ನೀತಿ ಆಯೋಗ
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ 2.0 (ಎನ್ ಎಂ ಪಿ 2.0) ಗೆ ಚಾಲನೆ
ಎನ್ ಎಂ ಪಿ 2.0 ವಿಕಸಿತ ಭಾರತ ಅಭಿಯಾನದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿದೆ: ಕೇಂದ್ರ ಹಣಕಾಸು ಸಚಿವರು
ಎನ್ ಎಂ ಪಿ 2.0 ಅಡಿಯಲ್ಲಿ ₹16.72 ಲಕ್ಷ ಕೋಟಿ ನಗದೀಕರಣ ಸಾಮರ್ಥ್ಯದ ಅಂದಾಜು
ಪ್ರಕಟಣಾ ದಿನಾಂಕ:
23 FEB 2026 7:49PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಆಸ್ತಿ ನಗದೀಕರಣ ಯೋಜನೆಯ ಎರಡನೇ ಹಂತವಾದ ‘ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ 2.0 (ಎನ್ ಎಂ ಪಿ 2.0)’ ಕ್ಕೆ ಚಾಲನೆ ನೀಡಿದರು. ಎರಡನೇ ಹಂತದ ಈ ಯೋಜನೆಯನ್ನು ನೀತಿ ಆಯೋಗವು ಮೂಲಸೌಕರ್ಯ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಿದೆ. ಇದು ಕೇಂದ್ರ ಬಜೆಟ್ 2025-26 ರಲ್ಲಿ ಘೋಷಿಸಲಾದ ‘ಆಸ್ತಿ ನಗದೀಕರಣ ಯೋಜನೆ 2025-30’ ರ ಆದೇಶವನ್ನು ಆಧರಿಸಿದೆ.

ಎನ್ ಎಂ ಪಿ 2.0 ಯೋಜನೆಯು ಹಣಕಾಸು ವರ್ಷ 2026 ರಿಂದ 2030 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು ₹16.72 ಲಕ್ಷ ಕೋಟಿ ನಗದೀಕರಣ ಸಾಮರ್ಥ್ಯವನ್ನು ಅಂದಾಜಿಸಿದೆ. ಇದರಲ್ಲಿ ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಅಡಿಯಲ್ಲಿ ₹5.8 ಲಕ್ಷ ಕೋಟಿ ಖಾಸಗಿ ವಲಯದ ಹೂಡಿಕೆಯೂ ಸೇರಿದೆ.
ನೀತಿ ಆಯೋಗದ ಸಿಇಒ ಮತ್ತು ಮತ್ತು ಮೂಲಸೌಕರ್ಯ ಸಚಿವಾಲಯಗಳಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೇ, ವಿದ್ಯುತ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಬಂದರು ಹಡಗು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಪ್ರವಾಸೋದ್ಯಮ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗಣಿಗಾರಿಕೆ, ಕಲ್ಲಿದ್ದಲು ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಕಾರ್ಯದರ್ಶಿಗಳು ಸೇರಿದಂತೆ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು, ಕಾನೂನು ಕಾರ್ಯದರ್ಶಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಉಪಸ್ಥಿತಿಯಲ್ಲಿ ಇಂದು ಎನ್ ಎಂ ಪಿ 2.0 ಅನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವರು, ಎನ್ ಎಂ ಪಿ 1.0 ಅನುಷ್ಠಾನದಲ್ಲಿ 4 ವರ್ಷಗಳ ಅವಧಿಗೆ ನಿಗದಿಪಡಿಸಲಾಗಿದ್ದ 6 ಲಕ್ಷ ಕೋಟಿ ರೂಪಾಯಿಗಳ ಗುರಿಯ ಸುಮಾರು ಶೇ.90 ರಷ್ಟನ್ನು ಸಾಧಿಸಿದ್ದಕ್ಕಾಗಿ ಎಲ್ಲಾ ಸಚಿವಾಲಯಗಳು/ಇಲಾಖೆಗಳು ಮತ್ತು ನೀತಿ ಆಯೋಗವನ್ನು ಅಭಿನಂದಿಸಿದರು.
