ರೈಲ್ವೇ ಸಚಿವಾಲಯ
azadi ka amrit mahotsav

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ಪಾಲ್ಘರ್‌ ನಲ್ಲಿ ಎರಡನೇ ಪರ್ವತ ಸುರಂಗ ಕೊರೆಯುವಿಕೆಯಲ್ಲಿ ಪ್ರಗತಿ ಸಾಧಿಸಲಾಗಿದೆ


ಪರ್ವತ ಸುರಂಗ (MT-6) 454 ಮೀಟರ್ ಉದ್ದ ಮತ್ತು 14.4 ಮೀಟರ್ ಅಗಲವನ್ನು ಹೊಂದಿದೆ

ಪಾಲ್ಘರ್‌ ನಲ್ಲಿ ಸುಮಾರು ಒಂದು ತಿಂಗಳ ಅವಧಿಯಲ್ಲಿ ಎರಡು ಪರ್ವತ ಸುರಂಗ ಕೊರೆಯುವಿಕೆಯನ್ನು ಸಾಧಿಸಲಾಗಿದೆ

ಪ್ರಕಟಣಾ ದಿನಾಂಕ: 03 FEB 2026 5:34PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಬುಲೆಟ್ ರೈಲು ಯೋಜನೆಯಲ್ಲಿ ಮಹಾರಾಷ್ಟ್ರದ ಪಾಲ್ಘರ್‌ ನಲ್ಲಿ ಎರಡನೇ ಪರ್ವತ ಸುರಂಗದ ಕೊರೆಯುವಿಕೆಯು ಪೂರ್ಣಗೊಂಡಿರುವ ಮಹತ್ವದ ಮೈಲಿಗಲ್ಲನ್ನು ಘೋಷಿಸಿದ್ದಾರೆ. ಈ ಸುರಂಗವು 454 ಮೀಟರ್ ಉದ್ದ ಮತ್ತು 14.4 ಮೀಟರ್ ಅಗಲವಿದ್ದು, ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ 'ಅಪ್' ಮತ್ತು 'ಡೌನ್' ಎರಡೂ ಹಳಿಗಳಿಗೆ ಅವಕಾಶ ಕಲ್ಪಿಸುತ್ತದೆ.

ಬುಲೆಟ್ ರೈಲು ಯೋಜನೆಗಾಗಿ ಪಾಲ್ಘರ್ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಾಧಿಸಲಾದ ಎರಡನೇ ಪರ್ವತ ಸುರಂಗದ ಯಶಸ್ಸು ಇದಾಗಿದೆ; ಮೊದಲನೆಯದು (MT-5) ಸಫಾಲೆ ಬಳಿ 2026ರ ಜನವರಿ 2 ರಂದು ಪೂರ್ಣಗೊಂಡಿತ್ತು.

ಈ ಪರ್ವತ ಸುರಂಗವನ್ನು (MT-6) ಅತ್ಯಾಧುನಿಕ 'ಡ್ರಿಲ್ ಮತ್ತು ಕಂಟ್ರೋಲ್ಡ್ ಬ್ಲಾಸ್ಟ್' ವಿಧಾನವಾದ ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್ (NATM) ಬಳಸಿ ಎರಡೂ ತುದಿಗಳಿಂದ ಅಗೆಯಲಾಗಿತ್ತು. ಈ ಉತ್ಖನನ ಕಾರ್ಯವು 12 ತಿಂಗಳಲ್ಲಿ ಪೂರ್ಣಗೊಂಡಿದೆ. ಸುರಂಗದ ಕೊರೆಯುವಿಕೆಯು ಒಂದು ಪ್ರಮುಖ ಎಂಜಿನಿಯರಿಂಗ್ ಮೈಲಿಗಲ್ಲಾಗಿದ್ದು, ವಿರುದ್ಧ ದಿಕ್ಕುಗಳಿಂದ ಅಗೆಯುತ್ತಾ ಬರುವ ತಂಡಗಳು ಸುರಂಗದ ಮಧ್ಯಭಾಗದಲ್ಲಿ ಸಂಧಿಸಿ, ಬೆಟ್ಟದ ಮೂಲಕ ನಿರಂತರ ಹಾದಿಯನ್ನು ನಿರ್ಮಿಸುವ ಕ್ಷಣ ಇದಾಗಿದೆ.

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಹೈಸ್ಪೀಡ್ ರೈಲು ತಂಡದ ಗಮನಾರ್ಹ ಪ್ರಗತಿಗಾಗಿ ಇಡೀ ತಂಡವನ್ನು ಅಭಿನಂದಿಸಿದರು. ತಂಡವು ಕೆಲಸ ಮಾಡುತ್ತಿರುವ ವೇಗವು ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ ಎಂದು ಅವರು ಹೇಳಿದರು. ನಿರ್ಮಾಣ ಮತ್ತು ತಂತ್ರಜ್ಞಾನದಲ್ಲಿನ ಹಲವಾರು ಹೊಸ ಆವಿಷ್ಕಾರಗಳಿಂದಾಗಿ ಈ ಯೋಜನೆಯು ಜಾಗತಿಕ ಗಮನ ಮತ್ತು ಮೆಚ್ಚುಗೆಯನ್ನು ಸೆಳೆಯುತ್ತಿದೆ. ಯೋಜನೆಗಾಗಿ ಬಳಸಲಾಗುತ್ತಿರುವ ಅನೇಕ ಸುಧಾರಿತ ನಿರ್ಮಾಣ ತಂತ್ರಜ್ಞಾನಗಳು ಮತ್ತು ಬೃಹತ್ ಯಂತ್ರಗಳನ್ನು ಭಾರತದಲ್ಲೇ ತಯಾರಿಸಲಾಗಿದೆ ಎಂದು ಅವರು ಹೇಳಿದರು.

