ಪ್ರಧಾನ ಮಂತ್ರಿಯವರ ಕಛೇರಿ
ಗ್ಯಾಂಗ್ಟಕ್‌ನಲ್ಲಿ ಸಿಕ್ಕಿಂನ 50ನೇ ರಾಜ್ಯೋತ್ಸವ(ರಾಜ್ಯತ್ವ)ದ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
28 APR 2026 1:51PM by PIB Bengaluru
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ಸಿಕ್ಕಿಂ ರಾಜ್ಯಪಾಲರಾದ ಶ್ರೀ ಓಂ ಮಾಥುರ್ ಜಿ, ಜನಪ್ರಿಯ, ಶಕ್ತಿಶಾಲಿ ಯುವಕರಾದ ನನ್ನ ಆತ್ಮೀಯ ಸ್ನೇಹಿತ, ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿಗಳಾದ ಶ್ರೀ ದೋರ್ಜಿ ಶೆರಿಂಗ್ ಲೆಪ್ಚಾ ಜಿ, ಡಾ. ಇಂದ್ರ ಹ್ಯಾಂಗ್ ಸುಬ್ಬಾ ಜಿ, ಶ್ರೀ ದಿಲ್ಲಿ ರಾಮ್ ಥಾಪಾ ಜಿ ಮತ್ತು ಸಿಕ್ಕಿಂನ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.
ಸಿಕ್ಕಿಂನ ಎಲ್ಲಾ ಜನರಿಗೂ ರಾಜ್ಯೋತ್ಸವ ಸುವರ್ಣ ಮಹೋತ್ಸವದ ಶುಭಾಶಯಗಳು ಮತ್ತು ಅಭಿನಂದನೆಗಳು. ನಮಸ್ತೆ, ತಾಶಿ ದೇಲೆಕ್!
ಖಮ್-ರಿ-ಮೋ! ನೀವೆಲ್ಲರೂ ಹೇಗಿದ್ದೀರಿ?
ಸ್ನೇಹಿತರೆ,
ನಿನ್ನೆ ಮಧ್ಯಾಹ್ನ ನಾನು ಗ್ಯಾಂಗ್ಟಕ್ ತಲುಪಿದೆ. ಇಲ್ಲಿಗೆ ಬರುವ ಮೊದಲು, ಬಂಗಾಳ ಚುನಾವಣೆ ಗದ್ದಲದಲ್ಲಿ ನಾನು ಸ್ವಲ್ಪ ಕಾರ್ಯೋನ್ಮುಖನಾಗಿದ್ದೆ. ನಾನು ಇಲ್ಲಿಗೆ ಬಂದ ತಕ್ಷಣ ಸುತ್ತಲೂ ಹೊಸ ಭಾವನೆ, ಹೊಸ ಸಂತೋಷ, ಸಂಭ್ರಮಾಚರಣೆಯ ವಾತಾವರಣದಿಂದ ನನ್ನ ಹೃದಯ ಸಂತೋಷದಿಂದ ತುಂಬಿದೆ. ರಾತ್ರಿಯ ಮಳೆ, ನಂತರ ಬೆಳಗಿನ ತಂಪು, ಮತ್ತು ಈ ಪ್ರಕಾಶಮಾನವಾದ ಸೂರ್ಯ - ಸಿಕ್ಕಿಂನ ಬಣ್ಣಗಳು ನಿಜವಾಗಿಯೂ ಅನನ್ಯವಾದವು.
ಸ್ನೇಹಿತರೆ,
ಸಿಕ್ಕಿಂ ನಿಜಕ್ಕೂ ಪೂರ್ವ ದಿಕ್ಕಿನ ಸ್ವರ್ಗ ತಾಣ, ಆರ್ಕಿಡ್‌ಗಳ ಉದ್ಯಾನ, ಅದರ ಅಪ್ರತಿಮ ಸೌಂದರ್ಯ, ಅದರ ಶಾಂತಿ, ಅದರ ಆಧ್ಯಾತ್ಮಿಕ ಸಂತೋಷ - ಈ ಅನುಭವವನ್ನು ನಾನು ಬಹಳ ಅದೃಷ್ಟದಿಂದ ಪಡೆಯುತ್ತಿದ್ದೇನೆ. ಇಂದು ನಾನು ಇಲ್ಲಿನ ಆರ್ಕಿಡ್‌ಗಳನ್ನು ನೋಡಲು ಹೋಗಿದ್ದೆ. ನನಗೆ ನಿಗದಿಪಡಿಸಿದ ಸಮಯ ಕಡಿಮೆಯಾಗಿತ್ತು, ಆದ್ದರಿಂದ ನಾನು ಅಲ್ಲಿ ಹೆಚ್ಚು ಸಮಯ ಕಳೆದೆ. ದೇಶಾದ್ಯಂತದ ಪ್ರವಾಸಿಗರಿಗೆ, ಪ್ರಕೃತಿ ಪ್ರಿಯ ಪ್ರವಾಸಿಗರಿಗೆ, ಅವರು ಸಿಕ್ಕಿಂನ ಆರ್ಕಿಡ್‌ಗಳನ್ನು ನೋಡಿಲ್ಲದಿದ್ದರೆ, ಅವರು ಏನನ್ನೂ ನೋಡೇ ಇಲ್ಲ ಎಂದೇ ನಾನು ಹೇಳುತ್ತೇನೆ. ಈ ಬಾರಿ ಪ್ರವಾಸಿಗರು ಸಿಕ್ಕಿಂನ ಪ್ರವಾಸೋದ್ಯಮದ ಎಲ್ಲಾ ಅಂಕಿಅಂಶಗಳನ್ನು ಮೀರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಆರ್ಕಿಡ್‌ಗಳಲ್ಲಿ ನಾನು ಪ್ರಕೃತಿಯ ಬಣ್ಣಗಳನ್ನು, ಅವುಗಳ ಸಂತೋಷವನ್ನು ನೋಡಿದೆ, ನನ್ನ ಮನಸ್ಸು ಇನ್ನೂ ಅದರಲ್ಲೇ ಮುಳುಗಿದೆ.
