ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
‘ಎಂಎಸ್ಎಂಇ’ಗಳ ರಫ್ತು ಹೆಚ್ಚಿಸಲು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ‘ರಫ್ತು ಉತ್ತೇಜನ ಯೋಜನೆ’ಗೆ ಚಾಲನೆ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್
ಎಲ್ಲರನ್ನೂ ಒಳಗೊಂಡ ಬೆಳವಣಿಗೆಯು ಸಾಮಾಜಿಕ ನ್ಯಾಯದ ಕೀಲಿಕೈ; ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಭಾರತದ ಭವಿಷ್ಯದ ಬೆಳವಣಿಗೆಗೆ ಶಕ್ತಿ ತುಂಬಲಿವೆ: ಶ್ರೀ ಪಿಯೂಷ್ ಗೋಯಲ್
ಎಂಎಸ್ಎಂಇ ಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲಿರುವ ರಫ್ತು ಉತ್ತೇಜನ ಯೋಜನೆ; ಫೆಬ್ರವರಿಯಲ್ಲಿ ಭಾರತವು ಎರಡಂಕಿಯ ರಫ್ತು ಬೆಳವಣಿಗೆಯನ್ನು ದಾಖಲಿಸಿದೆ: ಶ್ರೀ ಗೋಯಲ್
ರಫ್ತು ಪ್ರೋತ್ಸಾಹ’ ಉಪಕ್ರಮವು ಎಂಎಸ್ಎಂಇಗಳಿಗೆ ಬಡ್ಡಿ ಸಹಾಯಧನ ಮತ್ತು ಸಾಲ ಖಾತರಿ ಒದಗಿಸುವ ಜೊತೆಗೆ ರಫ್ತು ಮಾಡಿದ ಉತ್ಪನ್ನಕ್ಕೆ ತಕ್ಷಣದ ಪಾವತಿ(ಎಕ್ಸ್‌ಪೋರ್ಟ್ ಫ್ಯಾಕ್ಟರಿಂಗ್), ಇ-ಕಾಮರ್ಸ್ ಸಾಲ ಹಾಗೂ ಹೊಸ ಮಾರುಕಟ್ಟೆ ಬೆಂಬಲವನ್ನು ಒದಗಿಸುತ್ತದೆ
ಪ್ರಕಟಣಾ ದಿನಾಂಕ:
20 FEB 2026 1:36PM by PIB Bengaluru
ಜಾಗತಿಕ ಮಾರುಕಟ್ಟೆಗಳಿಗಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್ಎಂಇ) ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ವಾಣಿಜ್ಯ ಇಲಾಖೆಯ ಪ್ರಮುಖ ಉಪಕ್ರಮವಾದ 'ರಫ್ತು ಉತ್ತೇಜನ ಯೋಜನೆ'(ಇಪಿಎಂ) ಅಡಿಯಲ್ಲಿ ಏಳು ಹೆಚ್ಚುವರಿ ಉಪಕ್ರಮಗಳಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಇಂದು ಚಾಲನೆ ನೀಡಿದರು. ಭಾರತೀಯ ರಫ್ತುದಾರರು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಎದುರಿಸಲು, ವಿಸ್ತೃತ ಹಾಗೂ ಎಲ್ಲರನ್ನೂ ಒಳಗೊಂಡ ರಫ್ತು ಬೆಳವಣಿಗೆಯನ್ನು ಉತ್ತೇಜಿಸಲು, ಜೊತೆಗೆ ಜಾಗತಿಕವಾಗಿ ಸ್ಪರ್ಧಾತ್ಮಕ ರಫ್ತು ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಈ ಉಪಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ವಾಣಿಜ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
