ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತಾದ ಇತ್ತೀಚಿನ ಮಾಹಿತಿ


ಸಹಜ ಸ್ಥಿತಿಯಲ್ಲಿ ಮನೆಬಳಕೆಯ ಎಲ್‌ ಪಿ ಜಿ ಸಿಲಿಂಡರ್‌ ಗಳ ವಿತರಣೆ; ಆತಂಕದ ಬುಕ್ಕಿಂಗ್‌ ಗಳಲ್ಲಿ ಇಳಿಕೆ

ಸರ್ಕಾರದಿಂದ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆ ಹೆಚ್ಚಳ, ಪ್ರಮುಖ ವಲಯಗಳಿಗೆ ಆದ್ಯತೆ ಮತ್ತು ಪಿ ಎನ್‌ ಜಿ ವಿಸ್ತರಣೆಗೆ ಉತ್ತೇಜನ

ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಆದ್ಯತೆ

ಮನೆಬಳಕೆ ಮತ್ತು ವಾಣಿಜ್ಯ ಗ್ರಾಹಕರಿಬ್ಬರಿಗೂ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ

ಎಲ್‌ ಪಿ ಜಿ ದಾಸ್ತಾನು ಮತ್ತು ಕಾಳಸಂತೆ ತಡೆಗಟ್ಟಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ಮುಂದುವರಿಕೆ

ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜ; ಯಾವುದೇ ದಟ್ಟಣೆ ಇಲ್ಲ

ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಮೇಲೆ ನಿರಂತರ ನಿಗಾ; ಭಾರತೀಯ ಸಮುದಾಯದ ಸುರಕ್ಷತೆಗೆ ಮೊದಲ ಆದ್ಯತೆ

ಪ್ರಕಟಣಾ ದಿನಾಂಕ: 22 MAR 2026 4:12PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ನಿರ್ಣಾಯಕ ವಲಯಗಳಲ್ಲಿ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದೆ. ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿನ ಭಾರತೀಯ ನಾಗರಿಕರಿಗೆ ನೆರವು ನೀಡುವ ಕ್ರಮಗಳ ಕುರಿತಾದ ಇತ್ತೀಚಿನ ಮಾಹಿತಿಯು ಈ ಕೆಳಗಿನಂತಿದೆ.

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ  ಜಿ ಯ ಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಸ್ಥಿತಿಗತಿ ಈ ಕೆಳಗಿನಂತಿದೆ:

ಕಚ್ಚಾ ತೈಲ/ಸಂಸ್ಕರಣಾಗಾರಗಳು

  • ಎಲ್ಲಾ ತೈಲ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪರ್ಯಾಪ್ತ ಕಚ್ಚಾ ತೈಲ ದಾಸ್ತಾನು ಲಭ್ಯವಿದೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳನ್ನು ಸಹ ಕಾಯ್ದುಕೊಂಡಿದೆ.
  • ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಲಾಗಿದೆ.

ಚಿಲ್ಲರೆ ಮಾರಾಟ ಕೇಂದ್ರಗಳು

  • ತೈಲ ಮಾರುಕಟ್ಟೆ ಕಂಪನಿಗಳ ಯಾವುದೇ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಇಂಧನ ಖಾಲಿಯಾದ ಪ್ರಕರಣಗಳು ವರದಿಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ಮತ್ತು ಪೂರೈಕೆಯನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿರುವುದರಿಂದ ಸಾರ್ವಜನಿಕರು ಆತಂಕದ ಖರೀದಿಗೆ ಮುಂದಾಗಬಾರದು ಎಂದು ಸರ್ಕಾರ ತನ್ನ ಸಲಹೆಯನ್ನು ಪುನರುಚ್ಚರಿಸಿದೆ.

