ನಾಗರೀಕ ವಿಮಾನಯಾನ ಸಚಿವಾಲಯ
ಕಾರ್ಯಾಚರಣೆಯ ಅಪ್ ಡೇಟ್ – ಮಧ್ಯಪ್ರಾಚ್ಯ ವೈಮಾನಿಕ ವಲಯದ ಪರಿಸ್ಥಿತಿ
ಪ್ರಕಟಣಾ ದಿನಾಂಕ:
02 MAR 2026 9:19PM by PIB Bengaluru
ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಬದಲಾಗುತ್ತಿರುವ ವೈಮಾನಿಕ ವಲಯದ (airspace) ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಅದರ ಪ್ರಭಾವವನ್ನು ನಾಗರಿಕ ವಿಮಾನಯಾನ ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ವೇಳಾಪಟ್ಟಿಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡಿವೆ. ನಿರ್ಬಂಧಿತ ವೈಮಾನಿಕ ಪ್ರದೇಶಗಳನ್ನು ಹೊರತುಪಡಿಸಿ, ಪರ್ಯಾಯ ಮಾರ್ಗಗಳ ಮೂಲಕ ಸುದೀರ್ಘ ಪ್ರಯಾಣದ (long-haul and ultra long-haul) ಕಾರ್ಯಾಚರಣೆಗಳನ್ನು ಹಂತಹಂತವಾಗಿ ಪುನರಾರಂಭಿಸಲಾಗುತ್ತಿದೆ. ಕಾರ್ಯಾಚರಣೆಯ ಸ್ಥಿರತೆಯನ್ನು ಆದಷ್ಟು ಬೇಗ ಪುನಸ್ಥಾಪಿಸಲು ವಿಮಾನಗಳು ಮತ್ತು ಸಿಬ್ಬಂದಿ ಮರುನಿಯೋಜನೆ ಕ್ರಮಗಳು ನಡೆಯುತ್ತಿವೆ.
ಸಿಲುಕಿಕೊಂಡಿರುವ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ವಿಮಾನಯಾನ ಸಂಸ್ಥೆಗಳು ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ವಿಮಾನಗಳನ್ನು ನಿಯೋಜಿಸುತ್ತಿವೆ ಮತ್ತು ಪ್ರಯಾಣಿಕರ ಸುರಕ್ಷಿತ ಹಾಗೂ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ವಿದೇಶಿ ವಿಮಾನಯಾನ ಪ್ರಾಧಿಕಾರಗಳು ಮತ್ತು ವಿದೇಶಗಳಲ್ಲಿರುವ ಭಾರತೀಯ ಮಿಷನ್‌ಗಳೊಂದಿಗೆ ನಿಕಟ ಸಮನ್ವಯ ಸಾಧಿಸುತ್ತಿವೆ.
ಅಗತ್ಯ ಅನುಮೋದನೆಗಳು ಮತ್ತು ಅಂದಿನ ವೈಮಾನಿಕ ಪರಿಸ್ಥಿತಿಗೆ ಒಳಪಟ್ಟು, ಸಿಲುಕಿಕೊಂಡಿರುವ ಪ್ರಯಾಣಿಕರ ವಾಪಸಾತಿಗಾಗಿ ಇಂಡಿಗೋ (IndiGo) ಸಂಸ್ಥೆಯು 2026ರ ಮಾರ್ಚ್ 3 ರಂದು ಜೆಡ್ಡಾದಿಂದ ಭಾರತಕ್ಕೆ 10 ವಿಶೇಷ ಪರಿಹಾರ ಕಾರ್ಯಾಚರಣೆಗಳನ್ನು ಯೋಜಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಂಡಿಗೋ ಸಂಸ್ಥೆಯು ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯೊಂದಿಗೆ ಸಮನ್ವಯ ಸಾಧಿತ್ತಿದೆ.
ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ವಿದೇಶಿ ವಿಮಾನಯಾನ ಸಂಸ್ಥೆಗಳು ಸಹ ಕಾರ್ಯಾಚರಣೆ ಮತ್ತು ವೈಮಾನಿಕ ವಲಯದ ಪರಿಸ್ಥಿತಿಗಳಿಗೆ ಒಳಪಟ್ಟು ಸೀಮಿತ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಪ್ರಯಾಣಿಕರ ಸುರಕ್ಷತೆಯೇ ಅತ್ಯಂತ ಪ್ರಮುಖವಾಗಿದೆ. ಪ್ರಯಾಣಿಕರೊಂದಿಗೆ ಪಾರದರ್ಶಕ ಸಂವಹನವನ್ನು ಕಾಪಾಡಿಕೊಳ್ಳಲು ಮತ್ತು ಮರುಪಾವತಿ (refunds), ಮರುಹೊಂದಾಣಿಕೆ (rescheduling) ಹಾಗೂ ಪ್ರಯಾಣಿಕರ ಸಹಾಯಕ್ಕೆ ಸಂಬಂಧಿಸಿದ ನಿಯಂತ್ರಕ ಅಗತ್ಯತೆಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನದ ಇತ್ತೀಚಿನ ಸ್ಥಿತಿಯನ್ನು ನೇರವಾಗಿ ಆಯಾ ವಿಮಾನಯಾನ ಸಂಸ್ಥೆಗಳ ಮೂಲಕ ಪರಿಶೀಲಿಸಲು ಮತ್ತು ಅಪ್‌ಡೇಟ್ ಗಳಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಲು ಸಲಹೆ ನೀಡಲಾಗಿದೆ.
ನಾಗರಿಕ ವಿಮಾನಯಾನ ಸಚಿವರಾದ ಶ್ರೀ ರಾಮಮೋಹನ್ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಈ ಸಭೆಯಲ್ಲಿ ನಾಗರಿಕ ವಿಮಾನಯಾನ ಕಾರ್ಯದರ್ಶಿ ಶ್ರೀ ಸಮೀರ್ ಕುಮಾರ್ ಸಿನ್ಹಾ ಮತ್ತು ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುರಕ್ಷಿತ ಕಾರ್ಯಾಚರಣೆ, ಸೇವೆಗಳ ವ್ಯವಸ್ಥಿತ ಪುನಸ್ಥಾಪನೆ ಮತ್ತು ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ನೆರವು ನೀಡಲು ಸಚಿವಾಲಯವು ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ನಿರ್ವಾಹಕರು, ನಿಯಂತ್ರಕ ಪ್ರಾಧಿಕಾರಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಮನ್ವಯದಲ್ಲಿದೆ.
ಅಗತ್ಯಕ್ಕೆ ಅನುಗುಣವಾಗಿ ಮುಂದಿನ ಅಪ್ ಡೇಟ್ ಗಳನ್ನು ನೀಡಲಾಗುವುದು.
*****
(ಪ್ರಕಟಣೆ ಐ.ಡಿ.: 2234799)
ವಿಸಿಟರ್ ಕೌಂಟರ್ : 60