ಚುನಾವಣಾ ಆಯೋಗ
azadi ka amrit mahotsav

ಎಣಿಕೆ ಕೇಂದ್ರಗಳಲ್ಲಿ ಭದ್ರತೆಯನ್ನು ಬಲಪಡಿಸಲು ಕ್ಯೂಆರ್ ಕೋಡ್ ಆಧಾರಿತ ಗುರುತು ವ್ಯವಸ್ಥೆಯನ್ನು ಭಾರತೀಯ ಚುನಾವಣಾ ಆಯೋಗವು (ಇಸಿಐ) ಪರಿಚಯಿಸಿದೆ

ಪ್ರಕಟಣಾ ದಿನಾಂಕ: 30 APR 2026 4:18PM by PIB Bengaluru
  1. ಎಣಿಕೆ ಕೇಂದ್ರಗಳಿಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವ ಸಾಧ್ಯತೆಯನ್ನು ತೆಗೆದುಹಾಕಲು, ಭಾರತೀಯ ಚುನಾವಣಾ ಆಯೋಗವು (ಇಸಿಐ) ಇಸಿನೆಟ್ ನಲ್ಲಿ ಕ್ಯೂಆರ್ ಕೋಡ್ ಆಧಾರಿತ ಭಾವಚಿತ್ರದ ಗುರುತಿನ ಚೀಟಿ ಮಾದರಿಯನ್ನು ಪರಿಚಯಿಸಿದೆ.
  2. ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯ ವಿಧಾನಸಭಾ ಚುನಾವಣೆಗಳ ಮತ್ತು 5 ರಾಜ್ಯಗಳ 7 ಎ.ಸಿ.ಗಳಲ್ಲಿನ ಉಪಚುನಾವಣೆಗಳ ಮೇ 04, 2026 ರಂದು ನಡೆಯಲಿರುವ ಎಣಿಕೆಯಿಂದ ಪ್ರಾರಂಭಿಸಿ, ಈ ಕ್ಯೂಆರ್ ಕೋಡ್ - ಆಧಾರಿತ ಗುರುತು ವ್ಯವಸ್ಥೆಯನ್ನು ಭವಿಷ್ಯದ ಎಲ್ಲಾ ಸಾರ್ವತ್ರಿಕ ಮತ್ತು ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ವಿಸ್ತರಿಸಲಾಗುವುದು.
  3. ಈ ಮಹತ್ವದ ಉಪಕ್ರಮವು ಕಳೆದ ಒಂದು ವರ್ಷದಿಂದ ಭಾರತ ಚುನಾವಣಾ ಆಯೋಗವು ತೆಗೆದುಕೊಂಡ 30 ಕ್ಕೂ ಹೆಚ್ಚು ಉಪಕ್ರಮಗಳ ಮುಂದುವರಿಕೆಯ ಭಾಗವಾಗಿದೆ, ಇದರಲ್ಲಿ ಬಿ.ಎಲ್.ಒ.ಗಳಿಗೆ ಪ್ರಮಾಣೀಕೃತ ಕ್ಯೂಆರ್ ಕೋಡ್ ಆಧಾರಿತ ಭಾವಚಿತ್ರದ ಗುರುತು ಚೀಟಿಗಳನ್ನು ಪರಿಚಯಿಸಲಾಗಿದೆ.
  4. ಎಣಿಕೆ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮೂರು ಹಂತದ ಭದ್ರತಾ ಕಾರ್ಯವಿಧಾನವನ್ನು ಸೂಚಿಸಲಾಗಿದೆ. ಮೊದಲ ಮತ್ತು ಎರಡನೇ ಹಂತಗಳಲ್ಲಿ, ಆರ್.ಒ. ನೀಡಿದ ಭಾವಚಿತ್ರದ ಗುರುತಿನ ಚೀಟಿಗಳನ್ನು ಹಸ್ತಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಎಣಿಕೆ ಸಭಾಂಗಣದ ಬಳಿಯ ಮೂರನೇ ಮತ್ತು ಅತ್ಯಂತ ಒಳಗಿನ ಭದ್ರತಾ ಸುತ್ತುವರಿದ ಜಾಗದಲ್ಲಿ, ಕ್ಯೂಆರ್ ಕೋಡ್ ತಪಾಸಣೆ ಮೂಲಕ ಯಶಸ್ವಿ ಪರಿಶೀಲನೆಯ ನಂತರವೇ ಪ್ರವೇಶವನ್ನು ಅನುಮತಿಸಲಾಗುತ್ತದೆ.
  5. ಹೊಸ ಕ್ಯೂಆರ್ ಕೋಡ್ ಆಧಾರಿತ ಭಾವಚಿತ್ರದ ಗುರುತಿನ ಚೀಟಿಗಳು ಎಣಿಕೆ ಕೇಂದ್ರಗಳು ಮತ್ತು ಸಭಾಂಗಣಗಳಿಗೆ ಪ್ರವೇಶಿಸಲು ಭಾರತೀಯ ಚುನಾವಣಾ ಆಯೋಗ(ಇಸಿಐ)ದಿಂದ ಅಧಿಕಾರ ಪಡೆದ ವ್ಯಕ್ತಿಗಳ ವಿವಿಧ ವರ್ಗಗಳಿಗೆ ಅನ್ವಯಿಸುತ್ತವೆ, ಇದರಲ್ಲಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಣಿಕೆ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಅಭ್ಯರ್ಥಿಗಳು, ಚುನಾವಣಾ ಏಜೆಂಟ್ ಗಳು ಮತ್ತು ಎಣಿಕೆ ಏಜೆಂಟ್ ಗಳು ಸೇರಿದಂತೆ ಇತರರು ಸೇರಿದ್ದಾರೆ.
  6. ಅಧಿಕೃತ ಮಾಧ್ಯಮ ವ್ಯಕ್ತಿಗಳ ಅನುಕೂಲಕ್ಕಾಗಿ ಪ್ರತಿ ಎಣಿಕೆ ಕೇಂದ್ರದಲ್ಲಿನ ಎಣಿಕೆಸಭಾಂಗಣಗಳ ಬಳಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು.
  7. ಆಯೋಗದ ಅಸ್ತಿತ್ವದಲ್ಲಿರುವ ಸೂಚನೆಗಳಿಗೆ ಅನುಗುಣವಾಗಿ ಭಾರತೀಯ ಚುನಾವಣಾ ಆಯೋಗ(ಇಸಿಐ) ನೀಡಿದ ಅಧಿಕಾರ ಪತ್ರಗಳ ಆಧಾರದ ಮೇಲೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ಮುಂದುವರಿಸಲಾಗುತ್ತದೆ.
  8. ಈ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ, ಇದರಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ಗೊತ್ತುಪಡಿಸಿದ ಪರಿಶೀಲನಾ ಕೇಂದ್ರಗಳಲ್ಲಿ ತಡೆರಹಿತ ಮತ್ತು ಸುರಕ್ಷಿತ ಪ್ರವೇಶ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
  9. ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ದಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಈ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2256996) ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi , Bengali , Assamese , Tamil , Malayalam