'ವಿಶ್ವ ಸಾಮಾಜಿಕ ನ್ಯಾಯ ದಿನ' ಆಚರಣೆಯ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಗೋಯಲ್, ಸಾಮಾಜಿಕ ನ್ಯಾಯವು ಪಿರಮಿಡ್‌ನ ಕೆಳಭಾಗದಲ್ಲಿರುವ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಅಗತ್ಯವಿದೆ ಎಂದು ಹೇಳಿದರು. ನಿಜವಾದ ಸಾಮಾಜಿಕ ನ್ಯಾಯವನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ಅಂಚಿನಲ್ಲಿರುವವರ ಸಬಲೀಕರಣ ಮತ್ತು ಭಾರತದ ತ್ವರಿತ ಪರಿವರ್ತನೆಯಲ್ಲಿ ಹಿಂದುಳಿದವರಿಗೆ ಅವಕಾಶಗಳನ್ನು ಒದಗಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಜಾಗತಿಕ ಪಾಲುದಾರಿಕೆಗಳಲ್ಲಿ ಹೆಚ್ಚುತ್ತಿರುವ ಭಾರತದ ನಾಯಕತ್ವವನ್ನು ಸಚಿವರು ಉಲ್ಲೇಖಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಕೃತಕ ಬುದ್ಧಿಮತ್ತೆ ಶೃಂಗಸಭೆಯನ್ನು ಉಲ್ಲೇಖಿಸಿದ ಅವರು, ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ತಂತ್ರಜ್ಞಾನಗಳ ಕುರಿತ ಜಾಗತಿಕ ಚರ್ಚೆಯ ಹೃದಯಭಾಗದಲ್ಲಿ ಭಾರತವನ್ನು ಇರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಸಚಿವರನ್ನು ಶ್ಲಾಘಿಸಿದರು. ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ಡೇಟಾ ಸೆಂಟರ್‌ಗಳು ಮತ್ತು ದೇಶೀಯವಾದ ಬೃಹತ್ ಭಾಷಾ ಮಾದರಿಗಳಲ್ಲಿ(ಲಾಂಗ್ವೇಜ್ ಮಾಡೆಲ್) ಪ್ರಗತಿಯು ಭಾರತದ ಯುವಕರಿಗೆ ಗಮನಾರ್ಹ ಅವಕಾಶಗಳನ್ನು ತೆರೆಯುತ್ತದೆ. ಜೊತೆಗೆ ವಿವಿಧ ಕ್ಷೇತ್ರಗಳಾದ್ಯಂತ ಹೂಡಿಕೆಗಳನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು.
ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳ (ಎಫ್‌ಟಿಎ) ಜಾಲ ವಿಸ್ತರಿಸುತ್ತಿರುವುದರಿಂದ ಭಾರತೀಯ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶವನ್ನು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು. ಅಮೆರಿಕದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಕಂತು ಸೇರಿದಂತೆ ಅಂತಿಮಗೊಂಡ ಒಂಬತ್ತು `ಎಫ್‌ಟಿಎ'ಗಳ ಮೂಲಕ ಜಾಗತಿಕ ಜಿಡಿಪಿಯ ಸುಮಾರು 70 ಪ್ರತಿಶತ ಮತ್ತು ಜಾಗತಿಕ ವ್ಯಾಪಾರದ ಮೂರನೇ ಎರಡರಷ್ಟು ಭಾಗಕ್ಕೆ ಭಾರತಕ್ಕೆ ಪ್ರವೇಶ ದೊರೆತಿದೆ ಎಂದು ಅವರು ಹೇಳಿದರು. ಈ ಒಪ್ಪಂದಗಳು 38 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ವಿವಿಧ ಕ್ಷೇತ್ರಗಳಲ್ಲಿ ಆದ್ಯತೆಯ ಪ್ರವೇಶವನ್ನು ಭಾರತಕ್ಕೆ ಒದಗಿಸುತ್ತವೆ.
