ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ರಾಷ್ಟ್ರವ್ಯಾಪಿ ಅಗ್ನಿ ಸುರಕ್ಷತಾ ಸಪ್ತಾಹ (4–10 ಮೇ 2026) ಆರಂಭ
ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲೀಲಾ ಶ್ರೀವಾಸ್ತವ ಮುಂದಾಳತ್ವದಲ್ಲಿ “ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿ ಸುರಕ್ಷತೆ’’ ಕುರಿತು ರಾಷ್ಟ್ರವ್ಯಾಪಿ ಪ್ರತಿಜ್ಞೆ ಸ್ವೀಕಾರ
ಆರೋಗ್ಯ ಸಚಿವಾಲಯದಿಂದ ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿ ಮತ್ತು ಜೀವ ಸುರಕ್ಷತೆಯ ಕುರಿತು ರಾಷ್ಟ್ರೀಯ ಮಾರ್ಗಸೂಚಿ- 2026 ಅನಾವರಣ; ಆರೋಗ್ಯ ಸಂಸ್ಥೆಗಳಲ್ಲಿ ಸಮಗ್ರ ಸುರಕ್ಷತಾ ಚೌಕಟ್ಟುಗಳನ್ನು ಬಲವರ್ಧನೆ
ಐಸಿಯುಗಳು, ಎನ್‌ಐಸಿಯುಗಳು, ಪಿಐಸಿಯುಗಳು ಮತ್ತು ಆಪರೇಷನ್ ಥಿಯೇಟರ್‌ಗಳು ಸೇರಿ ಹೆಚ್ಚಿನ ಅಪಾಯದ ಪ್ರದೇಶಗಳಿಗೆ ವರ್ಧಿತ ಶಿಷ್ಟಾಚಾರಗಳನ್ನು ಪರಿಚಯಿಸುವ ಹೊಸ ಮಾರ್ಗಸೂಚಿಗಳು
ಸಿದ್ಧತೆ ಮತ್ತು ಜಾಗೃತಿ ಬಲಪಡಿಸಲು ಆಡಿಟ್, ಅಣಕು ಪಥಸಂಚಲನಗಳು, ತೆರವು ಕಾರ್ಯಾಚರಣೆಗಳು, ಪ್ರಾತ್ಯಕ್ಷಿಕೆಗಳು ಮತ್ತು ವೆಬಿನಾರ್‌ಗಳು ರಾಷ್ಟ್ರವ್ಯಾಪಿ ಅಗ್ನಿ ಸುರಕ್ಷತಾ ಸಪ್ತಾಹದಲ್ಲಿ ಸೇರಿವೆ
ಪ್ರಕಟಣಾ ದಿನಾಂಕ:
04 MAY 2026 12:56PM by PIB Bengaluru
ಸುರಕ್ಷಿತ ಆರೋಗ್ಯ ಪರಿಸರವನ್ನು ಖಾತ್ರಿಪಡಿಸುವ ತನ್ನ ಬದ್ಧತೆಯನ್ನು ಬಲಪಡಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವದಲ್ಲಿ ಮತ್ತು ಸಂಬಂಧಿತ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಮನ್ವಯದೊಂದಿಗೆ 2026ರ ಮೇ 4 ರಿಂದ ಮೇ 10 ರವರೆಗೆ ರಾಷ್ಟ್ರವ್ಯಾಪಿ ಅಗ್ನಿ ಸುರಕ್ಷತಾ ಸಪ್ತಾಹವನ್ನು ಆಚರಿಸಲು ಆರಂಭಿಸಿತು.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರ ನೇತೃತ್ವದಲ್ಲಿ "ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿ ಸುರಕ್ಷತೆ’’ ಎಂಬ ವಿಷಯದ ಕುರಿತು ರಾಷ್ಟ್ರವ್ಯಾಪಿ ಪ್ರತಿಜ್ಞೆ ಸಮಾರಂಭದೊಂದಿಗೆ ಆಚರಣೆಯನ್ನು ಉದ್ಘಾಟಿಸಲಾಯಿತು. ಇದು ಆಗ್ನಿ ಅವಘಢಗಳನ್ನು ತಡೆಯಲು ಮುನ್ನೆಚ್ಚರಿಕೆ, ಸನ್ನದ್ಧತೆ ಮತ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಬಲಪಡಿಸುವ ಕಡೆಗೆ ಆರೋಗ್ಯ ಸಂಸ್ಥೆಗಳು ಮತ್ತು ಪಾಲುದಾರರ ಸಾಮೂಹಿಕ ಬದ್ಧತೆ ಪುನರುಚ್ಚರಿಸಿತು.

