ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ "ಎಲ್.ಪಿ.ಜಿ. ಶುಲ್ಕಗಳು" ಮತ್ತು ಅಂತಹುದೇ ಇತರೇ ಶುಲ್ಕಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದಂತೆ ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ತಡೆಗಟ್ಟಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸಲಹೆಯನ್ನು ನೀಡಿದೆ
ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಬಿಲ್ ಜೊತೆಗೆ (ಡೀಫಾಲ್ಟ್) ಇಂಧನ-ಸಂಬಂಧಿತ ಶುಲ್ಕಗಳನ್ನು ಸೇರಿಸುವುದನ್ನು ನಿಷೇಧಿಸಲಾಗಿದೆ; ಗ್ರಾಹಕ ರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ ಇದು ಅನ್ಯಾಯದ ವ್ಯಾಪಾರ ಎಂದು ಕರೆಯಲ್ಪಡುವ ಪದ್ಧತಿಯಾಗಿದೆ
ಪ್ರಕಟಣಾ ದಿನಾಂಕ:
25 MAR 2026 4:01PM by PIB Bengaluru
ಗ್ರಾಹಕ ಬಿಲ್ ಗಳಲ್ಲಿ "ಎಲ್.ಪಿ.ಜಿ. ಶುಲ್ಕಗಳು", "ಗ್ಯಾಸ್ ಸರ್‌ಚಾರ್ಜ್" ಮತ್ತು "ಇಂಧನ ವೆಚ್ಚ ಮರುಪಡೆಯುವಿಕೆ" ನಂತಹ ಇತರೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳನ್ನು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಗಂಭೀರವಾಗಿ ಪರಿಗಣಿಸಿದೆ, ಈ ಪದ್ಧತಿಯನ್ನು ಗ್ರಾಹಕ ರಕ್ಷಣಾ ಕಾಯ್ದೆ, 2019 ರ ಅಡಿಯಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಕರೆದಿದೆ. ಸೇವಾ ಶುಲ್ಕಗಳ ಮೇಲಿನ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ತಪ್ಪಿಸಲು ಅಂತಹ ಶುಲ್ಕಗಳನ್ನು ಪೂರ್ವನಿಯೋಜಿತವಾಗಿ ವಿಧಿಸಲಾಗುತ್ತಿದೆ ಎಂದು ಗಮನಿಸಿದ ಪ್ರಾಧಿಕಾರವು, ಗ್ರಾಹಕ ರಕ್ಷಣಾ ಕಾಯ್ದೆ 2019ರ ಸೆಕ್ಷನ್ 10ರ ಅಡಿಯಲ್ಲಿ ಹೊಸ ಸಲಹೆಯನ್ನು ಹೊರಡಿಸಿದ್ದು, ಅಂತಹ ಯಾವುದೇ ಶುಲ್ಕಗಳನ್ನು ಸ್ವಯಂಚಾಲಿತವಾಗಿ ವಿಧಿಸಬಾರದು ಎಂದು ನಿರ್ದೇಶಿಸುತ್ತದೆ ಮತ್ತು ಉಲ್ಲಂಘನೆಗಳು ಕಠಿಣ ಕ್ರಮಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್.ಸಿ.ಎಚ್.) ಗೆ ಬಂದ ದೂರುಗಳು ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ, ಕೆಲವು ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಪಟ್ಟಿ(ಮೆನು)ಯಲ್ಲಿ ಸೂಚಿಸಲಾದ ಆಹಾರ ಮತ್ತು ಪಾನೀಯಗಳ ಬೆಲೆ ಮತ್ತು ಅನ್ವಯವಾಗುವ ತೆರಿಗೆಗಳಿಗಿಂತ ಹೆಚ್ಚು ಮೊತ್ತವನ್ನು ಗ್ರಾಹಕ ಬಿಲ್ ನಲ್ಲಿ ಅಂತಹ ಶುಲ್ಕಗಳನ್ನು ಪೂರ್ವನಿಯೋಜಿತವಾಗಿ ವಿಧಿಸುತ್ತಿವೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಗಮನಿಸಿದೆ. ಇಂತಹ ಪದ್ಧತಿಗಳು ಪಾರದರ್ಶಕತೆಯ ಕೊರತೆಗೆ ಕಾರಣವಾಗುತ್ತವೆ ಮತ್ತು ಗ್ರಾಹಕರ ಮೇಲೆ ಅನ್ಯಾಯದ ವೆಚ್ಚಗಳನ್ನು ವಿಧಿಸುತ್ತವೆ.
"ಎಲ್.ಪಿ.ಜಿ. ಶುಲ್ಕಗಳು" ಅಥವಾ ಅಂತಹುದೇ ಇತರೇ ಹೆಚ್ಚುವರಿ ಯಾವುದೇ ಶುಲ್ಕಗಳನ್ನು ವಿಧಿಸುವ ಪ್ರಸ್ತುತ ಅಭ್ಯಾಸವು ವಿಭಿನ್ನ ನಾಮಕರಣವನ್ನು ಅಳವಡಿಸಿಕೊಳ್ಳುವ ಮೂಲಕ ಮೇಲೆ ತಿಳಿಸಿದ ಮಾರ್ಗಸೂಚಿಗಳನ್ನು ತಪ್ಪಿಸುವ ಪ್ರಯತ್ನವಾಗಿದೆ. ಇಂಧನ, ಎಲ್.ಪಿ.ಜಿ., ವಿದ್ಯುತ್ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳಂತಹ ಇನ್‌ಪುಟ್ ವೆಚ್ಚಗಳು ವ್ಯವಹಾರವನ್ನು ನಡೆಸುವ ವೆಚ್ಚದ ಭಾಗವಾಗಿದೆ ಮತ್ತು ಮೆನು ಐಟಂಗಳ ಬೆಲೆಯಲ್ಲಿ ಸೇರಿಸಬೇಕು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸ್ಪಷ್ಟಪಡಿಸಿದೆ. ಪ್ರತ್ಯೇಕ ಕಡ್ಡಾಯ ಶುಲ್ಕಗಳ ಮೂಲಕ ಅಂತಹ ವೆಚ್ಚಗಳನ್ನು ಮರುಪಡೆಯುವುದು ಕಾಯಿದೆಯ ಸೆಕ್ಷನ್ 2(47) ಅಡಿಯಲ್ಲಿ ಅನ್ಯಾಯದ ವ್ಯಾಪಾರ ಅಭ್ಯಾಸವಾಗಿದೆ.