ಸ್ನೇಹಿತರೆ,
ಇಂದು ನಮಗೆ ಸಿಕ್ಕಿಂನ 50 ವರ್ಷಗಳ ಪಯಣವನ್ನು ಆಚರಿಸಲು ಸದವಕಾಶ ಸಿಕ್ಕಿದೆ. ಈ ಸಂದರ್ಭವು ತುಂಬಾ ಐತಿಹಾಸಿಕ ಮತ್ತು ದೈವಿಕ ವಾತಾವರಣದಲ್ಲಿ ನಡೆಯುತ್ತಿರುವಾಗ, ಅದರ ವೈಭವವು ಹಲವು ಪಟ್ಟು ಹೆಚ್ಚಾಗುತ್ತದೆ. ಇಂದು ಈ ಪಲ್ಜೋರ್ ಕ್ರೀಡಾಂಗಣವು ಆ ಅದ್ಭುತ ಪ್ರಭಾವಲಯದಿಂದ ತುಂಬಿದೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾವಿದರ ಆಕರ್ಷಕ ಪ್ರದರ್ಶನಗಳು, ಸಿಕ್ಕಿಂನ ಜನರು ತೋರಿಸಿದ ಉತ್ಸಾಹ, ಪರ್ವತಗಳು ಮತ್ತು ಆಕಾಶದಲ್ಲಿ ಪ್ರಕೃತಿಯ ಸುಂದರ ದೃಶ್ಯಾವಳಿಗಳು - ಪ್ರಕೃತಿ ಮತ್ತು ಸಂಸ್ಕೃತಿ ಒಟ್ಟಿಗೆ ಬಂದಂತೆ ಭಾಸವಾಯಿತು. ನಿಜವಾಗಿಯೂ ಈ ನೆನಪುಗಳು ಯಾವಾಗಲೂ ನನ್ನ ಹೃದಯದಲ್ಲಿ ಉಳಿಯುತ್ತವೆ. ನೃತ್ಯ ಸಂಯೋಜನೆ ಮಾಡಿದ ಎಲ್ಲರಿಗೂ, ಹಾಡಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಇಂದಿನ ಕಾರ್ಯಕ್ರಮದಲ್ಲಿ ಟಿವಿ, ಮಾಧ್ಯಮ, ದೂರದರ್ಶನವು ಅದನ್ನು ಮತ್ತೆ ಮತ್ತೆ ದೇಶಕ್ಕೆ ತೋರಿಸಬೇಕೆಂದು ನಾನು ಬಯಸುತ್ತೇನೆ. ದೇಶದಲ್ಲಿ ರಾಜಕೀಯ ಹಿತಾಸಕ್ತಿಗಳಿಗಾಗಿ ಭಾಷಾ ವಿಭಜನೆ, ಪ್ರಾಂತೀಯತೆ, ತಾರತಮ್ಯಕ್ಕಾಗಿ ಪ್ರಯತ್ನಗಳು ನಡೆದಾಗ, ಇಂದು ಸಿಕ್ಕಿಂ 'ಏಕ್ ಭಾರತ್ ಶ್ರೇಷ್ಠ ಭಾರತ'ದ ದೃಷ್ಟಿಕೋನವನ್ನು ತೋರಿಸಿದೆ. ಈ ಸಣ್ಣ ಕಾರ್ಯಕ್ರಮದಲ್ಲಿ ಅವರು ಇಡೀ ಭಾರತವನ್ನು ಕಣ್ಣ ಮುಂದೆ ಪ್ರಸ್ತುತಪಡಿಸಿದರು. ಈಗಲೂ, ಅವರು ಮಾಡಿರುವ ಆಸನ ವ್ಯವಸ್ಥೆ, ಮೇಲಿನಿಂದ ನನಗೆ ಕಾಣುತ್ತಿದೆ. ಅದು ಇಡೀ ಭಾರತ, ಮತ್ತು ಜನರು ಆಯಾ ರಾಜ್ಯಗಳ ಉಡುಪಿನಲ್ಲಿ ಕುಳಿತಿದ್ದಾರೆ. ಅಲ್ಲಿ ಗುಜರಾತ್ ಜನರು ಗುಜರಾತಿ ವಸ್ತ್ರ ಧರಿಸಿ ಕುಳಿತಿದ್ದಾರೆ. ನಿಜವಾಗಿಯೂ, ನಿಜವಾಗಿಯೂ ನೀವು ಎಲ್ಲರ ಹೃದಯಗಳನ್ನು ಗೆದ್ದಿದ್ದೀರಿ. ಮೋದಿ ಅವರ ಹೃದಯವನ್ನು ಮಾತ್ರವಲ್ಲ, ಆದರೆ ನೀವು ಇಂದು ಇಡೀ ಭಾರತದ ಹೃದಯವನ್ನು ಗೆದ್ದಿದ್ದೀರಿ. ಭಾರತದ ಮೇಲಿನ ಭಕ್ತಿ ಇದೇ, ದೇಶಭಕ್ತಿ ಇದೇ. ಹೊಸ ಪೀಳಿಗೆಯಲ್ಲಿ, ದೇಶಭಕ್ತಿಯ ಭಾವನೆ ಹೀಗೆಯೇ ಉದ್ಭವಿಸುತ್ತದೆ. ಹಾಗಾಗಿ, ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳನ್ನು ಹೇಳುತ್ತೇನೆ.
ಸ್ನೇಹಿತರೆ,
ಸಿಕ್ಕಿಂಗೆ ಬಂದಿರುವುದು ನನಗೆ ತುಂಬಾ ಸಂತೋಷ ನೀಡುತ್ತಿದೆ, ಏಕೆಂದರೆ ಕಳೆದ ಬಾರಿ ಕೆಟ್ಟ ಹವಾಮಾನದಿಂದಾಗಿ ನಾನು ಇಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಬಾಗ್ಡೋಗ್ರಾದಿಂದ ನಾನು ನಿಮ್ಮೊಂದಿಗೆ ವರ್ಚುವಲ್ ಕಾರ್ಯಕ್ರಮದಲ್ಲಿ ಸಂಪರ್ಕ ಸಾಧಿಸಬೇಕಾಯಿತು. ನಿಮ್ಮನ್ನು ಇಲ್ಲಿ ಭೇಟಿಯಾಗಲು ಸಾಧ್ಯವಾಗದಿದ್ದಕ್ಕಾಗಿ ಆ ವಿಷಾದ ನನ್ನ ಮನಸ್ಸಿನಲ್ಲಿ ಉಳಿದಿತ್ತು. ಪ್ರೇಮ್ ಸಿಂಗ್ ಜಿ ನನ್ನನ್ನು ಭೇಟಿಯಾದಾಗಲೆಲ್ಲಾ ನೀವು ತುಂಬಾ ಶ್ರಮ ಹಾಕಿ ಕಾರ್ಯಕ್ರಮ ಆಯೋಜಿಸಿದ್ದಿರಿ, ಆದರೆ ನನಗೆ ಬರಲು ಸಾಧ್ಯವಾಗಲಿಲ್ಲ ಎಂದು ನನ್ನ ಕಣ್ಣುಗಳು ತೇವವಾಗಿದ್ದವು, ಅದಕ್ಕಾಗಿ ನಾನು ಕಾಯುತ್ತಿದ್ದೆ, ಆ ಕಾಯುವಿಕೆ ಇಂದು ಈ ಸಂದರ್ಭದ ಮೂಲಕ ನೆರವೇರಿದೆ.
