ರೈಲ್ವೇ ಸಚಿವಾಲಯ
ದಕ್ಷಿಣ ಕರಾವಳಿ ರೈಲ್ವೆ ಮತ್ತು ಆಂಧ್ರಪ್ರದೇಶದಲ್ಲಿ ಪ್ರಮುಖ ವಿಸ್ತರಣೆಗಾಗಿ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್
ತನ್ನ ರೈಲ್ವೆ ಜಾಲದ ಶೇ.100ರಷ್ಟು ವಿದ್ಯುದೀಕರಣ ಸಾಧಿಸಿದ ಆಂಧ್ರಪ್ರದೇಶ, ಆ ಮೂಲಕ ರೈಲ್ವೆ ಆಧುನೀಕರಣದಲ್ಲಿ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಘೋಷಿಸಿದ ಸಚಿವರು
ಪ್ರಕಟಣಾ ದಿನಾಂಕ:
28 APR 2026 2:24PM by PIB Bengaluru
ಕೇಂದ್ರ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ವಿಶಾಖಪಟ್ಟಣಂನಲ್ಲಿಂದು ಗೂಗಲ್ ಕ್ಲೌಡ್ ಇಂಡಿಯಾ ಎಐ ಕೇಂದ್ರದ ಶಿಲಾನ್ಯಾಸ ಸಮಾರಂಭದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, 2026ರ ಜೂನ್ 1 ರಿಂದ ಜಾರಿಗೆ ಬರುವಂತೆ ದಕ್ಷಿಣ ಕರಾವಳಿ ರೈಲ್ವೆ ವಲಯ ರಚನೆಗೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಹೇಳಿದರು. ಈ ಬೆಳವಣಿಗೆ ಆಂಧ್ರಪ್ರದೇಶದಲ್ಲಿ ರೈಲ್ವೆ ಆಡಳಿತವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಉಲ್ಲೇಖಿಸಿದರು.
PFFK.jpeg)
ಆಂಧ್ರಪ್ರದೇಶಕ್ಕೆ ರೈಲ್ವೆ ಬಜೆಟ್‌ನಲ್ಲಿ ದಾಖಲೆಯ 10,134 ಕೋಟಿ ರೂಪಾಯಿ ಹಂಚಿಕೆಯಾಗಿದೆ ಎಂದು ವಿವರಿಸಿದ ಸಚಿವರು, ಇದು ಹಿಂದಿನ ವರ್ಷಗಳಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಗ್ಗೂಡಿಸಿದ ಯೋಜನೆಗಳಿಗೆ ನಿಗದಿಪಡಿಸಿದ 886 ಕೋಟಿ ರೂಪಾಯಿಗೆ ಹೋಲಿಸಿದರೆ ಗಣನೀಯ ಹೆಚ್ಚಳವಾಗಿದೆ ಎಂದರು.
ಆಂಧ್ರಪ್ರದೇಶದಲ್ಲಿ ಪ್ರಸ್ತುತ ಸುಮಾರು 1,06,000 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಉಲ್ಲೇಖಿಸಿದ ಅವರು, ಇದು ಬಂದರುಗಳು, ಪ್ರವಾಸೋದ್ಯಮ ತಾಣಗಳು ಮತ್ತು ಪ್ರಮುಖ ನಗರಗಳಿಗೆ ಸಂಪರ್ಕ ಸೇರಿದಂತೆ ರಾಜ್ಯದಾದ್ಯಂತ ಸಂಪರ್ಕವನ್ನು ವೃದ್ಧಿಸುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಸುಮಾರು 1,06,000 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳ ಕಾಮಗಾರಿಗಳು ಸದ್ಯ ಪ್ರಗತಿಯಲ್ಲಿವೆ ಎಂದು ಅವರು ಉಲ್ಲೇಖಿಸಿದ ಅವರು, ಅವು ಬಂದರುಗಳು, ಪ್ರವಾಸೋದ್ಯಮ ತಾಣಗಳು ಮತ್ತು ಪ್ರಮುಖ ನಗರಗಳಿಗೆ ಸಂಪರ್ಕಗಳನ್ನು ಒಳಗೊಂಡಂತೆ ರಾಜ್ಯದಾದ್ಯಂತ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದರು.
