ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತ ಮತ್ತು ಬ್ರೆಜಿಲ್ ನಡುವೆ ಅಂಚೆ ವಲಯದಲ್ಲಿ ಸಹಕಾರವನ್ನು ಬಲಪಡಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ

ಪ್ರಕಟಣಾ ದಿನಾಂಕ: 22 FEB 2026 12:20PM by PIB Bengaluru

ಭಾರತ ಮತ್ತು ಬ್ರೆಜಿಲ್ ಅಂಚೆ ವಲಯದಲ್ಲಿನ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಅಂಚೆ ಸೇವೆಗಳು, ಡಿಜಿಟಲ್ ಪರಿವರ್ತನೆ ಮತ್ತು ಸಮಗ್ರ ಸೇವಾ ವಿತರಣೆಯಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಬ್ರೆಜಿಲ್ ಒಕ್ಕೂಟ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರ ಭಾರತದ ಭೇಟಿಯ ಸಂದರ್ಭದಲ್ಲಿ, ಭಾರತ ಸರ್ಕಾರದ ಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಮತ್ತು ಬ್ರೆಜಿಲ್‌ ನ ಸಂಪರ್ಕ ಸಚಿವ ಗೌರವಾನ್ವಿತ ಶ್ರೀ ಫ್ರೆಡೆರಿಕೊ ಡಿ ಸಿಕುಯೆರಾ ಫಿಲೋ ಅವರು ಈ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದರು.

ಈ ಒಪ್ಪಂದವು ಭಾರತದ ಅಂಚೆ ಇಲಾಖೆ ಮತ್ತು ಬ್ರೆಜಿಲ್‌ ನ ಸಂಪರ್ಕ ಸಚಿವಾಲಯದ ನಡುವೆ ಸಹಕಾರಕ್ಕಾಗಿ ಒಂದು ಸಮಗ್ರ ಚೌಕಟ್ಟನ್ನು ಸ್ಥಾಪಿಸುತ್ತದೆ. ಇದು ಅಂಚೆ ಕ್ಷೇತ್ರದಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಜ್ಞಾನ ವಿನಿಮಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

(ಭಾರತ ಮತ್ತು ಬ್ರೆಜಿಲ್ ನಡುವೆ ಅಂಚೆ ವಲಯದ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀ ಫ್ರೆಡೆರಿಕೊ ಡಿ ಸಿಕುಯೆರಾ ಫಿಲೋ ಅವರು ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.)

ತಿಳುವಳಿಕೆ ಒಪ್ಪಂದವು ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಯೋಗವನ್ನು ಒದಗಿಸುತ್ತದೆ:

  • ಅಂಚೆ ವಲಯದ ನೀತಿಗಳು ಮತ್ತು ಕಾರ್ಯಾಚರಣೆಗಳಲ್ಲಿ ಉತ್ತಮ ಪದ್ಧತಿಗಳು ಮತ್ತು ಪರಿಣತಿಯ ವಿನಿಮಯ.
  • ಸಾರ್ವತ್ರಿಕ ಸೇವೆ ಮತ್ತು ವಿಳಾಸ ವ್ಯವಸ್ಥೆಗಳನ್ನು ಬಲಪಡಿಸುವುದು.
  • ಡಿಜಿಟಲ್ ಪರಿವರ್ತನೆ, ಇ-ಕಾಮರ್ಸ್ ಲಾಜಿಸ್ಟಿಕ್ಸ್ ಮತ್ತು ಅಂಚೆ ಹಣಕಾಸು ಸೇವೆಗಳಲ್ಲಿ ಸಹಕಾರ.
  • ಸಾಮರ್ಥ್ಯ ವರ್ಧನೆ, ತರಬೇತಿ ಮತ್ತು ತಾಂತ್ರಿಕ ವಿನಿಮಯ.
  • ಪರಸ್ಪರ ಆಸಕ್ತಿಯ ಜಂಟಿ ಉಪಕ್ರಮಗಳು ಮತ್ತು ಕಾರ್ಯತಂತ್ರದ ಯೋಜನೆಗಳು.
  • ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸುಧಾರಿತ ಸಮನ್ವಯ.
  • ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಗಾಗಿ ದಕ್ಷಿಣ-ದಕ್ಷಿಣ ಸಹಕಾರದ ಉತ್ತೇಜನ.

