ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮೈ ಭಾರತ್ ಸಹಯೋಗದೊಂದಿಗೆ ನಾಳೆಯಿಂದ ದೇಶ್ಯಾದ್ಯಂತ ಡಿಜಿಟಲ್ ಅಭಿಯಾನವಾದ 'ವಿಬಿ-ಜಿ ರಾಮ್ ಜಿ ಯುವ ಡಿಜಿಟಲ್ ಅಭಿಯಾನ'ವನ್ನು ಪ್ರಾರಂಭಿಸಲಿದೆ


ರಸಪ್ರಶ್ನೆಗಳು, ವೀಡಿಯೊ ಸವಾಲುಗಳು ಮತ್ತು ಸೃಜನಶೀಲ ಸ್ಪರ್ಧೆಗಳಂತಹ ಚಟುವಟಿಕೆಗಳ ಮೂಲಕ, ದೇಶಾದ್ಯಂತದ ಯುವಕರು ಡಿಜಿಟಲ್ ಜನಾಂದೋಲನದಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ

15 ರಿಂದ 29 ವರ್ಷದ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿ ಗ್ರಾಮ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಜೀವನೋಪಾಯ ಉತ್ತೇಜನದಲ್ಲಿ ಕಾಯ್ದೆಯ ಪಾತ್ರವನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸಬಹುದಾಗಿದೆ

ಭಾಗವಹಿಸುವವರು ಯಾವುದೇ ಭಾರತೀಯ ಭಾಷೆಯಲ್ಲಿ 30 ರಿಂದ 60 ಸೆಕೆಂಡುಗಳ ವೀಡಿಯೊವನ್ನು ಸೃಷ್ಟಿಸಿ, ʻಮೈ ಭಾರತ್ ಪೋರ್ಟಲ್ʼ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ

'ಯುವ ಶಕ್ತಿ, ಪಂಚಾಯತ್‌ಗಳ ಪ್ರಗತಿ' ಆಶಯದೊಂದಿಗೆ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಯುವಕರ ಸಕ್ರಿಯ ಭಾಗವಹಿಸುವಿಕೆಯನ್ನು ಈ ಅಭಿಯಾನವು ಖಚಿತಪಡಿಸುತ್ತದೆ

ಪ್ರಕಟಣಾ ದಿನಾಂಕ: 05 MAR 2026 7:56PM by PIB Bengaluru

ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ʻಮೈ ಭಾರತ್ʼ ಸಹಯೋಗದೊಂದಿಗೆ ನಾಳೆಯಿಂದ 'ವಿಬಿ-ಜಿ ರಾಮ್ ಜಿ ಯುವ ಡಿಜಿಟಲ್ ಅಭಿಯಾನ' ಎಂಬ ರಾಷ್ಟ್ರವ್ಯಾಪಿ ಡಿಜಿಟಲ್ ಅಭಿಯಾನವನ್ನು ಪ್ರಾರಂಭಿಸಲಿದೆ. "ವಿಕಸಿತ ಭಾರತ - ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ ಕಾಯ್ದೆ-2025"(ವಿಬಿ-ಜಿ ರಾಮ್‌ ಜಿ) ಬಗ್ಗೆ ವ್ಯಾಪಕ ಸಾರ್ವಜನಿಕ ಜಾಗೃತಿಯನ್ನು ಖಚಿತಪಡಿಸಿಕೊಳ್ಳುವುದು ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನಕ್ಕೆ 'ವಿಕಸಿತ ಭಾರತ-ಜಿ ರಾಮ್ ಜಿ - ಯುವ ಶಕ್ತಿ, ಪಂಚಾಯತ್‌ಗಳ ಪ್ರಗತಿ' ಎಂದು ಹೆಸರಿಸಲಾಗಿದೆ.

ಉಪಕ್ರಮವು ಯುವಕರನ್ನು ಅಭಿಯಾನದ ಕೇಂದ್ರಬಿಂದುವಾಗಿ ಇರಿಸಲಿದೆ. ರಸಪ್ರಶ್ನೆಗಳು, ವೀಡಿಯೊ ಸವಾಲುಗಳು ಮತ್ತು ಸೃಜನಶೀಲ ಸ್ಪರ್ಧೆಗಳಂತಹ ಚಟುವಟಿಕೆಗಳ ಮೂಲಕ ಯುವಕರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ. ಈ ಚಟುವಟಿಕೆಗಳ ಮೂಲಕ, ಅಭಿಯಾನವು ಬಲವಾದ ಯುವ ಭಾಗವಹಿಸುವಿಕೆಯೊಂದಿಗೆ ಉಪಕ್ರಮವನ್ನು ರಾಷ್ಟ್ರವ್ಯಾಪಿ ಡಿಜಿಟಲ್ ಜನಾಂದೋಲನವಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ.