ವೇಗವರ್ಧಿತ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ವಿಕಸಿತ ಭಾರತವನ್ನು ಸಾಧಿಸುವ ಗುರಿಗೆ ಎನ್ ಎಂ ಪಿ 2.0 ಪೂರಕವಾಗಿದೆ ಮತ್ತು ಭಾರತದ ಬೆಳವಣಿಗೆಯ ವೇಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಎನ್ ಎಂ ಪಿ 1.0 ದೊಡ್ಡ ಪ್ರಮಾಣದ ಇಂತಹ ಮೊದಲ ಯೋಜನೆಯಾಗಿದ್ದು, ಸಂಬಂಧಪಟ್ಟ ಪ್ರಾಧಿಕಾರಗಳು ಅದರಿಂದ ಕಲಿತ ಉತ್ತಮ ಅಭ್ಯಾಸಗಳನ್ನು ಎನ್ ಎಂ ಪಿ 2.0 ನಲ್ಲಿ ಬಳಸಿಕೊಳ್ಳಬೇಕು ಎಂದು ಹಣಕಾಸು ಸಚಿವರು ಹೇಳಿದರು. ಎನ್ ಎಂ ಪಿ 1.0 ರ ಕಲಿಕೆಗಳು ಮತ್ತು ಅನುಭವಗಳು ಸಂಪನ್ಮೂಲಗಳನ್ನು ಮತ್ತು ಅವಕಾಶಗಳನ್ನು ಸಕಾಲದಲ್ಲಿ ಫಲಿತಾಂಶ ಪಡೆಯಲು ಉತ್ತಮ ಮಾರ್ಗದರ್ಶಿಯಾಗಲಿವೆ ಎಂದು ಅವರು ಒತ್ತಿ ಹೇಳಿದರು. ನಗದೀಕರಣವು ಸುಗಮ ಅನುಭವವಾಗಲು ಪ್ರಕ್ರಿಯೆಗಳ ಸರಳೀಕರಣ ಮತ್ತು ಪ್ರಮಾಣೀಕರಣದ ಮೇಲೆ ಗಮನಹರಿಸುವಂತೆ ಸಚಿವರು ಎಲ್ಲಾ ಇಲಾಖೆಗಳಿಗೆ ಕರೆ ನೀಡಿದರು.
ಐದು ವರ್ಷಗಳ ಆಸ್ತಿ ನಗದೀಕರಣ ಗುರಿಯನ್ನು ₹16.7 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ಇದು ಎನ್ ಎಂ ಪಿ 1.0 ಕ್ಕಿಂತ 2.6 ಪಟ್ಟು ಹೆಚ್ಚಾಗಿದ್ದು, ಸಚಿವಾಲಯಗಳು/ಇಲಾಖೆಗಳು ಸಕ್ರಿಯ ಪ್ರಯತ್ನಗಳ ಮೂಲಕ ನಿಗದಿತ ಗುರಿಗಳನ್ನು ಮೀರಿ ಸಾಧಿಸುವ ಗುರಿ ಹೊಂದಬೇಕು ಎಂದು ಶ್ರೀಮತಿ ಸೀತಾರಾಮನ್ ತಿಳಿಸಿದರು.