ಅಧಿಕಾರಿಗಳು ಮತ್ತು ತಜ್ಞರ ಭೇಟಿಗಳು, ಜಂಟಿ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳ ಆಯೋಜನೆ ಹಾಗೂ ಎರಡೂ ಕಡೆಗಳ ನಡುವೆ ವ್ಯವಸ್ಥಿತ ಮಾಹಿತಿ ಹಂಚಿಕೆಯ ಮೂಲಕ ಈ ಪಾಲುದಾರಿಕೆಯನ್ನು ಜಾರಿಗೆ ತರಲಾಗುವುದು.

ಅಂಚೆ ವ್ಯವಸ್ಥೆಗಳನ್ನು ಆಧುನೀಕರಿಸುವಲ್ಲಿ ಮತ್ತು ಅವುಗಳ ಜಾಲವನ್ನು ಆರ್ಥಿಕ ಬೆಳವಣಿಗೆ, ಹಣಕಾಸು ಒಳಗೊಳ್ಳುವಿಕೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ಸೇವೆಯನ್ನು ತಲುಪಿಸುವ  ಎಂಜಿನ್‌ ಗಳಾಗಿ ಬಳಸಿಕೊಳ್ಳುವಲ್ಲಿ ಭಾರತ ಮತ್ತು ಬ್ರೆಜಿಲ್ ಹೊಂದಿರುವ ಹಂಚಿಕೆಯ ಬದ್ಧತೆಯನ್ನು ಈ ತಿಳುವಳಿಕೆ ಒಪ್ಪಂದವು ಪ್ರತಿಬಿಂಬಿಸುತ್ತದೆ.

ಡಿಜಿಟಲ್ ಸೇವೆಗಳು, ಇ-ಕಾಮರ್ಸ್ ಲಾಜಿಸ್ಟಿಕ್ಸ್ ಮತ್ತು ನಾಗರಿಕ-ಕೇಂದ್ರಿತ ಸಾರ್ವಜನಿಕ ಸೇವಾ ವಿತರಣೆ ಸೇರಿದಂತೆ ದೊಡ್ಡ ಪ್ರಮಾಣದ ಅಂಚೆ ಪರಿವರ್ತನೆಯಲ್ಲಿ ಭಾರತವು ತನ್ನ ಅನುಭವವನ್ನು ಹಂಚಿಕೊಳ್ಳಲಿದೆ. ಈ ಒಪ್ಪಂದವು ವೇಗವಾಗಿ ಬದಲಾಗುತ್ತಿರುವ ಮಾರುಕಟ್ಟೆ ಪರಿಸರದಲ್ಲಿ ಅಂಚೆ ನಿರ್ವಾಹಕರ ಹಣಕಾಸಿನ ಸುಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಬಲಪಡಿಸುವ ಪ್ರಯತ್ನಗಳಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.

ಈ ತಿಳುವಳಿಕೆ ಒಪ್ಪಂದವು ಆರಂಭಿಕ ಐದು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ ಮತ್ತು ಸ್ವಯಂಚಾಲಿತ ನವೀಕರಣದ ಅವಕಾಶವನ್ನು ಹೊಂದಿರುತ್ತದೆ. ಇದನ್ನು ಎರಡೂ ದೇಶಗಳ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಜಾರಿಗೆ ತರಲಾಗುವುದು.

ಈ ಸಹಕಾರವು ಬೆಳೆಯುತ್ತಿರುವ ಭಾರತ-ಬ್ರೆಜಿಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಜಾಗತಿಕ ದಕ್ಷಿಣದ ಪ್ರಮುಖ ಪಾಲುದಾರರಾಗಿ ಎರಡು ದೇಶಗಳ ನಡುವಿನ ಆಳವಾದ ತೊಡಗಿಸಿಕೊಳ್ಳುವಿಕೆಗೆ ಕೊಡುಗೆ ನೀಡುತ್ತದೆ.

(ಭಾರತ ಮತ್ತು ಬ್ರೆಜಿಲ್ ನಡುವಿನ ಉನ್ನತ ಮಟ್ಟದ ಚರ್ಚೆಗಳ ಸಂದರ್ಭದಲ್ಲಿ, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀ ಫ್ರೆಡೆರಿಕೊ ಡಿ ಸಿಕುಯೆರಾ ಫಿಲೋ ಅವರ ನೇತೃತ್ವದಲ್ಲಿ ಎರಡೂ ದೇಶಗಳ ಅಧಿಕಾರಿಗಳು ಅಂಚೆ ಸಹಕಾರದ ಕುರಿತು ದ್ವಿಪಕ್ಷೀಯ ಸಭೆ ನಡೆಸಿದರು.)

 

*****


(ಪ್ರಕಟಣೆ ಐ.ಡಿ.: 2231524) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil , Malayalam