ಸ್ನೇಹಿತರೆ,
ಸಿಕ್ಕಿಂ ಜನರನ್ನು ಭೇಟಿಯಾಗುವುದು ಯಾವಾಗಲೂ ನನಗೆ ವಿಭಿನ್ನ ಶಾಂತಿಯನ್ನು ನೀಡುತ್ತದೆ. ನಿಮ್ಮ ಸೌಮ್ಯತೆ, ನಿಮ್ಮ ಸರಳತೆ, ನಿಮ್ಮ ಮುಖದಲ್ಲಿನ ನಗು ಅದ್ಭುತವಾಗಿದೆ. ಇಲ್ಲಿಗೆ ಬರುವ ಮೊದಲೇ, ನಾನು ಸಿಕ್ಕಿಂನ ಅನೇಕ ಪ್ರತಿಭಾನ್ವಿತ ಜನರನ್ನು ಭೇಟಿಯಾದೆ. ಸಿಕ್ಕಿಂನ ಬುದ್ಧಿಜೀವಿಗಳು, ಪದ್ಮ ಪ್ರಶಸ್ತಿ ಪುರಸ್ಕೃತರು, ಕಲಾವಿದರು ಮತ್ತು ಫುಟ್ಬಾಲ್ ಆಟಗಾರರು - ನಾನು ಅವರೊಂದಿಗೆ ವಿವಿಧ ವಿಷಯಗಳ ಕುರಿತು ಮಾತನಾಡಿದೆ.
ಸ್ನೇಹಿತರೆ,
ನಿನ್ನೆ ಸಂಜೆ ನಡೆದ ರೋಡ್ ಶೋ, ನಾನು ಅದನ್ನು ಇನ್ನೂ ಮರೆತಿಲ್ಲ, ಬಹುಶಃ ಅದನ್ನು ಎಂದಿಗೂ ಮರೆಯುವುದಿಲ್ಲ. ಕೈಯಲ್ಲಿ ನಮ್ಮ ಪ್ರೀತಿಯ ತ್ರಿವರ್ಣ ಧ್ವಜ. ಭಾರತ್ ಮಾತಾ ಕಿ ಜೈ ನಿರಂತರ ಜಪಗಳು ಮತ್ತು ವಂದೇ ಮಾತರಂ ಘೋಷಣೆ, ಇಡೀ ವಾತಾವರಣವು 'ಏಕ್ ಭಾರತ್ ಶ್ರೇಷ್ಠ ಭಾರತ್' ಚಿತ್ರಗಳಿಂದ ತುಂಬಿತ್ತು. ಗಂಜು ಲಾಮಾ ಗೇಟ್‌ನಿಂದ ಲೋಕ ಭವನದವರೆಗೆ, ಸಿಕ್ಕಿಂನ ನನ್ನ ಸಹೋದರ ಸಹೋದರಿಯರು ತಮ್ಮ ಪ್ರೀತಿಯನ್ನು ಸುರಿಸಿದ ರೀತಿ, ಎಲ್ಲಾ ಜನಾಂಗೀಯ ಸಮುದಾಯಗಳು ಸ್ವಾಗತಿಸಿದ ರೀತಿ, ಪ್ರತಿಯೊಂದು ಸಮುದಾಯವು ತನ್ನದೇ ಆದ ಉಡುಗೆ ತೊಡುಗೆಗಳು, ತನ್ನದೇ ಆದ ಸಂಗೀತ, ತನ್ನದೇ ಆದ ಸಂಪ್ರದಾಯಗಳೊಂದಿಗೆ - ಇಡೀ ವಾತಾವರಣವು ಒಂದು ಭವ್ಯ ಹಬ್ಬವಾಗಿ ಮಾರ್ಪಟ್ಟಿತು. ಈ ದೃಶ್ಯವು ಪ್ರಕೃತಿಯ ಮಡಿಲಲ್ಲಿ ಅರಳಿದ ವಿವಿಧ ಬಣ್ಣಗಳಂತೆ ಇತ್ತು. ನನ್ನ ತಾಯಂದಿರು ಮತ್ತು ಸಹೋದರಿಯರು, ಮಕ್ಕಳು ಮತ್ತು ಹಿರಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಆಶೀರ್ವಾದಗಳನ್ನು ನೀಡಲು ಬಂದರು. ದಾರಿಯುದ್ದಕ್ಕೂ ನಾನು ನೋಡಿದ ಅತ್ಯುತ್ತಮ ವಿಷಯವೆಂದರೆ ಸಿಕ್ಕಿಂನ ರಸ್ತೆಗಳ ಸ್ವಚ್ಛತೆ. ನಿಮ್ಮೆಲ್ಲರಿಗೂ ನಮಸ್ಕಾರ. ಎಲ್ಲಿಯೂ ಕೊಳಕು ಇಲ್ಲ, ಗಾಳಿಯಲ್ಲಿ ಸ್ವಚ್ಛತೆ, ರಸ್ತೆಗಳಲ್ಲಿ ಸ್ವಚ್ಛತೆ. ಸಿಕ್ಕಿಂನ ಜನರೇ, ನೀವು ಪ್ರಕೃತಿಯ ನಿಜವಾದ ರಕ್ಷಕರು, ಬ್ರಾಂಡ್ ರಾಯಭಾರಿಗಳು. ನಾನು ಮತ್ತೊಮ್ಮೆ ದೇಶವಾಸಿಗಳಿಗೆ ಹೇಳುತ್ತೇನೆ, ಸಿಕ್ಕಿಂಗೆ ಬನ್ನಿ. ನೀವೆಲ್ಲರೂ ಸಿಕ್ಕಿಂ ಅನ್ನು ಎಷ್ಟು ಸ್ವಚ್ಛವಾಗಿ, ಎಷ್ಟು ಉತ್ತಮವಾಗಿ ನಿರ್ವಹಿಸಿದ್ದೀರಿ, ಅದು ನಿಜಕ್ಕೂ ಶ್ಲಾಘನೀಯವಾಗಿದೆ.
