ರಕ್ಷಣಾ ಸಚಿವಾಲಯ
ಭಯೋತ್ಪಾದಕ ದಾಳಿಗಳ ಬಗ್ಗೆ ರಾಜತಾಂತ್ರಿಕ ಹೇಳಿಕೆಗಳನ್ನು ನೀಡಿ ಸುಮ್ಮನಾಗುವ ಹಳೆಯ ಮನಸ್ಥಿತಿಯಲ್ಲಿ ಬದಲಾವಣೆಯನ್ನು ʻಆಪರೇಷನ್ ಸಿಂದೂರ್ʼ ಪ್ರದರ್ಶಿಸಿತು, ದಿಟ್ಟ ಕ್ರಮದ ಮೂಲಕ ಉತ್ತರಿಸುವ ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರದ ಅಚಲ ಬದ್ಧತೆಯನ್ನು ಇದು ಸೂಚಿಸುತ್ತದೆ: ರಕ್ಷಣಾ ಸಚಿವರು
"ಆಪರೇಷನ್ ಸಿಂದೂರ್ ಭಾರತದ ತ್ರಿವಳಿ ಸೇನಾಪಡೆಗಳ ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸಿತು; ನಾವು ನಮ್ಮದೇ ಆದ ನಿಯಮಗಳ ಮೇಲೆ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದ್ದೇವೆ ಮತ್ತು ನಿಲ್ಲಿಸಿದ್ದೇವೆ"
"ಭಯೋತ್ಪಾದನೆಯು ವಿಕೃತ ಮನಸ್ಥಿತಿಯಿಂದ ಹುಟ್ಟುತ್ತದೆ; ಅದಕ್ಕೆ ಧಾರ್ಮಿಕ ಬಣ್ಣವನ್ನು ನೀಡುವ ಮೂಲಕ ಅಥವಾ ಹಿಂಸಾತ್ಮಕ ಸಿದ್ಧಾಂತದೊಂದಿಗೆ ಜೋಡಿಸುವ ಮೂಲಕ ಅದನ್ನು ಸಮರ್ಥಿಸುವ ಪ್ರಯತ್ನಗಳು ನಡೆಯುತ್ತವೆ"
"ಭಯೋತ್ಪಾದನೆಯ ನಿರ್ಮೂಲನೆಗಾಗಿ ಕಾರ್ಯಾಚರಣೆ, ಸೈದ್ಧಾಂತಿಕ ಮತ್ತು ರಾಜಕೀಯ ಆಯಾಮಗಳ ಮೂಲಕ ಅದನ್ನು ಎದುರಿಸಬೇಕಾಗಿದೆ"
"ಭಾರತವು ʻಐಟಿʼಗಾಗಿ (ಮಾಹಿತಿ ತಂತ್ರಜ್ಞಾನ) ಜಾಗತಿಕ ಮಣ್ಣನೆ ಪಡೆದಿದೆ ಮತ್ತು ಪಾಕಿಸ್ತಾನವು ಸಹ ʻಐಟಿʼ ಗಾಗಿ (ಅಂತಾರಾಷ್ಟ್ರೀಯ ಭಯೋತ್ಪಾದನೆ) ಜಾಗತಿಕವಾಗಿ ಗುರುತಿಸಲ್ಪಟ್ಟಿದೆ"
"ಸುದರ್ಶನ ವಾಯು ರಕ್ಷಣಾ ವ್ಯವಸ್ಥೆಯು ಕೃತಕ ಬುದ್ಧಿಮತ್ತೆಯ ಅನುಕರಣೀಯ ಅನ್ವಯಕ್ಕೆ ಪ್ರಮುಖ ಉದಾಹರಣೆಯಾಗಿದೆ; ಉದಯೋನ್ಮುಖ ತಂತ್ರಜ್ಞಾನದ ಮೂಲಕ, ಭಾರತವು ಹೆಚ್ಚು ಸುರಕ್ಷಿತವಾತಗುತ್ತಿದೆ ಮತ್ತು ಸಬಲಗೊಳ್ಳುತ್ತದೆ"
ಪ್ರಕಟಣಾ ದಿನಾಂಕ:
30 APR 2026 12:35PM by PIB Bengaluru
"ಭಾರತವು ತನ್ನ ನೆಲದಲ್ಲಿ ಭಯೋತ್ಪಾದಕ ದಾಳಿಗಳು ನಡೆದಾಗ ಕೇವಲ ರಾಜತಾಂತ್ರಿಕ ಹೇಳಿಕೆಗಳನ್ನು ನೀಡಿ ಸುಮ್ಮನಾಗುವ ಹಳೆಯ ಮನಸ್ಥಿತಿಗೆ ಈಗ ಅಂಟಿಕೊಂಡಿಲ್ಲ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದಿಟ್ಟ ಕ್ರಮದ ಮೂಲಕ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದು, ಬರೀ ಹೇಳಿಕೆ ಮತ್ತು ಮಾತಿನ ಆರ್ಭಟಗಳನ್ನು ಮೀರಿ ಸಾಗಿದೆ," ಎಂದು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಹೇಳಿದರು. ಏಪ್ರಿಲ್ 30 ರಂದು