ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಸನಂದ್‌ನಲ್ಲಿ ಕೇನ್ಸ್ ಸೆಮಿಕಾನ್ ಸ್ಥಾವರ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 31 MAR 2026 3:54PM by PIB Bengaluru

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ರಾಜ್ಯದ ಉಪಮುಖ್ಯಮಂತ್ರಿ ಶ್ರೀ ಹರ್ಷ ಭಾಯಿ ಸಂಘವಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಅಶ್ವಿನಿ ವೈಷ್ಣವ್ ಜೀ, ರಾಜ್ಯ ಸಚಿವ ಸಹೋದರ ಅರ್ಜುನ್ ಮೋಧ್ವಾಡಿಯಾ ಜೀ, ಕೇನ್ಸ್ ಮತ್ತು ಆಲ್ಫಾ ಒಮೆಗಾ ಸೆಮಿಕಂಡಕ್ಟರ್‌ಗಳ ಪ್ರತಿನಿಧಿಗಳೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ.

ಕಳೆದ ತಿಂಗಳ ಕೊನೆಯ ದಿನವೂ ನಾನು ಸನಂದ್‌ನಲ್ಲಿದ್ದೆ, ಮತ್ತು ತಿಂಗಳ ಕೊನೆಯ ದಿನವೂ ನಾನು ಸನಂದ್‌ನಲ್ಲಿದ್ದೇನೆ. ಫೆಬ್ರವರಿ 28 ರಂದು, ಮೈಕ್ರಾನ್‌ನ ಸ್ಥಾವರದಲ್ಲಿ ಉತ್ಪಾದನೆ ಪ್ರಾರಂಭವಾಯಿತು, ಮತ್ತು ಇಂದು ಮಾರ್ಚ್ 31 ರಂದು, ಕೇನ್ಸ್ ಟೆಕ್ನಾಲಜಿಯ ಸೆಮಿಕಂಡಕ್ಟರ್ ಸ್ಥಾವರದಲ್ಲಿ ಉತ್ಪಾದನೆ ಪ್ರಾರಂಭವಾಗುತ್ತಿದೆ. ಇದು ಕೇವಲ ಕಾಕತಾಳೀಯವಲ್ಲ; ಇದು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿರುವ ತ್ವರಿತ ಗತಿ, ವೇಗ, ನಾಗಾಲೋಟಕ್ಕೆ ಪುರಾವೆಯಾಗಿದೆ. ಕೇನ್ಸ್ ಟೆಕ್ನಾಲಜಿಯ ಸಂಪೂರ್ಣ/ಇಡೀ  ನಾಯಕತ್ವಕ್ಕೆ ನಾನು ಅನೇಕ, ಅನೇಕ ಅಭಿನಂದನೆಗಳನ್ನು ನೀಡುತ್ತೇನೆ. ರಮೇಶ್ ರಘು, ಅಭಿನಂದನೆಗಳು. ಗುಜರಾತ್ ಸರ್ಕಾರ ಮತ್ತು ಸ್ಥಾವರದಲ್ಲಿ ಕೆಲಸ ಮಾಡುವ ಎಲ್ಲಾ ಸಹೋದ್ಯೋಗಿಗಳಿಗೆ ನಾನು ಅನೇಕ, ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು ಬೆಳಿಗ್ಗೆ ನಾನು ದೈವಿಕತೆಗೆ ('ಡಿವೈನ್' ಗೆ) ಸಂಬಂಧಿಸಿದ ಕಾರ್ಯಕ್ರಮದಲ್ಲಿದ್ದೆ ಮತ್ತು ಈಗ ನಾನು 'ಡಿಜಿಟಲ್' ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಇದ್ದೇನೆ.

