ಪ್ರಧಾನ ಮಂತ್ರಿಯವರ ಕಛೇರಿ
ಇಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
13 FEB 2026 9:59PM by PIB Bengaluru
ಈ ಜಾಗತಿಕ ವ್ಯಾಪಾರ ಶೃಂಗಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ; ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. "ಅಡೆತಡೆಯ ಒಂದು ದಶಕ, ಬದಲಾವಣೆಯ ಒಂದು ಶತಮಾನ" ಎನ್ನುವ ವಿಷಯವನ್ನು ಚರ್ಚಿಸಲು ನಾವು ಇಲ್ಲಿದ್ದೇವೆ. ವಿನೀತ್ ಅವರ ಭಾಷಣವನ್ನು ಕೇಳಿದ ನಂತರ, ನನ್ನ ಕೆಲಸವು ಬಹಳ ಸುಲಭವಾಗಿದೆ ಎಂದು ನನಗೆ ಅನಿಸುತ್ತದೆ. ಆದರೆ ನಾನು ಒಂದು ಸಣ್ಣ ವಿನಂತಿ - ನಿಮಗೆ ಬಹಳಷ್ಟು ತಿಳಿದಿರುವುದರಿಂದ, ಅದು ಕೆಲವೊಮ್ಮೆ ಇ ಟಿ ಯಲ್ಲಿಯೂ ಕಾಣಿಸಿಕೊಳ್ಳಬೇಕು.
ಸ್ನೇಹಿತರೇ,
21ನೇ ಶತಮಾನದ ಕಳೆದ ದಶಕವು ಹಿಂದೆಂದೂ ಕಾಣದ ಅಡೆತಡೆಗಳಿಂದ ಕೂಡಿದೆ. ಒಂದೇ ದಶಕದೊಳಗೆ ಜಾಗತಿಕ ಸಾಂಕ್ರಾಮಿಕ ರೋಗ, ವಿವಿಧ ಪ್ರದೇಶಗಳಲ್ಲಿ ಉದ್ವಿಗ್ನತೆ ಮತ್ತು ಯುದ್ಧಗಳು ಹಾಗು ಜಾಗತಿಕ ಸಮತೋಲನವನ್ನು ಅಲುಗಾಡಿಸಿದ ಪೂರೈಕೆ ಸರಪಳಿ ಸ್ಥಗಿತಗಳಿಗೆ ಜಗತ್ತು ಸಾಕ್ಷಿಯಾಗಿದೆ. ಆದರೆ ಸ್ನೇಹಿತರೇ, ಒಂದು ರಾಷ್ಟ್ರದ ನಿಜವಾದ ಶಕ್ತಿ ಬಿಕ್ಕಟ್ಟಿನ ಸಮಯದಲ್ಲಿ ತಿಳಿಯುತ್ತದೆ ಎಂದು ಹೇಳಲಾಗುತ್ತದೆ, ಮತ್ತು ಹಲವು ಅಡೆತಡೆಗಳ ನಡುವೆಯೂ, ಈ ದಶಕವು ಭಾರತಕ್ಕೆ ಅಭೂತಪೂರ್ವ ಅಭಿವೃದ್ಧಿಯ ದಶಕವಾಗಿದೆ, ಇದು ಅತ್ಯುತ್ತಮ ವಿತರಣೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಯಿಂದ ಗುರುತಿಸಲ್ಪಟ್ಟಿದೆ ಎನ್ನುವ ಅಂಶದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕಳೆದ ದಶಕ ಪ್ರಾರಂಭವಾದಾಗ, ಭಾರತವು ಹನ್ನೊಂದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಅಂತಹ ಪ್ರಕ್ಷುಬ್ಧತೆಯ ನಡುವೆ, ಭಾರತವು ಮತ್ತಷ್ಟು ಕುಸಿಯುತ್ತದೆ ಎನ್ನುವ ಬಲವಾದ ಆತಂಕಗಳಿದ್ದವು. ಆದರೆ ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ಮತ್ತು ನೀವು ಮಾತನಾಡುವ "ಬದಲಾವಣೆಯ ಶತಮಾನ", ನಾನು ಹೆಚ್ಚಿನ ಜವಾಬ್ದಾರಿಯೊಂದಿಗೆ ಹೇಳುತ್ತೇನೆ, ಭಾರತದ ಮೇಲೆ ಗಮನಾರ್ಹವಾಗಿ ನಿಂತಿದೆ. ಇಂದು, ಭಾರತವು ಜಾಗತಿಕ ಬೆಳವಣಿಗೆಗೆ ಶೇಕಡಾ 16 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಮತ್ತು ಈ ಶತಮಾನದ ಪ್ರತಿ ಮುಂಬರುವ ವರ್ಷದಲ್ಲಿ, ನಮ್ಮ ಕೊಡುಗೆ ಸ್ಥಿರವಾಗಿ ಹೆಚ್ಚುತ್ತಲೇ ಇರುತ್ತದೆ ಎಂದು ನನಗೆ ವಿಶ್ವಾಸವಿದೆ. ನಾನು ಜ್ಯೋತಿಷಿ ಭವಿಷ್ಯ ನುಡಿಯುವಂತೆ ಇಲ್ಲಿಗೆ ಬಂದಿಲ್ಲ. ಭಾರತವು ವಿಶ್ವದ ಬೆಳವಣಿಗೆಗೆ ಚಾಲನೆ ನೀಡುತ್ತದೆ; ಅದು ವಿಶ್ವ ಆರ್ಥಿಕತೆಯ ಹೊಸ ಎಂಜಿನ್ ಆಗಿ ಹೊರಹೊಮ್ಮುತ್ತದೆ.
ಸ್ನೇಹಿತರೇ,
ಎರಡನೇ ಮಹಾಯುದ್ಧದ ನಂತರ, ಒಂದು ಹೊಸ ಜಾಗತಿಕ ವ್ಯವಸ್ಥೆಯು ರೂಪುಗೊಂಡಿತು. ಆದರೆ ಏಳು ದಶಕಗಳ ನಂತರ, ಆ ವ್ಯವಸ್ಥೆಯು ಕುಸಿಯುತ್ತಿದೆ. ಜಗತ್ತು ಹೊಸ ವಿಶ್ವ ಕ್ರಮದತ್ತ ಸಾಗುತ್ತಿದೆ. ಇದು ಏಕೆ ನಡೆಯುತ್ತಿದೆ? ಹಿಂದಿನ ವ್ಯವಸ್ಥೆಯ ಅಡಿಪಾಯವು "ಒಂದೇ ಗಾತ್ರ ಎಲ್ಲರಿಗೂ ಸರಿಹೊಂದುತ್ತದೆ" ಎಂಬ ವಿಧಾನವನ್ನು ಆಧರಿಸಿರುವುದರಿಂದ ಇದು ಸಂಭವಿಸಿತು. ವಿಶ್ವ ಆರ್ಥಿಕತೆಯು ಮೂಲದಲ್ಲಿ ಕೇಂದ್ರೀಕೃತವಾಗಿರುತ್ತದೆ ಮತ್ತು ಪೂರೈಕೆ ಸರಪಳಿಗಳು ಬಲವಾಗಿರುತ್ತವೆ ಮತ್ತು ವಿಶ್ವಾಸಾರ್ಹವಾಗುತ್ತವೆ ಎಂದು ನಂಬಲಾಗಿತ್ತು. ದೇಶಗಳನ್ನು ಆ ಚೌಕಟ್ಟಿನೊಳಗೆ ಕೇವಲ ಕೊಡುಗೆದಾರರಾಗಿ ನೋಡಲಾಗುತ್ತಿತ್ತು. ಆದರೆ ಇಂದು, ಈ ಮಾದರಿಯನ್ನು ಪ್ರಶ್ನಿಸಲಾಗುತ್ತಿದೆ ಮತ್ತು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಂದು ದೇಶವೂ ಈಗ ತನ್ನದೇ ಆದ ಚೇತರಿಕೆಯ ಶಕ್ತಿಯನ್ನು ನಿರ್ಮಿಸಿಕೊಳ್ಳಬೇಕು ಎಂದು ಅರಿತುಕೊಂಡಿದೆ.
