ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಆಧಾರ್ ನಲ್ಲಿ ಕಡ್ಡಾಯ ಬಯೋಮೆಟ್ರಿಕ್ ನವೀಕರಣಕ್ಕಾಗಿ ಯುಐಡಿಎಐ ನಡೆಸಿದ ವಿಶೇಷ ಅಭಿಯಾನದಿಂದ 1,00,000 ಕ್ಕೂ ಹೆಚ್ಚು ಶಾಲೆಗಳಲ್ಲಿ ಗುರಿ ಸಾಧನೆ; ಲಕ್ಷಾಂತರ ಮಕ್ಕಳಿಗೆ ಅನುಕೂಲ


ಯುಐಡಿಎಐ ಪ್ರಾದೇಶಿಕ ಕಚೇರಿಗಳು ಮತ್ತು ರಾಜ್ಯಗಳ ಶಿಕ್ಷಣ ಇಲಾಖೆಗಳು ಶಾಲೆಗಳೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ

ದೇಶಾದ್ಯಂತ ಆರು ತಿಂಗಳಿನಿಂದ ಮಿಷನ್ ಮೋಡ್ ನಲ್ಲಿ ಕಡ್ಡಾಯ ಬಯೋಮೆಟ್ರಿಕ್ ನವೀಕರಣ (MBU) ಅಭಿಯಾನ ನಡೆಯುತ್ತಿದೆ; 2025ರ ಅಕ್ಟೋಬರ್ 1 ರಿಂದ ಒಂದು ವರ್ಷದವರೆಗೆ 7-15 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ನಲ್ಲಿ MBU ಉಚಿತವಾಗಿದೆ

ಪ್ರಕಟಣಾ ದಿನಾಂಕ: 03 MAR 2026 12:47PM by PIB Bengaluru

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಒಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ದೇಶದಾದ್ಯಂತ 1,03,000 ಕ್ಕೂ ಹೆಚ್ಚು ಶಾಲೆಗಳನ್ನು ಈ ಅಭಿಯಾನದ ವ್ಯಾಪ್ತಿಗೆ ತರಲಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶಾಲಾ ಆವರಣದಲ್ಲೇ ಅತ್ಯಂತ ಸುಲಭವಾಗಿ ಆಧಾರ್ ನ ಕಡ್ಡಾಯ ಬಯೋಮೆಟ್ರಿಕ್ ನವೀಕರಣ (MBU) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೆರವಾಗಿದೆ.

ಈ ಬೃಹತ್ ಅಭಿಯಾನದ ಮೂಲಕ ಇದುವರೆಗೆ ಸುಮಾರು 1.2 ಕೋಟಿ (12 ಮಿಲಿಯನ್) ಶಾಲಾ ಮಕ್ಕಳು ತಮ್ಮ ಶಾಲೆಗಳಲ್ಲೇ ಬಯೋಮೆಟ್ರಿಕ್ ನವೀಕರಣವನ್ನು ಮಾಡಿಸಿಕೊಂಡಿದ್ದಾರೆ.

'ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್' (UDISE+) ಅಪ್ಲಿಕೇಶನ್ ನೊಂದಿಗೆ ಯಶಸ್ವಿ ತಾಂತ್ರಿಕ ಸಂಯೋಜನೆಯನ್ನು ಸಾಧಿಸಿದ ನಂತರ, ಯುಐಡಿಎಐ ಸೆಪ್ಟೆಂಬರ್ 2025 ರಲ್ಲಿ ಶಾಲಾ ಮಕ್ಕಳಿಗಾಗಿ ಮಿಷನ್ ಮೋಡ್ ನಲ್ಲಿ MBU ಅಭಿಯಾನವನ್ನು ಜಾರಿಗೆ ತಂದಿತು.  

ಕೇಂದ್ರ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ UDISE+ ನೊಂದಿಗಿನ ಈ ತಾಂತ್ರಿಕ ಸಂಯೋಜನೆಯು ಶಾಲೆಗಳಲ್ಲಿ ಮಕ್ಕಳ MBU ಸ್ಥಿತಿಗತಿಯನ್ನು ಪತ್ತೆಹಚ್ಚಲು ಸುಲಭವಾಗಿಸಿತು. ಇದರಿಂದಾಗಿ ಬಯೋಮೆಟ್ರಿಕ್ ನವೀಕರಣ ಬಾಕಿ ಇರುವ ಮಕ್ಕಳನ್ನು ಸುಲಭವಾಗಿ ಗುರುತಿಸಿ, ಶಾಲೆಗಳಲ್ಲೇ ಶಿಬಿರಗಳನ್ನು ಆಯೋಜಿಸಲು ಸಾಧ್ಯವಾಯಿತು.