ಆಸ್ತಿ ನಗದೀಕರಣದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಸಚಿವರು, ಎನ್ ಎಂ ಪಿ ಯು ಉತ್ಪಾದಕ ಸಾರ್ವಜನಿಕ ಆಸ್ತಿಗಳ ಮರುಬಳಕೆಗೆ ಅನುವು ಮಾಡಿಕೊಡುತ್ತದೆ, ಆ ಮೂಲಕ ಹೊಸ ಯೋಜನೆಗಳು ಮತ್ತು ಬಂಡವಾಳ ವೆಚ್ಚಕ್ಕಾಗಿ ಸಂಪನ್ಮೂಲಗಳನ್ನು ಲಭ್ಯಗೊಳಿಸುತ್ತದೆ. ಈ ವಿಧಾನವು ಸರ್ಕಾರದ ಬಜೆಟ್ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಾರ್ವಜನಿಕ ಆಸ್ತಿಗಳಲ್ಲಿ ಬಂಡವಾಳ ವೆಚ್ಚಕ್ಕಾಗಿ ಹಣವನ್ನು ಪರಿಣಾಮಕಾರಿಯಾಗಿ ಕ್ರೋಢೀಕರಿಸಲು ಅನುಕೂಲ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಎನ್ ಎಂ ಪಿ 2.0 ನೀತಿ ಆಯೋಗ, ಹಣಕಾಸು ಸಚಿವಾಲಯ ಮತ್ತು ಸಂಬಂಧಿತ ಸಚಿವಾಲಯಗಳು ನಡೆಸಿದ ಬಹು-ಪಾಲುದಾರರ ಸಮಾಲೋಚನೆಗಳ ಮೂಲಕ ಪಡೆದ ಒಳನೋಟಗಳು, ಪ್ರತಿಕ್ರಿಯೆ ಮತ್ತು ಅನುಭವಗಳ ಫಲಿತಾಂಶವಾಗಿದೆ. ನೀತಿ ಆಯೋಗವು ಪಾಲುದಾರರೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದೆ. ಇದು ʼಇಡೀ ಸರ್ಕಾರʼದ ಒಂದು ಸಮಗ್ರ ಉಪಕ್ರಮವಾಗಿದೆ.
ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಆಸ್ತಿ ನಗದೀಕರಣದ ಉನ್ನತ ಮಟ್ಟದ ಕಾರ್ಯದರ್ಶಿಗಳ ಸಮಿತಿಯು (ಸಿಜಿಎಎಂ) ಈ ಕಾರ್ಯಕ್ರಮದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ. ಸುಧಾರಿತ ಮೂಲಸೌಕರ್ಯ ಗುಣಮಟ್ಟ ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣೆಯ ಮೂಲಕ ಆಸ್ತಿ ನಗದೀಕರಣ ಕಾರ್ಯಕ್ರಮವನ್ನು ಸಾರ್ವಜನಿಕ ವಲಯ ಮತ್ತು ಖಾಸಗಿ ಹೂಡಿಕೆದಾರರಿಗೆ ಲಾಭದಾಯಕವಾಗಿಸಲು ಸರ್ಕಾರ ಬದ್ಧವಾಗಿದೆ.

ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ 2.0 ರ ಬಗ್ಗೆ
ಕೇಂದ್ರ ಬಜೆಟ್ 2025-26, ಮೊದಲ ಆಸ್ತಿ ನಗದೀಕರಣ ಯೋಜನೆಯ ಯಶಸ್ಸನ್ನು ಆಧರಿಸಿ, ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಮೂಲಸೌಕರ್ಯ ಆಸ್ತಿಗಳ ನಗದೀಕರಣವನ್ನು ಸುಸ್ಥಿರ ಮೂಲಸೌಕರ್ಯ ಹಣಕಾಸಿನ ಪ್ರಮುಖ ಸಾಧನವೆಂದು ಗುರುತಿಸಿದೆ. ಇದಕ್ಕಾಗಿ ಬಜೆಟ್ ನಲ್ಲಿ ‘ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ 2.0 (ಎನ್ ಎಂ ಪಿ 2.0)’ ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ನೀತಿ ಆಯೋಗವು ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಎನ್ ಎಂ ಪಿ 2.0 ವರದಿಯನ್ನು ಸಿದ್ಧಪಡಿಸಿದೆ.
ಎನ್ ಎಂ ಪಿ 2.0 ಸಾರ್ವಜನಿಕ ಆಸ್ತಿ ಮಾಲೀಕರಿಗೆ ಯೋಜನೆಯ ಮಧ್ಯಕಾಲೀನ ಮಾರ್ಗಸೂಚಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ; ಜೊತೆಗೆ ಖಾಸಗಿ ವಲಯಕ್ಕೆ ಸಂಭಾವ್ಯ ಆಸ್ತಿಗಳ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ. ಎನ್ ಎಂ ಪಿ 2.0 ವರದಿಯನ್ನು ಮಾರ್ಗದರ್ಶಿ ಪುಸ್ತಕವಾಗಿ ರಚಿಸಲಾಗಿದ್ದು, ಇದರಲ್ಲಿ ನಗದೀಕರಣದ ವಿಧಾನ ಮತ್ತು ಮಾರ್ಗಸೂಚಿಯನ್ನು ವಿವರಿಸಲಾಗಿದೆ.
ಚೌಕಟ್ಟು: ಎನ್ ಎಂ ಪಿ 2.0 ವಿಶಾಲವಾಗಿ ಎನ್ ಎಂ ಪಿ 1.0 ರಲ್ಲಿ ವಿವರಿಸಲಾದ ಆಸ್ತಿ ನಗದೀಕರಣದ ಪರಿಕಲ್ಪನೆಯನ್ನೇ ಅನುಸರಿಸುತ್ತದೆ. ಆಸ್ತಿ ನಗದೀಕರಣವು ಸೀಮಿತ ಅವಧಿಗೆ ಆಸ್ತಿಗಳ ಹಸ್ತಾಂತರ, ಹೆಚ್ಚುವರಿ ಬಂಡವಾಳವನ್ನು ಪಡೆಯಲು ಪಟ್ಟಿ ಮಾಡಲಾದ ಘಟಕಗಳ ಭಾಗಶಃ ಬಂಡವಾಳ ಹಿಂತೆಗೆತ, ಕಾರ್ಯತಂತ್ರದ ವಾಣಿಜ್ಯ ಹರಾಜಿನಂತಹ ಅಂಶಗಳನ್ನು ಒಳಗೊಂಡಿರುತ್ತದೆ.
ಎನ್ ಎಂ ಪಿ 2.0 ಅಡಿಯಲ್ಲಿ ನಗದೀಕರಣ ಸಾಮರ್ಥ್ಯದ ಅಂದಾಜಿನ ವಿಧಾನವನ್ನು ಐದು ಹಂತಗಳಾಗಿ ವಿಂಗಡಿಸಲಾಗಿದೆ.

ಆಸ್ತಿ ನಗದೀಕರಣ ಯೋಜನೆಗಳಿಂದ ಬರುವ ಹಣವನ್ನು ಅನುಷ್ಠಾನಗೊಳಿಸುವ ಸಂಸ್ಥೆ ಮತ್ತು ನಗದೀಕರಣದ ವಿಧಾನವನ್ನು ಆಧರಿಸಿ ನಾಲ್ಕು ವಿಭಿನ್ನ ವಿಭಾಗಗಳಿಗೆ ಹಂಚಲಾಗುತ್ತದೆ.
- ಭಾರತದ ಸಂಚಿತ ನಿಧಿ: ಕೇಂದ್ರ ಸಚಿವಾಲಯವು ಅನುಷ್ಠಾನಗೊಳಿಸಿದ ಯೋಜನೆಯಿಂದ ಬರುವ ಯಾವುದೇ ರೀತಿಯ ಆದಾಯವು (ಉದಾಹರಣೆಗೆ: ಆದಾಯ ಹಂಚಿಕೆ, ಪ್ರೀಮಿಯಂ, ಬಾಡಿಗೆ, ರಾಯಲ್ಟಿ) ಭಾರತದ ಸಂಚಿತ ನಿಧಿಗೆ ಸೇರುತ್ತದೆ.
- ಪಿ ಎಸ್ ಯು/ಬಂದರು ಪ್ರಾಧಿಕಾರಗಳ ಹಂಚಿಕೆ: ಸಾರ್ವಜನಿಕ ವಲಯದ ಉದ್ದಿಮೆಗಳು ಕೈಗೊಳ್ಳುವ ನಗದೀಕರಣ ಚಟುವಟಿಕೆಗಳಿಂದ ಬರುವ ಆದಾಯವು ಆಯಾ ಉದ್ದಿಮೆಗೆ ಸೇರುತ್ತದೆ (ಪ್ರಮುಖ ಬಂದರು ಪ್ರಾಧಿಕಾರಗಳಿಗೂ ಇದೇ ನಿಯಮ ಅನ್ವಯಿಸುತ್ತದೆ).
- ರಾಜ್ಯ ಸಂಚಿತ ನಿಧಿ: ಎನ್ ಎಂ ಪಿ 2.0 ಅಡಿಯಲ್ಲಿ ಕೆಲವು ಯೋಜನೆಗಳು ರಾಜ್ಯ ಸರ್ಕಾರಗಳಿಗೆ ಆದಾಯವನ್ನು ತರುವ ನಿರೀಕ್ಷೆಯಿದೆ, ವಿಶೇಷವಾಗಿ ಗಣಿ ಮತ್ತು ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದ ಯೋಜನೆಗಳಿಂದ (ರಾಯಲ್ಟಿ ಪಾವತಿಗಳು) ಬರುವ ಆದಾಯವು ರಾಜ್ಯ ಸಂಚಿತ ನಿಧಿಗೆ ಸೇರುತ್ತದೆ.
- ನೇರ ಹೂಡಿಕೆ (ಖಾಸಗಿ): ನಿರ್ಮಾಣ ಮತ್ತು/ಅಥವಾ ಪ್ರಮುಖ ನಿರ್ವಹಣಾ ಘಟಕಗಳನ್ನು ಒಳಗೊಂಡಿರುವ ನಗದೀಕರಣ ಯೋಜನೆಗಳಲ್ಲಿ ಖಾಸಗಿ ವಲಯವು ಮಾಡುವ ಹೂಡಿಕೆಯನ್ನು ಈ ವಿಭಾಗದಲ್ಲಿ ದಾಖಲಿಸಲಾಗುತ್ತದೆ.
ಎನ್ ಎಂ ಪಿ 2.0 ಗುರಿಗಳು: ಐದು ವರ್ಷಗಳ ಅವಧಿಯಲ್ಲಿ (ಆರ್ಥಿಕ ವರ್ಷ 2026-2030) ಎನ್ ಎಂ ಪಿ 2.0 ಅಡಿಯಲ್ಲಿ ಒಟ್ಟು ಆಸ್ತಿಗಳ ಮೌಲ್ಯವು ₹16.72 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ, ಇದರಲ್ಲಿ ₹₹5.8 ಲಕ್ಷ ಕೋಟಿ ಖಾಸಗಿ ವಲಯದ ಹೂಡಿಕೆಯೂ ಸೇರಿದೆ. ಇದರಲ್ಲಿ ಹೆದ್ದಾರಿಗಳು, ರೈಲ್ವೇ, ವಿದ್ಯುತ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಬಂದರುಗಳು, ಗೋದಾಮುಗಳು, ನಗರ ಮೂಲಸೌಕರ್ಯ, ಕಲ್ಲಿದ್ದಲು, ಗಣಿಗಳು, ದೂರಸಂಪರ್ಕ ಮತ್ತು ಪ್ರವಾಸೋದ್ಯಮ ವಲಯಗಳನ್ನು ಸೇರಿಸಲಾಗಿದೆ.
ಕೆಳಗಿನ ಕೋಷ್ಟಕ 1 ಮತ್ತು 2 ರಲ್ಲಿ ಐದು ವರ್ಷಗಳ ಅವಧಿಯ ವಲಯವಾರು ಗುರಿಗಳು ಮತ್ತು ವಾರ್ಷಿಕ ಗುರಿಗಳ ವಿವರಗಳನ್ನು ನೀಡಲಾಗಿದೆ.
ಕೋಷ್ಟಕ - 1: ಆರ್ಥಿಕ ವರ್ಷ 2026-30 ರ ಅವಧಿಯಲ್ಲಿ ವಲಯವಾರು ಎನ್ ಎಂ ಪಿ 2.0 ಗುರಿಗಳು (ಕೋಟಿ ರೂ.ಗಳಲ್ಲಿ)
|
ಕ್ರ.ಸಂ.
|
ವಲಯ
|
ಒಟ್ಟು ನಗದೀಕರಣ ಮೌಲ್ಯ (ಟಿಎಂವಿ)
|
ಒಟ್ಟು ಶೇಕಡಾವಾರು
|
|
1.
|
ಹೆದ್ದಾರಿಗಳು, ಎಂ ಎಂ ಎಲ್ ಪಿ ಗಳು, ರೋಪ್ ವೇ ಗಳು
|
4,42,000
|
26%
|
|
2.
|
ರೈಲ್ವೇ
|
2,62,300
|
16%
|
|
3.
|
ವಿದ್ಯುತ್
|
2,76,500
|
17%
|
|
4.
|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
|
16,300
|
1%
|
|
5.
|
ನಾಗರಿಕ ವಿಮಾನಯಾನ
|
27,500
|
2%
|
|
6.
|
ಬಂದರುಗಳು
|
2,63,700
|
16%
|
|
7.
|
ಗೋದಾಮು ಮತ್ತು ಶೇಖರಣೆ
|
10,000
|
1%
|
|
8.
|
ನಗರ ಮೂಲಸೌಕರ್ಯ
|
52,000
|
3%
|
|
9.
|
ಕಲ್ಲಿದ್ದಲು
|
2,16,000
|
13%
|
|
10.
|
ಗಣಿಗಳು
|
1,00,000
|
6%
|
|
11.
|
ದೂರಸಂಪರ್ಕ
|
4,800
|
0.3%
|
|
12.
|
ಪ್ರವಾಸೋದ್ಯಮ
|
1,200
|
0.1%
|
| |
ಒಟ್ಟು
|
16,72,300
|
100%
|
ಕೋಷ್ಟಕ 2: ಎನ್ ಎಂ ಪಿ 2.0 ರ ಒಟ್ಟು ನಗದೀಕರಣ ಮೌಲ್ಯದ ವಾರ್ಷಿಕ ಹಂಚಿಕೆ, ಆರ್ಥಿಕ ವರ್ಷ 2026 – 2030 (ಕೋಟಿ ರೂ.ಗಳಲ್ಲಿ)
|
ಕ್ರ.ಸಂ.
|
ವಲಯ
|
ಆರ್ಥಿಕ ವರ್ಷ 2026
|
ಆರ್ಥಿಕ ವರ್ಷ 2027
|
ಆರ್ಥಿಕ ವರ್ಷ 2028
|
ಆರ್ಥಿಕ ವರ್ಷ 2029
|
ಆರ್ಥಿಕ ವರ್ಷ 2030
|
ಒಟ್ಟು
|
|
1.
|
ಹೆದ್ದಾರಿಗಳು, ಎಂ ಎಂ ಎಲ್ ಪಿ ಗಳು, ರೋಪ್ ವೇ ಗಳು
|
59,140
|
68,770
|
91,800
|
1,04,430
|
1,17,860
|
4,42,000
|
|
2.
|
ರೈಲ್ವೇ
|
40,580
|
58,451
|
50,464
|
59,214
|
53,591
|
2,62,300
|
|
3.
|
ವಿದ್ಯುತ್
|
49,900
|
54,450
|
62,700
|
54,725
|
54,725
|
2,76,500
|
|
4.
|
ಪೆಟ್ರೋಲಿಯಂ & ನೈಸರ್ಗಿಕ ಅನಿಲ
|
4,240
|
4,288
|
4,658
|
1,557
|
1,557
|
16,300
|
|
5.
|
ನಾಗರಿಕ ವಿಮಾನಯಾನ
|
-
|
9,083
|
5,537
|
4,034
|
8,846
|
27,500
|
|
6.
|
ಬಂದರುಗಳು
|
40,854
|
55,729
|
55,729
|
55,729
|
55,659
|
2,63,700
|
|
7.
|
ಗೋದಾಮು ಮತ್ತು ಶೇಖರಣೆ
|
4,318
|
1,813
|
1,941
|
958
|
970
|
10,000
|
|
8.
|
ನಗರ ರಿಯಲ್ ಎಸ್ಟೇಟ್
|
-
|
5,000
|
5,000
|
21,000
|
21,000
|
52,000
|
|
9.
|
ಕಲ್ಲಿದ್ದಲು
|
31,540
|
48,170
|
47,580
|
45,230
|
43,480
|
2,16,000
|
|
10.
|
ಗಣಿಗಳು
|
18,101
|
18,986
|
19,963
|
20,940
|
22,010
|
1,00,000
|
|
11.
|
ದೂರಸಂಪರ್ಕ
|
820
|
875
|
940
|
1,035
|
1,130
|
4,800
|
|
12.
|
ಪ್ರವಾಸೋದ್ಯಮ
|
-
|
820
|
-
|
-
|
380
|
1,200
|
| |
ಒಟ್ಟು
|
2,49,493
|
3,26,435
|
3,46,312
|
3,68,852
|
3,81,208
|
16,72,300
|
ಎನ್ ಎಂ ಪಿ 2.0 ಅಡಿಯಲ್ಲಿ ಬರುವ ಆದಾಯದ ಅತಿದೊಡ್ಡ ಭಾಗವು ಭಾರತದ ಸಂಚಿತ ನಿಧಿಗೆ ಸೇರುವ ನಿರೀಕ್ಷೆಯಿದೆ, ನಂತರದ ಸ್ಥಾನಗಳಲ್ಲಿ ನೇರ ಹೂಡಿಕೆ (ಖಾಸಗಿ), ಪಿ ಎಸ್ ಯು ಅಥವಾ ಬಂದರು ಪ್ರಾಧಿಕಾರಗಳ ಹಂಚಿಕೆ ಮತ್ತು ರಾಜ್ಯ ಸಂಚಿತ ನಿಧಿ ಸೇರುತ್ತದೆ.
ಎನ್ ಎಂ ಪಿ 2.0 ಅಡಿಯಲ್ಲಿ ಗುರುತಿಸಲಾದ ಆಸ್ತಿಗಳು ಮತ್ತು ವಹಿವಾಟುಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಗುತ್ತಿಗೆಗಳಂತಹ ನೇರ ಒಪ್ಪಂದದ ವಿಧಾನಗಳು ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (InvIT) ಗಳಂತಹ ಬಂಡವಾಳ ಮಾರುಕಟ್ಟೆ ವಿಧಾನಗಳ ಮೂಲಕ ಹೊರತರಲಾಗುವುದು. ವಿಧಾನದ ಆಯ್ಕೆಯು ಆಯಾ ವಲಯ, ಆಸ್ತಿಯ ಸ್ವರೂಪ, ವಹಿವಾಟಿನ ಸಮಯ, ಹೂಡಿಕೆದಾರರ ವಿವರ ಮತ್ತು ಆಸ್ತಿ ಮಾಲೀಕರು ಉಳಿಸಿಕೊಳ್ಳಲು ಉದ್ದೇಶಿಸಿರುವ ಕಾರ್ಯಾಚರಣೆಯ ನಿಯಂತ್ರಣದ ಮಟ್ಟವನ್ನು ಅವಲಂಬಿಸಿರುತ್ತದೆ.
ಎನ್ ಎಂ ಪಿ 2.0 ಅಡಿಯಲ್ಲಿ ಅಂದಾಜಿಸಲಾದ ನಗದೀಕರಣ ಮೌಲ್ಯಗಳು ಸಾಂಕೇತಿಕವಾಗಿದ್ದು, ವಾಸ್ತವಿಕ ವಹಿವಾಟಿನ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರಬಹುದು.
ಸಂಪೂರ್ಣ ವರದಿಯನ್ನು ಇಲ್ಲಿ ನೋಡಬಹುದು: https://niti.gov.in/sites/default/files/2026-02/National-Monetisation-Pipeline.pdf
*****
(ಪ್ರಕಟಣೆ ಐ.ಡಿ.: 2231965)
ವಿಸಿಟರ್ ಕೌಂಟರ್ : 16