ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಕುರಿತು ಲೋಕಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಕಟಣಾ ದಿನಾಂಕ: 23 MAR 2026 3:25PM by PIB Bengaluru

ಗೌರವಾನ್ವಿತ ಸ್ಪೀಕರ್‌ ಸರ್,

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದು ಭಾರತಕ್ಕೆ ಎದುರಾಗಿರುವ ಸವಾಲುಗಳ ಕುರಿತು ಮಾತನಾಡಲು ನಾನು ಈ ಗೌರವಾನ್ವಿತ ಸದನದ ಮುಂದೆ ಬಂದಿದ್ದೇನೆ. ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದೆ. ಕಳೆದ 2-3 ವಾರಗಳಲ್ಲಿ ಶ್ರೀ ಜೈಶಂಕರ್ ಜಿ ಮತ್ತು ಶ್ರೀ ಹರ್‌ದೀಪ್ ಪುರಿ ಅವರು ಪರಿಷ್ಕೃತ ವಿಷಯಗಳನ್ನು ಸದನಕ್ಕೆ ಒದಗಿಸಿದ್ದಾರೆ. ಬಿಕ್ಕಟ್ಟು 3 ವಾರಗಳಿಗೂ ಹೆಚ್ಚು ಕಾಲ ಇರುವುದರಿಂದ, ಜಾಗತಿಕ ಆರ್ಥಿಕತೆ ಮತ್ತು ಜನರ ಜೀವನದ ಮೇಲೆ ಅದರ ಪ್ರತಿಕೂಲ ಪರಿಣಾಮವು ಸ್ಪಷ್ಟವಾಗಿದೆ. ಈ ಬಿಕ್ಕಟ್ಟಿಗೆ ತ್ವರಿತ ಪರಿಹಾರಕ್ಕಾಗಿ ಇಡೀ ಜಗತ್ತು ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತಾ ಬಂದಿದೆ.

ಗೌರವಾನ್ವಿತ ಸ್ಪೀಕರ್,

ಈ ಯುದ್ಧವು ಭಾರತಕ್ಕೆ ಅನಿರೀಕ್ಷಿತ ಸವಾಲುಗಳನ್ನು ಸೃಷ್ಟಿಸಿದೆ, ಜತೆಗೆ ಆರ್ಥಿಕ, ರಾಷ್ಟ್ರೀಯ ಭದ್ರತೆ ಮತ್ತು ಮಾನವತೆಗೂ ಸಹ ಸಂಬಂಧಿಸಿದ್ದಾಗಿದೆ. ಯುದ್ಧದಲ್ಲಿರುವ ದೇಶಗಳು ಮತ್ತು ಅದರಿಂದ ಪ್ರಭಾವಿತರಾದವರೊಂದಿಗೆ ಭಾರತವು ವ್ಯಾಪಕವಾದ ವ್ಯಾಪಾರ ಸಂಬಂಧ ಹೊಂದಿದೆ. ಯುದ್ಧ ನಡೆಯುತ್ತಿರುವ ಪ್ರದೇಶವು ಪ್ರಪಂಚದ ಇತರ ಭಾಗಗಳೊಂದಿಗೆ ನಮ್ಮ ವ್ಯಾಪಾರಕ್ಕೆ ನಿರ್ಣಾಯಕ ಮಾರ್ಗವಾಗಿದೆ. ಮುಖ್ಯವಾಗಿ, ನಮ್ಮ ಕಚ್ಚಾ ತೈಲ ಮತ್ತು ಅನಿಲ ಅಗತ್ಯಗಳಲ್ಲಿ ಗಮನಾರ್ಹ ಭಾಗವನ್ನು ಈ ಪ್ರದೇಶವೇ ಪೂರೈಸುತ್ತದೆ. ಇನ್ನೊಂದು ಕಾರಣಕ್ಕಾಗಿಯೂ ಸಹ ಈ ಪ್ರದೇಶವು ನಮಗೆ ಮುಖ್ಯವಾಗಿದೆ - ಸುಮಾರು 10 ದಶಲಕ್ಷ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾ, ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಈ ನೀರಿನಲ್ಲಿ ನೌಕಾಯಾನ ಮಾಡುವ ವಾಣಿಜ್ಯ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ, ಭಾರತದ ಕಳವಳಗಳು ಸ್ವಾಭಾವಿಕವಾಗಿ ಹೆಚ್ಚಿವೆ. ಆದ್ದರಿಂದ, ಭಾರತದ ಸಂಸತ್ತಿನಿಂದ ಈ ಬಿಕ್ಕಟ್ಟಿನ ಬಗ್ಗೆ ಜಗತ್ತಿಗೆ ಒಗ್ಗಟ್ಟಿನ ಮತ್ತು ಸರ್ವಾನುಮತದ ಧ್ವನಿ ಹೊರಡುವುದು ಅತ್ಯಗತ್ಯವಾಗಿದೆ.