ಈ ಸಂದರ್ಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ಈ ವರ್ಷದ ಅಗ್ನಿ ಸುರಕ್ಷತಾ ಸಪ್ತಾಹದ ವಿಷಯ - ”ಸುರಕ್ಷಿತ ಶಾಲೆಗಳು, ಸುರಕ್ಷಿತ ಆಸ್ಪತ್ರೆಗಳು ಮತ್ತು ಅಗ್ನಿ ಸುರಕ್ಷತಾ ಜಾಗೃತಿ ಸಮಾಜ: ಆಗ್ನಿಶಾಮಕ ಮುನ್ನಚ್ಚರಿಕೆಗಾಗಿ ಒಗ್ಗೂಡಿ’’ ಎಂಬುದಾಗಿದೆ. ನಮ್ಮ ಸಂಸ್ಥೆಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದು ಹಂಚಿಕೆಯ ಮತ್ತು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಅಗ್ನಿ ಸುರಕ್ಷತಾ ಸಪ್ತಾಹವು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮರು ಮೌಲ್ಯಮಾಪನ ಮಾಡಲು, ಸೌಲಭ್ಯಗಳನ್ನು ಸಮರ್ಪಕವಾಗಿ ಲೆಕ್ಕಪರಿಶೋಧಿಸಲಾಗಿದೆಯೇ ಎಂದು ಮೌಲ್ಯಮಾಪನ ಮಾಡಲು ಮತ್ತು ಪರಿಹರಿಸಬೇಕಾದ ಅಂತರ ಮತ್ತು ವ್ಯತ್ಯಾಸಗಳನ್ನು ಗುರುತಿಸಲು ಒಂದು ಪ್ರಮುಖ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಸಾಮರ್ಥ್ಯ ವೃದ್ಧಿ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು, ಅಗ್ನಿಶಾಮಕ ತುರ್ತು ಪರಿಸ್ಥಿತಿಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಆರೋಗ್ಯ ವೃತ್ತಿಪರರಿಗೆ ಸಮರ್ಪಕವಾಗಿ ತರಬೇತಿ ನೀಡಬೇಕು ಮತ್ತು ಸಂವೇದನಾಶೀಲರಾಗಬೇಕು ಎಂದು ಕರೆ ನೀಡಿದರು. ಎಲ್ಲಾ ರಾಜ್ಯಗಳು ಮತ್ತು ಆರೋಗ್ಯ ಸೌಲಭ್ಯಗಳು ಐಎಚ್ ಐಪಿ ಪೋರ್ಟಲ್‌ನಲ್ಲಿ ನಿಯಮಿತವಾಗಿ ಅಗ್ನಿ ಸುರಕ್ಷತಾ ಲೆಕ್ಕಪರಿಶೋಧನಾ ವಿವರಗಳನ್ನು ಅಪ್‌ಲೋಡ್ ಮಾಡಬೇಕೆಂದು ಅವರು ಎಲ್ಲಾ ರಾಜ್ಯಗಳನ್ನು ಆಗ್ರಹಿಸಿದರು, ಅಂತಹ ಅಭ್ಯಾಸಗಳು ಅನುಸರಣೆಯನ್ನು ಸಾಂಸ್ಥಿಕಗೊಳಿಸುತ್ತವೆ ಮತ್ತು ಸುರಕ್ಷತಾ ಮಾನದಂಡಗಳನ್ನು ಕಾಪಾಡಿಕೊಳ್ಳಲು ನಿರಂತರ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಉಲ್ಲೇಖಿಸಿದರು.
ಹಲವಾರು ಸರ್ಕಾರಿ ಸಂಸ್ಥೆಗಳು ಸೇರಿದಂತೆ 50 ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ಐಗಾಟ್ ( iGOT) ಅಗ್ನಿ ಸುರಕ್ಷತಾ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ತೃಪ್ತಿ ವ್ಯಕ್ತಪಡಿಸಿದರು ಮತ್ತು ಅಂತಹ ಪ್ರಯತ್ನಗಳನ್ನು ಹೆಚ್ಚಿಸುವ ಮಹತ್ವವನ್ನು ಪ್ರಸ್ತಾಪಿಸಿದರು. ಜನ ಭಾಗೀದಾರಿ ಮೂಲಕ ದೇಶಾದ್ಯಂತ ಅಗ್ನಿ ಸುರಕ್ಷತೆಯನ್ನು ಬಲಪಡಿಸುವಲ್ಲಿ ಅರ್ಥಪೂರ್ಣ ಮತ್ತು ನಿರಂತರ ಪರಿಣಾಮವನ್ನು ಸಾಧಿಸಬಹುದು ಎಂದು ಅವರು ಒತ್ತಿ ಹೇಳಿದರು.

