ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮ ಗೋಷ್ಠಿ


ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಆತಂಕದಿಂದ ಮುಂಗಡ ಕಾಯ್ದಿರಿಸದಂತೆ ನಾಗರಿಕರಿಗೆ ವಿನಂತಿ; ಎಲ್‌ ಪಿ ಜಿ ಏಜೆನ್ಸಿಗಳಲ್ಲಿ ಜನಸಂದಣಿ ತಡೆಯಲು ಬುಕಿಂಗ್‌ ಗಾಗಿ ಡಿಜಿಟಲ್ ವಿಧಾನಗಳನ್ನು ಬಳಸಲು ಸಲಹೆ

ಅಡೆತಡೆಯಿಲ್ಲದ ದೇಶೀಯ ಎಲ್‌ ಪಿ ಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ

ದೇಶೀಯ ಎಲ್‌ ಪಿ ಜಿ ಉತ್ಪಾದನೆಯಲ್ಲಿ ಸುಮಾರು ಶೇ. 31 ರಷ್ಟು ಹೆಚ್ಚಳ

ಅಗತ್ಯ ವಸ್ತುಗಳ ಕಾಳಸಂತೆ ಮತ್ತು ಸಂಗ್ರಹಣೆಯನ್ನು ತಡೆಯಲು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಕ್ರಮ

ಎರಡು ಭಾರತೀಯ ಎಲ್‌ ಪಿ ಜಿ ಸಾಗಣೆ ನೌಕೆಗಳು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು; ಮಾರ್ಚ್ 16-17 ರಂದು ಮುಂದ್ರಾ ಮತ್ತು ಕಾಂಡ್ಲಾವನ್ನು ತಲುಪುವ ನಿರೀಕ್ಷೆ

ಕಡಲ ವ್ಯಾಪಾರದ ಮೇಲೆ ಕಾರ್ಯಾಚರಣೆಯ ಪರಿಣಾಮವನ್ನು ಕಡಿಮೆ ಮಾಡಲು ಬಂದರುಗಳು, ಹಡಗು ಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಪಾಲುದಾರರೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ

ತಪ್ಪು ಮಾಹಿತಿಯ ಬಗ್ಗೆ ಜಾಗರೂಕರಾಗಿರಲು ಮತ್ತು ಅಧಿಕೃತ ಸರ್ಕಾರಿ ಹ್ಯಾಂಡಲ್‌ ಗಳು ಹಾಗೂ ಮೂಲಗಳನ್ನು ಮಾತ್ರ ಅವಲಂಬಿಸಲು ನಾಗರಿಕರಿಗೆ ಸಲಹೆ

ಮುಂಬರುವ ಖಾರಿಫ್ 2026 ಕ್ಕೆ ಸಾಕಷ್ಟು ಪ್ರಮಾಣದ ರಸಗೊಬ್ಬರ ದಾಸ್ತಾನು ಲಭ್ಯವಿದೆ

ಪಶ್ಚಿಮ ಏಷ್ಯಾ ಪರಿಸ್ಥಿತಿಯ ಕುರಿತು ಸಾಮಾನ್ಯ ನಿಲುವಿನ ಬಗ್ಗೆ ಬ್ರಿಕ್ಸ್ ಒಳಗೆ ಚರ್ಚೆಗಳು ನಡೆಯುತ್ತಿವೆ

ಪ್ರಕಟಣಾ ದಿನಾಂಕ: 14 MAR 2026 6:26PM by PIB Bengaluru

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳಿಂದ ಉದ್ಭವಿಸಿದ ಪರಿಸ್ಥಿತಿಯ ಬಗ್ಗೆ ನವೀಕರಣಗಳನ್ನು ನೀಡಲು ಭಾರತ ಸರ್ಕಾರವು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಾಲ್ಕನೇ ಅಂತರ-ಸಚಿವಾಲಯ ಮಾಧ್ಯಮ ಸಂವಾದವನ್ನು ನಡೆಸಿತು. ಇದೇ ರೀತಿಯ ಸಂವಾದಗಳನ್ನು ಈ ಹಿಂದೆ 2026 ರ ಮಾರ್ಚ್ 11, 12 ಮತ್ತು 13 ರಂದು ನಡೆಸಲಾಗಿತ್ತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು, ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಕ್ಷೇಮ ಮತ್ತು ಸಂಬಂಧಿತ ಸಂವಹನ ಕ್ರಮಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಯು ದೇಶದ ಇಂಧನ ಪೂರೈಕೆ ಪರಿಸ್ಥಿತಿ ಮತ್ತು ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಹಾಗೂ ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಪರಿಸ್ಥಿತಿಯ ದೃಷ್ಟಿಯಿಂದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಾಡಲಾದ ವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು. ಸಚಿವಾಲಯದ ಪ್ರಕಾರ:

ಕಚ್ಚಾ ತೈಲ/ಸಂಸ್ಕರಣಾಗಾರಗಳು

  • ಎಲ್ಲಾ ಸಂಸ್ಕರಣಾಗಾರಗಳು ಪ್ರಸ್ತುತ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳನ್ನು ನಿರ್ವಹಿಸುತ್ತಿವೆ. ಇದಲ್ಲದೆ, ನಮ್ಮ ದೇಶವು ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಪೆಟ್ರೋಲ್ ಮತ್ತು ಡೀಸೆಲ್ ಆಮದು ಅಗತ್ಯವಿಲ್ಲ.