ನವದೆಹಲಿಯಲ್ಲಿ ʻರಾಷ್ಟ್ರೀಯ ಭದ್ರತಾ ಶೃಂಗಸಭೆ-2026ʼ ಉದ್ದೇಶಿಸಿ ಮಾತನಾಡಿದ ಅವರು ಈ ವಿಷಯ ಪ್ರಸ್ತಾಪಿಸಿದರು. ಯಾವುದೇ ಸಂದರ್ಭದಲ್ಲೂ ಯಾವುದೇ ಭಯೋತ್ಪಾದಕ ಕೃತ್ಯವನ್ನು ಸಹಿಸುವುದಿಲ್ಲ ಎಂಬ ದೃಢವಾದ ನಿಲುವನ್ನು ಸರ್ಕಾರ ಉಳಿಸಿಕೊಂಡಿದೆ ಎಂದು ಅವರು ಪ್ರತಿಪಾದಿಸಿದರು. ʻಸರ್ಜಿಕಲ್ ಸ್ಟ್ರೈಕ್ʼ, ವಾಯುದಾಳಿ ಮತ್ತು ʻಆಪರೇಷನ್ ಸಿಂದೂರʼವು ಭಯೋತ್ಪಾದನೆ ವಿರುದ್ಧ ಸರ್ಕಾರದ ದೃಢ ನಿಲುವಿನ ಪ್ರದರ್ಶನ ಎಂದು ಅವರು ಬಣ್ಣಿಸಿದರು.

"ಭಯೋತ್ಪಾದನೆಯು ದುಷ್ಟ ಮತ್ತು ವಿಕೃತ ಮನಸ್ಥಿತಿಯಿಂದ ಹುಟ್ಟುತ್ತದೆ. ಇದು ಮಾನವೀಯತೆಯ ಮೇಲೆ ಕರಾಳ ಛಾಯೆ ಮೂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧದ ಹೋರಾಟವು ಕೇವಲ ರಾಷ್ಟ್ರೀಯ ಭದ್ರತೆಯ ವಿಷಯವಲ್ಲ. ಮೂಲಭೂತವಾಗಿ, ಇದು ಮಾನವೀಯತೆಯ ಮೂಲ ಮೌಲ್ಯಗಳನ್ನು ರಕ್ಷಿಸುವ ಯುದ್ಧವಾಗಿದೆ. ಇದು ಪ್ರತಿಯೊಂದು ಮಾನವೀಯ ಮೌಲ್ಯಕ್ಕೆ ನೇರ ವಿರುದ್ಧವಾಗಿ ನಿಲ್ಲುವ ಅನಾಗರಿಕ ಸಿದ್ಧಾಂತದ ವಿರುದ್ಧದ ಹೋರಾಟವಾಗಿದೆ. ನಾವು ಈ ಭಾರತೀಯ ದೃಷ್ಟಿಕೋನವನ್ನು ದೇಶ ಮತ್ತು ವಿದೇಶಗಳಲ್ಲಿ ವ್ಯಕ್ತಪಡಿಸಿದ್ದೇವೆ," ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.
ಎಲ್ಲಿಯವರೆಗೆ ಭಯೋತ್ಪಾದನೆ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೆ ಅದು ಸಾಮೂಹಿಕ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಸವಾಲಾಗಿ ಮುಂದುವರಿಯುತ್ತದೆ ಎಂದು ರಕ್ಷಣಾ ಸಚಿವರು ಹೇಳಿದರು. ಭಯೋತ್ಪಾದನೆಗೆ ಧಾರ್ಮಿಕ ಬಣ್ಣ ನೀಡುವ ಮೂಲಕ ಅಥವಾ ನಕ್ಸಲಿಸಂನಂತಹ ಹಿಂಸಾತ್ಮಕ ಸಿದ್ಧಾಂತದೊಂದಿಗೆ ಜೋಡಿಸುವ ಮೂಲಕ ಅದನ್ನು ಸಮರ್ಥಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಅತ್ಯಂತ ಅಪಾಯಕಾರಿ ಮತ್ತು ಒಂದು ರೀತಿಯಲ್ಲಿ, ಭಯೋತ್ಪಾದಕರಿಗೆ ರಕ್ಷಣೆ ಒದಗಿಸುತ್ತದೆ. ಇದರಿಂದ ಅವರು ನಿಧಾನವಾಗಿ ತಮ್ಮ ಗುರಿಯತ್ತ ಸಾಗಲು ನೆರವಾಗುತ್ತದೆ. ಭಯೋತ್ಪಾದನೆ ಕೇವಲ ರಾಷ್ಟ್ರ ವಿರೋಧಿ ಕೃತ್ಯವಲ್ಲ; ಇದು - ಕಾರ್ಯಾಚರಣೆ, ಸೈದ್ಧಾಂತಿಕ ಮತ್ತು ರಾಜಕೀಯ ಹೀಗೆ ಬಹು ಆಯಾಮಗಳನ್ನು ಹೊಂದಿದೆ. ಈ ಎಲ್ಲಾ ಆಯಾಮಗಳಲ್ಲಿ ನಾವು ಎದುರಿಸಿದಾಗ ಮಾತ್ರ ಅದನ್ನು ನಿರ್ಮೂಲನೆ ಮಾಡಬಹುದು" ಎಂದು ಅವರು ಹೇಳಿದರು.