ಗೌರವಾನ್ವಿತ ಸ್ಪೀಕರ್,

ಯುದ್ಧ ಆರಂಭವಾದಾಗಿನಿಂದ, ಪೀಡಿತ ದೇಶಗಳಲ್ಲಿರುವ ಪ್ರತಿಯೊಬ್ಬ ಭಾರತೀಯರಿಗೂ ಅಗತ್ಯ ನೆರವು ನೀಡಲಾಗಿದೆ. ನಾನೇ ಸ್ವತಃ 2 ಬಾರಿ ಹೆಚ್ಚಿನ ಪಶ್ಚಿಮ ಏಷ್ಯಾದ ದೇಶಗಳ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರೆಲ್ಲರೂ ಭಾರತೀಯರಿಗೆ ಸಂಪೂರ್ಣ ಸುರಕ್ಷತೆಯ ಭರವಸೆ ನೀಡಿದ್ದಾರೆ. ದುರದೃಷ್ಟವಶಾತ್, ಈ ಅವಧಿಯಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ, ಕೆಲವರು ಗಾಯಗೊಂಡಿದ್ದಾರೆ. ಅಂತಹ ಕಠಿಣ ಸಂದರ್ಭಗಳಲ್ಲಿ ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಬೆಂಬಲ ನೀಡಲಾಗುತ್ತಿದೆ,  ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಗೌರವಾನ್ವಿತ ಸ್ಪೀಕರ್,

ಯುದ್ಧಪೀಡಿತ ದೇಶಗಳಲ್ಲಿರುವ ನಮ್ಮ ಎಲ್ಲಾ ಮಿಷನ್‌ಗಳು ನಿರಂತರವಾಗಿ ಭಾರತೀಯರಿಗೆ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿವೆ. ಅವರು ಕಾರ್ಮಿಕರಾಗಿರಲಿ ಅಥವಾ ಪ್ರವಾಸಿಗರಾಗಿರಲಿ, ಎಲ್ಲರಿಗೂ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲಾಗುತ್ತಿದೆ. ನಮ್ಮ ಮಿಷನ್‌ಗಳು ನಿಯಮಿತ ಸಲಹೆಗಳನ್ನು ನೀಡುತ್ತಿವೆ. ಇಲ್ಲಿ ಭಾರತದಲ್ಲಿ ಮತ್ತು ಇತರೆ ಯುದ್ಧಪೀಡಿತ ದೇಶಗಳಲ್ಲಿ 24/7 ಅವಧಿಯ ನಿಯಂತ್ರಣ ಕೊಠಡಿಗಳು ಮತ್ತು ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಇವುಗಳ ಮೂಲಕ, ಎಲ್ಲ ಸಂತ್ರಸ್ತರಿಗೂ ಸಕಾಲಿಕ ಮಾಹಿತಿ ಒದಗಿಸಲಾಗುತ್ತಿದೆ.

ಗೌರವಾನ್ವಿತ ಸ್ಪೀಕರ್,

ಬಿಕ್ಕಟ್ಟಿನ ಸಮಯದಲ್ಲಿ ದೇಶ ಮತ್ತು ವಿದೇಶಗಳಲ್ಲಿ ಭಾರತೀಯರ ಸುರಕ್ಷತೆಯೇ ನಮ್ಮ ಹೆಚ್ಚಿನ ಆದ್ಯತೆಯಾಗಿದೆ. ಯುದ್ಧ ಆರಂಭವಾದಾಗಿನಿಂದ, 3,75,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇರಾನ್‌ನಿಂದಲೇ ಸುಮಾರು 1,000 ಭಾರತೀಯರು ಸುರಕ್ಷಿತವಾಗಿ ಮರಳಿದ್ದಾರೆ, ಅದರಲ್ಲಿ 700ಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಯುವ ವಿದ್ಯಾರ್ಥಿಗಳು ಸೇರಿದ್ದಾರೆ. ಗಲ್ಫ್ ದೇಶಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾರತೀಯ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅಂತಹ ಎಲ್ಲಾ ಶಾಲೆಗಳಲ್ಲಿ ನಿಗದಿಯಾಗಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಸಿಬಿಎಸ್‌ಇ ರದ್ದುಗೊಳಿಸಿದೆ. ಈ ಮಕ್ಕಳಿಗೆ ನಿರಂತರ ಶಿಕ್ಷಣ ಖಚಿತಪಡಿಸಿಕೊಳ್ಳಲು, ಸಿಬಿಎಸ್‌ಇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರವು ಸೂಕ್ಷ್ಮ, ಜಾಗರೂಕ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸಿದ್ಧವಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಸನ್ಮಾನ್ಯ ಸ್ಪೀಕರ್‌ ,

ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ. ಯುದ್ಧ ಆರಂಭವಾದಾಗಿನಿಂದ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಹೆಚ್ಚು ಸವಾಲಿನ ಕೆಲಸವಾಗಿದೆ. ಇದರ ಹೊರತಾಗಿಯೂ, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆಯಲ್ಲಿ ತೀವ್ರ ಅಡಚಣೆಯಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಕೆಲಸ ಮಾಡಿದೆ. ಸಾಮಾನ್ಯ ಕುಟುಂಬಗಳಿಗೆ ತೊಂದರೆಗಳನ್ನು ಕಡಿಮೆ ಮಾಡುವುದು ನಮ್ಮ ಗಮನವಾಗಿದೆ. ಭಾರತವು ತನ್ನ ಎಲ್ಪಿಜಿ ಅವಶ್ಯಕತೆಗಳಲ್ಲಿ 60% ಆಮದು ಮಾಡಿಕೊಳ್ಳುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಪೂರೈಕೆಯಲ್ಲಿನ ಅನಿಶ್ಚಿತತೆಯಿಂದಾಗಿ, ಸರ್ಕಾರವು ಎಲ್ಪಿಜಿಯ ದೇಶೀಯ ಬಳಕೆಗೆ ಆದ್ಯತೆ ನೀಡಿದೆ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್‌ನ ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ.

ಸನ್ಮಾನ್ಯ ಸ್ಪೀಕರ್‌,

ಇಂದಿನ ಸಂದರ್ಭಗಳಲ್ಲಿ ಇಂಧನ ಸುರಕ್ಷತೆಗಾಗಿ ಕಳೆದ ದಶಕದಲ್ಲಿ ತೆಗೆದುಕೊಂಡ ಕ್ರಮಗಳು ಇನ್ನಷ್ಟು ಪ್ರಸ್ತುತವಾಗಿವೆ. ಕಳೆದ 11 ವರ್ಷಗಳಲ್ಲಿ ಭಾರತವು ತನ್ನ ಇಂಧನ ಆಮದುಗಳನ್ನು ವೈವಿಧ್ಯಗೊಳಿಸಿದೆ. ಇದಕ್ಕೂ ಮೊದಲು, ಕಚ್ಚಾ ತೈಲ, ಎಲ್ಎನ್ ಜಿ ಮತ್ತು ಎಲ್ಪಿಜಿಯನ್ನು 27 ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಂದು ಭಾರತವು 41 ದೇಶಗಳಿಂದ ಇಂದನವನ್ನು ಆಮದು ಮಾಡಿಕೊಳ್ಳುತ್ತಿದೆ.

ಸನ್ಮಾನ್ಯ ಸ್ಪೀಕರ್‌,

ಕಳೆದ ದಶಕದಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಕಚ್ಚಾ ತೈಲ ಸಂಗ್ರಹಕ್ಕೆ ಆದ್ಯತೆ ನೀಡಿದೆ. ಇಂದು ಭಾರತವು 5.3 ದಶಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಕಾರ್ಯತಂತ್ರ ಪೆಟ್ರೋಲಿಯಂ ನಿಕ್ಷೇಪವನ್ನು ಹೊಂದಿದೆ, ಅದನ್ನು 6.5 ದಶಲಕ್ಷ ಮೆಟ್ರಿಕ್ ಟನ್‌ಗಳಿಗೂ ವಿಸ್ತರಿಸುವ ಕೆಲಸ ನಡೆಯುತ್ತಿದೆ. ನಮ್ಮ ತೈಲ ಕಂಪನಿಗಳು ನಿರ್ವಹಿಸುವ ನಿಕ್ಷೇಪಗಳು ಪ್ರತ್ಯೇಕವಾಗಿವೆ. ಕಳೆದ 11 ವರ್ಷಗಳಲ್ಲಿ ನಮ್ಮ ಸಂಸ್ಕರಣಾ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಾಗಿದೆ.

ಸನ್ಮಾನ್ಯ ಸ್ಪೀಕರ್‌,

ಸರ್ಕಾರವು ವಿವಿಧ ದೇಶಗಳ ಪೂರೈಕೆದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಾಧ್ಯವಾದಲ್ಲೆಲ್ಲಾ ತೈಲ ಮತ್ತು ಅನಿಲ ಪೂರೈಕೆ ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭಾರತ ಸರ್ಕಾರವು ಕೊಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಹಡಗು ಮಾರ್ಗಗಳ ಮೇಲೆ ನಿಕಟ ನಿಗಾ ಇಡುತ್ತಿದೆ. ತೈಲ, ಅನಿಲ, ರಸಗೊಬ್ಬರಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸುವ ಹಡಗುಗಳು ಭಾರತವನ್ನು ಸುರಕ್ಷಿತವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ನಮ್ಮ ಕಡಲ ಕಾರಿಡಾರ್‌ಗಳನ್ನು ಸುರಕ್ಷಿತವಾಗಿಡಲು ನಾವು ನಮ್ಮ ಎಲ್ಲಾ ಜಾಗತಿಕ ಪಾಲುದಾರರೊಂದಿಗೆ ನಿರಂತರ ಸಂವಾದದಲ್ಲಿದ್ದೇವೆ. ಈ ಪ್ರಯತ್ನಗಳ ಪರಿಣಾಮವಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ನಮ್ಮ ಹಲವಾರು ಹಡಗುಗಳು ಇತ್ತೀಚೆಗೆ ಭಾರತವನ್ನು ಸುರಕ್ಷಿತವಾಗಿ ತಲುಪಿವೆ.

