ಗೃಹ ವ್ಯವಹಾರಗಳ ಸಚಿವಾಲಯ
ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರ ವಿರುದ್ಧ ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉತ್ತರ
ಚರ್ಚೆಯ ನಂತರ, ಧ್ವನಿಮತದ ಮೂಲಕ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಲೋಕಸಭೆ
ಸದನದಲ್ಲಿ ಸಮಯ ನೀಡಿದಾಗ ಮಾತನಾಡದೆ, ಹೊರಗೆ ಬಂದು ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ದೂರುವುದು—ವಿರೋಧ ಪಕ್ಷದ ನಾಯಕರ ಪ್ರವೃತ್ತಿ ಈಗ ಬಯಲಾಗಿದೆ
ಸ್ಥಾನಗಳ ಸಂಖ್ಯೆಗೆ ಅನುಗುಣವಾಗಿ, ಶ್ರೀ ಓಂ ಬಿರ್ಲಾ ಅವರು ಲೋಕಸಭೆಯಲ್ಲಿ ನಮ್ಮ ಪಕ್ಷಕ್ಕಿಂತ ಮುಖ್ಯ ವಿರೋಧ ಪಕ್ಷಕ್ಕೆ ಮಾತನಾಡಲು ಹೆಚ್ಚಿನ ಸಮಯವನ್ನು ನೀಡಿದ್ದಾರೆ
ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ವಿರೋಧ ಪಕ್ಷವು ಲೋಕಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಂದಿತು, ಆದರೆ ಈಗ ವಿರೋಧ ಪಕ್ಷದ ನಾಯಕರೇ ಅದರ ಬಗ್ಗೆ ಮಾತನಾಡಲಿಲ್ಲ
2025ರ ಚಳಿಗಾಲದ ಅಧಿವೇಶನದಲ್ಲಿ ಜರ್ಮನಿಗೆ, 2025ರ ಬಜೆಟ್ ಅಧಿವೇಶನದಲ್ಲಿ ವಿಯೆಟ್ನಾಂಗೆ ಅಥವಾ 2023ರ ಬಜೆಟ್ ಅಧಿವೇಶನದಲ್ಲಿ ಬ್ರಿಟನ್ ಗೆ ಪ್ರವಾಸವಾಗಲಿ, ಸದನದ ಪ್ರಮುಖ ಕಲಾಪಗಳ ಸಮಯದಲ್ಲಿ ವಿರೋಧ ಪಕ್ಷದ ನಾಯಕರು ವಿದೇಶದಲ್ಲಿರುತ್ಥಾರೆ, ನಂತರ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರುತ್ತಾರೆ
ಸದನದಲ್ಲಿ ಚರ್ಚೆಗಳು ನಡೆಯುತ್ತಿರುವಾಗ ವಿರೋಧ ಪಕ್ಷದ ನಾಯಕರು ಹೆಚ್ಚಾಗಿ ವಿದೇಶ ಪ್ರವಾಸದಲ್ಲಿರುತ್ತಾರೆ; ಅವರು ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸಲು ವಿದೇಶದಿಂದ ವಿಶೇಷ ವೀಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆಗಳನ್ನು ಮಾಡುವುದು ಸಾಧ್ಯವಿಲ್ಲ
370ನೇ ವಿಧಿಯ ರದ್ದತಿ, ತ್ರಿವಳಿ ತಲಾಖ್ ರದ್ದತಿ, ಸಿಎಎ ಜಾರಿ ಅಥವಾ ವಂದೇ ಮಾತರಂನ 150 ವರ್ಷಗಳ ಆಚರಣೆಯಂತಹ ಪ್ರಮುಖ ಚರ್ಚೆಗಳಿಗೆ ಮುಖ್ಯ ವಿರೋಧ ಪಕ್ಷದ ನಾಯಕರು ಗೈರುಹಾಜರಾಗಿದ್ದಾರೆ
ಸಂಸತ್ತಿನಲ್ಲಿ ಮಾತನಾಡಲು ಕೆಲವು ನಿಯಮಗಳಿವೆ; ತಮಗೆ ಇಷ್ಟ ಬಂದಂತೆ ಮಾತನಾಡಲು ಇದು ಜಾತ್ರೆ ಅಥವಾ ಸಭೆಯಲ್ಲ
ಭಾರತದ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಹಾಜರಾತಿಯು ರಾಷ್ಟ್ರೀಯ ಸರಾಸರಿಗಿಂತ ತೀರಾ ಕಡಿಮೆಯಿದೆ
17ನೇ ಲೋಕಸಭೆಯಲ್ಲಿ ಮುಖ್ಯ ವಿರೋಧ ಪಕ್ಷಕ್ಕೆ ಮಾತನಾಡಲು ಸುಮಾರು 158 ಗಂಟೆಗಳನ್ನು ನೀಡಲಾಗಿತ್ತು ಮತ್ತು 18ನೇ ಲೋಕಸಭೆಯಲ್ಲಿ ಇದುವರೆಗೆ 71 ಗಂಟೆಗಳನ್ನು ನೀಡಲಾಗಿದೆ, ಇದು ಅನುಪಾತದ ಆಧಾರದ ಮೇಲೆ ನಮ್ಮ ಪಕ್ಷಕ್ಕೆ ನೀಡಲಾದ ಸಮಯಕ್ಕಿಂತ ಬಹಳ ಹೆಚ್ಚಾಗಿದೆ
ವಿರೋಧ ಪಕ್ಷವು ತುರ್ತು ಪರಿಸ್ಥಿತಿಯ ಕಾಲದ ಸವಲತ್ತುಗಳ ಮನಸ್ಥಿತಿಯಲ್ಲಿ ಬದುಕುತ್ತಿದೆ, ಅದಕ್ಕಾಗಿಯೇ ಸಾರ್ವಜನಿಕರು ನಿರಂತರವಾಗಿ ಅವರ ಬಲವನ್ನು ಕುಗ್ಗಿಸುತ್ತಿದ್ದಾರೆ
ವಿರೋಧ ಪಕ್ಷದ ಶೇ. 80 ರಷ್ಟು ಭಾಷಣಗಳು ಸಭಾಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿರಲಿಲ್ಲ; ಅವರು ಸರ್ಕಾರದ ವಿರುದ್ಧ ಮಾತನಾಡಲು ಸಭಾಧ್ಯಕ್ಷರನ್ನು ಒಂದು ನೆಪವಾಗಿ ಬಳಸಿಕೊಂಡರು
ಪ್ರಕಟಣಾ ದಿನಾಂಕ:
11 MAR 2026 10:01PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭಾಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದರು. ಚರ್ಚೆಯ ನಂತರ ಲೋಕಸಭೆಯು ಅವಿಶ್ವಾಸ ಗೊತ್ತುವಳಿಯನ್ನು ಧ್ವನಿಮತದ ಮೂಲಕ ತಿರಸ್ಕರಿಸಿತು. ಇದು ಸಾಮಾನ್ಯ ಘಟನೆಯಲ್ಲ ಮತ್ತು ಸುಮಾರು ನಾಲ್ಕು ದಶಕಗಳ ನಂತರ ಲೋಕಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಬಂದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಇದು ಸಂಸದೀಯ ರಾಜಕಾರಣಕ್ಕೆ ಮತ್ತು ಸದನಕ್ಕೆ ಒಂದು ದುರದೃಷ್ಟಕರ ಘಟನೆ ಎಂದು ಅವರು ಹೇಳಿದರು. ಲೋಕಸಭಾಧ್ಯಕ್ಷರು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಸೇರಿದವರಲ್ಲ, ಇಡೀ ಸದನಕ್ಕೆ ಸೇರಿದವರು ಮತ್ತು ಸದನದ ಎಲ್ಲಾ ಸದಸ್ಯರ ಹಕ್ಕುಗಳ ರಕ್ಷಕರಾಗಿದ್ದಾರೆ ಎಂದು ಶ್ರೀ ಶಾ ಹೇಳಿದರು. ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ತರುವುದು ಧೈರ್ಯದ ಕೆಲಸವಲ್ಲ ಎಂದು ಅವರು ತಿಳಿಸಿದರು.

ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಈ ವಿಷಯದ ಬಗ್ಗೆ ಸುಮಾರು 13 ಗಂಟೆಗಳ ಕಾಲ ಚರ್ಚೆ ನಡೆಸಿದ್ದು, 42 ಕ್ಕೂ ಹೆಚ್ಚು ಸಂಸದರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಭಾಧ್ಯಕ್ಷರ ನಿರ್ಧಾರವನ್ನು ಅಂತಿಮ ಎಂದು ಸ್ವೀಕರಿಸುವ ಸುದೀರ್ಘ ಸಂಪ್ರದಾಯಕ್ಕೆ ವಿರುದ್ಧವಾಗಿ ಇಂದು ವಿರೋಧ ಪಕ್ಷವು ಸಭಾಧ್ಯಕ್ಷರ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದು ಅವರು ಹೇಳಿದರು. ಲೋಕಸಭೆಯು ಭಾರತದ ಅತಿದೊಡ್ಡ ಪ್ರಜಾಪ್ರಭುತ್ವ ವೇದಿಕೆಯಾಗಿದೆ ಮತ್ತು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವಿಶ್ವಾಸಾರ್ಹತೆಯನ್ನು ಗಳಿಸಿದೆ, ಜಾಗತಿಕ ಸಮುದಾಯವು ಭಾರತದ ಪ್ರಜಾಪ್ರಭುತ್ವದ ಶಕ್ತಿಯನ್ನು ಗುರುತಿಸಿದೆ ಎಂದು ಅವರು ಹೇಳಿದರು. ಈ ವೇದಿಕೆಯ ಮುಖ್ಯಸ್ಥರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದಾಗ, ಅದು ದೇಶದೊಳಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದರು.
ವಿರೋಧ ಪಕ್ಷದ ಸದಸ್ಯರು ಲೋಕಸಭಾಧ್ಯಕ್ಷರ ಕೊಠಡಿಗೆ ಹೋಗಿ ಒಂದು ರೀತಿಯ ವಾತಾವರಣವನ್ನು ಸೃಷ್ಟಿಸುತ್ತಾರೆ, ಇದು ಅವರ ಭದ್ರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಂವಿಧಾನವು ಸಭಾಧ್ಯಕ್ಷರ ಕಚೇರಿಯನ್ನು ಪಕ್ಷಗಳನ್ನು ಮೀರಿ ಮೇಲೆ ಇರಿಸಿದೆ ಮತ್ತು ತಟಸ್ಥ ಮಧ್ಯಸ್ಥಗಾರನ ಪಾತ್ರವನ್ನು ನೀಡಿದೆ. ಆದಾಗ್ಯೂ, ವಿರೋಧ ಪಕ್ಷವು ಈ ಮಧ್ಯಸ್ಥಗಾರನ ಪಾತ್ರವನ್ನು ನಿರ್ವಹಿಸುವವರ ಬಗ್ಗೆಯೇ ಅನುಮಾನಗಳನ್ನು ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು. 75 ವರ್ಷಗಳಿಂದ ಸಂಸತ್ತಿನ ಉಭಯ ಸದನಗಳು ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಿವೆ ಮತ್ತು ವಿರೋಧ ಪಕ್ಷವು ಈಗ ಆ ಅಡಿಪಾಯದ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನಗಳನ್ನು ವ್ಯಕ್ತಪಡಿಸಿದೆ ಎಂದು ಶ್ರೀ ಶಾ ಹೇಳಿದರು. ಸದನವು ಪರಸ್ಪರ ನಂಬಿಕೆಯ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಸಭಾಧ್ಯಕ್ಷರು ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಸದನದ ಪಾಲಕರಾಗಿದ್ದಾರೆ ಎಂದು ಅವರು ಹೇಳಿದರು. ಲೋಕಸಭೆಯು ತನ್ನ ಕಲಾಪಗಳ ನಿರ್ವಹಣೆಗಾಗಿ ಮತ್ತು ಸಭಾಧ್ಯಕ್ಷರು ಸದನವನ್ನು ಹೇಗೆ ನಡೆಸಬೇಕು ಎಂಬುದಕ್ಕಾಗಿ ಕೆಲವು ನಿಯಮಗಳನ್ನು ರೂಪಿಸಿದೆ. ಸದನವು ಒಂದು ಜಾತ್ರೆಯಲ್ಲ ಅಥವಾ ಕ್ರಮವಿಲ್ಲದ ಸಭೆಯಲ್ಲ ಎಂದು ಅವರು ಒತ್ತಿ ಹೇಳಿದರು. ಸದನದ ನಿಯಮಗಳು ಯಾವುದನ್ನಾದರೂ ಅನುಮತಿಸದಿದ್ದರೆ, ಆ ನಿಯಮಗಳ ವಿರುದ್ಧ ಮಾತನಾಡಲು ಯಾರಿಗೂ ಹಕ್ಕಿಲ್ಲ. ಲೋಕಸಭೆಯ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ನಿಯಮಗಳನ್ನು ನಿರ್ಲಕ್ಷಿಸಿದಾಗ, ಮಧ್ಯಪ್ರವೇಶಿಸುವುದು ಮತ್ತು ಅಂತಹ ನಡವಳಿಕೆಯನ್ನು ನಿಯಂತ್ರಿಸುವುದು ಸಭಾಧ್ಯಕ್ಷರ ಪವಿತ್ರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ದೇಶದ ಮೊದಲ ಪ್ರಧಾನ ಮಂತ್ರಿಯವರ ಕಾಲದಿಂದಲೂ ಈ ನಿಯಮಗಳು ಜಾರಿಯಲ್ಲಿವೆ, ಆದರೆ ಮುಖ್ಯ ವಿರೋಧ ಪಕ್ಷವು ಹಲವಾರು ಸಂದರ್ಭಗಳಲ್ಲಿ ಈ ನಿಯಮಗಳನ್ನು ಮುರಿದಿದೆ ಎಂದು ಅವರು ಹೇಳಿದರು. ಸಭಾಧ್ಯಕ್ಷರ ನಿರ್ಧಾರಗಳು ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸಬಾರದು ಮತ್ತು ಹಾಗೆ ಮಾಡುವುದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ ಎಂದು ಶ್ರೀ ಶಾ ಹೇಳಿದರು.
ತಮ್ಮ ಪಕ್ಷವೂ ವಿರೋಧ ಪಕ್ಷದಲ್ಲಿತ್ತು ಮತ್ತು ಆ ಅವಧಿಯಲ್ಲಿ ಸಭಾಧ್ಯಕ್ಷರ ವಿರುದ್ಧ ಮೂರು ಬಾರಿ ಅವಿಶ್ವಾಸ ನಿರ್ಣಯ ತರಲಾಗಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಆದಾಗ್ಯೂ, ತಮ್ಮ ಪಕ್ಷವಾಗಲಿ ಅಥವಾ ಅದರ ಮೈತ್ರಿಕೂಟವಾಗಲಿ ಸಭಾಧ್ಯಕ್ಷರ ವಿರುದ್ಧ ಎಂದಿಗೂ ಅವಿಶ್ವಾಸ ನಿರ್ಣಯವನ್ನು ಮಂಡಿಸಿರಲಿಲ್ಲ ಎಂದು ಅವರು ಹೇಳಿದರು. ಅವುಗಳು ಯಾವಾಗಲೂ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಿವೆ, ಸಭಾಧ್ಯಕ್ಷರ ಘನತೆಯನ್ನು ರಕ್ಷಿಸಿವೆ ಮತ್ತು ಸಭಾಧ್ಯಕ್ಷರ ಮೂಲಕ ತಮ್ಮ ಕಾನೂನುಬದ್ಧ ಹಕ್ಕುಗಳ ರಕ್ಷಣೆಯನ್ನು ಕೋರಿವೆ ಎಂದು ಶ್ರೀ ಶಾ ಹೇಳಿದರು. ಸಭಾಧ್ಯಕ್ಷರ ವಿರುದ್ಧ ಅವುಗಳು ಎಂದಿಗೂ ಅವಿಶ್ವಾಸ ನಿರ್ಣಯ ತಂದಿಲ್ಲ ಎಂದು ಅವರು ತಿಳಿಸಿದರು.