ನೈಸರ್ಗಿಕ ಅನಿಲ

  • ಡಿ-ಪಿ ಎನ್‌ ಜಿ ಮತ್ತು ಸಿ ಎನ್‌ ಜಿ-ಸಾರಿಗೆಗೆ ಶೇ. 100 ರಷ್ಟು ಪೂರೈಕೆ ಸೇರಿದಂತೆ ಆದ್ಯತೆಯ ವಲಯಗಳ ಪೂರೈಕೆಯನ್ನು ರಕ್ಷಿಸಲಾಗಿದೆ. ಗ್ರಿಡ್‌ ಗೆ ಸಂಪರ್ಕ ಹೊಂದಿದ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅವರ ಸರಾಸರಿ ಬಳಕೆಯ ಶೇ. 80 ರಷ್ಟು ಪೂರೈಕೆ ಮಾಡಲಾಗುತ್ತಿದೆ.
  • ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಯ ಬಗ್ಗೆ ಇರುವ ಕಳವಳಗಳನ್ನು ಹೋಗಲಾಡಿಸಲು, ತಮ್ಮ ವ್ಯಾಪ್ತಿಯಲ್ಲಿರುವ ರೆಸ್ಟೋರೆಂ ಟ್‌ಗಳು, ಹೋಟೆಲ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡಲು ಭಾರತ ಸರ್ಕಾರವು  ನಗರ ಅನಿಲ ವಿತರಣಾ (ಸಿಜಿಡಿ) ಘಟಕಗಳಿಗೆ ಸಲಹೆ ನೀಡಿದೆ.
  • ಐಜಿಎಲ್.‌ ಎಂಜಿಎಲ್‌, ಗೇಲ್‌ ಗ್ಯಾಸ ಮತ್ತು ಬಿಪಿಸಿಎಲ್‌ ನಂತಹ ಸಿಜಿಡಿ ಕಂಪನಿಗಳು ಮನೆಬಳಕೆಯ ಮತ್ತು ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳನ್ನು ಪಡೆಯಲು ಪ್ರೋತ್ಸಾಹಕಗಳನ್ನು ನೀಡಿವೆ.
  • ಅರ್ಜಿ ಸಲ್ಲಿಕೆ ಮತ್ತು ಗ್ರಾಹಕರ ಮನೆಗಳಿಗೆ ಅನಿಲ ಪೂರೈಕೆ ಪ್ರಾರಂಭವಾಗುವ ನಡುವಿನ ಕಾಲಮಿತಿಯನ್ನು ಕಡಿಮೆ ಮಾಡಲು ಪಿ ಎನ್‌ ಜಿ ಆರ್‌ ಬಿ ಮೂಲಕ ಸಿಜಿಡಿ ಘಟಕಗಳಿಗೆ ಸೂಚಿಸಲಾಗಿದೆ.
  • ಭಾರತ ಸರ್ಕಾರವು 16.03.2026 ರ ಪತ್ರದ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸಿಜಿಡಿ ನೆಟ್‌ವರ್ಕ್ ವಿಸ್ತರಣೆಗೆ ಅಗತ್ಯವಾದ ಅನುಮೋದನೆಗಳನ್ನು ತ್ವರಿತಗೊಳಿಸಲು ವಿನಂತಿಸಿದೆ.
  • ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್‌ ಪಿ  ಜಿಯಿಂದ ಪಿ ಎನ್‌ ಜಿಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಿದರೆ ಹೆಚ್ಚುವರಿ 10% ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ನೀಡುವ ಭರವಸೆ ನೀಡಿದೆ.
  • ಇದರ ಜೊತೆಗೆ, ಭಾರತ ಸರ್ಕಾರವು 19.03.2026 ರ ಪತ್ರದ ಮೂಲಕ ಎಲ್ಲಾ ಸಂಬಂಧಿತ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ವಿನಂತಿಸಿದೆ:
    • ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಬಾಕಿ ಇರುವ ಮತ್ತು ಹೊಸ ಅನುಮತಿಗಳನ್ನು ತಕ್ಷಣವೇ ಫಾಸ್ಟ್ ಟ್ರ್ಯಾಕ್ ಮಾಡಲು ಮತ್ತು ವಿಲೇವಾರಿ ಮಾಡಲು ಸಂಬಂಧಪಟ್ಟ ಇಲಾಖೆ/ಸಂಸ್ಥೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು.
    • ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳು/ವಸಾಹತುಗಳು/ಕಚೇರಿಗಳು/ಕ್ಯಾಂಟೀನ್‌ ಗಳು ಲಭ್ಯವಿರುವ ಕಡೆಗಳಲ್ಲಿ ಪಿ ಎನ್‌ ಜಿ ಗೆ ಬದಲಾಗಲು ಸಲಹೆ ನೀಡಬೇಕು.
  • ಭಾರತ ಸರ್ಕಾರವು 20.03.2026 ರ ಪತ್ರದ ಮೂಲಕ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳ ಅಡಿಯಲ್ಲಿರುವ ಸಂಸ್ಥೆಗಳಲ್ಲಿ ಪಿ ಎನ್‌ ಜಿ ಸಂಪರ್ಕಗಳ ಸಂಭಾವ್ಯ ಬೇಡಿಕೆಯ ಸಮಗ್ರ ಮೌಲ್ಯಮಾಪನವನ್ನು ಕೈಗೊಳ್ಳಲು ಮತ್ತು ಈ ಪ್ರಕ್ರಿಯೆಯನ್ನು ಸಂಯೋಜಿಸಲು ಪ್ರತಿ ಸಚಿವಾಲಯ/ಇಲಾಖೆಯಿಂದ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲು ಎಲ್ಲಾ ಕೇಂದ್ರ ಸಚಿವಾಲಯಗಳನ್ನು ವಿನಂತಿಸಿದೆ.
  • ಭಾರತ ಸರ್ಕಾರದ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿ ಇ ಎಸ್‌ ಒ) ತನ್ನ ಎಲ್ಲಾ ಕಚೇರಿಗಳಿಗೆ ಸಿಜಿಡಿ ಅರ್ಜಿಗಳನ್ನು ಆದ್ಯತೆಯ ಮೇರೆಗೆ, ಅಂದರೆ ಸ್ವೀಕರಿಸಿದ 10 ದಿನಗಳೊಳಗೆ ವಿಲೇವಾರಿ ಮಾಡಲು ಸೂಚಿಸಿದೆ.
  • ಪ್ರಮುಖ ನಗರಗಳು ಮತ್ತು ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್‌ ಪಿ ಜಿ ಗ್ರಾಹಕರು ಪಿ ಎನ್‌ ಜಿ ಗೆ ಬದಲಾಗಲು ವಿನಂತಿಸಲಾಗಿದೆ.