ಚಿಲ್ಲರೆ ಮಾರಾಟ ಮಳಿಗೆಗಳು

  • ತೈಲ ಮಾರುಕಟ್ಟೆ ಕಂಪನಿಗಳು ಯಾವುದೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ಖಾಲಿಯಾದ ಪ್ರಕರಣಗಳನ್ನು ವರದಿ ಮಾಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳು ಲಭ್ಯವಿದ್ದು, ಪೂರೈಕೆಯನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿರುವುದರಿಂದ ಸಾರ್ವಜನಿಕರು ಆತಂಕದಿಂದ ಖರೀದಿ ಮಾಡಬಾರದು ಎಂದು ಸರ್ಕಾರ ಸಲಹೆ ನೀಡಿದೆ.

ನೈಸರ್ಗಿಕ ಅನಿಲ

  • ಪಿ ಎನ್‌ ಜಿ ಮತ್ತು ಸಿ ಎನ್‌ ಜಿ ಗೆ ಯಾವುದೇ ಕಡಿತವಿಲ್ಲದೆ ಶೇ.100 ರಷ್ಟು ಪೂರೈಕೆ ಸೇರಿದಂತೆ ಆದ್ಯತೆಯ ವಲಯಗಳ ಪೂರೈಕೆಯನ್ನು ರಕ್ಷಿಸಲಾಗಿದೆ. ಆದ್ದರಿಂದ, ಗಾಬರಿಯಾಗುವ ಅಗತ್ಯವಿಲ್ಲ. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪೂರೈಕೆಯನ್ನು ಶೇ.80 ಕ್ಕೆ ನಿಯಂತ್ರಿಸಲಾಗುತ್ತಿದೆ. ದೆಹಲಿ, ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಬೆಂಗಳೂರು, ಲಕ್ನೋ, ಕಾನ್ಪುರ, ಜೈಪುರ ಮುಂತಾದ ಪ್ರಮುಖ ನಗರ ಕೇಂದ್ರಗಳಲ್ಲಿ ಅಧಿಕೃತಗೊಂಡ ನಗರ ಅನಿಲ ವಿತರಣಾ (ಸಿಜಿಡಿ) ಘಟಕಗಳೊಂದಿಗೆ ಗೇಲ್ ವಿಡಿಯೋ ಕಾನ್ಫರೆನ್ಸ್ ನಡೆಸಿತು ಮತ್ತು ಎಲ್‌ ಪಿ ಜಿ ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಹೋಟೆಲ್‌ ಗಳು ಮತ್ತು ರೆಸ್ಟೋರೆಂಟ್‌ ಗಳಿಗೆ ಹೊಸ ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳನ್ನು ಉತ್ತೇಜಿಸಲು ಸಲಹೆ ನೀಡಿತು.

ಎಲ್ಪಿ ಜಿ

  • ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ದೃಷ್ಟಿಯಿಂದ ಎಲ್‌ ಪಿ ಜಿ ಪೂರೈಕೆಯು ಇನ್ನೂ ಕಳವಳಕಾರಿಯಾಗಿದೆ.
  • ಎಲ್‌ ಪಿ ಜಿ ವಿತರಕರಲ್ಲಿ ದಾಸ್ತಾನು ಖಾಲಿಯಾದ ಬಗ್ಗೆ ಯಾವುದೇ ವರದಿ ಬಂದಿಲ್ಲ.
  • ಆತಂಕದ ಖರೀದಿಯಿಂದಾಗಿ ಎಲ್‌ ಪಿ ಜಿ ಬುಕಿಂಗ್‌ ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ದೈನಂದಿನ ಬುಕಿಂಗ್ ಸರಾಸರಿ 55.7 ಲಕ್ಷದಿಂದ ನಿನ್ನೆ 88.8 ಲಕ್ಷಕ್ಕೆ ಏರಿದೆ.
  • ಗ್ರಾಹಕರಿಗಾಗಿ ವಾಣಿಜ್ಯ ಸಿಲಿಂಡರ್‌ಗಳನ್ನು ಆದ್ಯತೆಯ ವಿತರಣೆಗಾಗಿ ರಾಜ್ಯ ಸರ್ಕಾರದ ಸುಪರ್ದಿಗೆ ನೀಡಲಾಗಿದೆ. 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಹಕರಿಗೆ ವಾಣಿಜ್ಯ ಎಲ್‌ ಪಿ ಜಿ ಲಭ್ಯವಾಗುವಂತೆ ಮಾಡಲಾಗಿದೆ.
  • ಪ್ರಸ್ತುತ ಸಿಲಿಂಡರ್‌ಗಳ ಆನ್‌ಲೈನ್ ಬುಕಿಂಗ್ ಶೇಕಡಾ 84 ರಷ್ಟಿದೆ.

