ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಕೃಷಿ-ಆಹಾರ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಕುರಿತ ಜಾಗತಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಭಾರತದ ರಾಷ್ಟ್ರಪತಿ


ಕೃಷಿ ಕ್ಷೇತ್ರದಲ್ಲಿ ನೀತಿ ನಿರೂಪಣೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ನಾಯಕತ್ವಕ್ಕೆ ಸಂಬಂಧಿಸಿದಂತೆ ಮಹಿಳೆಯರ ಪಾತ್ರ ಹೆಚ್ಚಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಕಟಣಾ ದಿನಾಂಕ: 12 MAR 2026 2:03PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಮಾರ್ಚ್ 12, 2026) ನವದೆಹಲಿಯಲ್ಲಿ ನಡೆದ ʻಕೃಷಿ-ಆಹಾರ ವ್ಯವಸ್ಥೆಗಳಲ್ಲಿ ಮಹಿಳೆಯರ ಪಾತ್ರ ಕುರಿತ ಜಾಗತಿಕ ಸಮ್ಮೇಳನʼದ (ಜಿಸಿಡಬ್ಲ್ಯೂಎಎಸ್-2026) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅವರು ಬಿತ್ತನೆ, ಕೊಯ್ಲು, ಸಂಸ್ಕರಣೆ ಮತ್ತು ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸುವುದು ಸೇರಿದಂತೆ ಎಲ್ಲಾ ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು. ಮೀನುಗಾರಿಕೆ, ಜೇನು ಸಾಕಾಣಿಕೆ, ಪಶುಸಂಗೋಪನೆ, ಅರಣ್ಯ ಉತ್ಪನ್ನಗಳ ಸರಿಯಾದ ಬಳಕೆ ಹಾಗೂ ಕೃಷಿ ಆಧಾರಿತ ಉದ್ಯಮಗಳ ಕಾರ್ಯಾಚರಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು ದಣಿವರಿಯದೆ ಕೆಲಸ ಮಾಡುತ್ತಾರೆ. ಕೃಷಿ ಆರ್ಥಿಕತೆಗೆ ಮಹಿಳೆಯರು ಅಮೂಲ್ಯ ಕೊಡುಗೆಗಳನ್ನು ನೀಡುತ್ತಾರೆ ಎಂದು ತಿಳಿಸಿದರು.

ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಹಿಳೆಯರಾಗಿದ್ದಾರೆ ಮತ್ತು ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಪ್ರಮಾಣ ಶೇಕಡಾ 60ಕ್ಕಿಂತ ಹೆಚ್ಚಾಗಿದೆ ಎಂದು ರಾಷ್ಟ್ರಪತಿ ಒತ್ತಿ ಹೇಳಿದರು. ಈ ಹುಡುಗಿಯರು ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸಹ ಪ್ರದರ್ಶಿಸುತ್ತಾರೆ. ಈ ಭರವಸೆಯ ಹೆಣ್ಣುಮಕ್ಕಳಿಗೆ ಕೃಷಿ ಮತ್ತು ಆಹಾರ ಧಾನ್ಯಗಳ ಕ್ಷೇತ್ರದಲ್ಲಿ ನಾಯಕತ್ವ ವಹಿಸಲು ಅನುವು ಮಾಡಿಕೊಡಲು ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ಪ್ರೋತ್ಸಾಹವನ್ನು ಒದಗಿಸಬೇಕಿದೆ. ಇದು ಸರ್ಕಾರ, ಸಮಾಜ ಮತ್ತು ಕೃಷಿ ಕ್ಷೇತ್ರದ ಎಲ್ಲಾ ಮಧ್ಯಸ್ಥಗಾರರ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ನಾಯಕತ್ವವು ತಾಯ್ತನದಲ್ಲಿ ಅಂತರ್ಗತವಾಗಿದೆ. ಆದರೆ, ಹೆಣ್ಣಿನ ತಾಯ್ತನದ ಗುಣವನ್ನು ಹೆಚ್ಚಾಗಿ ಮನೆಗಷ್ಟೇ ಸೀಮಿತ ಎಂದು ಪರಿಗಣಿಸಲಾಗುತ್ತದೆ. ನಾವು ಈ ಮನಸ್ಥಿತಿಯನ್ನು ಬದಲಾಯಿಸಬೇಕು ಮತ್ತು ನಾಯಕತ್ವವನ್ನು ಒದಗಿಸಲು ಮಹಿಳಾ ರೈತರನ್ನು ಸಬಲೀಕರಣಗೊಳಿಸುವ ದೃಷ್ಟಿಯೊಂದಿಗೆ ಮುಂದುವರಿಯಬೇಕು ಎಂದು ರಾಷ್ಟ್ರಪತಿಗಳು ಹೇಳಿದರು.