1954 ರಲ್ಲಿ ಸೋಶಿಯಲಿಸ್ಟ್ ಪಕ್ಷವು ಜಿ.ವಿ. ಮಾವಲಂಕರ್ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಂದಿತು. 1966 ರಲ್ಲಿ ಸಂಯುಕ್ತ ಸೋಶಿಯಲಿಸ್ಟ್ ಪಕ್ಷವು ಆಗಿನ ಲೋಕಸಭಾಧ್ಯಕ್ಷ ಸರ್ದಾರ್ ಹುಕಾಮ್ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿತು ಮತ್ತು 1987 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಬಲರಾಮ್ ಜಾಖಡ್ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಂದಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಎಲ್ಲಾ ಪಕ್ಷಗಳು ಇಂದು ಹೆಚ್ಚು ಕಡಿಮೆ ಪ್ರಸ್ತುತ ವಿರೋಧ ಪಕ್ಷದ ಮೈತ್ರಿಕೂಟದ ಸದಸ್ಯರಾಗಿವೆ ಎಂದು ಅವರು ಹೇಳಿದರು. ಸಭಾಧ್ಯಕ್ಷರ ಪ್ರಾಮಾಣಿಕತೆಯನ್ನು ಎಂದಿಗೂ ಪ್ರಶ್ನಿಸಬಾರದು ಎಂದು ತಮ್ಮ ಪಕ್ಷವು ಬಲವಾಗಿ ನಂಬುತ್ತದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ಸಭಾಧ್ಯಕ್ಷರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಲೋಕಸಭಾಧ್ಯಕ್ಷರು ಶಾಸಕಾಂಗ ನ್ಯಾಯಶಾಸ್ತ್ರದಲ್ಲಿ ಅತ್ಯುನ್ನತ ತೀರ್ಪುಗಾರರಾಗಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತದ ಸರ್ವೋಚ್ಚ ನ್ಯಾಯಾಲಯವು ಸಹ ಲೋಕಸಭೆಯ ಕಲಾಪಗಳ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಏಕೆಂದರೆ ಸಂವಿಧಾನವು ಸಭಾಧ್ಯಕ್ಷರಿಗೆ ಈ ರಕ್ಷಣೆಯನ್ನು ನೀಡಿದೆ. ಸಭಾಧ್ಯಕ್ಷರು ಭಯವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಈ ರಕ್ಷಣೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಸಭಾಧ್ಯಕ್ಷರ ಮೊದಲ ಕರ್ತವ್ಯವೆಂದರೆ ಸದನದ ಕ್ರಮ ಮತ್ತು ಘನತೆಯನ್ನು ಕಾಪಾಡುವುದು ಮತ್ತು ಎರಡನೇ ಕರ್ತವ್ಯವೆಂದರೆ ಎಲ್ಲಾ ಸದಸ್ಯರಿಗೆ ಅವಕಾಶಗಳನ್ನು ಒದಗಿಸುವುದು ಮತ್ತು ನ್ಯಾಯಯುತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳುವುದು. ಲೋಕಸಭೆಯು ತನ್ನ ಕಲಾಪಗಳನ್ನು ನಡೆಸಲು ರೂಪಿಸಲಾದ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುವುದು ಸಂಸದೀಯ ಘನತೆಯ ವಿಷಯವಾಗಿದೆ ಎಂದು ಅವರು ಹೇಳಿದರು.
ಲೋಕಸಭೆಯ ನಿಯಮ 374 ರ ಅಡಿಯಲ್ಲಿ, ಅವ್ಯವಸ್ಥೆ ಅಥವಾ ಅಶಿಸ್ತಿನ ಸಂದರ್ಭಗಳಲ್ಲಿ, ಸದಸ್ಯರನ್ನು ಎಚ್ಚರಿಸಲು, ಹೆಸರಿಸಲು, ಉಚ್ಚಾಟಿಸಲು ಮತ್ತು ಅಮಾನತುಗೊಳಿಸಲು ಸಭಾಧ್ಯಕ್ಷರಿಗೆ ಅಧಿಕಾರವಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸದನದೊಳಗೆ ಪ್ರತಿಭಟನೆ ಮಾಡಲು ಅಥವಾ ಚಳವಳಿಗಾರರಂತೆ ವರ್ತಿಸಲು ಬಯಸುವವರು ಸದನದ ನಿಯಮಗಳ ಪ್ರಕಾರ ನಡೆದುಕೊಳ್ಳಬೇಕು ಎಂದು ಶ್ರೀ ಶಾ ಹೇಳಿದರು. ನಿಯಮ 375 ರ ಅಡಿಯಲ್ಲಿ, ಗಂಭೀರ ಅವ್ಯವಸ್ಥೆಯ ಸಂದರ್ಭದಲ್ಲಿ, ಸದನದ ಕಲಾಪಗಳನ್ನು ಮುಂದೂಡಬೇಕಾಗುತ್ತದೆ ಎಂದು ಅವರು ಹೇಳಿದರು. ನಿಯಮ 380 ರ ಅಡಿಯಲ್ಲಿ, ಕಲಾಪಗಳಿಂದ ಸಂಸದೀಯವಲ್ಲದ ಪದಗಳು ಮತ್ತು ಟೀಕೆಗಳನ್ನು ತೆಗೆದುಹಾಕುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ ಎಂದು ಅವರು ಹೇಳಿದರು. ನಿರ್ದಿಷ್ಟ ಧಾಟಿ ಅಥವಾ ಸಂದರ್ಭದಲ್ಲಿ ಮಾಡಿದ ಅಸಂಸದೀಯ ಟೀಕೆಗಳನ್ನು ಸಂಸತ್ತಿನ ಇತಿಹಾಸದಲ್ಲಿ ಉಳಿಸಬಾರದು, ಏಕೆಂದರೆ ಹಾಗೆ ಮಾಡುವುದರಿಂದ ಭವಿಷ್ಯದ ಸಂಸದರು ಅದೇ ನಡವಳಿಕೆಯನ್ನು ಅಳವಡಿಸಿಕೊಳ್ಳಲು ಕಾರಣವಾಗಬಹುದು ಎಂದು ಅವರು ಹೇಳಿದರು. ಅಸಂಸದೀಯ ಪದಗಳ ಪಟ್ಟಿಯನ್ನು ಸದನ ಸ್ಥಾಪನೆಯಾದಾಗಿನಿಂದ ಈ ಕಚೇರಿಯನ್ನು ಅಲಂಕರಿಸಿದ ಅನೇಕ ಗಣ್ಯ ವ್ಯಕ್ತಿಗಳು ಕಾಲಾನಂತರದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಮತ್ತು ಇದು ಎಲ್ಲರಿಗೂ ಬದ್ಧವಾಗಿದೆ ಎಂದು ಅವರು ಹೇಳಿದರು. ಸಂವಿಧಾನವು ವಿರೋಧ ಪಕ್ಷಕ್ಕೆ ಕೆಲವು ಹಕ್ಕುಗಳನ್ನು ನೀಡಿದೆ, ಆದರೆ ಅದು ಅವರಿಗೆ ಯಾವುದೇ ಸವಲತ್ತುಗಳನ್ನು ನೀಡಿಲ್ಲ. ಹಕ್ಕುಗಳನ್ನು ರಕ್ಷಿಸಬಹುದಾದರೂ, ಸವಲತ್ತುಗಳ ಭ್ರಮೆಯಲ್ಲಿ ಬದುಕುವವರು ತಮ್ಮ ಪಕ್ಷದಿಂದ ಅಥವಾ ಸಾರ್ವಜನಿಕರಿಂದ ರಕ್ಷಣೆಯನ್ನು ಪಡೆಯುವುದಿಲ್ಲ ಎಂದು ಅವರು ಹೇಳಿದರು.
ಲೋಕಸಭಾಧ್ಯಕ್ಷರ ಪ್ರಾಮುಖ್ಯತೆಯು ಸದನಕ್ಕೆ, ರಾಷ್ಟ್ರಕ್ಕೆ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಭಾಧ್ಯಕ್ಷರು ಕೇವಲ ಪೀಠಾಧ್ಯಕ್ಷರಲ್ಲ, ನಮ್ಮ ಶಾಸಕಾಂಗ ಪ್ರಜ್ಞೆ ಮತ್ತು ಪ್ರಜಾಪ್ರಭುತ್ವದ ಘನತೆಯ ಸಂಕೇತ ಎಂದು ಅವರು ಹೇಳಿದರು. ಸಭಾಧ್ಯಕ್ಷರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದಾಗ, ಅದು ಶಾಸಕಾಂಗ ಪ್ರಜ್ಞೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಪ್ರಶ್ನಿಸಿದಂತಾಗುತ್ತದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿಯನ್ನು ತೆಗೆದುಹಾಕುವ ನಿರ್ಣಯವನ್ನು ಸದನದಲ್ಲಿ ತರಬಹುದು, ಆದರೆ ಲೋಕಸಭೆಯ ಪಾಲಕರನ್ನು ಪದಚ್ಯುತಗೊಳಿಸುವ ಪ್ರಸ್ತಾಪವನ್ನು ತರುವುದನ್ನು ಧೈರ್ಯದ ಕೆಲಸ ಎಂದು ಪರಿಗಣಿಸಬಾರದು ಎಂದು ಅವರು ಹೇಳಿದರು. ಸಂವಿಧಾನವು ತೀವ್ರತರವಾದ ಸಂದರ್ಭಗಳನ್ನು ಕಲ್ಪಿಸಿಕೊಂಡು ನಿಬಂಧನೆಗಳನ್ನು ಮಾಡಿದೆ. ಸಭಾಧ್ಯಕ್ಷರನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪದಚ್ಯುತಗೊಳಿಸಲು ಈ ನಿಬಂಧನೆಯನ್ನು ಮಾಡಲಾಗಿದೆಯೇ ಹೊರತು, ಇದು ವಾಡಿಕೆಯ ವಿಷಯವಾಗಬಾರದು ಎಂದು ಅವರು ಹೇಳಿದರು.