ರಾಜ್ಯ ಸರ್ಕಾರಗಳು ನಡೆಸಿದ ಸಭೆಗಳು

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಪಾತ್ರ ಬಹಳ ಮುಖ್ಯವಾಗಿದೆ.
  • ಹರಿಯಾಣ ಮತ್ತು ಗೋವಾದ ಗೌರವಾನ್ವಿತ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಎಲ್‌ ಪಿ ಜಿ ಬೇಡಿಕೆ ಮತ್ತು ಪೂರೈಕೆ ಪರಿಸ್ಥಿತಿಯನ್ನು ಪರಿಶೀಲಿಸಲು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ತೈಲ ಕಂಪನಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
  • ತೆಲಂಗಾಣದ ಮುಖ್ಯ ಕಾರ್ಯದರ್ಶಿಯವರು ತೈಲ ಮಾರುಕಟ್ಟೆ ಕಂಪನಿಗಳ ಪ್ರತಿನಿಧಿಗಳು ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಎಲ್‌ ಪಿ ಜಿ ದಾಸ್ತಾನು ಸ್ಥಿತಿ, ಪೂರೈಕೆ ಮತ್ತು ಗ್ರಾಹಕರಿಗೆ ವಿತರಣೆಯ ಬಗ್ಗೆ ಪರಿಶೀಲನೆ ನಡೆಸಿದರು.
  • ತೈಲ ಕಂಪನಿಗಳು ಆಂಧ್ರಪ್ರದೇಶದ ನಾಗರಿಕ ಸರಬರಾಜು ಕಮಿಷನರ್ ಅವರೊಂದಿಗೆ ಸಭೆ ನಡೆಸಿ ಎಲ್‌ ಪಿ ಜಿ, ಪಿಡಿಎಸ್ ಸೀಮೆಎಣ್ಣೆ ಮತ್ತು ವಾಣಿಜ್ಯ ಎಲ್‌ ಪಿ ಜಿಗೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದವು.
  • 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ ಮತ್ತು ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ಸಹ ನಡೆಸುತ್ತಿವೆ.

ಜಾರಿ ಕ್ರಮಗಳು

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಸಂಗ್ರಹಣೆ ಮತ್ತು ಕಾಳಸಂತೆಯನ್ನು ತಡೆಯುವಲ್ಲಿ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಮುಖ ಪಾತ್ರ ವಹಿಸುತ್ತಿವೆ.
  • ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಜಂಟಿ ತಪಾಸಣಾ ತಂಡಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿವೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ನಿನ್ನೆ ಎಲ್‌ ಪಿ ಜಿ ವಿತರಕರಲ್ಲಿ ಸುಮಾರು 1,300 ತಪಾಸಣೆಗಳನ್ನು ನಡೆಸಿವೆ.
  • ಉತ್ತರ ಪ್ರದೇಶದಲ್ಲಿ ಜಾರಿ ತಂಡಗಳು 1,483 ಸ್ಥಳಗಳಲ್ಲಿ ತಪಾಸಣೆ ನಡೆಸಿವೆ; 24 ಎಫ್‌ ಐ ಆರ್‌ ಗಳನ್ನು ದಾಖಲಿಸಲಾಗಿದೆ (4 ಎಲ್‌ ಪಿ ಜಿ ವಿತರಕರ ವಿರುದ್ಧ ಮತ್ತು 20 ವ್ಯಕ್ತಿಗಳ ವಿರುದ್ಧ), 6 ಜನರನ್ನು ಬಂಧಿಸಲಾಗಿದೆ ಮತ್ತು 19 ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
  • ಎಲ್‌ ಪಿ ಜಿ ಸಂಗ್ರಹಣೆ ಮತ್ತು ಕಾಳಸಂತೆಯನ್ನು ತಡೆಯಲು ಆಂಧ್ರಪ್ರದೇಶ (ತಿರುಪತಿ), ಬಿಹಾರ, ಒಡಿಶಾ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.

ಇತರ ಸರ್ಕಾರಿ ಕ್ರಮಗಳು

  • ಅಡೆತಡೆಯಿಲ್ಲದ ದೇಶೀಯ ಎಲ್‌ ಪಿ ಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ, ವಿಶೇಷವಾಗಿ ಮನೆಗಳು ಮತ್ತು ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಆದ್ಯತೆಯ ವಲಯಗಳಿಗೆ. ಸಂಸ್ಕರಣಾಗಾರಗಳಿಂದ ಎಲ್‌ ಪಿ ಜಿ ಉತ್ಪಾದನೆಯನ್ನು ಸಹ ಸುಮಾರು ಶೇ.31 ರಷ್ಟು ಹೆಚ್ಚಿಸಲಾಗಿದೆ.
  • 13.03.2026 ರ ಸಿಎಕ್ಯೂಎಂ ಆದೇಶವು ಎನ್‌ ಸಿ ಆರ್‌ ನಲ್ಲಿನ ಕೈಗಾರಿಕೆಗಳು, ಹೋಟೆಲ್‌ ಗಳು ಮತ್ತು ರೆಸ್ಟೋರೆಂಟ್‌ ಗಳಿಗೆ ಒಂದು ತಿಂಗಳ ಕಾಲ ನೈಸರ್ಗಿಕ ಅನಿಲದ ಬದಲಿಗೆ ಬಯೋಮಾಸ್/ಆರ್‌ ಡಿ ಎಫ್ ಪೆಲೆಟ್‌ ಗಳನ್ನು ತಾತ್ಕಾಲಿಕವಾಗಿ ಬಳಸಲು ಅನುಮತಿಸುತ್ತದೆ; ಪರ್ಯಾಯಗಳು ಲಭ್ಯವಿಲ್ಲದ ಕಡೆ ಕಲ್ಲಿದ್ದಲು ಅಥವಾ ಸೀಮೆಎಣ್ಣೆಯನ್ನು ಬಳಸಬಹುದು. ಎಲ್‌ ಪಿ ಜಿ ಬುಕಿಂಗ್ ಅವಧಿಯನ್ನು ಹೆಚ್ಚಿಸುವುದು (ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ) ಸೇರಿದಂತೆ ತರ್ಕಬದ್ಧಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ ಮತ್ತು ಆತಿಥ್ಯ ವಲಯದಲ್ಲಿ ಎಲ್‌ ಪಿ ಜಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಬಳಸಲಾಗುತ್ತಿದೆ.
  • ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಡಿಜಿಟಲ್ ಎಲ್‌ ಪಿ ಜಿ ಬುಕಿಂಗ್ ಅನ್ನು ಉತ್ತೇಜಿಸಲು, ಆತಂಕದ ಬುಕಿಂಗ್ ಅನ್ನು ನಿರುತ್ಸಾಹಗೊಳಿಸಲು ಮತ್ತು ಡೀಲರ್‌ಶಿಪ್‌ ಗಳಿಗೆ ಅನಗತ್ಯ ಭೇಟಿಗಳನ್ನು ತಪ್ಪಿಸಲು ಸೂಚಿಸಲಾಗಿದೆ.