ಸ್ನೇಹಿತರೇ,
ಜಗತ್ತು ಇಂದು ಚರ್ಚಿಸುತ್ತಿರುವುದನ್ನು, ಭಾರತವು ಹತ್ತು ವರ್ಷಗಳ ಹಿಂದೆ 2015ರ ಆರಂಭದಲ್ಲಿಯೇ ತನ್ನ ನೀತಿಯ ಭಾಗವವನ್ನಾಗಿಸಿತು. ನೀತಿ ಆಯೋಗವನ್ನು ಸ್ಥಾಪಿಸಿದಾಗ, ಅದರ ಸ್ಥಾಪಕ ದಾಖಲೆಯು ಭಾರತದ ದೃಷ್ಟಿಕೋನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿತು: ಭಾರತವು ಬೇರೆ ಯಾವುದೇ ದೇಶದಿಂದ ಒಂದೇ ಒಂದು ಅಭಿವೃದ್ಧಿ ಮಾದರಿಯನ್ನು ಆಮದು ಮಾಡಿಕೊಳ್ಳುವುದಿಲ್ಲ. ಭಾರತದ ಅಭಿವೃದ್ಧಿಗೆ ನಾವು ಭಾರತೀಯ ವಿಧಾನವನ್ನು ಅನುಸರಿಸುತ್ತೇವೆ. ಈ ನೀತಿಯು ಭಾರತಕ್ಕೆ ತನ್ನದೇ ಆದ ಅವಶ್ಯಕತೆಗಳಿಗೆ ಅನುಗುಣವಾಗಿ ಮತ್ತು ತನ್ನದೇ ಆದ ದೇಶದ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಶ್ವಾಸವನ್ನು ನೀಡಿತು. ಒಂದು ದಶಕದ ಅಡೆತಡೆಯ ಸಮಯದಲ್ಲಿಯೂ ಸಹ, ಭಾರತದ ಆರ್ಥಿಕತೆಯು ದುರ್ಬಲಗೊಳ್ಳದೆ ಬಲವಾಗಿ ಬೆಳೆಯಲು ಇದು ಪ್ರಮುಖ ಕಾರಣವಾಗಿದೆ.
ಸ್ನೇಹಿತರೇ,
21ನೇ ಶತಮಾನದ ಈ ದಶಕದಲ್ಲಿ, ಭಾರತವು Reform Expressನಲ್ಲಿ (ಸುಧಾರಣಾ ಎಕ್ಸ್ ಪ್ರೆಸ್) ಸವಾರಿ ಮಾಡುತ್ತಿದೆ. ಈ Reform Expressನ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ನಾವು ಅದನ್ನು ಬಲವಂತದಿಂದಲ್ಲ, ಬದಲಾಗಿ ದೃಢನಿಶ್ಚಯದಿಂದ ಮತ್ತು ಸುಧಾರಣೆಗೆ ಬದ್ಧತೆಯೊಂದಿಗೆ ವೇಗಗೊಳಿಸುತ್ತಿದ್ದೇವೆ. ಆರ್ಥಿಕ ಜಗತ್ತಿನ ಅನೇಕ ಪ್ರತಿಷ್ಠಿತ ತಜ್ಞರು ಮತ್ತು ದಿಗ್ಗಜರು ಇಲ್ಲಿದ್ದಾರೆ. 2014ರ ಹಿಂದಿನ ಅವಧಿಯನ್ನು ನೀವು ನೋಡಿದ್ದೀರಿ. ಸನ್ನಿವೇಶಗಳು ಅವುಗಳನ್ನು ಒತ್ತಾಯಿಸಿದಾಗ, ಬಿಕ್ಕಟ್ಟುಗಳು ಎದುರಾದಾಗ, ಬೇರೆ ಯಾವುದೇ ಆಯ್ಕೆ ಉಳಿದಿಲ್ಲದಿದ್ದಾಗ ಮಾತ್ರ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿತ್ತು. 1991ರ ಸುಧಾರಣೆಗಳು ದೇಶವು ದಿವಾಳಿತನದ ಅಪಾಯವನ್ನು ಎದುರಿಸಿದಾಗ ಮತ್ತು ದೇಶದ ಚಿನ್ನವನ್ನು ಒತ್ತೆ ಇಡಬೇಕಾದಾಗ ಸಂಭವಿಸಿದವು. ಹಿಂದಿನ ಸರ್ಕಾರಗಳ ವಿಧಾನ ಅದು - ಅವರು ಬಲವಂತದಿಂದ ಮಾತ್ರ ಸುಧಾರಣೆಗಳನ್ನು ಕೈಗೊಂಡರು. 26/11 ಭಯೋತ್ಪಾದಕ ದಾಳಿಯ ನಂತರ, ಕಾಂಗ್ರೆಸ್ ಸರ್ಕಾರದ ದೌರ್ಬಲ್ಯಗಳು ಬಹಿರಂಗಗೊಂಡಾಗ, ಎನ್ ಐ ಎ ರಚನೆಯಾಯಿತು. ವಿದ್ಯುತ್ ವಲಯ ಕುಸಿದು ಗ್ರಿಡ್ಗಳು ವಿಫಲಗೊಳ್ಳಲು ಪ್ರಾರಂಭಿಸಿದಾಗ, ವಿದ್ಯುತ್ ವಲಯದಲ್ಲಿ ಸುಧಾರಣೆಗಳು ಅವಶ್ಯಕತೆಯಿಂದ ಸಂಭವಿಸಿದವು.
ಸ್ನೇಹಿತರೇ,
ಒತ್ತಡಕ್ಕೆ ಬಿದ್ದ ಅಡಿಯಲ್ಲಿ ಸುಧಾರಣೆಗಳನ್ನು ಮಾಡಿದಾಗ, ಸರಿಯಾದ ಫಲಿತಾಂಶಗಳು ಅಥವಾ ಅಪೇಕ್ಷಿತ ರಾಷ್ಟ್ರೀಯ ಫಲಿತಾಂಶಗಳು ಸಾಧಿಸಲಾಗುವುದಿಲ್ಲ ಎಂದು ನಮಗೆ ನೆನಪಿಸುವ ಉದಾಹರಣೆಗಳ ದೊಡ್ಡ ಪಟ್ಟಿಯೇ ಇದೆ.