ಎಲ್‌ ಪಿ  ಜಿ

  • ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್‌ ಪಿ  ಜಿ ಪೂರೈಕೆಯು ಇನ್ನೂ ಕಳವಳಕಾರಿಯಾಗಿದೆ.

ಮನೆಬಳಕೆಯ ಎಲ್‌ ಪಿ  ಜಿ ಪೂರೈಕೆ:

  • ಎಲ್‌ ಪಿ  ಜಿ ವಿತರಕರಲ್ಲಿ ಯಾವುದೇ ದಾಸ್ತಾನು ಖಾಲಿಯಾದ ವರದಿಯಾಗಿಲ್ಲ.
  • ಹೆಚ್ಚಿನ ವಿತರಣೆಗಳು 'ಡೆಲಿವರಿ ಅಥೆಂಟಿಕೇಶನ್ ಕೋಡ್' (ಡಿಎಸಿ) ಮೂಲಕ ನಡೆಯುತ್ತಿವೆ.
  • ಆತಂಕದ ಬುಕ್ಕಿಂಗ್‌ ಗಳು ಕಡಿಮೆಯಾಗಿವೆ.
  • ಮನೆಬಳಕೆಯ ಎಲ್‌ ಪಿ  ಜಿ ಸಿಲಿಂಡರ್‌ ಗಳ ವಿತರಣೆ ಸಹಜವಾಗಿದೆ.