ಸನ್ಮಾನ್ಯ ಸ್ಪೀಕರ್‌,

ಬಿಕ್ಕಟ್ಟಿನ ಈ ಸಮಯದಲ್ಲಿ ದೇಶದ ಮತ್ತೊಂದು ಸಿದ್ಧತೆ ಬಹಳ ಉಪಯುಕ್ತವೆಂದು ಸಾಬೀತಾಗುತ್ತಿದೆ. ಕಳೆದ 10–11 ವರ್ಷಗಳಲ್ಲಿ ಎಥೆನಾಲ್ ಉತ್ಪಾದನೆ ಮತ್ತು ಮಿಶ್ರಣ ಕುರಿತು ಅಭೂತಪೂರ್ವ ಕೆಲಸ ಮಾಡಲಾಗಿದೆ. ಒಂದು ದಶಕದ ಹಿಂದೆ ಭಾರತವು ಕೇವಲ 1.5% ಎಥೆನಾಲ್ ಮಿಶ್ರಣ ಸಾಮರ್ಥ್ಯ ಹೊಂದಿತ್ತು. ಇಂದು ನಾವು ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣವನ್ನು ಸಾಧಿಸುವ ಹತ್ತಿರದಲ್ಲಿದ್ದೇವೆ. ಇದು ವಾರ್ಷಿಕವಾಗಿ ಸುಮಾರು 45 ದಶಲಕ್ಷ ಬ್ಯಾರೆಲ್‌ಗಳಷ್ಟು ತೈಲ ಆಮದು ಕಡಿಮೆ ಮಾಡಿದೆ. ಅದೇ ರೀತಿ, ರೈಲ್ವೆ ವಿದ್ಯುದೀಕರಣವು ಭಾರಿ ಪ್ರಯೋಜನಗಳನ್ನು ತಂದಿದೆ. ಅಂತಹ ವಿದ್ಯುದೀಕರಣವಿಲ್ಲದಿದ್ದರೆ, ಪ್ರತಿ ವರ್ಷ ಸುಮಾರು 1.8 ಶತಕೋಟಿ ಲೀಟರ್ ಹೆಚ್ಚುವರಿ ಡೀಸೆಲ್ ಅಗತ್ಯವಿತ್ತು. ನಾವು ಮೆಟ್ರೋ ಜಾಲವನ್ನು ಸಹ ವಿಸ್ತರಿಸಿದ್ದೇವೆ. 2014ರಲ್ಲಿ ಭಾರತದ ಮೆಟ್ರೋ ಜಾಲವು 250 ಕಿಲೋಮೀಟರ್‌ಗಳಿಗಿಂತ ಕಡಿಮೆಯಿತ್ತು. ಇಂದು ಅದು ಸುಮಾರು 1,100 ಕಿಲೋಮೀಟರ್‌ಗಳಿಗೆ ಬೆಳೆದಿದೆ. ನಾವು ವಿದ್ಯುತ್ ಚಲನಶೀಲತೆಯನ್ನು ಬಲವಾಗಿ ಉತ್ತೇಜಿಸಿದ್ದೇವೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ 15,000 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಿದೆ. ಇಂದು ಪರ್ಯಾಯ ಇಂಧನಗಳ ಮೇಲೆ ಕೆಲಸ ನಡೆಯುತ್ತಿರುವ ಪ್ರಮಾಣದಲ್ಲಿ, ಭಾರತದ ಭವಿಷ್ಯವು ಇನ್ನಷ್ಟು ಸುರಕ್ಷಿತವಾಗಿರುತ್ತದೆ.

