ಹಣಕಾಸು ಸಚಿವಾಲಯ
ಕೃಷಿ ಉತ್ಪಾದಕತೆ ವರ್ಧನೆಗೆ, ರೈತರ ನಿರ್ಧಾರ ಕೈಗೊಳ್ಳುವಿಕೆ ಸುಧಾರಣೆಗೆ ಮತ್ತು ಅಗತ್ಯಕ್ಕೆ ತಕ್ಕ ಸೂಕ್ತ ಸಲಹಾ ಬೆಂಬಲದ ಮೂಲಕ ಅಪಾಯದ ಸಾಧ್ಯತೆ ತಗ್ಗಿಸಬಲ್ಲ ಬಹುಭಾಷಾ ಎಐ ಸಾಧನವಾದ ‘ಭಾರತ್-ವಿಸ್ತಾರ್’ ಬಗ್ಗೆ 2026-27ರ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪ
ಭಾರತದ ಸೃಜನಶೀಲ ಆರ್ಥಿಕತೆಯ ಉತ್ತೇಜನಕ್ಕೆ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ವಿಷಯ ರಚನೆಕಾರ ಪ್ರಯೋಗಾಲಯಗಳ ಸ್ಥಾಪನೆ
ಉದ್ಯೋಗಗಳು ಮತ್ತು ಕೌಶಲ್ಯ ಅಗತ್ಯಗಳ ಮೇಲೆ ಎಐ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪ್ರಭಾವ ನಿರ್ಣಯಿಸಲು ಉನ್ನತಾಧಿಕಾರದ 'ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ' ಸ್ಥಾಯಿ ಸಮಿತಿ ಸ್ಥಾಪನೆಗೆ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪ
ಪೂರ್ವ ಭಾರತದಲ್ಲಿ ವಿನ್ಯಾಸ ಶಿಕ್ಷಣ ಮತ್ತು ಅಭಿವೃದ್ಧಿಯ ಉತ್ತೇಜನಕ್ಕೆ ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಸ್ಥಾಪನೆ
प्रविष्टि तिथि:
01 FEB 2026 12:59PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ 2026-27 ಅನ್ನು ಮಂಡಿಸಿದರು. ಎರಡನೇ ಕರ್ತವ್ಯವಾದ ಸಾಮಾನ್ಯ ನಾಗರಿಕರ ಆಶೋತ್ತರಗಳ ಈಡೇರಿಕೆ ಮತ್ತು ಭಾರತದ ಸಮೃದ್ಧಿಯ ಹಾದಿಯಲ್ಲಿ ಅವರನ್ನು ಸದೃಢ ಪಾಲುದಾರರನ್ನಾಗಿಸಲು ಅವರ ಸಾಮರ್ಥ್ಯ ನಿರ್ಮಾಣಕ್ಕಾಗಿ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಅನ್ನು ಪ್ರಮುಖ ಅಂಶವಾಗಿ ಆಯವ್ಯಯ ಉಲ್ಲೇಖಿಸಿದೆ.
ರೈತರು, STEM (ವಿಜ್ಞಾನ, ತಂತ್ರಜ್ಞಾನ, ಎಂಜಿಯರಿಂಗ್ ಮತ್ತು ಗಣಿತ ಕ್ಷೇತ್ರದ) ಮಹಿಳೆಯರು, ಕೌಶಲ್ಯ ವೃದ್ಧಿಸಿಕೊಳ್ಳಲು ಉತ್ಸುಕರಾಗಿರುವ ಯುವಕರು ಮತ್ತು ದಿವ್ಯಾಂಗರಿಗೆ ಹೊಸ ಅವಕಾಶಗಳನ್ನು ತೆರೆಯುವುದು ಸೇರಿದಂತೆ ಎಲ್ಲ ರಂಗದಲ್ಲಿಯೂ ತಂತ್ರಜ್ಞಾನದ ಅಳವಡಿಕೆ ಎಲ್ಲರ ಅನುಕೂಲಕ್ಕಾಗಿ ಎಂಬುದನ್ನು ಸಮ್ಮತಿಸುತ್ತಾ, ಎಐ ಮಿಷನ್, ರಾಷ್ಟ್ರೀಯ ಕ್ವಾಂಟಮ್ ಮಿಷನ್, ಅನುಸಂಧಾನ ರಾಷ್ಟ್ರೀಯ ಸಂಶೋಧನಾ ನಿಧಿ ಹಾಗೂ ಸಂಶೋಧನೆ, ಅಭಿವೃದ್ಧಿ ಮತ್ತು ನಾವಿನ್ಯತೆ ನಿಧಿಯ ಸಮರ್ಪಕ ಬಳಕೆ ಮೂಲಕ ಹೊಸ ತಂತ್ರಜ್ಞಾನಗಳಿಗೆ ಬೆಂಬಲ ನೀಡುವ ಸರ್ಕಾರದ ಪ್ರಮುಖ ಉಪಕ್ರಮಗಳನ್ನು 2026-27ರ ಕೇಂದ್ರ ಬಜೆಟ್ ವಿವರಿಸಿದೆ.