ಭಾರತವು ಇಂದು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ವಿಶ್ವಾಸದಿಂದ ತೊಡಗಿಸಿಕೊಂಡಿದೆ. ಸ್ಪರ್ಧಾತ್ಮಕ ಶಕ್ತಿಯ ಕ್ಷೇತ್ರಗಳಲ್ಲಿ ಲಾಭಗಳನ್ನು ಪಡೆಯುವ ಜೊತೆಗೆ ಸೂಕ್ಷ್ಮ ವಲಯಗಳನ್ನು ರಕ್ಷಿಸುತ್ತದೆ ಎಂದು ಸಚಿವರು ಹೇಳಿದರು. 2022ರಿಂದ, ಭಾರತವು ವ್ಯಾಪಾರ ಕಾರ್ಯಕ್ರಮಗಳನ್ನು ವೇಗಗೊಳಿಸಿದೆ, ಸರಕುಗಳು, ಸೇವೆಗಳು ಮತ್ತು ಹೂಡಿಕೆಗಳಲ್ಲಿ ಪಾಲುದಾರಿಕೆಯನ್ನು ವಿಸ್ತರಿಸಿದೆ, ಅನುಸರಣೆ ಹೊರೆಗಳನ್ನು ಕಡಿಮೆ ಮಾಡಿದೆ, ಹಲವಾರು ಕಾನೂನುಗಳನ್ನು ಅಪರಾಧಮುಕ್ತಗೊಳಿಸಿದೆ ಮತ್ತು ವ್ಯವಹಾರವನ್ನು ಸುಲಭಗೊಳಿಸಿದೆ ಎಂದು ಹೇಳಿದರು. ದೇಶದ ವೈವಿಧ್ಯತೆ ಮತ್ತು ಆರ್ಥಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಭಾರತವು ಅನೇಕ ನಗರಗಳಲ್ಲಿ ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದನ್ನು ಅವರು ಉಲ್ಲೇಖಿಸಿದರು.
ಜಾಗತಿಕ ವ್ಯಾಪಾರದ ಪ್ರಯೋಜನಗಳು ಪ್ರತಿ 'ಎಂಎಸ್ಎಂಇ’, ನವೋದ್ಯಮ ಮತ್ತು ಉದ್ಯಮಿಯನ್ನು ತಲುಪಬೇಕು ಎಂದು ಹೇಳಿದ ಶ್ರೀ ಗೋಯಲ್, 'ರಫ್ತು ಉತ್ತೇಜನ ಯೋಜನೆ'ಯು ಹೊಸ ಉತ್ಪನ್ನಗಳು, ಸೇವೆಗಳು ಮತ್ತು ರಫ್ತುದಾರರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಭಾರತೀಯ ವ್ಯವಹಾರಗಳು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಫೆಬ್ರವರಿ ಮೊದಲಾರ್ಧದಲ್ಲಿ ಭಾರತವು ಸರಕು ರಫ್ತಿನಲ್ಲಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿದೆ, ಇದು ಬಲವಾದ ಮಾರುಕಟ್ಟೆ ವಿಶ್ವಾಸ ಮತ್ತು ಉದ್ಯಮದ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
'ಎಂಎಸ್ಎಂಇ'ಗಳಿಗೆ ಪ್ರಕ್ರಿಯೆಗಳನ್ನು ಸರಳೀಕರಿಸಲು, ಸಾಲದ ಲಭ್ಯತೆಯನ್ನು ಬಲಪಡಿಸಲು, ಗುಣಮಟ್ಟದ ಮಾನದಂಡಗಳನ್ನು ಹೆಚ್ಚಿಸಲು, ಅಂತರರಾಷ್ಟ್ರೀಯ ನಿಯಮಗಳ ಅನುಸರಣೆಯನ್ನು ಬೆಂಬಲಿಸಲು ಹಾಗೂ ಜಾಗತಿಕವಾಗಿ ಸರಕು-ಸಾಗಣೆ ಮತ್ತು ಗೋದಾಮು ಮೂಲಸೌಕರ್ಯವನ್ನು ವಿಸ್ತರಿಸಲು ಈ ಯೋಜನೆಯು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ದುಬೈನ 'ಭಾರತ್ ಮಾರ್ಟ್' ಸೇರಿದಂತೆ ಸಾಗರೋತ್ತರ ಗೋದಾಮುಗಳಂತಹ ಉಪಕ್ರಮಗಳು ಭಾರತೀಯ ರಫ್ತುದಾರರಿಗೆ 'ಜಿಸಿಸಿ’, ಆಫ್ರಿಕಾ, ಮಧ್ಯ ಏಷ್ಯಾ ಮತ್ತು ಯುರೋಪಿನಾದ್ಯಂತ ಮಾರುಕಟ್ಟೆಗಳಿಗೆ ಕಾರ್ಯತಂತ್ರದ ಪ್ರವೇಶವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.