ಸನ್ಮಾನ್ಯ ಸ್ಪೀಕರ್‌,

ಇಂಧನ ಆರ್ಥಿಕತೆಯ ಬೆನ್ನೆಲುಬು ಮತ್ತು ಪಶ್ಚಿಮ ಏಷ್ಯಾವು ಜಾಗತಿಕ ಇಂಧನ ಅಗತ್ಯಗಳನ್ನು ಪೂರೈಸುವ ಪ್ರಮುಖ ಮೂಲವಾಗಿದೆ ಎಂಬುದು ನಮಗೆ ತಿಳಿದಿದೆ. ಸ್ವಾಭಾವಿಕವಾಗಿ ಪ್ರಸ್ತುತ ಬಿಕ್ಕಟ್ಟಿನಿಂದ ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ, ಭಾರತವು ಕನಿಷ್ಠ ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಪರಿಣಾಮಗಳಿಗೆ ಸರ್ಕಾರ ಸ್ಪಷ್ಟವಾದ ಕಾರ್ಯತಂತ್ರದೊಂದಿಗೆ ಕೆಲಸ ಮಾಡುತ್ತಿದೆ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ, ಇದು ದೇಶಕ್ಕೆ ಹೆಚ್ಚಿನ ಸಹಾಯ ಮಾಡಿದೆ. ನಾವು ಪ್ರತಿಯೊಂದು ವಲಯದ ಪಾಲುದಾರರೊಂದಿಗೆ ಚರ್ಚೆಗಳನ್ನು ನಡೆಸುತ್ತಿದ್ದೇವೆ,  ಅಗತ್ಯವಿರುವಲ್ಲೆಲ್ಲಾ ಬೆಂಬಲ ಒದಗಿಸಲಾಗುತ್ತಿದೆ. ಭಾರತ ಸರ್ಕಾರವು ಅಂತರ-ಸಚಿವಾಲಯ ಗುಂಪನ್ನು ಸಹ ಸ್ಥಾಪಿಸಿದೆ, ಇದು ಆಮದು ಮತ್ತು ರಫ್ತುಗಳಲ್ಲಿನ ತೊಂದರೆಗಳನ್ನು ನಿರ್ಣಯಿಸಲು ಮತ್ತು ಅಗತ್ಯ ಪರಿಹಾರಗಳ ಕುರಿತು ನಿರಂತರವಾಗಿ ಕೆಲಸ ಮಾಡಲು ಪ್ರತಿದಿನ ಸಭೆ ಸೇರುತ್ತದೆ. ಸರ್ಕಾರ ಮತ್ತು ಉದ್ಯಮದ ಸಂಯೋಜಿತ ಪ್ರಯತ್ನಗಳ ಮೂಲಕ, ನಾವು ಈ ಸಂದರ್ಭಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ.

ಸನ್ಮಾನ್ಯ ಸ್ಪೀಕರ್‌,

ಯುದ್ಧವು ಕೃಷಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ. ನಮ್ಮ ರೈತರು ನಮ್ಮ ಆಹಾರ ಧಾನ್ಯಗಳನ್ನು ತುಂಬಿಸಿದ್ದಾರೆ, ಆದ್ದರಿಂದ ಭಾರತವು ಸಾಕಷ್ಟು ಆಹಾರ ದಾಸ್ತಾನುಗಳನ್ನು ಹೊಂದಿದೆ. ಮುಂಗಾರು ಋತುವಿಗೆ ಸರಿಯಾದ ಬಿತ್ತನೆ ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರವು ರಸಗೊಬ್ಬರಗಳಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದೆ. ಹಿಂದೆಯೂ ಸಹ ಜಾಗತಿಕ ಬಿಕ್ಕಟ್ಟುಗಳು ರೈತರಿಗೆ ಹೊರೆಯಾಗದಂತೆ ನಮ್ಮ ಸರ್ಕಾರ ಖಚಿತಪಡಿಸಿಕೊಂಡಿದೆ. ಕೋವಿಡ್ ಅವಧಿಯಲ್ಲಿ ಮತ್ತು ಆ ಸಮಯದಲ್ಲಿ ಯುದ್ಧಗಳ ಸಮಯದಲ್ಲಿ, ಜಾಗತಿಕ ಪೂರೈಕೆ ಸರಪಳಿಗಳು ಅಡ್ಡಿಪಡಿಸಲ್ಪಟ್ಟವು. ವಿಶ್ವ ಮಾರುಕಟ್ಟೆಗಳಲ್ಲಿ ಒಂದು ಚೀಲ ಯೂರಿಯಾದ ಬೆಲೆ 3000 ರೂ. ತಲುಪಿತ್ತು, ಆದರೆ ಭಾರತೀಯ ರೈತರಿಗೆ ಅದೇ ಚೀಲವನ್ನು 300 ರೂ.ಗಿಂತ ಕಡಿಮೆ ಬೆಲೆಗೆ ನೀಡಲಾಯಿತು.

