ಗ್ರಾಮೀಣಾಭಿವೃದ್ಧಿ ಸಚಿವಾಲಯ
'ವಿಕಸಿತ ಭಾರತ - ಜಿ-ರಾಮ್-ಜಿ ಕಾಯ್ದೆ, 2025' ಗಾಗಿ "ಮೈಗವ್" ಪೋರ್ಟಲ್ ನಲ್ಲಿ ಲಾಂಛನ ವಿನ್ಯಾಸ ಸ್ಪರ್ಧೆಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆಯೋಜಿಸಿದೆ
ಸ್ಪರ್ಧೆಗೆ ಲಾಂಛನ ಕರಡು-ನಮೂದುಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 20, 2026
ಪ್ರಕಟಣಾ ದಿನಾಂಕ:
09 MAR 2026 5:19PM by PIB Bengaluru
'ವಿಕಸಿತ ಭಾರತ - ರೋಜ್ ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತರಿ ಕಾಯಿದೆ: ವಿಕಸಿತ ಭಾರತ - ಜಿ-ರಾಮ್-ಜಿ (ವಿಬಿ-ಜಿ ರಾಮ್ ಜಿ) ಕಾಯಿದೆ - 2025' ಗಾಗಿ ಮೈಗವ್ ಪೋರ್ಟಲ್ ನಲ್ಲಿ ಲಾಂಛನ ವಿನ್ಯಾಸ ಸ್ಪರ್ಧೆಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆಯೋಜಿಸುತ್ತಿದೆ. ವಿಬಿ - ಜಿ ರಾಮ್ ಜಿ (ವಿಕಸಿತ ಭಾರತ - ಜಿ-ರಾಮ್-ಜಿ) ಕಾಯ್ದೆ, 2025 ರ ಅಡಿಯಲ್ಲಿ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಪ್ರಗತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿ ಬಿಂಬಿಸುವ ನೂತನ ಲಾಂಛನವನ್ನು ಆಯ್ಕೆ ಮಾಡುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.
ಕಾಯ್ದೆಗಾಗಿ ಸೃಜನಶೀಲ ಮತ್ತು ನವೀನ ಲಾಂಛನವನ್ನು ವಿನ್ಯಾಸಗೊಳಿಸಲು ದೇಶದ ನಾಗರಿಕರಿಗೆ ಅವಕಾಶವನ್ನು ಒದಗಿಸುವ ಗುರಿಯನ್ನು ಸ್ಪರ್ಧೆ ಹೊಂದಿದೆ. ಆಯ್ಕೆಯಾದ ಲಾಂಛನವು ಆನಂತರ ಯೋಜನೆಯ ಅಧಿಕೃತ ಲಾಂಛನವಾಗಲಿದ್ದು, ಭವಿಷ್ಯದಲ್ಲಿ ಪ್ರಸಾರ ಮತ್ತು ಪ್ರಚಾರ ಚಟುವಟಿಕೆಗಳಿಗೆ ಬಳಸಲಾಗುವುದು.
ಆಯ್ಕೆಯಾದ ಲಾಂಛನವನ್ನು ಸೃಷ್ಟಿಸಿದ ವಿಜೇತರಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ₹50,000 ನಗದು ಬಹುಮಾನವನ್ನು ನೀಡುತ್ತದೆ. ಆಯ್ಕೆಯಾದ ಲಾಂಛನದ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸ್ವಾಮ್ಯಕ್ಕೆ ಸೇರಿರುತ್ತದೆ. ಅಧಿಕೃತ ಉದ್ದೇಶಗಳಿಗಾಗಿ ಲಾಂಛನವನ್ನು ಬಳಸುವ, ಅಳವಡಿಸಿಕೊಳ್ಳುವ ಅಥವಾ ಮಾರ್ಪಡಿಸುವ ಹಕ್ಕನ್ನು ಸಚಿವಾಲಯವು ಹೊಂದಿರುತ್ತದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕೊನೆಯ ದಿನಾಂಕ ಮಾರ್ಚ್ 20, 2026. ನಿಗದಿತ ಗಡುವಿನ ನಂತರ ಸ್ವೀಕರಿಸಿದ ಅಥವಾ ನಿಗದಿತ ಸ್ವರೂಪದಲ್ಲಿ ಸಲ್ಲಿಸದ ನಮೂದುಗಳನ್ನು ಈ ಸ್ಪರ್ಧೆಯಲ್ಲಿ ಪರಿಗಣಿಸಲಾಗುವುದಿಲ್ಲ. ಸ್ವೀಕರಿಸಿದ ಎಲ್ಲಾ ನಮೂದುಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಚಿಸಿದ ಸಮಿತಿಯು ಸ್ವಂತಿಕೆ, ಸೃಜನಶೀಲತೆ, ಪರಿಕಲ್ಪನೆಯ ಪ್ರಸ್ತುತತೆ, ವ್ಯಾಖ್ಯಾನ, ದೃಶ್ಯ ಆಕರ್ಷಣೆ, ವಿನ್ಯಾಸ ಮತ್ತು ಉಪಯುಕ್ತತೆಯಂತಹ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ನಾಗರಿಕರು ತಮ್ಮನ್ನು ಮೈಗೌವ್ ಜಾಲತಾಣದಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು ಮತ್ತು ಈ (https://bit.ly/3Pp6vi8) ಜಾಲತಾಣದ ಮೂಲಕ ತಮ್ಮ ಕರಡುಪ್ರತಿ / ನಮೂದುಗಳನ್ನು ಸಲ್ಲಿಸಬೇಕು. ಈ ಲಾಂಛನ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಾಳುಗಳು ಕೇವಲ ಒಂದು ನಮೂದನ್ನು ಮಾತ್ರ ಸಲ್ಲಿಸಲು ಅನುಮತಿಸಲಾಗಿದೆ. ಭಾಗವಹಿಸುವವರು ತಮ್ಮ ಪ್ರೊಫೈಲ್ ನಲ್ಲಿ ಹೆಸರು, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ಸಂಪೂರ್ಣ ಮತ್ತು ಸರಿಯಾದ ಮಾಹಿತಿ ಇದೆಯೇ ಎಂದು ಸಲ್ಲಿಸುವ ಮೊದಲು ಅಂತಿಮವಾಗಿ ಖಚಿತಪಡಿಸಿಕೊಳ್ಳಬೇಕು. ಅಪೂರ್ಣ ಪ್ರೊಫೈಲ್ ಗಳನ್ನು ಹೊಂದಿರುವ ಸ್ಪರ್ಧಾ ನಮೂದುಗಳನ್ನು ಸ್ವೀಕರಿಸಲಾಗುವುದಿಲ್ಲ.