ಸ್ನೇಹಿತರೇ,

ಒಂದು ಭಾರತೀಯ ಕಂಪನಿಯು ಸೆಮಿಕಂಡಕ್ಟರ್ ಚಿಪ್‌ಗಳನ್ನು ತಯಾರಿಸಲು ಆಸಕ್ತಿ ತೋರಿಸಿದೆ ಎಂದು ನನಗೆ ತುಂಬಾ ಸಂತೋಷವಾಗಿದೆ, ಮತ್ತು ಅದರ ಫಲಿತಾಂಶ ನಮ್ಮೆಲ್ಲರ ಮುಂದೆ ಇದೆ. ನಮ್ಮ ಭಾರತದ ಸ್ವಂತ ಕಂಪನಿ ಕೇನ್ಸ್ ಈಗ ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯ ಬಲವಾದ ಭಾಗವಾಗಿದೆ. ಇದು ಬಹಳ ಭವ್ಯವಾದ ಆರಂಭ, ಹೆಮ್ಮೆಯ ಕ್ಷಣ, ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. ಮುಂಬರುವ ದಿನಗಳಲ್ಲಿ, ಅನೇಕ ಭಾರತೀಯ ಕಂಪನಿಗಳು, ಜಾಗತಿಕ ಸಹಯೋಗದ ಮೂಲಕ, ಜಗತ್ತಿಗೆ ಸ್ಥಿತಿಸ್ಥಾಪಕತ್ವದ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ನೀಡಲಿವೆ.

ಸ್ನೇಹಿತರೇ,

ಇಂದಿನ ದಿನ, ನಿಜವಾದ ಅರ್ಥದಲ್ಲಿ, ಈ ಮಂತ್ರವನ್ನು ಸಾಕಾರಗೊಳಿಸುತ್ತದೆ - ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್. ಈ ಯೋಜನೆಯಲ್ಲಿ ಉತ್ಪಾದನೆಯ ಪ್ರಾರಂಭದೊಂದಿಗೆ, ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಸೆಮಿಕಂಡಕ್ಟರ್ ಪೂರೈಕೆದಾರನಾಗಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇಂದು, ಒಂದು ರೀತಿಯಲ್ಲಿ, ಸನಂದ್ ಮತ್ತು ಸಿಲಿಕಾನ್ ವ್ಯಾಲಿಯ ನಡುವೆ ಹೊಸ ಸೇತುವೆ ರೂಪುಗೊಂಡಿದೆ. ಕ್ಯಾಲಿಫೋರ್ನಿಯಾದ ಒಂದು ಕಂಪನಿಗೆ, ಸನಂದ್‌ನಲ್ಲಿರುವ ಸ್ಥಾವರವು ಅಂತರ್ಗತವಾದ ಸಂಕೀರ್ಣ ವಿದ್ಯುತ್ ಮಾಡ್ಯೂಲ್‌ಗಳನ್ನು (ಇಂಟೆಲಿಜೆಂಟ್ ಪವರ್ ಮಾಡ್ಯೂಲ್‌)  ಒದಗಿಸುತ್ತಿದೆ. ಇಲ್ಲಿ ತಯಾರಾಗುತ್ತಿರುವ ಉತ್ಪನ್ನಗಳ ಬಹುಪಾಲು ಭಾಗವನ್ನು ಈಗಾಗಲೇ ರಫ್ತಿಗೆ ಕಾಯ್ದಿರಿಸಲಾಗಿದೆ ಎಂದು ನನಗೆ ಹೇಳಲಾಗಿದೆ. ಸನಂದ್‌ನಲ್ಲಿ ತಯಾರಾದ ಮಾಡ್ಯೂಲ್‌ಗಳು ಅಮೇರಿಕನ್ ಕಂಪನಿಗಳನ್ನು ತಲುಪುತ್ತವೆ ಮತ್ತು ಅಲ್ಲಿಂದ ಇಡೀ ಜಗತ್ತಿಗೆ ಶಕ್ತಿಯನ್ನು ನೀಡುತ್ತವೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಎಂಬ ಮಂತ್ರದ ಯಶಸ್ಸಿನ ಪ್ರತಿಧ್ವನಿ ಪ್ರಪಂಚದ ಪ್ರತಿಯೊಂದು ಮೂಲೆಯನ್ನು ತಲುಪುತ್ತದೆ.

