ಗ್ರಾಮೀಣಾಭಿವೃದ್ಧಿ ಸಚಿವಾಲಯ
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ಗ್ರಾಮೀಣ ಯೋಜನೆಗಳನ್ನು ರಕ್ಷಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ಸಿದ್ಧತೆಯನ್ನು ಬಲಪಡಿಸುತ್ತಿದೆ
ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಅಡೆತಡೆಯಿಲ್ಲದ ಉದ್ಯೋಗ, ಸಕಾಲಿಕ ನಿಧಿ ಹರಿವು, ವಸತಿ ನಿರ್ಮಾಣ, ಗ್ರಾಮೀಣ ರಸ್ತೆಗಳು ಮತ್ತು ಜೀವನೋಪಾಯ ಭದ್ರತೆಯ ಮೇಲೆ ಗಮನಹರಿಸುತ್ತದೆ
ಪ್ರಕಟಣಾ ದಿನಾಂಕ:
20 APR 2026 4:15PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ರೂಪುಗೊಳ್ಳುತ್ತಿರುವ ಪರಿಸ್ಥಿತಿ ಮತ್ತು ಜಾಗತಿಕ ಪೂರೈಕೆ ಸರಪಳಿಗಳು, ಸರಕುಗಳ ಬೆಲೆಗಳು ಮತ್ತು ಹಣದುಬ್ಬರ ಪ್ರವೃತ್ತಿಗಳ ಮೇಲೆ ಅದರ ಸಂಭಾವ್ಯ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಪ್ರಮುಖ ಗ್ರಾಮೀಣ ಕಲ್ಯಾಣ ಮತ್ತು ಮೂಲಸೌಕರ್ಯ ಕಾರ್ಯಕ್ರಮಗಳ ಅಡೆತಡೆಯಿಲ್ಲದೆ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸನ್ನದ್ಧತಾ ಕ್ರಮಗಳ ಸಮಗ್ರ ಪರಿಶೀಲನೆಯನ್ನು ಕೈಗೊಂಡಿದೆ.
ಗ್ರಾಮೀಣ ಜೀವನೋಪಾಯ, ವಸತಿ ನಿರ್ಮಾಣ, ರಸ್ತೆ ಅಭಿವೃದ್ಧಿ ಮತ್ತು ಜಲಾನಯನ ಚಟುವಟಿಕೆಗಳ ಮೇಲೆ ಪರೋಕ್ಷ ಪರಿಣಾಮ ಬೀರುವ ಬೆಳವಣಿಗೆಗಳನ್ನು ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಪ್ರಯೋಜನಗಳ ನಿರಂತರತೆ, ಸಕಾಲಿಕ ನಿಧಿಯ ಹರಿವು ಮತ್ತು ಚಾಲ್ತಿಯಲ್ಲಿರುವ ಯೋಜನೆಗಳ ಸುಗಮ ಅನುಷ್ಠಾನವನ್ನು ಕಾಪಾಡಿಕೊಳ್ಳಲು ಪೂರ್ವಭಾವಿ ಮುಂಜಾಗರೂಕತಾ ಕಾರ್ಯವಿಧಾನಗಳನ್ನು ಜಾರಿಗೆ ತಂದಿದೆ.
ಉದ್ಯೋಗ ಭದ್ರತೆ ಮತ್ತು ವೇತನ ಬೆಂಬಲ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂ.ಜಿ.ಎನ್.ರೇಗಾ-MGNREGA), 2005, ಪ್ರಸ್ತಾವಿತ ವಿ.ಬಿ.-ಜಿ.ರಾಮ್ ಜಿ (VB–G RAM G) ಕಾಯ್ದೆ, 2025 ಪ್ರಾರಂಭವಾಗುವವರೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಮೀಣ ಕುಟುಂಬಗಳಿಗೆ ವೇತನ ಉದ್ಯೋಗವನ್ನು ಒದಗಿಸುವಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ.
ಬೇಡಿಕೆ ಆಧಾರಿತ ಉದ್ಯೋಗ ಮತ್ತು ಸಕಾಲಿಕ ವೇತನ ಪಾವತಿಗಳು ಸೇರಿದಂತೆ ಎಲ್ಲಾ ಶಾಸನಬದ್ಧ ಹಕ್ಕುಗಳು ದೌರ್ಬಲ್ಯರಹಿತವಾಗಿ ಪೂರ್ಣವಾಗಿ ಜಾರಿಯಲ್ಲಿದ್ದು, ಮುಂದುವರಿಯುತ್ತವೆ. ಕೇಂದ್ರ ಸರ್ಕಾರ-ಅಧಿಸೂಚಿಸಿದ ಚಾಲ್ತಿಯಲ್ಲಿರುವ ವೇತನ ದರಗಳು ಅನ್ವಯವಾಗುತ್ತವೆ.