ಸಹೋದರ ಸಹೋದರಿಯರೆ,
ನಿನ್ನೆ ನಡೆದ ರೋಡ್ ಶೋಗೆ ಮತ್ತು ಈಗ ನಡೆದ ಈ ಕಾರ್ಯಕ್ರಮಕ್ಕೆ, ನಿಮ್ಮೆಲ್ಲರಿಗೂ ಮತ್ತು ಎಲ್ಲಾ ಕಲಾವಿದರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ. 50 ವರ್ಷಗಳ ಮಹತ್ವದ ಪ್ರಯಾಣದ ಈ ಆಚರಣೆಯಲ್ಲಿ ಸಿಕ್ಕಿಂನ ಜನರಿಗೆ ಮತ್ತು ಎಲ್ಲಾ ದೇಶವಾಸಿಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಪ್ರೀತಿ, ವಾತ್ಸಲ್ಯ, ನಿಮ್ಮ ಆಶೀರ್ವಾದಗಳ ಋಣವನ್ನು ತೀರಿಸಲು ನಾನು ನಿಮಗೆ ಭರವಸೆ ನೀಡುತ್ತೇನೆ, ಅದನ್ನು ನಿಮಗೆ ಪಾವಸ್ ನೀಡಲು ನಾನು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ.
ಸ್ನೇಹಿತರೆ,
ಸಿಕ್ಕಿಂನ ಪ್ರಯಾಣವು ಮಾನವೀಯ ಮೌಲ್ಯಗಳ ಪ್ರಯಾಣವಾಗಿದೆ. ಇದು ಅಭಿವೃದ್ಧಿ ಮತ್ತು ಪರಂಪರೆಯನ್ನು ಒಟ್ಟಿಗೆ ಸಾಗಿಸುವ ಪ್ರಯಾಣವಾಗಿದೆ. ಸಿಕ್ಕಿಂನ ಹಲವು ತಲೆಮಾರುಗಳು ಈ ಪ್ರಯಾಣವನ್ನು ಮುಂದುವರಿಸಿವೆ. ಕಳೆದ 50 ವರ್ಷಗಳಲ್ಲಿ, ಸಿಕ್ಕಿಂ ಅನ್ನು ಮುನ್ನಡೆಸಿದ ಎಲ್ಲರೂ ಅದನ್ನು ಇಲ್ಲಿಗೆ ತಂದರು, ನಾನು ಇಂದು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ, ನಾನು ಅವರನ್ನು ಗೌರವಿಸುತ್ತೇನೆ. ಆ ಸಮಯದಲ್ಲಿ, ಯಾರು ಏನೇ ಮಾಡಿದರೂ ಅವರು ಸಿಕ್ಕಿಂಗಾಗಿ ಮಾಡಿದರು. ಈಗ ಜವಾಬ್ದಾರಿ ನಮ್ಮ ಮೇಲಿದೆ, ನಮ್ಮ ಮೇಲಿದೆ. ನನ್ನ ಸ್ನೇಹಿತ ಪ್ರೇಮ್ ಸಿಂಗ್ ಜಿ ನೇತೃತ್ವದಲ್ಲಿ ಸಿಕ್ಕಿಂ ಸರ್ಕಾರವು ಸಿಕ್ಕಿಂನ ಪರಂಪರೆಯನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಯನ್ನು ವೇಗಗೊಳಿಸಲು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ನಮಗೆ ಸಿಕ್ಕಿಂ, ಈಶಾನ್ಯ, ದೇಶದ ಪ್ರಮುಖ ಭಾಗ ಮಾತ್ರವಲ್ಲ, ಅದು ಭಾರತದ 'ಅಷ್ಟ ಲಕ್ಷ್ಮಿ'ಯೂ ಆಗಿದೆ. ಈಶಾನ್ಯವು ಭಾರತದ 'ಅಷ್ಟ ಲಕ್ಷ್ಮಿ'. ಆದ್ದರಿಂದ ನಾವು 'ಆಕ್ಟ್ ಈಸ್ಟ್' ನೀತಿಯ ಮೇಲೆ ಕೆಲಸ ಮಾಡುತ್ತಿದ್ದೇವೆ, ಈಶಾನ್ಯಕ್ಕಾಗಿ 'ಆಕ್ಟ್ ಫಾಸ್ಟ್(ತ್ವರಿತವಾಗಿ ಕ್ರಮ ವಹಿಸಿ)' ಎಂಬ ಸಂಕಲ್ಪವನ್ನೂ ತೆಗೆದುಕೊಂಡಿದ್ದೇವೆ. ಆದ್ದರಿಂದ 'ಆಕ್ಟ್ ಈಸ್ಟ್', 'ಆಕ್ಟ್ ಫಾಸ್ಟ್'. ಇಂದು ಸಹ ಸಾವಿರಾರು ಕೋಟಿ ರೂಪಾಯಿ ಮೌಲ್ಯದ 30ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇವುಗಳಲ್ಲಿ ರಸ್ತೆಗಳು, ವಿದ್ಯುತ್, ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ, ಎಲ್ಲಾ ರೀತಿಯ ಯೋಜನೆಗಳು ಸೇರಿವೆ. 2023ರ ನಂತರ ಉತ್ತರ ಸಿಕ್ಕಿಂ ಪ್ರದೇಶಗಳಲ್ಲಿ ಬಂದ ಸವಾಲುಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ. ಸಂಪರ್ಕದ ಮೇಲೆ ಪರಿಣಾಮ ಬೀರಿದಲ್ಲೆಲ್ಲಾ, ಅದನ್ನು ಮತ್ತೆ ಬಲಪಡಿಸುವತ್ತ ಗಮನ ಹರಿಸಲಾಗಿದೆ. ಇದಕ್ಕಾಗಿ ಸಿಕ್ಕಿಂನ ಎಲ್ಲಾ ಜನರಿಗೆ ನಾನು ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ನಮ್ಮ ಸಿಕ್ಕಿಂನ ದೊಡ್ಡ ಶಕ್ತಿಯೆಂದರೆ, ಪ್ರವಾಸೋದ್ಯಮ ಆರ್ಥಿಕತೆ. ಸಿಕ್ಕಿಂನ ವಿಸ್ತೀರ್ಣವು ದೇಶದ ಒಟ್ಟು ಪ್ರದೇಶದ ಶೇಕಡ ಒಂದಕ್ಕಿಂತ ಕಡಿಮೆ, ಆದರೆ ದೇಶದ ಹೂವಿನ ವೈವಿಧ್ಯತೆಯ ಶೇಕಡ 25ಕ್ಕಿಂತ ಹೆಚ್ಚು ನಮ್ಮ ಸಿಕ್ಕಿಂನಲ್ಲಿ ಕಂಡುಬರುತ್ತದೆ. ಇಲ್ಲಿ ಸುಮಾರು 500 ಜಾತಿಯ ಪಕ್ಷಿಗಳು, ಸುಮಾರು 700 ಜಾತಿಯ ಚಿಟ್ಟೆಗಳು, ಸುಂದರವಾದ ಅರಣ್ಯ ಪ್ರದೇಶ, ಕಾಂಚನಜುಂಗಾದ ಅದ್ಭುತ ಆಕರ್ಷಣೆ ಇಲ್ಲಿ ಬಹಳಷ್ಟು ಇವೆ. ಆದ್ದರಿಂದ, ಎಲ್ಲರೂ ಸಿಕ್ಕಿಂಗೆ ಮತ್ತೆ ಮತ್ತೆ ಬರಲು ಬಯಸುತ್ತಾರೆ.
