ರೈಲ್ವೇ ಸಚಿವಾಲಯ
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 172 ನಿಲ್ದಾಣಗಳ ಕಾಮಗಾರಿ ಪೂರ್ಣ: ಅಶ್ವಿನಿ ವೈಷ್ಣವ್
ಭಾರತೀಯ ರೈಲ್ವೆಯಿಂದ ವರ್ಷಕ್ಕೆ ಎರಡು ಬಾರಿ ಎಲ್ಲಾ ಸೇತುವೆಗಳ ತಪಾಸಣೆ; ಸ್ಥಿತಿಗತಿಯ ಆಧಾರದ ಮೇಲೆ ಕೆಲವು ಸೇತುವೆಗಳ ನಿರಂತರ ತಪಾಸಣೆ
2,337 ರಿಂದ 42,677 ಕ್ಕೆ ಏರಿಕೆ: 2004-14 ಮತ್ತು 2014-25ರ ನಡುವೆ LHB ಕೋಚ್ ಉತ್ಪಾದನೆಯಲ್ಲಿ 18 ಪಟ್ಟು ಹೆಚ್ಚು ಪ್ರಗತಿ
ರೈಲ್ವೆ ನಿಲ್ದಾಣಗಳಲ್ಲಿ 11,650 ಮಳಿಗೆಗಳು; SC/ST ಸಮುದಾಯದವರು ಸೇರಿದಂತೆ ಅರ್ಹ ಅರ್ಜಿದಾರರಿಗೆ ಹಂಚಿಕೆ
ನಿಲ್ದಾಣ ಮತ್ತು ರೈಲುಗಳಲ್ಲಿ ಸ್ವಚ್ಛತೆ ಕಾಪಾಡಲು ಪ್ರತ್ಯೇಕ ಬಜೆಟ್ ಅನುದಾನ; ಸ್ವಚ್ಛತೆಗಾಗಿ ಪ್ರಯಾಣಿಕರ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ
ರೈಲುಗಳಲ್ಲಿ ಹೆಚ್ಚಿನ ದರ ವಸೂಲಿ ತಡೆಯಲು POS ಯಂತ್ರಗಳು, ಇ-ಪ್ಯಾಂಟ್ರಿ ಸೇವೆ ಮತ್ತು ಮೆನು ಲಿಂಕ್ ಇರುವ SMS ವ್ಯವಸ್ಥೆ
ಪ್ರಕಟಣಾ ದಿನಾಂಕ:
05 FEB 2026 4:53PM by PIB Bengaluru
ನಿಲ್ದಾಣಗಳ ಪುನರಾಭಿವೃದ್ಧಿ
ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗಾಗಿ, ರೈಲ್ವೆ ಸಚಿವಾಲಯವು 'ಅಮೃತ್ ಭಾರತ್ ನಿಲ್ದಾಣ ಯೋಜನೆ'ಯನ್ನು (Amrit Bharat Station Scheme) ಪ್ರಾರಂಭಿಸಿದೆ. ಈ ಯೋಜನೆಯು ನಿಲ್ದಾಣಗಳನ್ನು ಸುಧಾರಿಸಲು ಮಾಸ್ಟರ್ ಪ್ಲಾನ್‌ಗಳ ತಯಾರಿಕೆ ಮತ್ತು ಅವುಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುವುದನ್ನು ಒಳಗೊಂಡಿದೆ. ಈ ಮಾಸ್ಟರ್ ಪ್ಲಾನಿಂಗ್ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:
- ನಿಲ್ದಾಣಕ್ಕೆ ಪ್ರವೇಶ ಮತ್ತು ಸಂಚರಣಾ ಪ್ರದೇಶಗಳ ಸುಧಾರಣೆ
- ನಿಲ್ದಾಣವನ್ನು ನಗರದ ಎರಡೂ ಬದಿಗಳೊಂದಿಗೆ ಸಂಯೋಜಿಸುವುದು
