ಪರಿಸರ ಮತ್ತು ಅರಣ್ಯ ಸಚಿವಾಲಯ
ದೇಶಾದ್ಯಂತ 5 ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಿರುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ; ಭಾರತದಲ್ಲಿ ಕಂಡುಬರುವ ಪ್ರತಿಯೊಂದು ಕಾಡು ಬೆಕ್ಕು ಪ್ರಭೇದಗಳಿಗೆ ಕಾರ್ಯಕ್ರಮ ಸಮರ್ಪಣೆ
ಐಬಿಸಿಎ ಶೃಂಗಸಭೆ-2026ರ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ಆಯೋಜನೆ; ಕಾಡುಬೆಕ್ಕುಗಳ ಸಂರಕ್ಷಣಾ ಸಾಧನೆಗಳು, ಸವಾಲುಗಳು ಮತ್ತು ಸಹಭಾಗಿತ್ವದಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವಾರು ಕ್ರಮಗಳನ್ನು ಈ ಕಾರ್ಯಕ್ರಮ ಪ್ರದರ್ಶಿಸಲಿದೆ
ಪ್ರಕಟಣಾ ದಿನಾಂಕ:
13 MAY 2026 11:08AM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್‌ಸಿಸಿ)ವು ಕಾಡು ಬೆಕ್ಕು (ಹುಲಿ, ಸಿಂಹ, ಚಿರತೆ, ಜಾಗ್ವಾರ್ ಮತ್ತು ಹಿಮ ಚಿರತೆ, ಕಿರುಬದಂತಹ ದೊಡ್ಡ ಬೆಕ್ಕುಗಳ ಪ್ರಭೇದ)ಗಳ ಸಂರಕ್ಷಣೆಯಲ್ಲಿ ಭಾರತದ ನಾಯಕತ್ವವನ್ನು ಮತ್ತು ಅಂತಾರಾಷ್ಟ್ರೀಯ ಕಾಡುಬೆಕ್ಕು ಒಕ್ಕೂಟದ (ಐಬಿಸಿಎ) ಉದ್ದೇಶಗಳನ್ನು ಉತ್ತೇಜಿಸಲು ದೇಶಾದ್ಯಂತ ವಿಷಯಾಧಾರಿತ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಲಿದೆ.
ಈ ಕಾರ್ಯಕ್ರಮಗಳು ಭಾರತದ 5 ಕಾಡುಬೆಕ್ಕು ಪ್ರಭೇದಗಳಾದ ಹುಲಿ, ಏಷ್ಯಾ ಸಿಂಹ, ಚಿರತೆ, ಹಿಮ ಚಿರತೆ ಮತ್ತು ಕಿರುಬ ಸಂತತಿಯ ಸಂರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸಲಿದ್ದು, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಂರಕ್ಷಣಾ ಸಾಧನೆಗಳು, ಸವಾಲುಗಳು ಮತ್ತು ಸಹಭಾಗಿತ್ವದಲ್ಲಿ ಕೈಗೊಂಡಿರುವ ಹಲವಾರು ಕ್ರಮಗಳನ್ನು ಪ್ರದರ್ಶಿಸಲಿವೆ.