ಸ್ನೇಹಿತರೆ,
ಸಿಕ್ಕಿಂನಲ್ಲಿ ಹೆಚ್ಚಿನ ಸಂಖ್ಯೆಯ ಜನರ ಆದಾಯವು ಪ್ರವಾಸೋದ್ಯಮದೊಂದಿಗೆ ಸಂಪರ್ಕ ಹೊಂದಿದೆ. ರಾಜ್ಯದ ಮೂಲಸೌಕರ್ಯವು ಉತ್ತಮವಾದಾಗ ಮಾತ್ರ ಪ್ರವಾಸೋದ್ಯಮ ಬೆಳೆಯುತ್ತದೆ. ಅದಕ್ಕಾಗಿಯೇ ನಾವು ಸಿಕ್ಕಿಂನ ಸಂಪರ್ಕ ಮತ್ತು ಮೂಲಸೌಕರ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ನೂರಾರು ಕಿಲೋಮೀಟರ್ ಹೆದ್ದಾರಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರತಿ ಹಳ್ಳಿಗೆ ರಸ್ತೆಗಳನ್ನು ಕೊಂಡೊಯ್ಯುವ ಕೆಲಸ ವೇಗವಾಗಿ ಪ್ರಗತಿಯಲ್ಲಿದೆ. ಹಿಂದೆ ಊಹಿಸಲೂ ಸಾಧ್ಯವಾಗದ ಅಂತಹ ಆಧುನಿಕ ಮೂಲಸೌಕರ್ಯ ಇಂದು ವಾಸ್ತವವಾಗುತ್ತಿದೆ. ಬಾಗ್ಡೋಗ್ರಾದಿಂದ ಗ್ಯಾಂಗ್ಟಕ್‌ವರೆಗಿನ ಎಕ್ಸ್‌ಪ್ರೆಸ್‌ವೇ, ಸೆವೊಕ್-ರಂಗ್ಪೋ ರೈಲು ಮಾರ್ಗದ ನಿರ್ಮಾಣ - ಈ ಯೋಜನೆಗಳು ಸಿಕ್ಕಿಂ ಅನ್ನು ಇಡೀ ದೇಶದೊಂದಿಗೆ ಸಂಪರ್ಕಿಸುವ ಸಾಧನವಾಗುತ್ತಿವೆ. ಇಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಸಹ ನಿರ್ಮಿಸಲಾಗುತ್ತಿದೆ. ಗ್ಯಾಂಗ್ಟಕ್‌ನಂತಹ ನಗರಗಳಲ್ಲಿ, ಭವಿಷ್ಯಕ್ಕಾಗಿ ವರ್ತುಲ ರಸ್ತೆಗಳಂತಹ ಯೋಜನೆಗಳು ಅವಶ್ಯಕ. ಈ ದಿಕ್ಕಿನಲ್ಲಿಯೂ ಕೆಲಸ ಮುಂದುವರಿಯುತ್ತಿದೆ.
ಸಹೋದರ ಸಹೋದರಿಯರೆ,
ಬಿಜೆಪಿ ಸರ್ಕಾರ ಇಂದು ಮಾಡುತ್ತಿರುವ ಕೆಲಸವನ್ನು ಮೊದಲೇ ಮಾಡಬಹುದಿತ್ತು, ಆದರೆ ಕಾಂಗ್ರೆಸ್ ಸರ್ಕಾರಗಳು ಯಾವಾಗಲೂ ಸಿಕ್ಕಿಂನ ಅಭಿವೃದ್ಧಿಯನ್ನು ಹಿಂದಕ್ಕೆ ತಳ್ಳಿದವು. ಸೆವೊಕ್-ರಾಂಗ್ಪೋ ರೈಲು ಮಾರ್ಗದ ಉದಾಹರಣೆ ತೆಗೆದುಕೊಳ್ಳಿ. ಈ ಯೋಜನೆಗೆ 2008-2009ರಲ್ಲಿ ಅನುಮೋದನೆ ನೀಡಲಾಯಿತು, ಆದರೆ ಯಾವುದೇ ಕೆಲಸ ನೆಲದ ಮೇಲೆ ನಡೆಯಲಿಲ್ಲ, ಅದು ಕಾಗದದ ಮೇಲೆಯೇ ಸಿಲುಕಿಕೊಂಡಿತು. ಯೋಜನೆಯು ಕಡತಗಳಲ್ಲಿಯೇ ಇತ್ತು. ಬಿಜೆಪಿ ಸರ್ಕಾರ ಕೇಂದ್ರಕ್ಕೆ ಬಂದ ನಂತರ, ಅಭಿವೃದ್ಧಿ ಮತ್ತೆ ವೇಗ ಪಡೆದುಕೊಂಡಿತು. ಮೊದಲ ಬಾರಿಗೆ ರೈಲು ಸಿಕ್ಕಿಂ ತಲುಪಲಿದೆ.
ಸ್ನೇಹಿತರೆ,
ಪ್ರವಾಸೋದ್ಯಮ ಉತ್ತೇಜಿಸಲು, ನಮಗೆ ಹೊಸ ಆಲೋಚನೆಗಳು ಸಹ ಬೇಕು. ಇಂದು ನಾವು ಈ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭಲೆದುಂಗಾ, ಯೆನ್-ಯೆಂಗ್ ಮತ್ತು ಪೆಲ್ಲಿಂಗ್‌ನಲ್ಲಿ ರೋಪ್‌ವೇಗಳ ನಿರ್ಮಾಣವು ಇದಕ್ಕೆ ಒಂದು ಉದಾಹರಣೆಯಾಗಿದೆ. ಭಲೆದುಂಗಾದಲ್ಲಿ ಸ್ಕೈವಾಕ್ ಅನ್ನು ಸಹ ನಿರ್ಮಿಸಲಾಗುತ್ತಿದೆ. ಈಗ ಸಿಂಗ್‌ಶೋರ್ ಸೇತುವೆಯ ಮೇಲೆ ಗಾಜಿನ ಡೆಕ್ ಸ್ಕೈವಾಕ್ ನಿರ್ಮಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ನಾಥುಲಾ ಮತ್ತು ನಮ್ಲಿಯಂತಹ ಸ್ಥಳಗಳಲ್ಲಿ ಗಡಿ ಅನುಭವವನ್ನು ಸುಧಾರಿಸುವ ಕೆಲಸವೂ ನಡೆಯುತ್ತಿದೆ.