ಮೂಲಸೌಕರ್ಯ ಸಾಧನೆಗಳನ್ನು ಉಲ್ಲೇಖಿಸಿದ ಸಚಿವರು, ಆಂಧ್ರಪ್ರದೇಶದ 74 ರೈಲ್ವೆ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ ಮತ್ತು ಸಂಪೂರ್ಣವಾಗಿ ಮರುಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಸ್ತಾಪಿಸಿ, ಇದು ದೇಶದಲ್ಲಿ ಒಂದು ಐತಿಹಾಸಿಕ ಸಾಧನೆ ಎಂದು ವಿವರಿಸಿದರು.
ಹೆಚ್ಚಿನ ವಿವರಗಳನ್ನು ಒದಗಿಸುತ್ತಾ ಅವರು ಆಂಧ್ರಪ್ರದೇಶದಲ್ಲಿ ಈ ಕೆಳಗಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು:
- 832 ಮೇಲು ಸೇತುವೆಗಳು (ಫ್ಲೈಓವರ್ಗಳು) ಮತ್ತು ಅಂಡರ್ಪಾಸ್ಗಳು ಪೂರ್ಣಗೊಂಡಿವೆ
- 299 ಮೇಲು ಸೇತುವೆಗಳು ಮತ್ತು ಅಂಡರ್ಪಾಸ್ಗಳು ನಿರ್ಮಾಣ ಹಂತದಲ್ಲಿವೆ
- 1,759 ಕಿ.ಮೀ ರೈಲ್ವೆ ಹಳಿ ಹಾಕುವ ಕಾರ್ಯ ಪೂರ್ಣಗೊಂಡಿದೆ
- 3,300 ಕಿ.ಮೀ. ಹಳಿ ನಿರ್ಮಾಣ ಹಂತದಲ್ಲಿದೆ
ಆಂಧ್ರಪ್ರದೇಶವು ತನ್ನ ರೈಲ್ವೆ ಜಾಲದ ಶೇ.100ರಷ್ಟು ವಿದ್ಯುದೀಕರಣವನ್ನು ಸಾಧಿಸಿದೆ, ಆ ಮೂಲಕ ರೈಲ್ವೆ ಆಧುನೀಕರಣದಲ್ಲಿ ಪ್ರಮುಖ ಪ್ರದೇಶಗಳಲ್ಲಿ ಸ್ಥಾನ ಪಡೆದಿದೆ ಎಂದು ಸಚಿವರು ಘೋಷಿಸಿದರು.
ಪ್ರಯಾಣಿಕರ ಸೇವೆಗಳ ಕುರಿತು ಮಾತನಾಡಿದ ಸಚಿವರು, ಸದ್ಯ 16 ವಂದೇ ಭಾರತ್ ರೈಲುಗಳು ಮತ್ತು 22 ಅಮೃತ್ ಭಾರತ್ ರೈಲುಗಳು ರಾಜ್ಯಕ್ಕೆ ಸೇವೆ ಸಲ್ಲಿಸುತ್ತಿದ್ದು, ಪ್ರಯಾಣ ದಕ್ಷತೆ ಮತ್ತು ಸೌಕರ್ಯವನ್ನು ಸುಧಾರಿಸುತ್ತಿದೆ ಎಂದು ಹೇಳಿದರು.
ಹೆಚ್ಚುವರಿಯಾಗಿ, ಇಡೀ ಪೂರ್ವ ಕರಾವಳಿ ರೈಲ್ವೆ ಕಾರಿಡಾರ್ ಅನ್ನು ನಾಲ್ಕು ಮಾರ್ಗಗಳ ಜಾಲಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಹೇಳಿದ ಅವರು, ಇದು ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಮತ್ತು 500 ಹೊಸ ರೈಲುಗಳ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವ ನಿರೀಕ್ಷೆಯಿದೆ.
ಪೂರ್ವ ಕರಾವಳಿ ಕಾರಿಡಾರ್‌ನಾದ್ಯಂತ ಬಂದರುಗಳು, ಪ್ರವಾಸೋದ್ಯಮ ತಾಣಗಳು ಮತ್ತು ಪ್ರಮುಖ ನಗರಗಳನ್ನು ಸಂಪರ್ಕಿಸಲು ಸರಕು ಮತ್ತು ಕಂಟೇನರ್ ರೈಲು ಸೇವೆಗಳನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದ ಸಚಿವರು ಇದರಿಂದಾಗಿ ಸರಕು ಸಾಗಾಣೆ (ಲಾಜಿಸ್ಟಿಕ್ಸ್) ಮತ್ತು ಆರ್ಥಿಕ ಬೆಳವಣಿಗೆ ವೃದ್ಧಿಯಾಗಲಿದೆ ಎಂದರು.