ವಾಣಿಜ್ಯ ಎಲ್‌ ಪಿ  ಜಿ ಪೂರೈಕೆ:

  • ಸರ್ಕಾರವು ಈಗಾಗಲೇ ಗ್ರಾಹಕರಿಗೆ ಭಾಗಶಃ ವಾಣಿಜ್ಯ ಎಲ್‌ ಪಿ  ಜಿ ಪೂರೈಕೆಯನ್ನು (20%) ಪುನಃಸ್ಥಾಪಿಸಿದೆ. ಇದಲ್ಲದೆ, ಪಿ ಎನ್‌ ಜಿ ವಿಸ್ತರಣೆಗಾಗಿ ಸುಲಭ ವ್ಯಾಪಾರ ಸುಧಾರಣೆಗಳ ಆಧಾರದ ಮೇಲೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಶೇ. 10 ರಷ್ಟು ವಾಣಿಜ್ಯ ಎಲ್‌ ಪಿ  ಜಿಯನ್ನು ಹಂಚಿಕೆ ಮಾಡಲು ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಪ್ರಸ್ತಾಪಿಸಿದೆ.
  • ಭಾರತ ಸರ್ಕಾರವು 21.03.2026 ರ ಪತ್ರದ ಮೂಲಕ ರಾಜ್ಯಗಳಿಗೆ ಇನ್ನೂ ಶೇ. 20 ರಷ್ಟು ವಾಣಿಜ್ಯ ಎಲ್‌ ಪಿ  ಜಿ ಹಂಚಿಕೆಯನ್ನು ಅನುಮತಿಸಿದೆ, ಇದು ಒಟ್ಟು ಹಂಚಿಕೆಯನ್ನು ಶೇ. 50 ಗೆ (ಪಿ ಎನ್‌ ಜಿ ವಿಸ್ತರಣೆಯ ಸುಧಾರಣೆಗಳ ಆಧಾರದ ಮೇಲೆ ನೀಡಲಾದ ಶೇ. 10 ಹಂಚಿಕೆ ಸೇರಿದಂತೆ) ಹೆಚ್ಚಿಸಲಿದೆ. ಈ ಹೆಚ್ಚುವರಿ ಶೇ. 20 ರಷ್ಟು ಹಂಚಿಕೆಯನ್ನು ರೆಸ್ಟೋರೆಂಟ್‌ ಗಳು, ಧಾಬಾಗಳು, ಹೋಟೆಲ್‌ ಗಳು, ಕೈಗಾರಿಕಾ ಕ್ಯಾಂಟೀನ್‌ ಗಳು, ಆಹಾರ ಸಂಸ್ಕರಣೆ/ಡೈರಿ, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ಕ್ಯಾಂಟೀನ್‌ ಗಳು, ಸಮುದಾಯ ಅಡುಗೆ ಮನೆಗಳು, ವಲಸೆ ಕಾರ್ಮಿಕರು (5 ಕೆಜಿ ಎಫ್‌ ಟಿ ಎಲ್) ಮೊದಲಾದ ವಲಯಗಳಿಗೆ ಆದ್ಯತೆಯ ಮೇಲೆ ನೀಡಲಾಗುತ್ತದೆ.
  • 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಭಾರತ ಸರ್ಕಾರ ನೀಡಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಾಣಿಜ್ಯೇತರ ಎಲ್‌ ಪಿ ಜಿ ಯನ್ನು ಹಂಚಿಕೆ ಮಾಡಲು ಆದೇಶ ಹೊರಡಿಸಿವೆ. ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪಿಎಸ್‌ಯು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಬಿಡುಗಡೆ ಮಾಡುತ್ತಿವೆ. ಕಳೆದ 8 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಾಣಿಜ್ಯ ಘಟಕಗಳಿಂದ ಒಟ್ಟು ಸುಮಾರು 15,440 ಮೆಟ್ರಿಕ್ ಟನ್ ಎಲ್‌ ಪಿ ಜಿ ಯನ್ನು ಪಡೆಯಲಾಗಿದೆ.
  • ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗಿದ್ದು, ಒಟ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯ ಸುಮಾರು 50% ಈ ವಲಯಗಳಿಗೆ ಹೋಗುತ್ತಿದೆ.

