ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸುಧಾರಿತ ತಂತ್ರಜ್ಞಾನಗಳು ಮತ್ತು ಡಿಜಿಟಲ್ ರೂಪಾಂತರದಲ್ಲಿ ಸಹಯೋಗವನ್ನು ಬಲಪಡಿಸಲು ‘ಸಿ-ಡಾಕ್’ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ‘ಬಿಇಸಿಐಎಲ್’


ಈ ಸಹಯೋಗವು ಕೃತಕ ಬುದ್ಧಿಮತ್ತೆ, 5ಜಿ, ಸೈಬರ್ ಭದ್ರತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಂಟಿ ಯೋಜನೆಗಳು, ತಂತ್ರಜ್ಞಾನ ಪರಿಹಾರಗಳು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ

ಪ್ರಕಟಣಾ ದಿನಾಂಕ: 18 APR 2026 1:00PM by PIB Bengaluru

‘ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್’(ಬಿಇಸಿಐಎಲ್) ಸಂಸ್ಥೆಯು ಸುಧಾರಿತ ತಂತ್ರಜ್ಞಾನಗಳು, ಡಿಜಿಟಲ್ ರೂಪಾಂತರ ಮತ್ತು ಸಾಮರ್ಥ್ಯ ವರ್ಧನೆ ಕ್ಷೇತ್ರಗಳಲ್ಲಿ ಸಹಕರಿಸಲು ‘ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್’ (ಸಿ-ಡ್ಯಾಕ್) ಜೊತೆ  ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಈ ಸಹಯೋಗವು ಜಂಟಿ ಯೋಜನಾ ಅನುಷ್ಠಾನ, ಸಲಹಾ ಮತ್ತು ತಾಂತ್ರಿಕ ಬೆಂಬಲ ಮತ್ತು ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್ (ಎಂಎಲ್), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಸೈಬರ್ ಭದ್ರತೆ, 5ಜಿ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಪರಿಹಾರಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದು ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಳಕೆಗೆ ಸನ್ನದ್ಧವಾದ (ಟರ್ನ್‌ ಕೀ) ಪರಿಹಾರಗಳ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ, ಜೊತೆಗೆ ತಂತ್ರಜ್ಞಾನ ವರ್ಗಾವಣೆ ಮತ್ತು ನವೀನ ಉತ್ಪನ್ನಗಳ ವಾಣಿಜ್ಯೀಕರಣವನ್ನು ಸುಗಮಗೊಳಿಸುತ್ತದೆ. ಈ ಪಾಲುದಾರಿಕೆಯು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸಲು ಸಾಮರ್ಥ್ಯ ವರ್ಧನೆ, ಉದ್ಯೋಗಿಗಳ ಕೌಶಲ್ಯ ಮತ್ತು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳಿಗೆ ಮತ್ತಷ್ಟು ಒತ್ತು ನೀಡುತ್ತದೆ.