ಸ್ನೇಹಿತರೇ,

ಇಲ್ಲಿ ತಯಾರಾಗುತ್ತಿರುವ ಇಂಟೆಲಿಜೆಂಟ್ ಪವರ್ ಮಾಡ್ಯೂಲ್‌ಗಳಿಂದ, ಭಾರತ ಮತ್ತು ಪ್ರಪಂಚದ ವಿದ್ಯುತ್ ವಾಹನ ಪರಿಸರ ವ್ಯವಸ್ಥೆ ಮತ್ತು ಬೃಹತ್ ಉದ್ಯಮವು ಹೆಚ್ಚಿನ ಶಕ್ತಿಯನ್ನು ಪಡೆಯುತ್ತದೆ. ಈ ಜಾಗತಿಕ ಪಾಲುದಾರಿಕೆಯೇ ವಿಶ್ವದ ಉತ್ತಮ ಭವಿಷ್ಯದ ಬಲವಾದ ಅಡಿಪಾಯವಾಗಿದೆ.

ಸ್ನೇಹಿತರೇ,

21ನೇ ಶತಮಾನದ ದಶಕವು ಆರಂಭದಿಂದಲೂ ಜಗತ್ತಿಗೆ ಅನೇಕ ಸವಾಲುಗಳನ್ನು ತಂದಿದೆ. ಸಾಂಕ್ರಾಮಿಕ, ಸಂಘರ್ಷಗಳ ಬಿಕ್ಕಟ್ಟು ಇದೆ. ಇದರಲ್ಲಿಯೂ ಸಹ, ಜಾಗತಿಕ ಪೂರೈಕೆ ಸರಪಳಿಯು ಅತಿದೊಡ್ಡ ಬಲಿಪಶುವಾಗಿದೆ. ಅದು ಚಿಪ್ ಗಳಾಗಿರಲಿ , ಅಪರೂಪದ ಖನಿಜಗಳಾಗಿರಲಿ ಅಥವಾ ಇಂಧನ ಶಕ್ತಿಯಾಗಿರಲಿ, ಸಂಘರ್ಷಗಳಿಂದಾಗಿ ಇವುಗಳ ಮೇಲೆ  ಹೆಚ್ಚು ಪರಿಣಾಮಗಳಾಗಿವೆ. ಇವು ಮಾನವೀಯತೆಯ ತ್ವರಿತ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಾಗಿವೆ; ಅವುಗಳ ಪೂರೈಕೆ ಸರಪಳಿಯಲ್ಲಿನ ಕಡಿತದಿಂದ, ಅವುಗಳ ಹರಿವಿನಲ್ಲಿ, ಅಡಚಣೆಯಾಗಿ ಇಡೀ ಮಾನವೀಯತೆಯ ಅಭಿವೃದ್ಧಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಆದ್ದರಿಂದ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರವು ದಿಕ್ಕಿನಲ್ಲಿ ಮುಂದುವರಿಯುವುದು ಇಡೀ ಪ್ರಪಂಚದ ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ.