ಸೀಮೆಎಣ್ಣೆ

  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
  • ಸೀಮೆಎಣ್ಣೆ ವಿತರಣೆಗಾಗಿ ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಲಾಗಿದೆ.
  • 15 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಅಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮ್ಮಲ್ಲಿ ಸೀಮೆಎಣ್ಣೆಯ ಅವಶ್ಯಕತೆಯಿಲ್ಲ ಎಂದು ತಿಳಿಸಿವೆ. ಇಂದಿನವರೆಗೆ 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇನ್ನೂ ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿಲ್ಲ.

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಪಾತ್ರ

  • ಅತ್ಯಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ 2000 ರ ಅಡಿಯಲ್ಲಿ, ಯಾವುದೇ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅತ್ಯಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಿದೆ.
  • ಭಾರತ ಸರ್ಕಾರವು 13.03.2026 ಮತ್ತು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ವಿನಂತಿಸಿದೆ:
    • ದಾಸ್ತಾನು, ಕಾಳಸಂತೆ, ಮನೆಬಳಕೆಯ ಎಲ್‌ ಪಿ ಜಿ ದುರ್ಬಳಕೆ ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವಹಿಸಬೇಕು.
    • ಅತ್ಯಗತ್ಯ ವಸ್ತುಗಳ ಕಾಯ್ದೆ 1955, ಪೆಟ್ರೋಲಿಯಂ ಕಾಯ್ದೆ 1934, ಪೆಟ್ರೋಲಿಯಂ ನಿಯಮಗಳು 2002, ಮೋಟಾರ್ ಸ್ಪಿರಿಟ್ ಮತ್ತು ಎಚ್‌ ಎಸ್‌ ಡಿ ಆದೇಶ 2005 ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
    • ಸ್ಥಳೀಯ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಎಲ್‌ ಪಿ ಜಿಗಾಗಿ ಸೂಕ್ತ ವಿತರಣಾ ವಿಧಾನಗಳನ್ನು ರೂಪಿಸಬೇಕು.
    • ಆತಂಕದ ಖರೀದಿಯನ್ನು ತಡೆಗಟ್ಟಲು ಸಾರ್ವಜನಿಕ ಸಲಹೆಗಳನ್ನು ನೀಡಲು, ಎಲ್‌ ಪಿ ಜಿ ಯ ವಿವೇಕಯುತ ಬಳಕೆಯನ್ನು ಉತ್ತೇಜಿಸಲು ಮತ್ತು ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡಬೇಕು.
  • 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ. ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿದಿನ ಪತ್ರಿಕಾ ಗೋಷ್ಠಿಗಳನ್ನೂ ನಡೆಸುತ್ತಿವೆ.
  • 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸಿವೆ.
  • ನಿಯಂತ್ರಣ ಕೊಠಡಿ ಮತ್ತು ಜಿಲ್ಲಾ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತುರ್ತಾಗಿ ಇದನ್ನು ಮಾಡಲು ವಿನಂತಿಸಲಾಗಿದೆ.

ಜಾರಿ ಕ್ರಮಗಳು

  • ಎಲ್‌ ಪಿ ಜಿ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ಪರಿಶೀಲಿಸಲು ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿಗಳು ಮುಂದುವರಿದಿವೆ. ನಿನ್ನೆ ಬಿಹಾರ, ಹರಿಯಾಣ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮುಂತಾದೆಡೆ ಸುಮಾರು 3,500 ದಾಳಿಗಳನ್ನು ನಡೆಸಲಾಗಿದ್ದು, 1200ಕ್ಕೂ ಹೆಚ್ಚು ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಕಾಳಸಂತೆ ಮತ್ತು ದಾಸ್ತಾನುಗಳನ್ನು ತಡೆಯಲು ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಿಯಮಿತವಾಗಿ ದಾಳಿ ನಡೆಸುವಂತೆ ವಿನಂತಿಸಲಾಗಿದೆ.
  • ಪೂರೈಕೆ ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ದಾಸ್ತಾನು/ಕಪ್ಪು ಮಾರುಕಟ್ಟೆ ಪ್ರಕರಣಗಳನ್ನು ಪರಿಶೀಲಿಸಲು ಪಿ ಎಸ್‌ ಯು ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳು ದೇಶಾದ್ಯಂತ 1,800 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಕೇಂದ್ರಗಳು ಮತ್ತು ಎಲ್‌ ಪಿ ಜಿ ವಿತರಕರಲ್ಲಿ ಅನಿರೀಕ್ಷಿತ ತಪಾಸಣೆಗಳನ್ನು ನಡೆಸಿದ್ದಾರೆ.

ಸರ್ಕಾರದ ಇತರ ಕ್ರಮಗಳು

  • ಯುದ್ಧದ ಪರಿಸ್ಥಿತಿಯ ನಡುವೆಯೂ, ಸರ್ಕಾರವು ಮನೆಬಳಕೆಯ ಎಲ್‌ ಪಿ ಜಿ ಮತ್ತು ಪಿ ಎನ್‌ ಜಿ ಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ, ಜೊತೆಗೆ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.
  • ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ, ಇದರಲ್ಲಿ ಸಂಸ್ಕರಣಾಗಾರ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕ್ಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದೆ.
  • ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ. ಸೀಮೆಎಣ್ಣೆ ಮತ್ತು ಕಲ್ಲಿದ್ದಲನ್ನು ಪರ್ಯಾಯ ಇಂಧನವಾಗಿ ಬಳಸಲು ಅನುಮತಿ ನೀಡುವಂತೆ ಪರಿಸರ ಸಚಿವಾಲಯ ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಲಹೆ ನೀಡಿದೆ.
  • ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲನ್ನು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ ಗೆ ಆದೇಶ ಹೊರಡಿಸಿದೆ.
  • ಮನೆಬಳಕೆ ಮತ್ತು ವಾಣಿಜ್ಯ ಗ್ರಾಹಕರಿಬ್ಬರಿಗೂ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಸಾರ್ವಜನಿಕ ಸಲಹೆ

  • ಎಲ್ಲಾ ಮನೆಗಳಿಗೆ ಎಲ್‌ ಪಿ ಜಿ ಸಿಲಿಂಡರ್‌ ಗಳ ಲಭ್ಯತೆ ಮತ್ತು ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ; ನಾಗರಿಕರು ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಲು ಮತ್ತು ವದಂತಿಗಳನ್ನು ತಪ್ಪಿಸಲು ಸೂಚಿಸಲಾಗಿದೆ.
  • ಗ್ರಾಹಕರು ಆತಂಕದ ಬುಕ್ಕಿಂಗ್‌ ಗಳನ್ನು ತಪ್ಪಿಸಲು, ಬುಕ್ಕಿಂಗ್‌ ಗಾಗಿ ಡಿಜಿಟಲ್ ವಿಧಾನಗಳನ್ನು ಬಳಸಲು ಮತ್ತು ಎಲ್‌ ಪಿ ಜಿ ವಿತರಕರಿಗೆ ಭೇಟಿ ನೀಡದಂತೆ ವಿನಂತಿಸಲಾಗಿದೆ, ಏಕೆಂದರೆ ವಿರಳವಾದ ಸರತಿ ಸಾಲುಗಳ ಹೊರತಾಗಿಯೂ ಮನೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
  • ನಾಗರಿಕರು ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್/ಇಂಡಕ್ಷನ್ ಕುಕ್‌ಟಾಪ್‌ ಗಳಂತಹ ಪರ್ಯಾಯ ಅಡುಗೆ ಆಯ್ಕೆಗಳನ್ನು ಬಳಸಲು ಮತ್ತು ದೈನಂದಿನ ಬಳಕೆಯಲ್ಲಿ ಇಂಧನ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಚಿವಾಲಯದ ಪ್ರಕಾರ:

  • ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಹಡಗುಗಳ ಚಲನೆ, ಬಂದರು ಕಾರ್ಯಾಚರಣೆಗಳು ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಜೊತೆಗೆ ಕಡಲ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ.
  • ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ; ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆಗಳು ವರದಿಯಾಗಿಲ್ಲ.
  • 611 ಭಾರತೀಯ ನಾವಿಕರನ್ನು ಹೊಂದಿರುವ ಭಾರತೀಯ ಧ್ವಜದ 22 ಹಡಗುಗಳು ಪಶ್ಚಿಮ ಪರ್ಷಿಯನ್ ಗಲ್ಫ್‌ ನಲ್ಲಿವೆ; ಹಡಗು ಮಾಲೀಕರು, ಆರ್‌ ಪಿ ಎಸ್‌ ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ ಗಳ ಸಮನ್ವಯದೊಂದಿಗೆ ಹಡಗು ನಿರ್ದೇಶನಾಲಯವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
  • ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿಯು 24x7 ಕಾರ್ಯನಿರ್ವಹಿಸುತ್ತಿದೆ, ಇದುವರೆಗೆ 3,730 ಕರೆಗಳು ಮತ್ತು 7,058 ಇಮೇಲ್‌ಗಳನ್ನು ನಿರ್ವಹಿಸಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ 60 ಕರೆಗಳು ಮತ್ತು 129 ಇಮೇಲ್‌ ಗಳು ಸೇರಿವೆ.
  • ಕಳೆದ 24 ಗಂಟೆಗಳಲ್ಲಿ 13 ಮಂದಿ ಸೇರಿದಂತೆ 547ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ.
  • ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು ಯಾವುದೇ ದಟ್ಟಣೆ ಇಲ್ಲ; ರಾಜ್ಯ ಕಡಲ ಮಂಡಳಿಗಳು ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿವೆ.
  • ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಮಿಷನ್‌ ಗಳು ಮತ್ತು ಕಡಲ ಪಾಲುದಾರರೊಂದಿಗೆ ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ನಿಕಟ ಸಮನ್ವಯವನ್ನು ಮುಂದುವರಿಸಿದೆ.

ಪ್ರದೇಶದಲ್ಲಿನ ಭಾರತೀಯ ನಾಗರಿಕರ ಸುರಕ್ಷತೆ

ಭಾರತೀಯ ಮಿಷನ್‌ ಗಳು ಸಮುದಾಯದೊಂದಿಗೆ ಸಂಪರ್ಕದಲ್ಲಿವೆ, ಸಹಾಯವನ್ನು ನೀಡುತ್ತಿವೆ ಮತ್ತು ಸಲಹೆಗಳನ್ನು ನೀಡುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ಸಚಿವಾಲಯದ ಮಾಹಿತಿಯಂತೆ:

  • ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ; ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಮನ್ವಯದೊಂದಿಗೆ ಮೀಸಲಾದ 24x7 ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ.
  • ಈ ಪ್ರದೇಶದಾದ್ಯಂತ ಇರುವ ಮಿಷನ್‌ ಗಳು ಮತ್ತು ಕಚೇರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ, ಸಹಾಯವಾಣಿಗಳನ್ನು ನಡೆಸುತ್ತಿವೆ, ಭಾರತೀಯ ಸಮುದಾಯ ಸಂಘಟನೆಗಳೊಂದಿಗೆ ಸಂಪರ್ಕವನ್ನು ಹೊಂದಿವೆ, ಸಲಹೆಗಳನ್ನು ನೀಡುತ್ತಿವೆ, ಸ್ಥಳೀಯ ಸರ್ಕಾರಗಳೊಂದಿಗೆ ತೊಡಗಿಸಿಕೊಂಡಿವೆ ಮತ್ತು ನಾವಿಕರು, ವಿದ್ಯಾರ್ಥಿಗಳು, ಸಿಲುಕಿಕೊಂಡಿರುವ ನಾಗರಿಕರು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ಸಹಾಯ ಮಾಡುತ್ತಿವೆ.
  • ಫೆಬ್ರವರಿ 28 ರಿಂದ, 3,50,000 ಕ್ಕೂ ಹೆಚ್ಚು ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ.
  • ಯುಎಇಯಿಂದ ಇಂದು ಸುಮಾರು 90 ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ; ಸೌದಿ ಅರೇಬಿಯಾ ಮತ್ತು ಓಮನ್‌ನಿಂದ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ; ವಾಯುಪ್ರದೇಶದ ಭಾಗಶಃ ಮರುಪ್ರಾರಂಭದೊಂದಿಗೆ, ಕತಾರ್ ಏರ್ವೇಸ್ ಇಂದು ಭಾರತಕ್ಕೆ ಸುಮಾರು 9-10 ನಾನ್-ಷೆಡ್ಯೂಲ್ಡ್‌ ವಾಣಿಜ್ಯ ವಿಮಾನಗಳನ್ನು ನಡೆಸುವ ನಿರೀಕ್ಷೆಯಿದೆ.
  • ಕುವೈತ್ ವಾಯುಪ್ರದೇಶ ಮುಚ್ಚಲ್ಪಟ್ಟಿದೆ; ಜಜೀರಾ ಏರ್ವೇಸ್ ಸೌದಿ ಅರೇಬಿಯಾದ ಅಲ್ ಕೈಸುಮಾ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
  • ಬಹ್ರೇನ್ ವಾಯುಪ್ರದೇಶ ಮುಚ್ಚಲ್ಪಟ್ಟಿದೆ; ಗಲ್ಫ್ ಏರ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ವಿಶೇಷ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಡೆಸುವುದನ್ನು ಮುಂದುವರಿಸಿದೆ.
  • ಕುವೈತ್, ಬಹ್ರೇನ್ ಮತ್ತು ಇರಾಕ್‌ ನಿಂದ ವಿಮಾನ ನಿರ್ಬಂಧಗಳ ಹಿನ್ನೆಲೆಯಲ್ಲಿ, ಭಾರತೀಯ ನಾಗರಿಕರ ಪ್ರಯಾಣವನ್ನು ಸೌದಿ ಅರೇಬಿಯಾದ ಮೂಲಕ ಸುಗಮಗೊಳಿಸಲಾಗುತ್ತಿದೆ.
  • ಆರು ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ; ಸೌದಿ ಅರೇಬಿಯಾ, ಓಮನ್, ಇರಾಕ್ ಮತ್ತು ಯುಎಇಯಲ್ಲಿನ ಮಿಷನ್‌ ಗಳು ನಾಪತ್ತೆಯಾದ ಭಾರತೀಯ ನಾಗರಿಕನ ಬಗ್ಗೆ ಮತ್ತು ಮೃತಪಟ್ಟ ಭಾರತೀಯ ನಾಗರಿಕರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಸ್ವದೇಶಕ್ಕೆ ತರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ.

 


(ಪ್ರಕಟಣೆ ಐ.ಡಿ.: 2243601) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Assamese , Punjabi , Gujarati , Telugu , Malayalam