ಸ್ನೇಹಿತರೇ,
ಕಳೆದ ಹನ್ನೊಂದು ವರ್ಷಗಳಲ್ಲಿ, ನಾವು ನೀತಿಯಲ್ಲಿ, ಪ್ರಕ್ರಿಯೆಯಲ್ಲಿ, ವಿತರಣೆಯಲ್ಲಿ ಮತ್ತು ಮನಸ್ಥಿತಿಯಲ್ಲಿಯೂ ಸಹ ಸಂಪೂರ್ಣ ದೃಢನಿಶ್ಚಯದೊಂದಿಗೆ ಸುಧಾರಣೆಗಳನ್ನು ಕೈಗೊಂಡಿದ್ದೇವೆ ಎಂದು ನನಗೆ ಹೆಮ್ಮೆಯಿದೆ. ಏಕೆಂದರೆ ನೀತಿ ಬದಲಾದರೂ ಪ್ರಕ್ರಿಯೆಗಳು ಒಂದೇ ಆಗಿದ್ದರೆ, ಮನಸ್ಥಿತಿ ಬದಲಾಗದೆ ಇದ್ದರೆ, ಮತ್ತು ವಿತರಣೆ ಸುಧಾರಿಸದಿದ್ದರೆ, ಸುಧಾರಣೆಗಳು ಕೇವಲ ಕಾಗದದ ತುಂಡುಗಳಾಗಿಯೇ ಉಳಿಯುತ್ತವೆ. ಆದ್ದರಿಂದ, ನಾವು ಇಡೀ ವ್ಯವಸ್ಥೆಯನ್ನು ಪರಿವರ್ತಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ.
ಸ್ನೇಹಿತರೇ,
ನಾನು ಪ್ರಕ್ರಿಯೆಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಸರಳವಾದ ಆದರೆ ನಿರ್ಣಾಯಕ ಪ್ರಕ್ರಿಯೆ ಎಂದರೆ ಕ್ಯಾಬಿನೆಟ್ ಟಿಪ್ಪಣಿಗಳು. ಮೊದಲು, ಇಲ್ಲಿ ಹಲವರಿಗೆ ಕ್ಯಾಬಿನೆಟ್ ಟಿಪ್ಪಣಿಯನ್ನು ತಯಾರಿಸಲು ತಿಂಗಳುಗಳು ಬೇಕಾಗುತ್ತದೆ ಎಂದು ತಿಳಿದಿರುತ್ತದೆ. ಆ ವೇಗದಲ್ಲಿ ರಾಷ್ಟ್ರವು ಹೇಗೆ ಅಭಿವೃದ್ಧಿ ಹೊಂದಬಹುದು? ಆದ್ದರಿಂದ ನಾವು ಈ ಪ್ರಕ್ರಿಯೆಯನ್ನು ಬದಲಾಯಿಸಿದ್ದೇವೆ. ನಾವು ನಿರ್ಧಾರ ತೆಗೆದುಕೊಳ್ಳುವ ಸಮಯಕ್ಕೆ ಅನುಗುಣವಾಗಿ ಮತ್ತು ತಂತ್ರಜ್ಞಾನ ಆಧಾರಿತವಾಗಿ ಮಾಡಿದ್ದೇವೆ. ಕ್ಯಾಬಿನೆಟ್ ಟಿಪ್ಪಣಿಯು ಯಾವುದೇ ಅಧಿಕಾರಿಯ ಮೇಜಿನ ಮೇಲೆ ನಿಗದಿತ ಗಂಟೆಗಳವರೆಗೆ ಉಳಿಯುವುದಿಲ್ಲ ಎನ್ನುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ - ಅದನ್ನು ತಿರಸ್ಕರಿಸಬಹುದು ಅಥವಾ ನಿರ್ಧಾರ ತೆಗೆದುಕೊಳ್ಳಬಹುದು. ಇಂದು ರಾಷ್ಟ್ರವು ಫಲಿತಾಂಶಗಳಿನ್ನು ಕಾಣುತ್ತಿದೆ.
ಸ್ನೇಹಿತರೇ,
ರೈಲ್ವೆ ಓವರ್ಬ್ರಿಡ್ಜ್ಗಾಗಿ ಅನುಮೋದನೆಗಳ ಉದಾಹರಣೆಯನ್ನು ಸಹ ನೀಡುತ್ತೇನೆ. ಹಿಂದೆ, ಒಂದೇ ವಿನ್ಯಾಸವನ್ನು ಅನುಮೋದಿಸಲು ಹಲವಾರು ವರ್ಷಗಳು ಬೇಕಾಗುತ್ತಿತ್ತು. ಹಲವು ಅನುಮತಿಗಳು ಬೇಕಾಗಿದ್ದವು, ಮತ್ತು ವಿವಿಧ ಹಂತಗಳಲ್ಲಿ ಪತ್ರಗಳನ್ನು ಬರೆಯಬೇಕಾಗಿತ್ತು, ಮತ್ತು ನಾನು ಖಾಸಗಿ ವಲಯದ ಬಗ್ಗೆ ಅಲ್ಲ, ಸರ್ಕಾರದ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಇದನ್ನು ಸಹ ಬದಲಾಯಿಸಿದ್ದೇವೆ. ಇಂದು, ರಸ್ತೆ ಮತ್ತು ರೈಲ್ವೆ ಮೂಲಸೌಕರ್ಯವನ್ನು ನಿರ್ಮಿಸುತ್ತಿರುವ ವೇಗವನ್ನು ನೋಡಿ. ವಿನೀತ್ ಜಿ ಇದರ ಬಗ್ಗೆ ವ್ಯಾಪಕವಾಗಿ ವಿವರಿಸಿದ್ದಾರೆ.
ಸ್ನೇಹಿತರೇ,
ಮತ್ತೊಂದು ಆಸಕ್ತಿದಾಯಕ ಉದಾಹರಣೆಯೆಂದರೆ ಗಡಿಭಾಗದ ಮೂಲಸೌಕರ್ಯ, ಇದು ದೇಶದ ಭದ್ರತೆಗೆ ನೇರವಾಗಿ ಸಂಬಂಧಿಸಿದೆ. ಗಡಿ ಪ್ರದೇಶಗಳಲ್ಲಿ ಸರಳ ರಸ್ತೆಯನ್ನು ನಿರ್ಮಿಸಲು ಸಹ ದೆಹಲಿಯಿಂದ ಅನುಮತಿಗಳು ಬೇಕಾಗುತ್ತಿದ್ದ ಕಾಲವಿತ್ತು. ಜಿಲ್ಲಾ ಮಟ್ಟದಲ್ಲಿ, ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾಯೋಗಿಕವಾಗಿ ಯಾವುದೇ ಅಧಿಕಾರವಿರಲಿಲ್ಲ; ಹಲವಾರು ಅಡೆತಡೆಗಳಿದ್ದವು ಮತ್ತು ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ, ದಶಕಗಳ ನಂತರವೂ, ಗಡಿಭಾಗದ ಮೂಲಸೌಕರ್ಯವು ಕಳಪೆ ಸ್ಥಿತಿಯಲ್ಲಿಯೇ ಉಳಿದಿತ್ತು. 2014ರ ನಂತರ, ನಾವು ಈ ಪ್ರಕ್ರಿಯೆಯನ್ನು ಸುಧಾರಿಸಿದ್ದೇವೆ, ಸ್ಥಳೀಯ ಆಡಳಿತವನ್ನು ಸಬಲೀಕರಣಗೊಳಿಸಿದ್ದೇವೆ ಮತ್ತು ಇಂದು ನಾವು ಗಡಿಭಾಗದ ಮೂಲಸೌಕರ್ಯದಲ್ಲಿ ತ್ವರಿತ ಅಭಿವೃದ್ಧಿಯನ್ನು ನೋಡುತ್ತಿದ್ದೇವೆ.