ಸಾಕಷ್ಟು ದ್ರವ್ಯತೆ (ಹಣಕಾಸು ಹರಿವನ್ನು) ಕಾಯ್ದುಕೊಳ್ಳಲು ಮತ್ತು ನಿರಂತರ ವೇತನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ಎಂ.ಜಿ.ಎನ್.ರೇಗಾ (MGNREGA) ಅಡಿಯಲ್ಲಿ ವೇತನ ಘಟಕಕ್ಕೆ ಮೊದಲ ಕಂತಾಗಿ ಸುಮಾರು ₹17,744 ಕೋಟಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಪ್ರಸ್ತಾವಿತ ವಿ.ಬಿ.-ಜಿ.ರಾಮ್ ಜಿ (VB–G RAM G) ಕಾಯ್ದೆಯು ಪ್ರಾರಂಭವಾದ ನಂತರ, ಪರಿಷ್ಕೃತ ವೇತನ ದರಗಳನ್ನು ಪ್ರತ್ಯೇಕವಾಗಿ ಸೂಚಿಸುವುದರೊಂದಿಗೆ 125 ದಿನಗಳ ವೇತನ ಉದ್ಯೋಗದ ವರ್ಧಿತ ಖಾತರಿಯನ್ನು ಒದಗಿಸುವ ನಿರೀಕ್ಷೆಯಿದೆ.
ಸರಬರಾಜು ಸರಪಳಿ ಸವಾಲುಗಳಿಗೆ ವಸತಿ ಕಾರ್ಯಕ್ರಮ ಸಿದ್ಧ
ಗ್ರಾಮೀಣ ಪ್ರದೇಶಗಳಲ್ಲಿ "ಎಲ್ಲರಿಗೂ ವಸತಿ" ಗುರಿಯನ್ನು ಸಾಧಿಸಲು, ಸಚಿವಾಲಯವು ಮಾರ್ಚ್ 2029 ರ ವೇಳೆಗೆ 4.95 ಕೋಟಿ ಮನೆಗಳ ನಿರ್ಮಾಣಕ್ಕಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿ.ಎಂ.ಎ. ವೈ-ಜಿ-PMAY-G) ವನ್ನು ಜಾರಿಗೊಳಿಸುತ್ತಿದೆ.
ಸಂಭವನೀಯ ವಸ್ತು ಪೂರೈಕೆ ಅಡಚಣೆಗಳು ಅಥವಾ ಬೆಲೆ ಏರಿಳಿತಗಳ ವಿರುದ್ಧ ಸಿದ್ಧತಾ ಕ್ರಮವಾಗಿ, ಸಚಿವಾಲಯವು ಸಕಾಲಿಕ ನೇರ ಲಾಭ/ನಗದು ವರ್ಗಾವಣೆ (DBT) ಬಿಡುಗಡೆಗಳು, ಆವಾಸ್ಸಾಫ್ಟ್ ಮೂಲಕ ನೈಜ-ಸಮಯದ ಮೇಲ್ವಿಚಾರಣೆ, ಜಿಯೋ-ಟ್ಯಾಗಿಂಗ್ ಮತ್ತು ಪ್ರಗತಿಯಲ್ಲಿರುವ ಮನೆಗಳ ತ್ವರಿತ ಪೂರ್ಣಗೊಳಿಸುವಿಕೆಗೆ ಆದ್ಯತೆ ನೀಡುತ್ತಿದೆ.
ಫಲಾನುಭವಿಗಳು ಮೂಲಭೂತ ಸೌಕರ್ಯಗಳ ಸಂಪೂರ್ಣ ಪ್ಯಾಕೇಜ್ ಅನ್ನು ಪಡೆಯುವಂತೆ ಮಾನವ ದಿನಗಳು, ನೈರ್ಮಲ್ಯ, ಕುಡಿಯುವ ನೀರು, ಎಲ್.ಪಿ.ಜಿ. ಮತ್ತು ವಿದ್ಯುತ್ ಮೂಲಕ ಬಲವಾದ ಒಮ್ಮುಖ ಬೆಂಬಲವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಭವಿಷ್ಯದ ಮಾರುಕಟ್ಟೆಯ ಏರಿಳಿತಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಾಮಗ್ರಿ ಬ್ಯಾಂಕುಗಳ ರಚನೆಯಂತಹ ರಚನಾತ್ಮಕ ಕ್ರಮಗಳನ್ನು ಸಹ ಉತ್ತೇಜಿಸಲಾಗುತ್ತಿದೆ.