- ನಿಲ್ದಾಣದ ಕಟ್ಟಡದ ಸುಧಾರಣೆ
- ವಿಶ್ರಾಂತಿ ಕೊಠಡಿಗಳು, ಶೌಚಾಲಯಗಳು, ಆಸನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಬೂತ್‌ಗಳ ಸುಧಾರಣೆ
- ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ವಿಶಾಲವಾದ ಪಾದಚಾರಿ ಮೇಲ್ಸೇತುವೆ/ಏರ್ ಕಾನ್ಕೋರ್ಸ್ ವ್ಯವಸ್ಥೆ
- ಲಿಫ್ಟ್/ಎಸ್ಕಲೇಟರ್/ರ್ಯಾಂಪ್ ವ್ಯವಸ್ಥೆ
- ಪ್ಲಾಟ್ ಫಾರ್ಮ್ ಮೇಲ್ಮೈ ಮತ್ತು ಪ್ಲಾಟ್ ಫಾರ್ಮ್ ಗಳ ಮೇಲಿನ ಹೊದಿಕೆಗಳ (ಸುಧಾರಣೆ/ವ್ಯವಸ್ಥೆ
- ‘ಒಂದು ನಿಲ್ದಾಣ ಒಂದು ಉತ್ಪನ್ನ’ದಂತಹ ಯೋಜನೆಗಳ ಮೂಲಕ ಸ್ಥಳೀಯ ಉತ್ಪನ್ನಗಳ ಮಾರಾಟ ಮಳಿಗೆಗಳ ವ್ಯವಸ್ಥೆ
- ಪಾರ್ಕಿಂಗ್ ಪ್ರದೇಶಗಳು, ಮಲ್ಟಿಮೋಡಲ್ ಇಂಟಿಗ್ರೇಷನ್ (ವಿವಿಧ ಸಾರಿಗೆಗಳ ಸಂಯೋಜನೆ)
- ದಿವ್ಯಾಂಗರಿಗೆ ಅಗತ್ಯ ಸೌಲಭ್ಯಗಳು
- ಉತ್ತಮ ಪ್ರಯಾಣಿಕ ಮಾಹಿತಿ ವ್ಯವಸ್ಥೆಗಳು
- ಪ್ರತಿ ನಿಲ್ದಾಣದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಎಕ್ಸಿಕ್ಯೂಟಿವ್ ಲೌಂಜ್‌ಗಳು, ವ್ಯಾಪಾರ ಸಭೆಗಳಿಗಾಗಿ ನಿಗದಿಪಡಿಸಿದ ಸ್ಥಳಗಳು, ಭೂದೃಶ್ಯ ವಿನ್ಯಾನ (Landscaping) ಇತ್ಯಾದಿಗಳ ವ್ಯವಸ್ಥೆ.
ಈ ಯೋಜನೆಯು ಅಗತ್ಯಕ್ಕೆ ಅನುಗುಣವಾಗಿ ಸುಸ್ಥಿರ ಮತ್ತು ಪರಿಸರ ಸ್ನೇಹಿ ಪರಿಹಾರಗಳು, ಬ್ಯಾಲೆಸ್ಟ್ ಲೆಸ್ ಟ್ರ್ಯಾಕ್ ಗಳ (ಜಲ್ಲಿ ರಹಿತ ಹಳಿಗಳು) ವ್ಯವಸ್ಥೆ ಇತ್ಯಾದಿಗಳನ್ನು ಒಳಗೊಂಡಿದೆ. ದೀರ್ಘಕಾಲದ ದೃಷ್ಟಿಕೋನದೊಂದಿಗೆ ರೈಲ್ವೆ ನಿಲ್ದಾಣಗಳನ್ನು ನಗರ ಕೇಂದ್ರಗಳನ್ನಾಗಿ ರೂಪಿಸುವ ಗುರಿಯನ್ನು ಇದು ಹೊಂದಿದೆ. ಇದುವರೆಗೆ, ಈ ಯೋಜನೆಯಡಿ ಅಭಿವೃದ್ಧಿಗಾಗಿ 1337 ನಿಲ್ದಾಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಇಲ್ಲಿಯವರೆಗೆ 172 ನಿಲ್ದಾಣಗಳ ಕಾಮಗಾರಿಗಳು ಪೂರ್ಣಗೊಂಡಿವೆ.