ವಿಷಯಾಧಾರಿತ ಕಾರ್ಯಕ್ರಮಗಳನ್ನು ಈ ಕೆಳಗಿನ ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ:
- ಏಷ್ಯಾ ಸಿಂಹ ಸಂರಕ್ಷಣಾ ಕಾರ್ಯಕ್ರಮ - ಗಿರ್, ಗುಜರಾತ್
- ಚಿರತೆ ಸಂರಕ್ಷಣಾ ಕಾರ್ಯಕ್ರಮ - ಭೋಪಾಲ್, ಮಧ್ಯಪ್ರದೇಶ
- ಚಿರತೆ ಸಂರಕ್ಷಣೆ ಮತ್ತು ಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನಾಚರಣೆ - ಭುವನೇಶ್ವರ, ಒಡಿಶಾ
- ಹಿಮ ಚಿರತೆ ಸಂರಕ್ಷಣಾ ಕಾರ್ಯಕ್ರಮ - ಗ್ಯಾಂಗ್ಟಾಕ್, ಸಿಕ್ಕಿಂ
- ಹುಲಿ ಸಂರಕ್ಷಣಾ ಕಾರ್ಯಕ್ರಮ - ಚಂದ್ರಾಪುರ, ಮಹಾರಾಷ್ಟ್ರ
ಶೃಂಗಸಭೆಗೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮಗಳನ್ನು ಜಾಗೃತಿ ಮೂಡಿಸಲು, ಪಾಲುದಾರರ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಮತ್ತು ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳ ಅಡಿ ಭಾರತದ ಸಂರಕ್ಷಣಾ ಯಶೋಗಾಥೆಗಳನ್ನು ಆಯೋಜಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ಪಷ್ಟ ಕರೆಯ ಮೇರೆಗೆ ಭಾರತದ ನಾಯಕತ್ವದಲ್ಲಿ ಐಬಿಸಿಎ ಸ್ಥಾಪನೆಗೆ ಇವು ಹೇಗೆ ಕಾರಣವಾಗಿವೆ ಎಂಬುದನ್ನು ತೋರಿಸಲು ಈ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ.
ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಆಗಿರುವ ಪ್ರಮುಖ ಸಂರಕ್ಷಣಾ ಉಪಕ್ರಮಗಳು
ಏಷ್ಯಾ ಸಿಂಹ ಸಂರಕ್ಷಣೆ - ಗಿರ್, ಗುಜರಾತ್
ವಿಷಯ: ಭಾರತದ ವಿಶಿಷ್ಟ ಸಂರಕ್ಷಣಾ ಯಶಸ್ಸು
ಏಷ್ಯಾ ಸಿಂಹವು ಭಾರತದಲ್ಲಿ ಮಾತ್ರ ಉಳಿದುಕೊಂಡಿದೆ, ವಿಶ್ವದ ಅತ್ಯಂತ ಯಶಸ್ವಿ ಪ್ರಭೇದಗಳ ಚೇತರಿಕೆ ಕಾರ್ಯಕ್ರಮಗಳಲ್ಲಿ ಒಂದನ್ನು ಇದು ಪ್ರತಿನಿಧಿಸುತ್ತದೆ.
ತೆಗೆದುಕೊಂಡ ಪ್ರಮುಖ ಕ್ರಮಗಳು:
- ದೀರ್ಘಕಾಲೀನ ಸಂರಕ್ಷಣೆ ಮತ್ತು ಆವಾಸಸ್ಥಾನ ವಿಸ್ತರಣೆಗಾಗಿ ಪ್ರಾಜೆಕ್ಟ್ ಲಯನ್ ಅನುಷ್ಠಾನ.
- ವೈಜ್ಞಾನಿಕ ಜನಸಂಖ್ಯಾ ಮೇಲ್ವಿಚಾರಣೆ ಮತ್ತು ರೋಗ ಕಣ್ಗಾವಲು ವ್ಯವಸ್ಥೆಗಳು.
- ಗ್ರೇಟರ್ ಗಿರ್ ಭೂದೃಶ್ಯದಲ್ಲಿ ಆವಾಸಸ್ಥಾನ ಸುಧಾರಣೆ ಮತ್ತು ಬೇಟೆಯ ವೃದ್ಧಿ.
- ಗಿರ್ ಸಂರಕ್ಷಿತ ಪ್ರದೇಶವನ್ನು ಮೀರಿ ಸುತ್ತಮುತ್ತಲ ಭೂದೃಶ್ಯಗಳಿಗೆ ಸಿಂಹ ವಿತರಣೆಯ ವಿಸ್ತರಣೆ.
- ಸಂಘರ್ಷ ತಗ್ಗಿಸುವಿಕೆಗಾಗಿ ರಕ್ಷಣಾ ಮತ್ತು ತ್ವರಿತ ಸ್ಪಂದನಾ ತಂಡಗಳು.
- ಪ್ರಭೇದಗಳ ಸಂರಕ್ಷಣೆಯಲ್ಲಿ ಮಾಲ್ಧಾರಿಗಳಂತಹ ಸಮುದಾಯಗಳ ಪಾತ್ರ
- ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಜಾನುವಾರು ಪರಿಹಾರ ಕಾರ್ಯವಿಧಾನಗಳಿಗಾಗಿ ಗುಜರಾತ್ ಸರ್ಕಾರದ ಉಪಕ್ರಮಗಳು.