ಅಭಿಯಾನದ ಭಾಗವಾಗಿ, ʻನನ್ನ ಗ್ರಾಮಕ್ಕಾಗಿ 60 ಸೆಕೆಂಡ್‌ಗಳುʼ ಎಂಬ ಶೀರ್ಷಿಕೆಯ ರಾಷ್ಟ್ರಮಟ್ಟದ ಕಿರು ವೀಡಿಯೊ, ರೀಲ್ ಅಥವಾ ಅನಿಮೇಟೆಡ್ ವೀಡಿಯೊ ಸ್ಪರ್ಧೆಯನ್ನು ಮಾರ್ಚ್ 6, 2026 ರಂದು (ಶುಕ್ರವಾರ) ಪ್ರಾರಂಭಿಸಲಾಗುವುದು. ಗ್ರಾಮ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಜೀವನೋಪಾಯ ಉತ್ತೇಜನದಲ್ಲಿ ಕಾಯ್ದೆಯ ಪಾತ್ರವನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸಲು ಯುವಜನರಿಗೆ ಉಪಕ್ರಮವು ಅವಕಾಶವನ್ನು ಒದಗಿಸುತ್ತದೆ.

ಸ್ಪರ್ಧೆಯು 15 ರಿಂದ 29 ವರ್ಷ ವಯಸ್ಸಿನ ಯುವಕರಿಗೆ ಮುಕ್ತವಾಗಿದೆ. ಭಾಗವಹಿಸುವವರು ಯಾವುದೇ ಭಾರತೀಯ ಭಾಷೆಯಲ್ಲಿ 30 ರಿಂದ 60 ಸೆಕೆಂಡುಗಳ ವೀಡಿಯೊವನ್ನು ತಯಾರಿಸಿ, ಅದನ್ನು ʻಮೈ ಭಾರತ್ ಪೋರ್ಟಲ್ʼ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ಪ್ರತಿಯೊಬ್ಬ ಸ್ಪರ್ಧಿಗೆ ಕೇವಲ ಒಂದು ವಿಡಿಯೊ ಸಲ್ಲಿಸಲು ಅನುಮತಿಸಲಾಗುತ್ತದೆ. ಮೊಬೈಲ್ ಫೋನ್, ಕ್ಯಾಮೆರಾ ಅಥವಾ ಅನಿಮೇಷನ್ ಪರಿಕರಗಳನ್ನು ಬಳಸಿಕೊಂಡು ವೀಡಿಯೊಗಳನ್ನು ಸೃಷ್ಟಿಸಬಹುದು.

ಯುವ ಸ್ಪರ್ಧಿಗಳು ಕಾಯ್ದೆಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ತಮ್ಮ ಸೃಜನಶೀಲ ಆಲೋಚನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಕಾಯ್ದೆಯ ಉದ್ದೇಶಗಳು ಮತ್ತು ಪ್ರಮುಖ ಲಕ್ಷಣಗಳು, ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಸೃಷ್ಟಿಯಲ್ಲಿ ಅದರ ಪ್ರಯೋಜನಗಳು ಹಾಗೂ ಗ್ರಾಮ ಅಭಿವೃದ್ಧಿ ಮತ್ತು ಪರಿವರ್ತನೆಯಲ್ಲಿ ಕಾಯಿದೆಯ ಪಾತ್ರ ಸೇರಿವೆ. ಯುವಕರು ಮತ್ತು ಮಹಿಳೆಯರಿಗೆ ಇರುವ ಅವಕಾಶಗಳು, ʻವಿಕಸಿತ ಭಾರತ @2047ʼ ಗುರಿಯನ್ನು ಸಾಧಿಸುವಲ್ಲಿ ಕಾಯ್ದೆಯ ಕೊಡುಗೆ ಹಾಗೂ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಹಳ್ಳಿಗಳ ಆಕಾಂಕ್ಷೆಯಾದ 'ನನ್ನ ಗ್ರಾಮ, ನನ್ನ ಭವಿಷ್ಯ' ದೃಷ್ಟಿಕೋನವನ್ನು ಸಹ ಸ್ಪರ್ಧಿಗಳು ಎತ್ತಿ ತೋರಿಸಬಹುದು. ಹೆಚ್ಚುವರಿಯಾಗಿ, ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಲು ಮತ್ತು ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸಲು ನವೀನ ಆಲೋಚನೆಗಳು ಮತ್ತು ಪರಿಕಲ್ಪನೆಗಳನ್ನು ಭಾಗವಹಿಸುವವರು ಪ್ರಸ್ತುತಪಡಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಅರ್ಹ ಸ್ಪರ್ಧಿಗಳು ಭಾಗವಹಿಸುವಿಕೆಯ ಡಿಜಿಟಲ್ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಸ್ಪರ್ಧಿಗಳಿಗೆ ಪ್ರಮಾಣಪತ್ರಗಳು ಮತ್ತು ಇತರ ಮನ್ನಣೆಗಳನ್ನು ನೀಡಲಾಗುವುದು. ಜೊತೆಗೆ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಂವಹನ ನಡೆಸುವ ಅವಕಾಶವನ್ನು ಸಹ ಪಡೆಯುತ್ತಾರೆ.

