ರೈಲ್ವೇ ಸಚಿವಾಲಯ
ಚೆನ್ನೈ ಉಪನಗರ ರೈಲು ಜಾಲದ ಬಲವರ್ಧನೆಗೆ 993 ಕೋಟಿ ರೂ. ಅರಕ್ಕೋಣಂ-ಚೆಂಗಲ್ಪಟ್ಟು ಡಬ್ಲಿಂಗ್ ಯೋಜನೆಗೆ ಭಾರತೀಯ ರೈಲ್ವೆ ಅನುಮೋದನೆ
ಅರಕ್ಕೋಣಂ-ಚೆಂಗಲ್ಪಟ್ಟು ಡಬ್ಲಿಂಗ್ ಯೋಜನೆಯು ದಟ್ಟಣೆ ಕಡಿಮೆ ಮಾಡುತ್ತದೆ, ಪ್ರಯಾಣಿಕರ ಸಂಚಾರವನ್ನು ಸುಧಾರಿಸುತ್ತದೆ; ಜೊತೆಗೆ ಸಿಮೆಂಟ್, ವಾಹನಗಳು ಮತ್ತು ಆಹಾರ ಧಾನ್ಯಗಳ ಸಾಗಣೆಗೆ ವೇಗ ನೀಡುತ್ತದೆ: ಅಶ್ವಿನಿ ವೈಷ್ಣವ್
ಪ್ರಕಟಣಾ ದಿನಾಂಕ:
19 MAY 2026 11:05AM by PIB Bengaluru
ಭಾರತೀಯ ರೈಲ್ವೆಯು ದಕ್ಷಿಣ ರೈಲ್ವೆಯ ಅರಕೋಣಂ-ಚೆಂಗಲ್ಪಟ್ಟು ಡಬ್ಲಿಂಗ್ ಯೋಜನೆಗೆ (68 ಕಿ.ಮೀ) 993 ಕೋಟಿ ರೂ.ಗಳ ವೆಚ್ಚದಲ್ಲಿ ಅನುಮೋದನೆ ನೀಡಿದೆ. ಇದು ದೇಶಾದ್ಯಂತ ಸುರಕ್ಷಿತ, ವೇಗದ ಮತ್ತು ಹೆಚ್ಚು ಪರಿಣಾಮಕಾರಿ ರೈಲು ಸಾರಿಗೆ ಬದ್ಧತೆಯನ್ನು ಬಲಪಡಿಸಿದೆ. ಈ ವಿಭಾಗವು ಚೆನ್ನೈ ಬೀಚ್, ತಾಂಬರಂ, ಚೆಂಗಲ್ಪಟ್ಟು ಮತ್ತು ಅರಕೋಣಂ ಅನ್ನು ಸಂಪರ್ಕಿಸುವ ಪ್ರಮುಖ ಚೆನ್ನೈ ಉಪನಗರ ವೃತ್ತ ರೈಲು ಜಾಲದ ಭಾಗವಾಗಿದೆ.
ಅರಕ್ಕೋಣಂ-ಚೆಂಗಲ್ಪಟ್ಟು ಡಬ್ಲಿಂಗ್ ಯೋಜನೆಯು ಪ್ರಸ್ತುತ ಇರುವ ಚೆನ್ನೈ ಉಪನಗರ ರೈಲು ಜಾಲದ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜೊತೆಗೆ, ಸಮಯಪಾಲನೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಯೋಜನೆಯು ಕಾರಿಡಾರ್‌ನಾದ್ಯಂತ ಪ್ರಯಾಣಿಕರ ಮತ್ತು ಸರಕು ಸಾಗಣೆ ಎರಡನ್ನೂ ಬಲಪಡಿಸುತ್ತದೆ. ಸಿಮೆಂಟ್, ವಾಹನಗಳು, ಆಹಾರ ಧಾನ್ಯಗಳು, ಕಬ್ಬಿಣ ಮತ್ತು ಉಕ್ಕು ಸೇರಿದಂತೆ ಪ್ರಮುಖ ಸರಕುಗಳ ಸಾಗಣೆಗೆ ಅನೂಕೂಲಕಾರಿ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ, ಅಸ್ತಿತ್ವದಲ್ಲಿರುವ ಏಕ ಮಾರ್ಗವು ವಿಭಾಗವು ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಬರುವ ವರ್ಷಗಳಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ ಹೆಚ್ಚುವರಿ ಮೂಲಸೌಕರ್ಯ ಒದಗಿಸಬೇಕಾದ ಅಗತ್ಯವಿದೆ. ಡಬ್ಲಿಂಗ್ ಕಾಮಗಾರಿಯು ರೈಲುಗಳ ಸಂಚಾರ ಸಮಯವನ್ನು ಕಡಿಮೆ ಮಾಡಲು, ಸಮಯಪಾಲನೆಯನ್ನು ಸುಧಾರಿಸಲು ಮತ್ತು ಉಪನಗರ ಸೇವೆಗಳ ಆವರ್ತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಮಾರ್ಗವು ʻಮಹೀಂದ್ರಾ ವರ್ಲ್ಡ್ ಸಿಟಿʼ, ಶ್ರೀಪೆರಂಬದೂರು, ಒರಗಡಂ ಮತ್ತು ಇರುಂಗಟ್ಟುಕೊಟ್ಟೈ ಸೇರಿದಂತೆ ಹಲವಾರು ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕ ಒದಗಿಸುತ್ತದೆ. ಪ್ರಮುಖ ಆಟೋಮೊಬೈಲ್, ಸಿಮೆಂಟ್ ಮತ್ತು ಉತ್ಪಾದನಾ ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ. ಕಾಂಚೀಪುರಂ ಬಳಿಯ ಉದ್ದೇಶಿತ ಪರಂಡೂರು ವಿಮಾನ ನಿಲ್ದಾಣ ಯೋಜನೆಯು ಈ ಮಾರ್ಗದ ಹತ್ತಿರದಲ್ಲಿದೆ, ಇದು ಮಾರ್ಗದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಅರಕ್ಕೋಣಂ-ಚೆಂಗಲ್ಪಟ್ಟು ಡಬ್ಲಿಂಗ್ ಯೋಜನೆಗೆ ಅನುಮೋದನೆಯು ರೈಲು ಮೂಲಸೌಕರ್ಯವನ್ನು ಆಧುನೀಕರಿಸಲು, ಸಂಪರ್ಕಜಾಲ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಪ್ರಮುಖ ಕಾರಿಡಾರ್‌ಗಳಲ್ಲಿ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಭಾರತೀಯ ರೈಲ್ವೆಯ ನಿರಂತರ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯು ಉಪನಗರ ಮತ್ತು ಸರಕು ಸಾಗಣೆ ಸಂಪರ್ಕವನ್ನು ಬಲಪಡಿಸುತ್ತದೆ, ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಜೊತೆಗೆ ವೇಗದ, ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ ಸಾರಿಗೆ ಸೇವೆಗಳನ್ನು ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2262721)
ವಿಸಿಟರ್ ಕೌಂಟರ್ : 3