ಸಂವಿಧಾನದ 96 ನೇ ವಿಧಿಯ ಅಡಿಯಲ್ಲಿ, ಸಭಾಧ್ಯಕ್ಷರ ಪದಚ್ಯುತಿಗಾಗಿ ನಿರ್ಣಯವು ಪರಿಗಣನೆಯಲ್ಲಿರುವಾಗ, ಸಂಬಂಧಿತ ಸಭಾಧ್ಯಕ್ಷರು ಸದನದ ಅಧ್ಯಕ್ಷತೆಯನ್ನು ವಹಿಸಬಾರದು ಎಂದು ಶ್ರೀ ಅಮಿತ್ ಶಾ ಹೇಳಿದರು. ಮುಖ್ಯ ವಿರೋಧ ಪಕ್ಷವು ಅಧಿಕಾರದಲ್ಲಿದ್ದಾಗ ಮೂರು ಬಾರಿ ಅವಿಶ್ವಾಸ ನಿರ್ಣಯಗಳನ್ನು ತರಲಾಗಿತ್ತು ಮತ್ತು ಸಭಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಯುವಾಗ ಸಭಾಧ್ಯಕ್ಷರು ಪೀಠವನ್ನು ಅಲಂಕರಿಸಬಾರದು ಎಂಬುದು ಆ ಮೂರೂ ಸಂದರ್ಭಗಳಲ್ಲಿ ಸಂಪ್ರದಾಯವಾಗಿತ್ತು. ಆದಾಗ್ಯೂ, ಆ ಮೂರೂ ಪ್ರಕರಣಗಳಲ್ಲಿ ಸಭಾಧ್ಯಕ್ಷರು 14 ದಿನಗಳ ಕಾಲ ಅಧ್ಯಕ್ಷತೆ ವಹಿಸುವುದನ್ನು ಮುಂದುವರೆಸಿದ್ದರು ಎಂದು ಅವರು ಹೇಳಿದರು. ನೈತಿಕ ಆಧಾರದ ಮೇಲೆ ಕಲಾಪಗಳ ಅಧ್ಯಕ್ಷತೆ ವಹಿಸದಿರಲು ನಿರ್ಧಾರ ಮಾಡಿದ ಏಕೈಕ ಸಭಾಧ್ಯಕ್ಷರು ಶ್ರೀ ಓಂ ಬಿರ್ಲಾ ಎಂದು ಅವರು ಹೇಳಿದರು. ನಿಯಮ 94-ಸಿ ಅಡಿಯಲ್ಲಿ, ಲೋಕಸಭಾಧ್ಯಕ್ಷರನ್ನು ಅಸಾಧಾರಣ ಮತ್ತು ಗಂಭೀರ ಸಂದರ್ಭಗಳಲ್ಲಿ ಮಾತ್ರ ತೆಗೆದುಹಾಕಬಹುದು ಎಂದು ಅವರು ಹೇಳಿದರು. ಪ್ರಧಾನ ಮಂತ್ರಿಯನ್ನು ಪದಚ್ಯುತಗೊಳಿಸಲು ಕೇವಲ ಸರಳ ಬಹುಮತದ ಅಗತ್ಯವಿದೆ, ಆದರೆ ಸಭಾಧ್ಯಕ್ಷರನ್ನು ಪದಚ್ಯುತಗೊಳಿಸಲು ಪರಿಣಾಮಕಾರಿ ಬಹುಮತದ ಅಗತ್ಯವಿದೆ ಎಂದು ಶ್ರೀ ಶಾ ಹೇಳಿದರು.
ಸದನವು ಯಾವುದೇ ನಿರ್ದಿಷ್ಟ ಪಕ್ಷದ ನಿಯಮಗಳ ಪ್ರಕಾರ ನಡೆಯುವುದಿಲ್ಲ, ಆದರೆ ಕಟ್ಟುನಿಟ್ಟಾಗಿ ಲೋಕಸಭೆಯ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ವಿರೋಧ ಪಕ್ಷವು ಹೆಚ್ಚಾಗಿ "ಉನ್ನತ ನೈತಿಕ ನೆಲೆ" ಬಗ್ಗೆ ಮಾತನಾಡುತ್ತದೆ, ಆದರೆ ಅವಿಶ್ವಾಸ ನಿರ್ಣಯವು ಎರಡು ಬಾರಿ ನಿಯಮಗಳ ಪ್ರಕಾರ ಸಲ್ಲಿಸದಿದ್ದರೂ ಸಹ ವಿರೋಧ ಪಕ್ಷಕ್ಕೆ ತಮ್ಮ ನೋಟಿಸ್ ಅನ್ನು ಸರಿಪಡಿಸಲು ಅವಕಾಶ ನೀಡಿದಾಗ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ನಿಜವಾದ ಉನ್ನತ ನೈತಿಕ ನೆಲೆಯನ್ನು ಪ್ರದರ್ಶಿಸಿದರು ಎಂದು ಅವರು ಹೇಳಿದರು. ವಿರೋಧ ಪಕ್ಷವು ನಿಯಮಗಳನ್ನು ಪಾಲಿಸುವುದಿಲ್ಲ ಮತ್ತು ನಂತರ ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿಕೊಳ್ಳುತ್ತದೆ ಎಂದು ಅವರು ಹೇಳಿದರು. ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಕಲಾಪ ಸಲಹಾ ಸಮಿತಿಯ ಒಪ್ಪಿಗೆಯೊಂದಿಗೆ ಪ್ರಸ್ತಾಪವನ್ನು ತಂದಾಗ, ಅದರ ಬಗ್ಗೆ ಚರ್ಚಿಸುವ ಬದಲು ವಿರೋಧ ಪಕ್ಷವು ಸದನದಲ್ಲಿ ಅಡ್ಡಿಪಡಿಸಿತು ಎಂದು ಅವರು ಹೇಳಿದರು. ಇದಕ್ಕಿಂತ ನಾಚಿಕೆಗೇಡಿನ ಘಟನೆ ಇನ್ನೊಂದಿರಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು. ಚರ್ಚೆಯ ಸಮಯದಲ್ಲಿ ವಿರೋಧ ಪಕ್ಷದ ನಾಯಕರು ಮಾಡಿದ 80 ಪ್ರತಿಶತಕ್ಕಿಂತ ಹೆಚ್ಚಿನ ಭಾಷಣಗಳು ಅವಿಶ್ವಾಸ ನಿರ್ಣಯದ ಬಗ್ಗೆ ಇರಲಿಲ್ಲ ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಉಪಸಭಾಧ್ಯಕ್ಷರ ಹುದ್ದೆಯನ್ನು ತುಂಬಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 1966 ರಲ್ಲಿ ಮತ್ತು ನಂತರ ತರಲಾದ ಅವಿಶ್ವಾಸ ನಿರ್ಣಯಗಳ ಸಮಯದಲ್ಲಿ ಬಲರಾಮ್ ಜಾಖಡ್ ಅವರು ಲೋಕಸಭೆಯ ಸಭಾಧ್ಯಕ್ಷರಾಗಿದ್ದರು. ಆ ಎರಡೂ ನಿರ್ಣಯಗಳ ಸಮಯದಲ್ಲಿ ಉಪಸಭಾಧ್ಯಕ್ಷರ ಹುದ್ದೆಯು ಖಾಲಿಯಿರಲಿಲ್ಲ ಮತ್ತು ಉಪಸಭಾಧ್ಯಕ್ಷರು ಇದ್ದರು, ಆದರೆ ಆಗಿನ ಆಡಳಿತ ಪಕ್ಷವು ತನ್ನದೇ ಆದ ನಾಯಕರನ್ನು ಉಪಸಭಾಧ್ಯಕ್ಷರನ್ನಾಗಿ ನೇಮಿಸಿತ್ತು. ಆದ್ದರಿಂದ, ಉಪಸಭಾಧ್ಯಕ್ಷರ ಹುದ್ದೆ ಖಾಲಿಯಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ವಿರೋಧ ಪಕ್ಷಕ್ಕೆ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದರು.