ಸ್ನೇಹಿತರೇ,
ಕಳೆದ ದಶಕದಲ್ಲಿ ವಿಶ್ವಾದ್ಯಂತ ಸಂಚಲನ ಮೂಡಿಸಿದ ಒಂದು ಸುಧಾರಣೆಯೆಂದರೆ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ. ಇದು ಕೇವಲ ಒಂದು ಆ್ಯಾಪ್ (app) ಅಲ್ಲ; ಇದು ನೀತಿ, ಪ್ರಕ್ರಿಯೆ ಮತ್ತು ವಿತರಣೆಯ ಗಮನಾರ್ಯ ಅಸಾಧಾರಣ ಒಮ್ಮುಖವನ್ನು ಪ್ರತಿನಿಧಿಸುತ್ತದೆ. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಪ್ರವೇಶಿಸುವುದನ್ನು ಎಂದಿಗೂ ಊಹಿಸಲು ಸಾಧ್ಯವಾಗದವರಿಗೆ ಈಗ UPI ಸೇವೆ ಸಲ್ಲಿಸುತ್ತಿದೆ. ಡಿಜಿಟಲ್ ಇಂಡಿಯಾ, ಡಿಜಿಟಲ್ ಪಾವತಿ ವ್ಯವಸ್ಥೆ, ಜನ್ ಧನ್-ಆಧಾರ್-ಮೊಬೈಲ್ ತ್ರಿಮೂರ್ತಿಗಳು - ಈ ಸುಧಾರಣೆಗಳು ಬಲವಂತದಿಂದಲ್ಲ, ಬದಲಾಗಿ ದೃಢನಿಶ್ಚಯದಿಂದ ಹುಟ್ಟಿಕೊಂಡಿವೆ. ಹಿಂದಿನ ಸರ್ಕಾರಗಳು ಎಂದಿಗೂ ತಲುಪದ ನಾಗರಿಕರ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ದೃಢನಿಶ್ಚಯವಾಗಿತ್ತು. ಎಂದಿಗೂ ಕಾಳಜಿ ವಹಿಸದವರನ್ನು ಮೋದಿ ಗೌರವಿಸುತ್ತಾರೆ ಮತ್ತು ಸಬಲೀಕರಣಗೊಳಿಸುತ್ತಾರೆ. ಅದಕ್ಕಾಗಿಯೇ ಈ ಸುಧಾರಣೆಗಳನ್ನು ಕೈಗೊಳ್ಳಲಾಯಿತು ಮತ್ತು ನಮ್ಮ ಸರ್ಕಾರವು ಇದೇ ಮನೋಭಾವದಿಂದ ಮುಂದುವರಿಯುತ್ತಿದೆ.
ಸ್ನೇಹಿತರೇ,
ಭಾರತದ ಈ ಹೊಸ ಮನಸ್ಥಿತಿಯು ನಮ್ಮ ಬಜೆಟ್ನಲ್ಲಿಯೂ ಪ್ರತಿಫಲಿಸುತ್ತದೆ. ಈ ಹಿಂದೆ, ಬಜೆಟ್ ಬಗ್ಗೆ ಚರ್ಚಿಸಿದಾಗ, ಗಮನವು ಕೇವಲ ವೆಚ್ಚದ ಮೇಲೆ ಮಾತ್ರ ಇತ್ತು - ಎಷ್ಟು ಹಣವನ್ನು ಹಂಚಿಕೆ ಮಾಡಲಾಯಿತು, ಏನು ಅಗ್ಗವಾಯಿತು ಅಥವಾ ದುಬಾರಿಯಾಯಿತು. ದೂರದರ್ಶನದಲ್ಲಿ, ಬಜೆಟ್ ಚರ್ಚೆಗಳು ಆದಾಯ ತೆರಿಗೆ ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದರ ಸುತ್ತ ಸಂಪೂರ್ಣವಾಗಿ ಸುತ್ತುತ್ತವೆ, ಅದಕ್ಕಿಂತ ಹೆಚ್ಚಿನದೇನೂ ದೇಶದಲ್ಲಿ ಅಸ್ತಿತ್ವದಲ್ಲಿಲ್ಲ ಎನ್ನುವಂತೆ. ಘೋಷಿಸಲಾದ ಹೊಸ ರೈಲುಗಳ ಸಂಖ್ಯೆಯು ಮುಖ್ಯಾಂಶಗಳಲ್ಲಿ ಪ್ರಾಬಲ್ಯ ಸಾಧಿಸುತ್ತದೆ ಮತ್ತು ನಂತರ ಆ ಘೋಷಣೆಗಳಿಗೆ ಏನಾಯಿತು ಎಂದು ಯಾರೂ ಕೇಳುವುದಿಲ್ಲ. ಆದ್ದರಿಂದ, ನಾವು ಬಜೆಟ್ ಅನ್ನು ಕೇವಲ ವೆಚ್ಚ-ಕೇಂದ್ರಿತದಿಂದ ಫಲಿತಾಂಶ-ಕೇಂದ್ರಿತವಾಗಿ ಪರಿವರ್ತಿಸಿದ್ದೇವೆ.
ಸ್ನೇಹಿತರೇ,
ಬಜೆಟ್ ಚರ್ಚೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆಯೆಂದರೆ: 2014 ಕ್ಕಿಂತ ಮೊದಲು, ಬಜೆಟ್ನಿಂದ ಹೊರಗಿರುವ ಸಾಲದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈಗ, ಬಜೆಟ್ನಿಂದ ಹೊರಗಿರುವ ಸುಧಾರಣೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬಜೆಟ್ ಚೌಕಟ್ಟನ್ನು ಮೀರಿ, ನಾವು ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ, ಯೋಜನಾ ಆಯೋಗವನ್ನು ನೀತಿ (NITI) ಆಯೋಗ್ ಎಂದು ಬದಲಾಯಿಸಿದ್ದೇವೆ, 370 ನೇ ವಿಧಿಯನ್ನು ತೆಗೆದುಹಾಕಿದ್ದೇವೆ, ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೆ ತಂದಿದ್ದೇವೆ ಮತ್ತು ನಾರಿ ಶಕ್ತಿ ವಂದನ ಕಾಯ್ದೆಯನ್ನು ಅಂಗೀಕರಿಸಿದ್ದೇವೆ.
ಸ್ನೇಹಿತರೇ,
ಬಜೆಟ್ ಒಳಗೆ ಅಥವಾ ಅದರಾಚೆಗೆ ಘೋಷಿಸಿದರೂ, ಸುಧಾರಣಾ ಎಕ್ಸ್ಪ್ರೆಸ್ ವೇಗವನ್ನು ಪಡೆಯುತ್ತಲೇ ಇದೆ. ಕಳೆದ ವರ್ಷದಲ್ಲಿ, ನಾವು ಬಂದರುಗಳು ಮತ್ತು ಸಮುದ್ರ ವಲಯದಲ್ಲಿ ಸುಧಾರಣೆಗಳನ್ನು ಕೈಗೊಂಡಿದ್ದೇವೆ, ಹಡಗು ನಿರ್ಮಾಣ ಉದ್ಯಮಕ್ಕೆ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ, ʻಜನ್ ವಿಶ್ವಾಸ್ ಕಾಯ್ದೆʼಯ ಅಡಿಯಲ್ಲಿ ಮುಂದುವರಿದ ಸುಧಾರಣೆಗಳನ್ನು ಕೈಗೊಂಡಿದ್ದೇವೆ, ಇಂಧನ ಭದ್ರತೆಗಾಗಿ ʻಶಾಂತಿ ಕಾಯ್ದೆʼಯನ್ನು ಜಾರಿಗೆ ತಂದಿದ್ದೇವೆ, ಕಾರ್ಮಿಕ ಕಾನೂನು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ, ಭಾರತೀಯ ನ್ಯಾಯ ಸಂಹಿತವನ್ನು ಪರಿಚಯಿಸಿದ್ದೇವೆ, ವಕ್ಫ್ ಕಾನೂನನ್ನು ಸುಧಾರಿಸಿದ್ದೇವೆ ಮತ್ತು ಗ್ರಾಮೀಣ ಉದ್ಯೋಗವನ್ನು ಉತ್ತೇಜಿಸಲು ಹೊಸ ಜಿ ರಾಮ್ ಜಿ (GRAM G) ಕಾಯ್ದೆಯನ್ನು ಪರಿಚಯಿಸಿದ್ದೇವೆ. ವರ್ಷವಿಡೀ ಇಂತಹ ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ.
