ರಾಷ್ಟ್ರಪತಿಗಳ ಕಾರ್ಯಾಲಯ
'ಜಲ ಮಹೋತ್ಸವ 2026' ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತದ ರಾಷ್ಟ್ರಪತಿ
ನಮ್ಮ ಭವಿಷ್ಯವನ್ನು ಭದ್ರಪಡಿಸಲು, ನಾವು ಜಲ ಸಂರಕ್ಷಣೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು
ಪ್ರಕಟಣಾ ದಿನಾಂಕ:
11 MAR 2026 2:31PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಮಾರ್ಚ್ 11, 2026) ನವದೆಹಲಿಯಲ್ಲಿ ನಡೆದ 'ಜಲ ಮಹೋತ್ಸವ-2026' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು “ಭಾರತದಲ್ಲಿ, ನೀರು ಕೇವಲ ಮೂಲಭೂತ ಸೌಲಭ್ಯವಲ್ಲ, ಆದರೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಜೀವನೋಪಾಯ ಮತ್ತು ಸಮುದಾಯ ಜೀವನಕ್ಕೆ ಆಧಾರವಾಗಿದೆ,ʼʼ ಎಂದು ಹೇಳಿದರು. ಇಷ್ಟು ವರ್ಷಗಳಿಂದ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ದೂರದಿಂದ ಕುಡಿಯುವ ನೀರನ್ನು ತರಬೇಕಾಗಿತ್ತು. ಶುದ್ಧ ನೀರನ್ನು ಒದಗಿಸುವುದು ಕೇವಲ ಅನುಕೂಲಕ್ಕೆ ಸಂಬಂಧಿಸಿದ ವಿಷಯವಾಗಿರಲಿಲ್ಲ; ಇದು ಸಮಯ, ಆರೋಗ್ಯ ಮತ್ತು ಘನತೆಯ ವಿಷಯವಾಗಿತ್ತು. ಈ ಸವಾಲುಗಳನ್ನು ಎದುರಿಸಲು, ಭಾರತ ಸರ್ಕಾರವು 'ಜಲ ಜೀವನ್ ಮಿಷನ್' ಅನ್ನು ಪ್ರಾರಂಭಿಸಿತು. ಒಂದು ಕಾಲದಲ್ಲಿ ಕುಡಿಯುವ ನೀರು ಪಡೆಯಲು ಹೆಣಗಾಡುತ್ತಿದ್ದ ಗ್ರಾಮಸ್ಥರು ಈಗ ತಮ್ಮ ಸ್ವಂತ ಮನೆಗಳಲ್ಲಿ ಶುದ್ಧ ಮತ್ತು ಸುರಕ್ಷಿತ ನೀರನ್ನು ಪಡೆಯುತ್ತಿದ್ದಾರೆ.

ಸಂಪನ್ಮೂಲದ ಜವಾಬ್ದಾರಿಯನ್ನು ಸರ್ಕಾರ ಮಾತ್ರವಲ್ಲದೆ ಇಡೀ ಸಮಾಜವು ತೆಗೆದುಕೊಂಡಾಗ, ಅದರ ಸಂರಕ್ಷಣೆಯು ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ನೀರಿನ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ಸಮುದಾಯ ಮಾಲೀಕತ್ವವು ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮ ಪಂಚಾಯಿತಿಗಳಿಗೆ ನೀರು ಸರಬರಾಜು ಮೂಲಸೌಕರ್ಯವನ್ನು ಔಪಚಾರಿಕವಾಗಿ ಹಸ್ತಾಂತರಿಸುವ 'ಜಲ ಅರ್ಪಣ ದಿವಸ್' ಆಚರಣೆಯು ಸಮುದಾಯ ಮಾಲೀಕತ್ವದ ಪ್ರಜ್ಞೆಯನ್ನು ಬಲಪಡಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಸಹಾಯ ಗುಂಪುಗಳು ನೀರಿನ ಪರೀಕ್ಷೆ, ಕಾರ್ಯಾಚರಣೆ ಮತ್ತು ಇತರ ನಿರ್ವಹಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ತಿಳಿದು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಸ್ವಸಹಾಯ ಗುಂಪುಗಳ ಬದ್ಧತೆ ಮತ್ತು ಸಮರ್ಪಣೆಯು ಮಹಿಳೆಯರು ಹಾಗೂ ಸಮಾಜದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾದ ಹಲವಾರು ಉದಾಹರಣೆಗಳನ್ನು ನಾವು ನೋಡಬಹುದು ಎಂದು ಅವರು ಹೇಳಿದರು. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ನೀರಿನ ಭದ್ರತೆಯನ್ನು ಪರಿಹರಿಸುವಲ್ಲಿ ಅತ್ಯಂತ ಫಲಪ್ರದವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನೀರಿನ ಭದ್ರತೆಯನ್ನು ಬಲಪಡಿಸಲು ಬಹುಮುಖಿ ಮತ್ತು ಸಂಘಟಿತ ಪ್ರಯತ್ನಗಳು ನಿರ್ಣಾಯಕವಾಗಿವೆ ಎಂದು ರಾಷ್ಟ್ರಪತಿ ಹೇಳಿದರು. "ಸ್ವಚ್ಛ ಭಾರತ ಮಿಷನ್" ಸಮನ್ವಯದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬೂದುನೀರಿನ ನಿರ್ವಹಣೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಜಲ ಸಂಪನ್ಮೂಲ ಸುಸ್ಥಿರತೆಗಾಗಿ, ಅಂತರ್ಜಲ ಮರುಪೂರಣ ಮತ್ತು ಜಲ ಸಂರಕ್ಷಣೆಯ ಕುರಿತು ʻಕೇಂದ್ರ ಅಂತರ್ಜಲ ಮಂಡಳಿʼ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಕೆಲಸ ನಡೆಯುತ್ರತಿದೆ. ʻಕ್ಯಾಚ್ ದಿ ರೈನ್ʼ ಮತ್ತು ʼಜಲ ಸಂಚಾಯ್ ಜನ ಭಾಗೀದಾರಿʼಯಂತಹ ಅಭಿಯಾನಗಳು ಮಳೆನೀರು ಕೊಯ್ಲಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅಂತಹ ಸಮನ್ವಯವು ನೀರಿನ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಜಲ ಸಂರಕ್ಷಣೆಯು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ನಾವು ನೀರನ್ನು ಕೇವಲ ಸರಕಾಗಿ ನೋಡದೆ, ಅದನ್ನು ಭವಿಷ್ಯದ ಪೀಳಿಗೆಗೆ ಅಮೂಲ್ಯ ಆಸ್ತಿಯಾಗಿ ನೋಡಬೇಕು. ನಮ್ಮ ಭವಿಷ್ಯವನ್ನು ಭದ್ರಪಡಿಸಲು, ನಾವು ಜಲ ಸಂರಕ್ಷಣೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ಯುವ ಪೀಳಿಗೆಯಲ್ಲಿ ನೀರಿನ ನಿರ್ವಹಣೆ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿಯಿಂದ ಭವಿಷ್ಯದಲ್ಲಿ ದೇಶದ ನೀರಿನ ಭದ್ರತೆಯನ್ನು ಖಚಿತಪಡಿಸಬಹುದು. 'ಜಲ ಮಹೋತ್ಸವ' ಕಾರ್ಯಕ್ರಮವು ಭಾರತದ ಜಲ ಸಂರಕ್ಷಣೆಗೆ ಜನಾಂದೋಲನದ ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಲಶಕ್ತಿ ಸಚಿವಾಲಯವು ʻಜಲ ಮಹೋತ್ಸವ-2026ʼ ಅನ್ನು ಆಯೋಜಿಸುತ್ತಿದೆ. ʻಜಲ ಜೀವನ್ ಯೋಜನೆʼ ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಸೇವಾ ವಿತರಣೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಸಮುದಾಯ ಮಾಲೀಕತ್ವವನ್ನು ಬಲಪಡಿಸಲು ಮಾರ್ಚ್ 8 ರಿಂದ ಮಾರ್ಚ್ 22 ರವರೆಗೆ ರಾಷ್ಟ್ರವ್ಯಾಪಿ ಅಭಿಯಾನ ಇದಾಗಿದೆ.
ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ-
*****
(ಪ್ರಕಟಣೆ ಐ.ಡಿ.: 2238202)
ವಿಸಿಟರ್ ಕೌಂಟರ್ : 13