ವಿಶ್ವಸಂಸ್ಥೆಯು 2026ನೇ ವರ್ಷವನ್ನು 'ಮಹಿಳಾ ರೈತರ ಅಂತಾರಾಷ್ಟ್ರೀಯ ವರ್ಷ' ಎಂದು ಘೋಷಿಸಿದೆ. ಈ ಘೋಷಣೆಯು ಲಿಂಗ ತಾರತಮ್ಯವನ್ನು ಕಡಿಮೆ ಮಾಡಲು ಮತ್ತು ಕೃಷಿ-ಆಹಾರ ಮೌಲ್ಯ ಸರಪಳಿಗಳಲ್ಲಿ ಮಹಿಳೆಯರಿಗೆ ನಾಯಕತ್ವದ ಪಾತ್ರಗಳನ್ನು ಉತ್ತೇಜಿಸಲು ಸಾಮೂಹಿಕ ಕ್ರಮಕ್ಕೆ ಕರೆ ನೀಡುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು.

ಕೃಷಿಯಲ್ಲಿ, ವಿಶೇಷವಾಗಿ ಕೃಷಿ-ಆಹಾರ ವ್ಯವಸ್ಥೆಯಲ್ಲಿ ತೊಡಗಿರುವ ಮಹಿಳೆಯರಲ್ಲಿ ನಾಯಕತ್ವವನ್ನು ಪ್ರೋತ್ಸಾಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು. ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಕಲ್ಪನೆಯೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ರಾಷ್ಟ್ರಪತಿಗಳು ಒತ್ತಿ ಹೇಳಿದರು. ನೀತಿ ನಿರೂಪಣೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ನಾಯಕತ್ವದ ಸ್ಥಾನಗಳಲ್ಲಿ ಕೃಷಿ ಕ್ಷೇತ್ರದ ಮಹಿಳೆಯರಿಗೆ ಹೆಚ್ಚಿನ ಪಾತ್ರ ಇರಬೇಕು. ಈ ವಲಯದ ಎಲ್ಲಾ ಹಂತಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯು ಸಮಗ್ರ ಲಿಂಗ ಅಂತರವಿರದ ಕೃಷಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.

ಔಪಚಾರಿಕ ಭೂ ಮಾಲೀಕತ್ವ, ತಾಂತ್ರಿಕ ಜ್ಞಾನ, ಆರ್ಥಿಕ ಸಂಪನ್ಮೂಲಗಳು ಮತ್ತು ಇತರ ಬೆಂಬಲ ವ್ಯವಸ್ಥೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಹಿಳಾ ರೈತರಿಗೆ ಸಹಾಯ ಮಾಡಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು. ಕಳೆದ ದಶಕದಲ್ಲಿ, ಭಾರತವು ಕೃಷಿಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು ಉತ್ತೇಜಿಸುವ ಉಪಕ್ರಮಗಳು ಕೃಷಿಯಲ್ಲಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಪರಿಣಾಮಕಾರಿಯಾಗಿವೆ ಎಂದು ಅವರು ಹೇಳಿದರು.

