃಷಿ ಸ್ವಾವಲಂಬನೆ ಮತ್ತು ರೈತರ ಸಮೃದ್ಧಿಯ ಕಡೆಗೆ ಪ್ರಮುಖ ಮೈಲಿಗಲ್ಲಾಗಿ ಕಾರ್ಯನಿರ್ವಹಿಸುತ್ತದೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರುಗಳಾದ ಶ್ರೀ ಭಾಗೀರಥ ಚೌಧರಿ ಮತ್ತು ಶ್ರೀ ರಾಮನಾಥ್ ಠಾಕೂರ್, ಒಡಿಶಾ ಉಪಮುಖ್ಯಮಂತ್ರಿ ಮತ್ತು ಕೃಷಿ ಸಚಿವರಾದ ಶ್ರೀ ಕನಕ್ ವರ್ಧನ್ ಸಿಂಗ್ ದೇವ್, ಬಿಹಾರ ಕೃಷಿ ಸಚಿವರಾದ ಶ್ರೀ ವಿಜಯ್ ಕುಮಾರ್ ಸಿನ್ಹಾ, ಛತ್ತೀಸ್ಗಢ ಕೃಷಿ ಸಚಿವರಾದ ಶ್ರೀ ರಾಮವಿಚಾರ್ ನೇತಮ್, ಪಶ್ಚಿಮ ಬಂಗಾಳ ಸರ್ಕಾರದ ಪ್ರತಿನಿಧಿ ಡಾ. ಮಂಗಿ ಲಾಲ್ ಜಾಟ್, ಕೇಂದ್ರ ಸರ್ಕಾರದ ಮತ್ತು ರಾಜ್ಯಗಳ ಸರ್ಕಾರದ ಹಿರಿಯ ಅಧಿಕಾರಿಗಳು, ಹಾಗೂ ವಿಜ್ಞಾನಿಗಳು, ರೈತ ಪ್ರತಿನಿಧಿಗಳು, ಕೆ.ವಿ.ಕೆಗಳು, ಎಫ್.ಪಿ.ಒ.ಗಳು, ನವೋದ್ಯಮಗಳು, ನಬಾರ್ಡ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು ಮತ್ತು ಕೃಷಿ ಕ್ಷೇತ್ರದ ಪ್ರತಿನಧಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


*****


(ಪ್ರಕಟಣೆ ಐ.ಡಿ.: 2262892) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati