ಜವಳಿ ಸಚಿವಾಲಯ
azadi ka amrit mahotsav

ತೆಲಂಗಾಣದ ವಾರಂಗಲ್‌ನಲ್ಲಿ ಪಿಎಂ ಮಿತ್ರ ಪಾರ್ಕ್ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಇದು ಭಾರತದ ಕೈಗಾರಿಕಾ ಮತ್ತು ಜವಳಿ ಬೆಳವಣಿಗೆಯ ಪ್ರಯಾಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು

ಪ್ರಕಟಣಾ ದಿನಾಂಕ: 10 MAY 2026 5:20PM by PIB Bengaluru

ಇಂದು ತೆಲಂಗಾಣದ ವಾರಂಗಲ್‌ನಲ್ಲಿ ಭಾರತದ ಕೈಗಾರಿಕಾ ಮತ್ತು ಜವಳಿ ಬೆಳವಣಿಗೆಯ ಪ್ರಯಾಣದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುವ ಪಿಎಂ ಮಿತ್ರ ಪಾರ್ಕ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. 1695.54 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾದ ಇದು ದೇಶದಲ್ಲಿ ಕಾರ್ಯಾರಂಭ ಮಾಡಿದ ಮೊದಲ ಪಿಎಂ ಮಿತ್ರ ಪಾರ್ಕ್ ಆಗಿದ್ದು, ಭಾರತ ಸರ್ಕಾರದ 5ಎಫ್ ದೃಷ್ಟಿಕೋನ - ​​ಫಾರ್ಮ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಶನ್ ಟು ಫಾರಿನ್ ಅನ್ನು ಕಾರ್ಯಗತಗೊಳಿಸುತ್ತದೆ. ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ, ವಾರಂಗಲ್‌ನಲ್ಲಿರುವ ಪಿಎಂ ಮಿತ್ರ ಪಾರ್ಕ್ ನಮ್ಮ ದೇಶದಲ್ಲಿ ಜವಳಿ ಕ್ರಾಂತಿಯನ್ನು ತ್ವರಿತಗೊಳಿಸುತ್ತದೆ, ವಿಶೇಷವಾಗಿ ಮಹಿಳೆಯರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

ಪ್ರಸ್ತಾವಿತ ನಾಗ್ಪುರ-ವಿಜಯವಾಡ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ (ಎನ್‌ಎಚ್-163ಜಿ) ಬಳಿ ಮತ್ತು ಎನ್‌ಎಚ್-163 ಗೆ ಸಮೀಪದಲ್ಲಿ ವ್ಯೂಹಾತ್ಮಕ ಪ್ರದೇಶದಲ್ಲಿರುವ ಈ ಪಾರ್ಕ್ ಪ್ರಮುಖ ರೈಲ್ವೆ ಜಾಲಗಳು ಮತ್ತು ಬಂದರುಗಳಿಗೆ ಅತ್ಯುತ್ತಮ ಬಹುಮಾದರಿ ಸಂಪರ್ಕವನ್ನು ನೀಡುತ್ತದೆ, ಜಾಗತಿಕ ವ್ಯಾಪಾರಕ್ಕಾಗಿ ತಡೆರಹಿತ ಲಾಜಿಸ್ಟಿಕ್ಸ್ ಅನ್ನು ಖಚಿತಪಡಿಸುತ್ತದೆ. ವಿಶ್ವ ದರ್ಜೆಯ ಕೈಗಾರಿಕಾ ಪರಿಸರ ವ್ಯವಸ್ಥೆಯಾಗಿ ವಿನ್ಯಾಸಗೊಳಿಸಲಾದ ಪಾರ್ಕ್ ವ್ಯಾಪಕವಾದ ಆಂತರಿಕ ರಸ್ತೆ ಜಾಲ, ಮೀಸಲಾದ ಪ್ರತ್ಯೇಕ ವಿದ್ಯುತ್ ಸಬ್‌ಸ್ಟೇಷನ್ ಮತ್ತು ಖಚಿತವಾದ ನೀರು ಸರಬರಾಜು ಸೇರಿದಂತೆ ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ. ಇದು ಶೂನ್ಯ ದ್ರವ ವಿಸರ್ಜನೆ ತಂತ್ರಜ್ಞಾನದೊಂದಿಗೆ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕದ ಮೂಲಕ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುತ್ತದೆ.