ರಫ್ತು ಉತ್ತೇಜನ ಯೋಜನೆಯು ಸಮಗ್ರ ಪರಿಸರ ವ್ಯವಸ್ಥೆಯ ವಿಧಾನವನ್ನು ಅನುಸರಿಸುತ್ತದೆ. 'ನಿರ್ಯಾತ್ ಪ್ರೋತ್ಸಾಹನ್' (ರಫ್ತು ಪ್ರೋತ್ಸಾಹ) ಅಡಿಯಲ್ಲಿ ಹಣಕಾಸು ಒದಗಿಸುವವರನ್ನು ಮತ್ತು 'ನಿರ್ಯಾತ್ ದಿಶಾ' ಅಡಿಯಲ್ಲಿ ವ್ಯಾಪಾರ ಪರಿಸರ ವ್ಯವಸ್ಥೆಯ ಬೆಂಬಲವನ್ನು ಒಟ್ಟುಗೂಡಿಸುತರ್ತದೆ. ಆ ಮೂಲಕ ಏಕೀಕೃತ ಮತ್ತು ಡಿಜಿಟಲ್ ಮೇಲ್ವಿಚಾರಣೆಯ ಚೌಕಟ್ಟನ್ನು ಒದಗಿಸುತ್ತದೆ.
'ಎಂಎಸ್ಎಂಇ' ಸಚಿವಾಲಯ, ಹಣಕಾಸು ಸಚಿವಾಲಯ, 'ಎಕ್ಸಿಮ್' ಬ್ಯಾಂಕ್, ಸೂಕ್ಷ್ಮ ಮತ್ತು 'ಸಣ್ಣ ಉದ್ಯಮಗಳ ಸಾಲ ಖಾತರಿ ನಿಧಿ ಟ್ರಸ್ಟ್ (ಸಿಜಿಟಿಎಂಎಸ್ಇ), 'ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್'(ಎನ್‌ಸಿಜಿಟಿಸಿ), ನಿಯಂತ್ರಿತ ಸಾಲ ನೀಡುವ ಸಂಸ್ಥೆಗಳು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು, 'ಇಪಿಸಿ'ಗಳು ಮತ್ತು ಉದ್ಯಮದ ಮಧ್ಯಸ್ಥಗಾರರ ಸಮನ್ವಯದೊಂದಿಗೆ ವಾಣಿಜ್ಯ ಇಲಾಖೆಯು ಈ ಅಭಿಯಾನವನ್ನು ಕಾರ್ಯಗತಗೊಳಿಸುತ್ತದೆ.
ಹೊಸದಾಗಿ ಪ್ರಾರಂಭಿಸಲಾದ ಉಪಕ್ರಮಗಳು 'ಎಂಎಸ್ಎಂಇ'ಗಳು ಎದುರಿಸುತ್ತಿರುವ ರಚನಾತ್ಮಕ ನಿರ್ಬಂಧಗಳನ್ನು ಪರಿಹರಿಸುವ ಗುರಿಯನ್ನು ಹೊಂದಿವೆ. ಹೆಚ್ಚಿನ ಬಂಡವಾಳದ ವೆಚ್ಚ, ವೈವಿಧ್ಯಮಯ ವ್ಯಾಪಾರ ಹಣಕಾಸು ಸಾಧನಗಳಿಗೆ ಸೀಮಿತ ಪ್ರವೇಶ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಅನುಸರಣೆ ಹೊರೆಗಳು, ಸರಕುಸಾಗಣೆ ಅನಾನುಕೂಲಗಳು ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಅಡೆತಡೆಗಳು ಇದರಲ್ಲಿ ಸೇರಿವೆ.