16 ನೇ ಲೋಕಸಭೆಯು 331 ಕಲಾಪಗಳನ್ನು ನಡೆಸಿತು, 17 ನೇ ಲೋಕಸಭೆಯು 274 ಕಲಾಪಗಳನ್ನು ನಡೆಸಿತು ಮತ್ತು ಪ್ರಸ್ತುತ ಲೋಕಸಭೆಯು 2025 ರವರೆಗೆ 103 ಕಲಾಪಗಳನ್ನು ನಡೆಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2025 ರ ಬಜೆಟ್ ಅಧಿವೇಶನವು ಶೇ. 118 ರಷ್ಟು ಉತ್ಪಾದಕತೆಯನ್ನು ದಾಖಲಿಸಿದೆ ಎಂದು ಅವರು ಹೇಳಿದರು. 16 ನೇ ಲೋಕಸಭೆಯ ಉತ್ಪಾದಕತೆ ಶೇ.91, 17 ನೇ ಲೋಕಸಭೆಯಲ್ಲೂ ಶೇ.91 ಇತ್ತು ಮತ್ತು 18 ನೇ ಲೋಕಸಭೆಯು ಸಹ ಶೇ.91 ರಷ್ಟು ಉತ್ಪಾದಕತೆಯನ್ನು ದಾಖಲಿಸಿದೆ, ಪ್ರಸ್ತುತ ಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರ ಅಧಿಕಾರಾವಧಿಯಲ್ಲಿ ಅತಿ ಹೆಚ್ಚು ಉತ್ಪಾದಕತೆ ಸಾಧಿಸಲಾಗಿದೆ ಎಂದು ಅವರು ಹೇಳಿದರು. ಸಭಾಧ್ಯಕ್ಷರು ಶೂನ್ಯ ವೇಳೆಯ ಅವಧಿಯನ್ನು ಐದು ಗಂಟೆಗಳವರೆಗೆ ವಿಸ್ತರಿಸಿದ್ದಾರೆ ಎಂದು ಅವರು ಹೇಳಿದರು. ತಾವು ಶಾಸಕರಾಗಿ ಮತ್ತು ಸಂಸದರಾಗಿ 30 ವರ್ಷಗಳನ್ನು ಪೂರ್ಣಗೊಳಿಸಿದ್ದರೂ, ಮಧ್ಯರಾತ್ರಿಯವರೆಗೆ ಸದಸ್ಯರಿಗೆ ಶೂನ್ಯ ವೇಳೆಯ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ನೀಡುವ ಸಭಾಧ್ಯಕ್ಷರನ್ನು ತಾನು ಎಂದೂ ನೋಡಿರಲಿಲ್ಲ ಎಂದು ಶ್ರೀ ಶಾ ಹೇಳಿದರು. 202 ಸಂಸದರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗಿದ್ದರೂ, ತಮಗೆ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ಸಿಗುತ್ತಿಲ್ಲ ಎಂದು ವಿರೋಧ ಪಕ್ಷವು ಹೇಳಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಹೊಸಬರನ್ನು ಪ್ರೋತ್ಸಾಹಿಸುವುದು ಲೋಕಸಭಾಧ್ಯಕ್ಷರ ನೈತಿಕ ಜವಾಬ್ದಾರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2019 ರಲ್ಲಿ ದಾಖಲೆಯ 78 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದರು ಮತ್ತು ಸಭಾಧ್ಯಕ್ಷರು ಎಲ್ಲಾ ಮಹಿಳಾ ಸಂಸದರಿಗೆ ಮಾತನಾಡಲು ಅವಕಾಶ ನೀಡಲಾಗಿದೆಯೆಂದು ಖಚಿತಪಡಿಸಿದರು ಎಂದು ಅವರು ಹೇಳಿದರು. ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರ ಪ್ರಯತ್ನದಿಂದ ಸದನದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಯೂ ಹೆಚ್ಚಿದೆ, ಇದು ಮಹತ್ವದ ಸಾಧನೆಯಾಗಿದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ ಸದನದಲ್ಲಿ ಭಾಷಾಂತರಕಾರರ ಸಮಿತಿಯನ್ನು ಸಂಪೂರ್ಣವಾಗಿ ರಚಿಸಲಾಗಿದೆ ಎಂದು ಅವರು ಹೇಳಿದರು. ಡಿಜಿಟಲ್ ಪಾರ್ಲಿಮೆಂಟ್ 2.0 ಅಡಿಯಲ್ಲಿ ಸುಮಾರು 8,000 ಗಂಟೆಗಳ ಆಡಿಯೋ-ವಿಶುವಲ್ ರೆಕಾರ್ಡಿಂಗ್ ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇಂದು ಯುವಕರು ಸಂಸದರ ಭಾಷಣಗಳನ್ನು ಅಥವಾ ಸದನದ ಚರ್ಚೆಗಳನ್ನು ಕೇಳಲು ಬಯಸಿದರೆ ಅವರು ಅವುಗಳನ್ನು ಡಿಜಿಟಲ್ ರೂಪದಲ್ಲಿ ವೀಕ್ಷಿಸಬಹುದು ಎಂದು ಶ್ರೀ ಶಾ ಹೇಳಿದರು. ನ್ಯಾಷನಲ್ ಇ-ವಿಧಾನ್ ಅಪ್ಲಿಕೇಶನ್ ಮೂಲಕ ಇಡೀ ಲೋಕಸಭೆಯನ್ನು ಕಾಗದರಹಿತ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಕಾಮನ್‌ವೆಲ್ತ್ ರಾಷ್ಟ್ರಗಳ ಪೀಠಾಧ್ಯಕ್ಷರ 28 ನೇ ಸಮ್ಮೇಳನದಲ್ಲಿ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ನೀಡಿದ ಭಾಷಣವು ಕಾಮನ್‌ವೆಲ್ತ್ ರಾಷ್ಟ್ರಗಳ ಸಂಸತ್ತಿನ ಸಭಾಧ್ಯಕ್ಷರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು, ಇದು ಭಾರತದ ಸಂಸತ್ತಿನ ಪ್ರತಿಷ್ಠೆಯನ್ನು ಹೆಚ್ಚಿಸಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮಸೂದೆಗಳ ಬಗ್ಗೆ ಸಂಸದರಿಗೆ ಅಧಿವೇಶನಕ್ಕೆ ಮುಂಚಿತವಾಗಿ ವಿವರಣೆಯನ್ನು ಪಡೆಯುವ ಅವಕಾಶವನ್ನು ಪರಿಚಯಿಸಿದವರು ಶ್ರೀ ಓಂ ಬಿರ್ಲಾ ಎಂದು ಅವರು ಹೇಳಿದರು. ಬಿರ್ಲಾ ಅವರ ಅವಧಿಯಲ್ಲಿ ನಡೆದ ಅತ್ಯಂತ ಮಹತ್ವದ ಬೆಳವಣಿಗೆಯೆಂದರೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಕಟ್ಟಡದಿಂದ ಸ್ವತಂತ್ರ ಭಾರತದಲ್ಲಿ ನಿರ್ಮಿಸಲಾದ ಹೊಸ ಸಂಸತ್ ಭವನಕ್ಕೆ ಸಂಸತ್ತು ಸ್ಥಳಾಂತರಗೊಂಡಿರುವುದು ಎಂದು ಅವರು ಹೇಳಿದರು. ಈ ಎಲ್ಲಾ ಉಪಕ್ರಮಗಳನ್ನು ಶ್ರೀ ಬಿರ್ಲಾ ಅವರು ಸರ್ವಾನುಮತದ ಬೆಂಬಲದೊಂದಿಗೆ ಕೈಗೊಂಡಿದ್ದಾರೆ ಎಂದು ಶ್ರೀ ಶಾ ಹೇಳಿದರು.
ತಮ್ಮ ಪಕ್ಷದ ಇಮೇಜ್ ಹಾಳುಮಾಡಲು ದೇಶಾದ್ಯಂತ ತಪ್ಪು ಮಾಹಿತಿಯ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂತಹ ಪ್ರಯತ್ನಗಳನ್ನು ಮಾಡುತ್ತಿರುವವರು ಅಂತಹ ಪ್ರಯತ್ನಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಸದನದಲ್ಲಿ ಯಾರು ಮಾತನಾಡಬೇಕು, ಎಷ್ಟು ಮಾತನಾಡಬೇಕು, ಯಾವಾಗ ಮಾತನಾಡಬೇಕು ಅಥವಾ ಏಕೆ ಮಾತನಾಡಬೇಕು ಎಂಬುದನ್ನು ಆಡಳಿತ ಪಕ್ಷವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ತಮ್ಮ ಪಕ್ಷವು ಎಂದಿಗೂ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿಲ್ಲ, ಆದರೆ ತಮ್ಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಶ್ರೀ ಶಾ ಹೇಳಿದರು.
ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಘಟನೆ 1975 ರಲ್ಲಿ ನಡೆದಿತ್ತು, ಅಂದು ಭಾರತದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಡೀ ವಿರೋಧ ಪಕ್ಷವನ್ನು ಜೈಲಿನಲ್ಲಿರಿಸಲಾಗಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಸದನವನ್ನು ನಿಯಮಗಳ ಪ್ರಕಾರ ನಡೆಸುವುದು ಸಭಾಧ್ಯಕ್ಷರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಲೋಕಸಭೆಯ ನಿಯಮ 349 ಸದನದಲ್ಲಿ ಸದಸ್ಯರಿಂದ ನಿರೀಕ್ಷಿಸಲಾದ ಒಟ್ಟಾರೆ ನಡವಳಿಕೆಯನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದರು. 17 ನೇ ಲೋಕಸಭೆಯಲ್ಲಿ ವಿರೋಧ ಪಕ್ಷವು 52 ಸದಸ್ಯರನ್ನು ಹೊಂದಿದ್ದರೂ ಅವರಿಗೆ 157 ಗಂಟೆ 55 ನಿಮಿಷಗಳ ಮಾತನಾಡುವ ಸಮಯವನ್ನು ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ, ತಮ್ಮ ಪಕ್ಷವು 303 ಸದಸ್ಯರ ಬಲವನ್ನು ಹೊಂದಿದ್ದರೂ 349 ಗಂಟೆ 8 ನಿಮಿಷಗಳನ್ನು ನೀಡಲಾಗಿತ್ತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅಂಕಿಅಂಶಗಳನ್ನು ಗಮನಿಸಿದರೆ ಲೋಕಸಭಾಧ್ಯಕ್ಷರು ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷಕ್ಕೆ ಹೆಚ್ಚಿನ ಮಾತನಾಡುವ ಸಮಯವನ್ನು ನೀಡಿದ್ದಾರೆ ಎಂದು ಶ್ರೀ ಶಾ ಹೇಳಿದರು.
18 ನೇ ಲೋಕಸಭೆಯಲ್ಲಿ ಮುಖ್ಯ ವಿರೋಧ ಪಕ್ಷವು 99 ಸದಸ್ಯರನ್ನು ಹೊಂದಿದ್ದರೂ ನಿನ್ನೆಯವರೆಗೆ 71 ಗಂಟೆಗಳ ಕಾಲ ಮಾತನಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಕ್ಕೆ ಹೋಲಿಸಿದರೆ ಆಡಳಿತ ಪಕ್ಷವು 239 ಸದಸ್ಯರನ್ನು ಹೊಂದಿದ್ದರೂ 193 ಗಂಟೆಗಳ ಮಾತನಾಡುವ ಸಮಯವನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಒಂದು ರೀತಿಯಲ್ಲಿ 18 ನೇ ಲೋಕಸಭೆಯಲ್ಲೂ ವಿರೋಧ ಪಕ್ಷವು ಪ್ರತಿ ಸದಸ್ಯನಿಗೆ ಆಡಳಿತ ಪಕ್ಷಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಮಾತನಾಡುವ ಸಮಯವನ್ನು ಪಡೆದಿದೆ. ಆದರೂ ವಿರೋಧ ಪಕ್ಷದ ನಾಯಕರು ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಮತ್ತು ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ದೂರುತ್ತಲೇ ಇದ್ದಾರೆ ಎಂದು ಶ್ರೀ ಶಾ ಹೇಳಿದರು. ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ ಅವರು ವಿದೇಶ ಪ್ರವಾಸದಲ್ಲಿರುತ್ತಾರೆ ಎಂದು ಶ್ರೀ ಶಾ ಹೇಳಿದರು.
ವಿರೋಧ ಪಕ್ಷದ ನಾಯಕರ ಮಾತನಾಡುವ ಸರದಿ ಬಂದಾಗಲೆಲ್ಲಾ ಅವರು ಹೆಚ್ಚಾಗಿ ಜರ್ಮನಿ, ವಿಯೆಟ್ನಾಂ, ಯುನೈಟೆಡ್ ಕಿಂಗ್‌ಡಮ್, ಮಲೇಷ್ಯಾ ಅಥವಾ ಸಿಂಗಾಪುರದಲ್ಲಿರುತ್ತಾರೆ ಮತ್ತು ನಂತರ ದೂರು ನೀಡುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಿರೋಧ ಪಕ್ಷದ ನಾಯಕನ ಸರದಿ ಬಂದಾಗ ಅವರು ಏಕೆ ಮಾತನಾಡಲಿಲ್ಲ ಎಂದು ತಾನು ಕೇಳಲು ಬಯಸುತ್ತೇನೆ, ಅವರನ್ನು ಸಭಾಧ್ಯಕ್ಷರು ಮಾತನಾಡದಂತೆ ತಡೆದಿದ್ದಾರೆಯೇ? ಲೋಕಸಭೆಯನ್ನು ದೂಷಿಸಲು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 18 ನೇ ಲೋಕಸಭೆಯಲ್ಲಿ ವಿರೋಧ ಪಕ್ಷಕ್ಕೆ ಮಾತನಾಡಲು 71 ಗಂಟೆಗಳನ್ನು ನೀಡಲಾಗಿತ್ತು, ಆದರೆ ಈ ಸಮಯದಲ್ಲಿ ವಿರೋಧ ಪಕ್ಷದ ನಾಯಕರು ವಾಸ್ತವವಾಗಿ ಎಷ್ಟು ಸಮಯ ಮಾತನಾಡಿದರು ಎಂದು ಅವರು ಪ್ರಶ್ನಿಸಿದರು. ಲೋಕಸಭಾಧ್ಯಕ್ಷರ ವಿರುದ್ಧ ತಂದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲೂ ವಿರೋಧ ಪಕ್ಷದ ನಾಯಕರು ಮಾತನಾಡಲಿಲ್ಲ, ಒಂದು ವೇಳೆ ಅವರ ಬಳಿ ಹೇಳಲು ಏನೂ ಇಲ್ಲದಿದ್ದರೆ ಅಂತಹ ಗೊತ್ತುವಳಿಯನ್ನು ಏಕೆ ತರಲಾಯಿತು ಎಂದು ಶ್ರೀ ಶಾ ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬುದು ತಪ್ಪು, ಬದಲಿಗೆ ಸತ್ಯವೇನೆಂದರೆ ಅವರು ಮಾತನಾಡಲು ಇಷ್ಟಪಡುವುದಿಲ್ಲ. ಒಂದು ವೇಳೆ ಅವರಿಗೆ ಮಾತನಾಡಲು ಇಷ್ಟವಿದ್ದರೂ ಸದನದ ನಿಯಮಗಳ ಪ್ರಕಾರ ಹೇಗೆ ಮಾತನಾಡಬೇಕೆಂದು ಅವರಿಗೆ ತಿಳಿದಿಲ್ಲ ಎಂದು ಶ್ರೀ ಶಾ ಹೇಳಿದರು. ಲೋಕಸಭೆಯು ಬಹಿರಂಗ ಸಭೆಯಲ್ಲ; ಪ್ರತಿಯೊಬ್ಬ ಸದಸ್ಯನೂ ಸದನದ ನಿಯಮಗಳ ಪ್ರಕಾರ ಮಾತನಾಡಬೇಕು ಎಂದು ಶ್ರೀ ಶಾ ಹೇಳಿದರು.