'ಬಿಇಸಿಐಎಲ್' ನಿರ್ದೇಶಕರಾದ ( ಓ & ಎಂ) ಕ್ಯಾಪ್ಟನ್ (ಭಾರತೀಯ ನೌಕಾಪಡೆ) ಸೌರವ್ ಚೌಹಾಣ್ (ನಿವೃತ್ತ) ಮತ್ತು 'ಸಿ-ಡ್ಯಾಕ್'ನ ರಿಜಿಸ್ಟ್ರಾರ್ ಶ್ರೀ ನಿರಂಜನ್ ವೈಷ್ಣವ್ ಅವರು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ  ಒಪ್ಪಂದಕ್ಕೆ ಸಹಿ ಹಾಕಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ 'ಬಿಇಸಿಐಎಲ್'ನ ಸಿಎಂಡಿ  ಡಿ.ಕೆ.ಮುರಳಿ (ನಿವೃತ್ತ) ಅವರು, "ಸಿ-ಡ್ಯಾಕ್ ಜೊತೆಗಿನ ಈ ಸಹಯೋಗವು ಸುಧಾರಿತ ತಂತ್ರಜ್ಞಾನಗಳು ಮತ್ತು ಡಿಜಿಟಲ್ ರೂಪಾಂತರದಲ್ಲಿ 'ಬಿಇಸಿಐಎಲ್'ನ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು. ಈ ಪಾಲುದಾರಿಕೆಯು ಎರಡೂ ಸಂಸ್ಥೆಗಳ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ, ಪರಿಣಾಮಕಾರಿ ಪರಿಹಾರಗಳನ್ನು ನೀಡುವ ಮತ್ತು ಭಾರತದ ಡಿಜಿಟಲ್ ಬೆಳವಣಿಗೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಈ ಪಾಲುದಾರಿಕೆಯು ನಾವೀನ್ಯತೆಯನ್ನು ಉತ್ತೇಜಿಸುತ್ತದೆ, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ವೇಗಗೊಳಿಸುತ್ತದೆ ಮತ್ತು ಭಾರತ ಸರ್ಕಾರದ 'ಡಿಜಿಟಲ್ ಇಂಡಿಯಾ' ದೃಷ್ಟಿಕೋನಕ್ಕೆ ಅನುಗುಣವಾಗಿ ದೃಢವಾದ ಮತ್ತು ಭವಿಷ್ಯಕ್ಕೆ ಸನ್ನದ್ಧವಾದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬಿಇಸಿಐಎಲ್ ಬಗ್ಗೆ

'ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್'(ಬಿಇಸಿಐಎಲ್) - ಇದು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ 'ಮಿನಿ ರತ್ನ ವರ್ಗ-1' ಸಾರ್ವಜನಿಕ ವಲಯದ ಉದ್ಯಮವಾಗಿದೆ. 1995 ರಲ್ಲಿ ಸ್ಥಾಪಿತವಾದ ಕಂಪನಿಯು ಪ್ರಸಾರ, ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ಸಲಹಾ ಸೇವೆಗಳು ಮತ್ತು ಬಳಕೆಗೆ ಸನ್ನದ್ಧವಾದ (ಟರ್ನ್ ಕೀ) ಪರಿಹಾರಗಳನ್ನು ಒದಗಿಸುತ್ತದೆ. 'ಬಿಇಸಿಐಎಲ್' ತನ್ನ ಕಾರ್ಯಾಚರಣೆಯನ್ನು ಇ-ಆಡಳಿತ, ಸ್ಮಾರ್ಟ್ ಸಿಟಿಗಳು, ಆರೋಗ್ಯ ರಕ್ಷಣೆ ಮತ್ತು ಮಾನವ ಸಂಪನ್ಮೂಲ ಸೇವೆಗಳಂತಹ ಕ್ಷೇತ್ರಗಳಿಗೆ ವಿಸ್ತರಿಸಿದೆ, ಇದು ಸರ್ಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳ ಅಗತ್ಯಗಳನ್ನು ಪೂರೈಸುತ್ತದೆ.

ಸಿ-ಡಾಕ್‌ ಬಗ್ಗೆ

'ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್'(ಸಿ-ಡಾಕ್) - ಇದು ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದೆ. ಇದು ಸುಧಾರಿತ ಕಂಪ್ಯೂಟಿಂಗ್, ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಸಾಫ್ಟ್‌ವೇರ್‌ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತಂತ್ರಜ್ಞಾನಗಳು, ಉತ್ಪನ್ನಗಳು ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳ ಅಭಿವೃದ್ಧಿಯ ಮೂಲಕ ಸಿ-ಡಾಕ್ ರಾಷ್ಟ್ರೀಯ ಉಪಕ್ರಮಗಳನ್ನು ಬೆಂಬಲಿಸುತ್ತದೆ.

******


(ಪ್ರಕಟಣೆ ಐ.ಡಿ.: 2253227) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi , Bengali , Assamese , Telugu , Malayalam