ದೇಶದಲ್ಲಿನ ಯುಐಡಿಎಐ ಪ್ರಾದೇಶಿಕ ಕಚೇರಿಗಳು ಮತ್ತು ರಾಜ್ಯ ಕಚೇರಿಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳು, ಜಿಲ್ಲಾ ಆಡಳಿತ, ಶಾಲೆಗಳು ಮತ್ತು ಯುಐಡಿಎಐ ನ ಪರಿಸರ ವ್ಯವಸ್ಥೆಯ ಪಾಲುದಾರರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಈ ಮಕ್ಕಳ ಪರ ಅಭಿಯಾನವನ್ನು ಸಂಯೋಜಿಸಲು ಕೆಲಸ ಮಾಡುತ್ತಿವೆ.

ಪ್ರಸ್ತುತ ನಡೆಯುತ್ತಿರುವ ಈ ಕಾರ್ಯವನ್ನು ನಿರ್ವಹಿಸಲು ಕನಿಷ್ಠ 4,000 ಯಂತ್ರಗಳನ್ನು ಬಳಸಲಾಗುತ್ತಿದೆ ಮತ್ತು ವೇಗವನ್ನು ಹೆಚ್ಚಿಸಲು ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಯುಐಡಿಎಐI ಇದೆ.

ಮಕ್ಕಳ ಆಧಾರ್ ನಲ್ಲಿ ಬಯೋಮೆಟ್ರಿಕ್ ನವೀಕರಿಸುವುದರಿಂದ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು, ಅನ್ವಯವಾಗುವಲ್ಲಿ ವಿದ್ಯಾರ್ಥಿವೇತನ ಪಡೆಯಲು ಮತ್ತು ದೃಢೀಕರಣವನ್ನು ಕೈಗೊಳ್ಳಲು ಹಾಗೂ NEET, JEE, CUET ನಂತಹ ಸ್ಪರ್ಧಾತ್ಮಕ ಮತ್ತು ವಿಶ್ವವಿದ್ಯಾಲಯ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳ ಆಧಾರ್ ನಲ್ಲಿ ಬಯೋಮೆಟ್ರಿಕ್ ನವೀಕರಿಸಲು ಪೋಷಕರು ಮತ್ತು ಪಾಲಕರನ್ನು ಯುಐಡಿಎಐ ಪ್ರೋತ್ಸಾಹಿಸುತ್ತಿದೆ.

ಈ ಮಿಷನ್ ಮೋಡ್ MBU ಅಭಿಯಾನವು ಆರು ತಿಂಗಳುಗಳಿಂದ ನಡೆಯುತ್ತಿದೆ ಮತ್ತು ಅಕ್ಟೋಬರ್ 1, 2025 ರಿಂದ ಪ್ರಾರಂಭವಾಗುವ ಒಂದು ವರ್ಷದ ಅವಧಿಗೆ 7-15 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ನಲ್ಲಿ MBU ವನ್ನು ಯುಐಡಿಎಐ ಉಚಿತಗೊಳಿಸಿದೆ.

ಶಾಲೆಗಳಲ್ಲಿ ನಡೆಯುವ ಶಿಬಿರಗಳ ಹೊರತಾಗಿ, ಮಕ್ಕಳು ಭಾರತದಾದ್ಯಂತ ಇರುವ ಯಾವುದೇ ಆಧಾರ್ ನೋಂದಣಿ ಕೇಂದ್ರಗಳು ಮತ್ತು ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕವೂ ತಮ್ಮ MBU ಪೂರ್ಣಗೊಳಿಸಬಹುದು.

 

*****


(ಪ್ರಕಟಣೆ ಐ.ಡಿ.: 2234939) ವಿಸಿಟರ್ ಕೌಂಟರ್ : 75
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali-TR , Bengali , Punjabi , Gujarati , Tamil , Telugu , Malayalam