2. ಹುಲಿ ಸಂರಕ್ಷಣೆ - ಚಂದ್ರಾಪುರ, ಮಹಾರಾಷ್ಟ್ರ
ವಿಷಯ: ಮಹತ್ವಾಕಾಂಕ್ಷೆಯ ಭಾರತದ ಅರಣ್ಯ ಸಂರಕ್ಷಣೆ
ವಿಶ್ವದ ಕಾಡು ಹುಲಿಗಳ ಸಂಖ್ಯೆಯ 70%ಗಿಂತ ಹೆಚ್ಚಿನ ಪ್ರಭೇದಕ್ಕೆ ಭಾರತ ನೆಲೆಯಾಗಿದೆ. ಪ್ರಾಜೆಕ್ಟ್ ಟೈಗರ್ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಅಡಿ, ನಿರಂತರ ಪ್ರಯತ್ನಗಳ ಮೂಲಕ ಹುಲಿ ಸಂರಕ್ಷಣೆಯಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.
ಕೈಗೊಂಡ ಪ್ರಮುಖ ಕ್ರಮಗಳು:
- ದೇಶಾದ್ಯಂತ ಹುಲಿ ಮೀಸಲು ಪ್ರದೇಶಗಳನ್ನು ಬಲಪಡಿಸುವುದು ಮತ್ತು ವಿಸ್ತರಿಸುವುದು.
- ಭೂದೃಶ್ಯ ಮಟ್ಟದ ಸಂರಕ್ಷಣೆ ಮತ್ತು ವನ್ಯಜೀವಿ ಕಾರಿಡಾರ್ ರಕ್ಷಣೆ.
- ಕ್ಯಾಮೆರಾ ಟ್ರ್ಯಾಪಿಂಗ್, ಹುಲಿಗಳ ಮೇಲ್ವಿಚಾರಣಾ ವ್ಯವಸ್ಥೆ: ಗಾಢ ರಕ್ಷಣೆ ಮತ್ತು ಪರಿಸರ ಸ್ಥಿತಿ (ಎಂ-ಸ್ಟ್ರೈಪ್ಸ್) ಮತ್ತು ಎಐ-ಬೆಂಬಲಿತ ಮೇಲ್ವಿಚಾರಣಾ ವ್ಯವಸ್ಥೆಗಳು ಸೇರಿದಂತೆ ಆಧುನಿಕ ತಂತ್ರಜ್ಞಾನದ ಬಳಕೆ.
- ಬೇಟೆ ಪ್ರತಿಬಂಧಕ ಮೂಲಸೌಕರ್ಯ ಮತ್ತು ವಿಶೇಷ ಹುಲಿ ರಕ್ಷಣಾ ಪಡೆ ನಿಯೋಜನೆಯನ್ನು ಹೆಚ್ಚಿಸಲಾಗಿದೆ.
- ಪ್ರಮುಖ ಆವಾಸಸ್ಥಾನಗಳಿಂದ ಸ್ವಯಂಪ್ರೇರಿತ ಗ್ರಾಮ ಸ್ಥಳಾಂತರ.
- ಹುಲಿ ಮೀಸಲು ಪ್ರದೇಶಗಳ ಸುತ್ತಲಿನ ಸಮುದಾಯ ಭಾಗವಹಿಸುವಿಕೆ ಮತ್ತು ಪರಿಸರ-ಅಭಿವೃದ್ಧಿ ಉಪಕ್ರಮಗಳು.
- ಸಮುದಾಯಗಳಿಗೆ ವನ್ಯಜೀವಿ ಪ್ರವಾಸೋದ್ಯಮ ಮತ್ತು ಜೀವನೋಪಾಯ ಉತ್ತೇಜಿಸುವುದು
- ಚಂದ್ರಾಪುರ ಸೇರಿದಂತೆ ವಿದರ್ಭ ಪ್ರದೇಶದಲ್ಲಿ ಸಂಪರ್ಕ ಸುಧಾರಿಸಲು ಮತ್ತು ಮಾನವ-ಹುಲಿ ಸಂಘರ್ಷ ಕಡಿಮೆ ಮಾಡಲು ಮಹಾರಾಷ್ಟ್ರದ ಕೇಂದ್ರೀಕೃತ ಪ್ರಯತ್ನಗಳು.