ಈ ವೇಳೆ ಮಾತನಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ ಡಿಎಂಎ) ಸದಸ್ಯ ಮತ್ತು ಮುಖ್ಯಸ್ಥ ಶ್ರೀ ಕೃಷ್ಣ ಎಸ್. ವತ್ಸ, ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿ ಸುರಕ್ಷತೆಗೆ ಪೂರ್ವಭಾವಿ, ವ್ಯವಸ್ಥೆ ಆಧಾರಿತ ವಿಧಾನದ ಅಗತ್ಯವನ್ನು ಒತ್ತಿ ಹೇಳಿದರು. ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆಯನ್ನು ಬಲಪಡಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಕೈಗೊಳ್ಳಬೇಕು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಎನ್ ಡಿಎಂಎ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇದೇ ರೀತಿಯ ಉಪಕ್ರಮಗಳೊಂದಿಗೆ ಐದು ಪ್ರಾದೇಶಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಆಲೋಚಿಸುತ್ತಿದೆ ಎಂದು ತಿಳಿಸಿದರು. ಅಗ್ನಿ ಸುರಕ್ಷತೆಯ ಕುರಿತು ನಿರಂತರ ಜಾಗೃತಿ ಪ್ರಯತ್ನಗಳೊಂದಿಗೆ ನಿಯಮಿತ ಲೆಕ್ಕಪರಿಶೋಧನೆಗಾಗಿ ಸ್ವಯಂ ಪ್ರಮಾಣೀಕರಣ ಕಾರ್ಯವಿಧಾನಗಳನ್ನು ಸ್ಥಾಪಿಸುವ ಮಹತ್ವವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸೌಲಭ್ಯಗಳ ಹಂತದಲ್ಲಿ ಸನ್ನದ್ಧತೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಪ್ರತಿ ಆಸ್ಪತ್ರೆಯು ಆಗ್ನಿ ಅವಘಡದಂತಹ ತುರ್ತು ಪರಿಸ್ಥಿತಿಗಳಿಗೆ ಎದುರಿಸಲು ಸಜ್ಜಾಗಿರುವ ಸಮರ್ಪಕವಾಗಿ ತರಬೇತಿ ಪಡೆದ ಆರೋಗ್ಯ ವೃತ್ತಿಪರರನ್ನು ಹೊಂದಿರಬೇಕು, ಜೊತೆಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಮತ್ತು ಅಭ್ಯಾಸ ಮಾಡಿದ ಸ್ಥಳಾಂತರಿಸುವ ಕಾರ್ಯವಿಧಾನಗಳನ್ನು ಹೊಂದಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಿರ್ದೇಶಕ (ಅಗ್ನಿಶಾಮಕ ಸೇವೆಗಳು) ಶ್ರೀ ಸುನಿಲ್ ಕುಮಾರ್ ಝಾ, ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿ ಸುರಕ್ಷತೆಗೆ ಪೂರ್ವಭಾವಿ ಮತ್ತು ವ್ಯವಸ್ಥೆ ಆಧಾರಿತ ವಿಧಾನದ ನಿರ್ಣಾಯಕ ಮಹತ್ವವನ್ನು ಒತ್ತಿ ಹೇಳಿದರು. ಆಸ್ಪತ್ರೆಗಳು ಹೆಚ್ಚು ಸೂಕ್ಷ್ಮ ಮತ್ತು ಸಂಕೀರ್ಣ ಪರಿಸರಗಳನ್ನು ಪ್ರತಿನಿಧಿಸುತ್ತವೆ, ಅಲ್ಲಿ ಸಣ್ಣಪುಟ್ಟ ಲೋಪಗಳು ಸಹ ತೀವ್ರ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ನಿಯಮಿತ ಲೆಕ್ಕಪರಿಶೋಧನೆ ಮತ್ತು ಸಾಮರ್ಥ್ಯ ವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದ ಅವರು ಅಗ್ನಿ ಅವಘಢಗಳಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಪರಿಣಾಮಕಾರಿ ತುರ್ತು ಸ್ಪಂದನೆಯನ್ನು ಖಾತ್ರಿಪಡಿಸಿಕೊಳ್ಳಲು ಸಿದ್ಧತೆ, ಸಮನ್ವಯ ಮತ್ತು ನಿರಂತರ ಜಾಗರೂಕತೆಯು ಪ್ರಮುಖವಾಗಿದೆ ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಸಚಿವಾಲಯವು ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿ ಮತ್ತು ಜೀವ ಸುರಕ್ಷತೆಯ ಕುರಿತಾದ ರಾಷ್ಟ್ರೀಯ ಮಾರ್ಗಸೂಚಿ-2026 ಅಧಿಕೃತವಾಗಿ ಬಿಡುಗಡೆ ಮಾಡಿತು. ಆರೋಗ್ಯ ಸೌಕರ್ಯಗಳಲ್ಲಿ ಅಗ್ನಿ ಸುರಕ್ಷತೆಯನ್ನು ಹೆಚ್ಚಿಸಲು ದೃಢವಾದ ಮತ್ತು ಸಮಗ್ರ ಚೌಕಟ್ಟನ್ನು ಖಾತ್ರಿಪಡಿಸಿಕೊಳ್ಳಲು ವ್ಯಾಪಕ ಶ್ರೇಣಿಯ ಪ್ರಮುಖ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ತಜ್ಞರೊಂದಿಗೆ ವ್ಯಾಪಕವಾದ ಸಮಾಲೋಚನೆಗಳ ಮೂಲಕ ಈ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಆಡಳಿತ ಚೌಕಟ್ಟುಗಳು, ಅಪಾಯದ ಮೌಲ್ಯಮಾಪನ ಮತ್ತು ಉಪಶಮನ, ಮೂಲಸೌಕರ್ಯ ಯೋಜನೆ, ತುರ್ತು ಸ್ಪಂದನಾ ವ್ಯವಸ್ಥೆಗಳು, ಆರೋಗ್ಯ ಸಿಬ್ಬಂದಿಗಳ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಅನುಸರಣೆ ಕಾರ್ಯವಿಧಾನಗಳು ಮತ್ತು ಜಾಗೃತಿ ಉತ್ಪಾದನೆ ಸೇರಿದಂತೆ ಬಹು ನಿರ್ಣಾಯಕ ಆಯಾಮಗಳನ್ನು ಮಾರ್ಗಸೂಚಿಗಳು ಸಮಗ್ರವಾಗಿ ತಿಳಿಸುತ್ತವೆ. ತೀವ್ರ ನಿಗಾ ಘಟಕಗಳು (ಐಸಿಯುಗಳು), ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳು (ಎನ್‌ಐಸಿಯುಗಳು), ಮಕ್ಕಳ ತೀವ್ರ ನಿಗಾ ಘಟಕಗಳು (ಪಿಐಸಿಯುಗಳು) ಮತ್ತು ಆಪರೇಷನ್ ಥಿಯೇಟರ್‌ಗಳು (ಒಟಿಗಳು) ನಂತಹ ವಿಶೇಷ ಹೆಚ್ಚಿನ ಅಪಾಯದ ಘಟಕಗಳಿಗೆ ನವೀಕರಿಸಿದ ನಿಬಂಧನೆಗಳನ್ನು ಅವು ಒಳಗೊಂಡಿವೆ, ಅಲ್ಲಿ ಕಠಿಣ ಸುರಕ್ಷತಾ ಶಿಷ್ಟಾಚಾರಗಳು ಅತ್ಯಗತ್ಯ.
ಆರೋಗ್ಯ ಸೌಲಭ್ಯಗಳಲ್ಲಿ ಬೆಂಕಿಯ ಅಪಾಯಗಳ ಮುನ್ನೆಚ್ಚರಿಕೆ ಮತ್ತು ಉಪಶಮನದ ಬಗ್ಗೆ ಜಾಗೃತಿ ಮತ್ತು ಸಾಂಸ್ಥಿಕ ಸಿದ್ಧತೆಯನ್ನು ವರ್ಧಿಸಲು ಅಗ್ನಿ ಸುರಕ್ಷತಾ ಸಪ್ತಾಹದ ಸಮಯದಲ್ಲಿ ದೇಶಾದ್ಯಂತ ಸಮಗ್ರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರವ್ಯಾಪಿ ಪ್ರತಿಜ್ಞೆ ಸಮಾರಂಭದ ಜೊತೆಗೆ ಅವುಗಳಲ್ಲಿ ವ್ಯವಸ್ಥಿತ ಅಗ್ನಿ ಸುರಕ್ಷತಾ ಮೌಲ್ಯಮಾಪನ, ಅಣಕು ಪ್ರದರ್ಶನಗಳು ಮತ್ತು ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಗಳ ಕುರಿತು ನೇರ ಪ್ರದರ್ಶನಗಳು, ರೋಗಿಗಳ ಸ್ಥಳಾಂತರಿಸುವ ಕಾರ್ಯಾಚರಣೆಗಳು ಮತ್ತು ಉತ್ತಮ ಪದ್ಧತಿಗಳ ವಿನಿಮಯ ಮತ್ತು ತಾಂತ್ರಿಕ ಜ್ಞಾನವನ್ನು ಪ್ರಸಾರ ಮಾಡಲು ವಿನ್ಯಾಸಗೊಳಿಸಲಾದ ತಾಂತ್ರಿಕ ವೆಬಿನಾರ್‌ಗಳ ಸರಣಿಯೂ ಸೇರಿವೆ.

ಪರಿಣಾಮಕಾರಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನವೀಕರಿಸಿದ ಮತ್ತು ವಿವರವಾದ ಪರಿಶೀಲನಾಪಟ್ಟಿಯನ್ನು ಕಳುಹಿಸಿದೆ, ಅದರಲ್ಲಿ ಸಾರ್ವಜನಿಕ ಮತ್ತು ಖಾಸಗಿ ಎರಡೂ ಆರೋಗ್ಯ ಸೌಲಭ್ಯಗಳು ಕಠಿಣ ಅಗ್ನಿಶಾಮಕ ಮತ್ತು ವಿದ್ಯುತ್ ಸುರಕ್ಷತಾ ಕ್ರಮಗಳ ಮೌಲ್ಯಮಾಪನವನ್ನು ಕೈಗೊಳ್ಳಲು ನಿರ್ದೇಶಿಸುವಂತೆ ಒತ್ತಾಯಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವಿಶೇಷವಾಗಿ ವೈದ್ಯಕೀಯ ಕಾಲೇಜುಗಳು ಮತ್ತು ದೊಡ್ಡ ತೃತೀಯ ಹಂತದ ಆರೈಕೆ ಸಂಸ್ಥೆಗಳಲ್ಲಿ, ಉದ್ದೇಶಿತ ಜಾಗೃತಿ ಉಪಕ್ರಮಗಳನ್ನು ಆಯೋಜಿಸಲು ಪ್ರೋತ್ಸಾಹಿಸಲಾಗಿದೆ. ಈ ಉಪಕ್ರಮಗಳಲ್ಲಿ ಪೋಸ್ಟರ್ ತಯಾರಿಕೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು, ಜೊತೆಗೆ ಬೆಂಕಿ ಪತ್ತೆ ಮತ್ತು ನಿಗ್ರಹ ಉಪಕರಣಗಳು ಮತ್ತು ವ್ಯವಸ್ಥೆಗಳ ಅತ್ಯುತ್ತಮ ಬಳಕೆಯ ಕುರಿತು ಪ್ರಾಯೋಗಿಕ ಪ್ರದರ್ಶನಗಳು ಸೇರಿವೆ, ಆ ಮೂಲಕ ಆರೋಗ್ಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಲ್ಲಿ ಸುರಕ್ಷತಾ ಪ್ರಜ್ಞೆಯ ಸಂಸ್ಕೃತಿ ಪ್ರೋತ್ಸಾಹಿಸಲಾಗುವುದು.
ದೇಶಾದ್ಯಂತ ರೋಗಿಗಳು, ಆರೈಕೆದಾರರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಸ್ಪಂದಿಸುವ ಆರೋಗ್ಯ ಪೂರಕ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳುವ ಪ್ರಮುಖ ಗುರಿಯೊಂದಿಗೆ, ಸಪ್ತಾಹದ ಆಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮತ್ತು ನಿಗದಿತ ಮಾರ್ಗಸೂಚಿಗಳನ್ನು ಅಕ್ಷರಶಃ ಅಳವಡಿಸಿಕೊಳ್ಳಲು ಸಚಿವಾಲಯವು ಎಲ್ಲಾ ಪಾಲುದಾರರಿಗೆ ಕರೆ ನೀಡಿದೆ.
ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿಶಾಮಕ ಮತ್ತು ಜೀವ ಸುರಕ್ಷತೆಯ ಕುರಿತಾದ ರಾಷ್ಟ್ರೀಯ ಮಾರ್ಗಸೂಚಿಗಳು (2026) ಅನ್ನು ಈ ಲಿಂಕ್ ಮೂಲಕ ಪಡೆಯಬಹುದು: https://www.mohfw-dohfw.gov.in/static/uploads/2026/05/62dc36c7ac9aeedefb0e969de50686d1.pdf
*****
(ಪ್ರಕಟಣೆ ಐ.ಡಿ.: 2257814)
ವಿಸಿಟರ್ ಕೌಂಟರ್ : 14