ಸೇತುವೆಗಳ ಸುರಕ್ಷತೆ
ದೇಶಾದ್ಯಂತ ಇರುವ ರೈಲ್ವೆ ಸೇತುವೆಗಳ ಸುರಕ್ಷತೆಗೆ ಭಾರತೀಯ ರೈಲ್ವೆಯು (IR) ಹೆಚ್ಚಿನ ಆದ್ಯತೆ ನೀಡುತ್ತದೆ. ಸೇತುವೆಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಅತ್ಯುನ್ನತ ಮಟ್ಟದಲ್ಲಿ ಖಚಿತಪಡಿಸಿಕೊಳ್ಳಲು, ಭಾರತೀಯ ರೈಲ್ವೆಯಲ್ಲಿ ಸೇತುವೆಗಳ ತಪಾಸಣೆಗಾಗಿ ಸುಸ್ಥಾಪಿತ ವ್ಯವಸ್ಥೆಯಿದೆ. ಎಲ್ಲಾ ಸೇತುವೆಗಳನ್ನು ನಿಯೋಜಿತ ಅಧಿಕಾರಿಗಳು ವರ್ಷಕ್ಕೆ ಎರಡು ಬಾರಿ ತಪಾಸಣೆ ಮಾಡುತ್ತಾರೆ; ಮೊದಲನೆಯದು ಮುಂಗಾರು ಮಳೆ ಆರಂಭವಾಗುವ ಮೊದಲು ಮತ್ತು ಎರಡನೆಯದು ಮುಂಗಾರಿನ ನಂತರದ ವಿವರವಾದ ತಪಾಸಣೆ. ಇದರ ಜೊತೆಗೆ, ಮುಖ್ಯ ಸೇತುವೆ ಎಂಜಿನಿಯರ್ (CBE) ನಿರ್ಧರಿಸಿದಂತೆ ಸೇತುವೆಗಳ ಸ್ಥಿತಿಯನ್ನು ಅವಲಂಬಿಸಿ ಕೆಲವು ಸೇತುವೆಗಳನ್ನು ಹೆಚ್ಚು ಬಾರಿ ತಪಾಸಣೆ ಮಾಡಲಾಗುತ್ತದೆ. ಪ್ರಮುಖ ಮತ್ತು ದೊಡ್ಡ ಸೇತುವೆಗಳ ಸಮಗ್ರ ತಾಂತ್ರಿಕ ತಪಾಸಣೆಯನ್ನು ವಾರ್ಷಿಕವಾಗಿ ಅಂತಹ ಶೇಕಡಾ 20ರಷ್ಟು ಸೇತುವೆಗಳನ್ನು ಒಳಗೊಳ್ಳುವ ರೀತಿಯಲ್ಲಿ ಮಾಡಲಾಗುತ್ತದೆ.
ಸೇತುವೆಗಳ ದುರಸ್ತಿ/ಬಲವರ್ಧನೆ/ಪುನಶ್ಚೇತನ/ಮರುನಿರ್ಮಾಣವು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಸೇತುವೆಗಳ ತಪಾಸಣೆಯ ಆಧಾರದ ಮೇಲೆ ಇದನ್ನು ಕೈಗೊಳ್ಳಲಾಗುತ್ತದೆ. 2022 ರಿಂದ 2025ರ ಅವಧಿಯಲ್ಲಿ (ಡಿಸೆಂಬರ್ 2025 ರವರೆಗೆ), ಭಾರತೀಯ ರೈಲ್ವೆಯಲ್ಲಿ ಒಟ್ಟು 8,626 ರೈಲ್ವೆ ಸೇತುವೆಗಳನ್ನು ದುರಸ್ತಿ ಮಾಡಲಾಗಿದೆ / ಪುನಶ್ಚೇತನಗೊಳಿಸಲಾಗಿದೆ / ಬಲಪಡಿಸಲಾಗಿದೆ ಅಥವಾ ಮರುನಿರ್ಮಾಣ ಮಾಡಲಾಗಿದೆ.
ಇದರ ಜೊತೆಗೆ, ಕೆಲವು ರೈಲ್ವೆ ಸೇತುವೆಗಳ ಸ್ಥಿತಿಯನ್ನು ಅವಲಂಬಿಸಿ ಅವುಗಳನ್ನು ಹೆಚ್ಚು ಬಾರಿ ತಪಾಸಣೆ ಮಾಡಲಾಗುತ್ತದೆ. ರೈಲ್ವೆ ಸೇತುವೆಗಳ ದುರಸ್ತಿ/ಬಲವರ್ಧನೆ/ಪುನಶ್ಚೇತನ/ಮರುನಿರ್ಮಾಣವು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ತಪಾಸಣೆಯ ಸಮಯದಲ್ಲಿ ಕಂಡುಬರುವ ಭೌತಿಕ ಸ್ಥಿತಿಯ ಆಧಾರದ ಮೇಲೆ ಅಗತ್ಯವಿದ್ದಾಗ ಈ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ. ವಿಶೇಷ ತಾಂತ್ರಿಕ ಆಡಿಟ್ ಅನ್ನು ಸಹ ನಡೆಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಸಬ್ ವೇಗಳು ಮತ್ತು ಕೆಳಸೇತುವೆಗಳ (RUBs) ತಪಾಸಣೆಯನ್ನು ಮುಂಗಾರು ಆರಂಭವಾಗುವ ಮೊದಲು ಮತ್ತು ನಂತರ ನಡೆಸಲಾಗುತ್ತದೆ. ಕೆಳಸೇತುವೆಗಳು ಮತ್ತು ಸಬ್ ವೇಗಳಲ್ಲಿ ನೀರು ನಿಲ್ಲುವುದನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ; ಹೊಸ ವಿನ್ಯಾಸಗಳಲ್ಲಿ ಸುಧಾರಿತ ಒಳಚರಂಡಿ ವ್ಯವಸ್ಥೆ, ನೀರನ್ನು ನೈಸರ್ಗಿಕ ಕಾಲುವೆಗಳಿಗೆ ತಿರುಗಿಸುವುದು, ಹಂಪ್ ಗಳು ಮತ್ತು ಕ್ರಾಸ್-ಡ್ರೈನ್ ಗಳ ವ್ಯವಸ್ಥೆ, ಜಾಯಿಂಟ್ ಗಳನ್ನು ಸೀಲ್ ಮಾಡುವುದು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಪಂಪ್ ಗಳನ್ನು ಅಳವಡಿಸುವುದು ಇದರಲ್ಲಿ ಸೇರಿವೆ.