'ನಿರ್ಯಾತ್ ಪ್ರೋತ್ಸಾಹನ್' ಅಡಿಯಲ್ಲಿ ಪ್ರಾರಂಭಿಸಲಾದ ಉಪಕ್ರಮಗಳು ಈ ಕೆಳಗಿನಂತಿವೆ:
1. ಪರ್ಯಾಯ ವ್ಯಾಪಾರ ಸಾಧನಗಳಿಗೆ ಬೆಂಬಲ (ರಫ್ತು ಫ್ಯಾಕ್ಟರಿಂಗ್) - ಈ ಉಪಕ್ರಮವು 'ಎಂಎಸ್ಎಂಇ'ಗಳಿಗೆ ಕೈಗೆಟುಕುವ ದುಡಿಯುವ ಬಂಡವಾಳ ಒದಗಿಸಲು ನೆರವಾಗುತ್ತದೆ. ರಫ್ತು ಮಾಡಿದ ಸರಕುಗಳಿಗೆ ತಕ್ಷಣದ ಹಣ ಪಾವರತಿಗೆ (ಎಕ್ಸ್‌ಪೋರ್ಟ್ ಫ್ಯಾಕ್ಟರಿಂಗ್) ಮೂಲಕ ಇದನ್ನು ಸಾಧ್ಯವಾಗಿಸುತ್ತದೆ. ಆರ್‌ಬಿಐ / ಐಎಫ್ಎಸ್‌ಸಿಎ-ಮಾನ್ಯತೆ ಪಡೆದ ಘಟಕಗಳ ಮೂಲಕ ಕೈಗೊಳ್ಳಲಾದ ಅರ್ಹ ವಹಿವಾಟುಗಳಿಗೆ 'ಫ್ಯಾಕ್ಟರಿಂಗ್' ವೆಚ್ಚದ ಮೇಲೆ ಶೇ.2.75 ಬಡ್ಡಿ ಸಹಾಯಧನವನ್ನು ಒದಗಿಸಲಾಗುವುದು. ನೆರವನ್ನು ಪ್ರತಿ 'ಎಂಎಸ್ಎಂಇ'ಗೆ ವಾರ್ಷಿಕವಾಗಿ 50 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. ಜೊತೆಗೆ ಪಾರದರ್ಶಕತೆ ಮತ್ತು ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಕ್ಲೈಮ್ ಕಾರ್ಯವಿಧಾನದ ಮೂಲಕ ಇದನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
2. ಇ-ಕಾಮರ್ಸ್ ರಫ್ತುದಾರರಿಗೆ ಸಾಲ ನೆರವು- ಡಿಜಿಟಲ್ ಮಾರ್ಗಗಳನ್ನು ಬಳಸಿಕೊಂಡು ರಫ್ತುದಾರರನ್ನು ಬೆಂಬಲಿಸಲು, ಬಡ್ಡಿ ಸಹಾಯಧನ ಮತ್ತು ಭಾಗಶಃ ಸಾಲ ಖಾತರಿಯೊಂದಿಗೆ ರಚನಾತ್ಮಕ ಸಾಲ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದೆ. ನೇರ ಇ-ಕಾಮರ್ಸ್ ಸಾಲ ಸೌಲಭ್ಯವು ಶೇ.90 ಖಾತರಿ ವ್ಯಾಪ್ತಿಯೊಂದಿಗೆ 50 ಲಕ್ಷ ರೂ.ಗಳವರೆಗೆ ಬೆಂಬಲವನ್ನು ಒದಗಿಸುತ್ತದೆ. ಸಾಗರೋತ್ತರ ದಾಸ್ತಾನು ಸಾಲ ಸೌಲಭ್ಯವು ಶೇ.75 ಖಾತರಿ ವ್ಯಾಪ್ತಿಯೊಂದಿಗೆ 5 ಕೋಟಿ ರೂ.ಗಳವರೆಗೆ ಬೆಂಬಲವನ್ನು ನೀಡುತ್ತದೆ. ಪ್ರತಿ ಅರ್ಜಿದಾರರಿಗೆ ವಾರ್ಷಿಕ 15 ಲಕ್ಷ ರೂ.ಗಳ ಮಿತಿಗೆ ಒಳಪಟ್ಟು ಶೇ.2.75 ಬಡ್ಡಿ ಸಹಾಯಧನ ಲಭ್ಯವಿರುತ್ತದೆ.
3. ಹೊಸ ರಫ್ತು ಅವಕಾಶಗಳಿಗೆ ಬೆಂಬಲ - ಈ ಉಪಕ್ರಮವು ರಫ್ತುದಾರರಿಗೆ ವಿವಿಧ ಹಂಚಿತ ಅಪಾಯ ಮತ್ತು ಸಾಲ ಸಾಧನಗಳ ಮೂಲಕ, ಹೊಸ ಅಥವಾ ಹೆಚ್ಚಿನ-ಅಪಾಯದ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಈ ರಚನಾತ್ಮಕ ಕಾರ್ಯವಿಧಾನಗಳು ರಫ್ತುದಾರರ ವಿಶ್ವಾಸ ಮತ್ತು ಹಣದ ಹರಿವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.
ಇದಲ್ಲದೆ, `ನಿರ್ಯಾತ್ ದಿಶಾ' ಅಡಿಯಲ್ಲಿ ಈ ಕೆಳಗಿನ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ:
1. ವ್ಯಾಪಾರ ನಿಯಮಗಳು, ಮಾನ್ಯತೆ ಮತ್ತು ಅನುಸರಣೆ ಸಕ್ರಿಯಗೊಳಿಸುವಿಕೆ (ಟ್ರೇಸ್) - ಅಂತಾರಾಷ್ಟ್ರೀಯ ಪರೀಕ್ಷೆ, ತಪಾಸಣೆಗಳು, ಪ್ರಮಾಣೀಕರಣಗಳು ಮತ್ತು ಇತರ ಅನುಸರಣೆ ಅವಶ್ಯಕತೆಗಳನ್ನು ಪೂರೈಸುವಲ್ಲಿ 'ಟ್ರೇಸ್' ವ್ಯವಸ್ಥೆಯು ರಫ್ತುದಾರರನ್ನು ಬೆಂಬಲಿಸುತ್ತದೆ. ಪ್ರತಿ 'ಐಇಸಿ'ಗೆ ವಾರ್ಷಿಕ 25 ಲಕ್ಷ ರೂ.ಗಳ ಮಿತಿಗೆ ಒಳಪಟ್ಟು ಅರ್ಹ ಪರೀಕ್ಷೆ, ತಪಾಸಣೆ ಮತ್ತು ಪ್ರಮಾಣೀಕರಣ ವೆಚ್ಚಗಳಿಗೆ ಧನಾತ್ಮಕ ಪಟ್ಟಿಯಡಿ ಶೇ.60 ಮತ್ತು ಆದ್ಯತೆಯ ಧನಾತ್ಮಕ ಪಟ್ಟಿಯಡಿ ಶೇ.75 ಭಾಗಶಃ ಮರುಪಾವತಿಯನ್ನು ಒದಗಿಸಲಾಗುತ್ತದೆ.