ಭಯೋತ್ಪಾದನೆಗೆ ಪಾಕಿಸ್ತಾನದ ನಿರಂತರ ಬೆಂಬಲದ ಬಗ್ಗೆ ಮಾತನಾಡಿದ ಶ್ರೀ ರಾಜನಾಥ್ ಸಿಂಗ್, "ಭಾರತ ಮತ್ತು ಪಾಕಿಸ್ತಾನ ಎರಡೂ ಒಂದೇ ಸಮಯದಲ್ಲಿ ಸ್ವಾತಂತ್ರ್ಯವನ್ನು ಪಡೆದವು. ಆದಾಗ್ಯೂ, ಇಂದು ಭಾರತವು ʻಐಟಿʼ ಅಂದರೆ ʻಇನ್‌ಫರ್ಮೇಷನ್ ಟೆಕ್ನಾಲಜಿʼಗಾಗಿ( (ಮಾಹಿತಿ ತಂತ್ರಜ್ಞಾನ) ಜಾಗತಿಕವಾಗಿ ಮನ್ನಣೆ ಪಡೆದಿದೆ. ಇದೇವೇಳೆ, ಪಾಕಿಸ್ತಾನವನ್ನು ಸಹ ವಿಭಿನ್ನ ʻಐಟಿʼ ಇಂದು ಜಾಗತಿಕವಾಗಿ ಗುರುತಿಸಲಾಗಿದೆ. ಆದರೆ ಪಾಕ್ ವಿಚಾರದಲ್ಲಿ ʻಐಟಿʼ ಎಂದರೆ 'ಅಂತರರಾಷ್ಟ್ರೀಯ ಭಯೋತ್ಪಾದನೆ'ಯ(ಇಂಟರ್‌ನ್ಯಾಷನಲ್ ಟೆರರಿಸಂ) ಕೇಂದ್ರ ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.
ʻಆಪರೇಷನ್ ಸಿಂದೂರʼವು ಭಾರತೀಯ ರಕ್ಷಣಾ ಪಡೆಗಳ ಸಹಭಾಗಿತ್ವ ಮತ್ತು ಸಮನ್ವಯಕ್ಕೆ ಒಂದು ಜ್ವಲಂತ ಉದಾಹರಣೆ ಎಂದು ಶ್ರೀ ರಾಜನಾಥ್ ಸಿಂಗ್ ಅವರು ಬಣ್ಣಿಸಿದರು. ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗಳು ಒಗ್ಗಟ್ಟಿನಿಂದ ಮತ್ತು ಏಕೀಕೃತ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿದವು. ಭಾರತದ ಸೇನಾಪಡೆಗಳು ಇನ್ನು ಮುಂದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರದರ್ಶಿಸಿವೆ. ಭಾರತೀಯ ತ್ರಿವಳಿ ಪಡೆಗಳು ಜಂಟಿ, ಸಂಯೋಜಿತ ಮತ್ತು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿವೆ ಎಂದು ಅವರು ಹೇಳಿದರು.
ಭಾರತವು ʻಆಪರೇಷನ್ ಸಿಂದೂರʼ ಕಾರ್ಯಾಚರಣೆಯನ್ನು ತನ್ನದೇ ಆದ ನಿಯಮಗಳ ಆಧಾರದ ಮೇಲೆ ಮತ್ತು ತನ್ನದೇ ಆದ ಆಯ್ಕೆಯ ಸಮಯದಲ್ಲಿ ಕಾರ್ಯಗತಗೊಳಿಸಿತು. ಜೊತೆಗೆ, ತನ್ನದೇ ಆದ ನಿಯಮಗಳ ಆಧಾರದ ಮೇಲೆ ಅದನ್ನು ನಿಲ್ಲಿಸಿತು ಎಂದು ರಕ್ಷಣಾ ಸಚಿವರು ಹೇಳಿದರು. "ಕಾರ್ಯಾಚರಣೆಯ ಸಮಯದಲ್ಲಿ, ನಮ್ಮ ವಿರುದ್ಧ ದಾಳಿ ನಡೆಸಿದವರನ್ನು ಮಾತ್ರ ನಾವು ಸಂಪೂರ್ಣ ನಿಖರತೆಯಿಂದ ಗುರಿಯಾಗಿಸಿ ಹೊಡೆದಿದ್ದೇವೆ. ನಮ್ಮ ಸಾಮರ್ಥ್ಯ ಕಡಿಮೆಯಾಗಿದ್ದರಿಂದ ನಾವು ಕಾರ್ಯಾಚರಣೆಯನ್ನು ನಿಲ್ಲಿಸಲಿಲ್ಲ. ಬದಲಿಗೆ, ನಾವು ಅದನ್ನು ಸಂಪೂರ್ಣವಾಗಿ ನಮ್ಮದೇ ಆದ ನಿಯಮಗಳ ಆಧಾರದ ಮೇಲೆ ಅದನ್ನು ಸ್ಥಗಿತಗೊಳಿಸಿದ್ದೇವೆ. ಸುದೀರ್ಘ ಸಂಘರ್ಷವನ್ನು ಮುಂದುವರಿಸಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೆವು. ದಾಳಿಯನ್ನು ತೀವ್ರಗೊಳಿಸಲು ಅಗತ್ಯವಾದ ಸಾಮರ್ಥ್ಯವನ್ನು ಹೊಂದಿದ್ದೇವೆ ಮತ್ತು ಹಠಾತ್ ಬಿಕ್ಕಟ್ಟಿನ ಕ್ಷಣಗಳಲ್ಲಿ ನಮ್ಮ ಸಾಮರ್ಥ್ಯಗಳನ್ನು ತ್ವರಿತವಾಗಿ ಹೆಚ್ಚಿಸುವ ಅಂತರ್ಗತ ಶಕ್ತಿಯನ್ನು ಹೊಂದಿದ್ದೇವೆ," ಎಂದು ಅವರು ಮಾಹಿತಿ ನೀಡಿದರು.
