ರಾಷ್ಟ್ರಪತಿಗಳ ಕಾರ್ಯಾಲಯ
ಶೇಗಾಂವ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಮೇಳ 2026 ಅನ್ನು ಉದ್ಘಾಟಿಸಿದ ಭಾರತದ ರಾಷ್ಟ್ರಪತಿ
ಆಯುಷ್ ವೈದ್ಯಕೀಯ ವ್ಯವಸ್ಥೆಗಳು ನಾಗರಿಕರ ಆರೋಗ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಪ್ರಕಟಣಾ ದಿನಾಂಕ:
25 FEB 2026 2:26PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2026ರ ಫೆಬ್ರವರಿ 25) ಮಹಾರಾಷ್ಟ್ರದ ಬುಲ್ಧಾನಾದ ಶೇಗಾಂವ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಮೇಳ 2026 ಅನ್ನು ಉದ್ಘಾಟಿಸಿದರು. ಆಯುಷ್ ಆರೋಗ್ಯ ವಲಯದಲ್ಲಿ ಪ್ರಮುಖ ಕೊಡುಗೆ ನೀಡಿದ ಆರು ಹಿರಿಯ ವೈದ್ಯರನ್ನು ಅವರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ರಾಷ್ಟ್ರಪತಿ, ”ನಮ್ಮ ಸಂಪ್ರದಾಯದಲ್ಲಿ ಸಮಗ್ರ ಆರೋಗ್ಯವನ್ನು ಅತ್ಯಂತ ದೊಡ್ಡ ಸಂತೋಷವೆಂದು ಪರಿಗಣಿಸಲಾಗುತ್ತದೆ. ದೇಶವನ್ನು ಬಲಪಡಿಸುವಲ್ಲಿ ಆರೋಗ್ಯವಂತ ನಾಗರಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಆಯುಷ್ ವೈದ್ಯಕೀಯ ಪದ್ಧತಿಗಳು ನಾಗರಿಕರ ಆರೋಗ್ಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡುತ್ತಿವೆ. ಆಧುನಿಕ ವೈದ್ಯಕೀಯ ಪದ್ಧತಿಯ ಉದಯಕ್ಕಿಂತ ಮುಂಚಿನಿಂದಲೂ ಯೋಗ, ಆಯುರ್ವೇದ ಮತ್ತು ಸಿದ್ಧದಂತಹ ಪದ್ಧತಿಗಳು ಜನರಿಗೆ ಸೇವೆ ಸಲ್ಲಿಸುತ್ತಿವೆ’’ ಎಂದರು.

“ನಮ್ಮ ಕೃಷಿ ತೋಟಗಳು, ಅಡುಗೆಮನೆಗಳು ಮತ್ತು ಕಾಡುಗಳು ಔಷಧೀಯ ಸಸ್ಯಗಳು ಮತ್ತು ಆರೋಗ್ಯ ರಕ್ಷಿಸುವ ಗಿಡಮೂಲಿಕೆಗಳ ಅಮೂಲ್ಯ ನಿಧಿಯನ್ನು ಹೊಂದಿವೆ ಎಂದು ರಾಷ್ಟ್ರಪತಿಗಳು ಹೇಳಿದರು. ಔಷಧಿಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸಲು ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಈ ಅಮೂಲ್ಯ ಸಂಪತ್ತನ್ನು ಸಂರಕ್ಷಿಸುವುದು ಮತ್ತು ವೃದ್ಧಿಸುವುದು ನಿರ್ಣಾಯಕವಾಗಿದೆ. ಗಿಡ ಮೂಲಿಕೆಗಳನ್ನು ಬೆಳೆಸುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಮಣ್ಣಿನ ಆರೋಗ್ಯ ಮತ್ತು ಸಂರಕ್ಷಣೆಗೆ ಕೊಡುಗೆ ನೀಡುತ್ತದೆ. ಆದ್ದರಿಂದ ಆಯುಷ್ ವ್ಯವಸ್ಥೆಗಳನ್ನು ಉತ್ತೇಜಿಸುವುದು ಜನರ ದೈಹಿಕ ಮತ್ತು ಆರ್ಥಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ ಪರಿಸರ ಸಂರಕ್ಷಣೆಯನ್ನೂ ಸಹ ಬೆಂಬಲಿಸುತ್ತದೆ’’ ಎಂದು ಅವರು ಹೇಳಿದರು.