ಜನರು, ಭೂಮಿ, ಸಮೃದ್ಧಿ, ಶಾಂತಿ ಮತ್ತು ಪಾಲುದಾರಿಕೆಗಳಿಗೆ ಸಮಾನ ಪ್ರಾಮುಖ್ಯತೆ ನೀಡಬೇಕೆಂಬ ಬಗ್ಗೆ ಜಾಗತಿಕ ಒಮ್ಮತವಿದೆ ಎಂದು ರಾಷ್ಟ್ರಪತಿ ಹೇಳಿದರು. 'ಜನರು' ಎಂಬ ಆಯಾಮದಲ್ಲಿ, ಚಿಂತನೆ ಮತ್ತು ಕ್ರಿಯೆಯಲ್ಲಿ ಲಿಂಗಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಅವರು ಎಲ್ಲಾ ಮಧ್ಯಸ್ಥಗಾರರನ್ನು ಒತ್ತಾಯಿಸಿದರು. ಕೃಷಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಪರಿಣಾಮಕಾರಿ ಲಿಂಗ ಸೇರ್ಪಡೆಯೊಂದಿಗೆ, ನಾವು ʻಸುಸ್ಥಿರ ಅಭಿವೃದ್ಧಿ ಗುರಿʼಗಳನ್ನು ಸಾಧಿಸುವುದು ಮಾತ್ರವಲ್ಲದೆ 'ಭೂಗ್ರಹ'ವನ್ನು ಹೆಚ್ಚು ಸೂಕ್ಷ್ಮ ಮತ್ತು ಸಾಮರಸ್ಯದ ಸ್ಥಳವನ್ನಾಗಿ ಮಾಡಬಹುದು ಎಂದು ಅವರು ಹೇಳಿದರು. ಈ ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸುವವರು ಪ್ರಗತಿಯನ್ನು ಮುನ್ನಡೆಸಲು ಮತ್ತು ಹೊಸ ಎತ್ತರವನ್ನು ತಲುಪಲು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ʻಟ್ರಸ್ಟ್ ಫಾರ್ ಅಡ್ವಾನ್ಸ್‌ಮೆಂಟ್‌ ಆಫ್ ಅಗ್ರಿಕಲ್ಚರಲ್ ಸೈನ್ಸಸ್ʼ(ಟಿಎಎಎಸ್), ʻಭಾರತೀಯ ಕೃಷಿ ಸಂಶೋಧನಾ ಮಂಡಳಿʼ(ಐಸಿಎಆರ್), ʻಅಂತರರಾಷ್ಟ್ರೀಯ ಕೃಷಿ ಸಂಶೋಧನೆಯ ಸಲಹಾ ಪಡೆʼ(ಸಿಜಿಐಎಆರ್) ಮತ್ತು ʻಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಪ್ರಾಧಿಕಾರʼ (ಪಿಪಿವಿ ಮತ್ತು ಎಫ್ಆರ್ಎ) ಜಂಟಿಯಾಗಿ ʻಜಿಸಿಡಬ್ಲ್ಯೂಎಎಸ್ -2026ʼ ಅನ್ನುಆಯೋಜಿಸಿವೆ. ಮೂರು ದಿನಗಳ ಈ ಸಮ್ಮೇಳನವು ಮಹಿಳೆಯರ ಭಾಗವಹಿಸುವಿಕೆಯನ್ನು ಮುಖ್ಯವಾಹಿನಿಗೆ ತರಲು ನೀತಿ ಚೌಕಟ್ಟುಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದೆ. ಜೊತೆಗೆ ಸುಸ್ಥಿರ ಮತ್ತು ಸಮಗ್ರ ಕೃಷಿ-ಆಹಾರ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ಮಹಿಳೆಯರ ಅವಿಭಾಜ್ಯ ಪಾತ್ರವನ್ನು ಎತ್ತಿ ತೋರಿಸುವ ಗುರಿಯನ್ನು ಇದು ಹೊಂದಿದೆ.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ-

 

*****


(ಪ್ರಕಟಣೆ ಐ.ಡಿ.: 2238848) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Marathi , हिन्दी , Bengali , Gujarati , Tamil , Telugu , Malayalam