ಪಾರ್ಕ್ ಭಾರತದ ಜವಳಿ ಬೆಳವಣಿಗೆಯ ಕಥಾನಕದ ಪ್ರಮುಖ ಚಾಲಕ ಶಕ್ತಿಯಾಗಲಿದೆ. ₹6,000 ಕೋಟಿಗೂ ಹೆಚ್ಚು ನಿರೀಕ್ಷಿತ ಹೂಡಿಕೆ ಮತ್ತು ಗಮನಾರ್ಹ ಪ್ರಗತಿ ಈಗಾಗಲೇ ಚಾಲ್ತಿಯಲ್ಲಿದೆ, ಪಾರ್ಕ್ ನ  62% ಈಗಾಗಲೇ ಹಂಚಿಕೆಯಾಗಿದೆ. 1,327 ಎಕರೆಗಳಲ್ಲಿ ವ್ಯಾಪಿಸಿರುವ ಪಾರ್ಕ್ ಜವಳಿ ಮೌಲ್ಯ ಸರಪಳಿಯಾದ್ಯಂತ ದೊಡ್ಡ ಪ್ರಮಾಣದ ಅವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದ್ದು, 24,400 ಕ್ಕೂ ಹೆಚ್ಚು ಉದ್ಯೋಗಗಳನ್ನು ನಿರೀಕ್ಷಿಸಲಾಗಿದೆ ಮತ್ತು ಸಾವಿರಾರು ಉದ್ಯೋಗಗಳನ್ನು ಈಗಾಗಲೇ ಸೃಷ್ಟಿಸಲಾಗಿದೆ.

ದೇಶದಲ್ಲಿ ಜವಳಿ ಮೂಲಸೌಕರ್ಯಕ್ಕಾಗಿ ರಾಷ್ಟ್ರೀಯ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಲು ಭಾರತ ಸರ್ಕಾರದ ಜವಳಿ ಸಚಿವಾಲಯವು ಮಾರ್ಚ್ 2023 ರಲ್ಲಿ ತೆಲಂಗಾಣ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಏಳು ಪಿ.ಎಂ. ಮಿತ್ರ (PM MITRA)  ಪಾರ್ಕ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡಿತ್ತು.

ಮಾರ್ಚ್ 2022 ರಲ್ಲಿ, ಪಿ.ಎಂ. ಮಿತ್ರ ಯೋಜನೆಯಡಿಯಲ್ಲಿ ಏಳು ತಾಣಗಳಲ್ಲಿ ಒಂದಾಗಿ ವಾರಂಗಲ್‌ನಲ್ಲಿರುವ ಕಾಕತೀಯ ಮೆಗಾ ಜವಳಿ ಪಾರ್ಕ್ (ಕೆ.ಎಂ.ಟಿ.ಪಿ-KMTP) ಆಯ್ಕೆ ಮಾಡಲು ತೆಲಂಗಾಣ ಸರ್ಕಾರ ಪ್ರಸ್ತಾಪಿಸಿತ್ತು. ಈ ಯೋಜನೆಯು ಮೂಲಸೌಕರ್ಯವನ್ನು ವಿಸ್ತರಿಸುವ ಮತ್ತು ಪಾರ್ಕ್ ನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅನುಮೋದನೆಗಾಗಿ ಪ್ರಸ್ತಾಪಿಸಲಾಗಿತ್ತು. ಬ್ರೌನ್‌ಫೀಲ್ಡ್ ವಿಭಾಗದ ಅಡಿಯಲ್ಲಿ ಪಿ.ಎಂ. ಮಿತ್ರ ಯೋಜನೆಯಡಿಯಲ್ಲಿ ಅನುಮೋದನೆ ಪಡೆದ ನಂತರ, ಕೆ.ಎಂ.ಟಿ.ಪಿ 200 ಕೋಟಿ ರೂ.ಗಳ ಅಭಿವೃದ್ಧಿ ಬಂಡವಾಳ ಬೆಂಬಲ ಮತ್ತು ಪಾರ್ಕ್ ನಲ್ಲಿ ಸ್ಥಾಪಿಸಲಾಗುತ್ತಿರುವ ಕೈಗಾರಿಕೆಗಳಿಗೆ 300 ಕೋಟಿ ರೂ.ಗಳ ಸ್ಪರ್ಧಾತ್ಮಕ ಪ್ರೋತ್ಸಾಹಕ ಬೆಂಬಲ (ಸಿ.ಐ.ಎಸ್.-CIS) ಪಡೆಯಲು ಅರ್ಹತೆ ಪಡೆಯಿತು.