ಸೇತುವೆ ಪುನಶ್ಚೇತನ ಕಾಮಗಾರಿಗಳ ವಿಧಾನಗಳನ್ನು ಇಂಡಿಯನ್ ರೈಲ್ವೆ ಬ್ರಿಡ್ಜ್ ಮ್ಯಾನುಯಲ್ (IRBM) ನಲ್ಲಿ ನೀಡಲಾಗಿದೆ. ಗುಣಮಟ್ಟದ ಭರವಸೆ ಯೋಜನೆ (QAP), ತಪಾಸಣೆ ಮತ್ತು ಪರೀಕ್ಷಾ ಯೋಜನೆ (ITP) ಗಳ ಪಾಲನೆಯನ್ನು ಗುತ್ತಿಗೆ ನಿರ್ವಹಣೆ ಹಾಗೂ ಗುತ್ತಿಗೆಯ ಸಾಮಾನ್ಯ ಮತ್ತು ವಿಶೇಷ ಷರತ್ತುಗಳ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ.
ಕೆಲಸ ನಿರ್ವಹಿಸುವ ಏಜೆನ್ಸಿಯ ಹೊಣೆಗಾರಿಕೆಗಾಗಿ, ದೋಷ ಹೊಣೆಗಾರಿಕೆ ಅವಧಿಯವರೆಗೆ (defect liability period) ಭದ್ರತಾ ಠೇವಣಿಯನ್ನು ಉಳಿಸಿಕೊಳ್ಳುವುದು ಮತ್ತು ಒಪ್ಪಂದ ರದ್ದುಪಡಿಸುವಂತಹ ದಂಡದ ನಿಬಂಧನೆಗಳನ್ನು ಸೇರಿಸಲಾಗಿದೆ. ಸೇತುವೆ ಕಾಮಗಾರಿಗಳ ಪೂರ್ಣಗೊಳ್ಳುವಿಕೆಯು ಸ್ಥಳ, ಮಾದರಿ, ಯೋಜನೆಗಳ ಅನುಮೋದನೆ, ಸಂಪರ್ಕ ರಸ್ತೆಯ ಲಭ್ಯತೆ, ಹವಾಮಾನ ಪರಿಸ್ಥಿತಿಗಳಿಂದಾಗಿ ವರ್ಷದಲ್ಲಿ ಲಭ್ಯವಿರುವ ಕೆಲಸದ ಸಮಯ, ಬ್ಲಾಕ್ ಗಳ ಲಭ್ಯತೆ ಮತ್ತು ವೇಗ ಮಿತಿ ಹೇರಿಕೆ ಮುಂತಾದ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಕೋಚ್ ತಯಾರಿಕೆ
ಪ್ರಸ್ತುತ, ರೈಲ್ವೆ ಸಚಿವಾಲಯದ ಅಡಿಯಲ್ಲಿ ದೇಶದಲ್ಲಿ ಮೂರು ಕೋಚ್ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕೋಚ್ ತಯಾರಿಕಾ ಘಟಕಗಳ ಅಭಿವೃದ್ಧಿ ವೆಚ್ಚವು ಸ್ಥಳ, ತಯಾರಿಸಲು ಉದ್ದೇಶಿಸಿರುವ ಕೋಚ್ ಗಳ ಮಾದರಿ, ಯೋಜಿತ ಉತ್ಪಾದನಾ ಸಾಮರ್ಥ್ಯ ಮತ್ತು ಅಳವಡಿಸಬೇಕಾದ ಯಂತ್ರೋಪಕರಣ ಹಾಗೂ ಸ್ಥಾವರಗಳಂತಹ ಅಂಶಗಳನ್ನು ಅವಲಂಬಿಸಿ ಬದಲಾಗುತ್ತದೆ. ಕೋಚ್ ತಯಾರಿಕಾ ಘಟಕಗಳ ಅಭಿವೃದ್ಧಿಗಾಗಿ ವೆಚ್ಚವನ್ನು ಸುದೀರ್ಘ ಅವಧಿಯಲ್ಲಿ ಮತ್ತು ಹಂತ ಹಂತವಾಗಿ ಮಾಡಲಾಗುತ್ತದೆ; ಇದು ಘಟಕಗಳ ಆರಂಭಿಕ ಸ್ಥಾಪನೆ ಮಾತ್ರವಲ್ಲದೆ, ಕಾಲಕಾಲಕ್ಕೆ ಸೌಲಭ್ಯಗಳ ಆಧುನೀಕರಣ ಮತ್ತು ಸಾಮರ್ಥ್ಯ ವಿಸ್ತರಣೆಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಇತ್ತೀಚೆಗೆ ಕಾರ್ಯಾರಂಭ ಮಾಡಿದ ಕೋಚ್ ತಯಾರಿಕಾ ಘಟಕವಾದ ರಾಯ್ ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿ (MCF) ಸ್ಥಾಪನೆಗೆ ತಗುಲಿದ ವೆಚ್ಚ ₹3,042.83 ಕೋಟಿ.