ವಿರೋಧ ಪಕ್ಷದ ನಾಯಕರನ್ನು ಸುಮಾರು 40 ಬಾರಿ ಮಾತನಾಡದಂತೆ ತಡೆಯಲಾಗಿದೆ ಎಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಲೋಕಸಭಾಧ್ಯಕ್ಷರು ತಡೆದಿದ್ದರೂ ವಿರೋಧ ಪಕ್ಷದ ನಾಯಕರು ಅದೇ ವಿಷಯವನ್ನು ಪದೇ ಪದೇ ಪುನರಾವರ್ತಿಸುತ್ತಿರುವಾಗ ಸಭಾಧ್ಯಕ್ಷರಿಗೆ ಬೇರೆ ಆಯ್ಕೆಯಿರುವುದಿಲ್ಲ ಎಂದು ಅವರು ಹೇಳಿದರು. ಪ್ರಕಟವಾಗದ ಯಾವುದೇ ಪುಸ್ತಕ ಅಥವಾ ನಿಯತಕಾಲಿಕವನ್ನು ಸದನದಲ್ಲಿ ಉಲ್ಲೇಖಿಸಲು ಯಾವುದೇ ಸದಸ್ಯರಿಗೆ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಸದಸ್ಯರೊಬ್ಬರು ಅದೇ ವಿಷಯದ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರೆ ಸಭಾಧ್ಯಕ್ಷರು ಹಸ್ತಕ್ಷೇಪ ಮಾಡಲು ಮತ್ತು ಅವರನ್ನು ತಡೆಯಬೇಕಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಮುಖ್ಯ ವಿರೋಧ ಪಕ್ಷದ ನಾಯಕರು ಸುಳ್ಳಿನಿಂದ ಕೂಡಿದ ಪತ್ರಿಕಾಗೋಷ್ಠಿಯ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದಿರುವ ಮೂಲಕ ಶ್ರೀ ಓಂ ಬಿರ್ಲಾ ಅವರು ದಶಕಗಳ ಹಳೆಯ ಸಂಸದೀಯ ಸಂಪ್ರದಾಯವನ್ನು ಎತ್ತಿಹಿಡಿದಿದ್ದಾರೆ ಎಂದು ಶ್ರೀ ಶಾ ಹೇಳಿದರು.
17 ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ಅನುಪಾತದ ಪಾಲು ಕೇವಲ ಶೇ.3 ಇದ್ದರೂ ಅವರಿಗೆ ಶೇ.40 ರಷ್ಟು ಮಾತನಾಡುವ ಸಮಯವನ್ನು ನೀಡಲಾಗಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ವಂದನಾ ನಿರ್ಣಯದ ಚರ್ಚೆಯ ಸಮಯದಲ್ಲಿ ವಿರೋಧ ಪಕ್ಷಕ್ಕೆ ಶೇ.34 ರಷ್ಟು ಸಮಯವನ್ನು ನೀಡಲಾಗಿತ್ತು ಮತ್ತು 18 ನೇ ಲೋಕಸಭೆಯಲ್ಲಿ ಅವರಿಗೆ ಶೇ.55 ರಷ್ಟು ಸಮಯವನ್ನು ನೀಡಲಾಗಿದೆ. ಇಷ್ಟಿದ್ದರೂ ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಯಾರಾದರೂ ಹೇಗೆ ಹೇಳಬಹುದು ಎಂದು ಅವರು ಪ್ರಶ್ನಿಸಿದರು. ಮಾತನಾಡುವ ಹಕ್ಕು ಪಕ್ಷದ ನಾಯಕನಿಗೆ ಇರುತ್ತದೆ. ನಾಯಕನೇ ಮಾತನಾಡಲು ಇಷ್ಟಪಡದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅವಿಶ್ವಾಸ ನಿರ್ಣಯದ ಚರ್ಚೆಯಲ್ಲೂ ವಿರೋಧ ಪಕ್ಷದ ನಾಯಕರು ಮಾತನಾಡಬಹುದಿತ್ತು, ಆದರೆ ಮಾತನಾಡುವುದನ್ನು ನಿಯಮಗಳ ಪ್ರಕಾರ ಮಾಡಬೇಕು. ನಿಯಮಗಳನ್ನು ಮುರಿಯುವ ಮೂಲಕ ಮಾತನಾಡಲು ಯಾರಿಗೂ ಅವಕಾಶವಿಲ್ಲ ಎಂದು ಅವರು ಹೇಳಿದರು.
17 ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಹಾಜರಾತಿಯು ಶೇ.51 ಆಗಿತ್ತು, ಆದರೆ ರಾಷ್ಟ್ರದ ಸರಾಸರಿ ಶೇ.79 ಆಗಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 16 ನೇ ಲೋಕಸಭೆಯಲ್ಲಿ ರಾಷ್ಟ್ರೀಯ ಸರಾಸರಿಯಾದ ಶೇ.80 ಕ್ಕೆ ಹೋಲಿಸಿದರೆ ಇದು ಶೇ.52 ಆಗಿತ್ತು ಮತ್ತು 15 ನೇ ಲೋಕಸಭೆಯಲ್ಲಿ ರಾಷ್ಟ್ರೀಯ ಸರಾಸರಿ ಶೇ.76 ಕ್ಕೆ ಹೋಲಿಸಿದರೆ ಇದು ಶೇ.43 ಆಗಿತ್ತು ಎಂದು ಅವರು ಹೇಳಿದರು. ಈ ಎಲ್ಲಾ ಅಂಕಿಅಂಶಗಳು ದಾಖಲೆಯಲ್ಲಿವೆ ಎಂದು ಶ್ರೀ ಶಾ ಹೇಳಿದರು. 16 ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ ಒಮ್ಮೆಯೂ ಭಾಗವಹಿಸಿರಲಿಲ್ಲ ಎಂದು ಶ್ರೀ ಶಾ ಹೇಳಿದರು. ಅವರು ಬಜೆಟ್ ಚರ್ಚೆಯಲ್ಲಿ ಒಮ್ಮೆಯೂ ಭಾಗವಹಿಸಲಿಲ್ಲ, ಅಥವಾ ಸರ್ಕಾರಿ ಮಸೂದೆಗಳ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ. 2018, 2019, 2020 ಮತ್ತು 2021 ರಲ್ಲಿ ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಅವರು ಹೇಳಿದರು. ಒಂದು ಮಸೂದೆಯನ್ನು ಹೊರತುಪಡಿಸಿ ಅವರು ವಿದೇಶಾಂಗ ನೀತಿಯ ಚರ್ಚೆಗಳಲ್ಲಿ ಭಾಗವಹಿಸಲಿಲ್ಲ ಎಂದು ಅವರು ಹೇಳಿದರು. ಭೂಸ್ವಾಧೀನ ಮಸೂದೆ, 122 ನೇ ಸಂವಿಧಾನ ತಿದ್ದುಪಡಿ, ಆಧಾರ್ ಕಾಯ್ದೆ 2016, ತ್ರಿವಳಿ ತಲಾಖ್ ಗೆ ಸಂಬಂಧಿಸಿದ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019, ಸಂವಿಧಾನದ 370 ನೇ ವಿಧಿಯ ರದ್ದತಿ, ಪೌರತ್ವ (ತಿದ್ದುಪಡಿ) ಕಾಯ್ದೆ 2019, ಭಾರತೀಯ ನ್ಯಾಯ ಸಂಹಿತೆ, ತೆರಿಗೆ ಸುಧಾರಣೆಗಳು, ಹಣಕಾಸು ಮಸೂದೆ 2024, ವಕ್ಫ್ ತಿದ್ದುಪಡಿ ಮಸೂದೆ, ವಂದೇ ಮಾತರಂನ 150 ನೇ ವಾರ್ಷಿಕೋತ್ಸವ ಮತ್ತು ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನಾ ನಿರ್ಣಯ ಸೇರಿದಂತೆ ಹಲವಾರು ಪ್ರಮುಖ ವಿಷಯಗಳು ಮತ್ತು ಮಸೂದೆಗಳ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಭಾಗವಹಿಸಲಿಲ್ಲ ಎಂದು ಅವರು ಹೇಳಿದರು. ಈ ಯಾವುದೇ ಚರ್ಚೆಗಳಲ್ಲಿ ವಿರೋಧ ಪಕ್ಷದ ನಾಯಕರು ಭಾಗವಹಿಸಲಿಲ್ಲ ಎಂದು ಅವರು ಹೇಳಿದರು.
