ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಗುಜರಾತ್ ನ ವಡಿನಾರ್ ನಲ್ಲಿ ಹಡಗು ದುರಸ್ತಿ ಸೌಲಭ್ಯ ಸ್ಥಾಪನೆಗೆ ಸಚಿವ ಸಂಪುಟದ ಅನುಮೋದನೆ
ಪ್ರಕಟಣಾ ದಿನಾಂಕ:
05 MAY 2026 6:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ರಾಷ್ಟ್ರೀಯ ಹಡಗು ದುರಸ್ತಿ ಪರಿಸರ ವ್ಯವಸ್ಥೆಯ ಪ್ರಮುಖ ವಿಸ್ತರಣೆಯ ಭಾಗವಾಗಿ ಗುಜರಾತ್ ನ ವಡಿನಾರ್ ನಲ್ಲಿ ಅತ್ಯಾಧುನಿಕ ಹಡಗು ದುರಸ್ತಿ ಸೌಲಭ್ಯದ ಸ್ಥಾಪನೆಗೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು ದೀನ್ ದಯಾಳ್ ಬಂದರು ಪ್ರಾಧಿಕಾರ (ಡಿಪಿಎ) ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿ ಎಸ್ ಎಲ್) ಜಂಟಿಯಾಗಿ ಅನುಷ್ಠಾನಗೊಳಿಸಲಿದ್ದು, ಒಟ್ಟು 1,570 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು.
ಈ ಯೋಜನೆಯನ್ನು 'ಬ್ರೌನ್‌ಫೀಲ್ಡ್' ಸೌಲಭ್ಯವಾಗಿ ಯೋಜಿಸಲಾಗಿದ್ದು, 650 ಮೀಟರ್ ಉದ್ದದ ಜೆಟ್ಟಿ, ಎರಡು ದೊಡ್ಡ ತೇಲುವ ಡ್ರೈ ಡಾಕ್ ಗಳು, ದುರಸ್ತಿ ಘಟಕಗಳು ಮತ್ತು ಸಂಬಂಧಿತ ಸಮುದ್ರ ಮೂಲಸೌಕರ್ಯಗಳನ್ನು ಇದು ಒಳಗೊಂಡಿರುತ್ತದೆ. ವಡಿನಾರ್ ನ ನೈಸರ್ಗಿಕ ಆಳವಾದ ನೀರಿನ ಲಭ್ಯತೆ, ಪ್ರಮುಖ ಹಡಗು ಮಾರ್ಗಗಳಿಗೆ ಸಂಪರ್ಕ ಮತ್ತು ಮುಂದ್ರಾ ಮತ್ತು ಕಾಂಡ್ಲಾದಂತಹ ಪ್ರಮುಖ ಬಂದರುಗಳಿಗೆ ಸಾಮೀಪ್ಯವು ದುರಸ್ತಿ ಕಾರ್ಯಾಚರಣೆಗಳಿಗೆ, ವಿಶೇಷವಾಗಿ ದೊಡ್ಡ ವಾಣಿಜ್ಯ ಮತ್ತು ವಿದೇಶಿ ಧ್ವಜ ಹೊಂದಿರುವ ಹಡಗುಗಳಿಗೆ ಸೂಕ್ತ ಸ್ಥಳವಾಗಿದೆ.
ಈ ಯೋಜನೆಯು ಕೌಶಲ್ಯ ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ, ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಜೊತೆಗೆ, ಸುತ್ತಮುತ್ತಲ ಪ್ರದೇಶದ ಕಡಲ ಪೂರಕ ಸೇವೆಗಳು ಮತ್ತು ಎಂ ಎಸ್ ಎಂ ಇ ಗಳ ಬೆಳವಣಿಗೆಗೆ ಇದು ಪೂರಕವಾಗಲಿದೆ.
ಪರಿಣಾಮ:
ವಡಿನಾರ್ ಹಡಗು ದುರಸ್ತಿ ಸೌಲಭ್ಯವು ಭಾರತದ ಹಡಗು ದುರಸ್ತಿ ಮೂಲಸೌಕರ್ಯದಲ್ಲಿನ ನಿರ್ಣಾಯಕ ಅಂತರವನ್ನು ನೇರವಾಗಿ ಪರಿಹರಿಸುತ್ತದೆ. ಪ್ರಸ್ತುತ ಭಾರತದಲ್ಲಿ 230 ಮೀಟರ್ ಗಿಂತ ಹೆಚ್ಚು ಉದ್ದದ ದೊಡ್ಡ ಹಡಗುಗಳನ್ನು ದುರಸ್ತಿ ಮಾಡಲು ಸಾಕಷ್ಟು ದೇಶೀಯ ಸಾಮರ್ಥ್ಯದ ಕೊರತೆಯಿದೆ. 300 ಮೀಟರ್ ವರೆಗಿನ ಹಡಗುಗಳ ದುರಸ್ತಿಗೆ ಅವಕಾಶ ಮಾಡಿಕೊಡುವ ಮೂಲಕ, ಈ ಸೌಲಭ್ಯವು ಭಾರತದೊಳಗೇ ದೊಡ್ಡ ಹಡಗುಗಳ ಉನ್ನತ ಮೌಲ್ಯದ ದುರಸ್ತಿಗೆ ಅನುವು ಮಾಡಿಕೊಡುತ್ತದೆ. ಇದು ವಿದೇಶಿ ಶಿಪ್‌ಯಾರ್ಡ್ ಗಳ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ವಿದೇಶಿ ವಿನಿಮಯದ ಹೊರಹರಿವನ್ನು ತಡೆಯುತ್ತದೆ.
ಪಶ್ಚಿಮ ಕರಾವಳಿಯಲ್ಲಿ ಸುಧಾರಿತ ದುರಸ್ತಿ ಸಾಮರ್ಥ್ಯ ಮತ್ತು ವೇಗವಾದ ಕಾರ್ಯಾಚರಣೆಯು ಭಾರತೀಯ ಬಂದರುಗಳ ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಯೋಜನೆಯು ಹಡಗು ದುರಸ್ತಿ, ಲಾಜಿಸ್ಟಿಕ್ಸ್ ಮತ್ತು ಪೂರಕ ಕೈಗಾರಿಕೆಗಳಲ್ಲಿ ಅಂದಾಜು 290 ನೇರ ಮತ್ತು ಸುಮಾರು 1,100 ಪರೋಕ್ಷ ಉದ್ಯೋಗಗಳನ್ನು ಸೃಜಿಸುವ ಮೂಲಕ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ವಿಶಾಲವಾದ ಕಡಲ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
ಈ ಉಪಕ್ರಮವು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ ಮತ್ತು 'ಮ್ಯಾರಿಟೈಮ್ ಇಂಡಿಯಾ ವಿಷನ್ 2030' ಹಾಗೂ 'ಮ್ಯಾರಿಟೈಮ್ ಅಮೃತ್ ಕಾಲ್ ವಿಷನ್ 2047' ಅಡಿಯಲ್ಲಿ ಭಾರತದ ದೀರ್ಘಕಾಲೀನ ಕಡಲ ಗುರಿಗಳನ್ನು ಬೆಂಬಲಿಸುತ್ತದೆ.
******
(ಪ್ರಕಟಣೆ ಐ.ಡಿ.: 2258148)
ವಿಸಿಟರ್ ಕೌಂಟರ್ : 9