ಸ್ನೇಹಿತರೇ,

ಕರೋನಾ ದುರಂತದ ಸಮಯದಲ್ಲಿಯೇ ಭಾರತವು ಸೆಮಿಕಂಡಕ್ಟರ್ ವಲಯದ ಹೊಸ ಜಾಗತಿಕ ಕೇಂದ್ರವಾಗಬೇಕು, ಈ ವಲಯದಲ್ಲಿ ಸ್ವಾವಲಂಬಿಯಾಗಬೇಕು ಎಂದು ನಾವು ನಿರ್ಧರಿಸಿದ್ದೆವು. ಮತ್ತು ಸೆಮಿಕಂಡಕ್ಟರ್‌ಗಳಲ್ಲಿ ಸ್ವಾವಲಂಬನೆ ಕೇವಲ ಚಿಪ್‌ಗೆ ಸೀಮಿತವಾಗಿಲ್ಲ. ಇದರರ್ಥ ಸ್ವಾವಲಂಬನೆಯಿಂದ ಎ.ಐ., ವಿದ್ಯುತ್ ವಾಹನಗಳು, ಶುದ್ಧ ಇಂಧನ, ರಕ್ಷಣೆ, ಎಲೆಕ್ಟ್ರಾನಿಕ್ಸ್, ಅಂತಹ ಹಲವು ಕ್ಷೇತ್ರಗಳು ಬಲಗೊಳ್ಳುತ್ತವೆ. ಆದ್ದರಿಂದ, 2021 ರಲ್ಲಿ, ಭಾರತ-ಸೆಮಿಕಂಡಕ್ಟರ್ ಮಿಷನ್ ಪ್ರಾರಂಭಿಸಿತು. ಈ ಮಿಷನ್ ಕೇವಲ ಕೈಗಾರಿಕಾ ನೀತಿಯಲ್ಲ; ಇದು ಭಾರತದ ಆತ್ಮ ವಿಶ್ವಾಸದ ಘೋಷಣೆಯಾಗಿದೆ. ಮತ್ತು ಅದರ ಪ್ರಭಾವ ಎಲ್ಲರ ಮುಂದೆ ಇದೆ. ಈ ಮಿಷನ್ ಅಡಿಯಲ್ಲಿ, ದೇಶದ 6 ರಾಜ್ಯಗಳಲ್ಲಿ ಒಂದು ಲಕ್ಷ ಅರವತ್ತು ಸಾವಿರ ಕೋಟಿ ರೂಪಾಯಿಗಳ ಮೌಲ್ಯದ 10 ಯೋಜನೆಗಳಲ್ಲಿ ಕೆಲಸ ನಡೆಯುತ್ತಿದೆ. ಕೇನ್ಸ್ ಮತ್ತು ಮೈಕ್ರಾನ್ ಯೋಜನೆಗಳು ಸಹ ಇದರ ಭಾಗವಾಗಿವೆ. ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ, ಭಾರತವು ಧ್ರುವ ಸಿಕ್ಸ್ಟಿ ಫೋರ್‌ನಂತಹ ಆಧುನಿಕ ಮೈಕ್ರೋಪ್ರೊಸೆಸರ್ ಅಭಿವೃದ್ಧಿಪಡಿಸಿದೆ. ಇದರಿಂದ, 5ಜಿ ಮೂಲಸೌಕರ್ಯ, ಆಟೋಮೋಟಿವ್ ಎಲೆಕ್ಟ್ರಾನಿಕ್ಸ್, ಕೈಗಾರಿಕಾ ಸ್ವಯಂಚಾಲನೆಯಂತಹ  ಹಲವು ವಲಯಗಳಿಗೆ, ನಮಗೆ ನಮ್ಮದೇ ಆದ ಸುರಕ್ಷಿತ ವೇದಿಕೆ ಸಿಕ್ಕಿದೆ.

ಸ್ನೇಹಿತರೇ,

ಇದುವರೆಗಿನ ಸೆಮಿಕಂಡಕ್ಟರ್ ಮಿಷನ್‌ನ ಯಶಸ್ಸಿನ ನಂತರ, ಈಗ ಭಾರತವು ತನ್ನ ಮುಂದಿನ ಹಂತದತ್ತ ಹೆಜ್ಜೆ ಇಟ್ಟಿದೆ. ಈ ಚಿಂತನೆಯೊಂದಿಗೆ, ಈ ವರ್ಷದ ಬಜೆಟ್‌ನಲ್ಲಿ ಭಾರತ-ಸೆಮಿಕಂಡಕ್ಟರ್ ಮಿಷನ್ 2.0 ಘೋಷಿಸಲಾಗಿದೆ. ಈ ಹಂತದ ಗಮನವು ಭಾರತದಲ್ಲಿ ಸೆಮಿಕಂಡಕ್ಟರ್ ಉಪಕರಣಗಳು ಮತ್ತು ವಸ್ತುಗಳ ಉತ್ಪಾದನೆಯ ಮೇಲೆ ಇರುತ್ತದೆ. ಈಗ ನಮ್ಮ ಪ್ರಯತ್ನವು ಪೂರ್ಣ ಪ್ರಮಾಣದ ಭಾರತೀಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಸಿದ್ಧಪಡಿಸುವುದು. ಇದರಿಂದ ನಾವು ದೇಶೀಯ ಮತ್ತು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ದೊಡ್ಡ ಪಾಲುದಾರಿಕೆಗಳನ್ನು ಮಾಡಬಹುದು.