ಭಾರತದ ಮಿಲಿಟರಿ-ಕೈಗಾರಿಕಾ ಕ್ಷೇತ್ರವು, ಶಾಂತಿ ಸಮಯದ ಅವಶ್ಯಕತೆಗಳನ್ನು ಮಾತ್ರವಲ್ಲದೆ, ಯುದ್ಧದ ಸಮಯದಲ್ಲಿ ತ್ವರಿತ ಪೂರೈಕೆ ಮತ್ತು ಸಾಗಣೆ ಬೇಡಿಕೆಗಳನ್ನು ಪೂರೈಸಲು ಸಿದ್ಧವಾಗಿದೆ ಎಂದು ಸತತವಾಗಿ ಸಾಬೀತುಪಡಿಸಿದೆ ಎಂಬ ಅಂಶವನ್ನು ಶ್ರೀ ರಾಜನಾಥ್ ಸಿಂಗ್ ಒತ್ತಿಹೇಳಿದರು. ಆ ಕಾಲಾವಧಿಯಲ್ಲಿ ಭಾರತ ಅಣ್ವಸ್ತ್ರ ದಾಳಿಯ ಬೆದರಿಕೆಗೆ ಸೊಪ್ಪು ಹಾಕಲಿಲ್ಲ. ಬದಲಿಗೆ ನಿಗದಿತ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಯತು ಎಂದು ಅವರು ಪ್ರತಿಪಾದಿಸಿದರು. "ಇದು ʻಹೊಸ ಜಾಗತಿಕ ವ್ಯವಹಾರ ಪದ್ಧತಿʼ, ಇದು ಈಗಿನ ಹೊಸ ಜಾಗತಿಕ ಯುಗದ 'ನವ ಭಾರತ'. ಭಾರತವು ಭಯೋತ್ಪಾದನೆ ಮತ್ತು ಅದನ್ನು ಪ್ರಾಯೋಜಿಸುವವರ ನಡುವೆ ಯಾವುದೇ ವ್ಯತ್ಯಾಸವನ್ನು ಗುರುತಿಸುವುದಿಲ್ಲ. ಇದು ನಮ್ಮ ಪ್ರಧಾನ ಮಂತ್ರಿಯವರ ನಿಸ್ಸಂದಿಗ್ಧ ನೀತಿಯಾಗಿದೆ, ಇದು ಬದಲಾಗುತ್ತಿರುವ ಜಾಗತಿಕ ವಿದ್ಯಮಾನದ ನಡುವೆ ಭಾರತವನ್ನು ಪರಿವರ್ತಿಸಿದೆ," ಎಂದು ಅವರು ಹೇಳಿದರು.
ʻಆಪರೇಷನ್ ಸಿಂದೂರʼ ಕಾರ್ಯಾಚರಣೆಯನ್ನು ಪ್ರತಿರೋಧದ ಸಾಕಾರ ರೂಪ ಎಂದು ಬಣ್ಣಿಸಿದ ರಕ್ಷಣಾ ಸಚಿವರು, ಕಾರ್ಯಾಚರಣೆಯನ್ನು ಕೇವಲ 72 ಗಂಟೆಗಳ ಅವಧಿಯಲ್ಲಿ ಮುಕ್ತಾಯಗೊಳಿಸಲಾಗಿದ್ದರೂ, ಅದರ ಹಿಂದಿನ ಪೂರ್ವಸಿದ್ಧತಾ ಕಾರ್ಯವು ವ್ಯಾಪಕವಾಗಿತ್ತು ಮತ್ತು ಸುದೀರ್ಘವಾಗಿತ್ತು ಎಂದು ಹೇಳಿದರು. ಭಾರತದ ದಾಳಿ ತೀವ್ರಗೊಳಿಸುವ ಸಾಮರ್ಥ್ಯ; ಸಂಪನ್ಮೂಲಗಳನ್ನು ವೇಗವಾಗಿ ಕ್ರೋಢೀಕರಿಸುವ ಸಾಮರ್ಥ್ಯ, ವ್ಯೂಹಾತ್ಮಕ ದಾಸ್ತಾನು ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ವಿಶ್ವಾಸಾರ್ಹತೆ ಎಲ್ಲವೂ ಪ್ರತಿರೋಧದ ಅವಿಭಾಜ್ಯ ಅಂಗಗಳಾಗಿವೆ ಎಂದು ಅವರು ಗಮನಸೆಳೆದರು.