ಬುಲೆಟ್ ರೈಲು ಯೋಜನೆಯ ಗುಜರಾತ್ ವಿಭಾಗವು ಮುಂದಿನ ವರ್ಷ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಹೈಸ್ಪೀಡ್ ರೈಲು ಕಾರ್ಯಾಚರಣೆಯು 2028 ರ ವೇಳೆಗೆ ಥಾಣೆವರೆಗೆ ಮತ್ತು 2029 ರ ವೇಳೆಗೆ ಮುಂಬೈಗೆ ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಪಾಲ್ಘರ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಹೇಮಂತ್ ವಿಷ್ಣು ಸವರಾ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಾಲ್ಘರ್‌ ನಲ್ಲಿ ಹೈಸ್ಪೀಡ್ ಸುರಂಗದ ಯಶಸ್ಸಿಗಾಗಿ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಹೈಸ್ಪೀಡ್ ರೈಲು ಕಾರಿಡಾರ್, ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿ ಎಫ್‌ ಸಿ) ಮತ್ತು ಮುಂಬರುವ ವಾಧ್ವನ್ ಬಂದರು ಸೇರಿದಂತೆ ಹಲವಾರು ಪ್ರಮುಖ ರೈಲ್ವೆ ಯೋಜನೆಗಳ ಮೂಲಕ ಜಿಲ್ಲೆಯು ಕ್ಷಿಪ್ರ ಅಭಿವೃದ್ಧಿ ಕಾಣುತ್ತಿದೆ ಎಂದು ಅವರು ಒತ್ತಿ ಹೇಳಿದರು. 2014 ರಿಂದ ಮಹಾರಾಷ್ಟ್ರದಲ್ಲಿ ರೈಲ್ವೆ ಹೂಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳುತ್ತಿವೆ ಮತ್ತು ಸೇವೆಗಳು ಸುಧಾರಿಸುತ್ತಿವೆ ಎಂದು ಅವರು ತಿಳಿಸಿದರು.

ಪಾಲ್ಘರ್ ಜಿಲ್ಲೆಯಂತಹ ಸಂಕೀರ್ಣ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ ಮತ್ತು ಟನಲ್ ಬೋರಿಂಗ್ ಯಂತ್ರಗಳು ಅಷ್ಟು ಸೂಕ್ತವಲ್ಲದ ಅನಿಯಮಿತ ಸುರಂಗದ ಆಕಾರಗಳಿಗೆ ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್ (NATM) ಹೆಚ್ಚು ಸೂಕ್ತವಾಗಿದೆ. ಈ ಪ್ರಕ್ರಿಯೆಗೆ ಅತಿ ಭಾರೀ ಯಂತ್ರೋಪಕರಣಗಳ ಅಗತ್ಯವಿರುವುದಿಲ್ಲ ಮತ್ತು ಶಾಟ್‌ ಕ್ರೀಟಿಂಗ್, ರಾಕ್ ಬೋಲ್ಟ್ ಹಾಗೂ ಲ್ಯಾಟಿಸ್ ಗಿರ್ಡರ್‌ ಗಳನ್ನು ಬಳಸಿಕೊಂಡು ನೈಜ ಸಮಯದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ವಿವಿಧ ಭೂ ತಾಂತ್ರಿಕ ಉಪಕರಣಗಳು, ನೈಜ ಸಮಯದ ಮೇಲ್ವಿಚಾರಣೆ, ಸಮರ್ಥ ಅಗ್ನಿ ಸುರಕ್ಷತಾ ಕ್ರಮಗಳು, ಸರಿಯಾದ ವಾತಾಯನ ವ್ಯವಸ್ಥೆ ಮತ್ತು ನಿಯಂತ್ರಿತ ಪ್ರವೇಶ ವ್ಯವಸ್ಥೆಗಳ ಮೂಲಕ ಸುರಂಗದ ಒಳಗಿನ ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರದಲ್ಲಿ ನಿರ್ಮಾಣ ಕಾರ್ಯಗಳು ಹಲವು ಕಡೆಗಳಲ್ಲಿ ವೇಗವಾಗಿ ನಡೆಯುತ್ತಿವೆ. ವೈತರಣ ನದಿಯ ಮೇಲಿನ ಯೋಜನೆಯ ಅತಿ ಉದ್ದದ ನದಿ ಸೇತುವೆಯು ಪಿಯರ್ (ಸ್ತಂಭ) ಮಟ್ಟವನ್ನು ತಲುಪಿದೆ, ಇದರೊಂದಿಗೆ ಉಲ್ಲಾಸ್ ಮತ್ತು ಜಗಾನಿಯಂತಹ ಇತರ ಪ್ರಮುಖ ನದಿಗಳ ಅಡಿಪಾಯದ ಕೆಲಸಗಳು ನಡೆಯುತ್ತಿವೆ. ನಾಲ್ಕು ನಿಲ್ದಾಣಗಳ ಕೆಲಸಗಳು, ಉದ್ದವಾದ ಉಕ್ಕಿನ ಸೇತುವೆಗಳನ್ನು ಬಳಸಿ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ದಾಟುವಿಕೆಗಳು ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾ ನಡುವಿನ 21 ಕಿಮೀ ಉದ್ದದ ಸುರಂಗದ ಕೆಲಸಗಳು ವೇಗವಾಗಿ ಸಾಗುತ್ತಿವೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಒಟ್ಟು 7 ಪರ್ವತ ಸುರಂಗಗಳ ಕೆಲಸ ಪ್ರಗತಿಯಲ್ಲಿದೆ.