ಸ್ನೇಹಿತರೇ,

ಭಾರತವು ಇಂದು ಉದ್ಯಮ ನೇತೃತ್ವದ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳನ್ನು ಪ್ರೋತ್ಸಾಹಿಸುತ್ತಿದೆ, ಇದರಿಂದ ತಂತ್ರಜ್ಞಾನ ಅಭಿವೃದ್ಧಿಯೂ ನಡೆಯುತ್ತದೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲ್ಯಪೂರ್ಣ ಕಾರ್ಯಪಡೆಯೂ ಸಿದ್ಧವಾಗುತ್ತದೆ. ಶೀಘ್ರದಲ್ಲೇ, ದೇಶದಲ್ಲಿ 85 ಸಾವಿರಕ್ಕೂ ಹೆಚ್ಚು ವಿನ್ಯಾಸ ವೃತ್ತಿಪರರನ್ನು ಸಿದ್ಧಪಡಿಸುವ ಗುರಿಯನ್ನು ಸಾಧಿಸಲಾಗುವುದು. ಇದರೊಂದಿಗೆ, ಇಡೀ ಪರಿಸರ ವ್ಯವಸ್ಥೆಯ ಅಗತ್ಯಗಳನ್ನು ನೋಡಿ, ವೃತ್ತಿಪರರ ತರಬೇತಿಗಾಗಿ ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತಿದೆ. ಸೆಮಿಕಂಡಕ್ಟರ್ ವಿನ್ಯಾಸವನ್ನು ಉತ್ತೇಜಿಸಲು, ಚಿಪ್ಸ್ ಟು ಸ್ಟಾರ್ಟ್ಅಪ್ ಕಾರ್ಯಕ್ರಮವೂ ಚಾಲನೆಯಲ್ಲಿದೆ. ಇಂದು, ದೇಶದ ಸುಮಾರು 400 ವಿಶ್ವವಿದ್ಯಾಲಯಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಆಧುನಿಕ ವಿನ್ಯಾಸ ಪರಿಕರಗಳಿಗೆ ಪ್ರವೇಶವನ್ನು ನೀಡಲಾಗಿದೆ. ಇದರಿಂದ, ಐವತ್ತೈದಕ್ಕೂ ಹೆಚ್ಚು ಚಿಪ್‌ಗಳ ವಿನ್ಯಾಸ ಮತ್ತು ತಯಾರಿಕೆಯನ್ನು ಈಗಾಗಲೇ ಮಾಡಲಾಗಿದೆ.

ಸ್ನೇಹಿತರೇ,

ಉದ್ಯಮದ ಅಂದಾಜಿನ ಪ್ರಕಾರ, ಇಂದು ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಸುಮಾರು ಐವತ್ತು ಶತಕೋಟಿ ಡಾಲರ್‌ಗಳು, ಅಂದರೆ ಸರಿಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳು. ಇದು ದಶಕದ ಅಂತ್ಯದ ವೇಳೆಗೆ ನೂರು ಶತಕೋಟಿ ಡಾಲರ್‌ಗಳನ್ನು ಅಂದರೆ ಒಂಬತ್ತು ಲಕ್ಷ ಕೋಟಿ ರೂಪಾಯಿಗಳನ್ನು ದಾಟಬಹುದು. ಭಾರತದಲ್ಲಿ ವಲಯದಲ್ಲಿ ಎಷ್ಟು ಸಾಮರ್ಥ್ಯವಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತದಲ್ಲಿಯೇ ನಮ್ಮ ಅಗತ್ಯಗಳಿಗಾಗಿ ಹೆಚ್ಚು ಹೆಚ್ಚು ಚಿಪ್‌ಗಳನ್ನು ತಯಾರಿಸುವುದು ನಮ್ಮ ಗುರಿಯಾಗಿದೆ. ಭಾರತದ ಸಂಕಲ್ಪದ ಬಗ್ಗೆ ಪ್ರಪಂಚದಾದ್ಯಂತದ ಹೂಡಿಕೆದಾರರಲ್ಲಿ ಇರುವ ಉತ್ಸಾಹವು ನಮಗೆ ಬಹಳ ದೊಡ್ಡ ಬಂಡವಾಳವಾಗಿದೆ.

