ಶಿಕ್ಷಣ ಸಚಿವಾಲಯ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಎನ್‌ಐಒಎಸ್ (NIOS), ರಾಜ್ಯಗಳು ಮತ್ತು ಜಿಲ್ಲಾಡಳಿತಗಳ ಸಾಮರ್ಥ್ಯವನ್ನು ಸಂಯೋಜಿಸುವ ಕಾರ್ಯತಂತ್ರವನ್ನು ಪರಿಶೀಲಿಸಿದ ಶಿಕ್ಷಣ ಸಚಿವಾಲಯ
प्रविष्टि तिथि:
16 MAY 2026 3:55PM by PIB Bengaluru
ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆಯನ್ನು, ವಿಶೇಷವಾಗಿ 14-18 ವರ್ಷ ವಯೋಮಾನದವರನ್ನು ಗುರಿಯಾಗಿಸಿಕೊಂಡು ಚರ್ಚಿಸಲು ಮತ್ತು ಪ್ರಸ್ತಾವಿತ ಹೊಸ ಎನ್‌ಐಒಎಸ್ ಉಪಕ್ರಮದ ಅನುಷ್ಠಾನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (DoSEL) ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆಯಲಾಯಿತು.
ಈ ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀಮತಿ ಪ್ರಾಚಿ ಪಾಂಡೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನ (NIOS) ಅಧ್ಯಕ್ಷರಾದ ಪ್ರೊ. ಅಖಿಲೇಶ್ ಮಿಶ್ರಾ ಮತ್ತು ಕಾರ್ಯದರ್ಶಿ ಕರ್ನಲ್ ಶಕೀಲ್ ಅಹ್ಮದ್, ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಪೈಲಟ್ ಯೋಜನೆಗಾಗಿ ಗುರುತಿಸಲಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು/ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಎನ್‌ಐಒಎಸ್ ಹಾಗೂ ರಾಜ್ಯ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಅವರು, ಶಾಲೆಯಿಂದ ಮಕ್ಕಳ ಗೈರುಹಾಜರಿ ಅಥವಾ ಡ್ರಾಪ್‌ಔಟ್‌ಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 1ನೇ ತರಗತಿಗೆ ಪ್ರವೇಶಿಸುವ ಪ್ರತಿ 100 ಮಕ್ಕಳಲ್ಲಿ ಕೇವಲ 62 ಮಕ್ಕಳು ಮಾತ್ರ 12ನೇ ತರಗತಿಯನ್ನು ತಲುಪುತ್ತಿದ್ದಾರೆ ಎಂದು ತಿಳಿಸಿದರು. ಇತ್ತೀಚಿನ ಪಿಎಲ್‌ಎಫ್‌ಎಸ್ (PLFS) ಅಂದಾಜಿನ ಪ್ರಕಾರ, 14-18 ವರ್ಷ ವಯೋಮಾನದ 2 ಕೋಟಿಗೂ ಹೆಚ್ಚು ಮಕ್ಕಳು ಪ್ರಸ್ತುತ ಶಾಲೆಯಿಂದ ಹೊರಗಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಆರ್ಥಿಕ ಅನಿವಾರ್ಯತೆಗಳು, ಕೌಟುಂಬಿಕ ಜವಾಬ್ದಾರಿಗಳು ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಸವಾಲುಗಳು ಮಕ್ಕಳು ಶಾಲಾ ವ್ಯವಸ್ಥೆಯಿಂದ ಹೊರಗುಳಿಯಲು ಪ್ರಮುಖ ಕಾರಣಗಳಾಗಿವೆ ಎಂಬುದನ್ನು ಅವರು ಗಮನಿಸಿದರು. ತುರ್ತು ಮಧ್ಯಸ್ಥಿಕೆಯನ್ನು ವಹಿಸಬೇಕಾದ ಅಗತ್ಯವನ್ನು ಒತ್ತಿಹೇಳಿದ ಶ್ರೀ ಕುಮಾರ್ ಅವರು, ಪ್ರತಿಯೊಂದು ಮಗುವಿಗೂ ಕನಿಷ್ಠ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಹಂತದವರೆಗೆ ಶಿಕ್ಷಣದ ಲಭ್ಯತೆ ಇರಬೇಕು, ಜೊತೆಗೆ ಸ್ಥಳೀಯ ಆರ್ಥಿಕ ಅವಕಾಶಗಳಿಗೆ ಅನುಗುಣವಾಗಿ ಉದ್ಯೋಗಾರ್ಹ ಕೌಶಲ್ಯಗಳನ್ನು ಒದಗಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಜೊತೆಗೆ, ಮಕ್ಕಳನ್ನು ಔಪಚಾರಿಕ ಶಿಕ್ಷಣಕ್ಕೆ ಮರಳಿ ಸೇರಿಸುವುದೇ ಮೊದಲ ಆದ್ಯತೆಯಾಗಿದ್ದರೂ, ನಿಯಮಿತ ಶಾಲೆಗಳಿಗೆ ಮರಳಲು ಸಾಧ್ಯವಾಗದ ಮಕ್ಕಳನ್ನು ಮುಕ್ತ ಮತ್ತು ದೂರದ ಶಿಕ್ಷಣ (ODL) ವ್ಯವಸ್ಥೆಯ ಮೂಲಕ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಮತ್ತು ರಾಜ್ಯ ಮುಕ್ತ ಶಾಲೆಗಳಂತಹ ಸುಲಭ ಕಲಿಕಾ ಮಾರ್ಗಗಳಿಗೆ ಜೋಡಿಸಬೇಕು ಎಂದೂ ಅವರು ಹೇಳಿದರು. ತಳಮಟ್ಟದಲ್ಲಿ ಈ ಉಪಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಇದನ್ನು ರಾಷ್ಟ್ರವ್ಯಾಪಿ ಅಭಿಯಾನವಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಡಳಿತಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ಶ್ರೀ ಕುಮಾರ್ ಅವರು ಒತ್ತಿಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀಮತಿ ಪ್ರಾಚಿ ಪಾಂಡೆ ಅವರು ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆಯನ್ನು ಮಿಷನ್ ಮೋಡ್‌ನಲ್ಲಿ ಪರಿಹರಿಸಲಾಗುತ್ತಿದೆ ಮತ್ತು ಪ್ರಸ್ತಾವಿತ ಉಪಕ್ರಮವು ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಲು ದತ್ತಾಂಶ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲಿದೆ ಎಂದು ತಿಳಿಸಿದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪರಿಣಾಮಕಾರಿಯಾಗಿ ಗುರುತಿಸಲು, ದಾಖಲಿಸಲು ಮತ್ತು ಅವರು ಶಿಕ್ಷಣವನ್ನು ಮುಂದುವರಿಸುವಂತೆ ನೋಡಿಕೊಳ್ಳಲು ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಈ ಉಪಕ್ರಮದ ಅಧಿಕೃತ ಚಾಲನೆಗೆ ಮುನ್ನ ಎನ್‌ಐಒಎಸ್ ಸಂಯೋಜಕರ (Facilitators) ದಾಖಲಾತಿ, ಸ್ಟಾರ್ಟರ್ ಕಿಟ್‌ಗಳ ವಿತರಣೆ, ಪ್ರಾಥಮಿಕ ಸಮೀಕ್ಷೆಗಳು ಮತ್ತು ಮಕ್ಕಳ ಆರಂಭಿಕ ದಾಖಲಾತಿ ಸೇರಿದಂತೆ ಪೂರ್ವಸಿದ್ಧತಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು.

ಎನ್‌ಐಒಎಸ್ ಅಧ್ಯಕ್ಷರಾದ ಪ್ರೊ. ಅಖಿಲೇಶ್ ಮಿಶ್ರಾ ಅವರು ಮಾತನಾಡಿ, ಶಿಕ್ಷಣವು ಭರವಸೆ, ಘನತೆ ಮತ್ತು ಅವಕಾಶವನ್ನು ಪ್ರತಿನಿಧಿಸುತ್ತದೆ. ಆದರೆ ಶಿಕ್ಷಣ ವ್ಯವಸ್ಥೆಯಿಂದ ಸಂಪರ್ಕ ಕಡಿತಗೊಂಡಿರುವ ಮಕ್ಕಳನ್ನು ತಲುಪುವುದೇ ನಮ್ಮ ಮುಂದಿರುವ ಪ್ರಮುಖ ಸವಾಲಾಗಿದೆ ಎಂದರು. ಈ ಉಪಕ್ರಮವನ್ನು ಶೈಕ್ಷಣಿಕ ಒಳಗೊಳ್ಳುವಿಕೆಗಾಗಿ ರೂಪಿಸಲಾದ ಒಂದು ಜನ ಆಂದೋಲನ ಎಂದು ಬಣ್ಣಿಸಿದ ಅವರು, ಹೊಂದಿಕೊಳ್ಳುವ ಮತ್ತು ಒಳಗೊಳ್ಳುವ ಶೈಕ್ಷಣಿಕ ಮಾರ್ಗಗಳ ಮೂಲಕ ಮಕ್ಕಳು ಮತ್ತು ಯುವಕರನ್ನು ಕಲಿಕೆಯ ಅವಕಾಶಗಳೊಂದಿಗೆ ಮರುಸಂಪರ್ಕಿಸುವ ಗುರಿಯನ್ನು ಇದು ಹೊಂದಿದೆ ಎಂದು ಹೇಳಿದರು.