ಸನ್ಮಾನ್ಯ ಸ್ಪೀಕರ್‌,

ಇಂತಹ ಬಿಕ್ಕಟ್ಟುಗಳಿಂದ ರೈತರನ್ನು ರಕ್ಷಿಸಲು ಇತ್ತೀಚಿನ ವರ್ಷಗಳಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ದಶಕದಲ್ಲಿ ದೇಶದಲ್ಲಿ 6 ಯೂರಿಯಾ ಸ್ಥಾವರಗಳನ್ನು ಪ್ರಾರಂಭಿಸಲಾಗಿದ್ದು, ವಾರ್ಷಿಕ 7.6 ದಶಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಲಾಗಿದೆ. ಈ ಅವಧಿಯಲ್ಲಿ, ಡಿಎಪಿ ಮತ್ತು ಎನ್ ಪಿಕೆಎಸ್ನಂತಹ ರಸಗೊಬ್ಬರಗಳ ದೇಶೀಯ ಉತ್ಪಾದನೆಯು ಸುಮಾರು 5 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ. ಇದು ಮಾತ್ರವಲ್ಲದೆ, ತೈಲ ಮತ್ತು ಅನಿಲದಂತೆಯೇ ರಸಗೊಬ್ಬರ ಆಮದುಗಳನ್ನು ಸಹ ವೈವಿಧ್ಯಗೊಳಿಸಲಾಗಿದೆ. ಡಿಎಪಿ ಮತ್ತು ಎನ್ ಪಿಕೆಎಸ್ ಆಮದುಗಳಿಗೂ ಸಹ ನಾವು ನಮ್ಮ ಆಯ್ಕೆಗಳನ್ನು ವಿಸ್ತರಿಸಿದ್ದೇವೆ.

ಸನ್ಮಾನ್ಯ ಸ್ಪೀಕರ್‌,

ಸರ್ಕಾರವು ರೈತರಿಗೆ ಮೇಡ್-ಇನ್-ಇಂಡಿಯಾ ನ್ಯಾನೊ ಯೂರಿಯಾದ ಆಯ್ಕೆ ನೀಡಿದೆ. ರೈತರಿಗೆ ನೈಸರ್ಗಿಕ ಕೃಷಿಯತ್ತ ಪ್ರೋತ್ಸಾಹ ನೀಡಲಾಗುತ್ತಿದೆ. ಪಿಎಂ-ಕುಸುಮ್ ಯೋಜನೆಯಡಿ, ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು 2.2 ದಶಲಕ್ಷಕ್ಕಿಂತಲೂ ಹೆಚ್ಚಿನ ಸೌರ ಪಂಪ್‌ಗಳನ್ನು ರೈತರಿಗೆ ಒದಗಿಸಲಾಗಿದೆ. ಈ ಸದನದ ಮೂಲಕ, ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ನಾನು ದೇಶದ ರೈತರಿಗೆ ಭರವಸೆ ನೀಡುತ್ತೇನೆ.