ಚಂದ್ರಾಪುರ ಕಾರ್ಯಕ್ರಮದಿಂದ ಭಾರತದ ಹುಲಿಗಳ ಸಂಖ್ಯೆ ಗಮನಾರ್ಹ ಚೇತರಿಕೆ ಕಂಡುಬಂದಿದೆ. ಜತೆಗೆ, ಆವಾಸಸ್ಥಾನಗಳು ಮತ್ತು ಅರಣ್ಯ ಪ್ರದೇಶಗಳನ್ನು ಸುರಕ್ಷಿತಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.
ಚಿರತೆ ಸಂರಕ್ಷಣೆ ಮತ್ತು ಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ - ಭುವನೇಶ್ವರ, ಒಡಿಶಾ
ವಿಷಯ: ಮಾನವ ಪ್ರಾಬಲ್ಯದ ಪ್ರದೇಶಗಳಲ್ಲಿ ಸಹಬಾಳ್ವೆ
ಚಿರತೆಗಳು ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಹರಡಿರುವ ದೊಡ್ಡ ಕಾಡುಬೆಕ್ಕುಗಳ ಪ್ರಭೇದಕ್ಕೆ ಸೇರಿವೆ, ಅವು ಹೆಚ್ಚಾಗಿ ಮಾನವ ನೆಲೆಸಿರುವ ಸ್ಥಗಳಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ.
ಕೈಗೊಂಡಿರುವ ಪ್ರಮುಖ ಕ್ರಮಗಳು:
- ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವ ಕಾರ್ಯಕ್ರಮಗಳು ಮತ್ತು ಕ್ಷಿಪ್ರ ಸ್ಪಂದನಾ ತಂಡಗಳು.
- ರಕ್ಷಣೆ ಮತ್ತು ಪುನರ್ವಸತಿ ಮೂಲಸೌಕರ್ಯ ಬಲಪಡಿಸುವುದು.
- ಸಹಬಾಳ್ವೆ ಉತ್ತೇಜಿಸುವ ಸಾರ್ವಜನಿಕ ಜಾಗೃತಿ ಅಭಿಯಾನಗಳು.
- ಮುಂಚೂಣಿಯ ಅರಣ್ಯ ಸಿಬ್ಬಂದಿಗೆ ಸಾಮರ್ಥ್ಯ ವೃದ್ಧಿ.
- ಸಂಘರ್ಷ ಪೀಡಿತ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನದ ಬಳಕೆ.
- ಒಡಿಶಾದ ಜೀವವೈವಿಧ್ಯ ಸಂರಕ್ಷಣಾ ಉಪಕ್ರಮಗಳು ಪರಿಸರ ವ್ಯವಸ್ಥೆಯ ಮರುಸ್ಥಾಪನೆ ಮತ್ತು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಸಂಬಂಧ ಹೊಂದಿವೆ.
ಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನಾಚರಣೆಯೊಂದಿಗೆ ಭುವನೇಶ್ವರದಲ್ಲಿ ನಡೆಯುವ ಈ ಕಾರ್ಯಕ್ರಮವು, ಮಾನವ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಒತ್ತು ನೀಡುತ್ತದೆ.
ಹಿಮ ಚಿರತೆ ಸಂರಕ್ಷಣೆ - ಗ್ಯಾಂಗ್ಟಾಕ್, ಸಿಕ್ಕಿಂ
ವಿಷಯ: ಹಿಮಾಲಯದ ಕಾವಲುಗಾರ
ಹಿಮ ಚಿರತೆಗಳು ಹಿಮಾಲಯ ಪರಿಸರ ವ್ಯವಸ್ಥೆಯ ಪರಿಸರ ಆರೋಗ್ಯದ ಸೂಚಕಗಳಾಗಿವೆ, ಇವು ಹವಾಮಾನ ಬದಲಾವಣೆ ಮತ್ತು ಆವಾಸಸ್ಥಾನ ಅವನತಿಯಿಂದ ಬೆದರಿಕೆಗಳನ್ನು ಎದುರಿಸುತ್ತಿವೆ.