ಸ್ನೇಹಿತರೇ,
ಈ ವರ್ಷದ ಬಜೆಟ್, ಸುಧಾರಣಾ ಎಕ್ಸ್ ಪ್ರೆಸ್ ಅನ್ನು ಇನ್ನಷ್ಟು ಮುನ್ನಡೆಸಿದೆ. ಬಜೆಟ್ ಹಲವು ಆಯಾಮಗಳನ್ನು ಹೊಂದಿದ್ದರೂ, ನಾನು ಎರಡು ಪ್ರಮುಖ ಅಂಶಗಳ ಬಗ್ಗೆ ಮಾತನಾಡುತ್ತೇನೆ - ಬಂಡವಾಳ ಹೂಡಿಕೆ ಮತ್ತು ತಂತ್ರಜ್ಞಾನ. ಹಿಂದಿನ ವರ್ಷಗಳಂತೆ, ಈ ಬಜೆಟ್ನಲ್ಲಿಯೂ ಮೂಲಸೌಕರ್ಯ ವೆಚ್ಚವನ್ನು ಸುಮಾರು ₹17 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಬಂಡವಾಳ ಹೂಡಿಕೆಯ ಗಮನಾರ್ಹವಾಗಿ ಹಲವುಪಟ್ಟು ಹೆಚ್ಚಿದ ಪರಿಣಾಮದ ಬಗ್ಗೆ ನಿಮಗೆ ತಿಳಿದಿದೆ; ಇದು ದೇಶದ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ಹಲವಾರು ವಲಯಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತದೆ. ಐದು ವಿಶ್ವವಿದ್ಯಾಲಯ ಪಟ್ಟಣಗಳ ನಿರ್ಮಾಣ, ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿ ನಗರ ಆರ್ಥಿಕ ಪ್ರದೇಶಗಳ ಸೃಷ್ಟಿ ಮತ್ತು ಏಳು ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್ ಗಳು, ಅಂತಹ ಬಜೆಟ್ ಘೋಷಣೆಗಳು ನಿಜವಾದ ಅರ್ಥದಲ್ಲಿ, ನಮ್ಮ ಯುವಕರಲ್ಲಿ ಮತ್ತು ರಾಷ್ಟ್ರದ ಭವಿಷ್ಯದಲ್ಲಿ ಹೂಡಿಕೆಗಳಾಗಿವೆ.
ಸ್ನೇಹಿತರೇ,
ಕಳೆದ ದಶಕದಲ್ಲಿ, ನಾವು ತಂತ್ರಜ್ಞಾನವನ್ನು ಮತ್ತು ನಾವೀನ್ಯತೆಯನ್ನು ಬೆಳವಣಿಗೆಯ ಪ್ರಮುಖ ಚಾಲಕರು ಎಂದು ಪರಿಗಣಿಸಿದ್ದೇವೆ. ಈ ದೃಷ್ಟಿಕೋನದೊಂದಿಗೆ, ನಾವು ದೇಶಾದ್ಯಂತ ಸ್ಟಾರ್ಟ್-ಅಪ್ ಸಂಸ್ಕೃತಿ ಮತ್ತು ಹ್ಯಾಕಥಾನ್ ಸಂಸ್ಕೃತಿಯನ್ನು ಉತ್ತೇಜಿಸಿದ್ದೇವೆ. ಇಂದು, ಭಾರತದಲ್ಲಿ ವೈವಿಧ್ಯಮಯ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಲಕ್ಷಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿವೆ. ನಾವು ನಮ್ಮ ಯುವಕರನ್ನು ಪ್ರೋತ್ಸಾಹಿಸಿದ್ದೇವೆ ಮತ್ತು ಅಪಾಯವನ್ನು ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಿದ್ದೇವೆ. ಫಲಿತಾಂಶಗಳು ನಮ್ಮ ಮುಂದೆ ಸ್ಪಷ್ಟವಾಗಿವೆ. ಈ ವರ್ಷದ ಬಜೆಟ್ ಈ ಆದ್ಯತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಬಯೋಫಾರ್ಮಾ, ಸೆಮಿಕಂಡಕ್ಟರ್ಗಳು ಮತ್ತು ಎಐನಂತಹ ವಲಯಗಳಿಗೆ, ವಿಶೇಷವಾಗಿ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ.
ಸ್ನೇಹಿತರೇ,
ದೇಶದ ಆರ್ಥಿಕ ಶಕ್ತಿ ಬೆಳೆದಂತೆ, ನಾವು ರಾಜ್ಯಗಳನ್ನು ಪ್ರಮಾಣಾನುಗುಣವಾಗಿ ಸಬಲೀಕರಣಗೊಳಿಸಿದ್ದೇವೆ. ನಾನು ಇನ್ನೊಂದು ಅಂಕಿ ಅಂಶವನ್ನು ಹಂಚಿಕೊಳ್ಳುತ್ತೇನೆ. 2004 ಮತ್ತು 2014 ರ ನಡುವೆ, ಹತ್ತು ವರ್ಷಗಳಲ್ಲಿ, ರಾಜ್ಯಗಳು ಸುಮಾರು ₹18 ಲಕ್ಷ ಕೋಟಿ ತೆರಿಗೆ ಹಂಚಿಕೆಯನ್ನು ಪಡೆದಿವೆ. ಇದಕ್ಕೆ ವ್ಯತಿರಿಕ್ತವಾಗಿ, 2014 ರಿಂದ 2025 ರವರೆಗೆ, ರಾಜ್ಯಗಳಿಗೆ ₹84 ಲಕ್ಷ ಕೋಟಿ ನೀಡಲಾಗಿದೆ. ಈ ವರ್ಷದ ಬಜೆಟ್ನಲ್ಲಿ ಪ್ರಸ್ತಾಪಿಸಲಾದ ಸರಿಸುಮಾರು ₹14 ಲಕ್ಷ ಕೋಟಿಯನ್ನು ನಾನು ಸೇರಿಸಿದರೆ, ನಮ್ಮ ಸರ್ಕಾರದ ಅಡಿಯಲ್ಲಿ ರಾಜ್ಯಗಳಿಗೆ ಒಟ್ಟು ತೆರಿಗೆ ಹಂಚಿಕೆಯು ಸುಮಾರು ₹100 ಲಕ್ಷ ಕೋಟಿ ಆಗುತ್ತದೆ. ಈ ಮೊತ್ತವನ್ನು ಕೇಂದ್ರ ಸರ್ಕಾರವು ವಿವಿಧ ರಾಜ್ಯ ಸರ್ಕಾರಗಳಿಗೆ ಆಯಾ ಪ್ರದೇಶಗಳಲ್ಲಿ ಅಭಿವೃದ್ಧಿ ಉಪಕ್ರಮಗಳನ್ನು ಮುನ್ನಡೆಸಲು ವರ್ಗಾಯಿಸಲಾಗಿದೆ.