ಸ್ನೇಹಿತರೆ,
ನಮ್ಮ ಸರ್ಕಾರದ ಈ ಪ್ರಯತ್ನಗಳಿಂದ ನಿಮ್ಮ ಜೀವನ ಸುಲಭವಾಗುತ್ತದೆ, ಸಿಕ್ಕಿಂಗೆ ಬರುವ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ, ನಿಮ್ಮ ಆದಾಯವೂ ಬೆಳೆಯುತ್ತದೆ. ನಾನು ಯಾವಾಗಲೂ ದೇಶಾದ್ಯಂತದ ಪ್ರವಾಸಿಗರನ್ನು ಒತ್ತಾಯಿಸುತ್ತೇನೆ: ನೀವು ಸಾಹಸ ಪ್ರವಾಸೋದ್ಯಮ ಅಥವಾ ಪರಿಸರ ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವಾಗ, ನೀವು ಎಲ್ಲಿಗೆ ಹೋದರೂ, ನಿಮ್ಮ ಪ್ರಯಾಣ ಬಜೆಟ್‌ನ 5 ಪ್ರತಿಶತವನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಖರ್ಚು ಮಾಡುವುದು ಕಡ್ಡಾಯವಾಗಿರಬೇಕು. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಮಾರ್ಗ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ನೀವು ಎಲ್ಲಿಗೆ ಹೋದರೂ, ಸ್ಥಳೀಯ ಆಹಾರವನ್ನು ಸೇವಿಸಿ, ಸ್ಥಳೀಯ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಸ್ಮರಣಿಕೆಗಳಾಗಿ ತೆಗೆದುಕೊಳ್ಳಿ. ಆದ್ದರಿಂದ ಇಲ್ಲಿನ ಜನರು, ಪರ್ವತಗಳಲ್ಲಿ ದೂರದಲ್ಲಿ ವಾಸಿಸುವ ಸಣ್ಣ ಗುಂಪುಗಳು, ಸ್ವಸಹಾಯ ಗುಂಪುಗಳಲ್ಲಿ ಅಂತಹ ಅದ್ಭುತ ವಸ್ತುಗಳನ್ನು ತಯಾರಿಸುವ ಸಹೋದರಿಯರು, ಖರೀದಿದಾರರು ದೇಶಾದ್ಯಂತ ಬರಬೇಕು, ಹೀಗೆ ಮಾಡಿದರೆ ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.
ಸ್ನೇಹಿತರೆ,
ಸಿಕ್ಕಿಂನಲ್ಲಿ ಪರಿಸರ-ಆರೋಗ್ಯ ಪ್ರವಾಸೋದ್ಯಮಕ್ಕೂ ಹೆಚ್ಚಿನ ಅವಕಾಶವಿದೆ, ನಾವು ಇದನ್ನು ಸಹ ಉತ್ತೇಜಿಸುತ್ತಿದ್ದೇವೆ. ಸ್ಥಳೀಯ ಜನರು ಪ್ರವಾಸೋದ್ಯಮದಿಂದ ಗರಿಷ್ಠ ಆದಾಯ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, 1,000 ಹೋಂಸ್ಟೇಗಳನ್ನು ಸಹ ನಿರ್ಮಿಸಲಾಗುತ್ತಿದೆ. ಸಾಹಸ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ಸಹ ಬೆಂಬಲಿಸಲಾಗುತ್ತಿದೆ.
ಸ್ನೇಹಿತರೆ,
ಸಿಕ್ಕಿಂಗೆ ಕ್ರೀಡೆಗಳಲ್ಲಿ ಮತ್ತೊಂದು ಸಾಧ್ಯತೆಗಳ ಆಕಾಶವಿದೆ. ಇಲ್ಲಿನ ಯುವಕರು ದೊಡ್ಡ ವೇದಿಕೆಗಳಲ್ಲಿ ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಫುಟ್ಬಾಲ್, ಬಾಕ್ಸಿಂಗ್, ಬಿಲ್ಲುಗಾರಿಕೆಯಲ್ಲಿ, ಇಲ್ಲಿನ ಆಟಗಾರರು ಸಿಕ್ಕಿಂ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಸ್ನೇಹಿತರೆ,
ಈ ಪ್ರತಿಭೆಗಳನ್ನು ಮುನ್ನಡೆಸಲು, ನಾವು 'ಖೇಲೋ ಇಂಡಿಯಾ' ಮತ್ತು 'ಫಿಟ್ ಇಂಡಿಯಾ' ನಂತಹ ಆಂದೋಲನಗಳನ್ನು ನಡೆಸುತ್ತಿದ್ದೇವೆ. ಇಲ್ಲಿನ ರಾಜ್ಯ ಕ್ರೀಡಾ ಅಕಾಡೆಮಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಸಿಕ್ಕಿಂ ಪ್ರೀಮಿಯರ್ ಲೀಗ್‌ನಂತಹ ಕ್ರೀಡಾಕೂಟಗಳನ್ನು ಉತ್ತೇಜಿಸಲಾಗುತ್ತಿದೆ, ಇದರಿಂದಾಗಿ ಹೆಚ್ಚು ಹೆಚ್ಚು ಆಟಗಾರರು ಆಡಲು ಅವಕಾಶ ಪಡೆಯುತ್ತಾರೆ, ಅವರ ಕಾರ್ಯಕ್ಷಮತೆ ಸುಧಾರಿಸುತ್ತದೆ.
ಸ್ನೇಹಿತರೆ,
ಜಸ್ಲಾಲ್ ಪ್ರಧಾನ್ ಜಿ ಅವರ ಹೆಸರಿನಲ್ಲಿ ಅತ್ಯಾಧುನಿಕ ಬಾಕ್ಸಿಂಗ್ ಅಕಾಡೆಮಿ ಸ್ಥಾಪನೆಯ ಪ್ರಸ್ತಾಪವೂ ಇದೆ. ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ವಿಲೇಜ್‌ನಂತಹ ಯೋಜನೆಗಳು ಸಹ ಮುಂದುವರಿಯುತ್ತಿವೆ. ಇದು ಸಿಕ್ಕಿಂನ ಯುವಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತದೆ, ಅವರು ತಮ್ಮ ಕ್ರೀಡೆಗಳನ್ನು ಮತ್ತಷ್ಟು ಬೆಳಗಿಸಲು ಸಾಧ್ಯವಾಗುತ್ತದೆ.