ಎನ್‌ಐಒಎಸ್ ಕಾರ್ಯದರ್ಶಿ ಕರ್ನಲ್ ಶಕೀಲ್ ಅಹ್ಮದ್ ಅವರು ಉಪಕ್ರಮದ ಕಾರ್ಯಾಚರಣೆಯ ಚೌಕಟ್ಟಿನ ಕುರಿತು ವಿವರವಾದ ಪ್ರಸ್ತುತಿಯನ್ನು (Presentation) ನೀಡಿದರು. ಈ ಪ್ರಸ್ತುತಿಯು ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವಿಕೆ ಮತ್ತು ವರ್ಗೀಕರಣ, ಎನ್‌ಐಒಎಸ್ ಸಂಯೋಜಕರ ನಿಯೋಜನೆ, ಆ್ಯಪ್ ಆಧಾರಿತ ಮ್ಯಾಪಿಂಗ್ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳು, ಪ್ರೋತ್ಸಾಹಕ ಕ್ರಮಗಳು, ಜಿಲ್ಲಾ ಮಟ್ಟದ ಸಮನ್ವಯ ಕಾರ್ಯತಂತ್ರಗಳು ಮತ್ತು ಹಂತ-ಹಂತದ ಅನುಷ್ಠಾನ ಯೋಜನೆಗಳನ್ನು ಒಳಗೊಂಡಿತ್ತು.

ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿರುವ ಪ್ರಾಯೋಗಿಕ (ಪೈಲಟ್) ಜಿಲ್ಲೆಗಳನ್ನು ಈ ಉಪಕ್ರಮದ ಆರಂಭಿಕ ಅನುಷ್ಠಾನಕ್ಕಾಗಿ ಗುರುತಿಸಲಾಗಿದೆ. ಇವುಗಳಲ್ಲಿ ಒಡಿಶಾ, ಮಹಾರಾಷ್ಟ್ರ, ಛತ್ತೀಸ್‌ಗಢ, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ ಮತ್ತು ದೆಹಲಿಯ ಜಿಲ್ಲೆಗಳು ಸೇರಿವೆ. ಮೊದಲ ಹಂತದಲ್ಲಿ ಈ ಹೊಸ ಉಪಕ್ರಮವನ್ನು ದೇಶದ 10 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಇದರ ಅನುಷ್ಠಾನವನ್ನು ಸುಗಮಗೊಳಿಸಲು ಭಾಗವಹಿಸುವ ರಾಜ್ಯಗಳೊಂದಿಗೆ ಬದ್ಧತೆಯ ಜ್ಞಾಪಕ ಪತ್ರಗಳಿಗೆ (MoCs) ಸಹಿ ಹಾಕಲಾಗುವುದು. ಈ ಜಿಲ್ಲೆಗಳಿಂದ ಪಡೆಯುವ ಅನುಭವಗಳ ಆಧಾರದ ಮೇಲೆ, ಕಾರ್ಯಕ್ರಮವನ್ನು ತದನಂತರ ದೇಶಾದ್ಯಂತ ವಿಸ್ತರಿಸಲಾಗುವುದು.
ಭಾಗವಹಿಸಿದ್ದ ರಾಜ್ಯಗಳು ಮತ್ತು ಜಿಲ್ಲಾಡಳಿತಗಳು ಈ ಉಪಕ್ರಮದ ಯಶಸ್ವಿ ಅನುಷ್ಠಾನಕ್ಕೆ ತಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲದ ಭರವಸೆ ನೀಡಿದವು. ಈ ವ್ಯವಸ್ಥೆ ಹಾಗೂ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಮತ್ತಷ್ಟು ಬಲಪಡಿಸಲು ಸಂಬಂಧಿತ ದತ್ತಾಂಶಗಳನ್ನು ಹಂಚಿಕೊಳ್ಳಲು ಮತ್ತು ಸಲಹೆಗಳನ್ನು ನೀಡಲು ರಾಜ್ಯಗಳಿಗೆ ವಿನಂತಿಸಲಾಯಿತು.
ಯಾವುದೇ ಮಗು ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಮತ್ತು ಎಲ್ಲಾ ಮಕ್ಕಳಿಗೂ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಘನತೆಯ ಭವಿಷ್ಯಕ್ಕಾಗಿ ಅವಕಾಶಗಳನ್ನು ಒದಗಿಸುವ ಸಾಮೂಹಿಕ ಸಂಕಲ್ಪದೊಂದಿಗೆ ಸಭೆಯು ಮುಕ್ತಾಯಗೊಂಡಿತು.
*****
(रिलीज़ आईडी: 2261998)
आगंतुक पटल : 58