2. ಸಾಗರೋತ್ತರ ಗೋದಾಮು ಮತ್ತು ಪೂರೈಸುವಿಕೆಯನ್ನು ಸುಗಮಗೊಳಿಸುವುದು - ಜಾಗತಿಕ ವಿತರಣಾ ಜಾಲಗಳೊಂದಿಗೆ ಸಂಯೋಜನೆಹೊಂದಿದ ಇ-ಕಾಮರ್ಸ್ ರಫ್ತು ಕೇಂದ್ರಗಳು ಸೇರಿದಂತೆ ಸಾಗರೋತ್ತರ ಉಗ್ರಾಣ ಮತ್ತು ಪೂರೈಸುವ ಮೂಲಸೌಕರ್ಯಗಳನ್ನು ಪ್ರವೇಶಿಸಲು ಫ್ಲೋ ರಫ್ತುದಾರರನ್ನು ಬೆಂಬಲಿಸುತ್ತದೆ. ಅನುಮೋದಿತ ಯೋಜನಾ ವೆಚ್ಚದ ಶೇ.30ರವರೆಗೆ ನೆರವು ಒದಗಿಸಲಾಗುವುದು. ಗರಿಷ್ಠ ಮೂರು ವರ್ಷಗಳವರೆಗೆ ನಿಗದಿತ ಮಿತಿಗಳು ಮತ್ತು ಎಂಎಸ್ಎಂಇ ಭಾಗವಹಿಸುವಿಕೆಯ ಮಾನದಂಡಗಳಿಗೆ ಒಳಪಟ್ಟು ಇದನ್ನು ಒದಗಿಸಲಾಗುವುದು.
3. ಸರಕು ಸಾಗಣೆ ಮತ್ತು ಸಾರಿಗೆಗಾಗಿ ಉಪಕ್ರಮಗಳು (ಲಿಫ್ಟ್) - ಕಡಿಮೆ ರಫ್ತು ತೀವ್ರತೆಯ ಜಿಲ್ಲೆಗಳಲ್ಲಿ ರಫ್ತುದಾರರು ಎದುರಿಸುತ್ತಿರುವ ಭೌಗೋಳಿಕ ಅನಾನುಕೂಲತೆಗಳನ್ನು 'ಲಿಫ್ಟ್' ತಗ್ಗಿಸುತ್ತದೆ. ಅರ್ಹ ಸರಕು ವೆಚ್ಚದ ಶೇ.30 ರಷ್ಟು ಭಾಗಶಃ ಮರುಪಾವತಿಯನ್ನು ಒದಗಿಸಲಾಗುವುದು, ಇದು ಪ್ರತಿ ಹಣಕಾಸು ವರ್ಷಕ್ಕೆ ಪ್ರತಿ 'ಐಇಸಿ'ಗೆ 20 ಲಕ್ಷ ರೂ.ಗಳ ಮಿತಿಗೆ ಒಳಪಟ್ಟಿರುತ್ತದೆ.
4. ವ್ಯಾಪಾರ ಜಾಣ್ಮೆ ಮತ್ತು ಅನುಖುಲಕ್ಕಾಗಿ ಸಮಗ್ರ ಬೆಂಬಲ (ಇಂಟಿಗ್ರೇಟೆಡ್ ಸಪೋರ್ಟ್ ಫಾರ್ ಟ್ರೇಡ್ ಇಂಟೆಲಿಜೆನ್ಸ್ ಅಂಡ್ ಫೆಸಿಲಿಟೇಶನ್-ಇನ್‌ಸೈಟ್) - 'ಇನ್‌ಸೈಟ್' ಉಪಕ್ರಮವು ರಫ್ತುದಾರರ ಸಾಮರ್ಥ್ಯ ವರ್ಧನೆ ಜೊತೆಗೆ, 'ರಫ್ತು ಕೇಂದ್ರ ಉಪಕ್ರಮಗಳಾಗಿ ಜಿಲ್'ಲೆಗಳ ಅಡಿಯಲ್ಲಿ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದ ಸೌಲಭ್ಯವನ್ನು ಬಲಪಡಿಸುತ್ತದೆ. ಅಲ್ಲದೆ, ವ್ಯಾಪಾರ ಗುಪ್ತಚರ ವ್ಯವಸ್ಥೆಗಳ ಅಭಿವೃದ್ಧಿಯನ್ನು ಬಲಪಡಿಸುತ್ತದೆ. ಇದಕ್ಕೆ ನೀಡುವ ಆರ್ಥಿಕ ನೆರವು ಯೋಜನಾ ವೆಚ್ಚದ ಶೇ.50 ರವರೆಗೆ ಇರುತ್ತದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಪ್ರಸ್ತಾವನೆಗಳಿಗೆ ಶೇ.100 ರವರೆಗೆ ಬೆಂಬಲವಿದೆ.