ಸ್ನೇಹಿತರೇ,
ಈ ದಿನಗಳಲ್ಲಿ, ಭಾರತದ ಎಫ್ ಟಿ ಎ ಗಳು-ಮುಕ್ತ ವ್ಯಾಪಾರ ಒಪ್ಪಂದಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾನು ಇಲ್ಲಿಗೆ ಪ್ರವೇಶಿಸಿದಾಗ, ಅದರ ಬಗ್ಗೆ ಸಂಭಾಷಣೆಗಳು ಈಗಾಗಲೇ ಪ್ರಾರಂಭವಾಗಿವೆ ಮತ್ತು ವಿಶ್ಲೇಷಣೆಗಳು ಪ್ರಪಂಚದಾದ್ಯಂತ ನಡೆಯುತ್ತಿವೆ. ಆದಾಗ್ಯೂ, ಇಂದು ನಾನು ಮತ್ತೊಂದು ಆಸಕ್ತಿದಾಯಕ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತೇನೆ - ಬಹುಶಃ ಮಾಧ್ಯಮಗಳು ಹುಡುಕುತ್ತಿರುವ ಕೋನವಲ್ಲ, ಆದರೆ ಉಪಯುಕ್ತವಾಗಿರಬಹುದು. ನಾನು ಹೇಳಲಿರುವ ವಿಷಯವು ನೀವು ಯೋಚಿಸಿರದೇ ಇರಬಹುದು ಎಂದು ನಾನು ದೃಢವಾಗಿ ನಂಬುತ್ತೇನೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಇಂತಹ ವ್ಯಾಪಕವಾದ ಮುಕ್ತ ವ್ಯಾಪಾರ ಒಪ್ಪಂದಗಳು 2014 ಕ್ಕಿಂತ ಮೊದಲು ಏಕೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ದೇಶವು ಒಂದೇ ಆಗಿತ್ತು, ಯುವ ಶಕ್ತಿಯು ಒಂದೇ ಆಗಿತ್ತು, ಸರ್ಕಾರಿ ವ್ಯವಸ್ಥೆಯು ಒಂದೇ ಆಗಿತ್ತು - ಹಾಗಾದರೆ ಏನು ಬದಲಾಯಿತು? ಸರ್ಕಾರದ ದೃಷ್ಟಿಕೋನ, ಅದರ ನೀತಿ ಮತ್ತು ಉದ್ದೇಶ ಮತ್ತು ಭಾರತದ ಸಾಮರ್ಥ್ಯಗಳಲ್ಲಿ ಬದಲಾವಣೆ ಬಂದಿತು.
ಸ್ನೇಹಿತರೇ,
ಒಂದು ಕ್ಷಣ ಯೋಚಿಸಿ - ಭಾರತವನ್ನು "ದುರ್ಬಲ ಐದು" ಆರ್ಥಿಕತೆಗಳಲ್ಲಿ ಒಂದು ಎಂದಾಗ, ನಮ್ಮೊಂದಿಗೆ ಯಾರು ವ್ಯವಹಾರ ಮಾಡುತ್ತಿದ್ದರು? ಒಂದು ಹಳ್ಳಿಯಲ್ಲಿ, ಶ್ರೀಮಂತ ಕುಟುಂಬವು ತನ್ನ ಮಗಳನ್ನು ಬಡ ಮನೆಗೆ ಮದುವೆ ಮಾಡಲು ಒಪ್ಪುತ್ತದೆಯೇ? ಅವರು ಅದನ್ನು ಕೀಳಾಗಿ ನೋಡುತ್ತಿದ್ದರು. ಜಗತ್ತಿನಲ್ಲಿ ನಮ್ಮ ಪರಿಸ್ಥಿತಿ ಹಾಗಿತ್ತು. ದೇಶವು ಸಮರ್ಥವಿಲ್ಲದ ನೀತಿ , ಹಗರಣಗಳು ಮತ್ತು ಭ್ರಷ್ಟಾಚಾರದಿಂದ ಸುತ್ತುವರೆದಿದ್ದಾಗ, ಭಾರತದ ಮೇಲೆ ಯಾರು ನಂಬಿಕೆ ಇಡಲು ಸಾಧ್ಯ? 2014 ರ ಮೊದಲು, ಭಾರತದ ಉತ್ಪಾದನಾ ನೆಲೆ ಅತ್ಯಂತ ದುರ್ಬಲವಾಗಿತ್ತು. ಹಿಂದಿನ ಸರ್ಕಾರಗಳು ಹಿಂಜರಿಯುತ್ತಿದ್ದವು; ಯಾರೂ ಭಾರತವನ್ನು ಸಂಪರ್ಕಿಸುತ್ತಿರಲಿಲ್ಲ, ಮತ್ತು ಪ್ರಯತ್ನಗಳನ್ನು ಮಾಡಿದರೂ ಸಹ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗಿನ ಒಪ್ಪಂದಗಳು ಆ ದೇಶಗಳು ನಮ್ಮ ಮಾರುಕಟ್ಟೆಗಳನ್ನು ಆವರಿಸಿ ಅವುಗಳನ್ನು ವಶಪಡಿಸಿಕೊಳ್ಳುತ್ತವೆ ಎಂದು ಅವರು ಭಯಪಟ್ಟರು. ಆ ಹತಾಶೆಯ ವಾತಾವರಣದಲ್ಲಿ, 2014 ರ ಮೊದಲು, ಯುಪಿಎ ಸರ್ಕಾರವು ಕೇವಲ ನಾಲ್ಕು ದೇಶಗಳೊಂದಿಗೆ ಸಮಗ್ರ ವ್ಯಾಪಾರ ಒಪ್ಪಂದಗಳನ್ನು ನಿರ್ವಹಿಸುತ್ತಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಕಳೆದ ದಶಕದಲ್ಲಿ ಭಾರತವು ಮಾಡಿದ ವ್ಯಾಪಾರ ಒಪ್ಪಂದಗಳು ಪ್ರಪಂಚದ ವಿವಿಧ ಪ್ರದೇಶಗಳಲ್ಲಿ 38 ದೇಶಗಳನ್ನು ಒಳಗೊಂಡಿದೆ. ಇಂದು, ಭಾರತವು ಆತ್ಮವಿಶ್ವಾಸದಿಂದ ನಾವು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇಂದಿನ ಭಾರತವು ಜಾಗತಿಕವಾಗಿ ಸ್ಪರ್ಧಿಸಲು ಸಿದ್ಧವಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತವು ದೃಢವಾದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ಆದ್ದರಿಂದ, ಇಂದು ಭಾರತವು ಸಮರ್ಥ ಮತ್ತು ಸಬಲೀಕರಣಗೊಂಡಿದೆ ಮತ್ತು ಅದಕ್ಕಾಗಿಯೇ ಜಗತ್ತು ನಮ್ಮನ್ನು ನಂಬುತ್ತದೆ. ಈ ಪರಿವರ್ತನೆಯು ನಮ್ಮ ವ್ಯಾಪಾರ ನೀತಿಯಲ್ಲಿ ಮಾದರಿ ಬದಲಾವಣೆಯ ಅಡಿಪಾಯವನ್ನು ರೂಪಿಸುತ್ತದೆ ಮತ್ತು ಈ ಮಾದರಿ ಬದಲಾವಣೆಯು ಅಭಿವೃದ್ಧಿ ಹೊಂದಿದ ಭಾರತದತ್ತ ನಮ್ಮ ಪ್ರಯಾಣದಲ್ಲಿ ಅತ್ಯಗತ್ಯ ಆಧಾರಸ್ತಂಭವಾಗಿದೆ.