ಕೈಗೊಂಡಿರುವ ಪ್ರಮುಖ ಕ್ರಮಗಳು:
- ಭಾರತದಲ್ಲಿ ಹಿಮ ಚಿರತೆಗಳ ಸಂಖ್ಯಾ ಮೌಲ್ಯಮಾಪನ(ಎಸ್ಪಿಎಐ) ಕಾರ್ಯಕ್ರಮ ಅನುಷ್ಠಾನ.
- ಸ್ಥಳೀಯ ಹಿಮಾಲಯದ ಸಮುದಾಯಗಳನ್ನು ಒಳಗೊಂಡ ಸಮುದಾಯ ಆಧಾರಿತ ಸಂರಕ್ಷಣೆ.
- ಸುಸ್ಥಿರ ಜೀವನೋಪಾಯ ಮತ್ತು ಪರಿಸರ ಪ್ರವಾಸೋದ್ಯಮದ ಉತ್ತೇಜನ
- ಎತ್ತರದ ಆವಾಸಸ್ಥಾನಗಳು ಮತ್ತು ಬೇಟೆಯ ಪ್ರಭೇದಗಳ ಸಂರಕ್ಷಣೆ.
- ಹಿಮಾಲಯ ಪ್ರದೇಶದಲ್ಲಿ ಹವಾಮಾನ-ಚೇತರಿಕೆಯ ಸಂರಕ್ಷಣಾ ಯೋಜನೆ.
- ಗಡಿಯಾಚೆಗಿನ ಸಂರಕ್ಷಣಾ ಉಪಕ್ರಮಗಳಿಗಾಗಿ ಹಿಮಾಲಯ ರಾಜ್ಯಗಳೊಂದಿಗೆ ಸಹಭಾಗಿತ್ವ.
ಗ್ಯಾಂಗ್ಟಾಕ್ ಕಾರ್ಯಕ್ರಮವು ದುರ್ಬಲವಾದ ಪರ್ವತ ಪರಿಸರ ವ್ಯವಸ್ಥೆಗಳ ಸಂರಕ್ಷಣೆ ಮತ್ತು ಹಿಮ ಚಿರತೆಗಳನ್ನು ರಕ್ಷಿಸುವಲ್ಲಿ ಸ್ಥಳೀಯ ಸಮುದಾಯಗಳ ಪಾತ್ರದ ಮೇಲೆ ಗಮನ ಕೇಂದ್ರೀಕರಿಸುತ್ತದೆ.
ಚಿರತೆ ಸಂರಕ್ಷಣೆ – ಭೋಪಾಲ್, ಮಧ್ಯಪ್ರದೇಶ
ವಿಷಯ: ಭಾರತದ ಹುಲ್ಲುಗಾವಲು ಪ್ರದೇಶಗಳನ್ನು ಮರುಸ್ಥಾಪಿಸುವುದು
ಪ್ರಾಜೆಕ್ಟ್ ಚೀತಾ ಅಡಿ, ದೊಡ್ಡ ಮಾಂಸಾಹಾರಿ ಪ್ರಾಣಿಗಳಿಗಾಗಿ ಭಾರತವು ವಿಶ್ವದ ಮೊದಲ ಅಂತರಖಂಡ ಸ್ಥಳಾಂತರ ಯೋಜನೆ ಆರಂಭಿಸಿದೆ.
ಕೈಗೊಂಡಿರುವ ಪ್ರಮುಖ ಕ್ರಮಗಳು:
- ಮಧ್ಯಪ್ರದೇಶದಲ್ಲಿ ಸೂಕ್ತವಾದ ಆವಾಸಸ್ಥಾನಗಳಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಚಿರತೆಗಳನ್ನು ಮರುಪರಿಚಯಿಸುವುದು.
- ಬೇಟೆಯ ನೆಲೆ ಮತ್ತು ಹುಲ್ಲುಗಾವಲು ಪ್ರದೇಶಗಳ ಅಭಿವೃದ್ಧಿ.