ಕ್ರ.ಸಂ.

ಪರ್ವತ ಸುರಂಗ ಸಂಖ್ಯೆ

ಉದ್ದ (ಕಿಮೀ)

ಪೂರ್ಣಗೊಂಡ ಶೇಕಡಾವಾರು (%)

ಟಿಪ್ಪಣಿಗಳು

1

MT-1

0.820

16%

 

2

MT-2

0.228

 

ಪೂರ್ವಸಿದ್ಧತಾ ಕಾರ್ಯಗಳು ನಡೆಯುತ್ತಿವೆ

3

MT-3

1.403

41%

 

4

MT-4

1.260

32%

 

5

MT-5

1.480

57%

02 ಜನವರಿ 2026 ರಂದು ಸುರಂಗದ ಕೊರೆಯುವಿಕೆ ಯಶಸ್ವಿಯಾಗಿದೆ

6

MT-6

0.454

47%

ಇಂದು ಸುರಂಗದ ಕೊರೆಯುವಿಕೆ  ಯಶಸ್ವಿಯಾಗಿದೆ

7

MT-7

0.417

29%

 

ಎಂ ಎ ಎಚ್‌ ಎಸ್‌ ಆರ್‌ ಯೋಜನೆಯು ಅಂದಾಜು 508 ಕಿಲೋಮೀಟರ್ ಉದ್ದವಿದ್ದು, ಗುಜರಾತ್ ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ 352 ಕಿಮೀ ಮತ್ತು ಮಹಾರಾಷ್ಟ್ರದಲ್ಲಿ 156 ಕಿಮೀ ವ್ಯಾಪಿಸಿದೆ. ಈ ಯೋಜನೆಯು ಕಾರಿಡಾರ್‌ ನ ಉದ್ದಕ್ಕೂ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ, ಜ್ಞಾನ ವರ್ಗಾವಣೆಗೆ ಅನುಕೂಲ ಮಾಡಿಕೊಡುತ್ತದೆ ಮತ್ತು ಹೊಸ ಕೈಗಾರಿಕಾ ಹಾಗೂ ಐಟಿ ಹಬ್‌ ಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಕಾರಿಡಾರ್ ಸಬರಮತಿ, ಅಹಮದಾಬಾದ್, ಆನಂದ್, ವಡೋದರಾ, ಭರೂಚ್, ಸೂರತ್, ಬಿಲಿಮೋರಾ, ವಾಪಿ, ಬೋಯ್ಸರ್, ವಿರಾರ್, ಥಾಣೆ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸಲಿದ್ದು, ಇದು ಭಾರತದ ಸಾರಿಗೆ ಮೂಲಸೌಕರ್ಯದಲ್ಲಿ ಪರಿವರ್ತಕ ಹೆಜ್ಜೆಯಾಗಲಿದೆ.

27 ಜನವರಿ 2026 ರ ಹೊತ್ತಿಗೆ, ಸುಮಾರು 334 ಕಿಮೀ ವಯಾಡಕ್ಟ್‌ ಗಳು, 17 ನದಿ ಸೇತುವೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಹಾಗೂ ಇತರ ಮೂಲಸೌಕರ್ಯಗಳ ಮೇಲೆ 12 ಪ್ರಮುಖ ಕ್ರಾಸಿಂಗ್‌ ಗಳನ್ನು ಪೂರ್ಣಗೊಳಿಸಲಾಗಿದೆ. ಯೋಜನೆಯ ಗುಜರಾತ್ ವಿಭಾಗದಲ್ಲಿ ಹಳಿ ಅಳವಡಿಕೆ ಮತ್ತು ವಿದ್ಯುದ್ದೀಕರಣದ ಕೆಲಸಗಳು ವೇಗವನ್ನು ಪಡೆದುಕೊಂಡಿವೆ.

 

*****


(ಪ್ರಕಟಣೆ ಐ.ಡಿ.: 2222871) ವಿಸಿಟರ್ ಕೌಂಟರ್ : 213
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil , Telugu