ʻಆಪರೇಷನ್ ಸಿಂಧೂರʼದ ನೇರ ಪರಿಣಾಮವಾಗಿ ಜಾಗತಿಕ ಗ್ರಹಿಕೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ದೇಶೀಯ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉತ್ಪನ್ನಗಳ ವಿಶ್ವಾಸಾರ್ಹತೆಯ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆದಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. "ಹಲವಾರು ರಾಷ್ಟ್ರಗಳು ಭಾರತದಿಂದ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉಪಕರಣಗಳನ್ನು ಖರೀದಿಸಲು ಬಹಳ ಆಸಕ್ತಿ ವ್ಯಕ್ತಪಡಿಸಿವೆ. ಅಂಕಿ-ಅಂಶಗಳು ಎಲ್ಲವನ್ನೂ ಹೇಳುತ್ತವೆ. 2025-26ರ ಆರ್ಥಿಕ ವರ್ಷದಲ್ಲಿ, ರಕ್ಷಣಾ ರಫ್ತಿನ ಮೌಲ್ಯವು 38,424 ಕೋಟಿ ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.62.66 ರಷ್ಟು ಏರಿಕೆಯಾಗಿದೆ. ಈ ಮಾನದಂಡಗಳನ್ನು ಮೀರುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಮುನ್ನಡೆಸಲು ನಾವು ಬದ್ಧರಾಗಿದ್ದೇವೆ," ಎಂದು ಅವರು ಹೇಳಿದರು.
ತಮ್ಮ ಇತ್ತೀಚಿನ ಜರ್ಮನಿ ಭೇಟಿಯನ್ನು ಉಲ್ಲೇಖಿಸಿದ ರಕ್ಷಣಾ ಸಚಿವರು, ಯುರೋಪಿನಾದ್ಯಂತ ಪ್ರಮುಖ ಕಂಪನಿಗಳು ಭಾರತದ ಖಾಸಗಿ ರಕ್ಷಣಾ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳೊಂದಿಗೆ ಸಹಯೋಗಕ್ಕೆ ಉತ್ಸುಕವಾಗಿವೆ. ಇದು ಭಾರತದ ಹೆಚ್ಚುತ್ತಿರುವ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ವಿಶ್ವದಲ್ಲಿ ಭಾರತದ ಅಸಾಧಾರಣ ನಿಲುವು ಅದರ ಮಿಲಿಟರಿ ಪರಾಕ್ರಮದಿಂದ ಮಾತ್ರವಲ್ಲದೆ, ದಾಳಿ ಅಥವಾ ಎದುರಾಳಿಗಳನ್ನು ಎದುರಿಸುವ ಸಾಮರ್ಥ್ಯದಿಂದಲೂ ಬಲಗೊಂಡಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ದಾಳಿಗಳ ಸ್ವರೂಪದಲ್ಲಿ ಆಗಿರುವ ತ್ವರಿತ ಬದಲಾವಣೆಯನ್ನು ಎತ್ತಿ ತೋರಿದ ಶ್ರೀ ರಾಜನಾಥ್ ಸಿಂಗ್ ಅವರು, ಸೈಬರ್ ಕ್ಷೇತ್ರ, ಬಾಹ್ಯಾಕಾಶ ಯುದ್ಧ ಮತ್ತು ಮಾಹಿತಿ ತಂತ್ರಜ್ಞಾನವು ಅವಿಭಾಜ್ಯ ಅಂಗಗಳಾಗಿ ಹೊರಹೊಮ್ಮಿವೆ. ಕೃತಕ ಬುದ್ಧಿಮತ್ತೆ (ಎಐ) ಈ ಬದಲಾವಣೆಯ ಕೇಂದ್ರಬಿಂದುವಾಗಿದೆ ಎಂದು ಹೇಳಿದರು. "ಆಪರೇಷನ್ ಸಿಂದೂರದ ಸಮಯದಲ್ಲಿ ಬಳಸಿದ ʻಬ್ರಹ್ಮೋಸ್ʼನಂತಹ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳಿಂದ ಹಿಡಿದು ವಿವಿಧ ಕಣ್ಗಾವಲು ವೇದಿಕೆಗಳವರೆಗೆ, ಕೃತಕ ಬುದ್ಧಿಮತ್ತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯೋಜಿಸಲಾಗಿದೆ. ಇದು ನಮ್ಮ ನಿಖರತೆ ಮತ್ತು ದಾಳಿ ಸಾಮರ್ಥ್ಯಗಳನ್ನು ಹೆಚ್ಚಿಸಿದೆ. ಪ್ರಮುಖ ಕಾರ್ಯಾಚರಣೆಗಳ ಮಾಹಿತಿಯು ಆಗಾಗ್ಗೆ ಸಾರ್ವಜನಿಕ ವೇದಿಕೆಗಳಿಗೆ ಬಯಲಾಗುತ್ತಿದೆಯಾದರೂ, ಅಪಾಯಗಳು ಎರಗುವ ಮುನ್ನ ಅವುಗಳನ್ನು ತಟಸ್ಥಗೊಳಿಸಲು ಪೂರ್ವಭಾವಿಯಾಗಿ ನಡೆಸಿದ ಅಸಂಖ್ಯಾತ ಸಣ್ಣ ಕಾರ್ಯಾಚರಣೆಗಳನ್ನು ನಾವು ಕಾಣಬಹುದು. ಅಂತಹ ಎಲ್ಲಾ ಸಂದರ್ಭಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ," ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆಯ ಅನ್ವಯದ ಪ್ರಾಯೋಗಿಕತೆಯನ್ನು ಒತ್ತಿಹೇಳಿದ ರಕ್ಷಣಾ ಸಚಿವರು, ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ದಿಟ್ಟ ತಿರುಗೇಟು ನೀಡಲು ಇದು ಅತ್ಯಂತ ನಿರ್ಣಾಯಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. "ಎಐ ಎಂದರೆ 'ವರ್ಧಿತ ಪದಾತಿದಳ' (ಆಗ್ಮೆಂಟೆಡ್ ಇನ್‌ಫ್ಯಾಂಟ್ರಿ). ಇದು ನಮ್ಮ ಸೈನಿಕರ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿದೆ. ಆಧುನಿಕ ಯುದ್ಧದ ಬೇಡಿಕೆಗಳಿಗೆ ಅನುಗುಣವಾಗಿ, ನಾವು ನಮ್ಮ ಮಿಲಿಟರಿಯನ್ನು ತಂತ್ರಜ್ಞಾನ-ಆಧರಿತ, ಸಂಯೋಜಿತ ಹೋರಾಟ ಯಂತ್ರವಾಗಿ ಪರಿವರ್ತಿಸುವತ್ತ ವೇಗವಾಗಿ ಮುಂದುವರಿಯುತ್ತಿದ್ದೇವೆ. ಈ ನಿಟ್ಟಿನಲ್ಲಿ, ಸೇನೆಯು 'ರುದ್ರ' ಬ್ರಿಗೇಡ್‌ಗಳು, 'ಭೈರವ್' ಬೆಟಾಲಿಯನ್ಗಳು, 'ಶಕ್ತಿಬಾನ್' ಫಿರಂಗಿ ರೆಜಿಮೆಂಟ್‌ಗಳು ಮತ್ತು 'ದಿವ್ಯಾಸ್ತ್ರ' ಬ್ಯಾಟರಿಗಳಂತಹ ಚುರುಕಾದ, ಸ್ವಾವಲಂಬಿ ಯುದ್ಧ ಘಟಕಗಳನ್ನು ಸ್ಥಾಪಿಸಿದೆ. ಇದು ಆಧುನಿಕ ಹೈಬ್ರಿಡ್ ಬೆದರಿಕೆಗಳಿಗೆ ತಕ್ಷಣದ ಮತ್ತು ದೃಢವಾದ ತಿರುಗೇಟು ನೀಡುವ ಸಾಮರ್ಥ್ಯವನ್ನು ಹೆಚ್ಚಿಸಿದೆ" ಎಂದು ಅವರು ಹೇಳಿದರು.

ಕೆಲಸದ ಸಂಸ್ಕೃತಿಯನ್ನು ಪರಿವರ್ತಿಸಲು, ನಮ್ಮ ಸೈನಿಕರ ಕಲ್ಯಾಣವನ್ನು ಖಾತ್ರಿಪಡಿಸಲು ಮತ್ತು ಅವರ ಜೀವನ ಮಟ್ಟವನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆಯು ಪ್ರಬಲ ಸಾಧನವಾಗಿ ಹೊರಹೊಮ್ಮಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ರಕ್ಷಣಾ ಪಿಂಚಣಿದಾರರು ಮತ್ತು ಅನುಭವಿಗಳಿಗಾಗಿ ಅಭಿವೃದ್ಧಿಪಡಿಸಲಾದ ʻಸ್ಪರ್ಶ್ʼ ಪೋರ್ಟಲ್ ಅನ್ನು ಅವರು ಉಲ್ಲೇಖಿಸಿದರು. ಕೃತಕ ಬುದ್ಧಿಮತ್ತೆ ಆಧಾರಿತ ʻಚಾಟ್‌ಬಾಟ್ʼಗಳ ಮೂಲಕ, ಪಿಂಚಣಿ ಸಂಬಂಧಿತ ಪ್ರಕ್ರಿಯೆಗಳನ್ನು ಗಮನಾರ್ಹವಾಗಿ ಸರಳೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕುಂದುಕೊರತೆ ಪರಿಹಾರದಿಂದ ವೈದ್ಯಕೀಯ ದಾಖಲೆಗಳ ಮೇಲ್ವಿಚಾರಣೆಯವರೆಗೆ, ಎಲ್ಲಾ ಅಂಶಗಳನ್ನು ಕೃತಕ ಬುದ್ಧಿಮತ್ತೆ ಚಾಲಿತ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಇದಲ್ಲದೆ, ಸೈನಿಕರ ಕುಟುಂಬಗಳು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ವಿಷಯದಲ್ಲಿ ಎಂದಿಗೂ ಹಿಂದುಳಿಯದಂತೆ ಖಚಿತಪಡಿಸಿಕೊಳ್ಳಲು ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈಗಿನ ಹೊಸ ಜಾಗತಿಕ ವ್ಯವಹಾರ ಪದ್ಧತಿಯಲ್ಲಿ ಕೃತಕ ಬುದ್ಧಿಮತ್ತೆಯು ಭಾರತದ ಕಾರ್ಯತಂತ್ರದ ಸನ್ನದ್ಧತೆಯ ಅನಿವಾರ್ಯ ಅಂಶವಾಗುತ್ತಿದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದರು. ಸರ್ಕಾರವು ಈ ಉಪಕ್ರಮವನ್ನು ಕೇವಲ ಮಿಲಿಟರಿಗೆ ಮಾತ್ರ ಸೀಮಿತಗೊಳಿಸಿಲ್ಲ, ಬದಲಿಗೆ ಇಡೀ ದೇಶಾದ್ಯಂತ ಎಐಗೆ ಸಂಬಂಧಿಸಿದಂತೆ ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಸಮಗ್ರ ಕಾರ್ಯತಂತ್ರವನ್ನು ರೂಪಿಸಿದೆ ಎಂದು ಹೇಳಿದರು. "ಸರ್ಕಾರದ ʻಇಂಡಿಯಾ ಎಐ ಮಿಷನ್ʼ ಮೂಲಕ, ನಾವು ದೇಶಾದ್ಯಂತ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಎಲ್ಲರಿಗೂ ತಲುಪುವಂತೆ ಮಾಡುತ್ತಿದ್ದೇವೆ. ಆ ಮೂಲಕ ಸಣ್ಣ ಪಟ್ಟಣಗಳಲ್ಲಿನ ಯುವಕರು ಸಹ ಕೃತಕ ಬುದ್ಧಿಮತ್ತೆಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತೇವೆ. 10,000ಕ್ಕೂ ಹೆಚ್ಚು ಜಿಪಿಯು ಸಾಮರ್ಥ್ಯ, ʻಫ್ಯೂಚರ್ ಸ್ಕಿಲ್ಸ್ʼ ಕಾರ್ಯಕ್ರಮದಂತಹ ಉಪಕ್ರಮಗಳು ಹಾಗೂ ಡೇಟಾ ಮತ್ತು ʻಎಐ ಲ್ಯಾಬ್ʼಗಳ ಸ್ಥಾಪನೆಯು ತಾಂತ್ರಿಕ ಕ್ರಾಂತಿಯ ಈ ಯುಗದಲ್ಲಿ ಭಾರತವು ಹಿಂದೆ ಉಳಿಯಬಾರದು ಎಂಬ ನಮ್ಮ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಾವು ಇತ್ತೀಚೆಗೆ ʻಇಂಡಿಯಾ ಎಐ ಪರಿಣಾಮ ಶೃಂಗಸಭೆ-2026ʼ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಅಲ್ಲಿ 20ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, 89 ದೇಶಗಳು ಮತ್ತು ಸಂಸ್ಥೆಗಳು ನಮ್ಮ ʻಎಐ ಪ್ರಣಾಳಿಕೆʼಯನ್ನು ಅನುಮೋದಿಸಿದವು. ಇಂದು, ಜಾಗತಿಕ ʻಎಐʼ ಮಾನದಂಡಗಳನ್ನು ರೂಪಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ. ನಾವು 'ಎಲ್ಲರಿಗೂ ಕೃತಕ ಬುದ್ಧಿಮತ್ತೆ' ಎಂಬ ತತ್ವದ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ. ಅದರ ಪ್ರಯೋಜನಗಳು ಆಯ್ದ ಕೆಲವು ರಾಷ್ಟ್ರಗಳಿಗೆ ಸೀಮಿತವಾಗದೆ ಜಾಗತಿಕ ದಕ್ಷಿಣಕ್ಕೂ ವಿಸ್ತರಿಸುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ," ಎಂದು ಅವರು ಹೇಳಿದರು.