ವಿಷಯದ ಪ್ರಸ್ತುತತೆ, ಸೃಜನಶೀಲತೆ, ಸ್ವಂತಿಕೆ, ತಾಂತ್ರಿಕ ಗುಣಮಟ್ಟ, ಒಟ್ಟಾರೆ ಪ್ರಭಾವ ಮತ್ತು ನಿಗದಿತ ಮಾರ್ಗಸೂಚಿಗಳ ಅನುಸರಣೆ ಸೇರಿದಂತೆ ಹಲವಾರು ಮಾನದಂಡಗಳ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಯುವ ಸ್ಪರ್ಧಿಗಳು ಅಭಿಯಾನಕ್ಕೆ ಒದಗಿಸಲಾದ ʻಕ್ಯೂಆರ್ ಕೋಡ್ʼ ಅನ್ನು ಸ್ಕ್ಯಾನ್ ಮಾಡುವ ಮೂಲಕ, https://bit.ly/4r3Gxhn ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಥವಾ mybharat.gov.in ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಸ್ಪರ್ಧೆಯಲ್ಲಿ  ಭಾಗವಹಿಸಬಹುದು.

ಅಭಿಯಾನದ ಮೂಲಕ, ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ. 'ಯುವ ಶಕ್ತಿ, ಪಂಚಾಯತ್‌ಗಳ ಪ್ರಗತಿ' ಎಂಬ ಆಶಯದಿಂದ ಸ್ಫೂರ್ತಿ ಪಡೆದ ಅಭಿಯಾನವು ಯುವ ನಾಗರಿಕರ ಶಕ್ತಿ, ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಗ್ರಾಮೀಣಾಭಿವೃದ್ಧಿ ಉಪಕ್ರಮಗಳ ಬಲವರ್ಧನೆಗಾಗಿ ಹಾಗೂ ʻವಿಕಸಿತ ಭಾರತʼ ಗುರಿ ಸಾಧನೆಯ ವಿಶಾಲ ರಾಷ್ಟ್ರೀಯ ಉದ್ದೇಶಕ್ಕೆ ಕೊಡುಗೆಯಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತದೆ.

ʻವಿಕಸಿತ ಭಾರತ್-ಜಿ ರಾಮ್ ಜಿ ಕಾಯ್ದೆ-2025ʼ, ಗ್ರಾಮೀಣ ಉದ್ಯೋಗ ನೀತಿಯಲ್ಲಿ ಗಮನಾರ್ಹ ರೂಪಾಂತರವನ್ನು ಸೂಚಿಸುತ್ತದೆ. ಈ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ವೇತನ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಪ್ರತಿ ಹಣಕಾಸು ವರ್ಷಕ್ಕೆ 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುತ್ತದೆ. ಇದು ಸಬಲೀಕರಣ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಯೋಜನೆಗಳ ಏಕೀಕರಣ ಮತ್ತು ಸೇವೆಗಳ ಪರಿಪೂರ್ಣತೆಯನ್ನು ಉತ್ತೇಜಿಸುತ್ತದೆ. ಆ ಮೂಲಕ ಕಲ್ಯಾಣ ಕಾರ್ಯಕ್ರಮಗಳ ವಿತರಣೆಯನ್ನು ಬಲಪಡಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಮೂಲಕ, ಈ ಉಪಕ್ರಮವು ಸಮೃದ್ಧ, ಸಮರ್ಥ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಜೊತೆಗೆ ʻವಿಕಸಿತ ಭಾರತʼದ ದೊಡ್ಡ ದೃಷ್ಟಿಕೋನವನ್ನು ಇದು ಬೆಂಬಲಿಸುತ್ತದೆ. ಆದ್ದರಿಂದ, ಈ ಅಭಿಯಾನವು ಕಾಯ್ದೆಯ ನಿಬಂಧನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ದೇಶಾದ್ಯಂತ ಗ್ರಾಮೀಣ ಸಮುದಾಯಗಳ ಭವಿಷ್ಯವನ್ನು ರೂಪಿಸುವಲ್ಲಿ ಯುವಕರ ಭಾಗವಹಿಸುವಿಕೆಯನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

******

 


(ಪ್ರಕಟಣೆ ಐ.ಡಿ.: 2235810) ವಿಸಿಟರ್ ಕೌಂಟರ್ : 66
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Marathi , Bengali , Gujarati , Tamil , Malayalam