ಈ ಸಂಘಟಿತ ಹಣಕಾಸು ಮತ್ತು ಪರಿಸರ ವ್ಯವಸ್ಥೆಯ ಉಪಕ್ರಮಗಳ ಮೂಲಕ ಸರ್ಕಾರವು ಬಂಡವಾಳದ ವೆಚ್ಚವನ್ನು ಕಡಿಮೆ ಮಾಡಲು, ವ್ಯಾಪಾರ ಹಣಕಾಸು ಸಾಧನಗಳನ್ನು ವೈವಿಧ್ಯಗೊಳಿಸಲು, ಅನುಸರಣೆ ಸನ್ನದ್ಧತೆಯನ್ನು ಹೆಚ್ಚಿಸಲು, ಸರಕುಸಾಗಣೆ ನಿರ್ಬಂಧಗಳನ್ನು ಪರಿಹರಿಸಲು ಉದ್ದೇಶಿಸಿದೆ. ಜೊತೆಗೆ `ಎಂಎಸ್ಎಂಇ'ಗಳಿಗೆ ಸಾಗರೋತ್ತರ ಮಾರುಕಟ್ಟೆ ಏಕೀಕರಣವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
3 ಮಧ್ಯಸ್ಥಿಕೆಗಳಾದ - ಮಾರುಕಟ್ಟೆ ಪ್ರವೇಶ ಬೆಂಬಲ, ಸಾಗಣೆ ಪೂರ್ವ ಮತ್ತು ನಂತರದ ರಫ್ತು ಸಾಲಕ್ಕೆ ಬಡ್ಡಿ ಸಹಾಯಧನ ಹಾಗೂ ರಫ್ತು ಸಾಲಕ್ಕೆ ಮೇಲಾಧಾರ ಬೆಂಬಲ - ಈಗಾಗಲೇ ಅನುಷ್ಠಾನದಲ್ಲಿವೆ. ಈ ಪ್ರಾರಂಭದೊಂದಿಗೆ, 'ಇಪಿಎಂ' ಅಡಿಯಲ್ಲಿ ಉದ್ದೇಶಿತ 11 ಉಪಕ್ರಮಗಳ ಪೈಕಿ 10 ಈಗ ಕಾರ್ಯನಿರ್ವಹಿಸುತ್ತಿವೆ.
ರಾಜ್ಯ ಸರ್ಕಾರಗಳು, ರಫ್ತು ಉತ್ತೇಜನ ಮಂಡಳಿಗಳು ಮತ್ತು ಎಫ್ಐಇಒ, ಇಇಪಿಸಿ, ಜಿಜೆಇಪಿಸಿ, ಸಿಐಐ, ಎಫ್ಐಸಿಸಿಐ, ಪಿಎಚ್‌ಡಿಸಿಸಿಐ, ಅಸೋಚಾಮ್ ಮತ್ತು ನಾಸ್ಕಾಂ ಸೇರಿದಂತೆ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಈ ಉಪಕ್ರಮವನ್ನು ಸ್ವಾಗತಿಸಿದರು ಮತ್ತು ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.
******
(ಪ್ರಕಟಣೆ ಐ.ಡಿ.: 2230732)
ವಿಸಿಟರ್ ಕೌಂಟರ್ : 10