ಆಸಕ್ತ ಭಾಗವಹಿಸುವವರು (www.mygov.in) ಜಾಲತಾಣದ ಸ್ಪರ್ಧೆಯ ಮಾಹಿತಿ ಪುಟದಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬಹುದು.
ಸ್ಪರ್ಧೆಯಲ್ಲಿ ರಚಿಸಲಾಗುವ ಲಾಂಛನವು ಅತ್ಯಂತ ಸರಳ, ಸೃಜನಶೀಲ , ಆಕರ್ಷಣೀಯ ಮತ್ತು ಪ್ರಭಾವಶಾಲಿಯಾಗಿರಬೇಕು. ಇದರಿಂದಾಗಿ ಅದನ್ನು ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸುಗಮವಾಗಿ ಬಳಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಲಾಂಛನವು ಸಂಪೂರ್ಣವಾಗಿ ಮೂಲ, ಸ್ವಸೃಷ್ಟಿಯಾಗಿದೆ ಮತ್ತು ಅಪ್ರಕಟಿತವಾಗಿದೆ ಮತ್ತು ಅದು ಯಾವುದೇ ರೀತಿಯಲ್ಲಿ ಯಾವುದೇ ಹಕ್ಕುಸ್ವಾಮ್ಯ ನಿಯಮಗಳು ಅಥವಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ಭಾಗವಹಿಸುವವರು ತಮ್ಮ ಲಾಂಛನವನ್ನು ಅಂತರ್ಜಾಲ ಮೂಲಕ ಜೆಪಿಇಜಿ (JPEG), ಪಿ.ಎನ್.ಜಿ (PNG) ಅಥವಾ ಪಿಡಿಎಫ್ (PDF) ನಂತಹ ಕಡತಗಳಲ್ಲಿ ಅತ್ಯಧಿಕ ರೆಸಲ್ಯೂಶನ್ ಡಿಜಿಟಲ್ ಸ್ವರೂಪದಲ್ಲಿ ಹಾಗೂ ಕನಿಷ್ಠ 300 ಡಿಪಿಐ(DPI) (ಡಾಟ್ಸ್ ಪರ್ ಇಂಚಿಗೆ) ರೆಸಲ್ಯೂಶನ್ ನೊಂದಿಗೆ ಸಲ್ಲಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ವಿನ್ಯಾಸದ ಹಿಂದಿನ ಪರಿಕಲ್ಪನೆ, ಮಹತ್ವ, ವ್ಯಾಖ್ಯಾನ ಮತ್ತು ಸೃಜನಶೀಲ ಕಲ್ಪನೆಯನ್ನು ವಿವರಿಸುವ 50 ರಿಂದ 100 ಪದಗಳಲ್ಲಿ ಲಾಂಛನದ ಕುರಿತು ಸಂಕ್ಷಿಪ್ತ ವಿವರಣೆಯನ್ನು ಕೂಡ ಒದಗಿಸಬೇಕು.
ಗ್ರಾಮೀಣ ಕುಟುಂಬಗಳಿಗೆ ಹಣಕಾಸು ವರ್ಷದಲ್ಲಿ ನೀಡುತ್ತಿದ್ದ 100 ದಿನಗಳ ವೇತನ ಉದ್ಯೋಗದ ಶಾಸನಬದ್ಧ ಖಾತರಿಯನ್ನು ನೂತನ "ವಿಕಸಿತ ಭಾರತ - ಜಿ-ರಾಮ್-ಜಿ ಕಾಯ್ದೆ, 2025" ಯು 125 ದಿನಗಳಿಗೆ ಹೆಚ್ಚಿಸಿದೆ. ಹಾಗೂ, ಇದರ ಜೊತೆಗೆ ಈ ಕಾಯ್ದೆಯು ಸಬಲೀಕರಣ, ಸಮಗ್ರ ಅಭಿವೃದ್ಧಿ, ಯೋಜನೆಗಳ ಒಗ್ಗೂಡಿಸುವಿಕೆ ಮತ್ತು ಶುದ್ಧತ್ವದ ಮೂಲಕ ಸೇವಾ ವಿತರಣೆಯನ್ನು ಕೂಡ ಉತ್ತೇಜಿಸುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಮೂಲಕ ಸಮೃದ್ಧ, ಸಮರ್ಥ ಮತ್ತು ಸ್ವಾವಲಂಬಿ (ಆತ್ಮನಿರ್ಭರ) ಗ್ರಾಮೀಣ ಭಾರತವನ್ನು ನಿರ್ಮಿಸುವತ್ತ ಈ ಕಾಯ್ದೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2237233)
ವಿಸಿಟರ್ ಕೌಂಟರ್ : 5