ವಾರಂಗಲ್‌ನ ಪಿ.ಎಂ. ಮಿತ್ರ ಪಾರ್ಕ್‌ಗಾಗಿ ವಿವರವಾದ ಯೋಜನಾ ವರದಿಯು ಸಿ.ಇ.ಟಿ.ಪಿ (CETP)  ಯನ್ನು ಶೂನ್ಯ ದ್ರವ ವಿಸರ್ಜನಾ ಸೌಲಭ್ಯಕ್ಕೆ ಮೇಲ್ದರ್ಜೆಗೇರಿಸುವುದು, ಸಂಸ್ಕರಣಾ ಘಟಕಗಳಿಗೆ ಸಾಮಾನ್ಯ ಬಾಯ್ಲರ್ ಸೌಲಭ್ಯ, ಕಾರ್ಮಿಕರ ವಸತಿ ನಿಲಯಗಳ ವಿಸ್ತರಣೆ, 10 ಎಂ.ಡಬ್ಲ್ಯು. ಸೌರ ವಿದ್ಯುತ್ ಸ್ಥಾವರ ಇತ್ಯಾದಿಗಳಂತಹ ವಿಸ್ತೃತ ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳನ್ನು ಒಳಗೊಂಡಿದೆ, ಒಟ್ಟು ಯೋಜನಾ ವೆಚ್ಚ 1695.54 ಕೋಟಿ ರೂ.ಗಳೊಂದಿಗೆ ಇದನ್ನು ಅನುಮೋದಿಸಲಾಯಿತು.

ಪಿ.ಎಂ. ಮಿತ್ರ ಪಾರ್ಕ್ ಘೋಷಣೆಯ ನಂತರ, ಪಾರ್ಕ್ ನಲ್ಲಿ ಕೈಗಾರಿಕೆಗಳಿಗೆ ಹಂಚಿಕೆಯಾದ ಒಟ್ಟು 548 ಎಕರೆಗಳಲ್ಲಿ 310 ಎಕರೆಗಳನ್ನು ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ.

ಪಾರ್ಕ್ ನಲ್ಲಿ ಸ್ಥಾಪಿಸಲಾಗುವ ಕೈಗಾರಿಕೆಗಳು ಜವಳಿ ವಲಯಕ್ಕೆ ವಿಶ್ವ ದರ್ಜೆಯ ಮೂಲಸೌಕರ್ಯ ಸೌಲಭ್ಯಗಳನ್ನು (ಜಾಗತಿಕವಾಗಿ ಜವಳಿ ಮೆಗಾ ಪಾರ್ಕ್‌ಗಳಿಗೆ ಹೋಲಿಸಿದಾಗ ಮಾನದಂಡ) ಪಡೆಯುವುದಲ್ಲದೆ, ಪಿ.ಎಂ. ಮಿತ್ರ ಯೋಜನೆಯಡಿಯಲ್ಲಿ ಸ್ಪರ್ಧಾತ್ಮಕ ಪ್ರೋತ್ಸಾಹಕ ಬೆಂಬಲ (ಸಿ.ಐ.ಎಸ್.) ಪಡೆಯುತ್ತವೆ. ಉತ್ಪಾದನಾ ಘಟಕಗಳು ಪ್ರೋತ್ಸಾಹಕ ಬೆಂಬಲಕ್ಕೆ ಅರ್ಹವಾಗುತ್ತವೆ, ಇದಕ್ಕಾಗಿ ಪ್ರತಿ ಪಾರ್ಕ್‌ಗೆ ಒಟ್ಟು ₹300 ಕೋಟಿ ನಿಧಿಯನ್ನು ನೀಡಲಾಗುತ್ತದೆ, ಇದರಿಂದಾಗಿ ಪಾರ್ಕ್ ಗಳು ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗುತ್ತವೆ.