ಸನ್ಮಾನ್ಯ ಸ್ಪೀಕರ್‌,

ಯುದ್ಧದ ಮತ್ತೊಂದು ಪ್ರಮುಖ ಸವಾಲು ಎಂದರೆ, ಭಾರತದಲ್ಲಿ ಬೇಸಿಗೆ ಆರಂಭವಾಗುತ್ತಿದೆ. ಹೆಚ್ಚುತ್ತಿರುವ ತಾಪಮಾನದೊಂದಿಗೆ ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಪ್ರಸ್ತುತ ದೇಶದ ಎಲ್ಲಾ ವಿದ್ಯುತ್ ಸ್ಥಾವರಗಳು ಸಾಕಷ್ಟು ಕಲ್ಲಿದ್ದಲು ದಾಸ್ತಾನುಗಳನ್ನು ಹೊಂದಿವೆ. ಭಾರತವು ಸತತ 2ನೇ ವರ್ಷ 1 ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸುವ ದಾಖಲೆ ಸ್ಥಾಪಿಸಿದೆ. ವಿದ್ಯುತ್ ಉತ್ಪಾದನೆಯಿಂದ ವಿದ್ಯುತ್ ಪೂರೈಕೆಯವರೆಗೆ, ನಮ್ಮ ಎಲ್ಲಾ ವ್ಯವಸ್ಥೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ, ನವೀಕರಿಸಬಹುದಾದ ಇಂಧನವು ನಮ್ಮ ಸನ್ನದ್ಧತೆಯನ್ನು ಬೆಂಬಲಿಸಿದೆ. ಕಳೆದ ದಶಕದಲ್ಲಿ ಭಾರತವು ನವೀಕರಿಸಬಹುದಾದ ಇಂಧನದ ಕಡೆಗೆ ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಇಂದು ನಮ್ಮ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಅರ್ಧದಷ್ಟು ನವೀಕರಿಸಬಹುದಾದ ಮೂಲಗಳಿಂದ ಬಂದಿದೆ. ನಮ್ಮ ಒಟ್ಟು ನವೀಕರಿಸಬಹುದಾದ ಸಾಮರ್ಥ್ಯವು 250 ಗಿಗಾವ್ಯಾಟ್‌ಗಳ ಐತಿಹಾಸಿಕ ಗಡಿ ದಾಟಿದೆ. ಕಳೆದ 11 ವರ್ಷಗಳಲ್ಲಿ ಸೌರಶಕ್ತಿ ಸಾಮರ್ಥ್ಯವು ಸುಮಾರು 3 ಗಿಗಾವ್ಯಾಟ್‌ಗಳಿಂದ 140 ಗಿಗಾವ್ಯಾಟ್‌ಗಳಿಗೆ ಏರಿದೆ. ಇತ್ತೀಚಿನ ವರ್ಷಗಳಲ್ಲಿ ಸುಮಾರು 4 ದಶಲಕ್ಷ ಮೇಲ್ಛಾವಣಿ ಸೌರಶಕ್ತಿ ಸ್ಥಾಪನೆಗಳನ್ನು ಸ್ಥಾಪಿಸಲಾಗಿದ್ದು, ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಗಮನಾರ್ಹ ಸಹಾಯ ಒದಗಿಸುತ್ತಿದೆ. ಗೋಬರ್‌ಧನ್ ಯೋಜನೆಯಡಿ, ದೇಶದಲ್ಲಿ 200 ಸಂಕುಚಿತ ಜೈವಿಕ ಅನಿಲ ಸ್ಥಾವರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಪ್ರಯತ್ನಗಳು ಇಂದು ಬಹಳ ಉಪಯುಕ್ತವೆಂದು ಸಾಬೀತಾಗಿವೆ. ಅಮೃತ್ ಕಾಲ್ ಇಂಧನ ಪರಿವರ್ತನೆ ಉಪಕ್ರಮಗಳ ಮೂಲಕ ಸರ್ಕಾರವು ಪರಮಾಣು ಇಂಧನ ಉತ್ಪಾದನೆಯನ್ನು ಉತ್ತೇಜಿಸಿದೆ. ಕೆಲವೇ ದಿನಗಳ ಹಿಂದೆ, ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲಾಯಿತು, ಇದು ಮುಂದಿನ ಕೆಲವು ವರ್ಷಗಳಲ್ಲಿ 1,500 ಮೆಗಾವ್ಯಾಟ್‌ ಹೊಸ ಜಲವಿದ್ಯುತ್ ಸಾಮರ್ಥ್ಯವನ್ನು ಸೇರಿಸುತ್ತದೆ.

ಸನ್ಮಾನ್ಯ ಸ್ಪೀಕರ್‌,

ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಭಾರತದ ಪಾತ್ರ ಸ್ಪಷ್ಟವಾಗಿದೆ. ಆರಂಭದಿಂದಲೂ, ಈ ಸಂಘರ್ಷದ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಪಶ್ಚಿಮ ಏಷ್ಯಾದ ಎಲ್ಲಾ ಸಂಬಂಧಿತ ನಾಯಕರೊಂದಿಗೆ ನಾನು ಮಾತನಾಡಿದ್ದೇನೆ. ಉದ್ವಿಗ್ನತೆ ಕಡಿಮೆ ಮಾಡಿ ಸಂಘರ್ಷ ಕೊನೆಗೊಳಿಸುವಂತೆ ನಾನು ಅವರನ್ನು ಒತ್ತಾಯಿಸಿದ್ದೇನೆ. ನಾಗರಿಕರು, ಇಂಧನ ಮತ್ತು ಸಾರಿಗೆ ಸಂಬಂಧಿತ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಭಾರತ ವಿರೋಧಿಸಿದೆ. ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿನ ಅಡಚಣೆಗಳು ಸ್ವೀಕಾರಾರ್ಹವಲ್ಲ. ರಾಜತಾಂತ್ರಿಕತೆಯ ಮೂಲಕ ಈ ಯುದ್ಧದ ವಾತಾವರಣದಲ್ಲಿಯೂ ಸಹ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗ ಖಚಿತಪಡಿಸಿಕೊಳ್ಳಲು ಭಾರತ ನಿರಂತರವಾಗಿ ಕೆಲಸ ಮಾಡುತ್ತಿದೆ.