ಆದಾಗ್ಯೂ, ʻಡೀಪ್ ಫೇಕ್ʼಗಳುಳು, ಸೈಬರ್ ಯುದ್ಧ ಮತ್ತು ಸ್ವಾಯತ್ತ ಶಸ್ತ್ರಾಸ್ತ್ರ ವ್ಯವಸ್ಥೆಗಳು ಹೊಸ ಮತ್ತು ಅಸಾಧಾರಣ ಸವಾಲುಗಳನ್ನು ಒಡ್ಡುತ್ತಿವೆ. ಹೀಗಾಗಿ ಕೃತಕ ಬುದ್ಧಿಮತ್ತೆಯನ್ನು ಸಂಪೂರ್ಣವಾಗಿ ಅನುಕೂಲಕದ ದೃಷ್ಟಿಯಿಂದ ಮಾತ್ರ ನೋಡಲಾಗುವುದಿಲ್ಲ ಎಂದು ಶ್ರೀ ರಾಜನಾಥ್ ಸಿಂಗ್ ಎಚ್ಚರಿಸಿದರು. "ಮುಂದಿನ ದಿನಗಳಲ್ಲಿ ಅವು ಮತ್ತಷ್ಟು ತೀವ್ರಗೊಳ್ಳುವುದರಿಂದ ನಾವು ಈ ಸವಾಲುಗಳನ್ನು ದೃಢವಾಗಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ʻಎಐʼ ಅನ್ನು ನಿಯಂತ್ರಿಸದಿದ್ದರೆ, ನಮ್ಮ ರಕ್ಷಣೆಗಾಗಿ ನಾವು ರಚಿಸಿದ ಸಾಧನವು ಅಂತಿಮವಾಗಿ ನಮಗೇ ವಿನಾಶದ ಸಾಧನವಾಗಬಹುದು. ಆದ್ದರಿಂದ, ಕೃತಕ ಬುದ್ಧಿಮತ್ತೆಯು ನಮ್ಮನ್ನು ದಾರಿ ತಪ್ಪಿಸುವ ಶಕ್ತಿಯಾಗುವ ಬದಲು ನಮಗೆ ಮಾರ್ಗದರ್ಶನ ನೀಡುವ ಶಕ್ತಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿರಬೇಕು. ಸಾಮೂಹಿಕ ಪ್ರಯತ್ನಗಳು ಮತ್ತು ಅಂತಾರಾಷ್ಟ್ರೀಯ ಸಹಕಾರದ ಮೂಲಕ ನಾವು ಕೃತಕ ಬುದ್ಧಿಮತ್ತೆ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು," ಎಂದು ಅವರು ಹೇಳಿದರು.
ಯುದ್ಧಭೂಮಿ ಕಣ್ಗಾವಲು ಮತ್ತು ಸ್ವಾಯತ್ತ ವ್ಯವಸ್ಥೆಗಳಿಂದ ಹಿಡಿದು ಸರಕು-ಸಾಗಣೆ ಉನ್ನತೀಕರಣ ಹಾಗೂ ಕಮಾಂಡ್ ನಿರ್ಧಾರ ಬೆಂಬಲದವರೆಗೆ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರವನ್ನು ನಿಖರವಾಗಿ ಅಧ್ಯಯನ ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವರು ಪ್ರತಿಪಾದಿಸಿದರು. "ಸುದರ್ಶನ ವಾಯು ರಕ್ಷಣೆ ವ್ಯವಸ್ಥೆಯು ಒಂದು ಬೃಹತ್ ಯೋಜನೆಯಾಗಿದ್ದು, ಇದು ಕೃತಕ ಬುದ್ಧಿಮತ್ತೆಯ ಅನುಕರಣೀಯ ಅನ್ವಯಕ್ಕೆ ಪ್ರಮುಖ ಉದಾಹರಣೆಯಾಗಿದೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ (ಮೆಷಿನ್ ಲರ್ನಿಂಗ್) ಮತ್ತು ʻಬಿಗ್ ಡೇಟಾ ಸೈನ್ಸ್ʼ ಅನ್ನು ಬಳಸಿಕೊಳ್ಳುವ ಮೂಲಕ, ನಮ್ಮ ರಕ್ಷಣಾ ಪಡೆಗಳು ಉದಯೋನ್ಮುಖ ʻಎಐʼ ಆಧಾರಿತ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿವೆ. ಈ ಕಾರ್ಯತಂತ್ರವು ಭವಿಷ್ಯದಲ್ಲಿ ರಕ್ಷಣಾ ಪಡೆಗಳನ್ನು ಇನ್ನಷ್ಟು ಹೊಂದಿಕೊಳ್ಳುವ ಮತ್ತು ಸ್ಪಂದನೀಯವಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೂಲಕ, ನಮ್ಮ ರಾಷ್ಟ್ರವು ಹೆಚ್ಚು ಸುರಕ್ಷಿತವಾಗುವುದು ಮಾತ್ರವಲ್ಲದೆ ಬಲಗೊಳ್ಳುತ್ತದೆ ಜೊತೆಗೆ ಹೆಚ್ಚು ಸಮೃದ್ಧವಾಗಿ ಬೆಳೆಯುತ್ತದೆ," ಎಂದು ಅವರು ಹೇಳಿದರು.
ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ʻಡಿಆರ್‌ಡಿಒʼ ಅಧ್ಯಕ್ಷರಾದ ಡಾ. ಸಮೀರ್ ವಿ ಕಾಮತ್ ಮತ್ತು ʻಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ʼ ಮುಖ್ಯಸ್ಥ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2256909)
ವಿಸಿಟರ್ ಕೌಂಟರ್ : 13