ಪಿ.ಎಂ. ಮಿತ್ರ ಪಾರ್ಕ್‌ಗಳಲ್ಲಿರುವ ಘಟಕಗಳು ಭಾರತ ಸರ್ಕಾರದ ಇತರ ಯೋಜನೆಗಳೊಂದಿಗೆ ಸಮ್ಮಿಲನದ ಪ್ರಯೋಜನಗಳಿಗೆ ಅರ್ಹವಾಗಿರುತ್ತವೆ. ಮುಖ್ಯವಾಗಿ , ಜವಳಿ ಸಚಿವಾಲಯವು ಜವಳಿ ವಲಯಕ್ಕೆ ಪಿ.ಎಲ್.ಐ. ಯೋಜನೆಯ ಮೂಲಕ ಹೊಸ ಹೂಡಿಕೆಯನ್ನು ಆಕರ್ಷಿಸುವತ್ತ ಹೆಚ್ಚು ಗಮನಹರಿಸಿದೆ. ಈ ಸಂಯೋಜನೆಗೆ ಉದಾಹರಣೆಯಾಗಿ, ಪಿ.ಎಂ. ಮಿತ್ರ  ಪಾರ್ಕ್ ವಾರಂಗಲ್‌ನಲ್ಲಿರುವ ಘಟಕಗಳಲ್ಲಿ ಒಂದಾದ ಎವರ್‌ಟಾಪ್ ಜವಳಿ ಮತ್ತು ಅಪ್ಯಾರಲ್ ಕಾಂಪ್ಲೆಕ್ಸ್ ಪ್ರೈ. ಲಿಮಿಟೆಡ್ ಸಹ ಪಿ.ಎಲ್.ಐ.  ಯೋಜನೆಯ ಫಲಾನುಭವಿಯಾಗಿದೆ. ಕಂಪನಿಯು ಸುಮಾರು 12,800 ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದು 1051 ಕೋಟಿ ರೂ.ಗಳ ಪ್ರಸ್ತಾವಿತ ಹೂಡಿಕೆ ಮತ್ತು ಅಂದಾಜು ವಾರ್ಷಿಕ 1990 ಕೋಟಿ ರೂ.ಗಳ ವಹಿವಾಟು ಹೊಂದಿರುತ್ತದೆ.

ಪಿ.ಎಂ. ಮಿತ್ರ  ಪಾರ್ಕ್ ಯೋಜನೆಯು ವಿ.ಜಿ.ಎಫ್. ರೂಪದಲ್ಲಿ ಕೇಂದ್ರ ಸರ್ಕಾರದ ಹಣವನ್ನು ತರುವುದಲ್ಲದೆ, ಹೂಡಿಕೆದಾರರ ವಿಶ್ವಾಸ, ಆಧುನಿಕ ಹಂಚಿಕೆಯ ಮೂಲಸೌಕರ್ಯ ಮತ್ತು ಭಾರತದ ರಾಷ್ಟ್ರೀಯ ಜವಳಿ ಕಾರ್ಯತಂತ್ರದಲ್ಲಿ ಏಕೀಕರಣವನ್ನು ಸುಧಾರಿಸುತ್ತದೆ - ಇವೆಲ್ಲವೂ ತೆಲಂಗಾಣ ಸರ್ಕಾರವು ಜವಳಿ ಪಾರ್ಕ್ ಸ್ಥಾಪಿಸಲು ಕೈಗೊಂಡ ಉಪಕ್ರಮವನ್ನು ಗಮನಾರ್ಹವಾಗಿ ವರ್ಧಿಸುತ್ತದೆ. ಪಿ.ಎಂ. ಮಿತ್ರ  ಪಾರ್ಕ್ ಆಗಿ  ಕೆ.ಎಂ.ಟಿ.ಪಿ. ಯನ್ನು ರಾಜ್ಯ ಕೈಗಾರಿಕಾ ಪಾರ್ಕ್ ನಿಂದ  ರಾಷ್ಟ್ರೀಯವಾಗಿ ಆದ್ಯತೆಯ, ಜಾಗತಿಕವಾದ ಸ್ಥಾನದಲ್ಲಿರುವ ಜವಳಿ ಪರಿಸರ ವ್ಯವಸ್ಥೆಯಾಗಿ ಪರಿಣಾಮಕಾರಿಯಾಗಿ ಉನ್ನತೀಕರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2259581) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , हिन्दी , Bengali , Gujarati , Tamil , Telugu