ಸ್ನೇಹಿತರೇ,
ಪ್ರತಿಯೊಬ್ಬ ನಾಗರಿಕನು ಅಭಿವೃದ್ಧಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಸಂಪೂರ್ಣ ಸಂವೇದನೆಯೊಂದಿಗೆ ಕೆಲಸ ಮಾಡುತ್ತಿದೆ. ಪ್ರಗತಿಯ ಓಟದಲ್ಲಿ ಹಿಂದುಳಿದವರಿಗೆ ಆದ್ಯತೆ ನೀಡಲಾಗುತ್ತಿದೆ. ಹಿಂದಿನ ಸರ್ಕಾರಗಳು ಅಂಗವಿಕಲರಿಗೆ ಮಾತ್ರ ಘೋಷಣೆಗಳನ್ನು ಮಾಡಿದ್ದವು; ನಾವು ಸಹ ಆ ಹಾದಿಯನ್ನು ಮುಂದುವರಿಸಬಹುದಿತ್ತು. ಆದರೆ ಸೂಕ್ಷ್ಮತೆಯು ಆಡಳಿತವನ್ನು ವ್ಯಾಖ್ಯಾನಿಸುತ್ತದೆ. ನಾನು ನೀಡಲಿರುವ ಉದಾಹರಣೆ ನಿಮ್ಮಲ್ಲಿ ಕೆಲವರಿಗೆ ಚಿಕ್ಕದಾಗಿ ಕಾಣಿಸಬಹುದು. ನಮ್ಮ ದೇಶವು ಭಾಷಾ ವೈವಿಧ್ಯತೆಯನ್ನು ಹೊಂದಿರುವಂತೆ, ಸಂಕೇತ ಭಾಷೆಯೂ ಬೇರೆಬೇರೆಯಾಗಿತ್ತು - ಒಂದು ರೂಪದಲ್ಲಿ ತಮಿಳುನಾಡಿನಲ್ಲಿ, ಇನ್ನೊಂದು ರೂಪದಲ್ಲಿ ಉತ್ತರ ಪ್ರದೇಶದಲ್ಲಿ, ಮೂರನೇ ರೂಪದಲ್ಲಿ ಗುಜರಾತ್ನಲ್ಲಿ, ನಾಲ್ಕನೇ ರೂಪದಲ್ಲಿ ಅಸ್ಸಾಂನಲ್ಲಿ. ಒಂದು ರಾಜ್ಯದಿಂದ ಅಂಗವಿಕಲ ವ್ಯಕ್ತಿಯು ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಿದರೆ, ಸಂವಹನ ಕಷ್ಟಕರವಾಯಿತು. ಇದು ಪ್ರಮುಖ ಕೆಲಸವೆಂದು ತೋರದಿರಬಹುದು, ಆದರೆ ಸೂಕ್ಷ್ಮ ಸರ್ಕಾರವು ಅಂತಹ ವಿಷಯಗಳನ್ನು ಕ್ಷುಲ್ಲಕವೆಂದು ಪರಿಗಣಿಸುವುದಿಲ್ಲ. ಮೊದಲ ಬಾರಿಗೆ, ಭಾರತವು ಭಾರತೀಯ ಸಂಕೇತ ಭಾಷೆಯನ್ನು ಸಾಂಸ್ಥಿಕಗೊಳಿಸಿದೆ ಮತ್ತು ಪ್ರಮಾಣೀಕರಿಸಿದೆ. ಅದೇ ರೀತಿ, ಟ್ರಾನ್ಸ್ಜೆಂಡರ್ ಸಮುದಾಯವು ತಮ್ಮ ಹಕ್ಕುಗಳಿಗಾಗಿ ದೀರ್ಘಕಾಲ ಹೋರಾಡುತ್ತಿತ್ತು; ನಾವು ಅವರಿಗೆ ಘನತೆ ಮತ್ತು ರಕ್ಷಣೆ ನೀಡುವ ಶಾಸನವನ್ನು ಜಾರಿಗೆ ತಂದಿದ್ದೇವೆ. ಕಳೆದ ದಶಕದಲ್ಲಿ, ಲಕ್ಷಾಂತರ ಮಹಿಳೆಯರು ತ್ರಿವಳಿ ತಲಾಖ್ನ ಪ್ರತಿಗಾಮಿ ಪದ್ಧತಿಯಿಂದ ಮುಕ್ತರಾದರು ಮತ್ತು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಖಚಿತಪಡಿಸಲಾಯಿತು.
ಸ್ನೇಹಿತರೇ,
ಸರ್ಕಾರಿ ವ್ಯವಸ್ಥೆಯೊಳಗಿನ ಮನಸ್ಥಿತಿಯೂ ರೂಪಾಂತರಗೊಂಡಿದೆ, ಹೆಚ್ಚು ಸೂಕ್ಷ್ಮವಾಗುತ್ತಿದೆ. ಅಗತ್ಯವಿರುವವರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವಂತಹ ಯೋಜನೆಗಳಲ್ಲಿಯೂ ಸಹ ಈ ಚಿಂತನೆಯ ವ್ಯತ್ಯಾಸವು ಗೋಚರಿಸುತ್ತದೆ. ವಿರೋಧ ಪಕ್ಷದ ಕೆಲವರು ನಮ್ಮನ್ನು ಅಪಹಾಸ್ಯ ಮಾಡುತ್ತಾರೆ; ಕೆಲವು ಪತ್ರಿಕೆಗಳು ಅಂತಹ ಅಪಹಾಸ್ಯವನ್ನು ಹೆಚ್ಚುಸುತ್ತವೆ. 250 ದಶಲಕ್ಷ ಜನರು ಬಡತನದಿಂದ ಹೊರಬಂದಿದ್ದಾರೆಂದು ಹೇಳಲಾದಾಗ ಉಚಿತ ಪಡಿತರವನ್ನು ಏಕೆ ನೀಡಲಾಗುತ್ತದೆ ಎಂದು ಅವರು ಕೇಳುತ್ತಾರೆ. ಇದು ಒಂದು ವಿಚಿತ್ರ ಪ್ರಶ್ನೆ. ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದಾಗ, ವೈದ್ಯರು ಇನ್ನೂ ಹಲವಾರು ದಿನಗಳವರೆಗೆ ಮುನ್ನೆಚ್ಚರಿಕೆಗಳನ್ನು ಸೂಚಿಸುವುದಿಲ್ಲವೇ? ಹೌದು, ವ್ಯಕ್ತಿಯು ಬಡತನದಿಂದ ಹೊರಬಂದಿದ್ದಾನೆ, ಆದರೆ ಬೆಂಬಲವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅರ್ಥವಲ್ಲ. ಸಂಕುಚಿತ ಚಿಂತನೆ ಹೊಂದಿರುವವರು ಬಡತನದಿಂದ ಯಾರನ್ನಾದರೂ ಮೇಲೆತ್ತುವುದು ಸಾಕಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ; ಹೊಸ ಮಧ್ಯಮ ವರ್ಗಕ್ಕೆ ಪ್ರವೇಶಿಸಿದವರು ಮತ್ತೆ ಬಡತನಕ್ಕೆ ಜಾರಿಕೊಳ್ಳದಂತೆ ನಾವು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿಯೇ ಉಚಿತ ಆಹಾರ ಧಾನ್ಯಗಳ ರೂಪದಲ್ಲಿ ನಿರಂತರ ಬೆಂಬಲ ಅಗತ್ಯವಾಗಿದೆ. ಕಳೆದ ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಈ ಯೋಜನೆಗಾಗಿ ಲಕ್ಷಾಂತರ ಕೋಟಿಗಳನ್ನು ಖರ್ಚು ಮಾಡಿದೆ, ಬಡವರು ಮತ್ತು ಹೊಸ-ಮಧ್ಯಮ ವರ್ಗಕ್ಕೆ ಅಪಾರ ಬೆಂಬಲವನ್ನು ನೀಡಿದೆ.