ಈ ಸೂಚನೆ ಮೂಲಕ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಈ ಕೆಳಗಿನವುಗಳ ಕುರಿತು ಸಲಹೆ ನೀಡಿದೆ:
i. ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ "ಎಲ್.ಪಿ.ಜಿ. ಶುಲ್ಕಗಳು", "ಗ್ಯಾಸ್ ಶುಲ್ಕಗಳು" ಅಥವಾ ಅಂತಹುದೇ ಶುಲ್ಕಗಳನ್ನು ಪೂರ್ವನಿಯೋಜಿತವಾಗಿ ಅಥವಾ ಸ್ವಯಂಚಾಲಿತವಾಗಿ ಬಿಲ್ ನಲ್ಲಿ ವಿಧಿಸಬಾರದು.
ii. ಅನ್ವಯವಾಗುವ ತೆರಿಗೆಗಳನ್ನು ಮಾತ್ರ ಹೊರತುಪಡಿಸಿ, ಆಹಾರಪಟ್ಟಿ(ಮೆನು)ಯಲ್ಲಿ ಸೂಚಿಸಲಾದ ಬೆಲೆಯು ಅಂತಿಮ ಬೆಲೆಯಾಗಿರುತ್ತದೆ, .
iii. ಗ್ರಾಹಕರನ್ನು ದಾರಿ ತಪ್ಪಿಸಬಾರದು ಅಥವಾ ಸ್ವಯಂಪ್ರೇರಿತವಲ್ಲದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಒತ್ತಾಯಿಸಬಾರದು.
ನಾಮಕರಣವನ್ನು ಲೆಕ್ಕಿಸದೆ, ಅಂತಹ ಯಾವುದೇ ಶುಲ್ಕಗಳು ಸೇವಾ ಶುಲ್ಕ ಅಥವಾ ಹೆಚ್ಚುವರಿ ಶುಲ್ಕಗಳ ಸ್ವರೂಪದಲ್ಲಿರುತ್ತವೆ ಮತ್ತು ಪೂರ್ವನಿಯೋಜಿತವಾಗಿ ಅವುಗಳ ವಿಧಿಸುವಿಕೆಯು 04.07.2022 ದಿನಾಂಕದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತದೆ ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಅಡಿಯಲ್ಲಿ ಕ್ರಮಕ್ಕೆ ಒಳಪಡಬಹುದು ಎಂದು ಸಲಹೆಯು ಪುನರುಚ್ಚರಿಸುತ್ತದೆ.
ಗ್ರಾಹಕರ ಕುಂದುಕೊರತೆ ಪರಿಹಾರ
ಅಂತಹ ಪದ್ಧತಿಗಳನ್ನು ಎದುರಿಸುವ ಗ್ರಾಹಕರು:
i. ಬಿಲ್ ನಿಂದ ಶುಲ್ಕವನ್ನು ತೆಗೆದುಹಾಕಲು ಹೋಟೆಲ್ ಗೆ ಅಥವಾ ರೆಸ್ಟೋರೆಂಟ್ ಗೆ ವಿನಂತಿಸಿ
ii. 1915 ಗೆ ಕರೆ ಮಾಡುವ ಮೂಲಕ ಅಥವಾ ಎನ್.ಸಿ.ಎಚ್. ಮೊಬೈಲ್ ಅಪ್ಲಿಕೇಶನ್ ಮೂಲಕ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದೂರು ಸಲ್ಲಿಸಿ
iii. ಇ-ಜಾಗೃತಿ ಪೋರ್ಟಲ್ ಮೂಲಕ ಸೂಕ್ತ ಗ್ರಾಹಕ ಆಯೋಗದ ಮುಂದೆ ದೂರು ಸಲ್ಲಿಸಿ
iv. ಜಿಲ್ಲಾಧಿಕಾರಿಗಳಿಗೆ ಅಥವಾ ನೇರವಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಗೆ ದೂರನ್ನು ಸಲ್ಲಿಸಿ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ದೇಶಾದ್ಯಂತ ಇಂತಹ ಪದ್ಧತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಂದ ಅನ್ಯಾಯದ ಅಥವಾ ಅನಧಿಕೃತ ಶುಲ್ಕಗಳನ್ನು ವಿಧಿಸುವುದು ಸೇರಿದಂತೆ ಯಾವುದೇ ಉಲ್ಲಂಘನೆಯನ್ನು ಸೂಕ್ತವಾಗಿ ಪರಿಗಣಿಸಲಾಗುವುದು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅಗತ್ಯ ಕ್ರಮ ಕೈಗೊಳ್ಳುತ್ತದೆ.
(ಈ ಸಲಹೆಯ ಸಂಪೂರ್ಣ ಮಾಹಿತಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಜಾಲತಾಣ https://doca.gov.in/ccpa/guidelins.php ನಲ್ಲಿ ಲಭ್ಯವಿದೆ)
*****
(ಪ್ರಕಟಣೆ ಐ.ಡಿ.: 2245202)
ವಿಸಿಟರ್ ಕೌಂಟರ್ : 38