ಇದಲ್ಲದೆ, ಕಾರ್ಯನಿರ್ವಹಿಸುತ್ತಿರುವ ಮೂರು ಕೋಚ್ ತಯಾರಿಕಾ ಘಟಕಗಳಾದ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF), ಕಪುರ್ಥಲಾದ ರೈಲ್ ಕೋಚ್ ಫ್ಯಾಕ್ಟರಿ (RCF) ಮತ್ತು ರಾಯ್ ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿಗಳ ಆಧುನೀಕರಣ ಹಾಗೂ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗಾಗಿ ₹2,443 ಕೋಟಿಗಳನ್ನು ಮಂಜೂರು ಮಾಡಲಾಗಿದೆ.
LHB ಕೋಚ್ಗಳು
LHB ಕೋಚ್ ಗಳ ವ್ಯಾಪ್ತಿಯನ್ನು ಹೆಚ್ಚಿಸುವ ಬಗ್ಗೆ ತಿಳಿಸುತ್ತಾ, ಹಳೆಯ ICF ಕೋಚ್‌ಗಳ ಬದಲಿಗೆ ಹೆಚ್ಚು ಸುರಕ್ಷಿತ ಮತ್ತು ಆಧುನಿಕವಾದ LHB (Linke Hofmann Busch) ಕೋಚ್ ಗಳನ್ನು ಹಂತ ಹಂತವಾಗಿ ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ತಾಂತ್ರಿಕವಾಗಿ ಅತ್ಯಾಧುನಿಕವಾಗಿರುವ ಈ LHB ಕೋಚ್ ಗಳು ಉತ್ತಮ ಸವಾರಿ ಸೌಕರ್ಯ, ಸುಧಾರಿತ ಸೌಂದರ್ಯ ಮತ್ತು ಹಗುರವಾದ ವಿನ್ಯಾಸ, ಆಂಟಿ-ಕ್ಲೈಂಬಿಂಗ್ (Anti-climbing) ವೈಶಿಷ್ಟ್ಯಗಳು, ವೈಫಲ್ಯ ಸೂಚನಾ ವ್ಯವಸ್ಥೆಯೊಂದಿಗೆ ಏರ್ ಸಸ್ಪೆನ್ಷನ್ (ಸೆಕೆಂಡರಿ), ಸ್ಟೇನ್ ಲೆಸ್ ಸ್ಟೀಲ್ ಶೆಲ್ ಮತ್ತು ಡಿಸ್ಕ್ ಬ್ರೇಕ್ ಸಿಸ್ಟಮ್ ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.
2004-14 ಮತ್ತು 2014-25ರ ನಡುವಿನ LHB ಕೋಚ್ ಗಳ ಉತ್ಪಾದನೆಯ ವಿವರ ಈ ಕೆಳಗಿನಂತಿದೆ:
|
ಅವಧಿ
|
ತಯಾರಿಸಲಾದ LHB ಕೋಚ್ ಗಳು
|
|
2004-14
|
2,337 ಸಂಖ್ಯೆಗಳು.
|
|
2014-25
|
42,677 ಸಂಖ್ಯೆಗಳು (18 ಪಟ್ಟು ಹೆಚ್ಚು)
|
ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳು
ಪ್ರಯಾಣಿಕರಿಗೆ ಪೂರಕವಾದ ಸೌಲಭ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು, ಕಾಲಕಾಲಕ್ಕೆ ಜಾರಿಯಲ್ಲಿರುವ ನೀತಿಗಳಿಗೆ ಅನುಗುಣವಾಗಿ ಇ-ಹರಾಜು (e-auction) ಅಥವಾ ಇ-ಟೆಂಡರ್ ಮೂಲಕ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡಲಾಗುತ್ತದೆ.