ವಿರೋಧ ಪಕ್ಷದ ನಾಯಕರು ಅವರ ಪಕ್ಷದ ಹಿರಿಯ ನಾಯಕರಾಗಿದ್ದಾರೆ ಮತ್ತು ಪಕ್ಷದ ಪ್ರಚಾರಕ್ಕಾಗಿ ಅವರು ಎಲ್ಲೋ ಹೋಗಿರಬಹುದು ಅದು ಸಾರ್ವಜನಿಕ ಜೀವನದಲ್ಲಿ ಸಹಜ, ಏಕೆಂದರೆ ಲೋಕಸಭೆಯ ಅಧಿವೇಶನವಿರುವಾಗ ಪ್ರಮುಖ ಪಕ್ಷದ ಕಾರ್ಯಕ್ರಮಗಳಿರುತ್ತವೆ ಮತ್ತು ಚುನಾವಣೆಗಳ ಸಮಯದಲ್ಲಿ ಹಿರಿಯ ನಾಯಕರು ಪ್ರಚಾರಕ್ಕಾಗಿ ಹೊರಗೆ ಹೋಗಬೇಕಾಗುತ್ತದೆ—ಅದರಲ್ಲಿ ತಪ್ಪೇನಿದೆ? ಎಂದು ಶ್ರೀ ಅಮಿತ್ ಶಾ ಹೇಳಿದರು. ಆದಾಗ್ಯೂ ಪ್ರಶ್ನೆಯೆಂದರೆ ಅವರು ಸದನದಲ್ಲಿ ಇಲ್ಲದಿದ್ದಾಗ ಎಲ್ಲಿರುತ್ತಿದ್ದರು? 2017 ರ ಚಳಿಗಾಲದ ಅಧಿವೇಶನದಲ್ಲಿ ಅವರು ಜರ್ಮನಿ ಪ್ರವಾಸದಲ್ಲಿದ್ದರು; 2025 ರ ಬಜೆಟ್ ಅಧಿವೇಶನದಲ್ಲಿ ಅವರು ವಿಯೆಟ್ನಾಂ ಭೇಟಿಯಲ್ಲಿದ್ದರು; ಮತ್ತು 2023 ರ ಬಜೆಟ್ ಅಧಿವೇಶನದಲ್ಲಿ ಅವರು ಯುನೈಟೆಡ್ ಕಿಂಗ್‌ಡಮ್ ನಲ್ಲಿದ್ದರು. 2018 ರ ಬಜೆಟ್ ಅಧಿವೇಶನದಲ್ಲಿ ಅವರು ಸಿಂಗಾಪುರ ಮತ್ತು ಮಲೇಷ್ಯಾದಲ್ಲಿದ್ದರು; 2020 ರ ಮುಂಗಾರು ಅಧಿವೇಶನ ಮತ್ತು 2015 ರ ಬಜೆಟ್ ಅಧಿವೇಶನದಲ್ಲಿ ಅವರು ವಿದೇಶ ಪ್ರವಾಸದಲ್ಲಿದ್ದರು. ಒಟ್ಟಾರೆಯಾಗಿ ಅವರು 2015 ರ ಬಜೆಟ್ ಅಧಿವೇಶನದ ಸಮಯದಲ್ಲಿ 60 ದಿನಗಳನ್ನು ವಿದೇಶ ಪ್ರವಾಸದಲ್ಲಿ ಕಳೆದರು ಎಂದು ಅವರು ಹೇಳಿದರು. ಬಜೆಟ್ ಅಧಿವೇಶನ ಅಥವಾ ಪ್ರಮುಖ ಅಧಿವೇಶನ ಬಂದಾಗಲೆಲ್ಲಾ ಅವರ ವಿದೇಶ ಪ್ರವಾಸ ನಿಗದಿಯಾಗುವುದು ಒಂದು ಭಯಾನಕ ಕಾಕತಾಳೀಯ. ಆದರೂ ತನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ಹೇಳಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ವಿದೇಶದಲ್ಲಿ ಉಳಿದುಕೊಂಡು ಸದನದಲ್ಲಿ ಮಾತನಾಡಲು ಹೇಗೆ ಸಾಧ್ಯ? ವೀಡಿಯೋ ಕಾನ್ಫರೆನ್ಸ್ ಮೂಲಕ ಸದನವನ್ನು ಉದ್ದೇಶಿಸಿ ಮಾತನಾಡುವ ಯಾವುದೇ ವ್ಯವಸ್ಥೆಯಿಲ್ಲ ಎಂದು ಶ್ರೀ ಶಾ ಹೇಳಿದರು.
ವಿರೋಧ ಪಕ್ಷವು ಲೋಕಸಭಾಧ್ಯಕ್ಷರ ನಡವಳಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಸಭಾಧ್ಯಕ್ಷರ ನಡವಳಿಕೆಯನ್ನು ಮಾತ್ರ ಪರಿಶೀಲಿಸಬಾರದು, ಏಕೆಂದರೆ ಸದನವನ್ನು ಆಡಳಿತ ಪಕ್ಷ, ವಿರೋಧ ಪಕ್ಷ, ಸಭಾಧ್ಯಕ್ಷರು ಮತ್ತು ರಾಷ್ಟ್ರಪತಿಯವರು ಸಾಮೂಹಿಕವಾಗಿ ನಡೆಸುತ್ತಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಿರೋಧ ಪಕ್ಷದವರು ತಮ್ಮ ಸ್ವಂತ ನಡವಳಿಕೆಯನ್ನು ಒಮ್ಮೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅವರು ಕೇಳಿದರು. ಭಾರತದ ಪ್ರಧಾನ ಮಂತ್ರಿಯವರು ಆಡಳಿತ ಪಕ್ಷದ ಸ್ಥಾನದಲ್ಲಿ ಕುಳಿತಿರುತ್ತಾರೆ ಮತ್ತು ಅವರ ಬಳಿಗೆ ಓಡಿಹೋಗಿ ಹಾಗೆ ಅಪ್ಪಿಕೊಳ್ಳುವುದು ಸದನದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಫ್ಲೈಯಿಂಗ್ ಕಿಸ್ ನೀಡುವುದು ಅಥವಾ ಕಣ್ಣು ಹೊಡೆಯುವ ಸನ್ನೆಗಳನ್ನು ಮಾಡುವುದು ಸಹ ಸದನದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ಅವರು ಹೇಳಿದರು.
ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ನೀತಿಗಳು ಸಹ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾದ ಸ್ಥಾನವನ್ನು ಬಲಪಡಿಸಲು ಕಾರಣವಾಗಿದ್ದವು ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ಹಣವನ್ನು ಪಡೆದಿತ್ತು, ಇದರಿಂದಾಗಿ ಅದರ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ನೋಂದಣಿಯನ್ನು ರದ್ದುಗೊಳಿಸಬೇಕಾಯಿತು ಮತ್ತು ದೇಶದ ಎಲ್ಲಾ ನಾಗರಿಕರು ಇದನ್ನು ತಿಳಿದಿರಬೇಕು ಎಂದು ಅವರು ಹೇಳಿದರು. ಅಕ್ಸಾಯ್ ಚಿನ್ ನ ಸುಮಾರು 38,000 ಚದರ ಕಿಲೋಮೀಟರ್ ಮತ್ತು NEFA ನ ಹೆಚ್ಚಿನ ಭಾಗವನ್ನು 1962 ರಲ್ಲಿ ಚೀನಾ ಆಕ್ರಮಿಸಿಕೊಂಡಿತ್ತು ಮತ್ತು ಇದು ಪ್ರಮುಖ ವಿರೋಧ ಪಕ್ಷದ ಆಳ್ವಿಕೆಯಲ್ಲಿ ಸಂಭವಿಸಿದೆ ಎಂದು ಅವರು ಹೇಳಿದರು.
ಲೋಕಸಭಾಧ್ಯಕ್ಷರ ವಿರುದ್ಧ ತಂದಿರುವ ಅವಿಶ್ವಾಸ ಗೊತ್ತುವಳಿಯನ್ನು ಬಹುಮತದೊಂದಿಗೆ ತಿರಸ್ಕರಿಸಬೇಕು ಮತ್ತು ಸಭಾಧ್ಯಕ್ಷರ ಸ್ಥಾನದ ಘನತೆಯನ್ನು ಕಾಪಾಡಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಪೀಠಕ್ಕೆ ಮನವಿ ಮಾಡಿದರು.
*****
(ಪ್ರಕಟಣೆ ಐ.ಡಿ.: 2238744)
ವಿಸಿಟರ್ ಕೌಂಟರ್ : 5