ಸ್ನೇಹಿತರೇ,

ಭಾರತವು ಬಲವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಮಾಡುವುದಲ್ಲದೆ, ಅದೇ ಸಮಯದಲ್ಲಿ, ಕಚ್ಚಾ ವಸ್ತುಗಳ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಾಗಿಯೂ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದೆ. ಪ್ಯಾಕ್ಸ್ (ಪಿ.ಎ.ಎಕ್ಸ್.-PAX) ಸಿಲಿಕಾದಲ್ಲಿ ಭಾರತದ ಸೇರ್ಪಡೆಯು ಪ್ರಯತ್ನದ ಒಂದು ಭಾಗವಾಗಿದೆ. ಪ್ರಪಂಚದಾದ್ಯಂತದ ನಮ್ಮ ಪಾಲುದಾರರೊಂದಿಗೆ, ಭಾರತದಲ್ಲಿ ಸುರಕ್ಷಿತ ಪೂರೈಕೆ ಸರಪಳಿಯನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ.

ಸ್ನೇಹಿತರೇ,

ಮುಖ್ಯವಾಗಿ ಸಂಕೀರ್ಣ  ಖನಿಜಗಳಲ್ಲಿ ಸ್ವಾವಲಂಬನೆಗಾಗಿ, ಭಾರತವು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಸಹ ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ನಿರ್ಣಾಯಕ ಖನಿಜಗಳ ಗಣಿಗಾರಿಕೆ ಮತ್ತು ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಖನಿಜಗಳ ಮರುಬಳಕೆಗಾಗಿ, 1500 ಕೋಟಿ ರೂಪಾಯಿಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಂತಹ ಕರಾವಳಿ ರಾಜ್ಯಗಳನ್ನು ಒಟ್ಟುಗೂಡಿಸಿ, ಅಪರೂಪದ ಭೂಮಿಯ ಕಾರಿಡಾರ್ ನಿರ್ಮಾಣವನ್ನು ಘೋಷಿಸಲಾಗಿದೆ. ಈ ಕಾರಿಡಾರ್ ಗಣಿಗಾರಿಕೆ, ಸಂಸ್ಕರಣೆ ಮತ್ತು ಉತ್ಪಾದನೆಯ ಬಲವಾದ ಸರಪಳಿಯನ್ನು ರೂಪಿಸುವ ಸಮಗ್ರ ಜಾಲವಾಗಿರುತ್ತದೆ. ದೇಶದಲ್ಲಿ ನಿರ್ಣಾಯಕ ಖನಿಜಗಳ ರಾಷ್ಟ್ರೀಯ ದಾಸ್ತಾನು ಇರಬೇಕು ಎಂಬುದು ನಮ್ಮ ಪ್ರಯತ್ನ. ಈ ಕೆಲಸವು 30-40 ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಈಗ ಭಾರತ ಇದಕ್ಕಾಗಿ ಆಂದೋಲನದೋಪಾದಿಯಲ್ಲಿ (ಮಿಷನ್ ಮೋಡ್‌ನಲ್ಲಿ) ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ಭಾರತವು 21ನೇ ಶತಮಾನದ ಅವಧಿಯು ಕೇವಲ ಆರ್ಥಿಕ ಸ್ಪರ್ಧೆಯ ಸಮಯವಲ್ಲ ಎಂದು ನಂಬುತ್ತದೆ. ಇದು ಭವಿಷ್ಯದ ತಂತ್ರಜ್ಞಾನ ಭೂದೃಶ್ಯವನ್ನು ರೂಪಿಸುವ ಸಮಯ. ಆದ್ದರಿಂದ, ನಾನು ದಶಕವನ್ನು, ಈ ದಶಕವನ್ನು, ಭಾರತದ ದಶಕ ಎಂದು ಕರೆಯುತ್ತೇನೆ. ಈ ದಶಕದಲ್ಲಿ ಭಾರತ ತೆಗೆದುಕೊಳ್ಳುತ್ತಿರುವ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕ್ರಮಗಳು ಮುಂಬರುವ ದಶಕಗಳಲ್ಲಿ ಭಾರತದ ನಾಯಕತ್ವವನ್ನು ಸಬಲೀಕರಣಗೊಳಿಸುತ್ತವೆ. ಇತ್ತೀಚೆಗೆ ನಡೆದ ಕೃತಕ ಬುದ್ಧಿಮತ್ತೆ (ಎ.ಐ-AI)  ಇಂಪ್ಯಾಕ್ಟ್ ಶೃಂಗಸಭೆಯ ಯಶಸ್ಸಿನ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಎ.ಐ. ಅಳವಡಿಕೆಯ ವಿಷಯದಲ್ಲಿ ನಾವು ನೋಡಿದರೆ, ಭಾರತವು ಜಗತ್ತಿನ ಎಲ್ಲರಿಗಿಂತ ಮುಂದಿದೆ. ನಾವು ಭಾರತೀಯರು ತಂತ್ರಜ್ಞಾನವನ್ನು ಅನ್ವೇಷಿಸುತ್ತೇವೆ. ಡಿಜಿಟಲ್ ಇಂಡಿಯಾದ ಯಶಸ್ಸು, ಫಿನ್‌ಟೆಕ್‌ನಲ್ಲಿ ನಡೆಯುತ್ತಿರುವ ಅದ್ಭುತ ಕೆಲಸ, ಹೀಗೆ ಇದರಲ್ಲಿ ನಾವು ತಂತ್ರಜ್ಞಾನದಲ್ಲಿ ಭಾರತೀಯರ ವಿಶ್ವಾಸವನ್ನು/ನಂಬಿಕೆಯನ್ನು ನೋಡಲು ಸಾಧ್ಯವಾಗುತ್ತದೆ, ಅದು ತೋರಿಸುತ್ತದೆ ಕೂಡಾ. ಮತ್ತು ಭಾರತ ಹೊಂದಿರುವ ಎ.ಐ. ಪರಿಸರ ವ್ಯವಸ್ಥೆಯು ನಮ್ಮ ಸೆಮಿಕಂಡಕ್ಟರ್ ವಲಯದ ಉದಯದಿಂದ ಸಾಕಷ್ಟು ಸಹಾಯವನ್ನು ಪಡೆಯುತ್ತದೆ.