ಸಾರ್ವಜನಿಕ ಸಲಹೆ

  • ನಾಗರಿಕರು ಗಾಬರಿಯಾಗದಂತೆ ಸಲಹೆ ನೀಡಲಾಗಿದೆ. ಮನೆಗಳು ಮತ್ತು ಅಗತ್ಯ ವಲಯಗಳಿಗೆ ಎಲ್‌ ಪಿ ಜಿ ಲಭ್ಯತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ.
  • ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಐ ವಿ ಆರ್‌ ಎಸ್ ಕರೆಗಳು, ಎಸ್‌ ಎಂ ಎಸ್, ವಾಟ್ಸಾಪ್ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಮೊಬೈಲ್ ಅಪ್ಲಿಕೇಶನ್‌ ಗಳಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳ ಮೂಲಕ ಸುಲಭವಾಗಿ ಬುಕ್ ಮಾಡಬಹುದು. ಗ್ರಾಹಕರು ಮನೆಯಿಂದಲೇ ಸಿಲಿಂಡರ್‌ ಗಳನ್ನು ಬುಕ್ ಮಾಡಲು ಮತ್ತು ಎಲ್‌ ಪಿ ಜಿ ವಿತರಕರನ್ನು ಅನಗತ್ಯವಾಗಿ ಭೇಟಿ ಮಾಡುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
  • ನಾಗರಿಕರು ಭಯಭೀತರಾಗಿ ಬುಕಿಂಗ್ ಮಾಡದಂತೆ ಮತ್ತು ಎಲ್‌ ಪಿ ಜಿ ಏಜೆನ್ಸಿಗಳಲ್ಲಿ ಜನಸಂದಣಿಯನ್ನು ತಡೆಯಲು ಬುಕಿಂಗ್‌ ಗಾಗಿ ಡಿಜಿಟಲ್ ವಿಧಾನಗಳನ್ನು ಬಳಸುವಂತೆ ವಿನಂತಿಸಲಾಗಿದೆ.
  • ಗ್ರಾಹಕರು ಲಭ್ಯವಿರುವ ಕಡೆ ಪಿ ಎನ್‌ ಜಿ ಯಂತಹ ಪರ್ಯಾಯ ಇಂಧನಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ದಶಕಗಳಿಂದ ಎಲ್‌ ಪಿ ಜಿ ಯನ್ನು ವಿಶ್ವಾಸಾರ್ಹವಾಗಿ ಪೂರೈಸುತ್ತಿರುವ ತೈಲ ಮಾರುಕಟ್ಟೆ ಕಂಪನಿಗಳ ಮೇಲೆ ನಂಬಿಕೆ ಇಡುವಂತೆ ವಿನಂತಿಸಲಾಗಿದೆ.
  • ಮಾಧ್ಯಮಗಳು ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಲು ಮತ್ತು ಅಧಿಕೃತ ಮೂಲಗಳನ್ನು ಅವಲಂಬಿಸಲು ವಿನಂತಿಸಲಾಗಿದೆ. ವಿವರವಾದ ಅಪ್‌ಡೇಟ್‌ ಗಳು ಪೆಟ್ರೋಲಿಯಂ ಸಚಿವಾಲಯ ಮತ್ತು ಪಿಎಸ್‌ಯು ತೈಲ ಮಾರುಕಟ್ಟೆ ಕಂಪನಿಗಳ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಲಭ್ಯವಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಕಡಲ ಪರಿಸ್ಥಿತಿಗಳು ಮತ್ತು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರು ಮತ್ತು ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿತು. ಅದು ಹೇಳಿದ್ದು ಹೀಗೆ:

  • ಕಳೆದ 24 ಗಂಟೆಗಳಲ್ಲಿ ಭಾರತೀಯ ನಾವಿಕರನ್ನು ಒಳಗೊಂಡ ಯಾವುದೇ ಹೊಸ ಹಡಗು ಘಟನೆ ವರದಿಯಾಗಿಲ್ಲ. ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ.
  • ನಿನ್ನೆಯವರೆಗೆ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿದ್ದ (ಹಾರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ) 24 ಹಡಗುಗಳ ಪೈಕಿ, ಸುಮಾರು 92,712 ಮೆಟ್ರಿಕ್ ಟನ್ ಎಲ್‌ ಪಿ ಜಿ ಹೊತ್ತಿದ್ದ ಎರಡು ಭಾರತೀಯ ಧ್ವಜದ ಎಲ್‌ ಪಿ ಜಿ ವಾಹಕಗಳಾದ ಶಿವಲಿಕ್ ಮತ್ತು ನಂದಾದೇವಿ ಇಂದು ಮುಂಜಾನೆ ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಅವು ಕ್ರಮವಾಗಿ ಮಾರ್ಚ್ 16 ಮತ್ತು 17 ರಂದು ಮುಂದ್ರಾ ಬಂದರು ಮತ್ತು ಕಾಂಡ್ಲಾ ಬಂದರನ್ನು ತಲುಪುತ್ತವೆ.
  • ಪ್ರಸ್ತುತ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ 611 ನಾವಿಕರನ್ನು ಹೊಂದಿರುವ 22 ಭಾರತೀಯ ಧ್ವಜದ ಹಡಗುಗಳಿವೆ. ಡಿಜಿ ಶಿಪ್ಪಿಂಗ್ ಹಡಗು ಮಾಲೀಕರು, ಆರ್‌ ಪಿ ಎಸ್‌ ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ ಗಳೊಂದಿಗೆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
  • ಕಳೆದ 24 ಗಂಟೆಗಳಲ್ಲಿ, ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು ನಾವಿಕರು, ಅವರ ಕುಟುಂಬಗಳು ಮತ್ತು ಕಡಲ ಪಾಲುದಾರರಿಂದ ಸುಮಾರು 312 ಕರೆಗಳು ಮತ್ತು 460 ಇಮೇಲ್‌ ಗಳನ್ನು ನಿರ್ವಹಿಸಿದೆ. ಕಳೆದ 15 ದಿನಗಳಲ್ಲಿ, ಇದು 2,737 ಕರೆಗಳು ಮತ್ತು 4,900 ಕ್ಕೂ ಹೆಚ್ಚು ಇಮೇಲ್‌ ಗಳನ್ನು ನಿರ್ವಹಿಸಿದೆ.
  • ಡಿಜಿ ಶಿಪ್ಪಿಂಗ್‌ ನಲ್ಲಿನ ತ್ವರಿತ ಪ್ರತಿಕ್ರಿಯೆ ತಂಡವು 24×7 ಕಾರ್ಯನಿರ್ವಹಿಸುತ್ತಿದೆ ಮತ್ತು ಹಡಗು ಕಂಪನಿಗಳು, ರಾಯಭಾರ ಕಚೇರಿಗಳು, ವಿದೇಶಾಂಗ ಸಚಿವಾಲಯ ಮತ್ತು ಪಿ ಅಂಡ್ ಐ ಕ್ಲಬ್ ವಿಮಾದಾರರೊಂದಿಗೆ ಸಮನ್ವಯ ಸಾಧಿಸುತ್ತಿದೆ. ಸುಮಾರು 1,300 ನಾವಿಕರು ಮತ್ತು ಅವರ ಕುಟುಂಬಗಳ ಕಳವಳಗಳನ್ನು ಪರಿಹರಿಸಲಾಗಿದೆ.
  • ಕಳೆದ 24 ಗಂಟೆಗಳಲ್ಲಿ, ಗಲ್ಫ್‌ ನಾದ್ಯಂತ ವಿಮಾನ ನಿಲ್ದಾಣಗಳು ಮತ್ತು ಪ್ರಾದೇಶಿಕ ಸ್ಥಳಗಳಿಂದ 30 ನಾವಿಕರನ್ನು ಸ್ವದೇಶಕ್ಕೆ ಕರೆತರಲಾಗಿದೆ, ಇದರಿಂದ ಒಟ್ಟು ಸಂಖ್ಯೆ 253 ಕ್ಕೆ ಏರಿದೆ.
  • ಕಡಲ ವ್ಯಾಪಾರದ ಮೇಲೆ ಕಾರ್ಯಾಚರಣೆಯ ಪರಿಣಾಮವನ್ನು ಕಡಿಮೆ ಮಾಡಲು ಬಂದರುಗಳು, ಹಡಗು ಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಪಾಲುದಾರರೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
  • ಬಂದರುಗಳಲ್ಲಿ ಲಂಗರು ಹಾಕುವುದು, ಬರ್ತ್ ಬಾಡಿಗೆ ಮತ್ತು ಶೇಖರಣಾ ಶುಲ್ಕಗಳಲ್ಲಿ ರಿಯಾಯಿತಿಗಳಂತಹ ಪರಿಹಾರ ಕ್ರಮಗಳನ್ನು ಒದಗಿಸಲು ಸೂಚಿಸಲಾಗಿದೆ. ಕಾಮರಾಜರ್ ಬಂದರಿನಲ್ಲಿ 25,000 ಮೆಟ್ರಿಕ್ ಟನ್ ಬ್ಯಾರೈಟ್ಸ್ ಕಾರ್ಗೋ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಗುತ್ತಿಗೆ ವಿಸ್ತರಣೆಗಳನ್ನು ಸಹ ನೀಡಲಾಗಿದೆ.
  • ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಬಂದರುಗಳು ಎಲ್‌ ಪಿ ಜಿ ಹಡಗುಗಳಿಗೆ ಆದ್ಯತೆಯ ಮೇಲೆ ನಿಲುಗಡೆ ಅವಕಾಶ (ಬರ್ತಿಂಗ್) ನೀಡುತ್ತಿವೆ. ಕಳೆದ ಕೆಲವು ದಿನಗಳಲ್ಲಿ ಆರು ಎಲ್‌ ಪಿ ಜಿ ಹಡಗುಗಳನ್ನು ಪ್ರಮುಖ ಬಂದರುಗಳಲ್ಲಿ ಸ್ವೀಕರಿಸಲಾಗಿದೆ.
  • ಗಲ್ಫ್‌ ಗೆ ಹೋಗುವ ಮತ್ತು ಪ್ರಸ್ತುತ ಸಂಚರಿಸಲು ಸಾಧ್ಯವಾಗದ ಲೋಡ್ ಮಾಡಿದ ಹಡಗುಗಳಿಗೆ ಬಂದರುಗಳು ಸುರಕ್ಷಿತ ಲಂಗರು ಹಾಕುವ ಪ್ರದೇಶಗಳನ್ನು ಸಹ ಒದಗಿಸುತ್ತಿವೆ.
  • ಭಾರತೀಯ ನಾವಿಕರ ಸುರಕ್ಷತೆ ಮತ್ತು ಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯ, ಭಾರತೀಯ ಮಿಷನ್‌ ಗಳು, ಹಡಗು ಕಂಪನಿಗಳು ಮತ್ತು ಇತರ ಕಡಲ ಪಾಲುದಾರರ ಸಮನ್ವಯದೊಂದಿಗೆ ಸಚಿವಾಲಯವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.

ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನೆಲೆಸಿರುವ ಅಥವಾ ಪ್ರಯಾಣಿಸುತ್ತಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಕ್ಷೇಮದ ಬಗ್ಗೆ ಮಾಹಿತಿ ನೀಡಿದೆ ಮತ್ತು ಭಾರತೀಯ ಸಮುದಾಯದೊಂದಿಗೆ ಭಾರತೀಯ ಮಿಷನ್‌ ಗಳ ನಿರಂತರ ಒಡನಾಟವನ್ನು ವಿವರಿಸಿದೆ. ಅದು ಹೇಳಿದ್ದು ಹೀಗೆ:

  • ಸಂಘರ್ಷ ಪ್ರಾರಂಭವಾದಾಗಿನಿಂದ, ಭಾರತವು ಸತತವಾಗಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳ ಪರಿಹಾರಕ್ಕಾಗಿ ಕರೆ ನೀಡಿದೆ. ಸರಕು ಮತ್ತು ಇಂಧನದ ಅಡೆತಡೆಯಿಲ್ಲದ ಸಾಗಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಇಂಧನ ಸೌಲಭ್ಯಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ತಪ್ಪಿಸುವ ಪ್ರಾಮುಖ್ಯತೆಯನ್ನು ಭಾರತ ಒತ್ತಿಹೇಳಿದೆ.
  • ಭಾರತವು ಜಿಸಿಸಿ ದೇಶಗಳು, ಇರಾನ್, ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ ಪ್ರಮುಖ ಪಾಲುದಾರರೊಂದಿಗೆ ರಾಜಕೀಯ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ನಿಕಟ ಸಂಪರ್ಕದಲ್ಲಿದೆ. ಪ್ರಧಾನ ಮಂತ್ರಿಯವರು, ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಭಾರತೀಯ ಮಿಷನ್‌ ಗಳು ಭಾರತದ ಆದ್ಯತೆಗಳನ್ನು, ವಿಶೇಷವಾಗಿ ಇಂಧನ ಭದ್ರತೆ ಮತ್ತು ಸುರಕ್ಷಿತ ಕಡಲ ಸಾಗಣೆಯನ್ನು ಒತ್ತಿಹೇಳಲು ತಮ್ಮ ಸಹವರ್ತಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
  • ಶಿವಲಿಕ್ ಮತ್ತು ನಂದಾದೇವಿ ಹೊರತುಪಡಿಸಿ, ಭಾರತಕ್ಕೆ ಬರಬೇಕಿರುವ ಇತರ ಹಲವು ಹಡಗುಗಳು ಗಲ್ಫ್ ಪ್ರದೇಶದಲ್ಲಿದ್ದು, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.
  • ಸಂಘರ್ಷದಿಂದ ಉಂಟಾದ ವಿಮಾನಗಳ ವ್ಯತ್ಯಯದಿಂದಾಗಿ, ಸಿಲುಕಿಕೊಂಡಿರುವ ಇರಾನಿನ ಪ್ರಜೆಗಳನ್ನು ಸ್ವದೇಶಕ್ಕೆ ಕರೆದೊಯ್ಯಲು ಇರಾನ್ ಅಧಿಕಾರಿಗಳು ನಿನ್ನೆ ರಾತ್ರಿ ಕೊಚ್ಚಿಯಿಂದ ಚಾರ್ಟರ್ಡ್ ವಿಮಾನವನ್ನು ಏರ್ಪಡಿಸಿದ್ದರು.
  • ಭಾರತವು ಪ್ರಸ್ತುತ ಮುಂಬರುವ ಖಾರಿಫ್ 2026 ಹಂಗಾಮಿಗೆ ಸಾಕಷ್ಟು ರಸಗೊಬ್ಬರ ದಾಸ್ತಾನುಗಳನ್ನು ಹೊಂದಿದೆ. ಯೂರಿಯಾ ದಾಸ್ತಾನು ಕಳೆದ ವರ್ಷಕ್ಕಿಂತ ಹೆಚ್ಚಿದೆ; ಡಿಎಪಿ ದಾಸ್ತಾನು ಸುಮಾರು ದುಪ್ಪಟ್ಟಾಗಿದೆ ಮತ್ತು ಎನ್‌ಪಿಕೆ ದಾಸ್ತಾನು ಕೂಡ ಗಣನೀಯವಾಗಿ ಹೆಚ್ಚಿದೆ. ರಬಿ ಹಂಗಾಮು ಮುಕ್ತಾಯವಾಗುತ್ತಿದ್ದಂತೆ ದೇಶೀಯ ಯೂರಿಯಾ ಉತ್ಪಾದನೆಯು ಬಳಕೆಯನ್ನು ಮೀರುವ ನಿರೀಕ್ಷೆಯಿದೆ, ಆದರೆ ಜಾಗತಿಕ ಟೆಂಡರ್‌ ಗಳನ್ನು ಈಗಾಗಲೇ ನೀಡಲಾಗಿದ್ದು ಮಾರ್ಚ್ ಅಂತ್ಯದೊಳಗೆ ಪೂರೈಕೆಯ ನಿರೀಕ್ಷೆಯಿದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಲವು ಸದಸ್ಯ ರಾಷ್ಟ್ರಗಳ ಒಳಗೊಳ್ಳುವಿಕೆಯಿಂದಾಗಿ ಸಾಮಾನ್ಯ ನಿಲುವಿನ ಬಗ್ಗೆ ಬ್ರಿಕ್ಸ್ ಒಳಗೆ ಶರ್ಪಾ ಚಾನೆಲ್ ಮೂಲಕ ಚರ್ಚೆಗಳು ನಡೆಯುತ್ತಿವೆ. ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿ ಭಾರತವು ಸಮಾಲೋಚನೆಗಳನ್ನು ಸುಗಮಗೊಳಿಸುವುದನ್ನು ಮುಂದುವರೆಸಿದೆ ಮತ್ತು ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕಗಳ ಮೂಲಕ ರಷ್ಯಾ ಸೇರಿದಂತೆ ಇತರ ಪಾಲುದಾರರೊಂದಿಗೆ ತೊಡಗಿಸಿಕೊಂಡಿದೆ.
  • ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದ ಬದಲಾಗುತ್ತಿರುವ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಕ್ಷೇಮವು ಅತ್ಯುನ್ನತ ಆದ್ಯತೆಯಾಗಿದೆ. ಪ್ರಶ್ನೆಗಳಿಗಾಗಿ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ ಮತ್ತು ಮಿಷನ್‌ ಗಳು 24x7 ಸಹಾಯವಾಣಿಗಳನ್ನು ನಡೆಸುತ್ತಿವೆ, ಸಲಹೆಗಳನ್ನು ನೀಡುತ್ತಿವೆ ಮತ್ತು ಸಿಲುಕಿಕೊಂಡಿರುವ ಭಾರತೀಯರಿಗೆ ವೀಸಾ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಸಹಾಯ ಮಾಡುತ್ತಿವೆ.
  • ಫೆಬ್ರವರಿ 28 ರಿಂದ ಸುಮಾರು 172,000 ಪ್ರಯಾಣಿಕರು ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ. ಒಮಾನ್, ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ ನಿಂದ ವಿಮಾನಗಳೊಂದಿಗೆ ವಾಯು ಸಂಪರ್ಕವು ಸುಧಾರಿಸುತ್ತಿದೆ. ಬಹ್ರೇನ್, ಕುವೈತ್ ಮತ್ತು ಇರಾಕ್‌ ನಲ್ಲಿರುವ ಭಾರತೀಯರಿಗೆ ವೀಸಾ ವಿಸ್ತರಣೆ, ಟ್ರಾನ್ಸಿಟ್ ವೀಸಾ ಮತ್ತು ಮುಂದಿನ ಪ್ರಯಾಣಕ್ಕೆ ಸಹಾಯ ಮಾಡಲಾಗುತ್ತಿದೆ.
  • ಒಮಾನ್‌ ನ ಸೊಹಾರ್‌ ನಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹತ್ತು ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ಯಾರ ಪರಿಸ್ಥಿತಿಯೂ ಗಂಭೀರವಾಗಿಲ್ಲ. ರಾಯಭಾರ ಕಚೇರಿಯು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ, ಒಮಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಮತ್ತು ಮೃತದೇಹಗಳನ್ನು ಶೀಘ್ರವಾಗಿ ಮರಳಿ ತರಲು ಅನುಕೂಲ ಮಾಡಿಕೊಡುತ್ತಿದೆ.
  • ಸೇಫ್‌ ಸೀ ವಿಷ್ಣು ಹಡಗಿಗೆ ಸಂಬಂಧಿಸಿದಂತೆ (ಮಾರ್ಚ್ 11, ಇರಾಕ್ ಕರಾವಳಿಯಲ್ಲಿ), 15 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಬಸ್ರಾದಲ್ಲಿದ್ದಾರೆ. ಮಿಷನ್ ಅವರಿಗೆ ಸಹಾಯ ಮಾಡುತ್ತಿದೆ ಮತ್ತು ಮೃತಪಟ್ಟ ಭಾರತೀಯ ಪ್ರಜೆಯ ಮೃತದೇಹವನ್ನು ತರುವುದರೊಂದಿಗೆ ಅವರನ್ನು ಶೀಘ್ರವಾಗಿ ಭಾರತಕ್ಕೆ ಮರಳಿಸಲು ಸಮನ್ವಯ ಸಾಧಿಸುತ್ತಿದೆ.
  • ಹಿಂದಿನ ಘಟನೆಗಳಲ್ಲಿ ಐವರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ. ಒಮಾನ್, ಇರಾಕ್ ಮತ್ತು ಯುಎಇಯಲ್ಲಿರುವ ಮಿಷನ್‌ ಗಳು ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಮೃತದೇಹಗಳನ್ನು ಮರಳಿ ತರಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ.