ಆಯುರ್ವೇದ, ಯೋಗ ಮತ್ತು ಇತರ ಆಯುಷ್ ವ್ಯವಸ್ಥೆಗಳು ಆರೋಗ್ಯಕರ ಮತ್ತು ಸಮತೋಲಿತ ಜೀವನವನ್ನು ನಡೆಸುವ ಬಗ್ಗೆ ಮಾರ್ಗದರ್ಶನ ನೀಡುತ್ತವೆ ಎಂದು ರಾಷ್ಟ್ರಪತಿಗಳು ಹೇಳಿದರು. ಇಂದು ರೋಗಗಳ ನಿಯಂತ್ರಣದಲ್ಲಿ ಸಮಗ್ರ ಔಷಧದ ಮಹತ್ವವನ್ನುವಿಶ್ವ ಗುರುತಿಸುತ್ತಿದೆ. ಜಗತ್ತಿನಾದ್ಯಂತ ಜನರು ಒತ್ತಡ-ಮುಕ್ತ ಮತ್ತು ಆರೋಗ್ಯಕರ ಜೀವನಶೈಲಿಗಾಗಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಆಯುರ್ವೇದ ಚಿಕಿತ್ಸೆಗಳು ಮತ್ತು ಔಷಧಿಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ರಾಷ್ಟ್ರಪತಿ ತಿಳಿಸಿದರು.

“ಸಾಕ್ಷ್ಯಾಧಾರಿತ ಸಂಶೋಧನೆ, ಔಷಧಿಗಳ ಪ್ರಮಾಣೀಕರಣ ಮತ್ತು ಗುಣಮಟ್ಟ ನಿಯಂತ್ರಣದಂತಹ ಕ್ರಮಗಳು ಆಯುಷ್ ವ್ಯವಸ್ಥೆಗಳ ಮಾನ್ಯತೆ ಮತ್ತು ಸ್ವೀಕಾರವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ರಾಷ್ಟ್ರಪತಿ ಹೇಳಿದರು. ಆಯುಷ್ ಸಚಿವಾಲಯವು ಆ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ’’ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸಂಶೋಧನೆ ಮತ್ತು ಔಷಧ ಅಭಿವೃದ್ಧಿಗೆ ಸಾಮಾನ್ಯ ಮಾರ್ಗಸೂಚಿಗಳನ್ನು ಸ್ಥಾಪಿಸಲಾಗಿದೆ. ಆಯುರ್ವೇದ, ಯೋಗ ಮತ್ತು ಇತರ ಆಯುಷ್ ವ್ಯವಸ್ಥೆಗಳನ್ನು ಆಧುನಿಕ ಆರೋಗ್ಯ ಸವಾಲುಗಳಿಗೆ ವಿಶ್ವಾಸಾರ್ಹ, ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಲು ಹಲವು ವೈಜ್ಞಾನಿಕ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಆಧುನಿಕ ವೈಜ್ಞಾನಿಕ ಮಧ್ಯಸ್ಥಿಕೆಗಳು, ನಾವೀನ್ಯತೆಗಳು ಮತ್ತು ಜಾಗತಿಕ ಸಹಯೋಗದ ಮೂಲಕ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳನ್ನು ಹೆಚ್ಚೆಚ್ಚು ಲಭ್ಯವಾಗುವಂತೆ ಮತ್ತು ಜನಪ್ರಿಯಗೊಳಿಸುವ ಮೂಲಕ ನಾವು ಅವುಗಳನ್ನು ಸಮಗ್ರ ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಅಂಗವನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಅವರು ಪೂರ್ಣ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
*****
(ಪ್ರಕಟಣೆ ಐ.ಡಿ.: 2232690)
ವಿಸಿಟರ್ ಕೌಂಟರ್ : 17