ಭವಿಷ್ಯದ ಹೈ-ಸ್ಪೀಡ್ ಸಂಪರ್ಕವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯಾಣದ ಸಮಯದೊಂದಿಗೆ ಪ್ರಮುಖ ದಕ್ಷಿಣ ಕಾರಿಡಾರ್‌ಗಳಲ್ಲಿ ಪ್ರಸ್ತಾವಿತ ಹೈ-ಸ್ಪೀಡ್ ಸಂಪರ್ಕವನ್ನು ಮತ್ತಷ್ಟು ವಿವರಿಸಿದರು:
● ಅಮರಾವತಿಯಿಂದ ಹೈದರಾಬಾದ್ – ಅಂದಾಜು 70 ನಿಮಿಷ
● ಅಮರಾವತಿಯಿಂದ ಚೆನ್ನೈ – ಅಂದಾಜು 112 ನಿಮಿಷ
● ಹೈದರಾಬಾದ್‌ನಿಂದ ಪುಣೆ - ಅಂದಾಜು 1 ಗಂಟೆ 55 ನಿಮಿಷಗಳು
● ಪುಣೆಯಿಂದ ಮುಂಬೈ – ಅಂದಾಜು 48 ನಿಮಿಷ
● ಚೆನ್ನೈನಿಂದ ಬೆಂಗಳೂರು – ಅಂದಾಜು 73 ನಿಮಿಷ
● ಹೈದರಾಬಾದ್‌ನಿಂದ ಬೆಂಗಳೂರು – ಅಂದಾಜು 2 ಗಂಟೆ 8 ನಿಮಿಷ
ಈ ಜಾಲವನ್ನು ಅವರು “ಹೈ-ಸ್ಪೀಡ್ ಡೈಮಂಡ್’’ ಎಂದು ಬಣ್ಣಿಸಿದರು, ಇದು ದಕ್ಷಿಣ ಭಾರತದಾದ್ಯಂತ ಸಂಚಾರ, ಆರ್ಥಿಕ ಏಕೀಕರಣ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಗಮನಾರ್ಹವಾಗಿ ವೃದ್ಧಿಸುತ್ತದೆ ಎಂದರು.
ಈ ಉಪಕ್ರಮಗಳು ಆಂಧ್ರಪ್ರದೇಶವನ್ನು ಪ್ರಮುಖ ರೈಲ್ವೆ ಮತ್ತು ಸಾಗಾಣೆ ಕೇಂದ್ರವಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ, ಆರ್ಥಿಕ ಬೆಳವಣಿಗೆ ಮತ್ತು ಪ್ರಾದೇಶಿಕ ಏಕೀಕರಣಕ್ಕೆ ಚಾಲನೆ ನೀಡುತ್ತವೆ ಎಂದು ಸಚಿವರು ಹೇಳಿದರು.
ಸಮತೋಲಿತ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಖಾತ್ರಿಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರವು ಮೂಲಸೌಕರ್ಯ ಬೆಳವಣಿಗೆ ಮತ್ತು ಸಾರ್ವಜನಿಕ ಕಲ್ಯಾಣದ ವಿಷಯದಲ್ಲಿ ದಕ್ಷಿಣ ರಾಜ್ಯಗಳಿಗೆ ಸಂಪೂರ್ಣ ನ್ಯಾಯವನ್ನು ಒದಗಿಸುತ್ತಿದೆ ಎಂದು ಹೇಳಿದರು. ವಿರೋಧ ಪಕ್ಷಗಳು ಅಭಿವೃದ್ಧಿ ವಿಷಯಗಳನ್ನು ರಾಜಕೀಯಗೊಳಿಸುತ್ತಿವೆ ಎಂದು ಅವರು ಟೀಕಿಸಿದರು.
*****
(ಪ್ರಕಟಣೆ ಐ.ಡಿ.: 2256236)
ವಿಸಿಟರ್ ಕೌಂಟರ್ : 14