ಸನ್ಮಾನ್ಯ ಸ್ಪೀಕರ್‌,

ಭಾರತ ಯಾವಾಗಲೂ ಮಾನವತೆಯ ಪರವಾಗಿ ಮತ್ತು ಶಾಂತಿಯ ಪರವಾಗಿ ಧ್ವನಿ ಎತ್ತಿದೆ. ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ - ಮಾತುಕತೆ ಮತ್ತು ರಾಜತಾಂತ್ರಿಕತೆಯು ಈ ಸಮಸ್ಯೆಗೆ ಏಕೈಕ ಪರಿಹಾರವಾಗಿದೆ. ನಮ್ಮ ಎಲ್ಲಾ ಪ್ರಯತ್ನಗಳು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಮತ್ತು ಈ ಸಂಘರ್ಷವನ್ನು ಕೊನೆಗೊಳಿಸುವ ಗುರಿ ಹೊಂದಿವೆ. ಈ ಯುದ್ಧದಲ್ಲಿ ಮಾನವ ಜೀವಕ್ಕೆ ಯಾವುದೇ ಬೆದರಿಕೆ ಮಾನವತೆಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ, ಎಲ್ಲಾ ಪಕ್ಷಗಳನ್ನು ಆದಷ್ಟು ಬೇಗ ಶಾಂತಿಯುತ ಪರಿಹಾರದತ್ತ ಪ್ರೋತ್ಸಾಹಿಸುವುದು ಭಾರತದ ಪ್ರಯತ್ನವಾಗಿದೆ.

ಸನ್ಮಾನ್ಯ ಸ್ಪೀಕರ್‌,

ಅಂತಹ ಬಿಕ್ಕಟ್ಟುಗಳ ಸಮಯದಲ್ಲಿ ಕೆಲವು ಅಂಶಗಳು ಸಹ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದ್ದರಿಂದ, ಎಲ್ಲಾ ಕಾನೂನು ಜಾರಿ ಸಂಸ್ಥೆಗಳನ್ನು ಜಾಗರೂಕತೆಯಿಂದ ಇರಿಸಲಾಗಿದೆ. ಕರಾವಳಿ ಭದ್ರತೆ, ಗಡಿ ಭದ್ರತೆ, ಸೈಬರ್ ಭದ್ರತೆ ಮತ್ತು ಕಾರ್ಯತಂತ್ರದ ಸ್ಥಾಪನೆಗಳ ರಕ್ಷಣೆ ಎಲ್ಲವನ್ನೂ ಬಲಪಡಿಸಲಾಗುತ್ತಿದೆ.

ಸನ್ಮಾನ್ಯ ಸ್ಪೀಕರ್‌,

ಈ ಯುದ್ಧವು ದೀರ್ಘಕಾಲದವರೆಗೆ ಮುಂದುವರಿಯಬಹುದಾದ ಕಠಿಣ ಜಾಗತಿಕ ಪರಿಸ್ಥಿತಿಗಳನ್ನು ಸೃಷ್ಟಿಸಿದೆ. ಆದ್ದರಿಂದ ನಾವು ಸಿದ್ಧರಾಗಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ನಾವು ಒಗ್ಗಟ್ಟಿನಿಂದ ಇದೇ ರೀತಿಯ ಸವಾಲುಗಳನ್ನು ಎದುರಿಸಿದ್ದೇವೆ. ಈಗ ಮತ್ತೆ ನಾವು ಅದೇ ರೀತಿಯಲ್ಲಿ ಸಿದ್ಧರಾಗಿರಬೇಕು. ತಾಳ್ಮೆ, ಸಂಯಮ ಮತ್ತು ಶಾಂತತೆಯಿಂದ ನಾವು ಪ್ರತಿಯೊಂದು ಸವಾಲನ್ನು ಎದುರಿಸಬೇಕು - ಅದೇ ನಮ್ಮ ಗುರುತು, ಅದೇ ನಮ್ಮ ಶಕ್ತಿ. ಅದೇ ಸಮಯದಲ್ಲಿ, ನಾವು ಜಾಗರೂಕರಾಗಿರಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು. ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುವವರು ಸುಳ್ಳುಗಳನ್ನು ಹರಡಲು ಪ್ರಯತ್ನಿಸುತ್ತಾರೆ, ಆದರೆ ನಾವು ಅವರನ್ನು ಯಶಸ್ವಿಯಾಗಲು ಬಿಡಬಾರದು. ಈ ಸದನದ ಮೂಲಕ ನಾನು ಎಲ್ಲಾ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ, ಅಂತಹ ಸಮಯದಲ್ಲಿ, ಕಾಳಸಂತೆಕೋರರು ಮತ್ತು ಸಂಗ್ರಹಣೆದಾರರು ಸಕ್ರಿಯರಾಗುತ್ತಾರೆ, ಅದಕ್ಕಾಗಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯ, ಅಂತಹ ದೂರುಗಳು ಎಲ್ಲೆಲ್ಲಿ ಬಂದರೂ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಸರ್ಕಾರ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ಒಟ್ಟಾಗಿ ಕೆಲಸ ಮಾಡಿದಾಗ, ನಾವು ಯಾವುದೇ ಸವಾಲನ್ನು ಎದುರಿಸಬಹುದು. ಈ ಮನವಿಯೊಂದಿಗೆ, ನಾನು ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ.

ತುಂಬು ಧನ್ಯವಾದಗಳು.

 

*****

 

 

 


(ಪ್ರಕಟಣೆ ಐ.ಡಿ.: 2244784) ವಿಸಿಟರ್ ಕೌಂಟರ್ : 17