ಪ್ರಸ್ತುತ, ರೈಲ್ವೆ ನಿಲ್ದಾಣಗಳಲ್ಲಿ 11,650 ಮಳಿಗೆಗಳು/ಘಟಕಗಳಿದ್ದು, ಇವುಗಳನ್ನು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಸಮುದಾಯದವರು ಸೇರಿದಂತೆ ಅರ್ಹ ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿದೆ. ಚಾಲ್ತಿಯಲ್ಲಿರುವ ನೀತಿಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ಮಳಿಗೆಗಳನ್ನು ಹಂಚಿಕೆ ಮಾಡಲು ಯಾವುದೇ ಅವಕಾಶವಿರುವುದಿಲ್ಲ.
ಸ್ವಚ್ಛತೆ
ಸ್ವಚ್ಛತೆಯು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಭಾರತೀಯ ರೈಲ್ವೆಯು (IR) ಬೋಗಿಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಸ್ವಚ್ಛವಾಗಿಡಲು ಸದಾ ಶ್ರಮಿಸುತ್ತದೆ. ಶೌಚಾಲಯಗಳು ಸೇರಿದಂತೆ ಬೋಗಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಮೇಲ್ವಿಚಾರಣೆ ಮಾಡಲು ರೈಲ್ವೆಯು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:
- ಬೋಗಿಯ ಒಳಾಂಗಣ, ಹೊರಭಾಗ ಮತ್ತು ಶೌಚಾಲಯಗಳ ಉತ್ತಮ ಸ್ವಚ್ಛತೆಗಾಗಿ ಪ್ರಾಥಮಿಕ ನಿರ್ವಹಣೆಯ ಸಮಯದಲ್ಲಿ ಯಾಂತ್ರಿಕೃತ ಬೋಗಿ ಸ್ವಚ್ಛತೆಯನ್ನು ಖಚಿತಪಡಿಸಲಾಗುತ್ತಿದೆ.
- ರೈಲು ಚಲಿಸುತ್ತಿರುವಾಗ ಸ್ವಚ್ಛತೆಯನ್ನು ಕಾಪಾಡಲು ಮತ್ತು ಪ್ರಯಾಣಿಕರ ದೂರುಗಳನ್ನು ಪರಿಹರಿಸಲು ಆನ್-ಬೋರ್ಡ್ ಹೌಸ್‌ಕೀಪಿಂಗ್ ಸಿಬ್ಬಂದಿ ಸೇವೆಯನ್ನು (OBHS) ಒದಗಿಸಲಾಗುತ್ತಿದೆ.
- ಗುರುತಿಸಲಾದ ರೈಲುಗಳು ದಾರಿಯ ಮಧ್ಯೆ ನಿಗದಿತ ನಿಲ್ದಾಣಗಳಲ್ಲಿ ನಿಂತಾಗ, ಶೌಚಾಲಯಗಳು ಸೇರಿದಂತೆ ಬೋಗಿಗಳನ್ನು ಯಾಂತ್ರಿಕವಾಗಿ ಸ್ವಚ್ಛಗೊಳಿಸಲು 'ಕ್ಲೀನ್ ಟ್ರೈನ್ ಸ್ಟೇಷನ್' ಸೇವೆಯನ್ನು ಪರಿಚಯಿಸಲಾಗಿದೆ. ಹೆಚ್ಚಿನ ಒತ್ತಡದ ಜೆಟ್ ಯಂತ್ರಗಳು ಮತ್ತು ಸ್ವಚ್ಛತಾ ಸಾಧನಗಳನ್ನು ಹೊಂದಿರುವ ಮೀಸಲಾದ ಸಿಬ್ಬಂದಿ ತಂಡವು ಸ್ವಚ್ಛತೆಯನ್ನು ಕೈಗೊಂಡು ನಂತರ ಬೋಗಿಯ ಶೌಚಾಲಯಗಳನ್ನು ಒಣಗಿಸುತ್ತಾರೆ.
- ಹಳಿಗಳ ಮೇಲೆ ಮಾನವ ತ್ಯಾಜ್ಯ ವಿಲೇವಾರಿಯಾಗುವುದನ್ನು ತಡೆಯಲು ಮತ್ತು ಸ್ವಚ್ಛತೆಯನ್ನು ಸುಧಾರಿಸಲು ಎಲ್ಲಾ ಪ್ರಯಾಣಿಕ ಬೋಗಿಗಳಲ್ಲಿ ಬಯೋ-ಟಾಯ್ಲೆಟ್‌ಗಳನ್ನು ಅಳವಡಿಸಲಾಗಿದೆ. ಬಯೋ-ಟಾಯ್ಲೆಟ್ ಅಳವಡಿಕೆಯ ವಿವರಗಳು ಈ ಕೆಳಗಿನಂತಿವೆ:
|
ಅವಧಿ
|
ಅಳವಡಿಸಲಾದ ಬಯೋ-ಟಾಯ್ಲೆಟ್ ಗಳ ಸಂಖ್ಯೆ
|
|
2004-2014
|
9,587
|
|
2014 ರಿಂದ ಇಲ್ಲಿಯವರೆಗೆ
|
3,61,572
|
- ನಿರಂತರ ತಪಾಸಣೆಗಳು ಹಾಗೂ 'ರೈಲ್ ಮದದ್' (Rail Madad) / 'ರೈಲ್ ಒನ್' (RailOne) ಆ್ಯಪ್ ಮತ್ತು ಇತರ ಪ್ರಯಾಣಿಕ ಸಂಪರ್ಕ ಮಾಧ್ಯಮಗಳ ಮೂಲಕ ಬರುವ ಪ್ರತಿಕ್ರಿಯೆಗಳ ಆಧಾರದ ಮೇಲೆ ನಿಯಮಿತವಾಗಿ ಮೇಲ್ವಿಚಾರಣೆ ನಡೆಸಲಾಗುತ್ತದೆ.
ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಲು ಭಾರತೀಯ ರೈಲ್ವೆಯು ಪ್ರತ್ಯೇಕ ಬಜೆಟ್ ಅನುದಾನವನ್ನು ಹೊಂದಿದೆ. ಸ್ವಚ್ಛತಾ ಸೇವೆಯನ್ನು ಒದಗಿಸುವುದಕ್ಕಾಗಿ ಪ್ರಯಾಣಿಕರ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಆಹಾರ ಮತ್ತು ಕೇಟರಿಂಗ್
ಭಾರತೀಯ ರೈಲ್ವೆಯು ಪ್ರತಿ ವರ್ಷ ಸರಾಸರಿ ಸುಮಾರು 58 ಕೋಟಿ ಊಟದ ಪ್ಯಾಕೆಟ್ ಗಳನ್ನು ಒದಗಿಸುತ್ತದೆ. ಇದರ ಬಗ್ಗೆ ಬರುವ ದೂರುಗಳ ಪ್ರಮಾಣ ಸರಾಸರಿ ಕೇವಲ 0.0008% ಮಾತ್ರ. ಕಳೆದ ಮೂರು ವರ್ಷಗಳಲ್ಲಿ ಬಂದ ಇಂತಹ ದೂರುಗಳ ವಿಚಾರಣೆಯ ಆಧಾರದ ಮೇಲೆ ಒಟ್ಟು ₹2.6 ಕೋಟಿ ದಂಡವನ್ನು ವಿಧಿಸಲಾಗಿದೆ.
ಪ್ರಯಾಣಿಕರ ಪ್ರತಿಕ್ರಿಯೆಯನ್ನು ಪಡೆಯಲು, ಕಳೆದ ಕೆಲವು ವರ್ಷಗಳಲ್ಲಿ 'ರೈಲ್ ಮದದ್' ಪೋರ್ಟಲ್ ಪರಿಚಯಿಸುವ ಮೂಲಕ ದೂರು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ, ಸರಳಗೊಳಿಸಲಾಗಿದೆ ಮತ್ತು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ರೈಲ್ ಮದದ್ ಪೋರ್ಟಲ್ ಆರಂಭದೊಂದಿಗೆ, ಭಾರತೀಯ ರೈಲ್ವೆಯು ದೂರುಗಳು ಮತ್ತು ಸಲಹೆಗಳನ್ನು ನೋಂದಾಯಿಸಲು ಪ್ರಯಾಣಿಕರಿಗೆ ಒಂದೇ ಸೂರಿನಡಿ ವ್ಯವಸ್ಥೆಯನ್ನು (Single window system) ಒದಗಿಸಿದೆ.
ರೈಲುಗಳಲ್ಲಿನ ಕೇಟರಿಂಗ್ ಗುಣಮಟ್ಟದ ಪಾಲನೆಯನ್ನು ಖಚಿತಪಡಿಸಿಕೊಳ್ಳಲು IRCTC ಮತ್ತು ರೈಲ್ವೆ ಅಧಿಕಾರಿಗಳು ದಿಢೀರ್ ಮತ್ತು ನಿಯತಕಾಲಿಕ ತಪಾಸಣೆಗಳನ್ನು ನಡೆಸುತ್ತಾರೆ. ಚಲಿಸುವ ರೈಲಿನಲ್ಲಿನ ಸೇವೆಗಳ ಮೇಲ್ವಿಚಾರಣೆ ಮತ್ತು ಪ್ರಯಾಣಿಕರ ದೂರುಗಳನ್ನು ನೈಜ ಸಮಯದಲ್ಲಿ (Real-time) ಪರಿಹರಿಸಲು IRCTC ಮೇಲ್ವಿಚಾರಕರು ಮತ್ತು ಕೇಟರಿಂಗ್ ಸಹಾಯಕರನ್ನು ನಿಯೋಜಿಸಿದೆ. ತಪಾಸಣಾ ವ್ಯಾಪ್ತಿಯನ್ನು ಹೆಚ್ಚಿಸಲು, ಮೇಲ್ ಎಕ್ಸ್ ಪ್ರೆಸ್ ರೈಲುಗಳಲ್ಲಿನ ಕೇಟರಿಂಗ್ ಸೇವೆಗಳ ಮೇಲ್ವಿಚಾರಣೆಗಾಗಿ IRCTC ಹೆಚ್ಚುವರಿ 'ಹಾಸ್ಪಿಟಾಲಿಟಿ ಮಾನಿಟರ್' ಗಳನ್ನು ನೇಮಿಸಿಕೊಂಡಿದೆ.
ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ನಿಗದಿತ ದರದಲ್ಲಿ ಆಹಾರ ಪದಾರ್ಥಗಳು ಲಭ್ಯವಾಗುವಂತೆ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ. ಇದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆಯು ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರೈಲುಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡುವುದನ್ನು ತಡೆಯಲು ರೈಲ್ವೆಯು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:
- ದರಗಳ ಬಗ್ಗೆ ಪ್ರಯಾಣಿಕರಿಗೆ ಅರಿವು ಮೂಡಿಸಲು ಮೆನು ಮತ್ತು ದರಪಟ್ಟಿಯ ಲಿಂಕ್ ಇರುವ ಎಸ್‌ಎಂಎಸ್ (SMS) ಕಳುಹಿಸಲಾಗುತ್ತಿದೆ.
- ಬಿಲ್ಲಿಂಗ್ ಮತ್ತು ನಗದು ರಹಿತ ಪಾವತಿಗಳಿಗಾಗಿ ಪಾಯಿಂಟ್ ಆಫ್ ಸೇಲ್ (POS) ಯಂತ್ರಗಳ ಅಳವಡಿಕೆ.
- ಬಿಲ್ಲಿಂಗ್ ಅನ್ನು ಉತ್ತೇಜಿಸಲು ಮತ್ತು ಹೆಚ್ಚಿನ ದರ ವಸೂಲಿಯನ್ನು ತಡೆಯಲು ಜಾಗೃತಿ ಅಭಿಯಾನಗಳನ್ನು ನಡೆಸುವುದು.
- ಪ್ಯಾಕೇಜ್ ಮಾಡಿದ ಕುಡಿಯುವ ನೀರಿನ (PDW) ಬಕೆಟ್ ಗಳು ಮತ್ತು ಚಹಾ/ಕಾಫಿ ಪಾತ್ರೆಗಳ ಮೇಲೆ ದರಪಟ್ಟಿಯ ಸ್ಟಿಕ್ಕರ್‌ಗಳನ್ನು ಅಂಟಿಸುವುದು.
- ಆನ್ ಲೈನ್ ಮೂಲಕ ಊಟವನ್ನು ಬುಕ್ ಮಾಡಲು ಅನುಕೂಲವಾಗುವಂತೆ ಮೇಲ್/ಎಕ್ಸ್ ಪ್ರೆಸ್ ರೈಲುಗಳಲ್ಲಿ 'ಇ-ಪ್ಯಾಂಟ್ರಿ' (e-pantry) ಸೇವೆಯ ಪರಿಚಯ.
- ರೈಲಿನಲ್ಲಿನ ಕ್ಯಾಟರಿಂಗ್ ಸಿಬ್ಬಂದಿಗೆ ಕ್ಯೂಆರ್ ಕೋಡ್ (QR code) ಹೊಂದಿರುವ ಗುರುತಿನ ಚೀಟಿಗಳ ವಿತರಣೆ.
- ಕ್ಯಾಟರಿಂಗ್ ವಸ್ತುಗಳು ಮತ್ತು ಪ್ಯಾಕೇಜ್ ಮಾಡಿದ ಕುಡಿಯುವ ನೀರಿನ ಬಾಟಲಿಗಳ ದರದ ಬಗ್ಗೆ ಅರಿವು ಮೂಡಿಸಲು ಕರಪತ್ರಗಳ ಹಂಚಿಕೆ.
- ಹೆಚ್ಚಿನ ದರ ವಸೂಲಿ ಮತ್ತು ಬಿಲ್ಲಿಂಗ್ ಸಮಸ್ಯೆಗಳನ್ನು ತಪಾಸಣೆ ಮಾಡಲು ವಿಶೇಷ ತಪಾಸಣಾ ಅಭಿಯಾನಗಳನ್ನು ನಡೆಸುವುದು.
- ಹೆಚ್ಚಿನ ದರ ವಸೂಲಿ ಕಂಡುಬಂದಲ್ಲಿ ಸೂಕ್ತ ದಂಡ ವಿಧಿಸುವುದು.
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2224007)
ವಿಸಿಟರ್ ಕೌಂಟರ್ : 13