- ಉಪಗ್ರಹ ಕಾಲರ್‌ಗಳು ಮತ್ತು ತಜ್ಞ ನಿರ್ವಹಣಾ ವ್ಯವಸ್ಥೆಗಳ ಮೂಲಕ ವೈಜ್ಞಾನಿಕ ಮೇಲ್ವಿಚಾರಣೆ.
- ಕ್ಷೇತ್ರ ಸಿಬ್ಬಂದಿ ಮತ್ತು ಪಶುವೈದ್ಯಕೀಯ ತಂಡಗಳ ಸಾಮರ್ಥ್ಯ ವೃದ್ಧಿ.
- ದೀರ್ಘಕಾಲೀನ ಆವಾಸಸ್ಥಾನ ನಿರ್ವಹಣೆ ಮತ್ತು ವಿಸ್ತರಣಾ ಯೋಜನೆ.
- ಪ್ರಾಣಿಗಳ ಬಿಡುಗಡೆ ಪ್ರದೇಶಗಳ ಸುತ್ತ ಸಮುದಾಯ ಸಂಪರ್ಕ ಬಲಪಡಿಸುವುದು.
ಭೋಪಾಲ್ ಕಾರ್ಯಕ್ರಮವು ಚಿರತೆಗಳನ್ನು ಪುನಃಸ್ಥಾಪಿಸಲು ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ಪುನರುಜ್ಜೀವನಗೊಳಿಸಲು ಭಾರತ ಕೈಗೊಂಡಿರುವ ಪ್ರವರ್ತಕ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.
ಅಂತಾರಾಷ್ಟ್ರೀಯ ಕಾಡುಬೆಕ್ಕುಗಳ ಒಕ್ಕೂಟ (ಐಬಿಸಿಎ)
ಭಾರತ ಆರಂಭಿಸಿರುವ ಅಂತಾರಾಷ್ಟ್ರೀಯ ಕಾಡುಬೆಕ್ಕು ಒಕ್ಕೂಟ (ಐಬಿಸಿಎ)ವು, ವಿಶ್ವಾದ್ಯಂತ 7 ಪ್ರಮುಖ ಕಾಡುಬೆಕ್ಕು ಪ್ರಭೇದಗಳ ಸಂರಕ್ಷಣೆಗಾಗಿ ಜಾಗತಿಕ ಸಹಕಾರ ಬಲಪಡಿಸುವ ಗುರಿ ಹೊಂದಿದೆ. ವಿಷಯಾಧಾರಿತ ಕಾರ್ಯಕ್ರಮಗಳು ಈ ಕೆಳಗಿನವುಗಳಿಗೆ ವೇದಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ:
- ಕಾಡುಬೆಕ್ಕು ಸಂರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸುವ ಈ ರೀತಿಯ ಮೊದಲ ಜಾಗತಿಕ ಶೃಂಗಸಭೆಯ ಮೇಲೆ ಬೆಳಕು ಚೆಲ್ಲುವುದು
- ಜಾಗತಿಕ ಸಹಭಾಗಿತ್ವ ಉತ್ತೇಜಿಸುವುದು
- ಸಂರಕ್ಷಣಾ ಜ್ಞಾನ ವಿನಿಮಯ ಮಾಡಿಕೊಳ್ಳುವುದು
- ನೀತಿ ಉಪಕ್ರಮಗಳ ಮೇಲೆ ಬೆಳಕು ಚೆಲ್ಲುವುದು
- ಸಾರ್ವಜನಿಕ ಜಾಗೃತಿ ಹೆಚ್ಚಿಸುವುದು
- ವನ್ಯಜೀವಿ ಸಂರಕ್ಷಣೆಯಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುವುದು
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಾಜ್ಯ ಅರಣ್ಯ ಇಲಾಖೆಗಳು, ಎನ್‌ಟಿಸಿಎ, ಭಾರತೀಯ ವನ್ಯಜೀವಿ ಸಂಸ್ಥೆ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ, ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ ಮತ್ತು ಇತರ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
*****
(ಪ್ರಕಟಣೆ ಐ.ಡಿ.: 2260584)
ವಿಸಿಟರ್ ಕೌಂಟರ್ : 11