ಸ್ನೇಹಿತರೇ,

21ನೇ ಶತಮಾನದ ಭಾರತವು ಬದಲಾವಣೆಗೆ ಸಾಕ್ಷಿಯಾಗುವುದಷ್ಟೇ ಅಲ್ಲ, ಬದಲಾವಣೆಯನ್ನು ಮುನ್ನಡೆಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ. ನಮ್ಮ ನೀತಿಗಳು ಮತ್ತು ನಮ್ಮ ನಿರ್ಧಾರಗಳು ಮುಂಬರುವ ದಶಕಗಳ ತಂತ್ರಜ್ಞಾನ ಮತ್ತು ಇಂಧನ ಸುರಕ್ಷತೆಗೆ ಬಲವಾದ ಅಡಿಪಾಯವನ್ನು ಹಾಕುತ್ತಿವೆ. ಆದ್ದರಿಂದ, ಇಂದು ಭಾರತವು ಪ್ರತಿಯೊಂದು ನಿರ್ಣಾಯಕ ತಂತ್ರಜ್ಞಾನದಲ್ಲಿ ಅಭೂತಪೂರ್ವ ಹೂಡಿಕೆ ಮಾಡುತ್ತಿದೆ ಮತ್ತು ಸುಧಾರಣೆಗಳನ್ನು ಮಾಡುತ್ತಿದೆ. ನಾವು ಖಾಸಗಿ ವಲಯದವರಿಗೆ ಬಾಹ್ಯಾಕಾಶ ವಲಯವನ್ನು ತೆರೆದಿದ್ದೇವೆ, ಇನ್ –ಸ್ಪೇಸ್ ( IN-SPACe) ನಂತಹ ಸಂಸ್ಥೆಗಳನ್ನು ರಚಿಸಲಾಗಿದೆ. ಇದರ ಫಲಿತಾಂಶ ಇಂದು ಗೋಚರಿಸುತ್ತಿದೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ನಮ್ಮ ಸ್ಟಾರ್ಟ್‌ಅಪ್‌ಗಳು ಬಹಳ ಅದ್ಭುತವಾದ ಕೆಲಸವನ್ನು ಮಾಡುತ್ತಿವೆ. ಅದೇ ರೀತಿ, ಇತ್ತೀಚೆಗೆ ನಾವು ಪರಮಾಣು ವಲಯದಲ್ಲಿ ಶಾಂತಿ ಮಸೂದೆಯಂತಹ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಇದು ನವೀಕರಿಸಬಹುದಾದ ಇಂಧನ ಮಿಶ್ರಣದಲ್ಲಿ ಪರಮಾಣು ಶಕ್ತಿಯ ಪಾಲನ್ನು ಬಹಳವಾಗಿ ಹೆಚ್ಚಿಸಲಿದೆ. ಇದು ನಮ್ಮ ಎ.ಐ. ಭವಿಷ್ಯಕ್ಕೂ ಸಹ ಬಹಳ ಅವಶ್ಯಕವಾಗಿದೆ.

ಸ್ನೇಹಿತರೇ,

ಭಾರತವು ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ಕಾರ್ಯತಂತ್ರದ ಆಸ್ತಿಯಾಗಿ ಪರಿಗಣಿಸುತ್ತಿದ್ದು, ಆಂದೋಲನದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಭಾರತದ ಡಿಜಿಟಲ್ ಭವಿಷ್ಯವನ್ನು ಸಬಲೀಕರಣಗೊಳಿಸುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಂದರೆ, ಇಂದು ತಂತ್ರಜ್ಞಾನ ಅಭಿವೃದ್ಧಿ ಮತ್ತು ತಂತ್ರಜ್ಞಾನ ಬಳಕೆಯ ವಿಷಯಗಳಲ್ಲಿ ಭಾರತವು ಬಹಳ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಇಡೀ ಪ್ರಪಂಚದಾದ್ಯಂತ ಹೂಡಿಕೆದಾರರಿಗೆ ಇದು ಬಹಳ ದೊಡ್ಡ ಅವಕಾಶವಾಗಿದೆ. ವ್ಯವಹಾರವನ್ನು ಸುಲಭಗೊಳಿಸುವುದು, ಉತ್ಪಾದನೆಯನ್ನು ಸುಲಭಗೊಳಿಸುವುದು, ಲಾಜಿಸ್ಟಿಕ್ಸ್‌ ನ್ನು ಸುಲಭಗೊಳಿಸುವುದರ ಕುರಿತು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೇ,

ಕೇನ್ಸ್‌ನ ಸ್ಥಾವರದಿಂದ ಹೊರಬರುವ ಉತ್ಪನ್ನಗಳು ವಿಶ್ವದ ಕಾರ್ಖಾನೆಯಾಗಿಸುವ ಭಾರತದ ಪ್ರಯಾಣಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಅನೇಕ, ಅನೇಕ ಶುಭಾಶಯಗಳು. ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****


(ಪ್ರಕಟಣೆ ಐ.ಡಿ.: 2247535) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Telugu , Malayalam