ಸಾರ್ವಜನಿಕ ಸಂವಹನ

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯು ಸಾರ್ವಜನಿಕರಿಗೆ ಪರಿಶೀಲಿಸಿದ ಮಾಹಿತಿಯನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಸಂವಹನ ಉಪಕ್ರಮಗಳ ಬಗ್ಗೆ ಮಾತನಾಡಿದರು. ಸಚಿವಾಲಯವು ಇದನ್ನು ಒತ್ತಿಹೇಳಿದೆ:

  • ಎಐ ಜನರೇಟೆಡ್ ವೀಡಿಯೊಗಳು ಮತ್ತು ದಾರಿ ತಪ್ಪಿಸುವ ಸಂದೇಶಗಳು ಸೇರಿದಂತೆ ನಕಲಿ ಮಾಹಿತಿಯನ್ನು ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ಗಳಲ್ಲಿ ಹರಡಲಾಗುತ್ತಿದೆ. ನಾಗರಿಕರು ಜಾಗರೂಕರಾಗಿರಲು ಮತ್ತು ಅಧಿಕೃತ ಮೂಲಗಳು ಮತ್ತು ಸರ್ಕಾರಿ ಹ್ಯಾಂಡಲ್‌ ಗಳನ್ನು ಮಾತ್ರ ಅವಲಂಬಿಸಲು ಸಲಹೆ ನೀಡಲಾಗಿದೆ.
  • ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಅನ್ನು ಆನ್‌ಲೈನ್ ಅಥವಾ ಮೊಬೈಲ್ (ಎಸ್‌ ಎಂ ಎಸ್), ಪೋರ್ಟಲ್‌‌ ಗಳು ಅಥವಾ ಐ ವಿ ಆರ್‌ ಎಸ್‌ ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳ ಮೂಲಕ ಮಾಡಬೇಕು. ಗ್ರಾಹಕರು ವಿತರಕರನ್ನು ಭೌತಿಕವಾಗಿ ಭೇಟಿ ಮಾಡದಂತೆ ಸಲಹೆ ನೀಡಲಾಗಿದೆ.
  • ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳು, ತೈಲ ಮಾರುಕಟ್ಟೆ ಕಂಪನಿಗಳ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಸಂಗ್ರಹಣೆ ಹಾಗೂ ಕಾಳಸಂತೆಯ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ.
  • ನಾಗರಿಕರು ಭಯಭೀತರಾಗಿ ಬುಕಿಂಗ್ ಮಾಡದಂತೆ ಮತ್ತು ಸಾಮಾನ್ಯ ರೀಫಿಲ್ ಚಕ್ರದಂತೆ ಮಾತ್ರ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಬುಕ್ ಮಾಡುವಂತೆ ವಿನಂತಿಸಲಾಗಿದೆ.

ಮಾಧ್ಯಮ ಗೋಷ್ಠಿಯ ಸಮಯದಲ್ಲಿ ತಿಳಿಸಿದಂತೆ, ಭಾರತ ಸರ್ಕಾರವು ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳುತ್ತಿದೆ. ಇಂಧನ ಪೂರೈಕೆಯನ್ನು ರಕ್ಷಿಸಲು, ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಕಡಲ ಕಾರ್ಯಾಚರಣೆಗಳನ್ನು ನಿರ್ವಹಿಸಲು ಮತ್ತು ದೇಶಾದ್ಯಂತ ಅಗತ್ಯ ವಸ್ತುಗಳು ಲಭ್ಯವಿರುವಂತೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

 

*****

 


(ಪ್ರಕಟಣೆ ಐ.ಡಿ.: 2240248) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Odia , Tamil , Telugu , Malayalam