ಸ್ನೇಹಿತರೇ,
ಇನ್ನೊಂದು ಸಂದರ್ಭದಲ್ಲಿ ನಾವು ಯೋಚಿಸುವಲ್ಲಿ ವ್ಯತ್ಯಾಸವನ್ನು ಗಮನಿಸುತ್ತೇವೆ. ನಾನು 2047 ರ ಬಗ್ಗೆ ಏಕೆ ಮಾತನಾಡುತ್ತೇನೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಆ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ನಿಜವಾಗಿಯೂ ಸಾಕಾರಗೊಳ್ಳುತ್ತದೆಯೇ ಮತ್ತು ಆ ಸಮಯದಲ್ಲಿ ನಾವು ಇಲ್ಲದಿದ್ದರೆ ಅದು ಮುಖ್ಯವೇ ಎಂದು ಅವರು ಕೇಳುತ್ತಾರೆ. ಇದು ಕೂಡ ಒಂದು ಪ್ರಚಲಿತ ಮನಸ್ಥಿತಿಯಾಗಿದೆ.
ಸ್ನೇಹಿತರೇ,
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಲಾಠಿಚಾರ್ಜ್ಗಳನ್ನು ಸಹಿಸಿಕೊಂಡವರು, ಕಾಲಾಪಾನಿಗೆ ಶಿಕ್ಷೆ ವಿಧಿಸಲ್ಪಟ್ಟವರು ಮತ್ತು ಗಲ್ಲಿಗೇರಿಸಲ್ಪಟ್ಟವರು ಸಹ ಸ್ವಾತಂತ್ರ್ಯ ಯಾವಾಗ ಬರುತ್ತದೆ ಎಂದು ಖಚಿತವಿಲ್ಲ ಎಂದು ಭಾವಿಸಿದ್ದರೆ, ಇಂದು ನಾವು ಸ್ವಾತಂತ್ರ್ಯಕ್ಕಾಗಿ ಲಾಠಿಚಾರ್ಜ್ಗಳನ್ನು ಏಕೆ ಸಹಿಸಿಕೊಳ್ಳಬೇಕು? ಊಹಿಸಿ, ಆ ಮನಸ್ಥಿತಿಯೊಂದಿಗೆ ದೇಶವು ಎಂದಾದರೂ ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವೇ? ರಾಷ್ಟ್ರವು ಮೊದಲು, ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾದಾಗ, ದೇಶಕ್ಕಾಗಿ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ, ದೇಶಕ್ಕಾಗಿ ಪ್ರತಿಯೊಂದು ನೀತಿಯನ್ನು ಮಾಡಲಾಗುತ್ತದೆ. ನಮ್ಮ ಚಿಂತನೆ ಸ್ಪಷ್ಟವಾಗಿದೆ, ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ ಮತ್ತು ದೇಶವನ್ನು ಅಭಿವೃದ್ಧಿಪಡಿಸಲು ನಾವು ನಿರಂತರವಾಗಿ ಕೆಲಸ ಮಾಡಬೇಕು. 2047 ರವರೆಗೆ ನಾವು ಬದುಕುತ್ತೇವೆಯೋ ಇಲ್ಲವೋ, ಈ ದೇಶ ಉಳಿಯುತ್ತದೆ ಮತ್ತು ಅದರ ಮಕ್ಕಳು ಉಳಿಯುತ್ತಾರೆ. ಅದಕ್ಕಾಗಿಯೇ ನಾವು ಮತ್ತು ಆದ್ದರಿಂದ ನಾವು ಭವಿಷ್ಯದ ಪೀಳಿಗೆಗೆ ಸುರಕ್ಷಿತ ಮತ್ತು ಉಜ್ವಲ ನಾಳೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಇಂದಿನ ದಿನವನ್ನು ಅರ್ಪಿಸಬೇಕು. ನಾಳೆಯ ಪೀಳಿಗೆಗೆ ಫಲ ನೀಡುವ ಅವಕಾಶ ಸಿಗುವಂತೆ ನಾನು ಇಂದು ಬೀಜಗಳನ್ನು ಬಿತ್ತುತ್ತಿದ್ದೇನೆ.
ಸ್ನೇಹಿತರೇ,
ಜಗತ್ತು ಈಗ ಅಡೆತಡೆಗಳೊಂದಿಗೆ ಬದುಕಲು ಸಿದ್ಧವಾಗಬೇಕು. ಅದರ ಸ್ವಭಾವವು ಕಾಲಾನಂತರದಲ್ಲಿ ವಿಕಸನಗೊಳ್ಳಬಹುದು, ಆದರೆ ವ್ಯವಸ್ಥೆಗಳಲ್ಲಿ ತ್ವರಿತ ಬದಲಾವಣೆ ಅನಿವಾರ್ಯ. ಎಐ ತರುವ ಅಡೆತಡೆಗಳನ್ನು ನೀವು ಈಗಾಗಲೇ ಗಮನಿಸಿರಬಹುದು. ಮುಂಬರುವ ವರ್ಷಗಳಲ್ಲಿ, ಎಐ ಇನ್ನಷ್ಟು ಕ್ರಾಂತಿಕಾರಿ ರೂಪಾಂತರಗಳಿಗೆ ನಾಂದಿ ಹಾಡುತ್ತದೆ ಮತ್ತು ಭಾರತ ಅದಕ್ಕೆ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ, ಭಾರತವು ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸುತ್ತದೆ. ಪ್ರಪಂಚದಾದ್ಯಂತದ ರಾಷ್ಟ್ರಗಳು ಮತ್ತು ತಂತ್ರಜ್ಞಾನ ನಾಯಕರು ಇಲ್ಲಿ ಸೇರುತ್ತಾರೆ. ಅವರೆಲ್ಲರ ಜೊತೆಗೂಡಿ, ನಾವು ಉತ್ತಮ ಜಗತ್ತನ್ನು ನಿರ್ಮಿಸಲು ಶ್ರಮಿಸುವುದನ್ನು ಮುಂದುವರಿಸುತ್ತೇವೆ. ಈ ವಿಶ್ವಾಸದೊಂದಿಗೆ, ಈ ಶೃಂಗಸಭೆಗೆ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಬಹಳ ಧನ್ಯವಾದಗಳು.
ವಂದೇ ಮಾತರಂ.
*****
(ಪ್ರಕಟಣೆ ಐ.ಡಿ.: 2228392)
ವಿಸಿಟರ್ ಕೌಂಟರ್ : 2