ಪರಿಸರ ಮತ್ತು ಅರಣ್ಯ ಸಚಿವಾಲಯ
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಚೀತಾ ಜ್ವಾಲಾ, ಭಾರತದಲ್ಲಿ ಚೀತಾ ಸಂಖ್ಯೆ 53ಕ್ಕೆ ಏರಿಕೆ; ಭಾರತದಲ್ಲಿ ಜನಿಸಿದ ಚೀತಾ ಸಂಖ್ಯೆ 33ಕ್ಕೆ ಹೆಚ್ಚಳ
ಭಾರತದ ನೆಲದಲ್ಲಿ ಚೀತಾದಿಂದ ಮರಿಗಳಿಗೆ ಜನ್ಮ, 10ನೇ ಯಶಸ್ವಿ ಸಂತಾನ ಪ್ರಕ್ರಿಯೆ; ಪಶುವೈದ್ಯರು, ಕ್ಷೇತ್ರ ಸಿಬ್ಬಂದಿಯ ಬದ್ಧ ಪ್ರಯತ್ನ, ಕೌಶಲ್ಯ ಮತ್ತು ಸಮರ್ಪಣೆಯ ಪ್ರತಿಬಿಂಬ: ಶ್ರೀ ಭೂಪೇಂದರ್ ಯಾದವ್
ಪ್ರಕಟಣಾ ದಿನಾಂಕ:
09 MAR 2026 2:12PM by PIB Bengaluru
ನಮೀಬಿಯಾದ ಚಿರತೆ ಜ್ವಾಲಾ, ಮೂರನೇ ಬಾರಿಗೆ ತಾಯಿಯಾಗಿದ್ದು, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಸಚಿವರು, ಈ ಜನನದೊಂದಿಗೆ, ಭಾರತದಲ್ಲಿ ಜನಿಸಿ ಜೀವಿಸುತ್ತಿರುವ ಚೀತಾ ಮರಿಗಳ ಸಂಖ್ಯೆ 33 ಕ್ಕೆ ಏರಿಕೆಯಾಗಿದ್ದು, ಭಾರತದ ನೆಲದಲ್ಲಿ 10ನೇ ಬಾರಿಗೆ ಚೀತಾಗಳು ಯಶಸ್ವಿಯಾಗಿ ಹಡೆದಿವೆ ಮತ್ತು ಇದು ಭಾರತದ ಚೀತಾ ಸಂರಕ್ಷಣೆಯ ಪಯಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಾಜೆಕ್ಟ್ ಚೀತಾಗೆ ಇದು ಅತ್ಯಂತ ಹೆಮ್ಮೆಯ ಕ್ಷಣ ಎಂದು ಶ್ಲಾಘಿಸಿರುವ ಶ್ರೀ ಯಾದವ್ ಅವರು, ಪಶುವೈದ್ಯರು, ಕ್ಷೇತ್ರ ಸಿಬ್ಬಂದಿ ಮತ್ತು ವಾಸ್ತವ ನೆಲದಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಎಲ್ಲರ ಬದ್ಧ ಪ್ರಯತ್ನಗಳು, ಕೌಶಲ್ಯ ಮತ್ತು ಸಮರ್ಪಣೆಯನ್ನು ಈ ಸಾಧನೆ ಪ್ರತಿಬಿಂಬಿಸಿದೆ ಎಂದು ಹೇಳಿದ್ದಾರೆ. ಈ ಮರಿಗಳ ಆಗಮನದೊಂದಿಗೆ, ಭಾರತದಲ್ಲಿ ಒಟ್ಟು ಚೀತಾ ಸಂಖ್ಯೆ 53 ಕ್ಕೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.
ವನ್ಯಜೀವಿ ಸಂರಕ್ಷಣೆಗೆ ಇದೊಂದು ಐತಿಹಾಸಿಕ ಮತ್ತು ಹೃದಯಸ್ಪರ್ಶಿ ಕ್ಷಣ ಎಂದು ಬಣ್ಣಿಸಿರುವ ಸಚಿವರು, ಜ್ವಾಲಾ ಮತ್ತು ಆಕೆಯ ಮರಿಗಳು ಶಕ್ತಿಶಾಲಿಯಾಗಿ ಬೆಳೆದು ಮುಂದೆ ಓಡುತ್ತಾ ಭಾರತದ ಚೀತಾ ಗಾಥೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿವೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿ ಎರಡನೇ ಬಾರಿಗೆ ತಾಯಿಯಾಗಿ, ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದಲ್ಲದೆ, 2026ರ ಫೆಬ್ರವರಿ 28 ರಂದು, ಶ್ರೀ ಯಾದವ್ ಅವರು, ಬೋಟ್ಸ್ವಾನಾದಿಂದ ಪಡೆದ 6 ಹೆಣ್ಣು ಮತ್ತು 3 ಗಂಡು ಸೇರಿ ಒಟ್ಟು ಒಂಭತ್ತು ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರತ್ಯೇಕವಾಗಿ ಯಾರ ಸಂಪರ್ಕವೂ ಇಲ್ಲದ ಸ್ಥಳದಲ್ಲಿ (ಕ್ವಾರಂಟೈನ್ ಆವರಣಕ್ಕೆ) ಬಿಟ್ಟಿದ್ದಾರೆ. ಈ ಪ್ರಾಣಿಗಳು ಮೊದಲಿಗೆ ಒಗ್ಗಿಕೊಳ್ಳುವಿಕೆ ಮತ್ತು ಆರೋಗ್ಯ ಮೇಲ್ವಿಚಾರಣೆಯ ಹಂತಕ್ಕೆ ಒಳಪಟ್ಟಿದ್ದು, ಕ್ರಮೇಣವಾಗಿ ಇವುಗಳನ್ನು ವಿಶಾಲ ಅಭಯಾರಣ್ಯದಲ್ಲಿ ಬಿಡಲಾಗುವುದು.
*****
(ಪ್ರಕಟಣೆ ಐ.ಡಿ.: 2237008)
ವಿಸಿಟರ್ ಕೌಂಟರ್ : 7