ಮುಂಗಡ ಯೋಜನೆಯ ಮೂಲಕ ಗ್ರಾಮೀಣ ರಸ್ತೆ ಕಾರ್ಯಕ್ರಮಕ್ಕೆ ರಕ್ಷಣೆ ಒದಗಿಸಲಾಗಿದೆ.
ಪಿ.ಎಂ.ಜಿ.ಎಸ್.ವೈ (PMGSY) ಅಡಿಯಲ್ಲಿ, ರಾಜ್ಯಗಳು ಪ್ರಸ್ತಾಪಿಸಿದ ಚಾಲ್ತಿಯಲ್ಲಿರುವ ದರಗಳ ಪಟ್ಟಿಯ ಪ್ರಕಾರ ಕಾಮಗಾರಿಗಳನ್ನು ಮಂಜೂರು ಮಾಡಲಾಗುತ್ತದೆ.
ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಿಗೆ ಪಿ.ಎಂ.ಜಿ.ಎಸ್.ವೈ -I, II, III (PMGSY-I, II, III ) ಮತ್ತು ರಸ್ತೆ ಸಂಪರ್ಕ ಯೋಜನೆಗಳ ಅಡಿಯಲ್ಲಿ ಎಲ್ಲಾ ಮಂಜೂರಾದ ಕಾಮಗಾರಿಗಳನ್ನು ಟೆಂಡರ್ ಮಾಡಲಾಗಿದೆ ಅಥವಾ ಕಾರ್ಯಗತಗೊಳಿಸಲಾಗುತ್ತಿದೆ.
ಪಿ.ಎಂ.ಜಿ.ಎಸ್.ವೈ -IV (PMGSY-IV) ಅಡಿಯಲ್ಲಿ, ಸುಮಾರು 12,100 ಕಿ.ಮೀ ರಸ್ತೆ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಮತ್ತು ಪ್ರಸ್ತುತ ಟೆಂಡರ್ ಹಂತದಲ್ಲಿವೆ. ಪ್ರಸ್ತುತ, ಜಾಗತಿಕ ಏರಿಳಿತದ ಪರಿಣಾಮ ಸೀಮಿತವಾಗಿದೆ, ಏಕೆಂದರೆ ಒಟ್ಟು ಯೋಜನಾ ವೆಚ್ಚದಲ್ಲಿ ಬಿಟುಮೆನ್ ಪ್ರಮಾಣದ ಪಾಲು ತುಲನಾತ್ಮಕವಾಗಿ ಸಣ್ಣ ಪ್ರಮಾಣದ್ದಾಗಿದೆ.
ಭವಿಷ್ಯದ ಯೋಜನಾ ಬ್ಯಾಚ್‌ಗಳನ್ನು (ಯೋಜನಾ ಗುಚ್ಚಗಳನ್ನು) ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ವೆಚ್ಚದ ಪ್ರವೃತ್ತಿಗಳನ್ನು ಪ್ರತಿಬಿಂಬಿಸಲು ನವೀಕರಿಸಿದ ದರಗಳ ಪಟ್ಟಿಯನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಲಾಗುತ್ತದೆ.
ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು
ಜಲ ಸಂರಕ್ಷಣೆ, ಕೃಷಿಯನ್ನು ಹೆಚ್ಚಿಸುವುದು, ತೋಟಗಾರಿಕೆ ಮತ್ತು ಹುಲ್ಲುಗಾವಲು ಅಭಿವೃದ್ಧಿಯನ್ನು ಬಲಪಡಿಸಲು ಭೂ ಸಂಪನ್ಮೂಲ ಇಲಾಖೆಯು 50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಡಬ್ಲ್ಯು.ಡಿ.ಸಿ.-ಪಿ.ಎಂ.ಕೆ.ಎಸ್.ವೈ.-(WDC-PMKSY ಅಂದರೆ ಜಲಾನಯನ ಅಭಿವೃದ್ಧಿ ಘಟಕ - ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ) 2.0 ಅನ್ನು ಅನುಷ್ಠಾನಗೊಳಿಸುತ್ತಿದೆ
ಯಾವುದೇ ಸಂಭಾವ್ಯ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಕೃಷಿ ಹಾಗು ರೈತ ಕಲ್ಯಾಣ ಸಚಿವಾಲಯ ಮತ್ತು ಇತರ ಪಾಲುದಾರ ಸಚಿವಾಲಯಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
*****
(ಪ್ರಕಟಣೆ ಐ.ಡಿ.: 2253862)
ವಿಸಿಟರ್ ಕೌಂಟರ್ : 9