ಸ್ನೇಹಿತರೆ,
ಇಂದು ಉದ್ಘಾಟನೆಯಾದ, ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳಲ್ಲಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ದೊಡ್ಡ ಕೆಲಸಗಳು ಸಹ ಸೇರಿವೆ. ಕಾಂಗ್ರೆಸ್ ಸರ್ಕಾರಗಳು ಸಿಕ್ಕಿಂ ಮತ್ತು ಈಶಾನ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಸಮಯವಿತ್ತು. ಇಲ್ಲಿ ಆರೋಗ್ಯ ಸೇವೆಗಳು ಬಹಳ ಸೀಮಿತವಾಗಿದ್ದವು. ಈ ಕಾರಣದಿಂದಾಗಿ, ಪ್ರವಾಸಿಗರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಇಂದು ಆ ಸವಾಲು ಕೊನೆಗೊಳ್ಳುತ್ತಿದೆ. ಇಂದು ಸಿಕ್ಕಿಂನಲ್ಲಿ ಸುಮಾರು 200 ಆಯುಷ್ಮಾನ್ ಆರೋಗ್ಯ ಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಇಂದು 4 ಜಿಲ್ಲಾಸ್ಪತ್ರೆಗಳು, ತೃತೀಯ ಹಂತದ ಆರೈಕೆ ಆಸ್ಪತ್ರೆ, ಯೋಗಕ್ಷೇಮ ಕೇಂದ್ರಗಳಿವೆ. ಸಾವಿರಾರು ಜನರು ಇಲ್ಲಿ ಆಯುಷ್ ಸೌಲಭ್ಯಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಡ್ರೆಜಾಂಗ್ ನಮಗ್ಯಾಲ್ ಸೋವಾ ರಿಗ್ಪಾ ಆಸ್ಪತ್ರೆ ಉದ್ಘಾಟನೆಯ ನಂತರ, ಸಿಕ್ಕಿಂನ ಆರೋಗ್ಯ ವ್ಯವಸ್ಥೆಯು ಮತ್ತಷ್ಟು ಉತ್ತೇಜನ ಪಡೆಯಲಿದೆ.
ಸಹೋದರ ಸಹೋದರಿಯರೆ,
ಆರೋಗ್ಯ ಮೂಲಸೌಕರ್ಯದ ಜತೆಗೆ, ಜನರು ಅಗ್ಗದ ಚಿಕಿತ್ಸೆಯನ್ನು ಪಡೆಯಬೇಕು, ನಮ್ಮ ಸರ್ಕಾರ ಇದಕ್ಕೂ ಬದ್ಧವಾಗಿದೆ. ಈ ಹಿಂದೆ ನಾವು ಬಡವರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಿದ್ದೇವೆ. ಈಗ ಈ ಸೌಲಭ್ಯವನ್ನು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವೃದ್ಧರಿಗೂ ನೀಡಲಾಗುತ್ತಿದೆ. ಇದರೊಂದಿಗೆ, ಜನೌಷಧಿ ಕೇಂದ್ರಗಳಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಔಷಧಿಗಳು ಲಭ್ಯವಿದೆ. ಈ ಪ್ರಯತ್ನಗಳಿಂದಾಗಿ, ಇಲ್ಲಿನ ಜನರ ಜೀವನ ಸುಲಭವಾಗಿದೆ, ಚಿಕಿತ್ಸೆಯ ನಿಮ್ಮ ಖರ್ಚು ಕೂಡ ಕಡಿಮೆಯಾಗುತ್ತಿದೆ.
ಸ್ನೇಹಿತರೆ,
ಇಂದು ಆರ್ಥಿಕ ಪ್ರಗತಿ ಮತ್ತು ಸಂಪನ್ಮೂಲಗಳ ಬಗ್ಗೆ ಪ್ರಪಂಚದ ದೃಷ್ಟಿಕೋನವು ವೇಗವಾಗಿ ಬದಲಾಗುತ್ತಿದೆ. ಇಂದು ಜಗತ್ತು ಸುಸ್ಥಿರ ಜೀವನಶೈಲಿಯ ಬಗ್ಗೆ ಮಾತನಾಡುತ್ತಿದೆ. ಇಂದು ಪ್ರಪಂಚದ ಗಮನ ಸ್ವಚ್ಛ ಇಂಧನದ ಮೇಲೆ ಇದೆ. ಇಂದು ಸಾವಯವ ಆಹಾರಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮ ಈಶಾನ್ಯ ಮತ್ತು ಸಿಕ್ಕಿಂ ಈ ಭವಿಷ್ಯದ ಬೆಳವಣಿಗೆಯ ದೊಡ್ಡ ಕೇಂದ್ರಗಳಾಗಿವೆ ಎಂಬುದರಿಂದ ನನಗೆ ಸಂತೋಷವಾಗಿದೆ. ಸಿಕ್ಕಿಂ ಇಡೀ ದೇಶಕ್ಕೆ ದಿಕ್ಕು ತೋರಿಸಿದೆ. ಸಿಕ್ಕಿಂ ಈಗಾಗಲೇ 10 ವರ್ಷಗಳ ಹಿಂದೆ, 2016ರಲ್ಲಿ ಇಡೀ ರಾಜ್ಯವನ್ನು ಸಾವಯವ ಎಂದು ಘೋಷಿಸಿತ್ತು. ನಮ್ಮ ಡೆಮಾಜಾಂಗ್ ಈಗ ಅಕ್ಕಿ ಉತ್ಪಾದನೆಗೆ ಮಾತ್ರ ಹೆಸರುವಾಸಿಯಾಗಿದೆ, ಅದರ ಗುರುತು ಈಗ ಸಾವಯವ ಅಕ್ಕಿಗೂ ಆಗಿದೆ. ದೊಡ್ಡ ಏಲಕ್ಕಿ, ಶುಂಠಿ, ಅರಿಶಿನ, ಬೆಣ್ಣೆ ಹಣ್ಣು(ಆವಕಾಡೊ), ಕಿವಿ ಹಣ್ಣು - ಹೀಗೆ ಹಲವಾರು ಉತ್ಪನ್ನಗಳು ದೇಶ ಮತ್ತು ಪ್ರಪಂಚದ ಮಾರುಕಟ್ಟೆಗಳನ್ನು ತಲುಪುತ್ತಿವೆ. ಸಿಕ್ಕಿಂನಲ್ಲಿ ನೂರಾರು ಜಾತಿಯ ಔಷಧೀಯ ಸಸ್ಯಗಳು ಸಹ ಕಂಡುಬರುತ್ತಿವೆ. ಇವುಗಳು ಸಹ ಸ್ಥಳೀಯ ಜನರ ಆದಾಯ ಹೆಚ್ಚಿಸುವ ಸಾಧನವಾಗುತ್ತಿವೆ.
ಸ್ನೇಹಿತರೆ,
ಸಿಕ್ಕಿಂನ ಸಾವಯವ ಮತ್ತು ನೈಸರ್ಗಿಕ ಕೃಷಿ ಮಾದರಿಯು ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಸಿಕ್ಕಿಂನ ಜೀವನಶೈಲಿ, ಸಿಕ್ಕಿಂನ ಸಂಕಲ್ಪ, ಇಂದು ಇವು ದೇಶದ ದೃಷ್ಟಿಕೋನದ ಭಾಗವಾಗಿವೆ. ಇಲ್ಲಿ ನೈಸರ್ಗಿಕ ಕೃಷಿ ಉತ್ತೇಜಿಸಲು, ಸಾವಯವ ಸಂಸ್ಕರಣಾ ಘಟಕಗಳನ್ನು ಸಹ ಪ್ರಾರಂಭಿಸಲಾಗಿದೆ. ಇದು ರೈತರಿಗೆ ನೇರವಾಗಿ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ನೀಡುತ್ತಿದೆ.
ಸ್ನೇಹಿತರೆ,
ಸಿಕ್ಕಿಂನ ಆರ್ಥಿಕ ಪ್ರಗತಿಯಲ್ಲಿ ಇಲ್ಲಿನ ಸ್ವಸಹಾಯ ಗುಂಪುಗಳು ಮತ್ತು ಈ ಮಹಿಳೆಯರು ಬಹು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈ ಸ್ವಸಹಾಯ ಗುಂಪುಗಳ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗಳನ್ನು ತಲುಪಿವೆ, ಡಿಜಿಟಲ್ ಇಂಡಿಯಾ ಇದರಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ. "ಸ್ವಯಂ ಸಿಕ್ಕಿಂ"ನಂತಹ ವೇದಿಕೆಗಳು ಇಂದು ಈ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆ.
ಸ್ನೇಹಿತರೆ,
ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಸಿಕ್ಕಿಂ ವಿಶಾಲ ಸಾಮರ್ಥ್ಯ ಹೊಂದಿದೆ. ಇಲ್ಲಿನ ಪರಿಸರವನ್ನು ಸಂರಕ್ಷಿಸುವ ಜತೆಗೆ, ಸಿಕ್ಕಿಂನ ಈ ಸಾಮರ್ಥ್ಯವನ್ನು ನಾವು ಮತ್ತಷ್ಟು ಬಳಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಸಿಕ್ಕಿಂ ಜನರ ಸ್ವಭಾವ ಎಂಬುದು ನನಗೆ ತಿಳಿದಿದೆ. ದೇಶವು 'ಏಕ್ ಪೆಡ್ ಮಾ ಕೆ ನಾಮ್' ಉಪಕ್ರಮ ಆರಂಭಿಸಿದಾಗ, ಸಿಕ್ಕಿಂನ ಜನರು ಅದನ್ನು ಕರ್ತವ್ಯ ಪ್ರಜ್ಞೆಯಿಂದ ಮುಂದುವರಿಸಿದರು, ಇಲ್ಲಿನ ಮುಖ್ಯಮಂತ್ರಿಗಳು "ಮೇರೋ ರುಖ್ ಮೇರೋ ಸಂತತಿ" ಉಪಕ್ರಮದಿಂದ ಜನರನ್ನು ಪ್ರೇರೇಪಿಸಿದರು. ಇದರ ಅಡಿ, ಪ್ರತಿ ಮಗುವಿನ ಜನನ ಸಮಯದಲ್ಲಿ 108 ಮರಗಳನ್ನು ನೆಡಲಾಗುತ್ತಿದೆ. ಈ ಉಪಕ್ರಮವು ಇಡೀ ಜಗತ್ತಿಗೆ ಸ್ಫೂರ್ತಿ ಎಂದು ನಾನು ಭಾವಿಸುತ್ತೇನೆ. ಪರಿಸರಕ್ಕೆ ಸಂಬಂಧಿಸಿದ ನಮ್ಮ ಪ್ರಯತ್ನಗಳನ್ನು ನಾವು ಇನ್ನಷ್ಟು ಸಮರ್ಪಣೆಯೊಂದಿಗೆ ಮುಂದುವರಿಸಬೇಕು. ಇದು ನಮ್ಮ ಪರಂಪರೆ, ಇದನ್ನು ನಾವು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿಡಬೇಕು.
ಸ್ನೇಹಿತರೆ,
ಸಿಕ್ಕಿಂ ಇನ್ನೂ ವೇಗವಾಗಿ ಮುಂದುವರಿಯಬೇಕು, ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ವೇಗ ನೀಡಬೇಕು, ಇದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ಸಿಕ್ಕಿಂ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಈ ಸಂಕಲ್ಪದೊಂದಿಗೆ, ಮತ್ತೊಮ್ಮೆ, ಈ ಸಂದರ್ಭದಲ್ಲಿ ನಾನು ನಿಮಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ. ಇಂದು ಈ ಪ್ರಯಾಣದ 50 ವರ್ಷಗಳ ನಂತರ, ಈಗ ನಾವು 2 ಮೈಲಿಗಲ್ಲುಗಳನ್ನು ಪೂರ್ಣಗೊಳಿಸಬೇಕಾಗಿದೆ. ಸಿಕ್ಕಿಂನ ಪ್ರಯಾಣವು 100 ವರ್ಷಗಳನ್ನು ತಲುಪಿದಾಗ ನಾವು ಏನು ಮಾಡಬೇಕು? ಸಿಕ್ಕಿಂನ ಪ್ರಯಾಣವು 75 ವರ್ಷಗಳನ್ನು ತಲುಪುವ ಹೊತ್ತಿಗೆ ನಾವು ಏನು ಮಾಡಬೇಕು? ದೇಶದ ಸ್ವಾತಂತ್ರ್ಯವು 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸು ಮಾಡಿ, 100 ವರ್ಷಗಳನ್ನು ತಲುಪಿದಾಗ, ಅದಕ್ಕಾಗಿ ನಾವು ಇಂದೇ ತಯಾರಿ ಆರಂಭಿಸಬೇಕು, ದೃಢನಿಶ್ಚಯದಿಂದ ಮುಂದುವರಿಯಬೇಕು. ಈ ಭಾವನೆಯೊಂದಿಗೆ, ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ತುಂಬು ಧನ್ಯವಾದಗಳು. ನನ್ನೊಂದಿಗೆ ಹೇಳಿ -
ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ.
ವಂದೇ ಮಾತರಂ. ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ. ವಂದೇ ಮಾತರಂ. ವಂದೇ ಮಾತರಂ.
ವಂದೇ ಮಾತರಂ.
*****
(ಪ್ರಕಟಣೆ ಐ.ಡಿ.: 2256562)
ವಿಸಿಟರ್ ಕೌಂಟರ್ : 4