ಇತ್ತೀಚೆಗೆ ಹೊರಹೊಮ್ಮುತ್ತಿರುವ ನವೀನ ತಂತ್ರಜ್ಞಾನಗಳು ಭಾರತದ ಸೃಜನಶೀಲ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭಾರತದ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ವಲಯವು 2030ರ ವೇಳೆಗೆ 2 ದಶಲಕ್ಷ ವೃತ್ತಿಪರರ ಅಗತ್ಯವಿರುವ ಬೆಳೆವಣಿಗೆ ಹೊಂದುತ್ತಿರುವ ಉದ್ಯಮವಾಗಲಿದೆ ಎಂದು ಬಜೆಟ್ ಹೇಳಿದೆ. ಭಾರತದ ಕಿತ್ತಳೆ ಆರ್ಥಿಕತೆಯ ಮುಂದುವರಿಕೆಗಾಗಿ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ AVGC ವಿಷಯ ಕ್ರಿಯೇಟರ್ ಲ್ಯಾಬ್ ಗಳನ್ನು ಸ್ಥಾಪಿಸಲು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (ಭಾರತೀಯ ಸೃಜನಶೀಲ ತಂತ್ರಜ್ಞಾನಗಳ ಸಂಸ್ಥೆ) ಗೆ ಬೆಂಬಲವನ್ನು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ.

ಇದರ ಜೊತೆಗೆ, ಭಾರತದ ವಿನ್ಯಾಸ ಉದ್ಯಮ ವೇಗವಾಗಿ ವಿಸ್ತರಣೆಯಾಗುತ್ತಿದೆ ಎಂಬುದನ್ನು ಗುರುತಿಸಿ, ಪೂರ್ವ ಭಾರತದಲ್ಲಿ ವಿನ್ಯಾಸ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಸ್ಥಾಪಿಸುವ ಬಗ್ಗೆ ಬಜೆಟ್ ಪ್ರಸ್ತಾಪಿಸಿದೆ.
ಕೇಂದ್ರ ಆಯವ್ಯಯವು 'ಭಾರತ್ - ವಿಸ್ತಾರ್' (ಕೃಷಿ ಸಂಪನ್ಮೂಲಗಳ ಲಭ್ಯತೆಗಾಗಿ ವರ್ಚುಯಲ್ ಮಾದರಿಯ ಸಂಯೋಜಿತ ವ್ಯವಸ್ಥೆ - ವರ್ಚುಯಲಿ ಇಂಟಿಗ್ರೇಟೆಡ್ ಸಿಸ್ಟಮ್ ಟು ಆಕ್ಸೆಸ್ ಅಗ್ರಿಕಲ್ಚರಲ್ ರಿಸೋರ್ಸಸ್) ಬಗ್ಗೆ ಪ್ರಸ್ತಾಪಿಸಿದೆ - ಇದು, ಅಗ್ರಿಸ್ಟ್ಯಾಕ್ ಪೋರ್ಟಲ್ ಗಳು ಮತ್ತು ಕೃಷಿ ಪದ್ಧತಿಗಳ ಕುರಿತ ಐ ಸಿ ಎ ಆರ್ ಪ್ಯಾಕೇಜ್ ಅನ್ನು ಎಐ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಬಹುಭಾಷಾ ಎಐ ಸಾಧನವಾಗಿದೆ. ಇದರಿಂದ ಕೃಷಿ ಉತ್ಪಾದಕತೆ ಹೆಚ್ಚಲಿದೆ, ರೈತರ ನಿರ್ಧಾರ ಕೈಗೊಳ್ಳುವಿಕೆ ಇನ್ನಷ್ಟು ಉತ್ತಮವಾಗಲಿದೆ ಮತ್ತು ರೈತರಿಗೆ ಸೂಕ್ತವಾದ ಸಲಹೆಯ ಬೆಂಬಲ ನೀಡುವ ಮೂಲಕ ಅಪಾಯವನ್ನು ತಗ್ಗಿಸಲಿದೆ.

ಇದಲ್ಲದೆ, ಉದ್ಯೋಗಗಳು ಮತ್ತು ಕೌಶಲ್ಯ ಅಗತ್ಯಗಳ ಮೇಲೆ ಎಐ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪ್ರಭಾವ ಗಮನಿಸಿ, ಅದರ ಮೌಲ್ಯಮಾಪನಕ್ಕೆ ಮತ್ತು ಕ್ರಮಗಳನ್ನು ಪ್ರಸ್ತಾಪಿಸಲು ಉನ್ನತಾಧಿಕಾರದ 'ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ' ಸ್ಥಾಯಿ ಸಮಿತಿಯ ಸ್ಥಾಪನೆಗೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
*****
(रिलीज़ आईडी: 2221792)
आगंतुक पटल : 6
इस विज्ञप्ति को इन भाषाओं में पढ़ें:
English
,
Assamese
,
Urdu
,
Marathi
,
हिन्दी
,
Bengali
,
Punjabi
,
Gujarati
,
Odia
,
Tamil
,
Telugu
,
Malayalam